About Us Advertise with us Be a Reporter E-Paper

ಅಂಕಣಗಳು

ಹೆಣ್ಣುಭ್ರೂಣ ಹತ್ಯೆ ‘ವ್ಯಾಪಾರ’ಕ್ಕೆ ಎಂದು ಕೊನೆ?

- ಸರಸ್ವತಿ ವಿಶ್ವನಾಥ ಪಾಟೀಲ, ಕಾರಟಗಿ

ಇವತ್ತಿಗೂ ಈ ದೇಶದಲ್ಲಿ ಹೆಣ್ಣು ಮಗುವಾದರೆ ಮೂಗು ಮುರಿಯುವ ಜನರಿದ್ದಾರೆ; ಮೊದಲಿದ್ದಷ್ಟು ಸಂಖ್ಯೆಯಲ್ಲಿ ಇಲ್ಲದಿರಬಹುದು. ಆದರೆ ಮಗು ಹುಟ್ಟಿದರೆ ಸಂಭ್ರಮಿಸುವವರ ಸಂಖ್ಯೆ ಇನ್ನೂ ದೊಡ್ಡ ಮಟ್ಟದಲ್ಲೇ ಇದೆ. ಇದರಿಂದಾಗಿಯೇ ಒಟ್ಟು ಜನಸಂಖ್ಯೆಯಲ್ಲಿ ಗಂಡು ಮತ್ತು ಹೆಣ್ಣಿನ ನಡುವಿನ ಅನುಪಾತ ಕಡಿಮೆ ಇದೆ. ಇಂದು ಸಮಾಜದಲ್ಲಿ ಮಹಿಳೆಯ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಗೆ ನೂರು ಕಾರಣಗಳು. ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಹಿಳೆಯ ಮೇಲೆ ಒಂದಲ್ಲ ಒಂದು ರೀತಿಯ ದೌರ್ಜನ್ಯ ನಡೆಯುತ್ತಲೇ ಇದೆ. ಹೆಣ್ಣು ಭ್ರೂಣ ಹತ್ಯೆ ಹೆಣ್ಣಿನ ಅಸ್ತಿತ್ವಕ್ಕೇ ಕೊಡಲಿ ಪೆಟ್ಟು ಹಾಕುವಂಥದ್ದು. ಹೆಣ್ಣು ಮಗು ಬೇಡ ಅಥವಾ ಅವಳು ಹೊರೆ ಎಂದು ಭಾವಿಸಲು ಕಾರಣಗಳು ಹಲವಿವೆ. ದೇಶಾದ್ಯಂತ ಹೆಣ್ಣು ಭ್ರೂಣ ಹತ್ಯೆ ಹೆಚ್ಚಾಗುತ್ತಿರುವುದರಿಂದ ಹೆಣ್ಣು ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದ್ದು, ಮುಂದೆ ಇದು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ.

ಹೆಣ್ಣು ಮಗು ಹುಟ್ಟಿದ ಕ್ಷಣದಿಂದಲೇ ಅದು ಒಂದು ಹೊರೆ, ಹೊಣೆ ಎಂಬ ಚಿಂತೆ ಹೆತ್ತವರಲ್ಲಿ ಮೂಡುವ ಕಾಲವೊಂದಿತ್ತು. ಆ ನಂತರದ ಕಾಲದಲ್ಲಿ ವೈದ್ಯಕೀಯ ಸೌಲಭ್ಯಗಳು ಅಭಿವೃದ್ಧಿಯಾದಂತೆ, ‘ಹೆಣ್ಣು ಭ್ರೂಣ ಇಟ್ಟುಕೊಳ್ಳಬೇಕಾದ್ದಲ್ಲ’ ಎಂಬ ಭಾವನೆ ಬಲಿಯಿತು. ಸುಲಭದಲ್ಲಿ ಅದನ್ನು ತೆಗೆದುಬಿಡಬಹುದು ದುಷ್ಟ ಯೋಚನೆ ಸಮಾಜದಲ್ಲಿ ವ್ಯಾಪಕವಾಗುತ್ತಾ ಹೋಯಿತು. ಕುಟುಂಬ ಯೋಜನೆ ರೂಢಿಗೆ ಬಂದಾಗ ಅನಗತ್ಯವೆಂದು ಪರಿಗಣಿಸಲಾದ ಭ್ರೂಣವನ್ನು ತೆಗೆದು ಹಾಕುವುದು ಚಾಲ್ತಿಯಲ್ಲಿತ್ತು. ಆದರೆ ಅದನ್ನು ಹೆಣ್ಣು ಭ್ರೂಣವನ್ನು ತೆಗೆಸಿಬಿಡುವ ಅಗತ್ಯಕ್ಕೆ ಬಳಸಿಕೊಂಡಿದ್ದು ಮಾತ್ರ ಜೀವವಿರೋಧಿ ಚಟುವಟಿಕೆಯಾಗಿ ಆತಂಕ ಸೃಷ್ಟಿಸಿತು. ಆಧುನಿಕ ಬದುಕಿನಲ್ಲಿ ಹೆಚ್ಚು ಆರಾಮವಾಗಿ ಬದುಕಲು ಮಕ್ಕಳ ಸಂಖ್ಯೆ ಎರಡಕ್ಕಿಂತ ಹೆಚ್ಚಿರಬಾರದು ಎಂಬ ಭಾವನೆ ಬಲವಾದಾಗ ಭ್ರೂಣ ಹತ್ಯೆ ಅದರಲ್ಲೂ ಹೆಣ್ಣು ಭ್ರೂಣಹತ್ಯೆ ಸಲೀಸಾಗಿಬಿಟ್ಟಿತು. ದೇಶದ ಪ್ರಜ್ಞಾವಂತ ನಾಗರಿಕರು, ವೈದ್ಯರು ಸರಕಾರವು ಹೆಣ್ಣು ಭ್ರೂಣಹತ್ಯೆಯನ್ನು ಖಂಡಿಸುತ್ತಿರುವುದು ಬಹಳ ಕಾಲದಿಂದ ನಡೆದಿದೆ. ಅದರ ನಿಯಂತ್ರಣಕ್ಕೆ ಕಠಿಣ ಕಾಯಿದೆ ರೂಪಿಸಲಾಗಿದೆ. ಆದರೂ ಈಗಲೂ ಹೆಣ್ಣು ಭ್ರೂಣಹತ್ಯೆ ನಡೆಯುತ್ತಲೇ ಇದೆ; ದುರ್ಬಲ ಮನಸ್ಸಿನ ತಾಯಿ-ತಂದೆ ಮತ್ತು ಹಣದ ಆಸೆಗೆ ವೈದ್ಯರು ಕಾನೂನಿನ ಕಣ್ಣಿಗೆ ಮಣ್ಣೆರಚಿ ತಮ್ಮ ದುಷ್ಟ ಕೆಲಸವನ್ನು ನಡೆಸುತ್ತಲೇ ಇದ್ದಾರೆ.

ಕಾನೂನು, ಜಾಗೃತಿಯ ನಡುವೆಯೇ ದೇಶದಲ್ಲಿ 2013 ವರದಿ ಪ್ರಕಾರ ಪ್ರತಿ ವರ್ಷ ಸುಮಾರು 50 ಲಕ್ಷಕ್ಕೂ ಹೆಚ್ಚು ಭ್ರೂಣ ಹತ್ಯೆ ಆಗಿರುವುದು ಹೆಣ್ಣು ಭ್ರೂಣ ಹತ್ಯೆ ತಡೆಗೆ ವಿಶ್ವ ಸಂಸ್ಥೆ ಸೆಪ್ಟೆಂಬರ್ 24ನ್ನು ‘ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನ’ ಎಂದು ಘೋಷಿಸಿದೆ. ಜಾಗತಿಕ ಮಟ್ಟದಲ್ಲಿ ಇಂತಹ ದಿನಾಚರಣೆಗಳ ಮೂಲಕ ಎಚ್ಚರಿಸುವ ಕೆಲಸವಾಗುತ್ತಿದ್ದರೂ, ಅಷ್ಟೇ ಭರದಿಂದ ಹೆಣ್ಣಿನ ಮೇಲಿನ ಶೋಷಣೆಯೂ ಹೆಚ್ಚುತ್ತಿದೆ. ಅದು ವರದಕ್ಷಿಣೆ ಕಿರುಕುಳ ಇರಬಹುದು, ವಯಸ್ಸಿನ ತಾರತಮ್ಯವಿಲ್ಲದೆ ನಡೆಯುತ್ತಿರುವ ಅತ್ಯಾಚಾರವಿರಬಹುದು. ಅನುಮಾನ ಪ್ರವೃತ್ತಿಯ ಪತಿಯಿಂದ ಮಾನಸಿಕ ಹಾಗೂ ದೈಹಿಕ ಕಿರುಕುಳ ಆಗಿರಬಹುದು…ಹೀಗೆ ಒಂದಿಲ್ಲೊಂದು ರೀತಿಯಲ್ಲಿ ಹೆಣ್ಣು ನೋವಿನ ಬೇಗೆಯಲ್ಲಿ ಬೇಯುತ್ತಿದ್ದಾಳೆ.

ಹತ್ಯೆ ವಿಶ್ವದಲ್ಲಿ ಒಂದೆರಡು ನಗರಗಳೋ ಅಥವಾ ಒಂದೆರಡು ದೇಶಗಳಿಗೋ ಸೀಮಿತವಾಗಿಲ್ಲ. ಅಮೆರಿಕದಂತಹ ಮುಂದುವರಿದ ರಾಷ್ಟ್ರಗಳಲ್ಲೂ ಇದು ನಡೆಯುತ್ತಿದೆ. ಅಧ್ಯಯನಗಳ ಪ್ರಕಾರ, ಚೀನಾದಲ್ಲಿ ಅತಿ ಹೆಚ್ಚು ಹೆಣ್ಣು ಭ್ರೂಣಹತ್ಯೆ ಆಗುತ್ತಿದೆ. ಶ್ರೀಲಂಕಾ, ನೇಪಾಳ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ದಕ್ಷಿಣ ಅಮೆರಿಕ, ಭಾರತ ಸೇರಿದಂತೆ ನಾನಾ ರಾಷ್ಟ್ರಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ.

ಲಿಂಗ ಪತ್ತೆ ಮಾಡಲು 2004ರಲ್ಲಿ ವೈದ್ಯರು 2,000ರು. ಪಡೆಯುತ್ತಿದ್ದರು. ಈಗ ಇದು 20,000ರು. ತಲುಪಿದೆ. ಕೆಲವು ‘ಆಶಾ ಕಾರ್ಯಕರ್ತೆ’ಯರನ್ನೇ ಖಾಸಗಿ ತಮ್ಮ ಏಜೆಂಟರನ್ನಾಗಿ ನೇಮಿಸಿಕೊಂಡಿದ್ದಾರೆ. ಒಂದು ಪ್ರಕರಣಕ್ಕೆ ಇಷ್ಟು ಎಂದು ಅವರಿಗೆ ಕಮಿಷನ್ ನೀಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಬೆಳಗ್ಗೆ 5 ರಿಂದ 11 ಗಂಟೆಯ ಒಳಗೆ ಈ ಕೃತ್ಯ ಕೈಗೊಳ್ಳಲಾಗುತ್ತದೆ. ತಪಾಸಣೆಗೆ ಹೋಗುವ ತಂಡದವರು 11 ಗಂಟೆಯ ಬಳಿಕ ಹೋಗುವುದರಿಂದ ಇವು ಬೆಳಕಿಗೆ ಬರುವುದೇ ಇಲ್ಲ. ಹೀಗಾಗಿ ಜಿಲ್ಲಾಡಳಿತವು ವಿಚಕ್ಷಣಾ ದಳಕ್ಕೆ ಸೂಕ್ತ ತರಬೇತಿ ನೀಡುವ ಮೂಲಕ ಇಂಥ ಅಮಾನವೀಯ ಕೃತ್ಯ ನಡೆಯುವುದನ್ನು ತಡೆಗಟ್ಟಬೇಕು.

ಹಣದ ಪಿಶಾಚಿಗಳಾದ ಕೆಲ ವೈದ್ಯರು ಲಿಂಗ ಪತ್ತೆ ಮಾಡುವ ಮೂಲಕ ಜನ್ಮ ಪಡೆಯುವ ಮೊದಲೇ ನಿತ್ಯ ಸಾವಿರಾರು ಹೆಣ್ಣುಮಕ್ಕಳನ್ನು ಹತ್ಯೆ ಮಾಡಲು ಸಹಕರಿಸುತ್ತಿರುವುದು ವೈದ್ಯಕೀಯ ಕ್ಷೇತ್ರಕ್ಕೆ ಅಪಖ್ಯಾತಿ ತರುವ ಒಂದು ಹೇಯ ಸಂಗತಿ. ಇದನ್ನು ವೈದ್ಯಕೀಯ ಅಪರಾಧ ಎಂದು ಪರಿಗಣಿಸಿ, ಕಠಿಣ ಕ್ರಮ ಕೈಗೊಳ್ಳಬೇಕು. ಎಲ್ಲೆಲ್ಲಿ ಭ್ರೂಣ ಲಿಂಗ ಪತ್ತೆ ಹಚ್ಚಲಾಗುತ್ತಿದೆ ಎಂಬುದನ್ನು ವಿಚಕ್ಷಣಾ ದಳದಿಂದ ಮಾಹಿತಿ ಪಡೆದು, ನಾಲ್ಕೈದು ವೈದ್ಯರನ್ನು ಪತ್ತೆ ಮಾಡಿ ಶಿಕ್ಷೆಗೆ ಒಳಪಡಿಸಿದರೆ ಮಾತ್ರ ಕಡಿವಾಣ ಹಾಕಲು ಸಾಧ್ಯ. ಜಿಲ್ಲಾ ಈ ದಿಕ್ಕಿನಲ್ಲಿ ಕಾರ್ಯಪ್ರವೃತ್ತರಾಗಬೇಕು.

ಮಹಾರಾಷ್ಟ್ರದ ಒಂದು ಆಸ್ಪತ್ರೆ ಹೆಣ್ಣು ಮಕ್ಕಳ ಸಂರಕ್ಷಣೆಗಾಗಿ ವಿನೂತನ ಮತ್ತು ಹಲವರಿಗೆ ಮಾದರಿಯಾಗುವಂತಹ ಕೆಲಸವನ್ನು ಹಲವು ವರ್ಷಗಳಿಂದ ಮಾಡುತ್ತಿದೆ. ಪುಣೆಯಲ್ಲಿರುವ ‘ಮೆಡಿಕೇರ್ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ’ಯ ವಿಶೇಷವೆಂದರೆ, ಗಂಡುಮಗು ಜನಿಸಿದರೆ, ಚಿಕಿತ್ಸೆಯ ಅಷ್ಟೂ ಮೊತ್ತವನ್ನು ತೆಗೆದುಕೊಳ್ಳುತ್ತಾರೆ; ಅದೇ ಹೆಣ್ಣುಮಗು ಜನಿಸಿದರೆ ಉಚಿತವಾಗಿ ಚಿಕಿತ್ಸೆ ನೀಡಿ ಮಗು ಮತ್ತು ತಾಯಿಯನ್ನು ನಗುಮೊಗದೊಂದಿಗೆ ಆರೈಕೆ ಮಾಡಿ ಕಳುಹಿಸುತ್ತಾರೆ. ಹೆಣ್ಣುಮಗು ಹುಟ್ಟಿದರೆ ಇಡೀ ಆಸ್ಪತ್ರೆಯಲ್ಲಿ ಸಂಭ್ರಮದ ವಾತಾವರಣ. ಅವತ್ತು ಆಸ್ಪತ್ರೆಯಲ್ಲಿರುವ ಎಲ್ಲರಿಗೂ ಸಿಹಿ ಹಂಚಲಾಗುತ್ತದೆ. ಈ ಸಂಪ್ರದಾಯದ ಅನುಕೂಲವನ್ನು ಸಾವಿರಾರು ಬಡ ಹೆಣ್ಣುಮಕ್ಕಳ ಪಡೆದಿದ್ದಾರೆ.

ವೈದ್ಯಕಿಯ ಕ್ಷೇತ್ರದಲ್ಲಿ ತಾಂತ್ರಿಕತೆ ಬೆಳೆದಂತೆ ಹೆಣ್ಣುಭ್ರೂಣ ಹತ್ಯೆ ಹೆಚ್ಚಾಗುತ್ತಿದೆ. ಇದರಿಂದ ಕಳೆದ ಎರಡು ದಶಕಗಳಿಂದ ಸಮಾಜದಲ್ಲಿ ಮಹಿಳೆಯರ ಸಂಖ್ಯೆ ಇಳಿಮುಖವಾಗಲಾರಂಭಿಸಿದೆ. ಮಹಿಳೆ ಹಾಗೂ ಪುರುಷರ ಅನುಪಾತದ ಅಸಮತೋಲನದಿಂದ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಮಹಿಳೆಯರ ಮೇಲೆ ಅತ್ಯಾಚಾರಗಳು ಹೆಚ್ಚಾಗುತ್ತವೆ. ಲೈಂಗಿಕ ಸಂಪರ್ಕದಿಂದ ಬರುವ ರೋಗಗಳು ಹೆಚ್ಚಾಗುತ್ತವೆ. ಕುಟುಂಬದ ವ್ಯವಸ್ಥೆ ಹಾಳಾಗುತ್ತದೆ. ದೇಶದಲ್ಲಿ ಅಶಾಂತಿ ಹೆಚ್ಚಾಗುತ್ತದೆ. ಅಭಿವೃದ್ಧಿ ಕುಂಠಿತವಾಗುತ್ತದೆ. ಹೆಣ್ಣು ಭ್ರೂಣಹತ್ಯೆಗೆ ಬಡತನ ಕಾರಣವೆಂದು ತಿಳಿದುಕೊಳ್ಳಬಾರದು. ಹೆಣ್ಣು ಹುಟ್ಟಿದರೆ ಮನೆಗೆ ಭಾಗ್ಯಲಕ್ಷ್ಮಿ ಬಂದಳೆಂಬ ನಂಬಿಕೆ ಒಂದು ಕಾಲಕ್ಕಿತ್ತು. ಆದರೆ ಇಂದು ಓದಿದವರು, ಶ್ರೀಮಂತರೇ ಹೆಚ್ಚು ಹೆಣ್ಣು ಭ್ರೂಣಹತ್ಯೆಗೆ ಕಾರಣವೆಂದು ಸಮಿಕ್ಷೆಗಳಿಂದ ತಿಳಿದುಬಂದಿದೆ. ತಮ್ಮ ಆಸ್ತಿ ಮಗಳೊಂದಿಗೆ ಬೇರೆ ಕುಟುಂಬಕ್ಕೆ ಹೋಗುತ್ತದೆ. ಮಗನಾದರೆ ಕುಟುಂಬದಲ್ಲಿಯೆ ಉಳಿಯುತ್ತದೆ ಎಂಬ ಭ್ರಮೆ ಇದಕ್ಕೆ ಪ್ರಮುಖ ಕಾರಣ. ಆದರೆ ಆಸ್ತಿ ಉಳಿಸುವ ಆ ಮಗ, ಮುಂದಿನ ಪೀಳಿಗೆಗೆ ಜನ್ಮ ಕೊಡಲು ಹೆಣ್ಣು ಬೇಕೇಬೇಕಲ್ಲವೇ?

2015ರ ಜನವರಿ 22 ರಂದು ಪ್ರಧಾನಿ ಮೋದಿ ಹರಿಯಾಣದ ಪಾಣಿಪತ್ ನಲ್ಲಿ ‘ಬೇಟಿ ಬಚಾವೋ, ಬೇಟಿ ಪಢಾವೋ’ ಯೋಜನೆಗೆ ಚಾಲನೆ ನೀಡಿದರು. ಮಕ್ಕಳ ಲಿಂಗಾನುಪಾತ ಹಾಗೂ ಮಹಿಳಾ ಸಬಲೀಕರಣದ ಸಮಸ್ಯೆಗಳಿಗೆ ಈ ಯೋಜನೆ ಉತ್ತರ ಕಂಡುಕೊಳ್ಳಲಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಮಾನವ ಸಂಪನ್ಮೂಲಾಭಿವೃದ್ಧಿ ಇಲಾಖೆಗಳ ಜಂಟಿ ಚಿಂತನೆಯ ಫಲವಾಗಿ ಈ ಯೋಜನೆ ರೂಪಿತವಾಗಿದೆ.

ಸಮಾಜದ ಪ್ರತಿಯೊಬ್ಬರಿಗೂ ಹೆಣ್ಣಿನ ಸಂವೇದನಾಶೀಲತೆ ಬರಬೇಕು. ಹೆಣ್ಣಾಗಲಿ ಗಂಡಾಗಲಿ, ಸಮಾನವಾಗಿ ಸ್ವೀಕರಿಸುತ್ತೇನೆ ಎಂಬ ದೃಢ ಮನೋಭಾವವನ್ನು ತಾಯಂದಿರು ತೋರಬೇಕು. ವೈದ್ಯರು ತಮ್ಮ ವೃತ್ತಿ ಧರ್ಮ ಮರೆಯದೆ, ನೈತಿಕ ಮೌಲ್ಯ ಉಳಿಸಿಕೊಳ್ಳಬೇಕು. ಆಗ ಮಾತ್ರ ಹೆಣ್ಣು ಭ್ರೂಣಹತ್ಯೆಯ ಪಿಡುಗು ನಿವಾರಣೆಯಾಗಬಹುದು. ಹೆಣ್ಣು ಮಗುವನ್ನು ಗಂಡು ಮಗುವಿನಂತೆ ಬೆಳೆಸಿ ಶಿಕ್ಷಣ ನೀಡಿ, ಆರ್ಥಿಕವಾಗಿ ಸ್ವಾವಲಂಬಿಯನ್ನಾಗಿಸಿ, ವರದಕ್ಷಿಣೆ ಪದ್ಧತಿಯನ್ನು ಧಿಕ್ಕರಿಸಬೇಕು. ಗಂಡು ಮಗುವಿನ ಹಂಬಲಕ್ಕೆ ಹೆಣ್ಣು ಮಗುವನ್ನು ಬಲಿ ಕೊಡದೇ, ಗಂಡುಮಗು ಬೇಕೆಂದಲ್ಲಿ ಅನಾಥ ಗಂಡು ಮಗುವನ್ನು ಪಡೆಯುವ ಯೋಚನೆ ಮಾಡಬಹುದು. ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ ಮಾಡುವುದು ಹಾಗೂ ಹೆಣ್ಣು ಭ್ರೂಣ ಹತ್ಯೆ ಮಾಡುವುದು ಶಿಕ್ಷಾರ್ಹ ಅಪರಾಧ ಎಂದು ಎಲ್ಲರಿಗೂ ಮನವರಿಕೆ ಮಾಡಲು ಸರಕಾರ ಹೆಚ್ಚಿನ ಕಾಳಜಿ ಮತ್ತು ಶ್ರಮ ಪಡಬೇಕು.

Tags

Related Articles

Leave a Reply

Your email address will not be published. Required fields are marked *

Language
Close