About Us Advertise with us Be a Reporter E-Paper

ಅಂಕಣಗಳು

ಸಹನೆ, ಮಾನವೀಯತೆ, ಒಗ್ಗಟ್ಟಿಗಿರುವ ಶಕ್ತಿಯೇ ಬೇರೆ

ಕೊಡಗು ಮತ್ತು ಕೇರಳದಲ್ಲಿನ ವರುಣನ ರುದ್ರನರ್ತನ ಅಕ್ಷರಶಃ ಜಲಪ್ರಳಯವನ್ನೆ ಸೃಷ್ಠಿಸಿದೆ. ರಾಷ್ಟ್ರಪತಿ, ಪ್ರಧಾನಮಂತ್ರಿಗಳು ಸೇರಿದಂತೆ ಪ್ರತಿಯೊಬ್ಬರೂ ಪರಿಸ್ಥಿತಿಯನ್ನವಲೋಕಿಸಿ ಕಂಬನಿ ಮಿಡಿದಿದ್ದಾರೆ. ಜಗತ್ತಿನ ಹಲವು ರಾಷ್ಟ್ರಗಳು ಸೇರಿದಂತೆ ಬಹಳಷ್ಟು ನಾಗರೀಕರು ನೆರವಿನ ಹಸ್ತವನ್ನು ಚಾಚಿದ್ದಾರೆ. ಕೆಲವೆಡೆ ರಾಜಕೀಯ ಲೇಪನದಿಂದಾಗಿ ಆರೋಪ, ಪ್ರತ್ಯಾರೋಪಗಳು ತೆರೆದುಕೊಳ್ಳುತ್ತಿವೆ. ಇವೆಲ್ಲವನ್ನೂ ಮೀರಿ ನಿಸರ್ಗ ತಾನು ಸೃಷ್ಠಿಸುವ ಅವಾಂತರಗಳ ಮೂಲಕ ಮಾನವ ಕುಲಕ್ಕೆ ನೀಡುತ್ತಿರುವ ಸಂದೇಶವಾದರೂ ಏನು? ಅಥವಾ ಮುನಿಸು ಮತ್ತು ಗುದ್ದಾಟಗಳ, ಹತ್ಯೆ ಮತ್ತು ಹತಾಶೆಗಳ ನಡುವಿನಲ್ಲಿ ಮುಳುಗಿರುವ ಮಾನವನಿಗೆ, ಸಹನೆ ಮಾನವೀಯತೆ ಮತ್ತು ಒಗ್ಗಟ್ಟಿನೊಂದಿಗೆ ಬದುಕುವ ಸಾರುತ್ತಿರುವ ಸೂಚನೆ ಇದಾಗಿದೆಯೆ?

ನಿಸರ್ಗ ಎಲ್ಲರಿಗೂ ಬದುಕುವ ಅವಕಾಶವನ್ನು ಕಲ್ಪಿಸಿದೆ. ಪರಿಸರವು ಜೀವಿಗಳ ಆಸೆಗಳನ್ನು ಪೂರೈಸುತ್ತದೆ. ಆದರೆ ದುರಾಸೆಗಳನ್ನಲ್ಲ! ನಾಗರೀಕತೆಯ ಹೆಸರಿನಲ್ಲಿ ಮನುಷ್ಯ ನಿಸರ್ಗದ ಮೇಲೆ ಇನ್ನಿಲ್ಲದಂತೆ ಆಕ್ರಮಣವೆಸಗಿದ್ದಾನೆ. ಸಮುದ್ರದ ಆಳ, ಭೂಮಿಯ ಗರ್ಭ, ವೈಚಿತ್ರಮಯ ಸಸ್ಯಸಂಕುಲ ಹಾಗೂ ಪರಿಸರ ಪೂರಕ ಜೀವವೈವಿದ್ಯತೆಯ ಮೇಲೆ ಆಧುನಿಕತೆಯ ಹೆಸರಿನಲ್ಲಿ ಐಷಾರಾಮಿ ಅಹಂಕಾರದಿಂದ ನಡೆಸಲಾಗಿರುವ ಆಕ್ರಮಣ ಸರಿಪಡಿಸಲಿಕ್ಕೆ ಸಾಧ್ಯವಾಗಲಾರದಷ್ಟಾಗಿದೆ. ತಾಂತ್ರಿಕತೆ, ವೈಜ್ಞಾನಿಕ ಆವಿಷ್ಕಾರಗಳು ತೆರೆದುಕೊಂಡಂತೆ ಮನುಷ್ಯನ ಆಲೋಚನೆಗಳು ಸಂಕೀರ್ಣಗೊಂಡು ವೈಷಾಲ್ಯತೆಗೆ ವಿರುದ್ಧವಾದ ಸೀಮಿತಗೊಳಿಸಿಕೊಳ್ಳುತ್ತಿದ್ದಾನೆ.

ಇತ್ತೀಚೆಗೆ ಅಲ್ಲಲ್ಲಿ ನೈಸರ್ಗಿಕ ವಿಕೋಪಗಳು ಹೆಚ್ಚೆಚ್ಚು ವರದಿಯಾಗುತ್ತಲಿವೆ. ಕೆಲವರ್ಷಗಳ ಹಿಂದೆ ಗುಜರಾತ್‌ನಲ್ಲಿ ಸಂಭವಿಸಿದ ಭೂಕಂಪ ಅದೇಷ್ಟೋ ಕುಟುಂಬಗಳನ್ನು ನೆಲಸಮಗೊಳಿಸಿತ್ತು. ಇಂಡೋನೆಷ್ಯಾ ಮತ್ತು ಜಪಾನ್‌ನಲ್ಲಿ ಅಪ್ಪಳಿಸಿದ ಸುನಾಮಿ ಅಲೆ ಬೃಹತ್ತಾದ ನಗರಗಳನ್ನು ತೊಳೆದುಬಿಟ್ಟಿತ್ತು. ಕೆಲವರ್ಷಗಳ ಹಿಂದೆ ಮುಂಬೈ ಮತ್ತು ಚೆನೈ ನಗರಗಳು ಜಲಾವೃತಗೊಂಡಿದ್ದವು. 1993 ರಲ್ಲಿ ಮಲೆನಾಡಿನ ಬಹುಬಾಗ ಅತಿವೃಷ್ಠಿಗೊಳಗಾಗಿದ್ದವು. 2005 ರಲ್ಲಿ ಉತ್ತರಕರ್ನಾಟಕ ಅಕ್ಷರಶಃ ಸಮುದ್ರದಂತಾಗಿತ್ತು. ಈಗ ಕೇರಳ ರಾಜ್ಯ ಮತ್ತು ಕರ್ನಾಟಕದ ಕೊಡಗು ಜಿಲ್ಲೆ ನೀರಿನಲ್ಲಿ ಶ್ರೀಮಂತರು, ಬಡವರೆನ್ನದೆ ಎಲ್ಲರೂ ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ಮಾವೀಯತೆಯ ಸಹಾಯದ ಮಹಾಪೂರ ಹರಿದು ಬರುತ್ತಿದ್ದರೂ ನೆಲೆ ಕಳೆದುಕೊಂಡು ನಿರ್ಗತಿಕರಾದವರಿಗೆ ಸಂತೃಪ್ತಿಪಡಿಸಲು ಸಾಧ್ಯವಾಗುತ್ತಿಲ್ಲ. ಇಲ್ಲಿಯವರೆಗೆ ಏಳು ಲಕ್ಷಕ್ಕಿಂತ ಹೆಚ್ಚು ಜನರನ್ನು ಸ್ಥಳಾಂತರಗೊಳಿಸಲಾಗಿದೆ. ಅವರಿಗಾಗಿ ಬಹಳಷ್ಟು ಸಾಂತ್ವನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

2005 ರಲ್ಲಿ ಪ್ರಾಯೋಗಿಕ ತರಬೇತಿಗಾಗಿ ಪ್ರೋಬೆಷನರಿ ಸಬ್ ಇನ್‌ಸ್ಪೆಕ್ಟರ್ ಆಗಿ ಕುಡಚಿ ಪೊಲೀಸ್ ಠಾಣೆಗೆ ನೇಮಕವಾಗಿದ್ದೆನು. ಆ ವರ್ಷದಲ್ಲಿ ಕೃಷ್ಣಾನದಿ ಪ್ರವಾಹದಿಂದಾಗಿ ನನ್ನ ಪೊಲೀಸ್ ಠಾಣಾ ವ್ಯಾಪ್ತಿಯ ಹಲವಾರು ಹಳ್ಳಿಗಳು ಜಲಾವೃತವಾಗಿದ್ದವು. ಶಾಲೆಗಳಲ್ಲಿ, ಗ್ರಾಮ ಪಂಚಾಯತ್ ಕಟ್ಟಡಗಳಲ್ಲಿ ಗಂಜಿ ಕೇಂದ್ರಗಳನ್ನು ಪ್ರಾರಂಭಿಸಿ ನಿರಾಶ್ರಿತರಿಗೆ ಅವಕಾಶವನ್ನು ಕಲ್ಪಿಸಲಾಗಿತ್ತು. ನಿರಂತರವಾಗಿ 8-10 ದಿನಗಳವರೆಗೆ ನೀರು ನಿಂತಿದ್ದರ ಫಲವಾಗಿ ಬಹಳಷ್ಟು ಗ್ರಾಮಗಳು ರಸ್ತೆ ಸಂಪರ್ಕವನ್ನು ಕಡಿದುಕೊಂಡಿದ್ದವು. ಒಂದು ಗ್ರಾಮದಿಂದ ಇನ್ನೊಂದು ಗ್ರಾಮದವರೆಗೆ ಸಂಪರ್ಕ ಕಲ್ಪಿಸಿದ್ದ ಸುಮಾರು ಏಳೆಂಟು ಕಿ.ಮೀ ಉದ್ದದ ರಸ್ತೆಯ ಮೇಲೆ ಹತ್ತಿಪ್ಪತ್ತು ಅಡಿಗಳಷ್ಟು ನೀರು ನಿಂತು ಯಾವ ರಸ್ತೆಗಳ ಮೇಲೆ ಬಸ್ಸು ಲಾರಿಗಳು ಸಂಚರಿಸುತ್ತಿದ್ದವೊ, ಅದೇ ರಸ್ತೆಗಳ ಮೇಲೆ ನಿಂತ ಹಿನ್ನೀರಿನ ತೆರೆಯ ದೋಣಿಯ ಮೂಲಕ ಸಂಚರಿಸಿ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದೆನು. ಕೇವಲ ಮನುಷ್ಯರಷ್ಟೆ ಪ್ರವಾಹದಿಂದ ತೊಂದರೆಗೀಡಾಗಿರಲಿಲ್ಲ. ಇರುವೆ, ಕಪ್ಪೆ, ಇಲಿ, ಹಾವು, ನಾಯಿ, ದನಕರುಗಳು ಪ್ರವಾಹಕ್ಕೆ ತುತ್ತಾಗಿದ್ದವು. ದೋಣಿಗಳ ಮೂಲಕ ಜನರೊಂದಿಗೆ ಜಾನುವಾರುಗಳನ್ನೂ ಸ್ಥಳಾಂತರಿಸಲಾಗುತ್ತಿತ್ತು. ಹಾವುಗಳಿಗೆ ಬೇರೆಯಲ್ಲಿಯೂ ಬದುಕಲು ಸ್ಥಳಾವಕಾಶವಿಲ್ಲದಿದ್ದುರಿಂದ ಮರಗಳ ತುದಿಗಳನ್ನೇರಿ ಕುಳಿತಿುತ್ತಿದ್ದವು. ಇರುವೆಗಳೂ ಸಹ ಮರದ ಎತ್ತರದ ಕೊಂಬೆಗಳಲ್ಲಿ ಆಶ್ರಯವನ್ನರಸಿಕೊಂಡಿದ್ದವು. ಆಹಾರಕ್ಕಾಗಿ ಇರುವೆಗಳು ಅದೇ ಕೊಂಬೆಯ ಭಾಗದಲ್ಲಿದ್ದ ಹಾವು ಮತ್ತು ಇತರ ಜೀವಿಗಳ ರಕ್ತವನ್ನು ಸಹ ಬಚಾವಾಗಲು ಬೇರೆ ಸ್ಥಳದ ಅವಕಾಶವಿಲ್ಲದಿದ್ದರಿಂದ ಲಭ್ಯವಿದ್ದ ಅದೇ ಸ್ಥಳದಲ್ಲಿ ಸಂಘರ್ಷದೊಂದಿಗೆ ಸಮಯವನ್ನು ದೂಡುತ್ತಿದ್ದವು. ಜನ, ಜಾನುವಾರು, ಸಲಕರಣೆಗಳನ್ನೊಳಗೊಂಡ ತೆಪ್ಪ ಅಥವಾ ದೋಣಿಗಳು ಕೊಂಬೆಗಳ ಅಡಿಭಾಗದಿಂದ ತೆರಳುತ್ತಿದ್ದಂತೆ ತಪ್ಪಿಸಿಕೊಳ್ಳಲು ಅವಕಾಶ ಸಿಗಬಹುದೆನೊ ಎಂಬಂತೆ ಹಾವುಗಳು ದೋಣಿಗಳಿಗೆ ಜಿಗಿದು ಬಿಡುತ್ತಿದ್ದವು. ಗಾಬರಿಗೊಂಡ ಜನ ಅತ್ತಿತ್ತ ಅಲುಗಾಡುತ್ತಿರುವಾಗ ದೋಣಿ ಮಗುಚದಂತೆ ಎಚ್ಚರ ವಹಿಸಿ ದಡ ಸೇರಿಸುವ ಜವಾಬ್ದಾರಿ ಅಂಬಿಗನಿಗೆ ಸವಾಲವನ್ನೊಡ್ಡುತ್ತಿತ್ತು. ಕೆಲಸ್ಥಳಗಳಲ್ಲಿ ದೋಣಿಯನ್ನು ರಸ್ತೆ ಪಕ್ಕದ ವಿದ್ಯುತ್ ಕಂಬಗಳಿಗೆ ಜೋಡಿಸಲಾಗಿದ್ದ ತಂತಿಗಳ ಹಾಯಿಸಿದ ಉದಾಹರಣೆಗಳೂ ಇದೆಯೆಂದರೆ ಎಷ್ಟು ಪ್ರಮಾಣದ ನೀರು ಆವರಿಸಿತ್ತೆಂದು ಊಹಿಸಬಹುದು.

ಜಿಲ್ಲಾಡಳಿತದಿಂದ ಸ್ಥಾಪಿಸಲಾದ ಗಂಜಿ ಕೇಂದ್ರಗಳಲ್ಲಿ ಬಡವರು ಶ್ರೀಮಂತರೆನ್ನದೆ ಎಲ್ಲರನ್ನೂ ದನದ ದೊಡ್ಡಿಯಲ್ಲಿ ಜಾನುವಾರುಗಳನ್ನು ತುಂಬಿದಂತೆ ಭಾಸವಾಗುತ್ತಿತ್ತು. ಕೆಲವರು ಸಂಬಂಧಿಕರು ಮತ್ತು ಸ್ನೇಹಿತರ ಮನೆಗಳಲ್ಲಿ ಆಶ್ರಯವನ್ನು ಪಡೆದುೊಂಡಿದ್ದರೆ ಬಹಳಷ್ಟು ಜನ ಬೇರೆ ದಾರಿಯಿಲ್ಲದೆ ಸಾಂತ್ವನ ಕೇಂದ್ರಗಳಲ್ಲಿಯೆ ಆಸರೆ ಪಡೆದಿದ್ದರು. ರಾಜಕಾರಣಿಗಳು ಇಂತಹ ಸಂದರ್ಭವನ್ನು ತಮ್ಮ ಪ್ರಚಾರಕ್ಕಾಗಿ ಬಳಸಿಕೊಳ್ಳುವುದರಿಂದ ಹಿಂದೆ ಬೀದ್ದರಲಿಲ್ಲ. ಸಚಿವರು, ಶಾಸಕರು ಗಂಜಿ ಕೇಂದ್ರಕ್ಕೆ ಭೇಟಿ ನೀಡಿ ಹೇಳುವ ಕಾರ್ಯಕ್ರಮ ಆಯೋಜನೆಗೊಂಡಿದ್ದರೆ ನಿರಾಶ್ರಿತರಿಗೆ ಅದಕ್ಕಿಂತ ಕಿರಿಕಿರಿಯನ್ನುಂಟು ಮಾಡುವ ಸನ್ನಿವೇಶ ಮತ್ತೊಂದಿರುತ್ತಿರಲಿಲ್ಲ. ಚಿಕ್ಕಮಕ್ಕಳು ಹಸಿವಿನಿಂದ ಅಳುತ್ತಿದ್ದರೂ ಸಹ ರಾಜಕಾರಣಿಗಳೂ ಬಂದು ಫೋಟೊ ಕ್ಲಿಕ್ಕಿಸಿಕೊಳ್ಳುವವರೆಗೂ ಗಂಜಿ ಕೇಂದ್ರದಲ್ಲಿ ತಯಾರಿಸಲಾದ ಆಹಾರವನ್ನು ವಿತರಿಸಲಾಗುತ್ತಿರಲಿಲ್ಲ! ಇಂತಹ ದಾರುಣ ದೃಶ್ಯಗಳು ಇಂದಿಗೂ ನನ್ನ ಕಣ್ಣಿಗೆ ಕಟ್ಟಿದಂತಿವೆ. ಹಾಗಾದರೆ ಕೊಡಗು ಮತ್ತು ಕೇರಳದ ಜನತೆ ಇನ್ನಾವ ಪರಿಸ್ಥಿತಿಯನ್ನು ಅನುಭವಿಸುತ್ತಿರಬಹುದೆಂದು ಊಹಿಸಬಹುದಾಗಿದೆ!

ಆಗಾಗ ಸಂಭವಿಸುವ ಪ್ರಕೃತಿ ವಿಕೋಪಗಳಿಗೆ ಬಲಿಯಾಗದೆ ಸಂಕಷ್ಟದಿಂದ ಪಾರಾಗುವ ಯಾವ ಮಾರ್ಗಗಳೂ ಇರುವುದಿಲ್ಲ. ಆದರೆ ಇಂದಿಗೂ ಎಚ್ಚೆತ್ತುಕೊಳ್ಳುತ್ತಿಲ್ಲ. ನಮಗಿಂತ ಶತಮಾಗಳಷ್ಟು ಹಿಂದೆಯೆ ಅಂದಿನವರು ರಾಜಕಾಲುವೆ, ಪ್ರವಾಹ ಕಾಲುವೆಗಳನ್ನು ನಿರ್ಮಿಸಿಕೊಂಡಿದ್ದರು. ಕೆರೆ, ತೂಬು, ಗೋಮಾಳ, ದೇವರ ಕಾಡುಗಳನ್ನು ರಕ್ಷಿಸಿಕೊಂಡಿದ್ದರು. ಅವರು ನಿರಕ್ಷರಿಗಳಾಗಿದ್ದರೂ ಸಹ ಒತ್ತುವರಿಯನ್ನು ಸಹಿಸುತ್ತಿರಲಿಲ್ಲ. ಆದರೆ ಇಂದು ತಂತ್ರಜ್ಞಾನ ಹಾಗೂ ವಿಪುಲವಾದ ಮಾಹಿತಿಗಳು ಲಭ್ಯವಾಗುತ್ತಿದ್ದರೂ ಸಹ ರಾಜಕಾಲುವೆಗಳನ್ನು, ಪ್ರವಾಹ ಕಾಲುವೆಗಳನ್ನು ಮುಚ್ಚುತ್ತಲೆ ಸಾಗುತ್ತಿದ್ದೇವೆ. ಆಧುನಿಕ ಹೆಸರಿನಲ್ಲಿ ಪರಿಸರವನ್ನು ನಾಶಗೊಳಿಸುತ್ತಲೆ ಇದ್ದೇವೆ. ಅಪರೂಪಕ್ಕೊಮ್ಮೆ ಇಂತಹ ಅನಾಹುತಗಳು ಮಾಧ್ಯಮಗಳಲ್ಲಿ ಬಿತ್ತರಗೊಂಡಾಗ ಸುರಕ್ಷಿತ ಪಟ್ಟಣಗಳಲಿದ್ದವರು ಸಂತ್ರಸ್ತರ ನೆರವಿಗಾಗಿ ಬಟ್ಟೆ, ಆಹಾರ ವಸ್ತುಗಳನ್ನು, ದಾನವಾಗಿ ನೀಡುತ್ತಿದ್ದಾರೆ. ಬಹಳಷ್ಟು ಜನರು ದೇಣಗಿಯನ್ನು ಸಂಗ್ರಹಿಸಿ ಸಾಮಗ್ರಗಳನ್ನು ಹೊಂದಿಸಿ, ಸಂತ್ರಸ್ತರಿಗೆ ರವಾನಿಸುತ್ತಿದ್ದಾರೆ. ಇವೆಲ್ಲವನ್ನೂ ಪ್ರಶಂಸಿಸಲೇಬೇಕಾಗಿದೆ. ಆದರೆ ಈಗ ಹುಟ್ಟಿಕೊಳ್ಳುವ ಸಾಂತ್ವನದ ಭಾವನೆ ತಾತ್ಕಾಲಿಕವಾಗಬಾರದಷ್ಟೆ. ಅಪಾಯ ಸಂಭವಿಸಿದಾಗ ನಾಲ್ಕಾರು ದಿನಗಳ ಮಟ್ಟಿಗೆ ಸಹಾಯ ಹಸ್ತವನ್ನು ಚಾಚುವಷ್ಟೆ ಆದ್ಯತೆಯನ್ನು ಮತ್ತೆ ಮುಂದಿನ ಹತ್ತಿಪ್ಪತ್ತು ವರ್ಷಗಳಲ್ಲಿ ಸಂಭವಿಸಬಹುದಾದ ಅಪಾಯಕ್ಕೆ ನೀಡಬೇಕಾಗಿದೆ. ಅದಕ್ಕಾಗಿ ಇಂದಿನಿಂದಲೆ ಸಿದ್ಧತೆ ಕೈಗೊಳ್ಳುವ ಮಾನಸಿಕ ಸ್ಥಿತಿಯನ್ನು ಜನಸಾಮಾನ್ಯರು, ಆಡಳಿತವರ್ಗ ಹಾಗೂ ರಾಜಕಾರಣಿಗಳು ಹೊಂದಬೇಕಾಗಿದೆ.

ಈಗ ಸಂಭವಿಸಿದ ಮತ್ತು ಅತೀವೃಷ್ಠಿಯಿಂದಾಗಿ ನಾವುಗಳು ಕೆಲವೊಂದು ತೀರ್ಮಾನಗಳನ್ನು ಕೈಗೊಳ್ಳಲೇಬೇಕಾಗಿದೆ. ಜನಸಂಖ್ಯಾನಿಯಂತ್ರಣ ಎಲ್ಲಕ್ಕಿಂತಂಲೂ ಮೊದಲ ಆಧ್ಯತೆಯಾಗಬೇಕಾಗಿದೆ. ನಾಗರೀಕತೆಯ ಪುನರುತ್ಥಾನಕ್ಕಾಗಿ ಈಗ ಬಳಸಲಾಗುತ್ತಿರುವ ಭೂಪ್ರದೇಶವನ್ನು ಮತ್ತಷ್ಟು ವಿಸ್ತಾರಗೊಳಿಸದಿರಲು ತೀರ್ಮಾನಿಸಬೇಕಾಗಿದೆ. ಪ್ರತಿಯೊಂದು ನಗರ, ಪಟ್ಟಣ ಮತ್ತು ಗ್ರಾಮಗಳಿಗೆ ಪ್ರಕೃತಿ ವಿಕೋಪ ಪರಿಹಾರೋಪಾಯಗಳನ್ನು ಹಂತ ಹಂತವಾಗಿ ಕೈಗೊಳ್ಳುವ ಯೋಜನೆಗಳನ್ನು ರೂಪಿಸಬೇಕಾಗಿದೆ. ಒತ್ತುವರಿಯಾದ ರಾಜಕಾಲುವೆ ಮತ್ತು ಪ್ರವಾಹಕಾಲುವೆಗಳನ್ನು ಪುನರ್ ಸ್ಥಾಪಿಸಬೇಕಾಗಿದೆ. ಆಧುನಿಕ ಭರಾಟೆಯಲ್ಲಿ ನೂತನ ನಗರಗಳು ಸೃಷ್ಠಿಯಾಗುತ್ತಿವೆಯೆಂದರೆ ಮುಂದಿನ ತಲೆಮಾರುಗಳನ್ನು ನಮಗರಿವಿಲ್ಲದೆ ಅಪಾಯದಂಚಿಗೆ ತಳ್ಳುತ್ತಿದ್ದೆವೆಯೆಂದು ಅರ್ಥೈಸಿಕೊಳ್ಳಬೇಕಾಗಿದೆ. ಕೇಂದ್ರ ರಾಜ್ಯ ಸರಕಾರಗಳು ಮಂಡಿಸುವ ಆಯ್ಯವ್ಯಯದಲ್ಲಿ ಪ್ರಕೃತಿ ವಿಕೋಪಗಳನ್ನು ನಿಭಾಯಿಸುವ ಅವಕಾಶಗಳನ್ನು ಪ್ರತಿವರ್ಷವೂ ಕೈಗೊಳ್ಳಬೇಕಾಗಿದೆ. ಇಂತಹ ಅಪಾಯಗಳು ಸಂಭವಿಸಿದಾಗ ಅಸ್ತಿತ್ವದಲ್ಲಿರುವ ಸರಕಾರವನ್ನು ದೂಷಿಸುವುದಕ್ಕಿಂತ ಎಲ್ಲರೂ ಒಂದಾಗಿ ನಿಭಾಯಿಸುವುದಷ್ಟೆ ನಮೆಲ್ಲರ ಜವಾಬ್ದಾರಿಯಾಗಿದೆ. ಆದರೆ ಮುಂದಿನ ತಲೆಮಾರುಗಳಿಗಾಗಿ ಇಂದು ಯೋಜನೆಯನ್ನು ರೂಪಿಸುವ ಬದ್ಧತೆ ಯಾವ ಸರಕಾರಗಳಿಗೂ ಇದ್ದಂತಿಲ್ಲ! ಒಂದು ವೇಳೆ ಅಂತಹ ಅಭಿಪ್ರಾಯಗಳು ವ್ಯಕ್ತವಾದಲ್ಲಿ ಅದನ್ನೊಪ್ಪಿಕೊಳ್ಳುವ ಮನಸ್ಥಿತಿಯೂ ನಮ್ಮದಾಗಿಲ್ಲ! ಹಾಗಾಗಿಯೆ ದುರಾಲೋಚನೆಯಿಲ್ಲದೆ ದುರಂತಕ್ಕಿಡಾದಾಗ ಒಬ್ಬರನ್ನೊಬ್ಬರು ಕೆಸರೆರಚಾಟದಲ್ಲಿ ತೊಡಗುವುದಕ್ಕೆ ಒಗ್ಗಿಕೊಂಡಾತಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close