About Us Advertise with us Be a Reporter E-Paper

ವಿರಾಮ

ಹಳ್ಳಿಯನ್ನು ಪ್ರೀತಿಸಿದ ಡಾ ಎಂ.ಎನ್.ಸುಬ್ರಹ್ಮಣ್ಯಂ

ಹೆಗಲಿನಿಂದ ಹೆಗಲಿಗೆ ಗಾಂಧಿಗಿರಿ

ತುಮಕೂರು ಜಿಲ್ಲೆ ಮಾಯಸಂದ್ರ ಗ್ರಾಮದಲ್ಲೊಂದು ಬೆಳ್ಳಂಬೆಳಿಗ್ಗೆ. ಯಾವುದೇ ಘೋಷಣೆ, ಒಣಭಾಷಣ ಇಲ್ಲದೆ ಗ್ರಾಮದ ಜನರೇ ಪೊರಕೆ ಹಿಡಿದು ತಮ್ಮ ಊರನ್ನು ಸ್ವಚ್ಚಮಾಡಲು ಕಟಿಬದ್ಧರಾಗಿ ನಿಂತರು. ಬೋರ್ಡು, ಬ್ಯಾನರ್ರು ಯಾವುದರ ಹಂಗೂ ಇಲ್ಲದೆ ನಿಷ್ಕ್ರಿಯತೆಯಿಂದ ಅವ್ಯವಸ್ಥೆಯ ತಿಪ್ಪೆಯಾಗಿದ್ದ ಗ್ರಾಮಪಂಚಾಯಿತಿಯ ಧೂಳು ಕೊಡವಿದರು. ಪಂಚಾಯ್ತಿಯ ಆವರಣವನ್ನು ಸ್ವಚ್ಚಗೊಳಿಸಿದರು. ಪಂಚಾಯಿತಿ ಮುಂಭಾಗದ ಶ್ರೀರಂಗಪಟ್ಟಣಬೀದರ್ ಹೆದ್ದಾರಿ ಬದಿಯಲ್ಲಿ ಬಿದ್ದು ಕೊಳೆಯುತ್ತಿದ್ದ ಕಸವನ್ನು ಮಂಕರಿಗಳಲ್ಲಿ ಎತ್ತಿ ಟ್ರಾಕ್ಟರ್‌ಗೆ ತುಂಬಿಸಿ ಊರಾಚೆ ಸಾಗಿಸಿದರು. ಕುಡಿಯುವ ಕೊಳಾಯಿ ಸುತ್ತ ಮುತ್ತ ಬೆಳೆದಿದ್ದ ಗಿಡ ಗೆಂಟೆಗಳನ್ನು ತೆಗೆದು ಸ್ವಚ್ಚಗೊಳಿಸಿದರು.ಮಹಿಳೆಯರು ಪೊರಕೆ ಹಿಡಿದು ತಮ್ಮ ಮನೆಗಳನ್ನು ಗುಡಿಸುವಷ್ಟೇ ಶ್ರದ್ಧೆಯಿಂದ ಊರಿನ ರಸ್ತೆಗಳ ಕಸ ಗುಡಿಸಿ ಗುಡ್ಡೆ ಮಾಡಿ ಕಸದ ತೊಟ್ಟಿಗೆ ತುಂಬಿಸಿದರು. ಪ್ಲಾಸ್ಟಿಕ್ ತ್ಯಾಜ್ಯವನ್ನು ಪ್ರತ್ಯೇಕಿಸಿ ದೂರಕ್ಕೆ ಸಾಗಿಸಿದರು. ಸಾವಯವ ಗೊಬ್ಬರವನ್ನು ತೋಟಗಳಿಗೆ ಸಾಗಿಸಲಾಯಿತು. ಬಸ್ ನಿಲ್ದಾಣದಲ್ಲೂ ಯಾವ ಸಂಕೋಚವೂ ಇಲ್ಲದೆ, ಪ್ರಯಾಣಿಕರು ಅಚ್ಚರಿಪಡುವಂತೆ ಮಕ್ಕಳು ಮುದುಕರೆನ್ನದೆ ಚರಂಡಿ, ಪಾದಚಾರಿ ರಸ್ತೆಗಳನ್ನು ಕೆಲವೇ ಗಂಟೆಗಳಲ್ಲಿ ನಳನಳಿಸುವಂತೆ ಪವಾಡ ಮಾಡಿಬಿಟ್ಟರು ಜನ! ಇಷ್ಟು ಸಾಲದು ಎಂಬಂತೆ ಮನೆ ಮನೆಗಳಿಗೆ, ಅಂಗಡಿಗಳಿಗೆ ತೆರಳಿ ತಮ್ಮ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವ ಬಗ್ಗೆ ಮಹಿಳೆಯರು ಗ್ರಾಮಸ್ಥರಲ್ಲಿ ಅರಿವು ಮೂಡಿಸಿದರು.

ಶ್ರಮದಾನದಲ್ಲಿ ಕೇವಲ ಗ್ರಾಮಸ್ಥರು ಮಾತ್ರವೇ ಪಾಲ್ಗೊಂಡಿದ್ದಲ್ಲ. ಎಲ್ಲಾ ಪಕ್ಷಗಳ ರಾಜಕೀಯ ಮುಖಂಡರು ಭಾಗವಹಿಸಿದ್ದರು. ಹಾಲಿ ಜಿಲ್ಲಾ ಪಂಚಾಯಿತಿ ಸದಸ್ಯರು, ಮಾಜಿ ಸದಸ್ಯರು, ಊರಿನ ಪ್ರಮುಖರು ಇದರಲ್ಲಿ ಪಾಲ್ಗೊಂಡಿದ್ದರು. ಅಷ್ಟೇಕೆ, ಯಾವ ಗ್ರಾಮ ಪಂಚಾಯಿತಿಯ ನಿಷ್ಕ್ರಿಯತೆಯ ವಿರುದ್ಧ ಜನ ಹೋರಾಟ ಮಾಡುತ್ತಿದ್ದರೋ ಅದೇ ಪಂಚಾಯಿತಿಯ 5-6 ಶ್ರಮದಾನದಲ್ಲಿ ಪಾಲ್ಗೊಂಡರು. ತಾವೂ ಕೈಲಿ ಪರಕೆ ಹಿಡಿದು ರಸ್ತೆ ಗುಡಿಸಿದರು. ಚರಂಡಿ ಸ್ವಚ್ಚಗೊಳಿಸಿ ಜನರಿಂದ ಸೈ ಎನಿಸಿಕೊಂಡರು. ಸಾಂಕೇತಿಕ ಎನಿಸಿದರೂ ಇದು ಜನರ ಸಹಭಾಗಿತ್ವದ ಹೋರಾಟದ ಅನುಕರಣೀಯ ಮಾದರಿಯಾಗಿತು. ಅಂತೆಯೇ ಗಾಂಧಿವಾದಿಗಳಿಗೆ, ಸ್ವಾತಂತ್ರ್ಯ ಹೋರಾಟಗಾರರಿಗೆ ಹೆಸರಾದ ಊರು ನಿಜ ಅರ್ಥದಲ್ಲಿ ಗಾಂಧಿಗಿರಿ ಮೆರೆದದ್ದು ವ್ಯವಸ್ಥೆಗೆ ಬಿಸಿ ಮುಟ್ಟಿಸುವಂತಿತ್ತು.

ನವ ನಿರ್ಮಾಣ ವೇದಿಕೆ

ಹೋರಾಟಕ್ಕೆ ಪ್ರೇರಣೆಯಾಗಿ ನಿಂತಿದ್ದು ಇಲ್ಲಿನ ನವ ನಿರ್ಮಾಣ ವೇದಿಕೆ. ಇದರ ಅಸ್ತಿತ್ವಕ್ಕೆ ನೀಡಿದ್ದು ಕಳೆದ ವಾರವಷ್ಟೇ ನಮ್ಮನ್ನು ಅಗಲಿದ ಡಾ.ಎಂ.ಎನ್.ಸುಬ್ರಹ್ಮಣ್ಯಂ ಎಂಬ ಪ್ರಖ್ಯಾತ ವೈದ್ಯರು. ಬೆಂಗಳೂರಿನಲ್ಲಿ ತಮ್ಮದೇ ಒಂದು ಬೃಹತ್ ಆಸ್ಪತ್ರೆ ನಿರ್ಮಿಸಿ ಲಕ್ಷಾಂತರ ಜನರ ಶುಶ್ರೂಶೆಯಲ್ಲಿ ತೊಡಗಿಸಿಕೊಂಡಿದ್ದವರು. ಆರು ವರ್ಷಗಳ ಹಿಂದೆ ಹುಟ್ಟೂರಿಗೆ ಬಂದ ಸುಬ್ರಹ್ಮಣ್ಯಂ ತಮ್ಮೂರಿನ ದುರವಸ್ಥೆಯನ್ನು ಕಂಡು ಮಮ್ಮಲ ಮರುಗಿದರು. ಗ್ರಾಮದಲ್ಲಿ ಸ್ವಚ್ಚತೆ, ನೈರ್ಮಲ್ಯದ ಬಗ್ಗೆ ಯಾರಿಗೂ ಕಳಕಳಿ ಇರಲಿಲ್ಲ. ತನ್ನ ಊರಿನ ಋಣ ತೀರಿಸುವ ಸದವಕಾಶ ಎಂದುಕೊಂಡರು ಡಾ. ಸುಬ್ರಹ್ಮಣ್ಯಂ. ಲಕ್ಷಾಂತರ ರೂಪಾಯಿ ವರಮಾನ ಬರುವ ಗುಡ್ ಬೈ ಹೇಳಿ ಹಳ್ಳಿಯಲ್ಲೇ ನೆಲೆ ನಿಂತರು. ಸಮಾನ ಮನಸ್ಕರನ್ನು ಒಂದುಗೂಡಿಸಿ ನವ ನಿರ್ಮಾಣ ವೇದಿಕೆ ಎಂಬ ಒಂದು ಸ್ವಯಂ ಸೇವಾ ಸಂಸ್ಥೆಯನ್ನು ಕಟ್ಟಿದರು. ಅದರ ಮೂಲಕ ಗ್ರಾಮದ ಮೂಲಭೂತ ಸೌಲಭ್ಯಗಳಿಗಾಗಿ ಹೋರಾಟ ಪ್ರಾರಂಭಿಸಿದರು. ಧರಣಿ, ಸತ್ಯಾಗ್ರಹಗಳಾಯಿತು. ಗ್ರಾಮ ಪಂಚಾಯಿತಿ ಸದಸ್ಯರನ್ನು, ಊರಿನ ಮುಖಂಡರನ್ನು, ಜನಸಾಮಾನ್ಯರನ್ನು ಒಂದೆಡೆ ಸೇರಿಸಿ ವಿಚಾರ ವಿನಿಮಯ ನಡೆಸಲಾಯಿತು. ಇದರಿಂದ ಸ್ವಲ್ಪ ಮಟ್ಟಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಿತಾದರೂ ಹೆಚ್ಚಿನ ಪ್ರಯೋಜನವೇನೂ ಆಗಲಿಲ್ಲ. ಆಗ ಹೊಳೆದದ್ದು ವ್ಯವಸ್ಥೆಯನ್ನು ದೂರುತ್ತಾ ಹೋರಾಡುವುದಕ್ಕಿಂತ ಅದನ್ನು ಸುಧಾರಿಸಲು ಜನರ ಸಹಭಾಗಿತ್ವವನ್ನು ಪ್ರೇರೇಪಿಸುವುದು ಮತ್ತು ಪರ್ಯಾಯ ಸುಬ್ರಹ್ಮಣ್ಯಂ, ರಾಜೇಶ್ವರಿ ದಂಪತಿ ತಾವು ಹುಟ್ಟಿದ ಗ್ರಾಮದ ಮಣ್ಣಿನ ಮಕ್ಕಳ ನಡುವೆಯೇ ನೆಲೆನಿಂತು ಇಳಿವಯಸ್ಸಿನಲ್ಲಿ ಗ್ರಾಮದ ಸಮಗ್ರ ಅಭಿವೃದ್ಧಿಯ ಕನಸು ಕಂಡವರು. ಪ್ರಜಾಪ್ರಭುತ್ವದ, ಗಾಂಧಿಗಿರಿಯ ಮೌಲ್ಯಗಳನ್ನು ಹೆಗಲಿನಿಂದ ಹೆಗಲಿಗೆ ದಾಟಿಸಲು ಹೊರಟಿದ್ದ, ಹುಟ್ಟಿದ ಮಣ್ಣಿನ ಋಣ ತೀರಿಸಲು ಅವಿರತ ಶ್ರಮಿಸಿದ್ದ ಡಾ.ಸುಬ್ರಹ್ಮಣ್ಯಂ ಕಳೆದ ವಾರ ಸದ್ದಿಲ್ಲದೆ ನಮ್ಮನ್ನು ಅಗಲಿ ಹೊರಟು ಹೋದರು. ಅವರ ಬದುಕು, ಸಾಧನೆಗಳು ಇಂದಿನ ಯುವಪೀಳಿಗೆಗೆ ಮಾರ್ಗದರ್ಶಿಯಾಗಬೇಕಿದೆ.

Tags

Related Articles

Leave a Reply

Your email address will not be published. Required fields are marked *

Language
Close