ವಿಶ್ವವಾಣಿ

ಪರೋಪಕಾರಿ ಶ್ರೀಪತಿಯ ವಿಫಲ ಪ್ರೇಮದ ಪ್ರಸಂಗ!

ಶ್ರೀಪತಿ ಎಂದರೆ ನಮ್ಮ ಓಣಿಯಲ್ಲಿ ಫೇಮಸ್ ಫಿಗರ್. ಆತ ಎಲ್ಲರಿಗೂ ಬೇಕಾದವ, ಆತನಿಲ್ಲದೇ ಯಾವ ಕೆಲಸವೂ, ಯಾರ ಕೆಲಸವೂ ಆಗುತ್ತಿದ್ದಿಲ್ಲ. ಶ್ರೀಪತಿ, ಶ್ರೀಪತಿ ಎಂಬ  ಇಡೀ ಓಣಿಯಲ್ಲಿ ಒಬ್ಬರಲ್ಲ ಒಬ್ಬರ ಮನೆಯಿಂದ ಕೇಳಿ ಬರುತ್ತಲೇ ಇರುತ್ತಿತ್ತು. ಅದು ಬೆಳಗಿನ ಜಾವ ಏರಿಂದ ಹತ್ತರವರೆಗಂತೂ ಶ್ರೀಪತಿ ಸಹಸ್ರನಾಮ, ವಿಷ್ಣು ಸಹಸ್ರನಾಮಕ್ಕಿಂತ ಹೆಚ್ಚು ಜಪಿಸಲ್ಪಡುತ್ತಿತ್ತು. ಹಾಗಂತ ಶ್ರೀಪತಿ ಎಂದರೆ ಏರಿಯಾ ಕಾರ್ಪೋರೇಟರ್ರೋ, ಆಫೀಸರ್ರೋ, ಪೂಜಾರ್ರೋ ಅಲ್ಲ. ಎಲ್ಲರ ಕೈ, ಬಾಯಿ ಕೆಲಸ ಕೇಳುವ ಮಡಿ ಹೆಂಗಸು ಅಂಬಕ್ಕನ ಮಗ. ತಂದೆ ಯಾರು ಅಂತ ಗೊತ್ತಿತ್ತಾಗಲಿ ಯಾರು ಅಂತ ಗೊತ್ತಿರಲಿಲ್ಲ, ಅಂಬಕ್ಕಗೂ ಗಂಡನ ಮುಖಚರ್ಯೆ ಮರೆತು ಹೋಗಿತ್ತು ಅಷ್ಟು  ಆತ ಸತ್ತು ಹೋಗಿದ್ದ. ‘ಫೋಟೋ ತೆಗೆಸಿಕೊಂಡರೆ ಆಯುಷ್ಯ ಕಮ್ಮಿಯಾಗುತ್ತದೆ’ ಎಂಬ ಕಾಲವದು. ಹೀಗಾಗಿ ಒಂದೂ ಫೋಟೋ ಇರಲಿಲ್ಲ. ಆದರೂ ಸತ್ತು, ಫೋಟೊಗ್ರಫಿ ಉದ್ಯಮಕ್ಕೆ ಅಪವಾದ ತಪ್ಪಿಸಿದ್ದ.

ಬೆಳಗಿನ 9 ರಿಂದ 10 ಗಂಟೆಯವರೆಗೆ ಶ್ರೀಪತಿ ಶಾಲೆಗೆ ಹೋಗುವ ಓಣಿಯ ಮಕ್ಕಳಿಗೆ ಹೋಟೆಲ್‌ನಿಂದ ತಿಂಡಿ ಪಾರ್ಸಲ್ ತರಬೇಕಿತ್ತು, ಆಟೋ ಬರದೇ ಇದ್ದಾಗ ಮಕ್ಕಳನ್ನು ಸೈಕಲ್ ಮೇಲೆ ಶಾಲೆಗೆ ಬಿಟ್ಟು ಬರಬೇಕಿತ್ತು, ಓಣಿಯ ನೌಕರಿ ಮಾಡುವ ಗಂಡರಿಗೆ ಬ್ಲೇಡು,ಪೇಪರ್, ಪೇಸ್ಟು, ಇಸ್ತ್ರಿಪೆಟ್ಟಿಗೆ,  ಡ್ರಾಯರ್ ತರಬೇಕಿತ್ತು. ‘ಮಾರ್ಕೆಟ್ ಗೆ ಹೊಂಟಿಯೇನು’ ಎಂದು ಕೇಳಿದ ಹೆಣ್ಣು ಮಕ್ಕಳಿಗೆ ಬರ್ತಾ ಹಸಿಮೆಣಸಿನಕಾಯಿಯೋ, ಹೊಲಿಯಲು ಕೊಟ್ಟ ಕುಪ್ಪಸವೋ, ಏನಿಲ್ಲವೆಂದರೂ ಟಿಕಳಿ ಪಾಕೀಟೋ ತರಬೇಕಿತ್ತು. ಎಲ್ಲರದೂ ಒಂದೇ ಆಜ್ಞೆ ‘ಜಲ್ದಿ ಬಾ.’ ಬೆಳಿಗ್ಗೆ ಹತ್ತರ ನಂತರದ ಕೆಲಸಗಳಲ್ಲಿ, ಗಿರಣಿಗೆ ಹೋಗಿ ಹಿಟ್ಟು ಹಾಕಿಸಿಕೊಂಡು ಬರುವುದು, ಬಸ್ ಟಿಕೆಟ್ ಮಾಡಿಸಿಕೊಂಡು ಬರುವುದು, ಚಪ್ಪಲಿ, ಬ್ಯಾಗ್ ರಿಪೇರಿ, ಮಕ್ಕಳ ಸ್ಕೂಟಿ, ಸೈಕಲ್‌ಗೆ ಪಂಕ್ಚರ್ ಹಾಕಿಸಿಕೊಂಡು ಬರುವುದು ಕೆಲಸಗಳಿರುತ್ತಿತ್ತು. ಸಂಜೆ, ಬೆಳಗಿನ ಯಾಜಮಾನರ  ಹೂ, ಕಾಯಿಪತ್ರೆ ಹೇಳಿದರೆ, ಗಂಡಸರು ಗುಟ್ಟಾಗಿ ಕರೆದು ತಮ್ಮ ಬ್ರಾಂಡಿನ ವಿಸ್ಕಿ, ಸಿಗರೇಟ್, ಚಿಪ್‌ಸ್, ಗುಟುಕಾ,ಇತ್ಯಾದಿ ತರಹೇಳುತ್ತಿದ್ದರು. ಶ್ರೀಪತಿ ಇಷ್ಟೆಲ್ಲಾ ಮಾಡಿ ದಣಿದು ಸುಸ್ತಾಗಿ ಹಾಸಿಗೆ ಕಾಣುತ್ತಿದ್ದುದ್ದು ರಾತ್ರಿ ಹನ್ನೊಂದು, ಹನ್ನೊಂದುವರೆ. ಮಧ್ಯರಾತ್ರಿ ಯಾರಿಗಾದರೂ ಮುದುಕರಿಗೆ ದಮ್ಮೋ, ಕಫವೋ, ಕಟ್ಟಿಕೊಂಡರೆ, ಎದೆನೋವೆಂದು ಚೀರಿಕೊಂಡರೆ ಶ್ರೀಪತಿ ಎದ್ದು ಆಟೋ ತರಲು ಓಡಬೇಕಿತ್ತು.

ಇಂಥ ಪರೋಪಕಾರಿ ಜೀವಿಗಳು ಇನ್ನೂ ಇದ್ದಾರೆ. ಊರು ಬಿಟ್ಟು ಎಲ್ಲೂ ಹೋಗದ, ಏನೂ ಗೊತ್ತಿರದ ತಂದೆಯೋ, ತಾಯಿಯೋ  ಕೆಲ ಯುವಕರು ಬಾಲ್ಯದಿಂದ ಮುಪ್ಪಿನವರೆಗೆ ಒಂಟಿಯಾಗಿ ಅಡುಗೆಯವರ ಹಿಂದೆಯೋ, ಕಂಡವರ ಮನೆ ಮನೆಳಲ್ಲಿಯೋ, ತೋಟಗಳಲ್ಲಿಯೋ, ಕೈ ಬಾಯಿ ಕೆಲಸ ಕೇಳುತ್ತಾ, ಕಣ್ಣಿಗೆ ಬಿದ್ದರೆ ಕೆಲಸ ಹೇಳುವವರ ನಾಲಗೆಯ ಮೇಲೆ ತಮ್ಮ ಆಯುಷ್ಯ ಕಳೆಯುತ್ತಿದ್ದಾರೆ.

ನನ್ನದೆಂಥ ಹುಚ್ಚು ಖೋಡಿ ಮನಸ್ಸೆಂದರೆ, ಯಾವುದಾದರೂ ಐಷಾರಾಮಿ ಹೊಟೆಲ್‌ಗಳಲ್ಲಿ ಮಲಗಿದಾಗಲೋ,ಅಮೆರಿಕ, ದುಬೈಗಳಲ್ಲಿ ಅಡ್ಡಾಡುವಾಗಲೋ, ಜನ ನನ್ನನ್ನು ಮುತ್ತಿಕೊಂಡು ಅಭಿನಂದಿಸುವಾಗಲೋ ಅಥವಾ ವಾದ್ಯಗೋಷ್ಠಿ-ಪೂರ್ಣ ಕುಂಭಗಳ ಮೆರವಣಿಗೆಯಲ್ಲಿ ವೇದಿಕೆಗೆ ಹೋಗುವಾಗಾಗಲಿ ಥಟ್ಟನೆ ಈ ಶ್ರೀಪತಿಯಂಥ ಜೀವಗಳು ನೆನಪಾಗುತ್ತಾರೆ.  ಒಂದೇ ವಯಸ್ಸಿನ ನಮ್ಮಲ್ಲೇಕೆ ಆ ದೇವರು ಇಂಥಾ ತಾರತಮ್ಯಗಳನ್ನು ಮಾಡುತ್ತಾನೆ ಎಂದೆಲ್ಲ ಯೋಚನೆಗಳು. ಏನು ಪುಣ್ಯವಿರಬಹುದು ಇಂಥ ವಿಶಾಲ ಸೃಷ್ಟಿಯಲ್ಲಿ, ಕೋಟ್ಯಂತರ ಜೀವಿಗಳಲ್ಲಿ ಆ ದೇವರೋ, ನಾವು ತಿಳಿದ ಪರಮಭಕ್ತಿಯೋ ಹೇಗೆ, ಹೇಗೆ ಅವರವರ ಕರ್ಮಾನುಸಾರ ಪ್ರತಿಯೊಬ್ಬರಿಗೂ ಸುಖ, ದುಃಖ, ಸನ್ಮಾನಗಳನ್ನು ಅಲಾಟ್ ಮಾಡುತ್ತಾನೆ. ಅದೆಷ್ಟು ದೊಡ್ಡ ಆಫೀಸು, ಅದೆಂಥ ಉದ್ಯೋಗಿಗಳು, ಇನ್ನೆಂಥ ಕಂಪ್ಯೂಟ್ಗಳು ಇರಬೇಡ ಅವನ ಬಳಿ ಎನಿಸಿ ಬೆರಗಾಗುತ್ತೇನೆ.

ವಯಸ್ಸು, ಓದುತ್ತಿರುವ ಪುಸ್ತಕಗಳು ನನ್ನನ್ನು ಮತ್ತಷ್ಟು  ಎಳೆದೊಯ್ಯುತ್ತವೆ. ಕ್ಷಮಿಸಿ, ಶ್ರೀಪತಿ ವಿಷಯಕ್ಕೆ ಬರುತ್ತೇನೆ. ನಾವು ಚಿಕ್ಕವರಿದ್ದಾಗ ಒಂದು ತೆಲುಗು ಸಿನಿಮಾ ‘ಚಲಂ’ ಅನ್ನೋ ಹೀರೋನದು ‘ಸಂಬರಾಲಾರಾಮಬಾಬು’ ಅಂತ, ಎಲ್ಲರ ಮನೆ ಕೆಲಸ ಕೇಳುವ ವ್ಯಕ್ತಿಯದು. ಹಾಗೆಯೇ ನಮ್ಮ ರಾಜಕುಮಾರರ ‘ಗಾಂಧಿ ನಗರ’. ಈ ಎರಡು ಚಿತ್ರಗಳನ್ನು ಈಗಿನ ಮಕ್ಕಳಿಗೆ ತೋರಿಸಬೇಕು. ಮನೆ ಬಿಟ್ಟು ಹೊರ ಬರದ, ತಂದೆ ತಾಯಿಗೇ ಸಹಾಯ ಮಾಡದ, ಸದಾ ವಾಟ್ಸಪ್, ಫೇಸ್‌ಬುಕ್‌ಗಳಲ್ಲಿ ಮುಳುಗಿರೋ, ಇಲ್ಲ ರ್ಯಾಂಕ್ ಗಳಿಸಲು ಓದುವ ಮಕ್ಕಳಿಗೆ, ಬರೀ  ಕೆಲಸಗಳೇ ಬದುಕಿನುದ್ದಕ್ಕೂ ಮಾಡಬೇಕಾದ ಅನಿವಾರ್ಯ ಇರುವ ಇಂಥ ವ್ಯಕ್ತಿಗಳನ್ನ ತೋರಿಸಬೇಕು. ನಾವು ಇಂಥ ವ್ಯಕ್ತಿಗಳ ಜೊತೆ ಒಡನಾಡಿದೀವಿ. ಹೀಗಾಗಿ ಆ ಸಿನಿಮಾಗಳು ಮನದಲ್ಲಿ ನಾಟಿದವು. ಪರಸೇವೆ,ಪರಾನುಕಂಪಗಳು ಹೇಗೆ ನಮ್ಮನ್ನೇ ಪರಮಾತ್ಮನನ್ನಾಗಿ ಮಾಡುತ್ತವೆ ಎಂಬ ಸತ್ಯ ಅರಿವಾಗುವ ಈ ಹೊತ್ತು, ಜೀವನದ ‘ಕಾಕ್‌ಟೈಲ್’ ಪಾರ್ಟಿಯ ಕೊನೆಯ ರೌಂಡು. ಈ ಒಂದು ‘ಲವ್‌ಲಿ ಡ್ರಾಪ್’ ಸಿಪ್ ಮಾಡಿ ಈ ಟೇಬಲ್‌ನಿಂದ ಏಳಬೇಕು. ಮಲಗಿದ ಮೇಲೆ ಬೆಳಗಾಗದ, ಯಾರೂ ಎಬ್ಬಿಸದ ನಿಜವಾದ ನಮ್ಮ  ಹೋಗಬೇಕು. ಆ ಮನೆಯ ನಿದ್ದೆಯೇ ಸುಖ ನಿದ್ದೆ.

ಶ್ರೀಪತಿ ಕಂಡವರ ಕೆಲಸದ ಆಳಾಗಿದ್ದರೂ ತಾಯಿಗೆ ಮಗನೇ. ಅಂಬಕ್ಕ ತನಗೂ ಒಬ್ಬ ಸೊಸೆ ಬರೋ ಕನಸು ಕಾಣುತ್ತಿದ್ದಳು. ಈ ಕಾಲದಲ್ಲಿ ಕಾರು ಗಂಡಿಗೆ ಹೆಣ್ಣು ಸಿಗದಿರುವಾಗ, ನೀರು ತರೋ ಶ್ರೀಪತಿಗೆ ಹೆಣ್ಣು ಸಾಧ್ಯವೆ? ಶ್ರೀಪತಿಗೂ ದೇವರು ಒಂದು ಹೆಣ್ಣನ್ನು ಸೃಷ್ಟಿ ಮಾಡಿದ್ದ, ಆದರೆ ಆ ಓಣಿಯಲ್ಲಿ ಅಲ್ಲ ಕೇವಲ ಶ್ರೀಪತಿ ಮನದಲ್ಲಿ ಮಾತ್ರ. ಆಕೆಯಲ್ಲಿ ಕುಲಕರ್ಣಿ ಮನೆಯ ಪದ್ಮಾವತಿ. ಆಕೆಗೆ  ಜನ ಅಣ್ಣಂದಿರು, ಒಬ್ಬಳೇ ಹೆಣ್ಣು.

ಪದ್ಮಾವತಿ. ಆ ಆರು ಜನರ ಅಣ್ಣಂದಿರಿಗೆ ಬಟ್ಟೆಗೆ ಇಸ್ತ್ರಿ, ಸ್ನಾನಕ್ಕೆ ಶ್ಯಾಂಪು, ಸೇದಲು ಸಿಗರೇಟು, ಬಸ್ಸಿಗೆ, ರೈಲಿಗೆ ಟಿಕೇಟು, ತಂದು ಕೊಡೋನೇ ಶ್ರೀಪತಿ. ಆರು ಗಂಡು ಮಕ್ಕಳಿದ್ದರೂ ಕುಲಕರ್ಣಿ ದಂಪತಿಗಳು ಶ್ರೀಪತಿಗೆ ಕೆಲಸ ಹೇಳುತ್ತಿದ್ದರು. ‘ಹೊರಗೆ ಬಿಸಿಲಿದೆ, ಮೋಡ ಆಗಿದೆ’ ಎಂದೇ ಮಕ್ಕಳನ್ನು ಒಳ ಕೂಡಿಸುತ್ತಿದ್ದರು. ಇಷ್ಟು ನನಗೆ ಎಲ್ಲ ಜವಾಬ್ದಾರಿ ವಹಿಸುತ್ತಿದ್ದಾರೆಂದರೆ ನನ್ನ ಮನೆ ಅಳಿಯನನ್ನೆ ಮಾಡಿಕೊಳ್ಳುತ್ತಾರೆ ಎಂದೇ ಶ್ರೀಪತಿ ಊಹಿಸಿದ್ದ.  ಅಣ್ಣಂದಿರಿಗೆ ಕೂತಲ್ಲೇ ಎಲ್ಲ ಮಾಡಿಕೊಟ್ಟುಬಿಟ್ಟರೆ ಅವರೂ ಬೇಡವೆನ್ನುವುದಿಲ್ಲ ಎಂದೇ ನಿರ್ಣಯಿಸಿ ಯಾರು ಕೆಲಸಕ್ಕೆ ಕೂಗಿದರೂ ಫಸ್‌ಟ್ ಫ್ರಿಫರೆನ್ಸು ಪದ್ಮಾವತಿ ಇರೋ ಕುಲಕರ್ಣೇರ ಮನೆಗೆ ಕೊಡುತ್ತಿದ್ದ. ಸದಾ ಮನೆ ತುಂಬಾ ಮಂದಿ, ಒಂದಲ್ಲ ಒಂದು ಸಂಭ್ರಮದ ಮನೆ. ನಾಲ್ಕು ಜನ ಅಣ್ಣಂದಿರ ಮದುವೆ ಆಗಿ ಸೊಸೆಯಂದಿರು ಬಂದಂತೆ, ಕುಲಕರ್ಣಿಯವರ ಮನೆ ಖರ್ಚು ಹೆಚ್ಚಾದಂತೆ ಶ್ರೀಪತಿಗೆ ಕೆಲಸಗಳು ಜಾಸ್ತಿಯಾದವು. ಅವರೆಲ್ಲರ ಮಕ್ಕಳ ಮದುವೆ ಆದಂತೆ ಶ್ರೀಪತಿಗೆ ಹೆಣ ಎತ್ತುವಷ್ಟು ಕೆಲಸ ಬಿತ್ತು.  ಶ್ರೀಮಂತ, ಬಾಣಂತನದ ಹೊತ್ತಿಗೆ ಶ್ರೀಪತಿಗೆ ಅಬಾರ್ಷನ್ ಆದಷ್ಟು ನಿತ್ರಾಣ- ಆದರೂ, ಆತನ ಮನದ ರಾಣಿ ಪದ್ಮಾವತಿ. ‘ಪದ್ದಿ’ಎಂದೇ ಒಬ್ಬನೆ ಒಳಗೊಳಗೆ ಕೂಗಿಕೊಳ್ಳುತ್ತಿದ್ದ ಹೆಸರು, ಅವಳಿಗಾಗಿ ಸಹಿಸುತ್ತಿದ್ದ.

ಇಷ್ಟೆಲ್ಲ ಕನಸುಗಳ, ಕೆಲಸಗಳ ಮಧ್ಯೆ, ಪದ್ದಿಯನ್ನು ಮಾತನಾಡಿಸುತ್ತಿದ್ದ. ‘ನಾ ಇಷ್ಟೆಲ್ಲ ಕೆಲಸ ಮಾಡೋದು ನಿನಗಾಗೇ ಪದ್ದಿ’ ಎಂದು ಒಮ್ಮೆ ಹೇಳಿದ್ದ. ಸದಾ ತಿಂಡಿ-ತಿನಿಸು, ಹೊಸ ಲಂಗ, ಮನೆಗೆ ಬಂದು ಹೋಗೋ ಮಂದಿ ಅವರ ದೊಡ್ಡ ಸಂಸಾರಿಕಕ್ಕೆ ಸಂಬಂಧಿಸಿದ ಮಾತು ಕೇಳಿ, ಕೇಳಿ  ಹೀಗಾಗಿ ಶ್ರೀಪತಿಯ ಮನದಾಳದ ಮಾತುಗಳಿಗೆ ಪದ್ದಿ ‘ಎಲ್ಲಾರ ಮನಿ ಕೆಲಸಾನೂ ಮಾಡು,ನಿನಗೂ ಛೋಲೋ ನೌಕರಿ, ಛೋಲೋ ಮನೆತನದ ಹೆಂಡ್ತಿ ಸಿಗ್ತಾಳ, ದೇವರು ಆ ವಂದಿಲಿ ಹನುಮಪ್ಪ ಕಣ್ಣು ತೆಗೆದು ನೋಡೇ ನೋಡ್ತಾನ’ ಎಂದು ಹನುಮಪ್ಪನ ಗುಡಿ ಪುಜಾರಿಯಂತೇ ಹೇಳಿದ್ದಳು.’ ‘ಖರೇ ಹೇಳು ಪದ್ದು, ನನ್ನ ನೋಡಿದ್ರ ನಿನಗ ಏನು ಅನಸ್ತದ’ ಎಂದು ಕೇಳಿದರೆ, ‘ಬಹಳ ಕಷ್ಟ ಪಡ್ತಿ ಅಂತ ಅನಿಸ್ತದ. ಓದಲಾರದ್ದಕ್ಕೆ ನಿಂಗ ಹಿಂಗ ಆಗ್ಯಾದ, ನಿಮ್ಮ ತಾಯಿ  ಸತ್ತಳಂದ್ರ ನೀ ಹುಬ್ಬಳಿ,ಬೆಂಗಳೂರಕ್ಕೊ

ಹೋಗು, ಫ್ಯಾಕ್ಟರಿ, ಕಂಪನಿಯೊಳಗ ಕೆಲಸಕ್ಕೆ ಸೇರಿಕೋ, ಛೋಲೋ ಪಗಾರ ಬರ‌್ತದ, ತಿಂಗಳ ಇಂತಿಷ್ಟು ಸಂಬಳ

ಅಂತ ಬಂದ್ರ ಬಾಳುವಿ ನೋಡು’ ಎಂದು ಬಿಟ್ಟಳು.

‘ನಿನ್ನ ನೆನಸಿಗೋತ ನನಗ ರಾತ್ರಿ ನಿದ್ದಿ ಬರಂಗಿಲ್ಲ ನೋಡು’ ಎಂದು ಒಮ್ಮೆ ಹೇಳಿದ್ದಕ್ಕೆ , ‘ಹೊಟ್ಟೆ ತುಂಬಾ ಮೊಸರನ್ನ ಉಣ್ಣು ಛೋಲೋ ನಿದ್ದಿ ಬರ್ತಾದ’ ಎಂದು ಸಮಾಧಾನಿಸಿದ್ದಳು. ಒಮ್ಮೆಯಂತೂ ‘ನಮ್ಮ ಅಮ್ಮಗ ನಿನ್ನ ಸೊಸಿ ಮಾಡ್ಕೊಬೇಕಂತ ಮನಸಾದ ಪದ್ದು, ನೀ  ಅನ್ನು, ನಿನ್ನ ಮಾಡ್ಕೋತಿನಿ ಅಂತ ನೀ ಮನ್ಯಾಗ ಹಟಹಿಡಿ,ಊಟ ಬಿಡು, ಜೀವ ಕಳಕೋತಿನಿ ಅನ್ನು ಆಗ ನಿನ್ನ ಮ್ಯಾಲೆ ಪ್ರೀತಿ ಇರೋ ನಿಮ್ಮನಿ ಮಂದಿ ನನ್ನ ಜೊತಿಗೇ ಲಗ್ನ ಮಾಡಿಸ್ತಾರೆ’ ಎಂದೂ ಹೇಳಿಬಿಟ್ಟ. ಪದ್ದಿ ಮಾತ್ರ ಎಲ್ಲದಕ್ಕೂ ಅತ್ಯಂತ ಸಮರ್ಪಕ ಲೋಕಪ್ರಿಯ ಉತ್ತರ ಕೊಟ್ಟಳು. ‘ಅಯ್ಯಾ, ನಿಮ್ಮ ಅಮ್ಮನ್ನ ಬಿಟ್ರ ನಿಮ್ಮನಿಯಾಗ ಯಾರಿದ್ದಾರ? ನನ್ನ ತುಂಬಿದ ಅತ್ತಿ-ಮಾವ ಇರೋ ಮನಿಗೆ ಕೊಡ್ತಾರ. ನಿಮ್ಮ ಅಮ್ಮ ಮಡಿ ಹೆಂಗಸು, ಏನೂ  ವ್ರತ ಮಾಡಂಗಿಲ್ಲ, ನಿನಗ ಅಕ್ಕ ತಂಗೇರೂ ಯಾರು ಇಲ್ಲ, ಲಗ್ನದಾಗ ಕಳಸಗಿತ್ತಿ ಯಾರು ಆಗ್ತಾರ, ನಿನ್ನ ಮದುವೆ ಆಗ್ತಿನಿ, ಊಟ ಬಿಡ್ತಿನಿ ಅಂದ್ರ ಊಟ ಬಿಡು ಅಂತಾರ, ನಾ ಒಲ್ಲೆಪ್ಪ ನನಗ ಹಸಿವಿ ತಡಕೊಳ್ಳೊದು ಆಗಂಗಿಲ್ಲ, ನಿಮ್ಮ ಮನಿ ಸಣ್ಣದು, ನಿಮಗ ಬಂಧುಬಳಗ ಯಾರು ಇಲ್ಲ, ನಾಳೆ ನಾನು ಲಗ್ನ ಆಗಿ ಬಸರು ಆದೆ ಅಂದ್ರ ನಿಮ್ಮ ಕಡೆ ನನಗ ‘ಹೂಮುಡಸೋರೂ ಇಲ್ಲ(ಸೀಮಂತ ಕಾರ್ಯಕ್ಕೆ ನಮ್ಮ ಕಡೆ ಹೂ  ಅಂತಾರೆ). ಬಾಣಂತನ. ಕೂಸಿನ್ನ ನೋಡೋದಕ್ಕ ಬರೋದು, ಇವೆಲ್ಲ ಇದ್ರ ಚೆಂದ, ಗೌರಿ ಗಂಗಿ, ಗಣಪ, ವರಮಹಾಲಕ್ಷ್ಮಿ ಅನಂತ ವ್ರತ ಒಂದ…ರ.. ಅವೆಯೇನು ನಿಮ್ಮನಿಯಾಗ ? ನಿಮ್ಮಮ್ಮ ಮೂರ ಸಂಜೆಲೇ ಮಡಿ ಆಗಿ ಕುಂತಾಳ. ಏನು ಹಚ್ಚಿಯೋ ಪ್ರೀತಿ, ಪ್ರೇಮ ಅಂತ ಹುಚ್ಚುಚ್ಚು ಉಪ್ಪು ಹಚ್ಚಿ ನೆಕ್ಕಬೇಕೆನು ಅವನ್ನ ? ಸುಡುಗಾಡು ಸಿನಿಮಾ ನೋಡ್ತಿ, ಹುಚ್ಚುಚ್ಚು ಕಥಿ, ಕವನ ಓದಿ.್ತ ಬರೀ ಇಂಥಾ ಗೊಳ್ಳ ಮಾತಾಡ್ತಿ. ನಮ್ಮಪ್ಪ ಅವ್ವನೇ ಮುಂದ  ನಿನಗ ಕೊಟ್ಟರೂ ನಾ ಒಲ್ಲೆ, ತುಂಬಿದ ಬಂಧು-ಬಳಗ ಇರೋ ಮನಿಗೆ ನನ್ನ ಸೊಸಿಯಾಗಿ ಉಡಿ ತುಂಬಿಸಿಕೊಳ್ತಾರೆ’ ಎಂದು ಷರಾ ಬರೆದುಬಿಟ್ಟಳು.

‘ಪದ್ದಿ ನೀ ಇಲ್ಲದಿದ್ರ ನಾ ಸಾಯ್ತೀನಿ ನೋಡು ಹಾಗಾದ್ರೆ’ ಎಂದು ಶ್ರೀಪತಿ ಅತ್ತೇ ಬಿಟ್ಟ. ಅದಕ್ಕೂ ಪದ್ದಿ ‘ಅದಕ.. ನೋಡು ನಾ ನಿನ್ನ ಮದುವೆ ಮಾಡ್ಕೊಳ್ಳೊದು ಒಲ್ಲೆ ಅನ್ನೋದು, ನಾನು ಮುತ್ತೈದಿ ಸಾವು ಸಾಯಾಕಿ, ಕಂಕಣ ಕೈ ಮ್ಯಾಲೆ ಮಾಡಿಕೊಂಡು ಹೋಗಾಕಿ, ‘ಐದಾನವಮಿ’(ಅವಿಧವಾನವಮಿ) ಮಾಡಿಸಿಕೊಳ್ಳಾಕಿ, ನೂರುವರುಷ ಗಂಡಾಯುಷ್ಯ  ಗಂಡನ್ನ ಮಾಡಿಕೊಳ್ಳಾಕಿ’ ಎಂದಳು. ‘ಪ್ರೀತಿ, ಪ್ರೇಮ, ಒಲವು, ಹೋದ ಜನ್ಮದ ಋಣ ಅನ್ನೋದು…’ ಎಂದು ಶ್ರೀಪತಿ ರಾಗ ಎಳೆದರೆ, ಪದ್ದಿ- ‘ಹೋಗು ಅತ್ಲಾಗ ಏನ ಹಚ್ಚಿ ಗಂಡಸಾದವ ಇಂಥಾ ಹುಚ್ಚುಚ್ಚು ಮಾತಾಬಾರದು.ದುಡೀಬೇಕು, ತಂದು ಹಾಕಬೇಕು ಅಷ್ಟ, ಯಾರಾದ್ರೇನು ? ಉಳಿದಿದ್ದೆಲ್ಲ ತಾನೇ ನಡಿತದ’ ಎಂದು ಎದ್ದು ಹೋಗೇಬಿಟ್ಟಳು. ಲೈಲಾ-ಮಜನು, ಸಲೀಂ-ಅನಾರ್ಕಲಿ, ರೋಮಿಯೋ-ಜೂಲಿಯೆಟ್, ದುಷ್ಯಂತ ಶಕುಂತಲೆ, ಮೇಲಿನಿಂದ ಗಾಬರಿಯಾಗಿ ಶ್ರೀಪತಿಯನ್ನು ನೋಡುತ್ತಿದ್ದರು. ಏನು ಮಾಡುತ್ತಾನೆ ಈತ  ಎಂದು. ‘ನಮ್ಮನಿಯೊಳಗ ಕರೆಂಟ್  ಶ್ರೀಪತಿ, ಕೆ.ಇ.ಬಿಯವರನ್ನ ಕರೆದುಕೊಂಡು ಬಾರೋ’ ಎಂದು ಯಾರದೋ ಕೂಗಿಗೆ ಶ್ರೀಪತಿ ಎದ್ದು ಸೈಕಲ್ಲೇರಿ ಹೋದ. ಅಷ್ಟೆ.