About Us Advertise with us Be a Reporter E-Paper

ವಿರಾಮ

ದುಬೈ ಸೆಖೆಯೂ ಖರ್ಜೂರದ ಹಣ್ಣೂ….

* ರಜನಿ ಭಟ್

ದುಬೈ ಎಂದರೆ, ರಣ ರಣ ಬೆಂಕಿ, ಚಲಿಸುತ್ತಿರುವ ವಾಹನದ ಟೈರು ಸಿಡಿಯುವ ಆತಂಕ. ತಾಪ ತುಂಬಿದ ಆ ದಿನಗಳಲ್ಲಿ ಸಿಗುವ ಖರ್ಜೂರದ ಹಣ್ಣು ಅಲ್ಲಿನ ದೇವ ಫಲ ಇದ್ದಂತೆ.

ದುಬೈಯು ನಮ್ಮ ಭಾರತದಿಂದ ಸುಮಾರು ಎರಡೂವರೆ ಸಾವಿರ ಕಿಮೀ ದೂರದಲ್ಲಿರುವ ಶ್ರೀಮಂತ ದೇಶ. ಸ್ಥಳೀಯರಾದ ‘ಎಮರಾತಿ’ಗಳನ್ನು ಬಿಟ್ಟರೆ ಅತಿ ಹೆಚ್ಚು ಸಂಖ್ಯೆಯಲ್ಲಿ ಭಾರತೀಯರೇ ಇಲ್ಲಿನ ನಿವಾಸಿಗಳು. ಮಲಯಾಳಿಗಳನ್ನು ಬಿಟ್ಟರೆ ಕನ್ನಡಿಗರ ಪಾಲು ಇದರಲ್ಲಿ ಹೆಚ್ಚಿನದಿದೆ. ದುಬೈಯನ್ನು ಭೂಮಿ ಕಂಡ ಎಂದು ಕರೆದರೂ ಅತಿಶಯೋಕ್ತಿಯಲ್ಲ. ಗಗನದೆತ್ತರ ಬೆಳೆದು ನಿಂತ ಅಂಬರಚುಂಬಿ ಕಟ್ಟಡಗಳು, ವಿಶ್ವವಿಖ್ಯಾತ ಮಹಲುಗಳು ಇನ್ನು ಹತ್ತು ಹಲವು ಕೌತುಕಗಳು ನೋಡುಗರ ಕಣ್ಮನ ಸೆಳೆಯುತ್ತವೆ. ಭಾರತದ ಸಮಯದಿಂದ ಒಂದೂವರೆ ಘಂಟೆ ಹಿಂದಿರುವ ದುಬೈ ಭೂಪಟದಲ್ಲಿ ನೋಡಿದಾಗ ನಮ್ಮೂರಿನಿಂದ ಅರಬಿ ಸಮುದ್ರದ ಪಕ್ಕದಲ್ಲೇ ಬಂದಿಳಿದರೆ ತಲಪಬಹುದು ಅನ್ನಿಸುತ್ತದೆ. ಕನ್ಯಾಕುಮಾರಿಯಿಂದ ದೆಹಲಿಗೆ ಹೋದಷ್ಟು ದೂರವಿರುವ ಈ ಪುಟ್ಟ ದೇಶ ‘ಯು ಏ ಈ’ ಆಗಿದ್ದರೂ ಜನಸಾಮಾನ್ಯರಲ್ಲಿ ದುಬೈ ಎಂದೇ ಹೆಸರುವಾಸಿ. ಪ್ರಕೃತಿಯ ವೈಚಿತ್ರ್ಯ ! ದುಬೈಯಲ್ಲಿ ಸೆಖೆ ಇರುವಾಗ ನಮ್ಮ ಕರ್ನಾಟಕದಲ್ಲಿ ಮಳೆ …. ತಡೆಯಲಸಾಧ್ಯವಾದ ಸೆಖೆ ಅನ್ನಿಸಿದರೆ ಒಮ್ಮೆ ಊರಿಗೆ ವಿಮಾನ ಹತ್ತಿಬಿಟ್ಟರೆ ಸಾಕು ಬಂದಿಳಿಯುವಾಗ ಸುರಿವ ಮಳೆಯು ಪ್ರೀತಿಯಿಂದ ಸ್ವಾಗತ ಕೋರುತ್ತದೆ.

ಬಿಸಿಲ ಬೇಗೆ ಸಹಿಸಲಸದಳ
ದುಬೈನಲ್ಲಿ ಸೂರ್ಯನು ತುಸುಕೋಪಗೊಂಡೇ ಉದಿಸುತ್ತಾನೆ. ವಾಕಿಂಗ್ ಬಂದಿರುವವರು ವಾಕಿಂಗ್ ಟ್ರ್ಯಾಕ್‌ನಲ್ಲಿ ಕ್ರಮಿಸುತ್ತ ಎಷ್ಟು ದೂರ ಕ್ರಮಿಸಿದೆವೆಂದು ಕೈಗೆ ಕಟ್ಟಿದ ಪೆಡೊಮೀಟರ್‌ನ್ನು ನೋಡುತ್ತಾರೆ. ಇನ್ನೊಮ್ಮೆ ಸೆಟೆದು ಏಳುವ ಸೂರ್ಯನನ್ನು ಮಗದೊಮ್ಮೆ ತಂದಿರುವ ಬಾಟಲಿ ನೀರನ್ನು ಬೆವರನ್ನು ಕೈಯಲ್ಲಿ ಹಣೆಯಿಂದ ಉಜ್ಜಿ ಕೈ ಕೊಡವುತ್ತಾರೆ. ‘ದುಬೈ ಬೇಸಗೆಯೇ ಹೀಗೆ’. ಇಲ್ಲಿಯ ಸೆಖೆಯೇ ಒಂದು ಸೋಜಿಗ! ದುಬೈಯ ಬೇಸಗೆ ಏಪ್ರಿಲ್‌ನಿಂದ ಆರಂಭವಾಗಿ ಸಪ್ಟೆಂಬರ್ ಕೊನೆತನಕ ಇರುತ್ತದೆ. ಕೆಲವು ಸಲ ಅಕ್ಟೋಬರ್ ತಿಂಗಳ ಮಧ್ಯದ ತನಕವೂ ಇರುವುದುಂಟು. ಇದರಲ್ಲಿ ಮೇ ತಿಂಗಳಿನಿಂದ ಆಗಸ್‌ಟ್ ತಿಂಗಳವರೆಗೆ ತೇವಾಂಶ ಹಾಗು ಉಷ್ಣತೆ ಅತೀವ. ಘಳಿಗೆಗೊಮ್ಮೆ ಬದಲಾಗುವ ಉಷ್ಣಾಂಶವನ್ನು ಚಂಚಲ ಹೆಣ್ಣಿನ ಮನಸ್ಸಿಗೆ ಇಲ್ಲವೇ ಮೀನಿನ ಹೆಜ್ಜೆಗೂ ಹೋಲಿಸಬಹುದು. ಬೆಳಗಿನ ಉಷ್ಣಾಂಶವು ಅರೆ ಬದಲಾಗಿ ಏರಿಕೆ ಕಾಣುತ್ತದೆ. ಸೂರ್ಯನ ತೀವ್ರ ಶಾಖವು ಭೂಮಿಗೆ ಬಡಿದು ಹಗಲು ಬಿಸಿಲಿಗೆ ಧಗೆ ಇದ್ದರೆ ರಾತ್ರೆ ಮರಳಿನಿಂದ ಹೊರಹೊಮ್ಮುವ ಬಿಸಿ ಉಷ್ಣದ ಬೇಗೆ ತಡೆಯಲಸಾಧ್ಯ. ಅಪಾರ್ಟ್‌ಮೆಂಟ್‌ಗಳು, ಮಹಲುಗಳು, ಬಸ್ ನಿಲ್ದಾಣಗಳು ವಾಹನಗಳು ಎಲ್ಲವೂ ಹವಾನಿಯಂತ್ರಿತ. ಅತಿ ಉಷ್ಣತೆ ಅಂದರೆ 50ಡಿಗ್ರಿ ವರೆಗೆ ದಾಖಲಾದ ಸನ್ನಿವೇಶವೂ ಇದೆ.

ಕರಗಿ ಹೋಗುವ ಕಾರ್ಮಿಕರು
ಕಟ್ಟಡ ನಿರ್ಮಾಣ ಕಾಮಗಾರಿಗಳಲ್ಲಿ ದುಡಿಯುವ ಕಾರ್ಮಿಕರಿಗೆ ಬೇಸಗೆ ಬಲು ಕಷ್ಟಕರ. ಕಾರ್ಮಿಕರ ಹಿತವನ್ನು ಬಯಸಿ ಇಲ್ಲಿಯ ಜುಲೈ, ಆಗಸ್‌ಟ್ ತಿಂಗಳಲ್ಲಿ ಮಧಾಹ್ನ 2 ಗಂಟೆಗಳ ಕಾಲ ವಿರಾಮ ಘೋಷಿಸಿದೆ. ಹವಾನಿಯಂತ್ರಿತ ಕಾರ್ಮಿಕ ವಸತಿ ಗೃಹಗಳು ಎದ್ದು ನಿಂತಿವೆ. ಈ ಸಮಯದಲ್ಲಿ ಆರೋಗ್ಯ ಸಂಬಂಧಿ ಸಮಸ್ಯೆಗಳಾದ ಫುಡ್ ಪೊಯ್ಸನಿಂಗ್, ಡಿಹೈಡ್ರೇಷನ್, ವಾಂತಿಭೇದಿಗಳು ಜಾಸ್ತಿ. ಇದಕ್ಕೆ ಸಂಬಂಧಿಸಿದ ಕಾರ್ಯಾಗಾರಗಳು, ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆಸಿ ಅವರಲ್ಲಿ ಜಾಗೃತಿ ಮೂಡಿಸುತ್ತಾರೆ. ಹೇರಳವಾಗಿ ನೀರು ಕುಡಿಯುವುದು, ಮೂತ್ರವನ್ನು ಕಟ್ಟಿಡದಿರುವಿದು, ಉತ್ತಮ ಸರಳ ಆಹಾರ ತಿನ್ನುವುದು ಮೊದಲಾದ ಸಲಹೆಗಲನ್ನು ಕಾರ್ಮಿಕರಿಗೆ ನೀಡುತ್ತಾರೆ.

ದುಬೈಯಲ್ಲಿ ಕೆಲವು ವರುಷಗಳಿಂದ ಅಕಾಲಿಕವಾಗಿ ಮಳೆ ಬರುವುದುಂಟು. ಇದು ಮಾನವ ನಿರ್ಮಿತ ಮಳೆ. ಮೋಡಬಿತ್ತನೆ ಮಾಡಿ ಮಳೆ ಬರಿಸುವ ಪ್ರಯತ್ನ. ಏರುತ್ತಿರುವ ಭೂತಾಪಮಾನಕ್ಕೆ ಇದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ. ಆ ಕ್ಷಣದಲ್ಲಿ ಸ್ವಲ್ಪ ಮಟ್ಟಿನ ಧಗೆಯನ್ನು ಕಡಿಮೆ ಮಾಡಬಹುದು. ಇಲ್ಲಿ ಯಾವ ಕಾಲದಲ್ಲೂ ನೀರಿನ ಸಮಸ್ಯೆಯಾಗಲೀ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯಗಳಾಗಲೀ ಎಂದೂ ತಲೆದೋರಿಲ್ಲ. ಸಮುದ್ರದ ನೀರನ್ನು ಶುದ್ಧೀಕರಿಸುವ ಮೂಲಕ ನೀರಿನ ಸರಬರಾಜು ವ್ಯವಸ್ಥಿತವಾಗಿದೆ. ಸಮುದ್ರ ಕಿನಾರೆಯಿಂದ 40-50 ಕಿಲೋಮೀಟರು ಬೋರ್‌ವೆಲ್‌ಗಳನ್ನು ಕೊರೆದಾಗ ಸವಳು ನೀರು ಸಿಗುತ್ತದೆ. ಸಮುದ್ರದ ನೀರು ಮರಳಿನ ಮೂಲಕ ಅಲ್ಲಿಯವರೆಗೆ ವ್ಯಾಪಿಸಿರುವುದು ಇದಕ್ಕೆ ಕಾರಣ. ಶಾಲಾ ಮಕ್ಕಳ ಬೇಸಗೆ ರಜೆ ಜುಲೈ, ಆಗಸ್‌ಟ್ ತಿಂಗಳಲ್ಲಿ ಬರುವ ಕಾರಣ ವಿದೇಶ ಪ್ರವಾಸಗಳಿಗೂ ಈ ಸಮಯ ಸಕಾಲ. ಹೆಚ್ಚಿನವರು ತಮ್ಮ ತಾಯ್ನಾಡಿಗೆ ರಜೆಯಲ್ಲಿ ತೆರಳುತ್ತಾರೆ. ಈ ಸಮಯದಲ್ಲಿ ವಿಮಾನ ದರವು ಗಗನಕ್ಕೇರಿರಿತ್ತದೆ.

ಬೇಸಗೆಗೆ ಖರ್ಜೂರದ ಸಿಹಿ
ಅರಬ್ ಜನರ ಜೀವನ ಶೈಲಿಯು ಸಾಮಾನ್ಯವಾಗಿ ಆಡಂಬರದ್ದು. ಸುಖಭೋಗದಿಂದ ಕೂಡಿದ ಜೀವನವನ್ನು ಅದಕ್ಕಾಗಿಯೇ ಇವರ ಆಹಾರಕ್ರಮ, ಮಲಗುವ ಹೊತ್ತು ಇವಕ್ಕೆ ಹೊತ್ತು ಗೊತ್ತೆಂಬುದಿಲ್ಲ. ಇಲ್ಲಿ ನೈಟ್ ಲೈಫ್ ಬಹಳ ಹೆಸರುವಾಸಿ. ಅದಕ್ಕೇ ‘ದುಬೈ ನೆವರ್ ಸ್ಲೀಪ್‌ಸ್’ ಅಂತ ಕರೆಯುವುದು. ರಾತ್ರೆ ಇಡೀ ಶೀಶ ಹುಕ್ಕಗಳನ್ನು ಎಳೆಯುತಾ,್ತ ಅರಬ್ ಸಾಂಪ್ರದಾಯಿಕ ಕಾಫಿ ಕುಡಿಯುತ್ತಾರೆ.ೆ ವಾರಾಂತ್ಯದ ವೇಳೆ ಕುಟುಂಬ ಸಮೇತರಾಗಿ ಪಾರ್ಕ್, ಬೀಚ್, ಮಾಲ್, ಬಾರ್ಬೆಕ್ಯೂ ಪಾರ್ಟಿ ಅಂತ ಖುಶಿ ಪಡುತ್ತಾರೆ. ಮರಳುಗಾಡಿನ ಹಣ್ಣೆಂದು ಬಿಂಬಿತವಾಗಿರುವ ಖರ್ಜೂರವು ಬೇಸಗೆಯಲ್ಲಿ ಇಲ್ಲಿ ವರವಾಗಿ ದೊರಕುತ್ತದೆ ಎಂದರೂ ಈ ಹಣ್ಣಿನಲ್ಲಿ ಕಬ್ಬಿಣದ ಅಂಶವು ಅತಿ ಹೆಚ್ಚು ಇರುತ್ತದೆ. ಅನೀಮೀಕ್ ರೋಗಿಗಳಿಗೆ ವೈದ್ಯರು ಇದನ್ನು ಸೇವಿಸಲು ಸಲಹೆ ನೀಡುತ್ತಾರೆ. ದಿನಕ್ಕೆ ಎರಡು- ಮೂರು ಖರ್ಜೂರವನ್ನು ನೀರಿನಲ್ಲಿ ಹಾಕಿ ಮರುದಿನ ಬೆಳಗ್ಗೆ ಅದನ್ನು ಕುಡಿದರೆ ಮಲಬದ್ಧತೆಯಿಂದ ಮುಕ್ತಿ ಎಂದು ಹೇಳುತ್ತದೆ ವಿಜ್ಞಾನ. ಅಬುಧಾಬಿಯ ಲಿವಾ ಪಟ್ಟಣದಲ್ಲಿ ಈ ಸಮಯದಲ್ಲಿ ನಡೆಯುವ ಖರ್ಜೂರ ಉತ್ಸವ ಬಹಳ ಹೆಸರುವಾಸಿ. ದೇಶದ ನಾನಾ ಕಡೆಗಳಿಂದ ಬಂದ ವಿಧ ವಿಧದ ರೀತಿಯ ಖರ್ಜೂರಗಳು ಇಲ್ಲಿ ಪ್ರದರ್ಶನ ನೋಡುವುದೇ ಒಂದು ಅನುಭವ.

ಬೇಸಗೆಯಲ್ಲಿ ಕಂಡುಬರುವ ಮತ್ತೊಂದು ಅಂಶವೆಂದರೆ ವಾಹನ ಅಪಘಾತಗಳು. ಚಳಿಗಾಲ ಹಾಗು ಉಳಿದ ಹವೆಯ ಕಾಲಕ್ಕೆ ಹೋಲಿಸಿದರೆ ಈ ಸಮಯದಲ್ಲಿ ಅಪಘಾತಗಳು ಹೆಚ್ಚು. ಬಿಸಿಲಿನ ಧಗೆಗೆ ಟೈರ್ಯ ಬರ್ಸ್‌ಟ್ ಆಗುವುದು, ಸಂಚರಿಸುತ್ತಿದ್ದಂತೆಯೇ ಗಾಡಿಗೆ ಬೆಂಕಿ ಹಿಡಿಯುವುದು, ಬಿಸಿಯಿಂದಾಗಿ ಗಾಡಿಯ ಉಷ್ಣತೆ ಹೆಚ್ಚಾಗುವುದು ಇತ್ಯಾದಿಗಳು ಗುರುತರವಾದ ಪರಿಣಾಮ ಉಂಟುಮಾಡುತ್ತದೆ. ಮುಂಜಾಗರೂಕತಾ ಕ್ರಮಗಳನ್ನು ಅನುಸರಿಸಿದರೂ ಅಪಘಾತಗಳ ತೀವ್ರತೆ ಕಡಿಮೆ ಆಗಿಲ್ಲ.

ಈ ದೇಶ ಸಂಪೂರ್ಣ ಮಳಲು ಕಾಡು ಹೌದು. ಮರುಭೂಮಿಯ ಮಧ್ಯೆ ಕೆಲವು ಕಡೆ ಸಿಹಿ ನೀರಿನ ಬುಗ್ಗೆಗಳಿವೆ. ವಾಡಿಗಳಲ್ಲಿ (ಪರ್ವತ ಶ್ರೇಣಿಗಳ ಕಣಿವೆಗಳು) ಕಾಣಸಿಗುವ ಒರತೆಗಳು, ಮಸಾಫಿ ಎಂಬಲ್ಲಿ ಕಂಡುಬರುವ ನೀರಿನ ತೊರೆಗಳು ಕುಡಿಯುವ ನೀರನ್ನು ಕೊಡುತ್ತವೆ. ಒಮಾನ್ ಸರಹದ್ದಿನಲ್ಲಿರುವ ಹಟ್ಟ ಜಾಗದಲ್ಲಿ ಮಳೆನೀರು ಸಂಗ್ರಹಕ್ಕಾಗಿಯೇ ಆಣೆಕಟ್ಟು ಕಟ್ಟಿದ್ದಾರೆ. ಪರ್ವತದ ಎಡೆಗಳಿಂದ ಹರಿದು ಬಂದ ನೀರು ಇದರಲ್ಲಿ ಶೇಖರಣೆಗೊಳ್ಳುತ್ತದೆ. ಹರಿಯುವ ತೊರೆಗಳನ್ನು ಸಹ ಈ ಭಾಗದಲ್ಲಿ ಕಾಣಬಹುದು. ಇಂಗುಗುಂಡಿಗಳನ್ನು ಅಲ್ಲಲ್ಲಿ ಕಾಣಬಹುದು. ಮಳೆಗಾಲವೆಂಬುದೇ ಇರದ ಮರುಭೂಮಿಯಲ್ಲಿ, ಒಮ್ಮೊಮ್ಮೆ ಮಳೆನೀರನ್ನು ಭೂಮಿಯ ಅಂತರ್ಜಲವಾಗಿಸುವ ಪ್ರಯತ್ನ ನಡೆದಿದೆ. ಇಲ್ಲಿ ಸಹಜ ಮೂಲದಲ್ಲಿ ದೊರೆಯುವ ನೀರೆಂದರೆ ಇಷ್ಟೇ. ಅದೇನೇ ಇದ್ದರೂ, ತೈಲದ ಮಾರಾಟದಿಂದ ಅಪಾರ ಹಣಗಳಿಸಿರುವ ಈ ದೇಶ, ನೀರಿನ ಕೊರೆತೆಯನ್ನು ಸರಿದೂಗಿಸಲು ಕಂಡುಕೊಂಡ ಒಂದು ಮಾರ್ಗವೆಂದರೆ, ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುವುದು!

ಇಲ್ಲಿ ಎಲ್ಲಾ ಕಟ್ಟಡಗಳು, ಮನೆಗಳು, ವಾಹನಗಳು ಹವಾನಿಯಂತ್ರಿತ. ಹಿಂದೆ ಅರಬರು ಯಾವ ರೀತಿಯಲ್ಲಿ ಸೆಖೆಯನ್ನು ಸಹಿಸುತ್ತಿದ್ದರು? ಖರ್ಜೂರದ ಎಲೆಗಳು ಹಾಗು ಕಾಂಡಗಳು ಈ ನಿಟ್ಟಿನಲ್ಲಿ ಬಹಳ ಸಹಾಯಕ. ವಿಶೇಷವಾಗಿ ನಿರ್ಮಿಸಲ್ಪಟ್ಟ ಮನೆಗಳನ್ನು ಅರಬರು ಬೇಸಗೆಗಾಗಿಯೇ ನಿರ್ಮಿಸುತ್ತಿದ್ದರು. ಇದರ ಮೇಲ್ಚಾವಣಿ ಹವಾನಿಯಂತ್ರಿತದಂತೆ ವರ್ತಿಸುತ್ತಿತ್ತು. ಖರ್ಜೂರದ ಎಲೆಗಳನ್ನು ಹೊಚ್ಚಿದ ಮನೆಗಳು ನಮ್ಮೂರಿನಲ್ಲಿ ಕಾಣುವ ಹುಲ್ಲು ಹಾಸಿನ ಮನೆಗಳನ್ನು ಹೋಲುತ್ತವೆ.

Tags

Related Articles

Leave a Reply

Your email address will not be published. Required fields are marked *

Language
Close