ಸುಪ್ರೀಂ ಒಡಕು ಕಳವಳಕಾರಿ

Posted In : ಸಂಪಾದಕೀಯ-1

ಸುಪ್ರೀಂ ಕೋರ್ಟಿನ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ತಮ್ಮ ಮುಖ್ಯಸ್ಥನ ವಿರುದ್ಧ ಬಹಿರಂಗವಾಗಿ ಬಂಡಾಯ ಸ್ವರೂಪದ ಮಾತುಗಳನ್ನಾಡಿರುವುದು ನಿಜಕ್ಕೂ ಕಳವಳಕಾರಿ ವಿಷಯವಾಗಿದೆ. ಎಲ್ಲ ರಂಗಗಳಲ್ಲಿಯೂ ಕಿತ್ತಾಟವಿದ್ದರೂ ಕನಿಷ್ಠ ನ್ಯಾಯದಾನ ವ್ಯವಸ್ಥೆ ಅದನ್ನು ಮೀರಿ ಅಚಲವಾಗಿ, ನಿಷ್ಪಕ್ಷಪಾತವಾಗಿ ನಿಂತಿದೆ ಎಂಬ ಸಾರ್ವಜನಿಕ ನಂಬಿಕೆಗೆ ಇದು ಕೊಡಲಿ ಪೆಟ್ಟು ನೀಡಿದೆ. ನ್ಯಾಯಾಧೀಶರ ನಡುವೆ ಭಿನ್ನಾಭಿಪ್ರಾಯಗಳಿರಬಾರದು ಅದು ಸಾಧ್ಯವೂ ಇಲ್ಲ. ಆದರೆ ಉಳಿದವರ ಸರಿ ತಪ್ಪುಗಳ ಪಂಚಾಯಿತಿ ನಡೆಸುವವರೇ ತಮ್ಮ ನಡುವಿನ ಭಿನ್ನ ನಿಲುವುಗಳನ್ನು ತಮ್ಮಲ್ಲಿಯೇ ಪರಿಹರಿಸಿಕೊಳ್ಳಲಾಗದ ಮಟ್ಟಿಗೆ ಪರಿಸ್ಥಿತಿ ವಿಕೋಪಕ್ಕೆ ಹೋಗಿರುವುದು ವಿಪರ್ಯಾಸ. ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಹಿಂದೆಂದೂ ಈ ರೀತಿ ಆಗಿರಲಿಲ್ಲ. ಹಾಗೆ ನೋಡಿದರೆ ಇಂತಹದೊಂದು ಪರಿಸ್ಥಿತಿ ಉದ್ಭವಿಸಬಹುದಾದ ಸೂಚನೆ ಇದ್ದದ್ದು ಸುಳ್ಳಲ್ಲ.

ದೇಶದ ವಿವಿಧ ನ್ಯಾಯಾಲಯಗಳಿಗೆ ನ್ಯಾಯಪ್ರಧಾನರನ್ನು ಅಖೈರು ಮಾಡುವ ಕೊಲೀಜಿಯಂನ ಶಿಫಾರಸುಗಳ ವಿರುದ್ಧ ನ್ಯಾಯಮೂರ್ತಿ ಚಲಮೇಶ್ವರ್ ಈ ಹಿಂದೆ ತಮ್ಮ ತೋಡಿಕೊಂಡಿದ್ದ ಇತಿಹಾಸ ಇದೆ. ಅದೇ ರೀತಿ ಸುಪ್ರೀಂ ಕೋರ್ಟಿನ ಪರಮಾಧಿಕಾರ ಪ್ರಶ್ನಿಸಿದ್ದೇ ಅಲ್ಲದೆ ನ್ಯಾಯಾಮೂರ್ತಿಗಳ ದಕ್ಷತೆ, ಕ್ಷಮತೆ ವಿರುದ್ಧ ಮಾತನಾಡಿ ಜೈಲು ವಾಸ ಅನುಭವಿಸಿದ ನ್ಯಾಯಮೂರ್ತಿ ಕರ್ಣನ್ ಅವರ ನಿದರ್ಶನವೂ ನಮ್ಮ ಮುಂದಿದೆ. ಇಷ್ಟಾದರೂ ದೇಶದ ಸರ್ವೋಚ್ಛ ನ್ಯಾಯಮೂರ್ತಿಯ ವಿರುದ್ಧ ಅವರ ಸಹವರ್ತಿಗಳೇ ಬಂಡಾಯವೆದ್ದು, ಪತ್ರಿಕಾಗೋಷ್ಠಿಯಲ್ಲಿ ತಮ್ಮ ಅತೃಪ್ತಿಯನ್ನು ಸಾರ್ವಜನಿಕವಾಗಿ ತೋಡಿಕೊಳ್ಳಬಹುದು ಎಂದು ಯಾರೂ ಎಣಿಸಿರಲಿಲ್ಲ.

ಸುಪ್ರೀಂ ಕೋರ್ಟಿನ ಮುಖ್ಯಸ್ಥರಾಗಿ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇಮಕಗೊಂಡಾಗಿನಿಂದಲೇ ಅವರ ಕಾರ್ಯ ಬಗ್ಗೆ ಅವರ ಓರಗೆಯವರಲ್ಲಿ ಒಂದು ರೀತಿ ಅಸಮಾಧಾನ ಮನೆ ಮಾಡಿತ್ತು. ಪ್ರಕರಣಗಳ ವಿಚಾರಣೆ ಸಂಬಂಧ ನ್ಯಾಯಪೀಠಗಳನ್ನು ರಚಿಸುವಾಗ ಮುಖ್ಯ ನ್ಯಾಯಮೂರ್ತಿಗಳ ವಿವೇಚನೆ ಇತರ ಹಿರಿಯ ನ್ಯಾಯಮೂರ್ತಿಗಳಿಗೆ ಪಥ್ಯವಾಗಿರಲಿಲ್ಲ. ಮುಖ್ಯ ನ್ಯಾಯಮೂರ್ತಿ ವಿರುದ್ಧ ಮಾತನಾಡಿರುವ ನಾಲ್ವರು ನ್ಯಾಯಮೂರ್ತಿಗಳ ಪೈಕಿ ಒಬ್ಬರಾಗಿರುವ ನ್ಯಾ. ಚಲಮೇಶ್ವರ ಪ್ರಕರಣವೊಂದರಲ್ಲಿ ರಚಿಸಿದ್ದ ನ್ಯಾಯಪೀಠವನ್ನು ನ್ಯಾ. ದೀಪಕ್ ಮಿಶ್ರಾ ಸಂಜೆ ಬೆಳಗಾಗುವುದರಲ್ಲಿ ಬದಲಾಯಿಸಿ ಅಹಂ ಬ್ರಹ್ಮ ಎಂಬಂತೆ ಮಾತನಾಡಿದ್ದು ಮತ್ತು ಹಿರಿಯ ನ್ಯಾಯವಾದಿಗಳನ್ನು ನಿಂದನಾತ್ಮಕವಾಗಿ ಟೀಕಿಸಿದ್ದು ಪರಿಸ್ಥಿತಿಯ ತಾರಕಕ್ಕೇರಲು ಕಾರಣವಾಗಿರಬಹುದು. ಏನೇ ಆಗಲಿ ನ್ಯಾಯ ವ್ಯವಸ್ಥೆಗೆ ಚ್ಯುತಿ ಬಾರದ ರೀತಿಯಲ್ಲಿ ಈ ಪ್ರಕರಣವನ್ನು ಇತ್ಯರ್ಥ ಮಾಡಿಕೊಳ್ಳಬೇಕಾದ ಗುರುತರ ಜವಾಬ್ದಾರಿ ತಮ್ಮ ಮೇಲೆಯೇ ಇದೆ ಎಂಬುದನ್ನು ನ್ಯಾಯಮೂರ್ತಿಗಳು ಮರೆಯಬಾರದು.

Leave a Reply

Your email address will not be published. Required fields are marked *

sixteen + eighteen =

Monday, 22.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಪಂಚಮಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾ ಭಾದ್ರ , ಯೋಗ-ಪರಿಘ, ಕರಣ-ಬಾಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
7.30-9.00 1.30-3.00 10.30-12.00

Read More

 

Monday, 22.01.2018

ಉತ್ತರಾಯಣ, ಶಿಶಿರಋತು, ಮಾಘ ಮಾಸ, ಶುಕ್ಲಪಕ್ಷ, ಪಂಚಮಿ, ಸೋಮವಾರ, ನಿತ್ಯ ನಕ್ಷತ್ರ-ಪೂರ್ವಾ ಭಾದ್ರ , ಯೋಗ-ಪರಿಘ, ಕರಣ-ಬಾಲವ.

ರಾಹುಕಾಲಗುಳಿಕಕಾಲಯಮಗಂಡಕಾಲ
7.30-9.00 1.30-3.00 10.30-12.00

Read More

Back To Top