About Us Advertise with us Be a Reporter E-Paper

ಅಂಕಣಗಳು

ಎಲ್ಲರನ್ನು ಒಳಗೊಂಡು, ಎಲ್ಲರ ಅಭಿವೃದ್ಧಿ….!

- ಮೋಹನ್ ಕುಮಾರ್

ಮೀಸಲಾತಿ ಎಂಬ ಪದವು ಅದೆಷ್ಟು ಜನರ ಬಡತನ, ಕಷ್ಟಗಳನ್ನು ನೀಗಿಸಿತ್ತೋ, ಅಷ್ಟೇ ಪ್ರಮಾಣದಲ್ಲಿ ಬಡವರ ಸೃಷ್ಟಿಗೆ ಕಾರಣವಾಗಿತ್ತು. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಈ ಮಸೂದೆಯನ್ನು ತಂದ ಉದ್ದೇಶ ಹಾಗೂ ಸಮಯವನ್ನು ಸೂಕ್ಷ್ಮವಾಗಿ ಗಮನಿಸಬೇಕು. 19 ಹಾಗೂ 20ನೇ ಶತಮಾನದಲ್ಲಿ ದೇಶದಲ್ಲಿದ್ದ ದರಿದ್ರ, ಮೇಲ್ವರ್ಗ ಹಾಗೂ ಕೆಳವರ್ಗವೆಂಬ ಭೇದ ಭಾವದ ಬಿರುಕನ್ನು ಕೂಡಿಸಲು ಅಂದಿನ ಕಾಲಘಟ್ಟದಲ್ಲಿ ಮೀಸಲಾತಿಯ ಅನಿವಾರ್ಯ ನಿಜವಾಗಿಯೂ ಇತ್ತು.

ಕೆಳ ವರ್ಗದವರ ತಲೆಯ ಮೇಲೆ ಮಲ ಹೊರಿಸುತ್ತಿದ್ದಂತಹ ಕಾಲವಿತ್ತು. ಮೇಲ್ವರ್ಗದವರು ಮಾತ್ರ ಊರ ಬಾವಿಯಲ್ಲಿ ನೀರು ಕುಡಿಯಬೇಕೆಂಬ ಕಾಲವಿತ್ತು. ಅತ್ಯಂತ ಅಮಾನವೀಯವಾಗಿ ಕೆಳ ವರ್ಗದ ದಲಿತರನ್ನು ನಡೆಸಿಕೊಳ್ಳಲಾಗುತ್ತಿತ್ತು. ಕಾಲ ಕಳೆದಂತೆ ನಿಧಾನವಾಗಿ ಎಲ್ಲವೂ ಬದಲಾಗುತ್ತ ಹೋಯಿತು. ಅಂದಿನ ಕಾಲದಲ್ಲಿ ವಿದ್ಯೆ ಎಂಬುದು ಕೇವಲ ಮೇಲ್ವರ್ಗದವರ ಸ್ವತ್ತಾಗಿತ್ತು. ಕೆಳ ವರ್ಗದವರು ಕೇವಲ ಕೂಲಿ ಆಳುಗಳಾಗಿಯೇ ಜೀವನ ನಡೆಸಬೇಕೆಂಬ ಅಲಿಖಿತ ನಿಯಮವೂ ಇತ್ತು. ಇಂತಹ ದರಿದ್ರ ಶೋಷಣೆಗಳೆದುರು ನಿಂತು, ಕೆಳ ವರ್ಗದ ಉದ್ಯೋಗ ಹಾಗೂ ವಿದ್ಯೆಯಲ್ಲಿ ಮೀಸಲಾತಿ ನೀಡಿ, ಅವರನ್ನು ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಾಮಾಜಿಕವಾಗಿ, ರಾಜಕೀಯವಾಗಿ ಸದೃಢರನ್ನಾಗಿ ಮಾಡಿ, ಮೇಲ್ವರ್ಗದ ಜನರ ಸರಿಸಮಾನವಾಗಿ ತಂದು ನಿಲ್ಲಿಸಿದ ಕೀರ್ತಿ ಅಂಬೇಡ್ಕರ್‌ರಿಗೆ ಸಲ್ಲುತ್ತದೆ.

ಆನಂತರದ ಕಾಲಘಟ್ಟದಲ್ಲಿ ಇದನ್ನೇ ರಾಜಕೀಯವನ್ನಾಗಿ ಮಾಡಿಕೊಂಡ ಕಾಂಗ್ರೆಸ್ ಪಕ್ಷವು ಪ್ರತಿಯೊಂದು ಚುನಾವಣೆಯಲ್ಲಿ ದಲಿತ ಪರ ಯೋಜನೆಗಳನ್ನು ನೀಡುತ್ತಾ, ದಲಿತರನ್ನು ತನ್ನ ಮತ ಬ್ಯಾಂಕನ್ನಾಗಿ ಪರಿವರ್ತಿಸಿಕೊಂಡಿತು. ಪಾಪ, ದಲಿತರ ಪರ ನಿಂತು ಇಷ್ಟೆಲ್ಲ ಹೋರಾಡಿ ಮೀಸಲಾತಿಯನ್ನು ಒದಗಿಸಿದ ಅಂಬೇಡ್ಕರ್‌ರನ್ನು ಮಾತ್ರ ರಾಜಕೀಯವಾಗಿ ಬಿಡಲೇ ಇಲ್ಲ. ಇದೇ ಜವಾಹರ ಲಾಲ ನೆಹರು, ಅಂಬೇಡ್ಕರರ ಪರಮಾಪ್ತನನ್ನೇ ಚುನಾವಣೆಯಲ್ಲಿ ಅವರ ವಿರುದ್ಧ ಎತ್ತಿಕಟ್ಟಿ ಚುನಾವಣೆಯಲ್ಲಿ ನಿಲ್ಲಿಸಿ, ಅಂಬೇಡ್ಕರ್‌ರನ್ನು ಹೀನಾಯವಾಗಿ ಸೋಲಿಸಿಬಿಟ್ಟರು. ಇದೊಂದು ವಿಚಾರವನ್ನು ಭಾರತದ ದಲಿತರು ಅರಿತರೆ, ನೆಹರು ತಮ್ಮ ನಾಯಕನಿಗೆ ಮಾಡಿದ ದ್ರೋಹದ ಉದ್ದೇಶ ತಿಳಿಯುತ್ತದೆ.

ನೆಹರು ವಂಶಸ್ಥರು ಎಂದಿಗೂ ಜನಪರವಾಗಿ ನಿಂತವರೇ ಅಲ್ಲ. ಈಗ ನೋಡಿ, ದೇಶದಲ್ಲಿರುವ ದಲಿತರನ್ನು ಕಾಂಗ್ರೆಸ್ ಮಾತ್ರವೇ ಉದ್ಧಾರ ಮಾಡಿದೆ ಎಂಬ ರೀತಿಯಲ್ಲಿ ಬಿಂಬಿಸಲಾಗಿದೆ. ನೋ ಡೌಟ್, ದಲಿತರಿಗೆ ಅನ್ಯಾಯದ ವಿರುದ್ಧ ಪ್ರಜಾಪ್ರಭುತ್ವ ಭಾರತದಲ್ಲಿ ಯಾವ ಸರಕಾರವೇ ಆದರೂ, ಶೋಷಿತರ ಪರ ನಿಲ್ಲಲೇಬೇಕು. ಆದರೆ ಅದನ್ನೇ ರಾಜಕೀಯ ಮಾಡಿದ್ದು ಮಾತ್ರ ಒಪ್ಪುವಂಥದ್ದಲ್ಲ. ಇಷ್ಟೆಲ್ಲ ಬಡಾಯಿ ಕೊಚ್ಚಿಕೊಳ್ಳುವ ಗಾಂಧಿ ಕುಟುಂಬಕ್ಕೆ ತಾವು ವಂಶ ಪಾರಂಪರ್ಯವಾಗಿ ಪ್ರತಿನಿಧಿಸುತ್ತ ಬಂದಿರುವ ಉತ್ತರ ಪ್ರದೇಶದ ಹಣೆ ಬರಹವನ್ನು 70ವರ್ಷವಾದರೂ ಬದಲಿಸಲು ಆಗಲಿಲ್ಲ.

ರಾಜೀವ್ ಗಾಂಧಿ 1986ರಲ್ಲಿ ನೋಡಿ ಬಂದಿದ್ದ ಗುಡಿಸಲಿನಲ್ಲಿರುವ ವ್ಯಕ್ತಿ, ಈಗ ರಾಹುಲ್‌ಗಾಂಧಿಯವರು ಹೋಗಿ ನೋಡಿದರೂ, ಅದೇ ಗುಡಿಸಲಿನಲ್ಲಿಯೇ ವಾಸಿಸುತ್ತಿದ್ದಾನೆ. ಎಷ್ಟೋ ದಲಿತ ಇದೇ ಕತೆ. ಕೆಳವರ್ಗವೆಂಬ ಹಣೆಪಟ್ಟಿಯಿಂದಲೇ ಜನರ ಜತೆ ರಾಜಕೀಯ ಮಾಡಿ, ಜಾತಿ ಗುರಾಣಿ ಹಿಡಿದು ಮೇಲೆ ಬಂದವರು ಅವರು. ಉತ್ತರ ಪ್ರದೇಶದ ಕಥೆ ಬಿಡಿ, ನಮ್ಮ ರಾಜ್ಯದ ಕಲಬುರಗಿಯಲ್ಲಿ ಇಂದಿಗೂ ಕಿತ್ತು ತಿನ್ನುವ ಬಡತನದಿಂದ ಹಲವು ಜನರು ತಮ್ಮ ಎಳೆಯ ಕಂದಮ್ಮಗಳನ್ನು ಮಾರಿ ಜೀವನ ನಡೆಸುತ್ತಿರುವ ವರದಿಗಳು ಬಂದಿವೆ. ಇದುವರೆಗೂ ಅಲ್ಲಿ 6 ಬಾರಿ ಗೆದ್ದು ಬಂದಿರುವ ದಲಿತ ನಾಯಕ, ಸೋಲಿಲ್ಲದ ಸರದಾರ ಎಂದು ಕರೆಯಿಸಿಕೊಳ್ಳುವ ಮಲ್ಲಿಕಾರ್ಜುನ ಖರ್ಗೆಯವರು ಕ್ಷೇತ್ರ ಇದು. ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯವಾಗಿದ್ದರೂ ಸಹ ಖರ್ಗೆ, ತಮ್ಮ ಜಿಲ್ಲೆಯಲ್ಲಿ ಒಂದು ಸಣ್ಣ ವಿಮಾನವನ್ನು ಹಾರಿಸಲು ಮೋದಿಯೇ ಬರಬೇಕಾಯಿತು. ಇದು ದಲಿತರು, ಕೆಳವರ್ಗದವರ ಕಥೆಯಾದರೆ, ಒಂದು ಕಾಲದಲ್ಲಿ ತಮ್ಮಿಂದಲೇ ಎಲ್ಲಾ ಎಂಬಂತೆ ಇದ್ದ ಮೇಲ್ವರ್ಗದವರದರದು ಇನ್ನೊಂದು ರೀತಿ. ಅಂದಿನ ಕಾಲಘಟ್ಟದಲ್ಲಿ ಅಜ್ಜಂದಿರು ಅಥವಾ ಮುತ್ತಜ್ಜಂದಿರು ಮಾಡುತ್ತಿದ್ದ ಹೀನಾಯ ಶೋಷಣೆ, ತಾರತಮ್ಯಕ್ಕೆ ಶಿಕ್ಷೆ ಅನುಭವಿಸಿದ್ದು ಮಾತ್ರ ಮಕ್ಕಳು, ಮೊಮ್ಮಕ್ಕಳು.

ಸುಮಾರು 60 ವರ್ಷಗಳಲ್ಲಿ ಆರ್ಥಿಕವಾಗಿ ಖಂಡಿತವಾಗಿ ದಲಿತರು(ಬಹುಪಾಲು) ಮೇಲ್ದರ್ಜೆಗೆ ಸಮಾಜದಲ್ಲಿ ತಮ್ಮ ಛಾಪನ್ನು ಮೇಲ್ವರ್ಗದವರ ಜತೆಗೆ ಗುರುತಿಸಿಕೊಂಡಿದ್ದಾರೆ. ಇನ್ನು ಸಾಮಾಜಿಕವಾಗಿಯೂ ಅಷ್ಟೆ. ಮೇಲ್ವರ್ಗದವರಿಗೆ ಅವರು ಹಿಂದೆ ಮಾಡಿದ ತಪ್ಪಿನ ಅರಿವಾಗಿ, ಮೇಲ್ವರ್ಗ ಹಾಗೂ ಕೆಳ ವರ್ಗವೆಂಬ ಭೇದವನ್ನು ಬಹುಪಾಲು ಜನರು ಈಗ ಒಪ್ಪುವುದಿಲ್ಲ, ಎಲ್ಲರೂ ಒಂದೇ ಎಂಬ ಭಾವನೆ ಬಂದಿದೆ. ಹಾಗೆಂದ ಮಾತ್ರಕ್ಕೆ ಶೇ.100ರಷ್ಟು ಸರಿಯಾಗಿದೆಯೆಂದು ಹೇಳಲಾಗುವುದಿಲ್ಲ. ಆದರೆ ತಾರತಮ್ಯ ಬಹಳ ಕಡಿಮೆಯಾಗಿದೆ.

ಪ್ರಸಕ್ತ 21ನೇ ಶತಮಾನದ ಈ ತಂತ್ರಜ್ಞಾನದ ಯುಗದಲ್ಲಿ ಈಗಿನ ಮಕ್ಕಳಿಗೆ ಜಾತಿಯೆಂಬ ಭೇದ-ಭಾವದ ಅರಿವು ಇಲ್ಲ. ಅಂತರ್ಜಾತಿ ವಿವಾಹಗಳಂತೂ ಸಾಮಾನ್ಯವಾಗಿಬಿಟ್ಟಿವೆ. ನಮ್ಮ ಮಕ್ಕಳ ಕಾಲಕ್ಕೆ ಅಂದರೆ, ಮುಂದಿನ ಇಪ್ಪತ್ತೈದು ವರ್ಷಗಳ ನಂತರ ಹುಡುಗ, ಹುಡುಗಿಯನ್ನು ಮದುವೆಯಾದರೆ ಸಾಕಪ್ಪ ಎಂಬಂತೆ ಆಗುವುದಂತೂ ನಿಜ. ಪರಿಸ್ಥಿತಿ ಹೀಗಿರುವಾಗ, ಮೀಸಲಾತಿಯ ವಿಚಾರವನ್ನು ಸಡಿಲಗೊಳಿಸಬೇಕಾದ ಒಂದು ಕಠಿಣ ನಿರ್ಧಾರವಂತೂ ಬೇಕೇ ಬೇಕಿತ್ತು. ಮೀಸಲಾತಿಯ ವಿಚಾರದಲ್ಲಿ ಕಳೆದ ಮೂವತ್ತು ವರ್ಷಗಳಿಂದ ಭಾರತ ಹಲವಾರು ಪ್ರತಿಭೆಗಳನ್ನು ಕಳೆದುಕೊಂಡಿದೆ. ಆರ್ಥಿಕವಾಗಿ, ಸಾಮಾಜಿಕವಾಗಿ ಕೆಳ ವರ್ಗದವರನ್ನು ಮೇಲ್ದರ್ಜೆಗೆ ಏರಿಸಲು ಹೋಗಿ, ದೇಶದ ಬೆಳವಣಿಗೆ ಕುಂಠಿತಗೊಂಡಿದೆ. ಹಲವಾರು ತಮ್ಮ ಪ್ರತಿಭೆಗೆ ತಕ್ಕಂತಹ ವಿದ್ಯಾಭ್ಯಾಸ ಹಾಗೂ ಉದ್ಯೋಗವು ಸಿಗದೇ, ಬೀದಿಗೆ ಬಂದ ಪ್ರಸಂಗಗಳು ಹಲವಾರಿವೆ. ಜತೆಗೆ ಇದನ್ನೇ ಬಂಡವಾಳವನ್ನಾಗಿಸಿಕೊಂಡ ಪಾಶ್ಚಿಮಾತ್ಯ ದೇಶಗಳು ನಮ್ಮ ಪ್ರತಿಭೆಗಳನ್ನು ಖರೀದಿಸಿ ಅವರು ಬೆಳೆದರು.

1976ರಲ್ಲಿ ಇಂದಿರಾ ಗಾಂಧಿ ಚುನಾವಣಾ ಸ್ವಾರ್ಥಕ್ಕಾಗಿ ಸಂವಿಧಾನವನ್ನೇ ಹಿಗ್ಗಾ ಮುಗ್ಗಾ ತಿದ್ದುಪಡಿ ಮಾಡುವ ಬದಲು ಇಂತಹ ವಿಚಾರಕ್ಕಾಗಿ ಒಮ್ಮೆ ಪ್ರಯತ್ನಿಸಿದ್ದರೆ, ನಾವು 1991ರಲ್ಲಿ ಲಂಡನ್‌ನಲ್ಲಿ ಚಿನ್ನ ಅಡವಿಟ್ಟು ದೇಶವನ್ನು ನಡೆಸುವಂತಹ ಪರಿಸ್ಥಿತಿಗೆ ಬರುತ್ತಿರಲಿಲ್ಲ. ಇವರ ಮೀಸಲಾತಿಯ ಪ್ರಕ್ರಿಯೆಯು ಮುಗ್ಧ ಮನಸ್ಸಿನ ಮೇಲೆ ಎಷ್ಟು ಪರಿಣಾಮ ಬೀರುತ್ತಿತ್ತೆಂದರೆ, ಮೀಸಲಾತಿ ಇಲ್ಲದ ಹುಡುಗ, ಒಂದು ಎಂಜಿನಿಯರಿಂಗ್ ಸೀಟು ಪಡೆಯಲು ಹಗಲು-ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಓದಿ ಶೇ.95ರಷ್ಟು ಅಂಕವನ್ನು ಪಡೆಯಲೇಬೇಕಿತ್ತು. ಮೀಸಲಾತಿ ಇರುವವನಿಗೆ ಶೇ.60ರಷ್ಟು ಬಂದರೆ ಸಾಕು ಸೀಟು ಸಿಗುತ್ತಿತ್ತು. ಈ ರೀತಿ ಶೇ.95ರಷ್ಟು ಪ್ರತಿಭೆಯನ್ನಿಟ್ಟುಕೊಂಡು, ಶೇ.60ರಷ್ಟು ಅಂಕ ಪಡೆದ ಸಾಮಾನ್ಯನಿಗೆ ಹೆಚ್ಚಿನ ಅವಕಾಶ ನೀಡಿದರೆ, ದೇಶವು ಹೇಗೆ ತಾನೆ ಉದ್ಧಾರವಾದೀತು?

ದೇಶದ ಜಿಡಿಪಿಯ ಬಗ್ಗೆ ಎಲ್ಲ ಮಾತಾಡುತ್ತಾರೆ. ಆದರೆ ವಸ್ತುಸ್ಥಿತಿ ಎಲ್ಲಿಂದ ಬೆಳವಣಿಗೆ ಬರುತ್ತದೆ ಅಲ್ಲವೇ? ಸೀಟಿನ ವ್ಯಥೆ ಒಂದೆಡೆಯಾದರೆ, ಇನ್ನು ಶುಲ್ಕದ ಕಥೆಯೇ ಬೇರೆ. ಶುಲ್ಕದಲ್ಲಿಯೂ ರಿಯಾಯಿತಿಯನ್ನು ನೀಡಲಾಗಿರುವುದರಿಂದ ಅಲ್ಲಿಯೂ ಇದೇ ತಾರತಮ್ಯ. ಅವನ ಪೂರ್ವಜರು ಮಾಡಿದ ತಪ್ಪಿಗೆ, ಈ ಕಾಲದ ಹುಡುಗನಿಗೆ ಈ ರೀತಿಯ ಶಿಕ್ಷೆ. ನನ್ನನ್ನು ಪಿಯುಸಿಗೆ ಸೇರಿಸಲು ಹಣ ಸಾಕಾಗದೇ, ನನ್ನ ಅಪ್ಪ 2000ನೇ ಇಸವಿಯಲ್ಲಿ ಕೇವಲ 6,500ರುಪಾಯಿಗಳಿಗೆ ಎಲ್‌ಐಸಿ ಬಾಂಡ್‌ನ್ನು ಸರೆಂಡರ್ ಮಾಡಿದ್ದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಮೀಸಲಾತಿಯ ಹುಡುಗ ಫೀಸನ್ನು ಕಟ್ಟದೇ, ಬಂದು ನನ್ನ ಪಕ್ಕದಲ್ಲೇ ಕೂತು ಪಾಠ ಕೇಳುತ್ತಿದ್ದುದನ್ನು ನೋಡಿದಾಗಲೆಲ್ಲ, ನನ್ನಪ್ಪನೇ ನನಗೆ ನೆನಪಾಗುತ್ತಿದ್ದುದು. ಅಷ್ಟಕ್ಕೂ ನಾನು ಬ್ರಾಹ್ಮಣನೇನೂ ಅಲ್ಲ. ಮೀಸಲಾತಿ ಇಲ್ಲದೇ, ಕಾಲೇಜು ಫೀಜಿಗೆ ಹಣ ಹೊಂದಿಸಲು ಆಗದೆ, ನನ್ನ ತಾಯಿಯು ಪಟ್ಟ ಕಷ್ಟವೂ ಅಷ್ಟಿಷ್ಟಲ್ಲ ಬಿಡಿ. ಬೆಳಗ್ಗೆ 8ರಿಂದ ಸಂಜೆ 5ರ ವರೆಗೆ ಕೆಲಸ, ಸಂಜೆ 6 ರಿಂದ 9.30ರ ವರೆಗೆ ಕಾಲೇಜು…ಇದು ನನ್ನ ಐದು ವರ್ಷಗಳ ದಿನಚರಿಯಾಯಿತು. Thanks to ಮೀಸಲಾತಿ ಪ್ರಕ್ರಿಯೆ!

ಮೀಸಲಾತಿ ಇರುವ ಕಾಲೇಜಿಗೆ ಆಡಿ ಕಾರಿನಲ್ಲಿ ಬಂದಿಳಿದರೆ, ಪಾಪ ಮೀಸಲಾತಿ ಇಲ್ಲದವನು ಬಿಎಂಟಿಸಿ ಬಸ್ಸಿನಲ್ಲಿ ಬರುತ್ತಾನೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಹಲವಾರು ಪ್ರಗತಿಪರರು ನಮ್ಮೆಲ್ಲರ ಮಧ್ಯೆಯೇ ಈ ಸಮಾಜದಲ್ಲಿದ್ದಾರೆ. ಪ್ರಗತಿಪರರೆಂದರೆ ಯಾರು ಸ್ವಾಮಿ? ಪ್ರಗತಿಯ ಪರವಾಗಿರುವವರು, ಪ್ರಗತಿಯ ಕಡೆಗೆ ಯೋಚಿಸುವಂಥವರು. ಆದರೆ ಇವರು ಮಾಡಿದ್ದಾದರೂ ಏನು? ಕೇವಲ ಕೆಳ ವರ್ಗದ ಜನರ ಓಲೈಕೆ ಮಾಡುವುದನ್ನೇ ಪ್ರಗತಿ ಪರವೆಂಬಂತೆ ವಾದ ಮಾಡಿ. ಇನ್ನೊಂದು ವರ್ಗದವರನ್ನು ಕೆಳಗೆ ತಳ್ಳಿದವರು. ಹಣೆಯ ಮೇಲೆ ಪ್ರಗತಿಪರ ಚಿಂತಕನೆಂಬ ಪಟ್ಟಿ ರಾಜಕೀಯ ಮಾಡುವುದಷ್ಟೇ ಇವರ ಕೆಲಸ. ಇವರಿಗೆ ಕನಿಷ್ಠವಾಗಿ ಬಡವನಾದವನಿಗೆ ಜಾತಿ, ಭೇದವೆಂಬುದು ಅರ್ಥವಿಲ್ಲದ್ದು ಎಂಬುದೂ ತಿಳಿದಿಲ್ಲ. ಯಾವ ಜಾತಿಯವನಾದರೂ, ಬಡವ ಬಡವನಷ್ಟೇ?

ಪತ್ರಕರ್ತೆ ಗೌರಿ ಲಂಕೇಶ ತನ್ನನ್ನು ತಾನು ಪ್ರಗತಿಪರಳೆಂದು ಗುರುತಿಸಿಕೊಂಡಿದ್ದರೂ ತಾನು ಹುಟ್ಟಿದ ಜಾತಿಯಾದ ಲಿಂಗಾಯಿತರಲ್ಲಿ ಬಡವರಿದ್ದುದನ್ನು ಗಮನಿಸಿರಲಿಲ್ಲವೇ? ಅವರ ಪರವಾಗಿ ಆಕೆ ಏನು ಪ್ರಗತಿಯನ್ನು ಮಾಡಿ ಹೋದಳೋ, ನಾನಂತೂ ಅರಿಯೆ. ಇನ್ನು ತಮಿಳುನಾಡಿನ ಪೆರಿಯಾರ್‌ನಿಂದ ಪಾರಿತೋಷಕ ಪಡೆದಂತಹ ಪ್ರಗತಿಪರರೇನೂ ಕಮ್ಮಿಯಿಲ್ಲ. ಅವರು ಅಷ್ಟೇ ಮಾಡಿದ್ದು. ಕೇವಲ ವರ್ಗದ ಜನರ ಪರವಾಗಿ ನಿಂತು. ತಾನು ಪ್ರಗತಿಪರನೆಂದು ಬಿಲ್ಡಪ್ ಕೊಟ್ಟಿದ್ದೇ ಕೊಟ್ಟಿದ್ದು. ಇಷ್ಟು ವರ್ಷಗಳಿಂದ ಈ ಪ್ರಗತಿಪರರು ನಿಜವಾಗಿಯೂ ಪ್ರಗತಿಪರವಾಗಿ, ಜಾತಿ-ಭೇದವೆನ್ನದೇ ಬಡವರ ಪರವಾಗಿ ಹೋರಾಡಿದ್ದರೆ, ನಿಜವಾದ ಪ್ರಗತಿ ಇಷ್ಟೊತ್ತಿಗಾಗಲೇ ಆಗಬೇಕಿತ್ತು. ಪೆರಿಯಾರ್ ಹೋರಾಟ ಮಾಡಿದ ತಮಿಳುನಾಡಿನ ಸ್ಥಿತಿಯೂ ಇಂದೇನಾಗಿದೆ. ಇಂದಿಗೂ ಎಲ್ಲರಿಗೂ ಉಚಿತವಾಗಿ ಅಕ್ಕಿ, ಬೇಳೆ, ಎಣ್ಣೆ, ಪುಸ್ತಕ, ಮನೆ, ಗಾಡಿಯನ್ನು ನೀಡಲೇಬೇಕು. ಹಾಗಾದರೆ ಅವರ ಶಿಷ್ಯರು ತಮಿಳುನಾಡನ್ನು ಪ್ರಗತಿಪಥದಲ್ಲಿ ಏಕೆ ಕೊಂಡೊಯ್ಯಲು ಸಾಧ್ಯವಾಗಲಿಲ್ಲ? ಯಾಕೆಂದರೆ ಇವರಿಗೆ ನಿಜವಾದ ಅರ್ಥವೇ ತಿಳಿದಿಲ್ಲ.

ಹಿಂದಿನ ಸಿದ್ದರಾಮಯ್ಯನವರ ಸರಕಾರದಲ್ಲಿ ಮೀಸಲಾತಿಯಿದ್ದ ವಿದ್ಯಾರ್ಥಿಗಳಿಗೆ ‘ಉಚಿತ ಲ್ಯಾಪ್‌ಟಾಪ್’ ಯೋಜನೆಯನ್ನು ತಂದರು. ಇದರಿಂದ ಮೀಸಲಾತಿಯಿಲ್ಲದೇ, ಬಿಕ್ಕಿ ಬಿಕ್ಕಿ ಅತ್ತು ಹೊರನಡೆಯುವಂತಾದ ಒಕ್ಕಲಿಗ ಹುಡುಗರ ನೋವು ಈ ಪ್ರಗತಿಪರರಿಗೆ ಅರ್ಥವಾದೀತಾ? ತೆರಿಗೆಗಳನ್ನು ಕಟ್ಟುವಾಗ ಮಾತ್ರ ಮೀಸಲಾತಿಯಿಲ್ಲ. ಎಲ್ಲರೂ ಸಹ ಒಂದೇ ರೀತಿಯ ತೆರಿಗೆಯನ್ನು ಕಟ್ಟಲೇಬೇಕು. ಆದರೆ ಸವಲತ್ತಿನಲ್ಲಿ ಮಾತ್ರ ಮೇಲು-ಕೀಳೆಂಬ ಭೇದ ಭಾವ.

ಮೀಸಲಾತಿ ಇಲ್ಲದ ಹುಡುಗನ ತಂದೆ ತಾನು ತೆರಿಗೆಯನ್ನು ಕಟ್ಟಿ, ತನ್ನ ಮಗನ ಬೀದಿ ಬೀದಿ ಅಲೆದಾಡಬೇಕು. ಇದು ನಮ್ಮ ದೇಶದ ಇಂದಿನ ಪರಿಸ್ಥಿತಿ. ಕೇವಲ ಹಣವನ್ನು ನೀಡುವುದಕ್ಕಾಗಿ ಮಾತ್ರ ಮೇಲ್ವರ್ಗದವರನ್ನು ಬಳಸಿಕೊಂಡಿದ್ದು, ಅವರ ಬಳಿಯೇ ಕೋಟ್ಯಂತರ ವ್ಯವಹಾರಗಳು ನಡೆಯುವ ಕಾರಣ ಎಂದು ಜಾಣತನದಿಂದ ವಾದಿಸುವವರಿಗೆ ತಿಳಿಯದ ಜ್ಞಾನವೆಂದರೆ, ಯಾವಾಗ ಕೆಳ ವರ್ಗದವರಿಗೆ ಉದ್ಯೋಗದಲ್ಲಿ ಮೀಸಲಾತಿ ಸಿಕ್ಕಿತೋ, ಅವರೆಲ್ಲರೂ ಕೇವಲ ಉದ್ಯೋಗವನ್ನಷ್ಟೇ ಆರಿಸಿಕೊಂಡರು. ಇದರಿಂದ ಅವರಿಗೆ ವ್ಯವಹಾರದೆಡೆಗೆ ತೆರಳಬೇಕಾದ ಅನಿವಾರ್ಯ ಪರಿಸ್ಥಿತಿ ಬರಲೇ ಇಲ್ಲ.

ಅತ್ತ ಮೇಲ್ವರ್ಗದವರಿಗೆ ವ್ಯಾಪಾರ ಮಾಡುವುದು ಅನಿವಾರ್ಯವಾಯಿತು. ಯಾಕೆಂದರೆ ಎಷ್ಟೇ ಓದಿದರೂ, ಉದ್ಯೋಗದಲ್ಲಿ ಮೀಸಲಾತಿಯೇ ಇಲ್ಲ. ಅದಕ್ಕೆ ಗುಜರಾತಿಗಳು, ಮಾರ್ವಾಡಿಗಳು, ಬನಿಯಾಗಳು, ವೈಶ್ಯರು, ಜಾಟರು ವ್ಯಾಪಾರದಲ್ಲಿ ಈ ಮಟ್ಟಿಗೆ ಬೆಳೆದದ್ದು. ಅದಕ್ಕೆ ಕಾರಣರಾದವರೇ ಇಂದು, ‘ಅಯ್ಯೋ, ಅಂಬಾನಿ, ಅದಾನಿ’ ಎಂದು ನೆಲದ ಮೇಲೆ ಬಿದ್ದು ಉರುಳಾಡುತ್ತಿದ್ದಾರೆ. ಪಾಪ, ಬ್ರಾಹ್ಮಣರಿಗೆ ಅತ್ತ ವ್ಯಾಪಾರ ಗೊತ್ತಿಲ್ಲ, ಇತ್ತ ಉದ್ಯೋಗವೂ ಇಲ್ಲ. ಕೊನೆಗೆ ಉಳಿದದ್ದು ಒಂದೇ. ಅದು ಪೌರೋಹಿತ್ಯ. ಅದನ್ನೇ ಮಾಡಿಕೊಂಡು ಬಂದರು. ಇದರ ಜತೆಗೆ ಪತ್ರಿಕೋದ್ಯಮದಲ್ಲಿ ಮೀಸಲಾತಿ ಇಲ್ಲದ ಕಾರಣ, ಕಳೆದ ದಶಕದಲ್ಲಿ ಹವ್ಯಕ ಸಮುದಾಯದವರು ಪತ್ರಿಕೋದ್ಯಮದಲ್ಲಿ ಮುಂಚೂಣಿಗೆ ಬಂದರು, ಸ್ವ ಸಾಮರ್ಥ್ಯದಿಂದ ಬೆಳೆದರು. ಅವರ್ಯಾರೂ ಶೇ.60ರಷ್ಟು ಅಂಕ ಪಡೆದು ಮೀಸಲಾತಿಯಿಂದ ಪತ್ರಿಕೋದ್ಯಮಕ್ಕೆ ಬಂದವರಲ್ಲ. ಹೀಗಿದ್ದರೂ, ಯಾಕೋ ಏನೋ, ಈ ಪ್ರಗತಿಪರರ ಕಣ್ಣು ಈಗ ಅವರ ಮೇಲೆ ಬಿದ್ದಂತೆ ಕಾಣುತ್ತದೆ.

ಇಷ್ಟೆಲ್ಲ ಕಥೆ ಬರೆದರೂ ಸಹ ಯಾಕೋ, ಏನೋ ಮೀಸಲಾತಿ ವಿಚಾರ ಇಷ್ಟು ಬೇಗ ಮುಗಿಯುವಂತೆ ಕಾಣುತ್ತಿಲ್ಲ. ನಿಜವಾದ ಪ್ರಗತಿಯಾಗಬೇಕಾದರೆ, ಮೀಸಲಾತಿ ತೆಗೆಯಬೇಕು. ಇಲ್ಲದಿದ್ದರೆ ಎಲ್ಲರಿಗೂ ಅವಕಾಶವನ್ನು ಅವರ ಬಡತನದ ಆಧಾರದ ನೀಡಬೇಕು. ಈ ವಿಷಯದಲ್ಲಿ ಒಂದು ದೃಢ ನಿರ್ಧಾರವೊಂದು ಬೇಕಿತ್ತು. ಆ ಸಮಯವೂ ಈಗ ಬಂದಿದೆ. ಕೇವಲ 72 ಗಂಟೆಯಲ್ಲಿ ಇಡೀ ದೇಶವೇ ಒಮ್ಮೆ ಸುಸ್ತಾಗಿ ನೋಡಿದಂತಹ ಐತಿಹಾಸಿಕ ನಿರ್ಧಾರವೊಂದು ಈ ಮೀಸಲಾತಿಯ ವಿಚಾರದಲ್ಲಿ ಹೊರಬಿತ್ತು.

ಜಾತಿಭೇದವಿಲ್ಲದೇ, ಕೇವಲ ಬಡತನದ ಆಧಾರದ ಮೇಲೆ ವರ್ಷಕ್ಕೆ ಎಂಟು ಲಕ್ಷರು.ಕ್ಕಿಂತಲೂ ಕಡಿಮೆ ಆದಾಯ ಹಾಗೂ ಐದು ಎಕರೆಗಿಂತಲೂ ಕಡಿಮೆ ಕೃಷಿ ಭೂಮಿ ಇರುವ, ಒಂದು ಸಾವಿರ ಅಡಿಗಿಂತಲೂ ಕಡಿಮೆ ಇರುವ ಮನೆಯಲ್ಲಿ ವಾಸಿಸುತ್ತಿರುವ ಕಾಲೇಜು ಹಾಗೂ ಉದ್ಯೋಗದಲ್ಲಿ ಶೇ.10ರಷ್ಟು ಮೀಸಲಾತಿ ನೀಡಬೇಕೆಂಬ ಸಂವಿಧಾನದ ತಿದ್ದುಪಡಿಯನ್ನು ಕೇಂದ್ರ ಸರಕಾರ ಮಂಡಿಸಿದೆ.

ಬಿಸಿ ತುಪ್ಪದಂತಿದ್ದ ಈ ನಿರ್ಧಾರವನ್ನು ವಿರೋಧ ಪಕ್ಷಗಳು ವಿಧಿಯಿಲ್ಲದೇ ಬೆಂಬಲಿಸಲೇ ಬೇಕಾದಂತಹ ಪರಿಸ್ಥಿತಿ ಉಂಟಾಯಿತು. ಇದನ್ನು ಈ ಶತಮಾನದ ಐತಿಹಾಸಿಕ ನಿರ್ಣಯವೆಂದು ಬಿಂಬಿಸಲಾಗಿದೆ. ಗುಜರಾತಿನಲ್ಲಿ ಇದೇ ಪಟೇಲರ ಹೋರಾಟದಿಂದ ತನ್ನ ಸ್ಥಾನಗಳನ್ನು ಕಳೆದುಕೊಂಡಿದ್ದ ಬಿಜೆಪಿಗಿಂತಲೂ, ಅದರಿಂದಾಗಿ ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್‌ಗೆ ಈ ವಿಚಾರದಲ್ಲಿ ಸರಿಯಾದ ಬತ್ತಿಯನ್ನು ಇಟ್ಟಾಗಿತ್ತು. ಪಾಪ, ಹಾರ್ದಿಕ್ ಪಟೇಲ್‌ಗೆ ಇನ್ನು ಏನೂ ಉಳಿದಿಲ್ಲ ಅನಿಸುತ್ತದೆ. ಆತ ಮುಂದೆ ಬ್ರಾಹ್ಮಣರ ಪರ ಹೋರಾಡಬೇಕಷ್ಟೇ.

ಈ ಒಂದೇ ಒಂದು ನಿರ್ಧಾರದಿಂದ ಕೇವಲ ರಾಜಕೀಯವಾಗಿ ಲಾಭವಾಗಿದ್ದರೂ, ಸಹ ದೇಶದ ಪ್ರಗತಿಯಲ್ಲಿ ಅದು ಅತ್ಯಂತ ಮಹತ್ವದ ಪಾತ್ರವಹಿಸುವುದರಲ್ಲಿ ಯಾವ ಸಂಶಯವೂ ಇಲ್ಲ. ರಾಜಕೀಯವಾಗಿ ಹೇಳುವುದಾದರೆ, ಶೇ.22ರಷ್ಟು ಮೇಲ್ವರ್ಗದ ಜಾತಿಗಳಾದ, ರಾಜಸ್ಥಾನದ ಜಾಟ್, ಉತ್ತರ ಪ್ರದೇಶದ ಬನಿಯಾ, ಗುಜರಾತಿನ ಪಾಟಿದಾರ್, ಮಾರವಾಡ್, ಲಿಂಗಾಯಿತ, ಒಕ್ಕಲಿಗ.. ಎಲ್ಲರ ವೋಟನ್ನು ಒಂದೆಡೆ ಸೇರಿಸಿದಂತಾಯಿತು. ಖಂಡಿತವಾಗಿಯೂ, ಕಾಂಗ್ರೆಸ್ ಹಾಗೂ ಇತರ ವಿರೋಧ ಬಹುದೊಡ್ಡ ಮತದಾರರ ಗುಂಪುಗಳು ರಾಜಸ್ಥಾನ, ಗುಜರಾತ್ ಹಾಗೂ ಉ.ಪ್ರದೇಶದಲ್ಲಿ ಮೋದಿಯ ಕೈಹಿಡಿಯುವುದರಲ್ಲಿ ಯಾವುದೇ ಸಂಶಯವಿಲ್ಲ.

ಈ ನಿರ್ಣಯದಿಂದಾಗಿ ಉ.ಪ್ರದೇಶದಲ್ಲಿ ಸೈಕಲ್ ರಿಕ್ಷಾ ಓಡಿಸುವವನು ಖುಷಿ ಪಡುತ್ತಾನೆಂದರೆ, ಒಬ್ಬ ಮೇಲ್ವರ್ಗದವರ ಪರಿಸ್ಥಿತಿ ಪಾಪ ಯಾವ ಮಟ್ಟಕ್ಕೆ ಇಳಿದಿರಬೇಕು ಅಲ್ಲವೇ? ನಮ್ಮದೇ ರಾಜ್ಯದ ಲಿಂಗಾಯಿತ ರೈತರು, ಖಾನಾವಳಿಯವರು ಖುಷಿ ಪಡುತ್ತಾರೆಂದರೆ, ಅವರ ಸಂತಸಕ್ಕೆ ಎಷ್ಟು ಬೆಲೆ ಕಟ್ಟಿದರೂ ಸಾಲದು. ಮೇಲ್ವರ್ಗದ ಬಡವರಿಗೂ ಮೀಸಲು ಕಲ್ಪಿಸುವುದರಿಂದ ಭಾರತದಲ್ಲಿ ಈಗ ಖಾಲಿಯಿರುವ ಸುಮಾರು 24 ಹುದ್ದೆಗಳು ಭರ್ತಿಯಾಗುತ್ತವೆಂದು ಅಂದಾಜಿಸಲಾಗಿದೆ.
ಟಿವಿ ಚಾನೆಲ್‌ಗಳಲ್ಲಿ ಕೆಲವರ ವಾದಗಳನ್ನು ನೋಡುತ್ತಿದ್ದೆ. ಒಂದು ವಾದದ ಪ್ರಕಾರ ದೇಶದ 95 ಕೋಟಿ ಜನರು ಈ ಮೀಸಲಾತಿಗೆ ಅರ್ಹರಾಗಿರುತ್ತಾರೆ, ಅಷ್ಟು ಜನರಿಗೆ ಎಲ್ಲಿಂದ ನೀಡುವುದು? ಇದರಿಂದ ಏನೂ ಪ್ರಯೋಜನವಿಲ್ಲ ಎಂದರು, ಕೆಲವರು. ರೀ ಸ್ವಾಮಿ, ಆ 95 ಕೋಟಿ ಜನರಲ್ಲಿ ಈಗಾಗಲೇ ಇದ್ದ 49.5%ರಷ್ಟು ಮೀಸಲಾತಿಯಲ್ಲಿಯೇ ಹಲವರಿಗೆ ಜಾಗವಿದೆ.
ಈ 10% ಮೀಸಲಾತಿಯೂ ಎಲ್ಲಿಯೂ ಮೀಸಲಾತಿ ಇಲ್ಲದವರಿಗೆ ಮಾತ್ರವೇ ಸೀಮಿತವಾಗಿರಬೇಕು. ಈಗಿರುವ ಮೀಸಲಾತಿಯಲ್ಲಿ ಈ 10%ರಲ್ಲಿ ಅರ್ಜಿ ಹಾಕಬೇಕೆಂದು ಎಲ್ಲಿಯೂ ಹೇಳಿಲ್ಲ. ಈಗ ತಾನೆ ಪ್ರಸ್ತಾವನೆಗೆ ಎಲ್ಲರ ಒಪ್ಪಿಗೆ ಬಂದಿದೆ. ಮುಂದಿನ ದಿನಗಳಲ್ಲಿ ಇವೆಲ್ಲ ಪ್ರಶ್ನೆಗಳಿಗೂ ಉತ್ತರ ಸಿಗುತ್ತದೆ. ಅಷ್ಟರಲ್ಲಿ ಆತುರಕ್ಕೆ ಬಿದ್ದು ಜನರ ತಲೆಯನ್ನು ಹಾಳು ಮಾಡಬಾರದು. ವೋಟಿಗೋಸ್ಕರ ಕೇವಲ ಟೆಂಪಲ್ ರನ್ ಮಾಡಿ, ಗೂಗಲ್‌ನಲ್ಲಿ ಯಾವುದೋ ಗೋತ್ರ ಹುಡುಕಿ, ಹೆಸರಿಗೆ ಅಂಟಿಸಿಕೊಂಡರೆ ಸಾಲದು. ಪಾಪ, ಟೆಂಪಲ್‌ಗಳಲ್ಲಿ ಪೂಜೆ ಮಾಡುತ್ತಿರುವವರ ಜೀವನ ಪರಿಸ್ಥಿತಿ ಏನಾಗಿದೆಯೆಂಬುದು ತಿಳಿದು ರಾಜಕೀಯ ಮಾಡಬೇಕು.

ಕಾಲ ಬದಲಾಗಿದೆ. ತಿದ್ದುಪಡಿ ಮಾಡಿದರೆ ರಕ್ತಪಾತವಾಗುತ್ತದೆಯೆಂದೆಲ್ಲ ಬಾಯಿ ಬಡಿದುಕೊಂಡವರೇ, ಪಾಪ ಐತಿಹಾಸಿಕ ನಿರ್ಣಯಕ್ಕೆ ಬೆಂಬಲಿಸಿದ್ದಾರೆ. ಈ ಬದಲಾವಣೆಯಿಂದ ಮುಂದಿನ ದಿನಗಳಲ್ಲಿ ಭಾರತವು ಪ್ರಗತಿಯಲ್ಲಿ ದಾಪುಗಾಲು ಇಡುತ್ತದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ನೆನಪಿರಲಿ, ರಾಜಕೀಯವಾಗಿ ಮೋದಿ, ವಾಜಪೇಯಿಯಷ್ಟು ಸುಲಭದವರಲ್ಲ.

Tags

Related Articles

Leave a Reply

Your email address will not be published. Required fields are marked *

Language
Close