About Us Advertise with us Be a Reporter E-Paper

ವಿರಾಮ

ದ್ರೌಪದಿ ಸ್ವಯಂವರ

ಡಾ. ಸಿ.ಎಂ. ಗೊವಿಂದರೆಡ್ಡಿ

ಕಳೆದ ವಾರಗಳಲ್ಲಿ : ಬ್ರಾಹ್ಮಣ ವೇಷಧಾರಿಗಳಾಗಿ ಏಕಚಕ್ರನಗರದಲ್ಲಿ ಕೆಲವು ದಿನಗಳಿದ್ದಂತಹ ಪಾಂಡವರು, ಅಲ್ಲಿ ಬಕಾಸುರನನ್ನು ಕೊಂದು ಪ್ರಜೆಗಳ ಕಷ್ಟ ನಿವಾರಣೆ ಮಾಡಿದ ಬಳಿಕ ಹೊರಟರು. ಅಗ್ನಿಪೂಜಕನೂ ಪಾಂಚಾಲದರಸನೂ ಆದಂತಹ ದ್ರುಪದನು ತನ್ನ ಮಗಳಾದ ಕೃಷ್ಣೆಗೆ ಸ್ವಯಂವರ ಏರ್ಪಡಿಸಿರುವುದನ್ನು ತಿಳಿದು ನಸುಕಿನ ವೇಳೆಗೆ ಬ್ರಾಹ್ಮಣವೇಷಗಳಲ್ಲಿಯೇ ಅವರೆಲ್ಲರೂ ಪಾಂಚಾಲದೇಶದ ಕಡೆ ಪ್ರಯಾಣ ಬೆಳೆಸಿದರು. ದ್ರೌಪದಿಯ ಸ್ವಯಂವರಕ್ಕೆ ಅನೇಕ ರಾಜರು ಆಗಮಿಸಿದ್ದರು. ಅವರಲ್ಲಿ ಹಸ್ತಿನಾಪುರದ ದುರ್ಯೋಧನ, ಕರ್ಣ ಮುಂತಾದವರೂ ಸೇರಿದ್ದರು)

ಮಾರುವೇಷದಲ್ಲಿದ್ದ ಪಾಂಡವರು ಏಕಚಕ್ರಪುರದಲಿ ನೆಲೆಸಿ
ಊರಿಗೆ ಮಾರಿಯಾಗಿದ್ದ ರಕ್ಕಸನ ಬೆಟ್ಟದಲ್ಲಿಯೇ ಸಂಹರಿಸಿ
ಬಕಾಸುರನ ಸಂಹಾರದ ನಂತರ ತೊರೆದವರು
ಊರಿನ ಋಣವನು ತೀರಿಸಿದಂತಹ ತೃಪ್ತಿಯಿಂದ ಮುನ್ನಡೆದವರು
ಪಂಚಪಾಂಡವರು ಕುಂತಿಯ ಸಮೇತ ಪಾಂಚಾಲದೇಶವ ತಲುಪಿದರು
ಅಲ್ಲಿನ ಕುಂಬಾರನ ಮನೆಯೊಂದರ ಆಶ್ರಯ ಹೊಂದುತ ನೆಲೆಸಿದರು
ಬ್ರಾಹ್ಮಣ ವೇಷವ ಕಳಚದೆ ಅಲ್ಲಿಯೂ ಭಿಕ್ಷಾಟನೆಯನು ಮಾಡಿದರು
ತಾವಾರೆಂಬುವ ಸುಳಿವನು ನೀಡದೆ ಹಾಗೆಯೆ ದಿನವನು ದೂಡಿದರು॥
ಪಾಂಚಾಲದ ದೊರೆ ದ್ರುಪದನು ತನ್ನಯ ಮಗಳ ಸ್ವಯಂವರ ಏರ್ಪಡಿಸಿ
ದೇಶ ವಿದೇಶದ ಎಲ್ಲ ರಾಜರಿಗೆ ಆಮಂತ್ರಣಪತ್ರವ ಕಳಿಸಿ
ಧನುರ್ವಿದ್ಯೆಯಲಿ ವೀರನಾದವನು ಮಗಳನು ವರಿಸಲಿ ತಾನೆಂದು
ಮತ್ಸ್ಯಯಂತ್ರವನು ಭೇದಿಸುವಂತಹ ಇಟ್ಟನು ತಾನಂದು॥

ಕೃಷ್ಣಸುಂದರಿಯು ದ್ರೌಪದಿ ರೂಪವು ನಾಡಿನಲ್ಲಿ ಹೆಸರಾಗಿತ್ತು
ಅಗ್ನಿಪೂಜಕಳು ಸೌಂದರ್ಯದ ಗಣಿ ಎಂಬ ಖ್ಯಾತಿ ಪಡೆದಾಗಿತ್ತು
ದ್ರುಪದಕುಮಾರಿಯ ವರಿಸುವ ಆಸೆಗೆ ಬಂದಿತು ರಾಜರ ಪಡೆ ಅಲ್ಲಿ
ಹಲವು ರಾಜ್ಯಗಳ ಅರಸರಾಗಮಿಸಿ ಆಸೀನರು ಆಸನಗಳಲಿ॥

ಕುರು-ಪಾಂಚಾಲರ ನಡುವೆ ವೈರತ್ವ ಇದ್ದಿತು ತುಂಬಾ ದಿನದಿಂದ
ಕುರುಗಳು ಆರ್ಯರು ತಾವು ಮೇಲೆಂಬ ಭಾವನೆಯಿದ್ದಿತು ಮೊದಲಿಂದ
ಆದರೆ ದ್ರೌಪದಿ ಅಂದಚೆಂದಗಳ ತಿಳಿದ ಹಸ್ತಿನಾಪುರದವರು
ಪಾಂಚಾಲಿಯ ಗೆಲ್ಲುವ ಛಲದಲ್ಲಿಯೆ ಸ್ಪರ್ಧೆಗೆ ಅವರಾಗಮಿಸಿದರು
ದುರ್ಯೋಧನ ಕರ್ಣನ ಬಂದ ಸ್ವಯಂವರ ಮಂಟಪಕೆ
ಕರ್ಣನು ಖಂಡಿತ ಗೆಲುವನು ಎಂಬುವ ನಂಬಿಕೆ ಬಂದಿದ್ದಿತು ಮನಕೆ
ಯದುಕುಲ ಕೃಷ್ಣನು ತಾನೂ ಬಂದನು ಕೃಷ್ಣೆ ಸ್ವಯಂವರ ವೀಕ್ಷಿಸಲು
ಸಾತ್ಯಕಿಯೂ ಸಹ ಸಂಗಡವಿದ್ದನು ರಕ್ಷಣೆಯನು ಪರಿವೀಕ್ಷಿಸಲು
ಪಾಂಡವರೂ ತಾವೆಲ್ಲರು ಬಂದರು ಅಲ್ಲಿಗೆ ಬ್ರಾಹ್ಮಣ ವೇಷದಲಿ
ಕುಳಿತರು ತಾವೂ ಸ್ಪರ್ಧೆಯ ನೋಡುತ ಅಲ್ಲಿನ ವಿಪ್ರರ ಗುಂಪಿನಲಿ॥
ಸ್ಪರ್ಧಾಗೃಹದಲಿ ಮಧ್ಯದೊಳಿದ್ದಿತು ಎಣ್ಣೆಯ ತುಂಬಿದ ಕೊಪ್ಪರಿಗೆ
ತಿರುಗುವ ಚಕ್ರವು ಎಣ್ಣೆಯ ಮಧ್ಯದಿ ನಿಂತಿಹ ಕಂಬದ ಆ ತುದಿಗೆ
ಚಕ್ರದ ತಿರುಗುತಲಿದ್ದಿತು ಮತ್ಸ್ಯವು ನಿಲ್ಲದೆ ಸರಸರನೆ
ಚಕ್ರದ ಬುಡದಲಿ ಪಂಚಬಾಣಗಳು ಹೊಳೆಯುತ್ತಿದ್ದವು ಫಳಫಳನೆ
ಪಕ್ಕದಲ್ಲಿಯೇ ಮಹಾಧನುಸ್ಸೊಂದಿದ್ದಿತು ಸವಾಲು ಎಸೆಯುತ್ತ
ಸೊಕ್ಕಿದ ಮನದಲಿ ನೋಡುತಲಿದ್ದಿತು ಬನ್ನಿರಿ ನೋಡುವ ಎನ್ನುತ್ತ॥
ಮತ್ಸ್ಯದ ಬಿಂಬವು ಕಾಣುತಲಿದ್ದಿತು ಪ್ರತಿಫಲಿಸುತ ಕೊಪ್ಪರಿಗೆಯಲಿ
ಪಾರದರ್ಶಕತೆ ತೋರ್ಪಡಿಸುತ್ತಲಿ, ತುಂಬಿದ್ದಂತಹ ಎಣ್ಣೆಯಲಿ
ಮೀನಿನ ಬಿಂಬವು ತಿರುಗುತಲಿದ್ದಿತು ಮೂಲವನೇ ತಾ ನೋಡುತಲಿ
ಸಾಹಸ ತೋರುವ ವೀರರಿಗೇನೆ ಸವಾಲು ಎಸೆಯುವ ತೆರದಲ್ಲಿ
ವೀರನು ಮತ್ಸ್ಯದ ಬಿಂಬವ ನೋಡುತ ಭೇದಿಸಬೇಕಿದೆ ಮೂಲವನು
ಸಾಧಿಸಿ ತೋರಿಸಬೇಕಿದೆ ಧೀರನು ಆ ಪ್ರತಿಕೂಲವನು॥

ಭುವನಸುಂದರಿಯ ಬಯಸುವ ಮಂದಿಯ ಎದುರಿಗೆ ಬಂತು ಸವಾಲೊಂದು
ಅವಳನು ಪಡೆಯಲು ಅವಲೀಲೆಯಲಿ ಸವಾಲು ಗೆಲ್ಲಲೇಬೇಕಿಂದು
ಧನವನು ದೊರಕಿಕೊಳ್ಳಲು ಬೇಕಿದೆ ಮಹಾಪ್ರಯತ್ನವು ಮನಸಿನಲಿ
ಅನುಪಮ ಸಾಹಸ ಮೆರೆಯದೆ ಹೋದರೆ ಉಳಿವುದು ಎಂದೂ ಕನಸಿನಲಿ॥

‘ಮತ್ಸ್ಯಯಂತ್ರವನು ಭೇದಿಸಿದವನಿಗೆ ಕೊಡುವೆನು ನನ್ನಯ ಮಗಳನ್ನು
ಕೃಷ್ಣೆಯೆಂಬ ಅಭಿಧಾನವ ಹೊಂದಿದ ಕೃಷ್ಣಸುಂದರಿಯು ಇವಳನ್ನು’
ಎನ್ನುತ ದ್ರುಪದನು ಸಾರಿದನಲ್ಲಿಯ ಎಲ್ಲಾ ರಾಜರ ಎದುರಲ್ಲಿ
ತಾನೇ ಗೆಲ್ಲುವೆ ಎನ್ನುವ ಭಾವವು ಮೂಡಿತು ರಾಜರ ಮನದಲ್ಲಿ
ಕೃಷ್ಣೆಯು ಮಾಲೆಯ ಸಮೇತ ನಿಂತಳು ಯಂತ್ರದ ಸನಿಹದಲಿ
ಗೆಲ್ಲುವ ವೀರನ ಕೊರಳಿಗೆ ಹಾಕಲು ಮುಗುಳುನಗುತ್ತಲಿ ವಿನಯದಲಿ॥

ರಾಜಕುಮಾರರು ಕೃಷ್ಣೆಯ ಚೆಲುವನು ತುಂಬಿಕೊಂಡು ಕಣ್ಣುಗಳಲ್ಲಿ
ಅವಳನು ಪಡೆಯುವ ಆಸೆಯು ತುಂಬಲು ದೇಹದ ನರನಾಡಿಗಳಲ್ಲಿ
ಮತ್ಸ್ಯಯಂತ್ರವನು ಭೇದಿಸಲೆನ್ನುತ ಕಾತರದಿಂದಲಿ ನೋಡಿದರು
ತಮ್ಮ ಸರದಿ ಬರಲೆನ್ನುತ ಕಾದರು ಅಚ್ಚರಿ ನೋಟವ ಬೀರಿದರು
ಯಂತ್ರದ ಬಳಿಯಲಿ ಯಾರು ಹೋದರೂ ಸೋಲಲಿ ಎನ್ನುತ ಕೋರಿದರು
ಸೋತರೆ ತಾನೇ ಗೆಲ್ಲಬಹುದೆಂದು ಆಸೆಯ ಮನದಲಿ ತಾಳಿದರು
ಒಬ್ಬರ ನಂತರ ಒಬ್ಬರು ಮತ್ಸ್ಯಯಂತ್ರವನು ಭೇದಿಸಲು
ಗುರಿಯನು ತಪ್ಪುತ ಹಿಂದಿರುಗಿದ್ದರು ಕೈಲಾಗದೆ ಗುರಿ ಸಾಧಿಸಲು॥

ಸೋತ ಕುಮಾರರು ಜೋಲುಮೋರೆಯನು ಹಾಕಿ ಹಿಂದಕ್ಕೆ ಮರಳಿರಲು
ಮುಂದಿನ ಸ್ಪರ್ಧಿಯು ಅವನೂ ಸೋಲಲಿ ಎಂದೇ ಹಾರೈಸುತ್ತಿರಲು
ಗೆಲ್ಲದ ತೆರದಲಿ ಮಾಡಿಹರೇನೋ ಮಂತ್ರ-ತಂತ್ರ ಕುತಂತ್ರವನು
ಎಂಬ ಮಾತುಗಳು ಉರುಳಾಡಿದ್ದವು ಭೇದಿಸಲಾಗದೆ ಯಂತ್ರವನು
ಕಡೆಯಲಿ ಕರ್ಣನು ಮುಂದಕೆ ಬಂದನು ಗುರಿಯನು ಸಾಧಿಸಬೇಕೆಂದು
ಕೃಷ್ಣೆಯು ಕರ್ಣನ ನೋಡುತ ಮನದಲಿ ಬಯಸಿದಳವನೇ ಗೆಲಲೆಂದು
ಆದರೆ ಎಂದೂ ಗುರಿಯನು ತಪ್ಪದ ಅವನಂದೇಕೋ ತಪ್ಪಿದನು
ಅರಸರ ತಲೆಯನು ತಗ್ಗಿಸಿ ತನ್ನಯ ಸೋಲನು ಒಪ್ಪಿದನು॥

Tags

Related Articles

Leave a Reply

Your email address will not be published. Required fields are marked *

Language
Close