ಅತ್ಯಂತ ಸ್ವಾಗತಾರ್ಹ ತೀರ್ಪು

Posted In : ಸಂಪಾದಕೀಯ-1

ಗುಣಪಡಿಸಲಾಗದ ಖಾಯಿಲೆಗಳಿಂದ ಬಳಲುತ್ತಿರುವವರಿಗೂ ಮರಣದ ಹಕ್ಕಿದೆ ಎಂದು ಸುಪ್ರೀಂ ಕೋರ್ಟು ಅಭಿಪ್ರಾಯಪಟ್ಟು, ಇಚ್ಛಾ ದಯಾಮರಣಕ್ಕೆ ಅಸ್ತು ಎಂದಿರುವುದು ಕತ್ತಲ ಬದುಕಿನಲ್ಲಿ ಬಳಲಿ ಬೆಂಡಾಗಿರುವವರು ಹಾಗೂ ಅವರ ಪರಿವಾರಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಈವರೆಗೆ ಭಾರತದಲ್ಲಿ ಇಂತಹ ಕ್ರಮಕ್ಕೆ ಕಾನೂನಿನ ಮಾನ್ಯತೆ ಇರಲಿಲ್ಲ. ಆದರೆ ಈಗ ಸುಪ್ರೀಂ ಕೋರ್ಟು ಇಚ್ಛಾ ದಯಾಮರಣದ ವಿಧಿ ವಿಧಾನಗಳ ಬಗ್ಗೆ ಮಾರ್ಗಸೂಚಿಯನ್ನು ರೂಪಿಸಿದ್ದು, ಕಾನೂನು ಬರುವವರೆಗೆ ಈ ಮಾರ್ಗಸೂಚಿಯನ್ನೇ ಅನುಸರಿಸುವಂತೆ ಹೇಳಿದೆ. ಇದರಿಂದಾಗಿ ಇತ್ತ ಬದುಕಲೂ ಆಗದೆ ಅತ್ತ ಕೊನೆಗೊಳಿಸಿಕೊಳ್ಳಲೂ ಸಾಧ್ಯವಾಗದೆ ಚಿತ್ರ ಹಿಂಸೆ ಅನುಭವಿಸುವವರಿಗೆ ಚಿರ ನೆಮ್ಮದಿ ದೊರಕಲಿದೆ. ಭಾರತದ ಇತಿಹಾಸದಲ್ಲಿ ಒಮ್ಮೆ ಮಾತ್ರ ದಯಾಮರಣಕ್ಕೆ ಅನುಮತಿ ನೀಡಲಾಗಿತ್ತು.

ದಶಕಗಳಿಂದ ಆಸ್ಪತ್ರೆಯಲ್ಲಿ ಜೀವಚ್ಛವದಂತೆ ಬದುಕಿದ್ದ ಅರುಣಾ ಶಾನಭಾಗ ಅವರಿಗೆ 2011ರಲ್ಲಿ ಕೋರ್ಟು ದಯಾಮರಣಕ್ಕೆ ಅನುಮತಿ ನೀಡಿತ್ತು. ತದನಂತರದಲ್ಲಿ ಈ ಕುರಿತು ಯಾವುದೇ ಸ್ಪಷ್ಟ ಕಾನೂನು ಇಲ್ಲದೇ ಒಂದು ರೀತಿಯ ಶೂನ್ಯ ಸೃಷ್ಟಿಯಾಗಿತ್ತು. ಸುಪ್ರೀಂ ಕೋರ್ಟಿನ ತೀರ್ಪು ಇಂತಹ ಪ್ರಕರಣಗಳಿಗೆ ಸ್ಪಷ್ಟತೆ ನೀಡಿದೆ. ಇಚ್ಛಾ ದಯಾಮರಣಕ್ಕೆ ಇದ್ದ ಅಡೆ ನಿವಾರಣೆಯಾಗಿರುವ ಹಿನ್ನೆಲೆಯಲ್ಲಿ ಭಾರತ ಈ ಕ್ರಮ ಅನುಸರಿಸುತ್ತಿರುವ ಬೆರಳೆಣಿಕೆಯ ದೇಶಗಳ ಸಾಲಿಗೆ ಸೇರಿದೆ. ತಮ್ಮ ಬದುಕಿನ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳಲಾಗದೆ ಗುಣವೂ ಆಗದ ಕಾಯಿಲೆಗಳಿಂದ ಸೊರಗಿಹೋಗಿರುವ ಹಲವು ಮಂದಿಗೆ ಈ ತೀರ್ಪು ತಮ್ಮ ಬದುಕನ್ನು ಗೌರವಯುತವಾಗಿ ಕೊನೆಗಾಣಿಸಿಕೊಳ್ಳಲು ಅವಕಾಶ ಕಲ್ಪಿಸಲಿದೆ. ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಐವರು ಜಡ್‌ಜ್ಗಳಿದ್ದ ಸಂವಿಧಾನ ಪೀಠವು ಈ ತೀರ್ಪು ನೀಡುವ ಸಂದರ್ಭದಲ್ಲಿ ಹೇಳಿರುವ ಮಾತುಗಳು ಮನನೀಯ. ಬದುಕು ಬಣ್ಣ ಕಳೆದುಕೊಂಡಾಗ, ನಿಷ್ಕ್ರಿಯವಾದಾಗ, ಅದು ಕಳೆದುಕೊಳ್ಳುತ್ತೆ.

ಅಂತಹ ಜೀವಗಳಿಗೆ ಮರಣವನ್ನು ಗೌರವದಿಂದ ಎದಿರುಗೊಳ್ಳುವ ಅವಕಾಶವನ್ನು ನಿರಾಕರಿಸುವುದಾದರೂ ಏಕೆ ಎಂದು ಕೋರ್ಟು ಅಭಿಪ್ರಾಯಪಟ್ಟಿದೆ. ಇದೇ ವೇಳೆ ಈ ಅವಕಾಶದ ದುರ್ಬಳಕೆಗೆ ಆಸ್ಪದ ನೀಡದಿರಲು ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನೂ ಕೋರ್ಟು ಸೂಚಿಸಿದೆ. ಕೋರ್ಟಿನ ಮಾರ್ಗಸೂಚಿಯ ಮೇಲೆ ಇಚ್ಛಾ ದಯಾಮರಣಕ್ಕೆ ಕಾನೂನಿನ ಚೌಕಟ್ಟು ರೂಪಿಸಬೇಕಾದ ಗುರುತರ ಜವಾಬ್ದಾರಿ ಈಗ ಸರಕಾರದ ಹೆಗಲಿಗಿದೆ.

Leave a Reply

Your email address will not be published. Required fields are marked *

2 × four =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top