ಕುಡಿದರೆ ವೈಯನ್ಕೆ ಥರಾ ಕುಡಿಯಬೇಕು

Posted In : ವಿರಾಮ

ವೈಯೆನ್ಕೆ ಅವರು ಒಂದು ರಾತ್ರಿಯೂ ಬಿಟ್ಟವರಲ್ಲ. ಸತತ ಐವತ್ತು ವರ್ಷಗಳವರೆಗೆ ನಿರಂತರವಾಗಿ ಗುಂಡು ಹಾಕಿದವರು. ಕುಡಿಯುವುದಕ್ಕೆ ‘ಗುಂಡು ಹಾಕುವುದು’ಎಂದು ಹೆಸರಿಟ್ಟು ಜನಪ್ರಿಯ ಮಾಡಿದವರೂ ಅವರೇ. ವಿಚಿತ್ರ ಅಂದ್ರೆ ಅರ್ಧ ಶತಮಾನ ಕಾಲ ಒಂದು ರಾತ್ರಿ ಸಹ ಬಿಡದಂತೆ ಗುಂಡು ಹಾಕಿದರೂ, ವೈಯೆನ್ಕೆ ಅವರು ‘ಔಟ್’ಆಗಿದ್ದನ್ನಾಗಲಿ, ವಿಚಿತ್ರವಾಗಿ, ವಿಪರೀತವಾಗಿ ವರ್ತಿಸಿದ್ದನ್ನಾಗಲಿ ನೋಡಿದವರಿಲ್ಲ. ಅವರನ್ನು ‘ಕುಡುಕ’ಎಂದು ಯಾರೂ ಕರೆಯಲಿಲ್ಲ. ಕುಡಿತಕ್ಕೆ ಶಿಸ್ತಿನ, ಸಂಯಮದ ಹಾಗೂ ಶಿಷ್ಟಾಚಾರದ ಪರಿಧಿಯನ್ನು ಹಾಕಿ, ಕುಡಿಯುವ ಸಮಯವನ್ನು ಪಿಎಚ್‌ಡಿ(Precious Hour for Drinking) ದರ್ಜೆಗೇರಿಸಿದ ಅಗ್ಗಳಿಕೆ(ಪೆಗ್ಗಳಿಕೆ?) ವೈಯೆನ್ಕೆ ಅವರಿಗೇ ಸಲ್ಲಬೇಕು.

ವೈಯೆನ್ಕೆಗೆ ಕುಡಿತ ಅಂದ್ರೆ ಅದೊಂದು ಧ್ಯಾನ ಸ್ಥಿತಿ. ಅದಕ್ಕಾಗಿ ಅವರು ಮಾನಸಿಕವಾಗಿ, ಶಾರೀ–ರಿಕವಾಗಿ ಮಧ್ಯಾಹ್ನದಿಂದಲೇ ಸಿದ್ಧರಾಗುತ್ತಿದ್ದರು. ಮಧ್ಯಾಹ್ನದ ಎರಡು ಗಂಟೆಯೊಳಗೆ ಅಂದು ರಾತ್ರಿ ಎಲ್ಲಿ ಗುಂಡು ಹಾಕಬೇಕೆಂಬುದನ್ನು ಪಕ್ಕಾ ಮಾಡಿಕೊಳ್ಳುತ್ತಿದ್ದರು. ಸಾಯಂಕಾಲ ಐದೂವರೆಯಿಂದ ಅರ್ಧಗಂಟೆ ವಾಕ್ ಮಾಡಿ, ಮಿತವಾದ ತಿಂಡಿ ಸೇವಿಸಿ, ಕುಡಿಯುವುದಕ್ಕಿಂತ ಮೊದಲು ಹೊಟ್ಟೆ ಖಾಲಿ ಇರದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದ್ದರು. ಪ್ರತಿ ಸಲ ಕುಡಿಯುವುದಕ್ಕೆ ಕುಳಿತುಕೊಳ್ಳುವ ಮೊದಲು ಒಂದು ಸಂಭ್ರಮ, ಒಳ್ಳೆಯ ಸಿದ್ಧತೆಯನ್ನು ಅವರಿಂದ ನಿರೀಕ್ಷಿಸಬಹುದಾಗಿತ್ತು. ನಿಂತ ನೆಲ ಅಲುಗಲಿ ಸಾಯಂಕಾಲ ಏಳಾಗುತ್ತಿದ್ದಂತೆ, ಮೊದಲ ಗುಟುಕು ಗಂಟಲೊಳಗೆ ಬಿದ್ದುಬಿಡಬೇಕು. ಅಂಥ ಸಮಯಪಾಲನೆ!

ರಾತ್ರಿ ಒಂಬತ್ತುವರೆಗೆ ಕೊನೆ ಪೆಗ್ಗು. ಮನೆಯಲ್ಲೇ ‘ಸಮಾರಾಧನೆ’ಯಾದರೆ ಇನ್ನು ಅರ್ಧಗಂಟೆ ವಿಸ್ತರಣೆ, ಹತ್ತು ಗಂಟೆ ನಂತರ ಸಮಾಪ್ತಿ. ಆನಂತರ ಚೆನ್ನಾಗಿ ಊಟ, ಊಟಕ್ಕೆ ಮೊಸರನ್ನ ಬೇಕೇ ಬೇಕು. ವೈಯನ್ಕೆ ಎಂದೂ ಯದ್ವಾ ತದ್ವಾ ಗುಂಡು ಹಾಕಿದವರಲ್ಲ. ಮಾತು ತೊದಲುವಷ್ಟು ಕುಡಿದವರೂ ಅಲ್ಲ. ಅವರಿಗೆ ಗುಂಡು ಹಾಕುವುದೆಂದರೆ ಒಳ್ಳೆಯ ಕಾಲಕ್ಷೇಪ. ಒಳ್ಳೆಯ ಕಂಪನಿಯಿರಬೇಕು, ಅವರೊಂದಿಗೆ ಸಂವಾದಿಸಬೇಕು, ಓದಿದ ಪುಸ್ತಕ, ಪ್ರಸಂಗ, ಜೋಕು, ದೃಷ್ಟಾಾಂತಗಳ ಬಗ್ಗೆ ಹರಟೆ ಹೊಡೆಯಬೇಕು. ಅಲ್ಲಿ ಗುಂಡು ಎಂಬುದು ನೆಪ. ಅದೇ ಪ್ರಧಾನವಲ್ಲ. ಗುಂಡು ಹಾಕುವುದೇ ಮುಖ್ಯ ಅಲ್ಲ. ಈ ಕಾರಣದಿಂದ ವೈಯನ್ಕೆ ಜತೆಗೆ ಗುಂಡು ಹಾಕಲು ಅನೇಕರು ಹಾತೊರೆಯುತ್ತಿದ್ದರು. ಹಾಗೂ ಅವರನ್ನು ಪಾರ್ಟಿಗೆ ಕರೆಯುತ್ತಿದ್ದರು.

ಅವರು ಗುಂಡು ಪಾರ್ಟಿಯಲ್ಲಿದ್ದರೆ ಆ ಖದರೇ ಬೇರೆ. ವೈಯನ್ಕೆಯವರು ಸಿಕ್ಕ ಸಿಕ್ಕ ಗುಂಡುಗಳನ್ನು ಕುಡಿಯುತ್ತಿರಲಿಲ್ಲ. ಆ ವಿಷಯದಲ್ಲಿ ತೀರಾ ಚ್ಯೂಸಿ
ಆಗಿದ್ದರು. ಅವರಿಗೆ ಒಳ್ಳೆಯ ಸ್ಕಾಚ್, ವಿಸ್ಕಿ, ಸಿಂಗಲ್ ಮಾಲ್‌ಟ್‌ ವಿಸ್ಕಿಯೇ ಬೇಕಿತ್ತು. ರಾತ್ರಿ ಬಿಯರ್‌ನ್ನು ಮುಟ್ಟಿದ್ದೇ ಇಲ್ಲ. ಅವರು ಟೇಬಲ್‌ನಲ್ಲಿ ಇದ್ದರೆ ಎಲ್ಲರಿಗೂ ಅವರೇ ಸರ್ವ್ ಮಾಡುತ್ತಿದ್ದರು. ವಿಪರೀತ ಗುಂಡು ಹಾಕುವವರ ಮೇಲೆ ಒಂದು ಕಣ್ಣಿಟ್ಟು, ಪಾರ್ಟಿಯ ಘನತೆ ಹಾಳಾಗದಂತೆ ನೋಡಿಕೊಳ್ಳುತ್ತಿದ್ದರು. ವೈಯೆನ್ಕೆ ಪಾರ್ಟಿಯಲ್ಲಿ ಪಾಲ್ಗೊಳ್ಳುವುದು ಒಂದು ಪ್ರತಿಷ್ಠೆಯ ವಿಷಯವಾಗಿತ್ತು. ಸಮಾಜದ ಎಲ್ಲ ರಂಗದ ಪ್ರತಿಷ್ಠಿತರು, ಮುಖ್ಯ–ಮಂತ್ರಿ, ಮಂತ್ರಿಗಳು, ಚಿಂತಕರು, ವಿದ್ವಾಾಂಸರು, ಸಿನಿಮಾ ನಟರು, ಬುದ್ಧಿಜೀವಿಗಳು, ಸಾಹಿತಿಗಳು.. ಹೀಗೆ ಎಲ್ಲರೂ ಅವರ ಗುಂಡು ಪಾರ್ಟಿಯಲ್ಲಿ ಆಹ್ವಾನಿತರು. ಪಾರ್ಟಿಯಲ್ಲಿ ಅವರಿದ್ದರೆ ಅದರ ಖದರೇ ಬೇರೆ. ವೈಯೆನ್ಕೆ ಅವರು ಗುಂಡು ಪಾರ್ಟಿಯಲ್ಲಿ ಅನುಚಿತವಾಗಿ ವರ್ತಿಸಿದ್ದನ್ನು ನೋಡಿದವರಿಲ್ಲ.

ಮೂರು ರೌಂಡ್ ಆದ ನಂತರವೂ ಅವರು ಮೊದಲು ಇದ್ದ ಸಮತೋಲನವನ್ನೇ ಕಾಪಾಡಿಕೊಳ್ಳುತ್ತಿದ್ದರು. ಒಮ್ಮೆ ಪಾರ್ಟಿಯಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆಯವರು, ‘ವೈಯೆನ್ಕೆ, ನೀವು ಕುಡಿದರೂ ಕುಡಿಯದವರಂತೆ ಇರುತ್ತೀರಿ. ಇದೊಂದು ವಿಶೇಷ ಕಲೆ. ಅದರ ಗುಟ್ಟೇನು?’ಎಂದು ಕೇಳಿದಾಗ, ‘ಕುಡಿದ ಮೇಲೆ ಗುಂಡು ಮಾತಾಡುತ್ತದೆ, ಅದಕ್ಕೆ ಅವಕಾಶ ಮಾಡಿಕೊಡಬಾರದು. ನಾವು ಮಾತಾಡಬಾರದು. ಬೇರೆಯವರಿಗೆ ಮಾತಾಡಲು ಬಿಟ್ಟು, ನಾವು ಸುಮ್ಮನಿರಬೇಕು. ಆದರೆ ಬಹಳ ಜನ ತಾವು ಸುಮ್ಮನಾಗಿ, ಗುಂಡು ಮಾತಾಡುವುದಕ್ಕೆ ಅವಕಾಶ ನೀಡುತ್ತಾರೆ’ಎಂದು ಮಾರ್ಮಿಕವಾಗಿ ಹೇಳಿದ್ದರು.

ಕುಡಿದರೂ ಕುಡುಕ ಎನಿಸಿಕೊಳ್ಳದಂತೆ, ಕುಡಿದರೂ ಕುಡಿಯದವರಂತೆ ಹೇಗಿರಬೇಕು ಎಂಬುದಕ್ಕೆ ವೈಯೆನ್ಕೆ ಯಾವತ್ತೂ ಅಗ್ದಿ ಉತ್ತಮ ನಿದರ್ಶನ. ಈ ಕಾರಣದಿಂದ ಅವರ ಆಪ್ತ ಮಿತ್ರರು ಮನೆಯಲ್ಲಿ ಹೆಂಡತಿಗೆ, ‘ವೈಯನ್ಕೆ ಗುಂಡು ಪಾರ್ಟಿಗೆ ಕರೆದಿದ್ದಾರೆ. ಹೋಗುತ್ತೇನೆ’ಎಂದು ಅನುಮತಿ ತೆಗೆದುಕೊಂಡು ಬೇರೆಡೆಗೆ ಹೋಗುತ್ತಿದ್ದರು. ವೈಯೆನ್ಕೆ ಗುಂಡು ಪಾರ್ಟಿಗೆ ಕರೆದಿದ್ದಾರೆಂದರೆ ಅವರ ಪತ್ನಿಯರು ತಕರಾರು ತೆಗೆಯುತ್ತಿರಲಿಲ್ಲ. ತಮ್ಮ ಗಂಡನನ್ನು ಸುರಕ್ಷಿತ ವ್ಯಕ್ತಿಯ ಸುಪರ್ದಿಗೆ ಬಿಟ್ಟಿದ್ದೇವೆಂಬ ಸಮಾಧಾನ. ಅಲ್ಲದೇ ವೈಯೆನ್ಕೆ ಸಮ್ಮುಖದಲ್ಲಿ ವಿಪರೀತ ಕುಡಿಯದೇ ಶಿಸ್ತು ಪಾಲಿಸುತ್ತಾರೆಂಬ ನಂಬಿಕೆ.

ಕುಡಿತವನ್ನು ತಮ್ಮ ಜೀವನದ ಪ್ರಮುಖ ಅಂಗವನ್ನಾಗಿ ಮಾಡಿಕೊಂಡರೂ, ವೈಯೆನ್ಕೆ ಅದರ ದಾಸರಾಗಲಿಲ್ಲ. ಹಗಲು ಹೊತ್ತು ವಾಸನೆಯನ್ನೂ ಮೂಸಲಿಲ್ಲ. ರಾತ್ರಿ ಏಳರ ಮುಂಚೆ ಅದನ್ನು ಮುಟ್ಟಲಿಲ್ಲ. ಕರ್ತವ್ಯ, ಕೆಲಸ ಹಾಗೂ ವ್ಯಕ್ತಿತ್ವಕ್ಕೆ ಗುಂಡು ಅವರಿಗೆ ಮಾರಕವಾಗಲಿಲ್ಲ. ಈ ಶಿಸ್ತನ್ನು ಯಾವುದೇ ಸಂದರ್ಭದಲ್ಲೂ ಉಲ್ಲಂಸಲಿಲ್ಲ. ಅದು ಅವರ ಮಹತ್ತರ ಗುಣ. ‘ಕುಡಿದರೆ ವೈಯೆನ್ಕೆ ಥರಾ ಕುಡಿಯಬೇಕು’ ಎಂಬುದು ಜನಜನಿತ ಅಭಿಪ್ರಾಯವಾಗಿತ್ತು. ಗುಂಡಿನ ಬಗ್ಗೆ ಇದೇ ರೀತಿಯ ಶಿಸ್ತು, ಪ್ರೀತಿ, ಶ್ರದ್ಧೆ, ಅಚ್ಚುಕಟ್ಟುತನ, ವಾಂಛೆ, ಕಠಿಣ-ಕಟ್ಟುನಿಟ್ಟಿನ ನಿಯಮವನ್ನು ರೂಢಿಸಿಕೊಂಡ ಮತ್ತೊಬ್ಬ ಮಹಾನ್ ಕುಡುಕನಲ್ಲದ ಕುಡುಕ ಅಂದ್ರೆ ಸರ್ದಾರ್ ಖುಷವಂತ ಸಿಂಗ್!

ಖುಷವಂತ ಸಿಂಗ್ ತಮ್ಮ ಇಪ್ಪತ್ತೈದನೇ ವಯಸ್ಸಿಗೆ ಕುಡಿಯಲು ಆರಂಭಿಸಿದರು. ಅದ್ಯಾವ ಮುಹೂರ್ತದಲ್ಲಿ ಶುರು ಹಚ್ಚಿಕೊಂಡರೋ ಏನೋ, ಒಂದು ದಿನ ಸಹ ಬಿಡದೇ, ಸಾಯುವ ಹಿಂದಿನ ದಿನದ ತನಕವೂ, ನಿರಂತರವಾಗಿ ಎಪ್ಪತ್ನಾಲ್ಕು ವರ್ಷಗಳ ಕಾಲ ಕುಡಿದರು. ಇಷ್ಟು ಸುದೀರ್ಘ ವರ್ಷಗಳ ಕಾಲ ಕುಡಿದು ತೊಂಬತ್ತೊಂಬತ್ತು ವರ್ಷಗಳ ಕಾಲ ಬದುಕಿದ್ದರು. ಕುಡಿದರೆ ಆರೋಗ್ಯ ಹಾಳಾಗುತ್ತದೆ, ಜಠರ, ಕರುಳು ಸುಟ್ಟು ಹೋಗುತ್ತದೆಂದು ಭಾವಿಸಿದ್ದವರಿಗೆ ಸರ್ದಾರ್ಜಿ ಅಪವಾದ. ಕುಡಿದರೆ ಖುಷವಂತ ಸಿಂಗ್ ಥರಾ ಕುಡಿಯಬೇಕು ಎಂಬುದು ಶ್ರೇಷ್ಠತೆಯ ಮಾತಾಗುವಂತೆ ಬದುಕಿದರು. ಇದಕ್ಕೆ ಮುಖ್ಯ ಕಾರಣ ಕುಡಿತದಲ್ಲಿ ಶಿಸ್ತು, ಸಂಯಮ ಹಾಗೂ ಸ್ವನಿಯಂತ್ರಣ. ಖುಷವಂತ ಸಿಂಗ್ ಸಾಯಂಕಾಲ ಏಳಕ್ಕಿಂತ ಮೊದಲು ಗುಂಡು ಮುಟ್ಟುತ್ತಿರಲಿಲ್ಲ. ಸರಿಯಾಗಿ ಏಳಕ್ಕೆ ವಿಸ್ಕಿ ಸುರಿದುಕೊಂಡು, ಒಂದು ಪೆಗ್‌ನ್ನು ಬರೋಬ್ಬರಿ ಮುಕ್ಕಾಲು ಗಂಟೆ ಕುಡಿಯುತ್ತಿದ್ದರು. ಅದಾದ ಬಳಿಕ ಎರಡನೇ ಪೆಗ್. ಅದು ಖಾಲಿಯಾಗಲು ಅಷ್ಟೇ ಸಮಯ.

ರಾತ್ರಿ ಎಂಟೂವರೆಯಾಗುತ್ತಿದ್ದಂತೆ ಗುಂಡು ಪಾರ್ಟಿ ಮುಗಿಯಿತು. ಅದು ಪ್ರಧಾನಿ ಕರೆದ ಪಾರ್ಟಿಯಾಗಿರಬಹುದು, ಇವರೇ ತಮ್ಮ ಮನೆಯಲ್ಲಿ ಆಯೋಜಿಸಿದ ಪಾರ್ಟಿಯಿರಬಹುದು. ಎಂಟೂವರೆ ನಂತರ ಅವರು ಎದ್ದು ಬರುತ್ತಿದ್ದರು.  ಎರಡು ಪೆಗ್‌ಗೆ ಮುಕ್ತಾಯ. ಮನೆಗೆ ಬಂದ ಅತಿಥಿ ಎಂಥ ಗಣ್ಯನೇ ಆಗಿರಲಿ, ಎರಡು ಪೆಗ್ ಹಾಗೂ ಎಂಟೂವರೆ ಗಂಟೆಯನ್ನು ದಾಟದಂತೆ ಮುಕ್ಕಾಲು ಶತಮಾನದವರೆಗೆ ಈ ನಿಯಮವನ್ನು ವ್ರತದಂತೆ ಪಾಲಿಸಿಕೊಂಡು ಬಂದರು. ಬೆಳಗ್ಗೆ ನಾಲ್ಕು ಗಂಟೆಗೆ ಏಳುತ್ತಿದ್ದ ಖುಷವಂತ ಸಿಂಗ್, ಎಂದೂ ಹಿಂದಿನ ರಾತ್ರಿಯ ಹ್ಯಾಾಂಗೋವರ್ ನ್ನು ಇಟ್ಟುಕೊಳ್ಳುತ್ತಿರಲಿಲ್ಲ. ಗುಂಡು ಅವರಿಗೆ ಒಂದು ರೀತಿಯಲ್ಲಿ ಶಿಸ್ತನ್ನು ರೂಪಿಸಿತ್ತು. ಈ ನೆಪದಲ್ಲಿ ಅವರನ್ನು ಭೇಟಿ ಮಾಡಲು ವಿಚಿತ್ರ ವ್ಯಕ್ತಿಗಳು, ಗಣ್ಯರು ಬರುತ್ತಿದ್ದರು. ಅವರು ಗುಂಡಿನಿಂದ ಕಿಕ್ ಏರಿಸಿಕೊಂಡದ್ದಕ್ಕಿಂತ, ಗುಂಡಿಗೇ ಕಿಕ್ ಕೊಡುತ್ತಿದ್ದರು. ಇವರಿಬ್ಬರು ಎಂಥ ಕುಡುಕರಿಗೆ ಮಾದರಿಯಾಗಬಲ್ಲರು.

ಗುಂಡಾಭಟ್ಟ

Leave a Reply

Your email address will not be published. Required fields are marked *

1 × 1 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top