About Us Advertise with us Be a Reporter E-Paper

ಅಂಕಣಗಳು

ಬೃಹತ್ ಅಭಿವೃದ್ಧಿ ಯೋಜನೆಗಳಿಂದ ಪರಿಸರ ಹಾನಿ

ಗಾಯತ್ರಿ ಜಮಖಂಡಿ, ಸಂಶೋಧಕರು

ಸ್ವಾತಂತ್ರೊ್ಯೀತ್ತರ ರಾಷ್ಟ್ರೀಯ ಅಭಿವೃದ್ಧಿ, ರಾಷ್ಟ್ರೀಯ ಹಿತ ಎಂಬ ಹೆಸರಲ್ಲಿ ದೇಶದಲ್ಲಿ ಎಲ್ಲಿ ಪ್ರಕೃತಿ ದಟ್ಟವಾಗಿದೆಯೋ, ಸಂಪದ್ಭರಿತವಾಗಿದೆಯೋ, ಸೌಂದರ‌್ಯದ ಪೋಷಾಕುಗಳಿವೆಯೋ, ಅಲ್ಲೆಲ್ಲಾ ಗಣಿಗಾರಿಕೆ, ಕೈಗಾರಿಕೆ, ಅಣೆಕಟ್ಟುಗಳು, ಅರಣ್ಯ ಯೋಜನೆ, ಅಣುಸ್ಥಾವರ, ಥರ್ಮಲ್ ವಿದ್ಯುತ್ ಸ್ಥಾವರ, ರಾಷ್ಟೀಯ ಹೆದ್ದಾರಿ ಮುಂತಾದ ಸಾಕಷ್ಟು ಬೃಹತ್ ಯೋಜನೆಗಳನ್ನು ನಿರ್ಮಾಣ ಮಾಲಾಗಿದೆ. ಈ ಯೋಜನೆಗಳಿಂದಾಗಿ ಲಕ್ಷಾಂತರ ಹೆಕ್ಟೇರ್ ಅರಣ್ಯ ನಾಶವಾಗಿದೆ. ಮಿಲಿಯನ್‌ಗಟ್ಟಲೆ ಹೆಕ್ಟೇರು ಭೂಮಿ ಸ್ವಾಧೀನವಾಗಿದೆ ಹಾಗೂ ಅಲ್ಲಿನ ಮೂಲ ನಿವಾಸಿಗಳ ಸ್ಥಳಾಂತರವಾಗಿದೆ. ಈ ಅಭಿವೃದ್ಧಿಯ ಹೆಸರಲ್ಲಿ ಜನರು ಹೇಗೆ ತತ್ತರಿಸಿ ಹೋದರೋ ಅದಕ್ಕಿಂತಲೂ ಮಿಗಿಲಾಗಿ ಈ ಪರಿಸರ ಇನ್ನೆಂದೂ ಇಲ್ಲದಂತೆ ನಲುಗಿ ಹೋಗಿದೆ. ಅಭಿವೃದ್ಧಿ ಮಾಡಬೇಕಾದ ಈ ಯೋಜನೆಗಳು ಪ್ರಕೃತಿಯನ್ನು ನುಂಗಿ, ಅಲ್ಲಿನ ಸಂಪತ್ತುಗಳನ್ನು ಅರಗಿಸಿಕೊಂಡು ಕೆಲವೇ ಕೆಲವು ಬಲಾಢ್ಯರ ಬದುಕನ್ನು ಕಂಗೊಳಿಸುತ್ತಿವೆ. ಪ್ರಕೃತಿ ಮಾತೆಯ ಸಂಪತ್ತನ್ನು ದೋಚಿ ಈ ಬಲಾಢ್ಯರು ಇನ್ನಷ್ಟು ಬಲಾಢ್ಯರಾಗಿದ್ದಾರೆ.

ವಿವಿಧ ಗಣಿಗಾರಿಕೆಗಳು ಬೆಟ್ಟಗುಡ್ಡಗಳ ಪರಿಸರವ್ಯೂಹಕ್ಕೆ ಶಾಶ್ವತವಾಗಿ ಹಾನಿಯುಂಟು ಮಾಡುತ್ತಿದೆ. ಇವು ಅಲ್ಲಿನ ಅರಣ್ಯ, ಗಾಳಿ, ನೀರು, ಆಹಾರಬೆಳೆ ಉತ್ಪಾದಿಸುವ ಭೂಮಿ ಡೈನಮೈಟ್ ಸಿಡಿಮದ್ದುಗಳನ್ನು ಸಿಡಿಸುವುದರಿಂದ ವನ್ಯಜೀವಿಗಳ ಬದುಕಿಗೆ ತೊಂದರೆಯುಂಟಾಗಿದೆ. ಮರಗಳ ನಾಶ ಮತ್ತು ಕಲ್ಲು ಸಿಡಿಸುವಿಕೆಯಿಂದ ಭೂಮಿ ಸಡಿಲಗೊಂಡು ಬೆಟ್ಟಗಳು ಕುಸಿಯುತ್ತಿವೆ. ಗಣಿಯ ಶ್ರಮಗಾರರು ಆಕಸ್ಮಿಕ ಅವಘಡ ಮತ್ತು ಬೇನೆಗಳಿಗೆ ಗುರಿಯಾಗುವ ಅಪಾಯಕಾರಿ ಪರಿಸರದಲ್ಲಿ ಬಾಳುವಂತಾಗಿದೆ. ಆದಿವಾಸಿಗಳು, ರೈತರು, ಹೆಂಗಸರು, ಮಕ್ಕಳು ವಾಸನೆ ಮತ್ತು ಧೂಳಿನ ವಾತಾವರಣದಲ್ಲಿ ಶ್ರಮಿಸಬೇಕಾಗಿದೆ. ಗಣಿಗಾರಿಕೆಯಿಂದ ಬರುವ ಸಿಲಿಕ ಮೊದಲಾದ ತ್ಯಾಜ್ಯ ವಸ್ತುಗಳಿಂದ ಅಂತರ್ಜಲ ಮಲಿನವಾಗಿದೆ. ಎಷ್ಟೋ ಜಲಮೂಲ ನಾಶವಾಗಿದೆ. ಸಿಲಿಕ ಧೂಳುಭರಿತ ಗಾಳಿಯನ್ನು ಜನರು ಸಿಲಿಕೊಸಿಸ್ ಎಂಬ ಮಾರಕ ರೋಗ ಉಂಟಾಗುತ್ತಿದೆ. ಸುತ್ತಮುತ್ತಲ ಮನೆಗಳಲ್ಲಿ ಬಿರುಕು, ಶಬ್ದ ಮಾಲಿನ್ಯದಿಂದ ಜನರ ನೆಮ್ಮದಿ ಹಾಳಾಗಿದೆ. ಒಂದು ಪ್ರದೇಶದಲ್ಲಿ ಗಣಿಗಾರಿಕೆ ಮುಗಿದ ಮೇಲೆ ಅಲ್ಲಿ ಹೂಳು, ಅನುಪಯುಕ್ತ ಅದಿರಿನ ರಾಶಿ, ಆಳವಾದ ಕಂದಕಗಳು, ಕೊಚ್ಚಿ ಹೋಗುತ್ತಿರುವ ಕಣಿವೆಗಳ ನೋಟ ಅಲ್ಲಿನ ವಾತಾವರಣವನ್ನು ಜರ್ಜರಿತಗೊಳಿಸಿದೆ.

ವಿವಿಧ ಜಲಾಶಯ ಹಾಗೂ ವಿದ್ಯುತ್ ಯೋಜನೆಗಳಿಂದಾಗಿ ಅಗಾಧ ಪ್ರಮಾಣದಲ್ಲಿ ಭೌಗೋಳಿಕ ಪತನವಾಗಿದೆ. ಅಪಾರ ಪ್ರಮಾಣದ ಅರಣ್ಯ ನೀರಿನ ಗರ್ಭದಲ್ಲಿ ಸೇರಿಕೊಂಡುಬಿಟ್ಟಿದೆ. ಜೈವಿಕ ವೈವಿಧ್ಯಗಳ ನಡೆದಿವೆ. ವನ್ಯಜೀವಿಗಳ ಆವಾಸಸ್ಥಾನ ನಲುಗಿ ಅವುಗಳ ಸಂತತಿ ಕ್ಷೀಣಿಸಿವೆ. ಅದೆಷ್ಟೋ ಆಶ್ರಯ ತಾಣಗಳು ಮುಳುಗಡೆಯಾಗಿವೆ. ನೈಸರ್ಗಿಕ ಕಾಡು, ಮಣ್ಣು, ಸುತ್ತಲ ಬೆಟ್ಟಗಳು ಬಸವಳಿದಿವೆ. ಮೂಲನಿವಾಸಿಗಳ ಅತಂತ್ರ ಸ್ಥಳಾಂತರವಾಗಿದೆ. ಸುತ್ತಮುತ್ತಲ ರೈತರ ಜಮೀನು ಯಾವುದೇ ಪರಿಹಾರವಿಲ್ಲದೇ ನಷ್ಟಕ್ಕೆ ಒಳಗಾಗುತ್ತಿದೆ. ಅಭಯಾರಣ್ಯಗಳು ಹಾಗೂ ರಾಷ್ಟ್ರೀಯ ಉದ್ಯಾನವನ ಯೋಜನೆಗಳಿಂದ ಮೂಲನಿವಾಸಿಗಳ ಬದುಕಿಗೆ ಕೊಡಲಿ ಪೆಟ್ಟು ಬಿದ್ದಂತಾಗಿದೆ. ಹೊರಗಡೆಗೆ ಇವು ಪ್ರಕೃತಿಮಾತೆಯ ಭಾರೀ ರಕ್ಷಣೆಯ ಫಲಕಗಳನ್ನು ಹೊತ್ತುಕೊಂಡಿದ್ದರೂ ನಿಜಾರ್ಥದಲ್ಲಿ ಇವು ಕೂಡಾ ಗಣಿಗಾರಿಕೆಗಳ, ರೆಸಾರ್ಟ್‌ಗಳ ಸಂಶೋಧನೆ, ಅಧ್ಯಯನ, ಪ್ರವಾಸ ಮತ್ತು ಸಫಾರಿಯ ಹೆಸರಲ್ಲಿ ಅಲ್ಲಿ ಪ್ರಕೃತಿಯನ್ನು ದೋಚುತ್ತಿದ್ದಾರೆ. ಅರಣ್ಯ ನಿರ್ಮಾಣ ಹೆಸರಿನಲ್ಲಿ ಜನರನ್ನು ಅಲ್ಲಿಂದ ಸ್ಥಳಾಂತರಗೊಳಿಸಿ ಎಲೆಯ ಮರೆಯಲ್ಲಿ ಸಂಪತ್ತಿನ ವ್ಯವಸ್ಥಿತ ಲೂಟಿಯಾಗುತ್ತಿದೆ. ಅರಣ್ಯ ನಿರ್ಮಾಣವಾಗುವ ಬದಲು ಅಲ್ಲಿ ಅರಣ್ಯ ನಿರ್ನಾಮ ಎಗ್ಗಿಲ್ಲದೆ ನಡೆಯುತ್ತಿದೆ. ಇದು ಕೂಡಾ ಬಲಾಢ್ಯರಿಂದ ಬಲಾಢ್ಯರಿಗೆ ಸಲ್ಲುವ ಕ್ರಿಯೆಯಾಗಿದೆಯಷ್ಟೆ.

ಅಣುಸ್ಥಾವರಗಳಿಂದ ಅಣುವಿಕಿರಣ ಉತ್ಸರಣ ನಡೆಯುತ್ತಿದೆ. ವಿಕಿಣಯುಕ್ತ ನೀರು ಮಣ್ಣಿನ ಚೈತನ್ಯವನ್ನು ನುಂಗಿ ಹಾಕುತ್ತಿದೆ. ವಿಕಿರಣದಿಂದ ಮನುಷ್ಯ, ಪ್ರಾಣಿ ಹಾಗೂ ಸಸ್ಯ ವಿನಾಶದ ಅಂಚಿನಲ್ಲಿವೆ. ಸುಮಾರು ಜನ ಶ್ವಾಸಕೋಶ ಕ್ಯಾನ್ಸರ್, ಲಿಂಪೋಮಾ ಕ್ಯಾನ್ಸರ್, ಕರುಳುಬೇನೆ, ಕ್ಷಾಮ, ಬಂಜೆತನ, ಗರ್ಭಪಾತ ಇವುಗಳಿಂದ ಬಳಲುತ್ತಿದ್ದಾರೆ. ಸ್ಥಾವರದ ಸುತ್ತಮುತ್ತಲ ಪ್ರದೇಶ ಸಾವಿನ ಅರಮನೆಯಾಗಿದೆ. ಬೆಳೆಗಳಲ್ಲಿ ವಿಕಿರಣ, ಜನರ ನಿತ್ಯಯಾತನೆ ತಪ್ಪಿದ್ದಲ್ಲ. ಅಲ್ಲಿನ ಜನರು ಯಾರದೋ ಮನೆ ಬೆಳಗಲು ಇನ್ಯಾರದೋ ಬದುಕು ಕತ್ತಲಾಗಿಸಿಕೊಂಡಂತಾಗಿದೆ. ಜನರಲ್ಲಿ ಅಶಾಂತಿ ತಲೆದೋರಿದೆ. ಕೊಂಕಣ ರೈಲ್ವೇ ಯೋಜನೆಯಿಂದ ವನ್ಯ ಜೀವಿಗಳ ಆವಾಸಸ್ಥಾನಗಳಿಗೆ, ಅವುಗಳ ಸಾಗುದಾರಿಗೆ ಸಮಸ್ಯೆ ಬಂದೊದಗಿದೆ. ನಿತ್ಯ ಶಬ್ದದಿಂದಾಗಿ ಅವುಗಳ ಬದುಕಿನ ತಲ್ಲಣಗೊಂಡಿದೆ. ಈ ಯೋಜನೆಯಿಂದ ಬುಡಕಟ್ಟುಗಳ ಬದುಕಿಗೂ ತೊಂದರೆಯಾಗಿದೆ. ಆಸ್ತಿ ನಷ್ಟವಾಗಿದೆ. ಸೀಬರ್ಡ್ ನೌಕಾನೆಲೆಯಿಂದಾಗಿ ಬೆಸ್ತರ, ಹಾಲಕ್ಕಿ ಒಕ್ಕಲಿಗರ ಬದುಕು ನೆಲೆ ಕಳೆದುಕೊಂಡು ಅಸ್ತವ್ಯಸ್ಥಗೊಂಡಿದೆ.

ದೇಶದ ಅಭಿವೃದ್ಧಿ ಹೆಸರಿನ ಈ ಎಲ್ಲಾ ಯೋಜನೆಗಳಿಂದಾಗಿ ಅಗಾಧವಾದ ಮರ, ಬೆಟ್ಟಗುಡ್ಡ ಧರೆಗುರುಳಿವೆ. ಸತತ ಅರಣ್ಯನಾಶದ ಪ್ರಹಾರಕ್ಕೆ ಭೂಮಿಯ ತಾಪಮಾನ ವಿಪರೀತವಾಗಿ ಏರುತ್ತಿದೆ. ಮಳೆಯ ಕೊರತೆ, ಅನಿರ್ದಿಷ್ಟ ಮಳೆ, ಬರಗಾಲ ಇಲ್ಲವೇ ಪ್ರವಾಹದಿಂದ ಮಣ್ಣು ನಾಶವಾಗಿ ಪರಿಸರಕ್ಕೆ ಹಾನಿ ಉಂಟಾಗುತ್ತಿದೆ. ನದಿ ನೀರಿನ ಕೊರತೆ ಅಂತರಾಳದಲ್ಲಿ ನೀರಿನ ಸೆಲೆಗಳೂ ಬತ್ತಿ ಬರಡಾಗತೊಡಗಿವೆ. ಮಣ್ಣಿನ ಸವಕಳಿ ಅತಿಯಾಗಿ, ಫಲವತ್ತತೆ ನಾಶವಾಗಿ ಬೆಳೆಯ ಇಳುವರಿ ಕಡಿಮೆಯಾಗಿದೆ. ಜನರು ಇರುವ ಭೂಮಿಯನ್ನು ಉಪಯೋಗಿಸಲಾರದ ಸ್ಥಿತಿಗೆ ತಲುಪಿದ್ದಾರೆ. ಕಾಡಿನೂರುಗಳು ಕಂಗಾಲಾಗಿವೆ. ಯೋಜನೆಯ ಫಲವಾಗಿ ನೂರಾರು ಬುಡಕಟ್ಟುಗಳು ನೆಲೆ ಕಳೆದುಕೊಂಡಿವೆ. ಕಾಡುಪ್ರಾಣಿಗಳ ಬದುಕಿನ ವಿನ್ಯಾಸವೇ ಕಲಕಿಹೋಗಿದೆ. ಇದು ನಿರಂತರವಾದ ದೂರಗಾಮಿ ಪರಿಣಾಮವನ್ನು ಉಂಟುಮಾಡುತ್ತಿದೆ. ನಿಸರ್ಗದ ಸೌಂದರ್ಯ, ಜನಾಂಗೀಯ ವಿಶೇಷತೆ ಮರೆಯಾಗಿದೆ. ದೊಡ್ಡ ಸಮುದಾಯದ ಅಭಿವೃದ್ಧಿಗಾಗಿ ತನ್ನನ್ನು ಅರ್ಪಿಸಿಕೊಳ್ಳುತ್ತಿರುವ ಸಣ್ಣ ಸಮುದಾಯಗಳ ಸ್ಥಿತಿಗತಿ ಆಸರೆ ಇಲ್ಲದ ಅನಾಥ ಸ್ಥಿತಿಯಾಗಿದೆ. ಅರಣ್ಯಗಳು ಇಂಗಾಲದ ಡೈ ಆಕ್ಸೈಡನ್ನು ಹೀರಿಕೊಳ್ಳುತ್ತಾ ಕಾರ್ಬನ್‌ಸಿಂಕ್‌ನಂತೆ ಕಾರ್ಯ ನಿರ್ವಹಿಸುತ್ತಿವೆ. ಆದರೆ ಇವುಗಳ ನಾಶದಿಂದ ವಾತಾವರಣ ಹೆಚ್ಚು ಹೆಚ್ಚು ಕಲುಷಿತವಾಗುತ್ತಿದೆ. ವಾತಾವರಣದಲ್ಲಿ ಆಮ್ಲಜನಕ ಪ್ರಮಾಣ ಕಡಿಮೆಯಾಗಿ ಅಸ್ತಮಾದಂತಹ ಉಸಿರಾಟ ತೊಂದರೆ ಕಾಡುತ್ತಿದೆ. ಕಾಡುಗಳು ನಾಶವಾಗಿ, ಭೂಮಿ ಬಿಸಿಯಾಗಿ ತತ್ತರಿಸಿದೆ. ಸಾವಿರಾರು ವರ್ಷಗಳಿಂದ ಹಿಮಾಲಯ ಪರ್ವತ ಪ್ರದೇಶದಲ್ಲಿ ಸಂಚಯವಾಗಿದ್ದ ಹಿಮಗಡ್ಡೆಗಳು ಕರಗಿ ನೀರಾಗುತ್ತಿವೆ.

ಒಟ್ಟಾರೆಯಾಗಿ ಮಾನವನ ಅತಿಯಾದ ಭೋಗದಾಸೆಗೆ, ತಾಂತ್ರಿಕತೆಯ ದುರಹಂಕಾರಕ್ಕೆ ಬಲಿಯಾದ ಪ್ರಕೃತಿಯ ಎದ್ದು ಘೋರವಾಗಿ ನರ್ತಿಸುವಂತಿದೆ. ಚೆಂದುಳ್ಳಿ ಚೆಲುವೆ ಪಶ್ಚಿಮ ಘಟ್ಟವಂತೂ ಇನ್ನಿಲ್ಲದಂತೆ ಅವಸಾನವಾಗುತ್ತಿದೆ. ಬಲಾಢ್ಯರ ಬೇರೆಬೇರೆ ಯೋಜನೆಗಳು ಅದರ ಮಡಿಲಲ್ಲಿ ರುದ್ರನರ್ತನವಾಡುತ್ತಿವೆ, ಉಸಿರು ಕಟ್ಟಿಸುತ್ತಿವೆ. ಪ್ರಕೃತಿ ತನ್ನ ಮೂಲ ಸೌಂದರ‌್ಯವನ್ನು, ಮೂಲ ಬದುಕನ್ನು, ತನ್ನ ವಾತಾವರಣವನ್ನು ಕಳೆದುಕೊಂಡು ಬೋಲಾಗಿ ನಿಂತಿದ್ದಾಳೆ. ಅದೆಷ್ಟೋ ಸಾಹಿತಿಗಳನ್ನು, ಕಾದಂಬರಿಗಳನ್ನು, ಹಾಡುಗಳನ್ನು, ಚಿತ್ರೀಕರಣಗಳನ್ನು ಸೃಷ್ಟಿಸಿದ, ಮೈನವಿರೇಳಿಸುವಂತಹ ಜೀವನವನ್ನು ಕೊಟ್ಟಂತಹ ಈ ಪ್ರಕೃತಿಮಾತೆ ಪುಸ್ತಕದ ಪುಟಗಳಲ್ಲಿ ಸೇರಿಕೊಳ್ಳುತ್ತಿದ್ದಾಳೆ. ಅವಸಾನದ ಹಾದಿಯನ್ನು ವೇಗವಾಗಿ ತುಳಿಯುತ್ತಿದ್ದಾಳೆ. ಅವಳು ತನ್ನ ಯಾವುದೇ ಸರಿಯಾದ ಸಮಯದಲ್ಲಿ ವ್ಯಕ್ತಡಿಸಲಾಗದ ಪರಿಸ್ಥಿತಿಗೆ ಬಂದೊದಗಿದ್ದಾಳೆ. ಕಾಲಕಾಲಕ್ಕೆ ಯಾವ ರೀತಿಯ ಹವಾಮಾನದ ಕೊಡುಗೆಗಳನ್ನು ವಿಶ್ವಕ್ಕೆ ಕೊಡಬೇಕೋ ಅದನ್ನು ಅವಳಿಗೆ ಕೊಡಲಾಗುತ್ತಿಲ್ಲ. ಪ್ರಕೃತಿ ತುಂಬಾ ಬೇಸರವಾಗಿದ್ದಾಳೆ. ಪ್ರಾಣಿಪಕ್ಷಿಗಳನ್ನು ಮೃಗಾಲಯದಲ್ಲಿಟ್ಟು ಈಗಿನ ಜನತೆಗೆ ಪರಿಚಯಿಸುವಂತೆ ಕಾಡನ್ನು ಕೂಡಾ ಈ ತರಹನೇ ಮಾಡಿ ಮುಂದಿನ ಜನಾಂಗಕ್ಕೆ ಪರಿಚಯಿಸುದರಲ್ಲಿ ಅತಿಶಯೋಕ್ತಿ ಇರಲಾರದು. ಖಂಡಿತವಾಗಿಯೂ ಆ ದಿನ ಬಂದೇ ಬರುತ್ತೆ. ಪ್ರಕೃತಿ ಸುರಿಸುವ ಈಗಿನ ಕಣ್ಣೀರು ಮುಂದಿನ ಮನುಕುಲದ ಕಣ್ಣೀರು ಖಂಡಿತ ಆಗುತ್ತೆ. ಪ್ರಕೃತಿಯ ಮೇಲಿನ ರುದ್ರನರ್ತನದಿಂದ ಮುಂದಿನ ಪೀಳಿಗೆಯ ರುದ್ರರೋದನವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ವಿಜ್ಞಾನವಾಗಲಿ, ತಂತ್ರಜ್ಞಾನವಾಗಲಿ ಅಭಿವೃದ್ಧಿಗೆ ಪೂರಕವೇ ಆಗಿದೆ. ಪರಿಸರ ಸಂರಕ್ಷಣೆಯು ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೂ ತಡೆಮಾಡುವುದು ಸಲ್ಲದು. ಒಂದಷ್ಟು ಪ್ರಮಾಣದ ಪರಿಸರದ ತ್ಯಾಗ, ಅರಣ್ಯಗಳ ನಾಶ, ಹಿತಮಿತ, ಅರ್ಥಪೂರ್ಣ ಸಂಪತ್ತಿನ ಬಳಕೆ ಅತೀ ಮುಖ್ಯ. ಯಾವ ಯೋಜನೆಗಳನ್ನಾಗಲೀ ಜಾರಿಗೊಳಿಸುವುದಕ್ಕೆ ಮೊದಲು ನಾನಾ ಹಂತಗಳಲ್ಲಿ ಸಾಧಕಬಾಧಕಗಳನ್ನು ನಿರ್ಣಯಿಸುವುದು ಉತ್ತಮ. ಮುಂದೆ ಬರಬಹುದಾದ ವಿಪತ್ತನ್ನು ಮೊದಲೇ ಊಹಿಸಿ ಲೆಕ್ಕಾಚಾರ ಹಾಕಿ ಎಚ್ಚರಿಕೆಯಿಂದ ನೀತಿನಿಯಮಗಳನ್ನು ಅನುಸರಿಸಬೇಕು. ಪರಿಸರಕ್ಕೆ ಪ್ರತಿಯಾಗಿ ಬೇರೆಡೆಗೆ ಪರಿಸರವನ್ನು ಬೆಳೆಸಿದರೆ, ಪ್ರಾಣಿ ಪಕ್ಷಿಗಳನ್ನು ರಕ್ಷಿಸಿದರೆ ಒಂದಿಷ್ಟು ಮನುಕುಲದ ರಕ್ಷಣೆಯಾದೀತು.

ಅಭಿವೃದ್ಧಿಯ ಶುಷ್ಕ ಅಸ್ಥಿಗಳು ಪ್ರೀತಿಯಿಂದ ಸ್ಫೂರ್ತಿಗೊಂಡು ಪ್ರಜ್ವಲಿಸುವಂತಾಗಬೇಕು (ವೆರಿಯರ್ ಎಲ್ವಿನ್). ಅದು ಬಿಟ್ಟು ಕೇವಲ ಒಂದು ಪ್ರಬಲ ಗುಂಪಿನ ಹಿತಾಸಕ್ತಿ ಮಾತ್ರಾ ಮುಖ್ಯವಾಗಿಟ್ಟುಕೊಂಡು ಆಧುನಿಕತೆಯ ಹೆಸರಲ್ಲಿ ಸಾಂಸ್ಕೃತಿಕ ರಾಜಕೀಯದಿಂದ ಪರಿಸರ ನಾಶ ಮಾಡುವುದು ಸರಿಯಲ್ಲ. ಅಧಿಕಾರಿಗಳು ಹಾಗೂ ಬಂಡವಾಳ ಶಾಹಿಗಳ ಸಂಕುಚಿತ ಮನೋಭಾವನೆಗೆ ದೇಶದ ಅಗಾಧ, ಅತ್ಯಮೂಲ್ಯ ಸಂಪತ್ತು ರಾಜಾರೋಷವಾಗಿ ಲೂಟಿಯಾಗುತ್ತಿರುವುದನ್ನು ಯಾರೂ ಸಹಿಸಲಾರರು. ಒಂದು ಕಡೆ ಬಟ್ರಾಂಡ್‌ರಸಲ್‌ರವರ ಮಾತಿನಂತೆ ಮಾನವ ಪರಿಸರ ವಿರೋಧಿಯಾದರೆ, ಪರಿಸರ ಮಾನವ ವಿರೋಧಿಯಾಗುತ್ತದೆ. ಹಾಗೂ ಜಾರ್ಜ್‌ವಿಂಟ್‌ರವರು ಇನ್ನು ಪರಿಸರವನ್ನು ನಿರ್ಲಕ್ಷಿಸುವ ಕಾಲ ಮುಗಿಯಿತು ಎನ್ನುವ ಎಚ್ಚರಿಕೆಯನ್ನು ನೀಡುತ್ತಾರೆ. ಪ್ರಕೃತಿಯಲ್ಲಿ ಮನುಷ್ಯನ ಅವಶ್ಯಕತೆಗಳಿಗೆ ಬೇಕಾಗುವಷ್ಟು ಎಲ್ಲವೂ ಇದ್ದರೂ ದುರಾಸೆಗೆ ಇಡೀ ಭೂಮಿಯೇ ನಾಶವಾಗುವಂತಿದೆ. ಬೃಹತ್ತಿನ ಭ್ರಮೆಯಲ್ಲಿ ಕನಸಿನ ನಮ್ಮ ರಾಜಕೀಯ, ಆರ್ಥಿಕ ನೀತಿ ಈ ನೆಲಮೂಲ ಜ್ಞಾನವನ್ನು ಇನ್ನೂ ಉಪೇಕ್ಷಿಸುವುದರ ಬದಲು ಅದು ಬರಿದಾಗುವ ಮುಂಚೆ ಹುಡುಕಿ ಹೆಕ್ಕಿ ನೆಲದ ನೋವನ್ನು ಅರ್ಥಮಾಡಿಕೊಂಡು ಪೋಷಿಸುವುದು ಜೀವ ಸಂಕುಲಗಳ ಉಳಿವಿಗೆ ಅತೀ ಅನಿವಾರ್ಯವಾಗಿದೆ. ಒಂದು ಕಡೆ ವ್ಯವಸ್ಥೆಯ ಸಮಗ್ರ ಬದಲಾವಣೆಯಾದರೆ ಸುಸ್ಥಿರ ಅಭಿವೃದ್ಧಿಯೇ ಮುಖ್ಯ ಗುರಿಯಾದರೆ ಪರಿಸರ ಉಳಿದೀತು ಎಂದೆನೆಸುತ್ತಿದೆ. ನಮ್ಮ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ, ಸಂವರ್ಧನೆ, ಸಹನಶೀಲ ಬಳಕೆ ಹಾಗೂ ನ್ಯಾಯಯುತ ಹಂಚಿಕೆಯಲ್ಲಿ ಎಲ್ಲರೂ ಕೈಜೋಡಿಸೋಣ.

ಸತ್ಯದ ಉಜ್ವಲ ಪ್ರಕಾಶದಿಂದ ಮಾನವ ಜೀವನದ ಕಗ್ಗತ್ತಲೆಯ ಕ್ಷೇತ್ರಗಳ ಮೇಲೆ ಬೆಳಕು ಚೆಲ್ಲಿ ಆ ಕ್ಷೇತ್ರಗಳನ್ನು ಬೆಳಗಿಸುವುದೇ ವಿಜ್ಞಾನದ ವೈಭವವಾಗಲಿ. ಲಕ್ಷಾಂತರ ಹೃದಯಾಂತರಾಳದಿಂದ ಬರುವ ಆರ್ತನಾದ ಜನಪ್ರತಿನಿಧಿಗಳು, ನಿಯಮ ರೂಪಿಸುವವರು ಹಾಗೂ ಸೂಕ್ಷ್ಮ ಹೃದಯಗಳಿಗೆ ಮುಟ್ಟಲಿ. ಪ್ರಕೃತಿಯ ರಕ್ಷಣೆಯ ಬಗ್ಗೆ ನಮಗಿರುವ ಆದರ್ಶ ಕೇವಲ ನಮ್ಮ ಮನಸ್ಸು ಅಥವಾ ಮಾತಿನಲ್ಲಿರದೆ ಕೃತಿಗೂ ಇಳಿಯಲಿ ಎಂಬ ರಸ್ಕಿನ್‌ರವರ ಬಯಕೆಯೊಂದಿಗೆ ಮುಂದಿನ ದಿನಗಳ ಬೃಹತ್ ಬದಲಾವಣೆಗೆ ನಾವೆಲ್ಲರೂ ಕಂಕಣಬದ್ಧರಾಗೋಣ

Tags

Related Articles

Leave a Reply

Your email address will not be published. Required fields are marked *

Language
Close