About Us Advertise with us Be a Reporter E-Paper

ಗುರು

ತತ್ತ್ವಪದಗಳ ಹರಿಕಾರ ಕಡಕೋಳದ ಮಡಿವಾಳಪ್ಪ

* ಪ್ರಹ್ಲಾದ್. ವಾ. ಪತ್ತಾರ

ಮುಡಚಟ್ಟಿನೊಳು ಬಂದು, ಮುಟ್ಟಿ ತಟ್ಟಿ ಅಂತಿರಿ.
ಮುಡುಚಟ್ಟು ಎಲ್ಯಾದ ಹೇಳಣ್ಣ ?
ಮುಟ್ಟಾದ ಮೂರು ದಿನಕ ಹುಟ್ಟಿ ಬಂದವ ನೀನು
ಮುಡಚಟ್ಟು ಎಲ್ಯಾದ ಹೇಳಣ್ಣ ?

ಈ ಭಜನಾ ಪದ ಹೈದ್ರಾಬಾದ್ ಕರ್ನಾಟಕದ ಎಲ್ಲಾ ಊರುಗಳ ಮಠ, ಮಂದಿರ, ಭಜನಾ ಮೇಳಗಳಲ್ಲಿ ಸದಾ ಗುಂಯಿಗುಡುವುದು. ಈ ತತ್ವಪದದ ಕಡಕೋಳ ಮಡಿವಾಳಪ್ಪ.

ಸಮಾಜದ ಜಾಡ್ಯದ ಅಂಧಕಾರ ಹರಿದು ಹಾಕಲು, ಸರಳ ಆಡು ಮಾತಿನ ಮೂಲಕ ತತ್ವ ಪದಗಳನ್ನು ತನ್ನ ಅನುಭವದ ಮೂಸೆಯಲ್ಲಿ ರಚಿಸಿ ಸೊಗಸಾಗಿ ಹಾಡಿ ಸಮಾಜದ ಓರೆ ಕೊರೆ ತಿದ್ದಲು ಪ್ರಯತ್ನ ಪಟ್ಟಂತವರು ಕಡಕೋಳ ಮಡಿಮಾಳಪ್ಪನವರು. ತತ್ತ್ವಪದಕಾರರ ಅಗ್ರ ಪಂಥಿಯಲ್ಲಿ ನಿಲ್ಲುವ ನಿಯುವು ಈ ಕಡಕೋಳ ಮಡಿವಾಳಪ್ಪನವರದು. ಬಸವಾದಿ ಶರಣರಂತೆ ಆಡಂಬರ ವೈಭವವಿಲ್ಲದ ಸರಳ ತಾತ್ತ್ವಿಕ ನೆಲೆಯಲ್ಲಿ, ಅಧ್ಯಾತ್ಮಕ್ಕೆ ಮಾತಿನಲ್ಲೇ ಹೊಸ ಆಯಾಮದ ರೂಪ ನೀಡಿದವರು. ಬದುಕಿನ ಇವರ ಪದಗಳಲ್ಲಿ ಎದ್ದುಕಾಣುವುದು.

ಶಿಶುನಾಳ ಶರೀಫರು ಮಧ್ಯ ಕರ್ನಾಟಕದಲ್ಲಿ ಸದ್ದು ಮಾಡುವ ಕಾಲ ಘಟ್ಟದಲ್ಲಿ ಕಡಕೋಳ ಮಡಿವಾಳಪ್ಪ ಮತ್ತು ಶಿಷ್ಯ ಪರಂಪರೆ ಪಾರಮಾರ್ಥಿಕ ಬದುಕಿನ ನಿಜಾರ್ಥ ಕಂಡುಕೊಳ್ಳಲು ಅನುಭಾವದ ತತ್ತ್ವ ಪದಗಳನ್ನು ಕಲಬುರ್ಗಿ ಜಿಲ್ಲೆ ಮೂಲಕ ಜಗತ್ತಿಗೆ ನೀಡಿದರು. ಕಡಕೋಳ ಕರ್ಮ ಭೂಮಿಯಾಗಿ ಮಾಡಿಕೊಂಡರು. ಇವರು ಜೀವಂತ ಸಮಾಧಿ ಯಾದ ನಂತರ ಶೃದ್ದಾ ಭಕ್ತಿಯಿಂದ ಪೂಜಿಸಿ ಜಪಿಸುವ ಭಕ್ತರ ಬಳಗವೇ ಈ ಭಾಗದಲ್ಲಿ ಹುಟ್ಟಿಕೊಂಡಿತು. ಜಾತಿ- ಮತ, ಪಂತ, ಭಾವವಿಲ್ಲದೆ ಮಾಘ ಮಾಸದಲ್ಲಿ ಪ್ರತಿ ವರ್ಷ ವಿಜೃಂಭಣೆಯಿಂದ ಕಡಕೋಳದಲ್ಲಿ ಮಡಿವಾಳಪ್ಪನವರ ಜಾತ್ರೆ ನಡೆಯುವುದು.

* ಜೀವನ ಚರಿತ್ರೆ
ಇವರ ಕಾಲ ಮಾನ 18ನೇ ಶತಮಾನವಾಗಿದೆ. ಗಂಗಮ್ಮ ವಿರೂಪಾಕ್ಷಯ್ಯರ ಮಗನಾಗಿ ಕಲಬುರ್ಗಿ ಜಿಲ್ಲೆ ಅಫಜಲಪೂರ ತಾಲ್ಲೂಕಿನ ಬಿದುನೂರಿನಲ್ಲಿ 1765ರಲ್ಲಿ ಜನಿಸಿದರೆಂದು ಅಭಿಪ್ರಾಯ ಪಡಲಾಗಿದೆ. ವಿಧವೆಯ ವಿವಾಹೇತರ ಸಂಬಂಧದಿಂದ ಜನಿಸಿದ ಮಗು ಎಂದು ಜಾತಿವಾದಿಗಳು ಇವರನ್ನು ತಿರಸ್ಕರಿಸಿದರು. ಮೂಲಭೂತ ಜಾತೀವಾದಿ ಮನಸ್ಸುಗಳಿಂದ ಅಪಹಾಸ್ಯ, ನಿಂದನೆಗೂ ಒಳಗಾದರು. ಲಿಂಗ ದೀಕ್ಷೆ ಪಡೆಯುವ ಹಂಬಲದಿಂದ ಶರಣರನ್ನು ಮಠದ ಪೀಠಾಧಿಪತಿಗಳನ್ನು ಕಂಡರು. ಈ ಸಂದರ್ಭದಲ್ಲಿ ಬಹುತೇಕರು ಇವರನ್ನು ವಿರೋಧ ವ್ಯಕ್ತಪಡಿಸಿದರು. ಇದರಿಂದ ಲಿಂಗ ದೀಕ್ಷೆ ಪಡೆಯುವ ಹಠ ಹೆಚ್ಚುತ್ತಲೇ ಹೋಯಿತು. ಎದೆಗುಂದದೆ ಛಲ ಬಿಡದೆ ಜಾತಿವಾದಿಗಳ ವಿರುದ್ಧ ಹೋರಾಡಿದರು. ಇದರಿಂದ ಹಿಂಸೆ, ಅಪಮಾನ, ಬೆದರಿಕೆಗಳನ್ನು ಅನುಭಿಸಬೇಕಾಯಿತು. ಮನ ನೊಂದು ಜೇವರ್ಗಿ ತಾಲ್ಲೂಕಿನತ್ತ ಒಲಸೆ ಬರುತ್ತಾರೆ. ಈ ಅವಧಿಯಲ್ಲಿ ಹತ್ತಾರು ಶರಣರು ಸಂತರನ್ನು ಸಂಪರ್ಕಿಸಿ ದೀಕ್ಷೆ ಪಡೆಯಲು ಪರಿತಪಿಸುತ್ತಾರೆ. ಒಂದು ಶಾಶ್ವತ ನೆಲೆಗಾಗಿ ಬಿದನೂರು, ಅರಳಗುಂಡಿಗೆ, ಚಿಮಣಗೇರಿ, ಜಂಬೇರಾಳ, ಕಡಕೋಳಗಳ ಮುಂತಾದ ಊರುಗಳನ್ನು ಸುತ್ತುತ್ತಾರೆ. ಅರಳಗುಂಡಗಿಯ ಶರಣ ಬಸವನ ಅಣತಿಯಂತೆ ಕಲಕೇರಿಯ ಮರುಳಾರಾಧ್ಯರಿಂದ ಲಿಂಗ ದೀಕ್ಷೆ ಪಡೆಯುತ್ತಾರೆ. ತದನಂತರ ಕಡಕೋಳ ತಮ್ಮ ಕಾರ್ಯಸ್ಥಾನ ಮಾಡಿಕೊಂಡು ಕರ್ಮಭೂಮಿಯಾಗಿ ಮಾಡಿಕೊಳ್ಳುತ್ತಾರೆ. ಸುತ್ತಲಿನ ಹತ್ತಾರು ಜನರ ಪ್ರೀತಿಗೆ ಪಾತ್ರರಾಗಿ ಶಿಷ್ಯ ಮತ್ತು ಗೆಳೆಯರನ್ನು ಸಂಪಾದಿಸುತ್ತಾರೆ. ಬದುಕಿನ ನೋವು ನಲಿವಿನ ಅನುಭವದ ಕಡೆಗೋಲಿನಲ್ಲಿ ಪಾರಮಾರ್ಥಿಕ ಲೋಕದ ಅನುಭಾವದ ತತ್ವಪದಗಳನ್ನು ರಚಿಸುತ್ತಾರೆ. ಇವುಗಳನ್ನೇ ಅಸ್ತ್ರಮಾಡಿಕೊಂಡು ಸಮಾಜದ ಓರೆ ಕೊರೆ ತಿದ್ದಲು ಪ್ರಯತ್ನಿಸುತ್ತಾರೆ. ಇವರ ತತ್ತ್ವ ಪ್ರಗತಿ ಪರ ಚಿಂತನೆಗಳು ಎದ್ದುಕಾಣುವುದು ವಿಶೇಷ.

* ತತ್ತ್ವಜ್ಞಾನದ ರಸಾನುಭವ
ಮಡಿವಾಳಪ್ಪನವರ ತತ್ತ್ವಪದಗಳಲ್ಲಿ ಆರೂಢ, ನಾಥಪಂಥ, ಯೌಗಿಕ, ಏಕೊಪಾಸನೆ ಮುಂತಾದ ಜಾನಪದಿಯ ತಳಪರಂಪರೆಗಳ ತತ್ವ ರಸಾನುಭವ ಕಾಣಬಹುದು. ತಮ್ಮ ಸಮಕಾಲೀನ ಅನುಭಾವಿಗಳ ಜೊತೆಗೂಡಿ ಅನುಸಂಧಾನ ಮಾಡಿದರು. ಧರ್ಮ ಸಾಮರಸ್ಯದಲ್ಲಿ ಜಾತಿ ಸಾಮರಸ್ಯಕ್ಕೆ ಒತ್ತುನೀಡಿದರು. ಸಮಕಾಲೀನ ಶಿವ ಶರಣರ ಮಹಾಮನೆಯಲ್ಲಿ ಕುಳಿತು ಸಮಸ್ತರಿಗೂ ಪರಮಾರ್ಥದ ನೆಲೆ ತೋರಿಸಲು ಪ್ರಯತ್ನಿಸಿದರು. ಮಡಿವಾಳಪ್ಪನವರು ಯಡ್ರಾಮಿ ತಾಲ್ಲೂಕಿನ ಕಡಕೋಳದಲ್ಲಿ ಮಠ ಕಟ್ಟಿದರು. ಈ ಪ್ರದೇಶ ಜಿಲ್ಲೆ ಗಡಿ ಊರುಗಳಿಗೂ ಸೀಮೆಯಾಗಿದೆ. ಹೀಗಾಗಿ ಸಿಂದಗಿ ಇಂಡಿ ತಾಲ್ಲೂಕಿನ ಅನೇಕ ಊರುಗಳ ಜನರು ಇವರ ಪ್ರಭಾವಕ್ಕೆ ಒಳಗಾಗಿದ್ದರು.

*ಸಮಕಾಲೀನ ಶಿಷ್ಯ ಪರಂಪರೆ
ಖೈನೂರು ಕೃಷ್ಣಪ್ಪ, ತೆಲಗಬಾಳದ ರೇವಪ್ಪ, ಕಡ್ಲೆವಾಡ ಸಿದಪ್ಪ, ಚೆನ್ನೂರು ಜಲಾಲಸಾಹೇಬ, ಅರಳಗುಂಡಿಗೆ ಭಾಗಮ್ಮ, ಬಸಲಿಂಗಮ್ಮ, ಮಲ್ಲಣಗೌಡ ಮುಂತಾದವರು ಮಡಿವಾಳಪ್ಪನವರ ಶಿಷ್ಯಬಳಗದವರಲ್ಲಿ ಪ್ರಮುಖರು. ಕಡಕೊಳ ಮಠವು ತತ್ತ್ವಪದಗಳ ಟಂಕಸಾಲೆಯೆ ಆಯಿತು. ಮಡಿವಾಳಪ್ಪ ತತ್ತ್ವಪದಗಳನ್ನು ಹಾಡುತ್ತ ಶಿಷ್ಯರಿಂದ ಬರೆಸುತ್ತಿದ್ದರು. ಇವರು ರಚಿಸಿದ ಸುಮಾರು ಇನ್ನೂರು ಪದಗಳು ದೊರೆತಿವೆ. ಪದಗಳು ಈ ಭಾಗದಲ್ಲಿ ಭಜನಾ ಪದಗಳೆಂದೇ ಜನಜನಿತ. ಮಡಿವಾಳಪ್ಪನವರ ಜೊತೆ ವಿವಿಧ ಜಾತಿ-ಮತ-ಪಂಥಗಳ ಶಿಷ್ಯರು ಕೈಜೊಡಿಸಿದರು. ನೂರಾರು ಶಿಷ್ಯರಿಗೆ ಪಾರಮಾರ್ಥಿಕ ದಾರಿ ತೋರಿದ ಮಡಿವಾಳಪ್ಪನವರು, ಪಾರಮಾರ್ಥಿಕ ಮತ್ತು ಲೌಕಿಕವೆರಡನ್ನೂ ಸಮನ್ವಯಗೊಳಿಸಿದ ಮಹಾಸಂತರಾದರು. ವ್ಯಕ್ತಿಗತ ನೆಲೆಯಿಂದ ಸಮಷ್ಟಿ ಚಿಂತನೆ ಮಾಡಿದರು. ತತ್ತ್ವಪದಗಳಿಗೆ ಹೊಸರೂಪ ತಂದುಕೊಟ್ಟ ಅಪೂರ್ವ ಅನುಭಾವ ಜೀವಿ ಕಡಕೋಳ ಮಡಿವಾಳಪ್ಪನವರು.

ಮಡಿವಾಳಪ್ಪನವರ ತತ್ತ್ವಪದಗಳನ್ನು ಸತ್ತ್ವ ಮತ್ತು ವಾಸ್ತವದ ನೆಲೆಗಟ್ಟಿನ ಮೂಸೆಯಲ್ಲಿ ಅವಯೋಕಿಸಿದರೆ, ಅತ್ಯಂತ ಸರಳವಾಗಿ ಬದುಕಿನ ಉದ್ದೇಶ ಅರಿಯಬಹುದು. ವಿರುದ್ಧ ಅತ್ಯಂತ ತೀವ್ರ ಆಕ್ರೋಶಭರಿತವಾಗಿ ತಾತ್ವಿಕ ನೆಲೆಯಿಂದ ಪ್ರತಿರೋಧವನ್ನು ಮಾಡಿರುವುದನ್ನು ಕಾಣಬಹುದು. ಸಾಮಾಜಿಕ ಸಾಮರಸ್ಯದ ಒಂದು ಚಳುವಳಿಯನ್ನೇ ಅಂದಿನ ಸಮಕಾಲೀನರಲ್ಲಿ ಮಡಿವಾಳಪ್ಪ ರೂಪಿಸಿದ್ದರು.

*ತತ್ತ್ವ ಪದಗಳ ಕೆಲವು ಝಲಕ್‌ಗಳು
ತೊಗಲೊಳು ತೊಗಲ್ಹೊಕ್ಕು ತಗಲಿ ಬಂದವ ನೀನು, ಊರಬಾವಿಯ ಯಾರ ತೋಡಿದರೇನು, ನಿಮ್ಮ ನೀರು ಬ್ಯಾರೆವೇನಣ್ಣ ? ಮೂಕನಾಗಬೇಕು ಈ ಜಗದೊಳು ಜ್ವಾಕ್ಯಾಗಿರಬೇಕು. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ. ಯಾಕ ವಣ ಚಿಂತಿ ಮಾಡತಿ ಯಾತರ ಸುಖವಿಲ್ಲ ಈ ಮಂಡಲದೊಳಗ ಮಂದಿ ಮಾಡೊದು ಕಂಡು ಅದಕೆ ಬಂದಾವಪ್ಪ ಇಂಥ ದಿನ. ಎಂಥಾ ಆಕಳ ಕೊಟ್ಟಾನು ಗುರು ಕಾಮಧೇನು… ಹೀಗೆ ಮಡಿವಾಳಪ್ಪರ ತತ್ತ್ವಪದಗಳು ಶಿಷ್ಠ ಹಾಗೂ ಜನಪದ ಎರಡೂ ಪ್ರಕಾರಗಳನ್ನು ಒಳಗೊಂಡಿದೆ. ಧರ್ಮ ಸಾಮರಸ್ಯ ಪ್ರಾದೇಶಿಕ ಭಾಷೆಯ ಸಮನ್ವಯವನ್ನು ಸಾಧಿಸಿವೆ. ತತ್ತ್ವಪದಳು ಜಾನಪದ ಸಾಹಿತ್ಯದ ಸಮನ್ವಯವನ್ನು ಸಾಧಿಸಿವೆ. ಇವರು ರಚಿಸಿದ ಪದ್ಯವನ್ನು ಒಂಭತ್ತನೇ ತರಗತಿಯ ಪ್ರಥಮ ಭಾಷೆ ಕನ್ನಡದಲ್ಲಿ ಪಠ್ಯವಾಗಿ ಸೇರಿಸಲಾಗಿದೆ. ಹೀಗೆ ಜೀವನಾನುಭವ ತತ್ತ್ವ ಪದಗಳ ಮೂಲಕ ಖ್ಯಾತಿಯಾದವರು

Tags

Related Articles

Leave a Reply

Your email address will not be published. Required fields are marked *

Language
Close