ಸೋತರೂ ಜನ ಸೇವೆ ಮಾಡಿದೆ: ಎನ್.ಎಚ್.ಕೋನರೆಡ್ಡಿ

Posted In : ಸಂಗಮ, ಸಂಪುಟ

ಮೊದಲ ಸಲ: ನಿರೂಪಣೆ- ಶಂಕರ್ ಎನ್.ಪರಂಗಿ

ನವಲಗುಂದ ಕ್ಷೇತ್ರದಿಂದ 1969ರಲ್ಲಿ ಮೊದಲ ಬಾರಿ ನಾನು ಜೆಡಿಯುನಿಂದ ಚುನಾವಣೆಗೆ ಸ್ಪರ್ಧಿಸಿದ್ದೆ. ಆಗ 15 ಸಾವಿರಕ್ಕೂ ಅಧಿಕ ಮತಗಳು ಬಂದವಾದರೂ, ಪರಾಭವಗೊಳ್ಳಬೇಕಾಯಿತು. ನಂತರದ ವರ್ಷದಲ್ಲಿ ಅದೇ ಕ್ಷೇತ್ರದಿಂದ ಮತ್ತೆ ಕಣಕ್ಕಿಳಿದೆ. ನನಗೆ 30 ಸಾವಿರಕ್ಕೂ ಅಧಿಕ ಮತಗಳು ಬಂದವು, ಆದರೂ ಮತ್ತೆ ಸೋಲಬೇಕಾಯಿತು. ಸೋತರೂ ಧೃತಿಗೆಡದೆ ಜನ ಸೇವೆ ಮಾಡಿದೆ.

ಉತ್ತರ ಕರ್ನಾಟಕದ ಏಳಿಗೆಗಾಗಿ, ರೈತರ ಅಭಿವೃದ್ಧಿಗಾಗಿ ಸತತ ಹೋರಾಟ ನಡೆಸುತ್ತಿದ್ದ ನನಗೆ 2013ರಲ್ಲಿ ಬಸವರಾಜ ಹೊರಟ್ಟಿ ಅವರು ಜೆಡಿಎಸ್ ನಿಂದ ಟಿಕೆಟ್ ನೀಡಿದರು. ಧಾರವಾಡ ಜಿಲ್ಲೆ ನವಲಗುಂದ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ 45 ಸಾವಿರ ಮತಗಳ ಅಂತರದಿಂದ ಗೆದ್ದೆ. ಕಾಂಗ್ರೆಸ್‌ನಿಂದ ಕೆ.ಎನ್.ಗಡ್ಡಿ ಹಾಗೂ ಬಿಜೆಪಿಯಿಂದ ಪಾಟೀಲ್ ಅವರು ಪ್ರತಿಸ್ಪರ್ಧಿಗಳಾಗಿದ್ದರು.

ನವಲಗುಂದ ವಿಧಾನ ಸಭಾಕ್ಷೇತ್ರ ಸದಾ ಹೋರಾಟದಲ್ಲಿ ಮುಂದಿರುವ ಕ್ಷೇತ್ರ. ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಹಾಗೂ ರೈತರ ಸಾಲ ಮನ್ನಾ ಸೇರಿದಂತೆ ರೈತರ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಿ, ಸಮರ್ಪಕವಾಗಿ ವಾದ ವಿವಾದ ಮಾಡಿ ಯಶಸ್ಸು ಕಂಡಿರುವ ಖುಷಿ ಇದೆ. ಅಲ್ಲದೇ ಇತ್ತೀಚೆಗೆ ಮಹದಾಯಿ ನೀರಿನ ಹಂಚಿಕೆ ವಿಚಾರದಲ್ಲಿ ಇಂದು ಕೂಡ ಹೋರಾಟ ನಡೆಯುತ್ತಿದೆ. ನನ್ನ ಹೋರಾಟ ಮೆಚ್ಚಿದ್ದ ಜನರು 1969 ರಿಂದ  ಪ್ರೋತ್ಸಾಹ ನೀಡುತ್ತ ಬಂದಿದ್ದು, ಎಂದಿಗೂ ಅವರ ಬೆಂಬಲ ಕಡಿಮೆಯಾಗಿಲ್ಲ.

ಆಗಿನ ಚುನಾವಣೆ ವೇಳೆ ಹಣದ ಪ್ರಭಾವ ತುಂಬಾ ಕಡಿಮೆ ಇತ್ತು. ಅಭ್ಯರ್ಥಿ ಹೇಗೆ ಕೆಲಸ ಮಾಡುತ್ತಾರೆ ಎಂದು ಜನ ಅಳೆದು ನೋಡುತ್ತಿದ್ದರು. ಇಂದಿನಂತೆ ಆಗ ಸಾಮಾಜಿಕ ಜಾಲತಾಣಗಳು ಇರಲಿಲ್ಲ. ನಾವು ಹಳ್ಳಿಗಳಿಗೆ ಖುದ್ದು ಭೇಟಿ ನೀಡಿ ಕರಪತ್ರ ಕೊಟ್ಟು ಮತ ಯಾಚನೆ ಮಾಡುತ್ತಿದ್ದೆವು. ಇಂದು ಕೂಡ ಜನ, ರೈತರೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡಿದ್ದೇನೆ.

ನನ್ನ ಪ್ರಥಮ ಚುನಾವಣೆಯಿಂದ ಇಲ್ಲಿಯವರೆಗೂ ಜನರು ನನಗೆ ಹಂತ ಹಂತವಾಗಿ ಹೆಚ್ಚು ಹೆಚ್ಚು ಮತ ನೀಡಿ ಪ್ರೋತ್ಸಾಹಿ ಸಿದ್ದಾರೆ. ಪ್ರಮುಖವಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರಿಂದ ನಾನು ರಾಜ್ಯ ಮಟ್ಟದಲ್ಲಿ ಗುರುತಿಸಿ ಕೊಳ್ಳುವಂತಾಯಿತು. ಜನರಿಗೆ, ಪಕ್ಷದ ಮುಖಂಡರಿಗೆ ನಾನು ಸದಾ ಋಣಿ.

Leave a Reply

Your email address will not be published. Required fields are marked *

1 × 1 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top