ವಿಶ್ವವಾಣಿ

ಈಗ ಯಾರೂ ಬಿದ್ದು, ಬಿದ್ದು ನಗುವುದಿಲ್ಲ, ಯಾರಾದರೂ ಬಿದ್ದಾಗ ನಗುತ್ತಾರೆ

ಡಿಕ್ಷನರಿ ಎಂದರೆ ಅರ್ಥಕೋಶ. ಶಬ್ದಗಳು ತಿಳಿಯದಾಗ ಸಹಜವಾಗಿ, ‘ಡಿಕ್ಷನರಿ ನೋಡು’ ಎನ್ನುತ್ತೇವೆ. ಆದರೆ ಆ ಡಿಕ್ಷನರಿ ಬರೆದಾತನಿಗೆ ಇವೆಲ್ಲ ಅರ್ಥ ಹೇಗೆ ಗೊತ್ತಾದವು? ಎಂದು ನಾವು ಯಾರೂ  ಅಂತೂ ಡಿಕ್ಷನರಿ ಎಂದರೆ ಅದು ಎಲ್ಲ ತಿಳಿದ ಸರ್ವಜ್ಞ ಗ್ರಂಥ. ಹಾಗೆಂದು ಅದನ್ನೊಂದೇ ಓದಿದರೆ ಎಲ್ಲ ಓದಿದಂತಲ್ಲ. ಎಲ್ಲವನ್ನೂ ಓದಿದರೆ ಇದು ಇನ್ನಷ್ಟು ಸಹಾಯ ಮಾಡಬಲ್ಲದು.  ನನಗೆ ಮೊದಲಿಂದ ಶಬ್ದ ಸಂಗ್ರಹಗಳ ಹುಚ್ಚು. ಹೀಗಾಗಿ ಡಿಕ್ಷನರಿಗಳೆಂದರೆ ಅಚ್ಚು ಮೆಚ್ಚು. ಬಾಲ್ಯದಲ್ಲಿ ಅದೇ ತಾನೇ ಮಾರ್ಕೆಟಿಗೆ ಬಂದಿದ್ದ ‘ರ್ಯಾಪಿಡೆಕ್‌ಸ್ ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್’ ಎಂಬ ಪುಸ್ತಕ ಕೊಳ್ಳಲು 25 ರೂಪಾಯಿ ಇರದಿದ್ದಕ್ಕೆ ಇಂದಿಗೂ ನನಗೆ ಇಂಗ್ಲಿಷ್ ನಿರರ್ಗಳವಾಗಿ ಮಾತನಾಡಲು ಬರುವದಿಲ್ಲ.

 ರಾಜಕುಮಾರ ಸಿನಿಮಾ, ಆದರ್ಶ ಟಿಫಿನ್ ಸೆಂಟರ್‌ನ ಮಸಾಲೆ ದೋಸೆ (ಆಗ ನಮ್ಮ ಗಂಗಾವತಿಯಲ್ಲಿ ದೋಸೆಗೆ ಪ್ರಸಿದ್ಧವಾದ ಹೋಟೆಲ್ ಅದು) ಇವೆಲ್ಲ ಆಸೆಯನ್ನು ಹತ್ತಿಕ್ಕಿ ಏನ್ನೂ ಖರೀದಿಸಿ ತಿನ್ನದೇ, ನೋಡದೇ, ರೂಪಾಯಿ-ಎಂಟಾಣೆಗಳನ್ನು ಡಬ್ಬದಲ್ಲಿ ಸೇರಿಸಿದರೂ ಬರೀ ಹನ್ನೆರಡು ರೂಪಾಯಿ ಆಗುವಲ್ಲಿ ನಾಲ್ಕೈದು ತಿಂಗಳೇ ಹಿಡಿಯಿತು. ಸಿನಿಮಾ, ದೋಸೆಯ ತೀವ್ರತೆಯೇ ಹೆಚ್ಚಾಗಿ, ನನ್ನ ಸುತ್ತಲು ಇರುವವರಿಗೆ ಕನ್ನಡವೇ ಸರಿಯಾಗಿ ಬಾರದು, ಇನ್ನು ನಾನು ಇಂಗ್ಲಿಷ್ ಕಲಿತು ಯಾರೊಂದಿಗೆ ಮಾತನಾಡಬೇಕು? ಮೇಲಾಗಿ ನಾನು  ಮಾತನಾಡಿಸಿದರೆ ಕನ್ನಡದ ನನ್ನ ಗೆಳೆಯರು ನನ್ನನ್ನು ದೂರವಿಟ್ಟರೂ ಇಡಬಹುದೆಂದು ಊಹಿಸಿ, ತರ್ಕಿಸಿಕೊಂಡು ಆ ರ್ಯಾಪಿಡೆಕ್‌ಸ್ನ್ನು ಹಿಂದೆ ಸರಿಸಿ, ದೋಸೆಯ ಪ್ಲೇಟನ್ನೇ ಮುಂದಕ್ಕೆಳೆದುಕೊಂಡು ತಿನ್ನಬೇಕಾಯಿತು.

 ಅದೇ ತಾನೇ ತೆರೆಕಂಡಿದ್ದ ರಾಜಕುಮಾರ  ಅವರ ‘ಆಪರೇಷನ್ ಡೈಮಂಡ್ ರಾಕೆಟ್’ ಚಿತ್ರ ನೋಡಲು ಥೇಟರ್ ಒಳ ಹೊಕ್ಕೆ. ಅಲ್ಲಿಗೆ ನಾಲಿಗೆ, ಕಣ್ಣುಗಳೇ ಬುದ್ಧಿಯ ಮೇಲೆ ವಿಜಯ ಸಾಧಿಸಿದವು.  ಇಂಗ್ಲಿಷ್ ಕಲಿತರೆ ಬರುವದಲ್ಲ, ಸುತ್ತಲೂ ಪರಿಸರದಲ್ಲಿ ಇಂಗ್ಲಿಷ್ ಮಾತಾಡುವವರಿದ್ದರೆ ಮಾತುಗಳು ತಾವೇ ಬರುತ್ತವೆ ಎಂದು ನಿರ್ಧರಿಸಿ,  ಮಸಾಲೆ ದೋಸೆ ತಿಂದು ಸಿನಿಮಾ ನೋಡಿದ್ದೇ ಸರಿ ಎಂಬ ನನ್ನ ನಿರ್ಣಯಕ್ಕೆ ನಾನೇ ಮನಸೋತು, ಬೆನ್ನು ಚಪ್ಪರಿಸಿಕೊಂಡೆ. ಈಗಲೂ ರ್ಯಾಪಿಡೆಕ್‌ಸ್ ಇಂಗ್ಲಿಷ್ ಸ್ಪೀಕಿಂಗ್ ಕೋರ್ಸ್ ಪುಸ್ತಕ ನೋಡಿದರೆ ಇದೆಲ್ಲ ನೆನಪಾಗುತ್ತದೆ.

ಈಗ ಡಿಕ್ಷನರಿಗೆ ಬರುತ್ತೇನೆ.  ಪದಗಳಿಗೆ ಅರ್ಥ ಕೊಡುವದು, ಅರ್ಥ ಹೇಳುವದು ಪಂಡಿತರ ಜಾಣ್ಮೆಯ ಕೆಲಸ. ಆದರೆ, ಇರುವ ಅರ್ಥಕ್ಕೆ ಅನರ್ಥಕೊಟ್ಟು ಹೀಗೂ ಉಂಟು, ಹೀಗೂ ಅರ್ಥವಾಬಹುದಲ್ಲ ಎಂಬ ಸೋಜಿಗ ಹುಟ್ಟಿಸಬಲ್ಲ ಜತೆಗೆ ನಗು ತರಿಸುವದಿದೆಯಲ್ಲ ಇದೂ ಒಂದು  ಕಲೆ ಎನಿಸುತ್ತದೆ. ರಸಿಕತೆ, ಊಹೆ, ತುಂಟತನಗಳು ತುಂಬಿರುವ  ಈ ಅರ್ಥಗಳು ಮುದಕೊಡುತ್ತವೆ, ಮೈ ಮನಸ್ಸಿಗೆ ಆಹ್ಲಾದ ಉಂಟುಮಾಡುತ್ತವೆ.  ಇವುಗಳೇ ನಮ್ಮ ಬೀಚಿ ಗುರುಗಳ ತಿಂಮಿಕ್ಷನರಿ, ನಾ.ಕಸ್ತೂರಿಯವರ ಅನರ್ಥಕೋಶ ಇವು ಪ್ರಕಟವಾಗಿ, ಪ್ರಸಿದ್ಧವಾಗಿ ತುಂಬಾ ದಿನಗಳಾದವು. ಇದೇ ಮಾದರಿಯಲ್ಲಿ ಇತ್ತೀಚೆಗೆ ಬಂದ ಒಂದು ಪುಸ್ತಕ ನನ್ನ ಗಮನ ಸೆಳೆದ, ಓದಿದಂತೆಲ್ಲ ನಗು ಉಕ್ಕಿಸಿ, ಶಬ್ದಗಳೊಳಗಿನ ಅನ್ವರ್ಥಕದಲ್ಲಿನ ಅನರ್ಥ ತೋರಿಸಿದ ಎರಡು ಪುಸ್ತಕಗಳೆಂದರೆ, ಒಂದು ಹಿರಿಯ ಸಾಹಿತಿ ಶ್ರೀಯುತ  ದಂನಆ (ಆನಂದ)  ಬರೆದ ‘ತುಂತುರು’ (‘ಅಪರಂಜಿ’ ವಿನೋದ ಮಾಸಿಕ ಪತ್ರಿಕೆಯಲ್ಲಿನ ಅಂಣ ಬರಹಗಳ ಸಂಗ್ರಹ) ಹಾಗೂ ಧರ್ಮಶ್ರೀ ಬಿ. ಅಯ್ಯಂಗಾರ್ ಬರೆದ ‘ಅಪಾರ್ಥ ಮಂಜರಿ.’ ಈ ಎರಡು ಪುಸ್ತಕಗಳ ಒಟ್ಟು ಸಾರವನ್ನು ಮಾರ್ಕ್‌ಟ್ವೈನ್  ಹೇಳುವಂತೆ, ಒಂದು ಪುಸ್ತಕದ ಯಶಸ್ಸು, ಪುಸ್ತಕದ ಒಳಗೆಷ್ಟಿದೆ ಎನ್ನುವದಕ್ಕಿಂತ ಪುಸ್ತಕದ ಹೊರಗೆಷ್ಟು ಉಳಿಯಿತು ಎನ್ನುವದರ ಮೇಲೆ ನಿರ್ಧರಿತವಾಗುತ್ತದೆ ಎಂಬ ಮಾತನ್ನು ಧರ್ಮಶ್ರೀ ಬಿ.ಅಯ್ಯಂಗಾರ್ ತಮ್ಮ ಲೇಖಕರ ಮಾತಿನಲ್ಲೇ ಸ್ಪಷ್ಟ ಪಡಿಸಿದ್ದಾರೆ.

ಮೊದಲಿಗೆ ಶ್ರೀಯುತ ಆನಂದರ ‘ತುಂತುರು’ ಪುಸ್ತಕದ  ವಾಕ್ಯಗಳನ್ನು ನೋಡೋಣ. ಇದು ಅನರ್ಥಕೋಶವಲ್ಲ, ಮೆಲುಕು ಹಾಕುವಂತಹ ಮಾತಿನ ಗುಚ್ಛ. ಇದು ವಿಚಿತ್ರವಲ್ಲದಿದ್ದರೂ ವಿಶಿಷ್ಟ, ಅಪರೂಪದ ಪುಸ್ತಕ. ಇದನ್ನು ಸ್ನೇಹಿತ, ಅಣುಕು ಕವಿ ಎನ್.ರಾಮನಾಥ್ ತಮ್ಮ ‘ತೇಜು ಪಬ್ಲಿಕೇಷನ್‌ಸ್’ ನಿಂದ ಹೊರತಂದಿದ್ದಾರೆ. ಪ್ರಕಾಶಕರ ನುಡಿಯಲ್ಲಿ ಅವರೇ ಹೇಳಿರುವಂತೆ, ‘ ಇದು ವಿಡಂಬನೆಯ ಆಡಂಬೊಲ, ಫನ್‌ಗಾರಿಕೆಯ ಪಂಚಾಂಗ, ಕಿಡಿನುಡಿಯ ಕ್ಯಾನ್‌ವಾಸು, ಬೆನ್ನುಡಿಯ ಚೇಂಬರ್ರು ಆಗಿದೆ ಎಂದಿದ್ದಾರೆ. ಓದುತ್ತ ಹೋದಂತೆ ಕೆಳಗಿನ ಈ ಸಾಲುಗಳ ತುಂತುರುಗಳು ಗಮನ ಸೆಳೆದವು.

ಆಯುಷ್ಯ ಬರೆಯುವವನು  ಎಂದು ನಂಬುತ್ತೇವೆ.  ಆಯುಷ್ಯವನ್ನು ಸಿಗರೇಟ್ ಕಮ್ಮಿ ಮಾಡುತ್ತದೆ ಎಂದೂ ನಂಬುತ್ತೇವೆ. ಅಂದರೆ ಬ್ರಹ್ಮನಿಗಿಂತ ಸಿಗರೇಟ್ ಮಹಿಮೆಯೇ ದೊಡ್ಡದಾಯಿತಲ್ಲ? ಇಲ್ಲದಿದ್ದರೆ, ಸಿಗರೇಟ್‌ನಿಂದ ಬ್ರಹ್ಮ ಬರೆದ ಆಯಸ್ಸು ಕಡಿಮೆ ಆಗುವದಾದರೂ ಹೇಗೆ?

ಸ್ವರ್ಗ ಎಂಬುದು ಒಂದು ಭೌಗೋಳಿಕ ಕೇಂದ್ರವಲ್ಲ. ಅದೊಂದು ಬದುಕುವ ವಿಧಾನ.

ಹೊರಗೆ ವಿಪರೀತ ಬಿಸಿಲು, ಮನೆ ಊಟಾನೇ ಒಳ್ಳೆಯದು, ಮನೆಬಿಟ್ಟರೆ ಎಲ್ಲೂ ಸುಖವಿಲ್ಲ ಅಂತ ಮನೇಲೇ ಕೂತಿದ್ರೆ ಅಲೆಕ್ಸಾಂಡರ್ ದಿ ಗ್ರೇಟ್ ದೇಶ, ದೇಶ ಗೆಲ್ಲೋಕೆ ಆಗುತ್ತಿತ್ತಾ?

ಮಕ್ಕಳು,  ತಾಯಿಗಳ ಬಗ್ಗೆ ಇರುವ ಸಾಲುಗಳು ನಗೆ ಉಕ್ಕಿಸುವದರ ಜತೆಗೆ ಚಿಂತನೆಗೂ ಹಚ್ಚುತ್ತವೆ.  ಓದು ಓದು ಎಂದು ಹಿಂಸೆ ನೀಡಿ ಓದಿಸಿದರೆ ಮಗ ಓದಿನಲ್ಲಿ ಜಾಣ ಎನಿಸಿಕೊಳ್ಳಬಹುದೇ ವಿನಃ ನಿಜ ಬದುಕಿನಲ್ಲಲ್ಲ.

 ತಂದೆ ತನ್ನ ಮಗನಿಗೆ     ಹೇಳುತ್ತಾನೆ, ‘ಮಕ್ಕಳು ಬೇಕು ಬೇಕು ಅಂತ ನಿಮ್ಮ ಅಮ್ಮನ್ನ ಮದುವೆ ಆದೆ ಕಣೋ, ಆದರೆ ನನ್ನ ನಿರಾಶೆಯನ್ನು ಊಹಿಸಿಕೊ.’

ಅಮ್ಮನ ಸ್ವಗತ: ಯೋಗ ನನಗೆ ಖುಷಿ ಕೊಡುತ್ತದೆ, ಮಕ್ಕಳು ಯೋಗ ಕ್ಲಾಸ್ ಮುಗಿಸಿ  ಬರುವ ತನಕ. ಇನ್ನು ದೇವರು, ಧರ್ಮಗಳ ಬಗ್ಗೆಯಂತೂ ಅಭೂತ ಪೂರ್ವ ಸಾಲುಗಳು ಇಲ್ಲಿವೆ.

ದೇವರನ್ನು ಹೇಗೆ ನಗಿಸುವದು? ತುಂಬಾ ಸುಲಭ, ನೀವು ಹಾಕಿಕೊಂಡಿರುವ ಮುಂದಿನ ಮಹತ್ತರ ಯೋಜನೆಗಳನ್ನು ಅವನಿಗೆ ತಿಳಿಸಿದರೆ ಸಾಕು.’

ನನಗೆ ದೇವರು ಇಷ್ಟ-ಏಕೆ ಗೊತ್ತೆ? ಅವನು ನನಗೆ ಅವನನ್ನೇ ನಿರಾಕರಿಸುವಂಥ ಸ್ವಾತಂತ್ರ್ಯವನ್ನು ಕೊಟ್ಟಿರುವದಕ್ಕಾಗಿ.

ದೇವರ ಅನುಗ್ರಹದಿಂದಾಗಿಯೇ ನಾನು ದೇವರಲ್ಲಿ ನಂಬಿಕೆ ಇಟ್ಟಿಲ್ಲ. ಪ್ರಕೃತಿಯೊಂದಿಗಿನ ತೀವ್ರ ಒಡನಾಟ ಕಳೆದು ಕೊಂಡಾಗ, ದೇವಾಲಯ, ಚರ್ಚು, ಮಸೀದಿ ಮುಖ್ಯವಾಗುತ್ತಾ ಹೋಗುತ್ತವೆ.

 ನಿನ್ನನ್ನು ಹುಟ್ಟಿಸಿದ ದೇವರನ್ನು ನಂಬು ನೀನು ಹುಟ್ಟಿಸಿದ ದೇವರನ್ನಲ್ಲ.

ದೇವರನ್ನು ಆಹಾರಕ್ಕೆ ಹೋಲಿಸದಿರಿ. ದೇವರಿಲ್ಲದೆ ಬದುಕಬಹುದು, ಆದರೆ ಆಹಾರವಿಲ್ಲದೇ ಬದುಕಲು ಸಾಧ್ಯವಿಲ್ಲ.

ವಿಶ್ವದ ಪ್ರಥಮ ಕಾರ್ಡ್‌ಲೆಸ್ ಫೋನ್ ಕಂಡು ಹಿಡಿದಿದದ್ದು ಭಗವಂತ, ಅದಕ್ಕೆ ಪ್ರಾರ್ಥನೆ ಎಂದು ಹೆಸರು. ಅದು ಸಿಗ್ನಲ್ ಕಳೆದುಕೊಳ್ಳುವದಿಲ್ಲ, ರಿಚಾರ್ಜ್ ಮಾಡಬೇಕಾಗಿಲ್ಲ, ಅದನ್ನು ಎಲ್ಲಿ ಬೇಕಾದರೂ ಬಳಸಬಹುದು.

ನಾವೆಲ್ಲರೂ ಗೌತಮ ಬುದ್ಧರೇ, ಆದರೆ ನಮಗೆ ಅರಿವಾಗಿಲ್ಲ. ಪರವಾಗಿಲ್ಲ ಬಿಡಿ. ಏಕೆಂದರೆ ಆ ವಿಷಯ ಗೌತಮನಿಗೂ ಗೊತ್ತಿರಲಿಲ್ಲ.  ಅದು ಅರಿವಾದದ್ದು ಕೊನೆಯಲ್ಲಿಯೇ!

ಮಕ್ಕಳು, ಶಿಕ್ಷಣ, ನಗು, ಹಾಸ್ಯಪ್ರಜ್ಞೆ ಎಲ್ಲವೂಗಳಿಗೂ ಹೀಗೆ ಚಾಟೂಕ್ತಿಗಳಿವೆ. ಲೇಖಕರು ಹೇಳುವಂತೆ ಸಂಗ್ರಹಗಳಿವೆ, ಸ್ವಂತದ್ದಿವೆ, ಕೇಳಿದವುಗಳಿವೆ, ಅನುವಾದಿಸಿದವುಗಳಿವೆ. ಆದರೆ ನಮಗಾಗುವ ಲಾಭವೆಂದರೆ ಎಲ್ಲಾ ಒಂದೇ ಕಡೆ ಇವೆ. ಅದೇ ಸಂತೋಷ.

ಈಗ ಯಾರೂ ಬಿದ್ದು ಬಿದ್ದು ನಗುವದಿಲ್ಲ, ಯಾರಾದರೂ ಬಿದ್ದಾಗ ನಗುತ್ತಾರೆ.

ನಾನು ನನ್ನ ತಪ್ಪುಗಳಿಂದ ಸಾಕಷ್ಟು ಪಾಠ ಕಲಿತಿದ್ದೇನೆ. ಆದುದರಿಂದಲೇ ಇನ್ನಷ್ಟು ತಪ್ಪುಗಳನ್ನು ಮಾಡಬೇಕೆಂದಿದ್ದೇನೆ.

ಒಳ್ಳೆಯ ಮಾತುಗಾರ ಇತರರು ಆಡಿದ್ದನ್ನು ನೆನಪಿಟ್ಟುಕೊಳ್ಳವವನಲ್ಲ, ಆದರೆ  ಆಡಿದ್ದನ್ನು ಬೇರೆಯವರು ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡುವವನು.

ಹೀಗೆ ನೂರಾರು ಮನನೀಯ ವಾಕ್ಯಗಳಿವೆ. ನಗೆ ಉಕ್ಕಿಸುವ, ಹುಬ್ಬೇರಿಸುವಂತೆ ಮಾಡುವ ಸಾಲುಗಳಿವೆ.  ಪುಸ್ತಕ ಓದಲು ಬೋರ್ ಎನ್ನುವವರಿಗೆ ಓದುವ ರುಚಿ ಹಚ್ಚಲು ಈ ಪುಸ್ತಕ ಅತ್ಯಂತ ಸಹಾಯಕಾರಿ. ಲೇಖಕ ಆನಂದರಿಗೆ, ಪ್ರಕಾಶಕ ಎನ್.ರಾಮನಾಥರಿಗೆ ವಂದನೆಗಳನ್ನು ತಿಳಿಸುತ್ತೇನೆ.

ಇನ್ನು ಎರಡನೆಯ ಪುಸ್ತಕ ಧರ್ಮಶ್ರೀಯವರ ‘ಅಪಾರ್ಥ ಮಂಜರಿ’ ಇದು ಅಪ್ಪಟ ಅನರ್ಥ ಕೋಶ.  ಅ ಆ ಇ ಈ ಯಿಂದ ಆರಂಭವಾಗಿ ‘ಹ’ ಕಾರದವರೆಗೆ ಅನೇಕ  ಉಕ್ಕಿಸುವ ವಿನೋಮಯ, ವಿನೂತನ ಅರ್ಥಕೋಶವಿದು. ಉದಾಹರಣೆಗೆ ಅಂಗಡಿ ಎಂದರೆ ಕೃತಕ ಅಂಗಗಳು ಸಿಗುವ ಸ್ಥಳ.

ಅನಾಥ ಎಂದರೆ ಯಾರೂ ಮೂಸಿ ನೋಡಕ್ಕೆ ಇಷ್ಟಪಡದ ವಾಸನೆ, ಅಷ್ಟಾಂಗ ಯೋಗವೆಂದರೆ, ಯೋಗಮಾಡಲು ಅಷ್ಟೂ ಅಂಗಗಳ ಬಳಕೆ. ಆಂಟಿಬಯಾಟಿಕ್ ಎಂದರೆ ಭಯ ಹುಟ್ಟಿಸುವ ಆಂಟಿ. ಆಟೋಮೊಬೈಲ್ ಎಂದರೆ, ಮೊಬೈಲಿನಲ್ಲಿ ಮಾತನಾಡುತ್ತಾ ಆಟೋ ಓಡಿಸುವ ಪ್ರಕ್ರಿಯೆ. ನಾನು ಬಹು ಹಿಂದೆ ಅಂದರೆ, ಬೀಚಿಯವರ ತಿಂಮ ರಸಾಯನ ಅರ್ಥಾತ್ ತಿಮ್ಮಿಕ್ಶ್ನರಿ ಮೊದಲ ಮುದ್ರಣ 1960.  1997ರಲ್ಲಿ  ಓದಿದ್ದು ಅದರ ದ್ವಿತೀಯ ಮುದ್ರಣ, ಅಂದರೆ ಈಗ್ಗೆ 57 ವರ್ಷದ ಹಿಂದಿನ ಕೃತಿಯನ್ನು ಆಯಾ ವಯೋಗುಣ, ಕಾಲಕ್ಕನುಗುಣವಾಗಿ, ಅರ್ಥವೂ ಬದಲಾಗಿರುವದಕ್ಕೆ ಆಶ್ಚರ್ಯಗೊಂಡೆ. ಅಂಥ ಮಡಿವಂತ ಕಾಲದಲ್ಲಿ ಬೀಚಿಯವರು ತಮ್ಮ ಈ ಕೃತಿಯಲ್ಲಿ ಅರ್ಥಗರ್ಭಿತ ಎಂದರೆ ಹಣಕ್ಕೆ ಬಸಿರಾದವಳು, ಭಾವಗರ್ಭಿತ ಎಂದರೆ ಭಾವನಿಗೆ ಬಸಿರಾದವಳು ಎಂದು ಸಂಕೋಚವಿಲ್ಲದೆ ಬರೆದಿದ್ದಾರೆ. ಅದನ್ನೆ ಹುಡುಕಿದ ನಾನು ಧರ್ಮಶ್ರೀಯವರು ಅರ್ಥಗರ್ಭಿತಕ್ಕೆ ಏನು ಫನ್ ಮಾಡಿರಬಹುದೆಂದು ನೋಡಿದರೆ ದಂಗಾಗಿ ಹೋದೆ.  ಅರ್ಥಗರ್ಭಿತ: ಗರ್ಭದಲ್ಲಿ ಹಣವನ್ನು ಹೊತ್ತಿರುವದು  ಎಂದು ಬರೆದಿದ್ದಾರೆ. ನನಗರಿವಿಲ್ಲದೇ ಬಾಯಿ  ವ್ಹಾ, ಶಹಬ್ಬಾಸ್ ಎಂಬ ನುಡಿ ಹೊರಬಂತು, ಬೀಚಿಯ ರು ಗಂಗಾಧರ ಎಂದರೆ ಖಾನಾವಳಿಗೆ ನೀರು ತರುವ ಆಳು, ಸದಾ ಕೊಡವನ್ನು ಹೆಗಲ ಮೇಲೇ ಹೊತ್ತಿರುವವ ಎಂದು ಬರೆದಿದ್ದಾರೆ. ಇಲ್ಲಿ ಧರ್ಮಶ್ರೀಯವರು ಬೂದಿಬಡಕ ಎನ್ನುವದಕ್ಕೆ ಚೈನ್ ಸ್ಮೋಕರ್ ಎಂದು ಅರ್ಥೈಸಿದ್ದಾರೆ.

ಧರ್ಮಶ್ರೀಯವರು ರಸಿಕತೆ ಎಂದರೆ ಶೃಂಗಾರದ ಕತೆಗಳು ಎಂದು ಬರೆದಿದ್ದರೆ, ಬೀಚಿಯವರು ರಸಿಕ ಎಂದರೆ ಸ್ವಂತಕ್ಕೆ ಸ್ಫುದ್ರೂಪಿ ಹೆಂಡತಿ ಇದ್ದರೂ, ಇತರರ ಕುರೂಪಿ ಹೆಂಡಂದಿರನ್ನು  ಎಂದಿದ್ದಾರೆ.  ಇರಲಿ, ಹೀಗೆ ಐವತ್ತು ವರ್ಷಗಳ ಕಾಲ ಘಟದ ಬದಲಾವಣೆ ಇದ್ದರೂ , ಧರ್ಮಶ್ರೀಯವರ ಫನ್‌ಗಳು ಫಳ್ಳನೆ ನಗೆ ಉಕ್ಕಿಸುತ್ತವೆ. ಭೂಶಿರ ಎಂದರೆ ಕೆಳಗೆ ಬಿದ್ದು ಭೂಮಿ ಪಾಲಾದ ಶಿರ

(ಕೇಸರಿ ಬಾತ್). ಭಗವಾನುವಾಚ ಎಂದರೆ ದೇವರ ಗಡಿಯಾರ, ಮಾರ್ಕ್ಸ ವಾದಿಗಳು ಎಂದರೆ ಪರೀಕ್ಷೆಯಲ್ಲಿ ಹೆಚ್ಚು ಮಾರ್ಕು ಗಳಿಸುವಂತೆ ಮಕ್ಕಳನ್ನು ಪೀಡಿಸುವ ಪೋಷಕ ಮತ್ತು ಬಂಧು ಮಿತ್ರ ವರ್ಗ, ಪಕ್ಷಿ ಎಂದರೆ ಬರ್ಡ್ ಅಲರ್ಜಿ ಆದಾಗ ಬರೋ ಸೀನು,  ಹಾಸ್ಟೆಲ್, ಬೀಜಗಣಿತ  ಎಂದರೆ ಸ್ಪರ್ಮ್‌ಕೌಂಟ್, ಪಂಚಮಿ ಹಬ್ಬವೆಂದರೆ ಇಲ್ಲಿ ಪಂಚ್ ಮಿ ಎಂದು ಅರ್ಥಮಾಡಕೊಂಡು ಬಾಕ್ಸಿಂಗ್ ಪಂದ್ಯಾವಳಿ ಎಂದಿದ್ದಾರೆ.  ಧಾರ್ಮಿಕರೆಂದರೆ ಧರ್ಮಕ್ಕೆ ಬಲಿಯಾದವರು.  ಇಸ್ಪಿಟ್ ಕ್ಲಬ್‌ಗೆ ಕನ್ನಡ ಹೆಸರು ಪರ್ಣಕುಟೀರ.  ಇಲ್ಲಿ ಮತ್ತೆ ಬೀಚಿಯವರ ನೆನಪು, ಜನಪ್ರಿಯತೆ ಬಯಸದ ಪ್ರತಿಭೆಗಳಿಗೆ  ಎಲೆ ಮರೆಯ ಕಾಯಿ ಅಲ್ಲವೇ.  ಬೀಚಿಯವರ ಫನ್‌ನಲ್ಲಿ ಎಲೆ ಮರೆಯ ಕಾಯಿ ಎಂದರೆ ಕೈಯಲ್ಲಿ ಹಿಡಿದಿರುವ ಇಸ್ಪೀಟ್ ಎಲೆಗಳ ಹಿಂದೆ ತಲೆ ಮರೆಸಿಕೊಂಡವನು ಎನ್ನುವ ಅರ್ಥ ಕೊಟ್ಟಿದ್ದಾರೆ.

 ಅವರ ಪ್ರಕಾರ ಷಷ್ಠಿ ಪೂರ್ತಿ ಎಂದರೆ ಮೊದಲನೆ ಪೆಗ್ ಸಂಪೂರ್ಣ, ಸಂಕಷ್ಟ ಚತುರ್ಥಿ ಅಂದರೆ ನಾಲ್ಕನೇ ಪೆಗ್ ನಂತರ ಬಂದೊದಗುವ ಸಂಕಷ್ಟಗಳು. ಸಂಕೋಚ ಎಂದರೆ ಚಾ ಕುಡಿತೀರಾ ಎಂದು ಯಾರಾದರೂ ಆಫರ್ ಮಾಡಿದಾಗ ಅಯ್ಯೋ ಜಸ್ಟ ಆಯ್ತು ತೊಂದ್ರೆ ಬೇಡ ಅಂತ ಹೇಳುತ್ತಲೇ ಇಸ್ಕೊಂಡು ಕುಡಿಯೋ ಚಹಾ ಅಂತೆ.ಇದನ್ನೇ ಬೀಚಿಯವರು ತಮ್ಮ ತಿಂಮಿಕ್ಶ್ನರಿಯಲ್ಲಿ ‘ಧರ್ಮೆಚಾ, ಅರ್ಥೇಚಾ, ಕಾಮೇಚಾ ಎಂದರೆ ಅರ್ಥ ವಿವರಿಸುತ್ತಾ ಯಾರಾದರೂ ಬಿಟ್ಟಿಯಾಗಿ ಕುಡಿಸಿದ ಚಹ ಧರ್ಮೇಚಾ,  ಹಣಕೊಟ್ಟು ಕುಡಿದ ಚಹಾ ಅರ್ಥೇಚಾ, ಅಯ್ಯೋ ಯಾರಾದರೂ ನನಗೆ ಟೀ ಕುಡಿಸಿ ಎಂದು ಕೇಳಿ ಕುಡಿಯುವ ಚಹಾ ಕಾಮೇಚ, ಎಂದಿದ್ದಾರೆ.

ನಿಜಕ್ಕೂ, ದಂನಆ ಅವರ ತುಂತುರು, ಧರ್ಮಶ್ರೀಯವರ ಅಪಾರ್ಥಮಂಜರಿ ನನಗೆ ಲಘು ಬರಹಗಳೆನೆಸಿಕೊಳ್ಳುವ ಇಂಥ ಪುಸ್ತಕಗಳಲ್ಲೂ ಅಡಗಿರುವ ಘನತತ್ವಗಳ ಬಗ್ಗೆ ಹೆಮ್ಮೆ ಎನಿಸಿತು. ಉದ್‌ಗ್ರಂಥಗಳ, ವೈಚಾರಿಕ ಅಧ್ಯಯನ ತಲೆ ಬಾಯುವಂತೆ ಮಾಡಿದರೆ ಈ ಪುಸ್ತಕಗಳು ತಲೆ, ಮೈ,ಕೈ ಹಗುರಗೊಳಿಸುತ್ತವೆ.  ಇಂದಿನ ಯುವ ಪೀಳಿಗೆಗೆ ಕೈಯಲ್ಲಿನ ವಾಟ್ಸಪ್, ಮೊಬೈಲು, ಬಿಡಿಸಲು  ಪುಸ್ತಕಗಳು ಖಂಡಿತ ಸಹಕಾರಿಯಾಗಬಲ್ಲವು. ಇಂದಿನ ವಿದ್ಯಾರ್ಥಿ, ಯುವಕರಿಗೆ ವ್ಯಾಕರಣದ ಗುರು-ಲಘುಗಳು ಗೊತ್ತಿಲ್ಲ ಏಕೆಂದರೆ ಅವರು ಗುರುಗಳನ್ನೇ ಲಘುವಾಗಿ ತೆಗೆದುಕೊಂಡಿದ್ದಾರೆ ಎಂಬ ಚುಟುಕುನಂತೆ ಅವರು ಪುಸ್ತಕಗಳನ್ನಾದರೂ ಗುರುವನ್ನಾಗಿ ಸ್ವೀಕರಿಸಲಿ.