About Us Advertise with us Be a Reporter E-Paper

ವಿ +

ಲೈಬ್ರರಿಯಲ್ಲಿ ಕೇಳಿಸಿದ ಅಪ್ಪನ ಧ್ವನಿ!

- ಗೌರಿ ಭೀ. ಕಟ್ಟಿಮನಿ, ಹುಬ್ಬಳ್ಳಿ

ಮನಸ್ಸೇಕೋ ಭಾರವಾಗಿತ್ತು. ಯಾರೊಟ್ಟಿಗೂ ಮಾತಾಡುವ ಮನಸ್ಸಿರಲಿಲ್ಲ, ಸುಮ್ನೆ ಏಕಾಂಗಿಯಾಗಿರಬೇಕು ಅಂತನಿಸುತ್ತಿತ್ತು. ಬಸ್ಟಾಪ್‌ನಲ್ಲಿ ಕುಂತವಳು ಏನನ್ನೋ ಯೋಚಿಸ್ತಾ ಲೈಬ್ರರಿಯತ್ತ ಹೆಜ್ಜೆ ಹಾಕಿದೆ. ಶಾಂತವಾಗಿರೋ ವಾತಾವರಣ, ಬೀಸುತ್ತಿರುವ ತಂಗಾಳಿ, ಹನಿಗೂಡುತ್ತಿರುವ ಕಾರಂಜಿ, ಸೂರ್ಯನ ಚುಂಬುವಿಕೆಯಿಂದ ಗಾಳಿಯೊಟ್ಟಿಗೆ ಚೆಲ್ಲಾಟವಾಡುತ್ತಿರುವ ಗಿಡ-ಮರಗಳು, ಅದೇಷ್ಟೋ ಜನರು ಏಕಾಂಗಿಯಾಗಿ ಓದುತ್ತಿದ್ದರು. ಯಾವುದಾದರೂ ಚೆನ್ನಾಗಿರುವ ಬುಕ್ ತಗೊಂಡು ಓದಿದ್ರೆ, ನನ್ನ ಮನಸ್ಥಿತಿ ಸರಿಹೋಗಬಹುದೇನೋ ಅಂತ ರಿಜಿಸ್ಟರ್‌ನಲ್ಲಿ ಹೆಸರು ಬರೆದು, ಒಳಗೆ ಹೋದೆ. ಸುಮ್ನೆ ರ್ಯಾಕ್‌ನಲ್ಲಿ ಜೋಡಿಸಿಟ್ಟ ಪುಸ್ತಕಗಳನ್ನು ಒಂದೊಂದೆ ನೋಡ್ತಾ, ನಡುವಿನ ಪುಟಗಳನ್ನು ತೆರೆದು ಓದೋದಿ ಇಡ್ತಾಯಿದ್ದೆ.

ಥಟ್ಟಂತ ರವಿ ಬೆಳಗೇರಿಯವರ ಪುಸ್ತಕವೊಂದು ನೆನಪಾಯ್ತು. ಅಲ್ಲಿದ್ದ ಇನ್‌ಚಾರ್ಜರ್‌ರನ್ನು ‘ಅಂಕಲ್, ರವಿ ಬೆಳಗೆರಿಯವರ ಬುಕ್ ಇಲ್ಲಿಲ್ಲಾ, ಎಲ್ಲಿದೆ?’ ಅಂದೆ, ‘ಹೊರಗಡೆ ಕೆಟಲಾಗ್‌ನಲ್ಲಿ ಚೆಕ್ ಮಾಡು ಸಿಗುತ್ತೆ’ ಅಂದು ತಮ್ಮ ಕೆಲಸದಲ್ಲಿ ನಿರತರಾದರು. ನಾನು ಹೊರಹೋಗದೆ ಅಲ್ಲೆ ಬೇರೆ ಪುಸ್ತಕ ಓದುತ್ತಾ ನಿಂತೆ. ದಿಢೀರಂತ ಅಪ್ಪನ ಧ್ವನಿ ಕೇಳಿದಂತಾಯ್ತು! ಅರೇಕ್ಷಣ ಓದುವುದನ್ನು ನಿಲ್ಲಿಸಿ ಸುಮ್ಮನೆ ನಿಂತೆ. ಮತ್ತೆ ಮತ್ತೆ ಅದೇ ಧ್ವನಿ.. ಖುಷಿಯಾಯ್ತು ಆ ಧ್ವನಿ ಕೇಳಿ ಅದೇಷ್ಟೋ ದಿನಗಳಾಗಿತ್ತು… ಮಾತು ಹೊರಡಲಿಲ್ಲ.

ರಾಶಿ ಪುಸ್ತಕಗಳ ಕೋಣೆಯಲ್ಲಿ ಅಪ್ಪನ ಧ್ವನಿ ಮತ್ತೆ ಮತ್ತೆ ಪ್ರತಿಧ್ವನಿಸುತ್ತಲೇ ಇತ್ತು! ಅದೇ ಗಡಸುತನ, ಕೆಲಸ ತಕ್ಷಣ ಆಗಲೇಬೇಕೋ ಅನ್ನೋ ಒತ್ತಡ, ಅದೇ ನಗು ಎಲ್ಲವೂ ಅಪ್ಪನ ಧ್ವನಿಯ ರೀತಿಯಲ್ಲೇ ಕೇಳುತ್ತಿತ್ತು. ಹತ್ತು ನಿಮಿಷದವರೆಗೆ ಆ ಧ್ವನಿ ಕೇಳುತ್ತಾ ಅಲ್ಲೇ ನಿಂತುಬಿಟ್ಟೆ. ಆ ಕಡೆ ಕೇಳುತ್ತಿರುವ ಧ್ವನಿ ಯಾರದಿರಬಹುದು? ಅಂತ ಕೊಂಚ ಇಣುಕಿ ನೋಡಿದೆ. ಅದೇ ಅಂಕಲ್! ಅವರನ್ನೆ ದಿಟ್ಟಿಸಿ ನೋಡುತ್ತಾ ನಿಂತೆ. ಸರಳ ಬಟ್ಟೆ, ಸಾದಾಗಪ್ಪು ಮೈಬಣ್ಣ, ಕಿಸೆಯಲ್ಲಿರುವ ಪೆನ್ನು, ಕೈಯಲ್ಲಿರುವ ಮೊಬೈಲ್, ಹೇರ್ ಸ್ಟೈಲ್ ಮಾತ್ರ ಸ್ವಲ್ಪ ಚೇಂಜ್.. ನನ್ನಪ್ಪನನ್ನೆ ಹೋಲುತ್ತಿತ್ತು.

ಅಪ್ಪ ನಮ್ಮನ್ನಗಲಿ ಅದಾಗಲೇ ಮೂರು ವಸಂತಗಳು ಕಳೆದುಹೋಗಿದ್ದವು. ಅವರ ನೆನಪಾದಾಗಲೆಲ್ಲ ಅವರ ಮಾತುಗಳು ಮೆಲ್ಲಗೆ ಪಿಸುಗುಡುತ್ತಿದ್ದವು. ತುಂಬಾನೆ ಬೇಸರದಲ್ಲಿದ್ದ ನನಗೆ ಲೈಬ್ರರಿಲಿ ಕೇಳಿದ ಅಪ್ಪನ ಧ್ವನಿ ಮನಸ್ಸನ್ನು ನಿರಾಳಗೊಳಿಸಿತು. ಒಂದೊಳ್ಳೆ ಪುಸ್ತಕ ಹುಡುಕುವುದರಲ್ಲಿ ಮತ್ತೆ ಕಳೆದುಹೋದೆ. ಆದರೂ ಆ ಧ್ವನಿ ಮತ್ತೆ ಮತ್ತೆ ಕಾಡುತ್ತಲೇ ಇತ್ತು. ಒಂದು ಗಂಟೆಗೂ ಹೆಚ್ಚು ಕಾಲ ಅಲ್ಲೇ ನಿಂತಿದ್ದೆ. ನನ ್ನಮುಖ ಸ್ವಲ್ಪ ಸೋತೋದ ಹಾಗೆ ಕಂಡರೂ ಅಪ್ಪ ಕಂಡುಹಿಡಿಯುತ್ತಿದ್ದ. ನನಗೆ ಅಪ್ಪನ ಮಾತುಗಳೆ ಸ್ಫೂರ್ತಿ ತುಂಬುತ್ತಿದ್ದವು. ಬಹುಶಃ ಇಂದು ಕೂಡ ಬೇಜಾರಲ್ಲಿದ್ದ ನನಗೆ ಅಪ್ಪನ ಆ ಧ್ವನಿ ಕೇಳಿ ಸಮಾಧಾನವಾಯಿತು. ಅಂದಿನಿಂದ ಮತ್ತೆ ಮತ್ತೆ ಆ ಧ್ವನಿ ಕೇಳಬೇಕೆನಿಸಿದಾಗಲೆಲ್ಲ ಲೈಬ್ರರಿಗೆ ಹೋಗಲು ಮನ ಹಾತೊರೆಯುತ್ತದೆ.

Tags

Related Articles

Leave a Reply

Your email address will not be published. Required fields are marked *

Language
Close