About Us Advertise with us Be a Reporter E-Paper

ಅಂಕಣಗಳು

ಎಲ್ಲವೂ ಬದಲಾಗುತ್ತಿದೆ, ಬದಲಾಗಲೇಬೇಕು, ಅಮೆರಿಕವೊಂದೇ ಅಲ್ಲ!

- ವಿಶ್ವೇಶ್ವರ್‌ ಭಟ್‌

ಬೆಂಗಳೂರಿನ ಯಾವುದಾದರೂ ಬಡಾವಣೆಗೆ ಆರು ತಿಂಗಳ ನಂತರ ಹೋಗಿ, ಎಷ್ಟೆಲ್ಲ ಬದಲಾವಣೆ ಎಂದೆನಿಸುತ್ತದೆ. ಕೆಲವು ಸಲ ಗುರುತು ಸಿಗದಷ್ಟು ಬದಲಾಗಿರುತ್ತದೆ. ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿ ಬಿಚ್ಚಿದಂತೆನಿಸುತ್ತದೆ. ಕೆಲವು ದಿನಗಳ ಹಿಂದೆ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಮಾರ್ಗದಲ್ಲಿರುವ ಕೊಡಿಗೆಹಳ್ಳಿಗೆ ಅಲ್ಲಿಗೆ ಹೋಗಿ ಮೂರು ವರ್ಷಗಳಾಗಿದ್ದವು. ಊರಿಗೆ ಊರು, ಬಡಾವಣೆಗೆ ಬಡಾವಣೆಯೇ ಬದಲಾಗಿತ್ತು. ಪ್ರಾಯಕ್ಕೆ ಬಂದ ಮಕ್ಕಳಂತೆ ನಮ್ಮ ನಗರಗಳೂ ದಿಢೀರ್ ಅಂತ ಖದರು ಬದಲಿಸಿ ಗುರುತು ಸಿಗದಂತಾಗಿಬಿಡುತ್ತವೆ.

ಈ ವೇಗದ ಜಗತ್ತಿನಲ್ಲಿ ಇಲಿ ಪಾಷಾಣ ಹಾಗೂ ಅದನ್ನು ಒಯ್ಯುವ ತಳ್ಳುಗಾಡಿ ಹೊರತುಪಡಿಸಿ, ಮತ್ತೆಲ್ಲವೂ ಬದಲಾಗಿ ಹೊಸ ರೂಪ ಪಡೆದುಕೊಂಡುಬಿಟ್ಟಿವೆ. ಇಂದು ನಾವು ನಾವಾಗಿರಲು, ನಮ್ಮ ಊರು ಮೊದಲಿನಂತಿರಲು ಸಾಧ್ಯವೇ ಇಲ್ಲ. ಎಲ್ಲವೂ ಬದಲಾವಣೆಯ ಬುಲ್‌ಡೋಜರ್ ಅಡಿ ಸಿಕ್ಕು ಚಚ್ಚಿಚಪ್ಳೆಯಾಗುತ್ತಿವೆ. ತಿಂಗಳು ಬಿಟ್ಟು ದುಬೈಗೆ ಹೋದರೆ, ಹತ್ತಾರು ಗಗನಚುಂಬಿ ಕಟ್ಟಡಗಳು ಆಕಾಶಕ್ಕೆ ಏಣಿ ಹಾಕಿರುತ್ತವೆ. ನಮಗೆ ಬಿಡಿ, ದುಬೈನಲ್ಲಿರುವವರಿಗೇ ಈ ಬದಲಾವಣೆ ಆಶ್ಚರ್ಯ ಹುಟ್ಟಿಸಿರುತ್ತದೆ. ಮೊನ್ನೆ ಬಂದಾಗ ಈ ಕಟ್ಟಡ ಇರಲಿಲ್ಲ, ಇದು ಹೇಗೆ ನಾಯಿಕೊಡೆಯಂತೆ ರಾತ್ರೋರಾತ್ರಿ ತಲೆಯೆತ್ತಿ ನಿಂತಿತು ಎಂಬ ಬೆರಗಿನ ಕೋಲ್ಮಿಂಚು ಹಾದುಹೋಗಿರುತ್ತದೆ.

ಮೊನ್ನೆ ನಾನು ಅಮೆರಿಕಕ್ಕೆ ಹೋಗಿದ್ದೆ. ಅಲ್ಲಿಗೆ ಹೋಗದೇ ಆರೇಳು ವರ್ಷಗಳಾಗಿದ್ದವು. ತಿಂಗಳಲ್ಲಿ ಬದಲಾವಣೆಗಳು ಗುರುತು, ಪರಿಚಯ ಸಿಗದಷ್ಟು ಹಳೆಯ ಬಿಂಬಗಳನ್ನು ಅಳಿಸಿಹಾಕುವಾಗ ಆರೇಳು ಕಾಲದ ಹೊಡೆತದಲ್ಲಿ ಅವೆಷ್ಟು ಬದಲಾವಣೆಗೆ ಆಸ್ಪದ ಸಿಗಬೇಡ?

ಪೊರೆ ಕಳಚಿದ ಹಾವಿನಂತೆ, ಕನ್ನೆತನ ಕಳಕೊಂಡ ತರುಣಿಯಂತೆ, ನಮ್ಮನ್ನೇ ಮರೆಯುವ ಮಾಜಿ ಸಖಿಯಂತೆ, ಗೆಳತಿಯಂತೆ, ಮನೆಯ ಹಾದಿ ಮರೆತ ಸಾಕು ನಾಯಿಯಂತೆ…ಆ ರೀತಿ ಅಮೆರಿಕ ಕಂಡಿದ್ದು ಸುಳ್ಳಲ್ಲ. ಬಾಹ್ಯ ಬದಲಾವಣೆ ಬಿಡಿ, ಒಳಗೊಳಗೇ ಒಂದು ದೇಶ, ಕಾಲ, ಜನ ಬದಲಾವಣೆಯ ಸುನಾಮಿಯ ಹೊಡೆತಕ್ಕೆ ತೇಲಿಹೋಗಿ, ಹಾಗೋ ಹೀಗೋ ಸುರಕ್ಷಿತವಾಗಿ ದಡ ಸೇರಿದಂತಿತ್ತು.

ಬದಲಾವಣೆಯೊಂದೇ ಶಾಶ್ವತವಾದರೂ, ಅದು ತನ್ನ ಚಲನಶೀಲತೆಯ ಗತಿಯನ್ನು ಕ್ಷಿಪ್ರವಾಗಿ ಒಯ್ಯುತ್ತದೆಂಬುದು ನಾವು ಅದಕ್ಕೆ ನೀಡುವ ಪ್ರತಿಕ್ರಿಯೆಯನ್ನು ಅವಲಂಬಿಸಿರುತ್ತದೆ. ಕೆಲವು ಬದಲಾವಣೆಗಳು ಕಣ್ಣಿಗೆ ಕಾಣುವುದಿಲ್ಲ. ಕೇವಲ ಅನುಭವಿಸುವಂಥದ್ದು. ಇನ್ನು ಕೆಲವು ನಮ್ಮನ್ನು ತನ್ನ ತೆಕ್ಕೆಗೇ ಬರಸೆಳೆದುಕೊಳ್ಳುವಷ್ಟು ಗಾಢವಾದುದು.

ಉದಾಹರಣೆಗೆ, ಅಮೆರಿಕದ ಜನರಿಗೆ ಅವರ ಸರಕಾರ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಪ್ರತಿಯೊಬ್ಬರಿಗೂ ಸ್ಟಾರ್‌ಬಕ್ಸ್ ಕಾಫಿ ಇರೋದು ಗೊತ್ತು. ಅದು ಪೆಂಟಗಾನ್, ವೈಟ್‌ಹೌಸ್‌ಗಿಂತ ಜನಪ್ರಿಯ. ಯಾವ ಊರಿನ ಯಾವುದೇ ಪ್ರದೇಶಕ್ಕೆ ಹೋಗಿ, ಹಾದಿ-ಬೀದಿ, ಓಣಿಗೆ ಹೋಗಿ ಸ್ಟಾರ್‌ಬಕ್‌ಸ್ ಕಾಫಿ ಕಂಡೇ ಶೇ.82ರಷ್ಟು ಅಮೆರಿಕನ್‌ರು ಪ್ರತಿದಿನ ಕನಿಷ್ಠ ಒಂದು ಸಲವಾದರೂ, ಸ್ಟಾರ್‌ಬಕ್‌ಸ್ಗೆ ಹೋಗುತ್ತಾರಂತೆ. ಏನಿಲ್ಲವೆಂದರೂ ಸರಾಸರಿ ನಾಲ್ಕು ಡಾಲರ್ ಖರ್ಚು ಮಾಡುತ್ತಾರಂತೆ. ಸ್ಟಾರ್‌ಬಕ್‌ಸ್ಗೆ ಹೋಗುವವರು ತಮ್ಮ ಕಪ್‌ಗಳನ್ನು ಮನೆಯಿಂದಲೇ ತೆಗೆದುಕೊಂಡು ಹೋಗಿ, ಪರಿಸರದ ಮೇಲಿನ ಒತ್ತಡ ಕಡಿಮೆ ಎಂದು ಪರಿಸರವಾದಿಗಳು ಹೋರಾಟ ಮಾಡುವ ದಿನಗಳು ದೂರವಿಲ್ಲ. ಸ್ಟಾರ್‌ಬಕ್ಸ್ ಆ ರೀತಿ ಅಮೆರಿಕವನ್ನು ಆವರಿಸಿಬಿಟ್ಟಿದೆ. ಅದು ಮೆಕ್‌ಡೊನಾಲ್‌ಡ್ ಬರ್ಗರ್‌ನ್ನೂ ಮೀರಿಸಿಬಿಟ್ಟಿದೆ. ಸ್ಟಾರ್‌ಬಕ್ಸ್ ಫ್ರೆಂಚೈಸಿ ತೆಗೆದುಕೊಂಡು ಕೈ ಸುಟ್ಟುಕೊಂಡವರಿಲ್ಲವಂತೆ. ಅಮೆರಿಕದ ಜನಜೀವನದಲ್ಲಿ ಸ್ಟಾರ್‌ಬಕ್ಸ್ ಅಷ್ಟೊಂದು ಹಾಸುಹೊಕ್ಕಾಗಿದೆ.

ಒಂದು ಕಾಲವಿತ್ತು. ಪೋಲಿ, ಪೋರ್ಕಿಗಳು ಹಚ್ಚೆ (tattoo) ಹಾಕಿಸಿಕೊಳ್ಳುತ್ತಿದ್ದರು. ತೋಳಿನ ಮೇಲೆ, ಭುಜದ ಮೇಲೆ ಪಾತರಗಿತ್ತಿ, ಚೈನೀಸ್ ಅಕ್ಷರ, ಬುಡುಕಟ್ಟು ಜನಾಂಗದ ದೇವತೆ ಚಿತ್ರಗಳನ್ನು ಹಚ್ಚೆ ಹಾಕಿಸಿಕೊಳ್ಳುತ್ತಿದ್ದರು. ಅದು ಪರ್ಯಾಯ ಸಂಸ್ಕೃತಿ ಅಥವಾ ಬಂಡಾಯ ಮನೋಧರ್ಮದ ಅಭಿವ್ಯಕ್ತಿ ಎಂದು ಕರೆಯಿಸಿಕೊಳ್ಳುತ್ತಿತ್ತು. ಈಗ ಹಚ್ಚೆ ಎಷ್ಟು ಸಾಮಾನ್ಯವಾಗಿದೆಯೆಂದರೆ, ಹುಟ್ಟುವಾಗಲೇ ಹಾಗೇ ಬರುತ್ತಾರೋ ಎಂದೆನಿಸುವಷ್ಟು.

ಐದಾರು ತಿಂಗಳ ಮಗುವಿಗೂ ಹಚ್ಚೆ ಹಾಕುತ್ತಾರೆ. ಮೈ, ಕೈ, ಮುಖ ಹಾಗೂ ಇಡೀ ದೇಹಕ್ಕೆ ಹಚ್ಚೆ ಸಾಮಾನ್ಯ. ಒಬ್ಬ ವ್ಯಕ್ತಿಯ ಗುಣ, ಲಕ್ಷಣ, ವ್ಯಕ್ತಿತ್ವ, ಅಭಿರುಚಿಯನ್ನು ಹಚ್ಚೆಯಿಂದಲೇ ಗುರುತಿಸಬಹುದು. ಮೊದಲು ಮಚ್ಚೆ (Mole) ಯಿಂದಲೇ ವ್ಯಕ್ತಿಯ ಗುರುತನ್ನು ಹೇಳುತ್ತಿದ್ದರು. ಈಗ ಮಚ್ಚೆಯನ್ನೇ ಮುಚ್ಚುವಷ್ಟು ಹಚ್ಚೆ ಹಾಕಿಸಿಕೊಳ್ಳುವುದು ತೀರಾ ಸಾಮಾನ್ಯ. ಮಧ್ಯ ವಯಸ್ಕರು, ವೃದ್ಧರೂ ಈ ಖಯಾಲಿಗೆ ಬಿದ್ದಿದ್ದಾರೆ. ಅಮೆರಿಕದಲ್ಲಿ ಎಲ್ಲಿ ನೋಡಿದರೂ ‘ಹಚ್ಚೆ ದಿನ್’! ಅದು ಈಗ ಬಂಡಾಯ ಅಥವಾ ಉಪಸಂಸ್ಕೃತಿ ಅಲ್ಲವೇ ಅಲ್ಲ.

ಸೂಟು, ಬೂಟು, ಟೈ ಧರಿಸಿ ಠಾಕು-ಠೀಕಾಗಿ ಬರುತ್ತಿದ್ದವರೆಲ್ಲ ಎಲ್ಲಿ ಹೋದರೋ? ಯಾರೂ ಇನ್‌ಶರ್ಟ್ (Untuck) ಮಾಡುವುದಿಲ್ಲ. ಬಿಲಿಯನೇರ್‌ಗಳೂ ಜೀನ್‌ಸ್ ಧರಿಸಿಯೇ ಆಫೀಸಿಗೆ ಬರುತ್ತಾರೆ. ಅಮೆರಿಕ ಅಧ್ಯಕ್ಷ ಹಾಗೂ ಟಿವಿ ಆ್ಯಂಕರ್‌ಗಳು ಮಾತ್ರ ಇನ್ನೂ ಟೈ-ಕೋಟು ಧರಿಸುತ್ತಿದ್ದಾರೆ. ಅಮೆರಿಕದಲ್ಲಿ ವರ್ಗರಹಿತ ಸಮಾಜವನ್ನು ಹೊಡೆದು ಹಾಕಿದ್ದು ಮಾತ್ರ ಜೀನ್‌ಸ್. ಜಗತ್ತಿನ ಅತ್ಯಂತ ಜನಪ್ರಿಯ ಹಾಗೂ ಸರ್ವಪರಿಚಿತ ಸಿಇಒ ಎಂದೇ ಮಾನ್ಯನಾದ ಆ್ಯಪಲ್ ಕಂಪನಿಯ ಸ್ಟೀವ್ ಜಾಬ್ಸ್ ಸದಾ ಜೀನ್ಸ್ ಮತ್ತು ಟರ್ಟಲ್‌ನೆಕ್ ಟೀ-ಶರ್ಟ್ ಧರಿಸಿ ಬಹುರಾಷ್ಟ್ರೀಯ ಕಂಪನಿಗಳ ಆಫೀಸುಗಳ ಖದರನ್ನೇ ಬದಲಿಸಿಬಿಟ್ಟ.

ಈಗ ಕಾರ್ಮಿಕರು ಮಾತ್ರ ಯೂನಿಫಾರ್ಮ್ ಧರಿಸುತ್ತಾರೆ. ನೀವು ಎಂಥ ದುಬಾರಿ ಬಟ್ಟೆ ಧರಿಸಿ ಹೋಗಿ ಯಾರೂ ಕ್ಯಾರೇ ಮಾಡುವುದಿಲ್ಲ. ಬ್ರಾಂಡೆಡ್ ಬಟ್ಟೆಗಳು ಮಾತ್ರ ಕಣ್ಣಿಗೆ ಬಿದ್ದೀತು. ಯಾರೂ ಸಹ ಎದ್ದು ಕಾಣುವಂತೆ ಬಂಗಾರ ಧರಿಸುವುದಿಲ್ಲ. ರಿಯಲ್ ಎಸ್ಟೇಟ್ ಉದ್ಯಮದಲ್ಲಿರುವವರೂ. ಹದಿನೈದು ದಿನವಿದ್ದರೂ ಕುತ್ತಿಗೆ ತುಂಬಾ ಆಭರಣ ಧರಿಸಿದ ಒಬ್ಬೇ ಒಬ್ಬಳು ಹೆಣ್ಣುಮಗಳು ಕಣ್ಣಿಗೆ ಬೀಳಲಿಲ್ಲ. ನೀವು ಬಟ್ಟೆ ಧರಿಸಿ ಅಥವಾ ಧರಿಸದೇ ಇರಿ, ಯಾರೂ ನಿಮ್ಮನ್ನೂ ನೋಡುವುದೂ ಇಲ್ಲ. ನಿಮ್ಮ ಯಾರಿಗೂ ಇಲ್ಲವೆಂದಮೇಲೆ ನೀವು ಹೇಗಿದ್ದರೇನಂತೆ. I don’t care ಅಥವಾ Who cares.

ಪ್ರಸಿದ್ಧ ವ್ಯಕ್ತಿ, ಸಿಲಬ್ರಿಟಿಗಳು ಸಿಕ್ಕಾಗ ‘ಆಟೋಗ್ರಾಫ್ ಪ್ಲೀಸ್’ ಎಂದು ಸಹಿ ಪಡೆಯುತ್ತಿದ್ದ ಕಾಲವಿತ್ತು. ಈಗ ಯಾರೂ ಆಟೋಗ್ರಾಫ್‌ಗಾಗಿ ಹಸ್ತ ಚಾಚುವುದಿಲ್ಲ. ಸೆಲ್ಫಿಯೇ ಆಟೋಗ್ರಾಫ್. ಎಲ್ಲರ ಕೈಯಲ್ಲೂ ಸ್ಮಾರ್ಟ್‌ಫೋನ್. ಅದೊಂದಿದ್ದರೆ ಜಗತ್ತೇ ಕೈಯಲ್ಲಿ. ಪ್ರತಿಯೊಂದು ಆ್ಯಪ್(ಅ)ಮಯ. ಮಕ್ಕಳಿಗೆ ಹೆಸರು ಇಡುವುದರಿಂದ, ಸತ್ತಾಗ ಶವಪೆಟ್ಟಿಗೆ ವ್ಯವಸ್ಥೆ ಮಾಡುವ ತನಕ ಎಲ್ಲವೂ ಆ್ಯಪ್! ಇಂಗ್ಲಿಷ್ ಗೊತ್ತಿಲ್ಲದ, ಚೀನಿ ಭಾಷೆ ಬಲ್ಲ ಚೀನಾ ದೇಶದವ ಅಮೆರಿಕದಲ್ಲಿ ಟ್ಯಾಕ್ಸಿ ಡ್ರೈವರ್ ಆಗಿ ಬದುಕಬಹುದು.Thanks to Google translator. ಇಂಟರ್‌ನ್ಯಾಶನಲ್ ಡ್ರೈವಿಂಗ್ ಲೈಸೆನ್ಸ್ ಇದ್ದರೆ, ಅಮೆರಿಕವನ್ನೇ ನೋಡದ ನಮ್ಮೂರ ಜಬ್ಬಾರ್‌ಸಾಬಿ ಕೂಡ ನ್ಯೂಯಾರ್ಕಿನ ಮ್ಯಾನ್ಹಟನ್‌ನಲ್ಲಿ ಸಲೀಸಾಗಿ ಕಾರು ಓಡಿಸಿಕೊಂಡು ಹೋಗಬಹುದು.Thanks to Google Maps ಹಾಗೂ ಜಿಪಿಎಸ್.

ಅಮೆರಿಕದ ಸೆರೆಮನೆಯಲ್ಲಿ ಅಷ್ಟೊಂದು ಕಟ್ಟುನಿಟ್ಟಿಲ್ಲ. ಆದರೆ ಅಲ್ಲಿನ ವಿಮಾನ ನಿಲ್ದಾಣದಲ್ಲಿದೆ. 9/11ರ ಉಗ್ರರ ದಾಳಿಯ ನಂತರ, ಪ್ರತಿ ವಿಮಾನ ನಿಲ್ದಾಣವೂ ಸೆರೆಮನೆಗಿಂತ ಕಠೋರ. ಬೂಟು, ಬೆಲ್ಟ್ ಬಿಚ್ಚದೇ ಗತಿಯಿಲ್ಲ. ಸ್ವಲ್ಪ ಸಂದೇಹ ಬಂದರೆ ಬಟ್ಟೆಯನ್ನೂ ಬಿಚ್ಚಬೇಕು. ಅಮೆರಿಕದ ಭದ್ರತಾ ಅಧಿಕಾರಿ, ಸೆಕ್ಯುರಿಟಿ ವಿಷಯದಲ್ಲಿ ಸ್ವತಃ ತನ್ನ ತಾಯಿಯನ್ನೂ ನಂಬಲಾರ. ಸತ್ತೇ ಹೋಗ್ತೇನೆ ಅಂದರೂ ಸೆಕ್ಯುರಿಟಿ ಚೆಕ್ ಕೌಂಟರ್‌ನಲ್ಲಿ ನೀರಿನ ಬಾಟಲಿ ಬಿಡುವುದಿಲ್ಲ. ಈ ಹಂತದಲ್ಲಿ ಆತ ನಂಬೋದು ನಿಮ್ಮನಲ್ಲ, ಮಶೀನ್‌ನ್ನು. ಮಶೀನ್ ಕುಂಯ್, ಕುಂಯ್ ಎಂದು ಸದ್ದು ಮಾಡಿದರೆ, ಹತ್ತು ಸಲ ವಾಪಸ್ ಕಳಿಸುತ್ತಾನೆ. ಮೆಟೆಲ್ ಡಿಟೆಕ್ಟರ್‌ನೊಳಗೆ ಹಾದು ಬರುವಾಗ ಅದು

ಬ್ಲ್ಯಾಕ್‌ಬೆರಿ, ಆ್ಯಪಲ್‌ಗಳೆಲ್ಲ ಹಣ್ಣುಗಳ ಹೆಸರುಗಳಲ್ಲ ಎಂಬುದು ಸಾಬೀತಾಗಿ ಎಷ್ಟೋ ವರ್ಷಗಳಾಗಿ ಹೋದವು. ಗೂಗಲ್, ಫೇಸ್‌ಬುಕ್, ಟ್ವಿಟರ್, ಸ್ನ್ಯಾಪ್‌ಚಾಟ್‌ಗಳಿಲ್ಲದೇ ಬದುಕು ಬೋರೋ ಬೋರು. ನಾನು ಹೇಗೆ ಕಾಣಿಸುತ್ತೇನೆ ಎಂದು ಕನ್ನಡಿ ಅಥವಾ ಫೋಟೊ ಆಲ್ಬಮ್ ನೋಡೋದಕ್ಕಿಂತ ಇನ್‌ಸ್ಟಾಗ್ರಾಮ್‌ನಲ್ಲಿ ನೋಡಿಕೊಳ್ಳೋದೇ ಹೆಚ್ಚು.

‘ಇಮೇಲ್ ಮಾಡ್ತೇನೆ ಅಥವಾ ಇಮೇಲ್ ಮಾಡು’ ಅಂದರೆ ಇನ್ನೂ ಯಾವ ಜಮಾನದಲ್ಲಿ ಇದ್ದಾನೆಂದು ಭಾವಿಸಬಹುದು. ಎಸ್ಸೆಮ್ಮೆಸ್ ಆಯುಷ್ಯ ತೀರಿ ಹೋಗಿದೆ. ಇಮೇಲ್‌ಗೆ ವಯಸ್ಸಾಯ್ತು. ಈಗೇನಿದ್ದರೂ ವಾಟ್ಸಪ್. ಸೂರ್ಯ ಮುಳುಗಿದರೆ, ಚಲಿಸುವುದನ್ನುಕೆಲ ಕಾಲ ನಿಲ್ಲಿಸಿದರೆ ಜನ ತಲೆಕೆಡಿಸಿಕೊಳ್ಳುವುದಿಲ್ಲ. ವಾಟ್ಸಪ್ ಸರ್ವರ್ ಡೌನ್ ಆದರೆ ಪ್ರಳಯ ಸಮಾನ! ಜಗತ್ತು ರಿಯಲ್‌ಟೈಮ್‌ನಲ್ಲಿರುವುದೇ ವಾಟ್ಸಪ್ ಮೂಲಕ.

ಮದುವೆ ಎಂಬುದು ಅಪ್ಪ-ಅಮ್ಮನ ಕಾಲಕ್ಕೇ ಮುಗಿದುಹೋದ ವ್ಯವಹಾರ. ಮದುವೆ ಮಾಡಿಸುವುದನ್ನೇ ಮುಖ್ಯ ಕಸುಬು ಮಾಡಿಕೊಂಡಿದ್ದ ರೋಮನ್ ಕ್ಯಾಥೊಲಿಕ್ ಚರ್ಚ್‌ಗಳಿಗೆ ಕಾಸು ಗಿಟ್ಟುತ್ತಿಲ್ಲ. ದಿನಕ್ಕೆ ಒಬ್ಬ ಗಂಡು-ಹೆಣ್ಣು ಮದುವೆಯಾಗುತ್ತೇವೆಂದು ಮುಂದೆ ಬರುತ್ತಿಲ್ಲ. ಮದುವೆ, ಮಕ್ಕಳು, ಸಂಸಾರ, ಕುಟುಂಬ…ಯಾರಿಗೆ ಟೈಮಿದೆ. ಸಂಯಮವಿದೆ. ಅವೆಲ್ಲವೂ outdated. ಹುಡುಗ-ಹುಡುಗ, ಹುಡುಗಿ-ಹುಡುಗಿ ಸಂಸಾರ ಮಾಡುವುದು ಈಗ ಹೊಸ ಟ್ರೆಂಡ್ ಅಲ್ಲ, ಆದರೆ ಆ ದಾಂಪತ್ಯದಲ್ಲಿ ವಿಚ್ಛೇದನ!

ಪತ್ರಕರ್ತರ ನೀತಿ, ಸಿದ್ಧಾಂತ, ನೀತಿ ಸಂಹಿತೆ, ವಿಶ್ವಾಸಾರ್ಹತೆ, ಪತ್ರಿಕಾಸ್ವಾತಂತ್ರ್ಯ, ಮುಕ್ತವಿಚಾರ ಮಂಡನೆಗೆಲ್ಲ ಅರ್ಥ ಅಡಸಲು ಬಡಸಲು. ದಿ ಸ್ಮೋಕಿಂಗ್ ಗನ್, ವಿಕಿಲೀಕ್‌ಸ್ನಂಥ ಸಾವಿರಾರು ಡಿಜಿಟಲ್ ಮೂಲಗಳು ಸುದ್ದಿ ಹಾಗೂ ಮಾಹಿತಿಯನ್ನು ಕ್ಷಣಕ್ಷಣಕ್ಕೂ ಪೂರೈಸುತ್ತಿರುವುದರಿಂದ ಪತ್ರಕರ್ತರ ವಿಷಯದಲ್ಲಿ ಆಗಾಗ ಬಳಸುವ objectivityಗೆ ಅರ್ಥವೇ ಇಲ್ಲದಂತಾಗಿದೆ. ಸುದ್ದಿಗಾಗಿ ಯಾರೂ ಪತ್ರಿಕೆ, ಟಿವಿ ಮಾಡುವುದಿಲ್ಲ. ಅವೆರಡೂ ಕೆಲಸವಿಲ್ಲದವರ ಚಟುವಟಿಕೆ. ಮೊಬೈಲ್‌ನಲ್ಲಿ ಲಭ್ಯ. ಇನ್ನು ಸಿನಿಮಾ, ಧಾರಾವಾಹಿಗಳನ್ನು ನೋಡಬೇಕೆಂದರೆ ಯಾರೂ ಟಿವಿ ಚಾನೆಲ್‌ಗಳ ಮೊರೆ ಹೋಗುವುದಿಲ್ಲ. ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಚಂದಾದಾರರಾಗುತ್ತಾರೆ.

ನಿವೃತ್ತಿ, ವೃದ್ಧಾಪ್ಯಗಳಿಗೆಲ್ಲ ವಯಸ್ಸಾಯ್ತು. ಈಗ ವೃದ್ಧರು ನವ ತರುಣರು. ಅರವತ್ತು ವಯಸ್ಸಿಗೆ ಯಾರೂ ಅಜ್ಜ-ಅಜ್ಜಿಯಾಗುವುದಿಲ್ಲ. ಕಾರಣ ಅವರ ಮಕ್ಕಳು ಮದುವೆಯನ್ನೇ ಆಗಿರುವುದಿಲ್ಲ. ಇನ್ನು ಮೊಮ್ಮಕ್ಕಳು ಹುಟ್ಟೋದು ಹೇಗೆ?! ಅರವತ್ತು ವರ್ಷದವರು ಹದಿನೆಂಟು-ಇಪ್ಪತ್ತರ ಹರೆಯದವರಂತೆ ಡ್ರೆಸ್ ಮಾಡುತ್ತಾರೆ. ಕೂದಲಿಗೆ ಬಣ್ಣ ಬಳಿದುಕೊಂಡು ವಯಸ್ಸಿಗೆ ಕಣ್ಣು ಕಟ್ಟುತ್ತಾರೆ. ಫ್ಯಾಶನ್ ಎಂಬುದು ಮಾತ್ರ ಸೀಮಿತವಾದುದ್ದಲ್ಲ. ಅರವತ್ತಕ್ಕಿಂತ ಮೇಲ್ಪಟ್ಟವರು ಹಿಂದೆಂದಿಗಿಂತಲೂ ಕ್ರಿಯಾಶೀಲರಾಗಿದ್ದಾರೆ. ಎಂಬತ್ತಾದವರು ಒಲ್ಲದ ಮನಸ್ಸಿನಿಂದ ವಯಸ್ಸಾಯ್ತು ಎಂಬುದನ್ನು ಒಪ್ಪಿಕೊಳ್ಳುತ್ತಾರೆ.

ಮನುಷ್ಯನಿಗೆ ಕನಿಷ್ಠ ಆಸರೆ ಅಥವಾ ಸೂರು ಇರಬೇಕು ಎಂಬ ಕಾಲವಿತ್ತು. ಅದು ಮೂಲಭೂತ ಅಗತ್ಯವಾಗಿತ್ತು. ಈ ಸಾಲಿಗೆ connectivity ಸೇರಿಕೊಂಡಿದೆ. ವೈಫೈ ಕನೆಕ್ಟಿವಿಟಿ ಇಲ್ಲದಿದ್ದರೆ, ಮೊಬೈಲ್ ನೆಟ್‌ವರ್ಕ್ ಇಲ್ಲದಿದ್ದರೆ ಜೀವನ ದುಸ್ತರ. ಮೊದಲು ಹೋಟೆಲ್‌ಗಳಲ್ಲಿ ಬೆಳಗಿನ ಉಪಾಹಾರ ಉಚಿತವಾಗಿರುತ್ತಿತ್ತು. ಈಗ ಅದಕ್ಕೆ ಹಣ ಪೀಕುತ್ತಾರೆ. ಉಚಿತವಾಗಿ ವೈಫೈ ಕೊಡುತ್ತಾರೆ. ವೈಫೈ ಇದ್ದರೆ ಬೇಕಿಲ್ಲ.

ಮೊದಲು ಹಸಿವಾದಾಗ, ತೀರಾ ಅಗತ್ಯವಾದಾಗ ಜನ ತಿನ್ನುತ್ತಿದ್ದರು. ಈಗ ತಿನ್ನೋದಕ್ಕೇ ಬದುಕಿದವರಂತೆ ಜನ ಹೋಟೆಲ್‌ಗಳಿಗೆ ಹೋಗುತ್ತಾರೆ. ತಿಂಡಿಪೋತ, ಆಹಾರಪ್ರಿಯ(ಇಂಥವರಿಗೆ Foodie ಅಂತಾರೆ) ಎಂದು ಕರೆಯಿಸಿಕೊಳ್ಳುವುದು, ಹೇಳಿಕೊಳ್ಳುವುದು ಫ್ಯಾಶನ್. ನಿಮಗೆ ಒಳ್ಳೆಯ ಅಭಿರುಚಿ ಇದೆ ಅಂದ್ರೆ ನಿಮಗೆ (ಬಾಯಿ)ರುಚಿ ಇರಬೇಕು. ಹೀಗಾಗಿ ಎಲ್ಲರೂ ‘ಫೂಡಿ’ಗಳೇ. ಅರುಗುಲ, ಅಮರುಲಾ ಕೇವಲ ವೈಟ್‌ಹೌಸ್‌ನಲ್ಲಿ ಇರುವವರ ತಿಂಡಿ-ತೀರ್ಥಗಳಲ್ಲ. ಅವು ಬೀದಿ ಬದಿ ರೆಸ್ಟುರಾಗಳಲ್ಲೂ ಜನಪ್ರಿಯ.
ಈ ಪದವನ್ನು ಕೇಳಿರಲಿಲ್ಲ. ಅದೇನೆಂದರೆ Helicopter parenting. ಆಕಾಶದಲ್ಲಿ ಸುತ್ತು ಹಾಕುತ್ತದಲ್ಲ, ಅದೇ ರೀತಿ ಪಾಲಕರು ತಮ್ಮ ಮಕ್ಕಳ ತಲೆ ಮೇಲೆ ಕುಳಿತು ಅದು ಓದು, ಇದು ಓದು, ಹಾಗೆ ಮಾಡು, ಹೀಗೆ ಮಾಡು ಎಂದು ಹೇಳುತ್ತಿದ್ದರಲ್ಲ, ಆ ‘ಹೆಲಿಕಾಪ್ಟರ್ ಪೇರೆಂಟಿಂಗ್’ ಮರೆಯಾಗುತ್ತಿದೆ. ಆ ಜಾಗವನ್ನು ಗೂಗಲ್ ಆಕ್ರಮಿಸಿದೆ.

‘ತಂದೆ ನೀನು, ತಾಯಿ ನೀನು, ಬಂಧು ನೀನು, ಬಳಗ ನೀನು, ಗುರುವು ನೀನು, ಗೆಳೆಯ ನೀನು…’ ಎಂದು ಈಗ ಹೇಳಬಹುದಾದ ಒಬ್ಬನಿದ್ದರೆ ಅದು ಗೂಗಲ್! ‘ಓಕೆ ಗೂಗಲ್, ಸಿರಿ, ಅಲೆಕ್ಸಾ…’ ಅಂದರೆ ಸೆಕ್ರೆಟರಿಗಳೂ ಬೇಕಿಲ್ಲ.

ಪತಂಜಲಿ, ಬಿಕೆಎಸ್ ಅಯ್ಯಂಗಾರ್, ಕೆ. ಪಟ್ಟಾಭಿ ಜೋಯಿಸ್, ಮಹರ್ಷಿ ಮಹೇಶ ಯೋಗಿ, ತಿರುಮಲೈ ಕೃಷ್ಣಮಾಚಾರ್ಯ, ಬಾಬಾ ರಾಮದೇವ ಅವರಿಗೆ ಸೀಮಿತವಾಗಿದ್ದ ಯೋಗದ ಯೋಗಾಯೋಗವೇ ಬದಲಾಗಿಬಿಟ್ಟಿದೆ. ಹಾಲಿವುಡ್ ಅಭಿನೇತ್ರಿಗಳೆಲ್ಲ ಯೋಗಕ್ಕೆ, ಆಯುರ್ವೇದ, ಸಾವಯವ ಆಹಾರಕ್ಕೆ ಶಿಫ್‌ಟ್ ಆಗುತ್ತಿದ್ದಾರೆ. ತಮ್ಮ ಫಿಟ್‌ನೆಸ್‌ಗೆ ಇವೇ ಕಾರಣವೆಂದು ಹೇಳುತ್ತಿದ್ದಾರೆ. ಪತ್ರಿಕೆ, ಟಿವಿಗಳಲ್ಲಿ ಇವುಗಳ ಜಾಹೀರಾತುಗಳು ಕಾಣಿಸಿಕೊಳ್ಳುತ್ತಿವೆ. ತಿಂದಿದ್ದನ್ನು, ಕುಡಿದಿದ್ದನ್ನು, ತಿರುಗಿದ್ದನ್ನು ಯಾರೂ ಲೆಕ್ಕ ಹಾಕುತ್ತಿರಲಿಲ್ಲ. ಈಗ ಎಲ್ಲರೂ ಹಾಕಿಯೇ ಇವುಗಳನ್ನು ಮಾಡುತ್ತಿದ್ದಾರೆ. ಫಿಟ್ನೆಸ್ ವಾಚ್‌ಗಳು ಶರೀರ ಸೌಂದರ್ಯದ ಮಾರ್ಗದರ್ಶಿಗಳಾಗಿವೆ.

ಕೋಕಾಕೋಲಾ, ಪೆಪ್ಸಿ, ನೈಕಿ, ರೀಬಾಕ್, ಆಡಿಡಾಸ್ ಬ್ರ್ಯಾಂಡ್‌ಗಳು ಜನರ ತಲೆಯೊಳಗಿನ ಜಾಹೀರಾತು ಜಾಗವನ್ನು ಆಕ್ರಮಿಸಿಕೊಂಡಿದ್ದವು. ಈಗ ಆ ಜಾಗಕ್ಕೆ ‘ಅಂಡರ್ ಆರ್ಮರ್’ ಬಂದು ಕುಳಿತಿದೆ.
ಇಂದು ಅಮೆರಿಕದಲ್ಲಿ ಆಗಿದ್ದು, ನಾಳೆ ನಮ್ಮ ಮನೆಗೂ ಬರಲಿದೆ. ಬದಲಾವಣೆಯ ಗಾಳಿ ಎಲ್ಲಿ ಬೀಸಿದರೂ ಅದು ರಾತ್ರೋರಾತ್ರಿ ವೈರಲ್ ಆಗಿಬಿಡುತ್ತದೆ. ಸಿಲಬ್ರಿಟಿಗಳು ಹಾಲಿವುಡ್‌ನಲ್ಲಿಯೇ ಹುಟ್ಟಬೇಕಿಲ್ಲ. ಕಣ್ಣು ಹೊಡೆದ ಮಲಯಾಳಿ ಹುಡುಗಿ ಜಗತ್ಪ್ರಸಿದ್ಧಳಾಗಲಿಲ್ಲವೇ? ಯಾರನ್ನೂ ಸಿಲಬ್ರಿಟಿ ಮಾಡಬೇಕಿಲ್ಲ. ಅವರೇ ಆಗುತ್ತಾರೆ, ಅವರಿಗೆ ಗೊತ್ತಿಲ್ಲದಂತೆ.

ಎಲ್ಲವೂ ಬದಲಾಗಲೇಬೇಕು, ಅಮೆರಿಕವೊಂದೇ ಅಲ್ಲ! ಆದರೆ ಸ್ನೇಹಿತರ ಪ್ರೀತಿ, ವಿಶ್ವಾಸ, ಸಲುಗೆ, ಒಡನಾಟ ಮಾತ್ರ ಸ್ವಲ್ಪವೂ ಬದಲಾಗಿಲ್ಲ. ಈ ಬದಲಾವಣೆಯ ಚಂಡಮಾರುತಕ್ಕೆ ಎದೆಯೊಡ್ಡುವ ಛಾತಿ ಇರುವುದು ಅದಕ್ಕೊಂದೇ!

Tags

Related Articles

Leave a Reply

Your email address will not be published. Required fields are marked *

Language
Close