About Us Advertise with us Be a Reporter E-Paper

ಅಂಕಣಗಳು
Trending

ಸಮರಸಿಂಹನಿಗೊಂದು ಅಂತಿಮ ಸಲ್ಯೂಟ್

ಸಂದರ್ಶನ: ಹೇಮಂತ್ ಗೌಡ

ಸ್ವತಂತ್ರ ಭಾರತ ಕಂಡ ಶ್ರೇಷ್ಠ ಸಮರಕಲಿಗಳಲ್ಲಿ ಒಬ್ಬರಾದ ಬ್ರಿಗೇಡಿಯರ್ ಕುಲ್‌ದೀಪ್ ಸಿಂಗ್ ಚಾಂದ್‌ಪುರಿ ನಿನ್ನೆ ನಿಧನ ಹೊಂದಿದರು. ಭಾರತೀಯ ಸಶಸ್ತ್ರ ಪಡೆಗಳ ಅಪ್ರತಿಮ ಸಾಹಸ ಹಾಗು ಶೌರ್ಯಗಳ ಪರಂಪರೆಯನ್ನು ಎತ್ತಿ ಹಿಡಿದ ಮಹಾನ್ ಚೇತನವಾಗಿದ್ದ ಚಾಂದ್‌ಪುರಿ ಅವರೊಂದಿಗೆ ಎರಡು ವರ್ಷಗಳ ಹಿಂದೆ ಈ ಸಂದರ್ಶಕನಿಗೆ ಮುಖತಃ ಭೇಟಿ ಸಾಧ್ಯವಾಗಿತ್ತು. ಅಪರಿಚಿತ ಸಾಮಾನ್ಯನನ್ನೂ ಗೌರವದಿಂದ ಸತ್ಕರಿಸಿ, ಕೇಳಿದ ಪ್ರತಿಯೊಂದು ಪ್ರಶ್ನೆಗೂ ಆಸ್ಥೆಯಿಂದ ಉತ್ತರಿಸುವ ಸೌಜನ್ಯ ತೋರಿದ್ದರು, ಬ್ರಿಗೇಡಿಯರ್. ಆ ಮಾತುಕತೆಯ ಆಯ್ದ ಭಾಗಗಳನ್ನು ಪ್ರಕಟಿಸಿ ಅಗಲಿದ ಚೇತನಕ್ಕೆ ‘ನುಡಿ ನಮನ’ ಸಲ್ಲಿಸಲಾಗಿದೆ.  1971ರ ಭಾರತ-ಪಾಕ್ ಯುದ್ಧದಲ್ಲಿ ಭಾರತ ಜಯ ಗಳಿಸಿದ 45ನೇ ವರ್ಷಾಚಾರಣೆ ಸಂದರ್ಭವೂ ಇದಾಗಿತ್ತು.

* ಪೂರ್ವ ಪಾಕಿಸ್ತಾನದಲ್ಲಿ ಹಂತಹಂತವಾಗಿ ತಲೆದೋರಿದ ರಾಜಕೀಯ ಹಾಗು ಸಾಮಾಜಿಕ ಪ್ರಕ್ಷುಬ್ಧತೆ ಮುಂದೊಂದು ದಿನ ಭಾರತ-ಪಾಕಿಸ್ತಾದ ನಡುವಿನ ಪೂರ್ಣ ಪ್ರಮಾಣದ ಯುದ್ಧಕ್ಕೆ ನಾಂದಿ ಹಾಡಬಹುದೆಂಬ ನಿರೀಕ್ಷೆಯಿತ್ತೇ?
– ಯುದ್ಧದ ಕಾರ್ಮೋಡಗಳು ಸಾಕಷ್ಟು ನೆಲೆಸಿದ್ದವು. ಒಂದು ವೇಳೆ ಯುದ್ಧ ಆರಂಭಗೊಂಡರೆ ಪೂರ್ವದಲ್ಲಿ ಆಗಬಹುದಾಗಿದ್ದ ಸಂಭವನೀಯ ನಷ್ಟಕ್ಕೆ ಪ್ರತೀಕಾರವಾಗಿ ಭಾರತದ ಪಶ್ಚಿಮ ಗಡಿ ದಾಟಿ, ಆಶ್ಚರ್ಯಕರ ರೀತಿಯಲ್ಲಿ ದಾಳಿ ಮಾಡಿ ನಮ್ಮ ಪಡೆಗಳ ಮೇಲೆ ಒತ್ತಡ ಹೇರಲು ಪಾಕಿಸ್ತಾನ ಮುಂದಾಗಲಿದೆ ಎಂಬ ಊಹೆ ಬಲವಾಗಿತ್ತು. ಯುದ್ಧಕ್ಕಿಂತ ಹೆಚ್ಚಾಗಿ ನಂತರದ ಐತಿಹಾಸಿಕ ಬೆಳವಣಿಗೆಗಳಲ್ಲಿ, ಬಾಂಗ್ಲಾದೇಶದ ಉಗಮಕ್ಕೆ ಕಾರಣವಾದ 1971ರ ‘ಇಂಡೋ-ಪಾಕ್ ವಾರ್’ ಹಲವಾರು ಕಾರಣಗಳಿಗೆ ಭಾರತೀಯ ಸಶಸ್ತ್ರ ಪಡೆಗಳ ಪಾಲಿಗೆ ಅವಿಸ್ಮರಣೀಯವಾಗಿದೆ. 94,000 ಸಾವಿರ ಪಾಕಿಸ್ತಾನಿ ಯೋಧರನ್ನು ಒಮ್ಮೆಲೇ ಸೆರೆ ಹಿಡಿದಿದ್ದ ಭಾರತೀಯ ಸೇನೆ ತನ್ನ ಪರಾಕ್ರಮವೇನೆಂದು ಜಗತ್ತಿನ ಮುಂದೆ ಸಾಬೀತು ಪಡಿಸಿತ್ತು. ಅಮೆರಿಕ, ಬ್ರಿಟನ್ ಹಾಗೂ ಚೀನಾದ ಪ್ರಬಲ ವಿರೋಧವನ್ನೂ ಲೆಕ್ಕಿಸದೇ ಸೋವಿಯತ್ ರಷ್ಯಾ ನೆರವಿನಿಂದ ಯುದ್ಧಕ್ಕಿಳಿದಿದ್ದ ಭಾರತ, ಪಾಕಿಸ್ತಾನಕ್ಕೆ ಮರೆಯಲಾಗದ ಹೊಡೆತ ನೀಡಿತ್ತು. ಮಾರ್ಚ್ 26,1971 ರಂದು ಆರಂಭಗೊಂಡ ಬಾಂಗ್ಲಾದೇಶ ವಿಮೋಚನಾ ಯುದ್ಧ ಮುಂದಿನ ದಿನಗಳಲ್ಲಿ ಭಾರತ-ಪಾಕ್ ನಡುವಿನ ನೇರ ಕದನವಾಗಿ ಬದಲಾಗಿದ್ದು ಈಗ ಇತಿಹಾಸ.

* ನಿಮ್ಮದೇ ನೇತೃತ್ವ ಇದ್ದ ಲೋಂಗೇವಾಲಾ ಕದನದ ಕುರಿತಂತೆ ಸ್ವಲ್ಪ ಹೇಳಿ…
-ಯುದ್ಧದ ಆರಂಭದ ದಿನಗಳವು…ಪಾಕಿಸ್ತಾನದೊಂದಿಗೆ ಸುದೀರ್ಘವಾದ ಗಡಿ ಹಂಚಿಕೊಂಡಿರುವ ರಾಜಸ್ಥಾನದ ಥಾರ್ ಮರುಭೂಮಿಯ ಜೈಸಲ್ಮೇರ್‌ನಿಂದ 120 ಕಿಮೀ ದೂರದಲ್ಲಿರುವ ಲೋಂಗೇವಾಲಾ ಹಾಗು ಸುತ್ತಲಿನ ಪ್ರದೇಶದ ರಕ್ಷಣೆಯ ಜವಾಬ್ದಾರಿಯನ್ನು 23 ಪಂಜಾಬ್ ರೆಜಿಮೆಂಟ್‌ಗೆ ವಹಿಸಲಾಗಿತ್ತು. 120 ಸೈನಿಕ ಬಲದ ಕಂಪನಿಯೊಂದನ್ನು ನನ್ನ ನೇತೃತ್ವದಲ್ಲಿ ಲೋಂಗೇವಾಲ ಪ್ರದೇಶದ ಭದ್ರತೆಗೆ ನಿಯೋಜಿಸಲಾಗಿತ್ತು.

ಪೂರ್ವ ಪಾಕಿಸ್ತಾನದಲ್ಲಿ ಯುದ್ಧ ಆರಂಭಗೊಂಡಿದ್ದರಿಂದ ಸಶಸ್ತ್ರ ಪಡೆಗಳ ಹೆಚ್ಚಿನ ಗಮನ ಸಹಜವಾಗಿಯೇ ಪೂರ್ವ ಭಾಗದ ಮೇಲಿತ್ತು. ಇದರ ಲಾಭ ಪಡೆಯುವ ಉದ್ದೇಶದಿಂದ, ನಮ್ಮ ಮೇಲೆ ಅಚ್ಚರಿಯ ದಾಳಿ ಮಾಡಿ, ಭಾರತದ ಪಶ್ಚಿಮ ಭೂಭಾಗದ ರಾಜಸ್ಥಾನದ ಜೈಸಲ್ಮೇರ್‌ಅನ್ನು ವಶ ಪಡಿಸಿಕೊಳ್ಳುವ ಇರಾದೆಯನ್ನು ಪಾಕಿಸ್ತಾನ ಹೊಂದಿತ್ತು. ಸೇನೆ, ಅಮೆರಿಕ ನಿರ್ಮಿತ 45 ಪ್ಯಾಟನ್ ಟ್ಯಾಂಕರ್‌ಗಳೊಂದಿಗೆ 2,500 ಜನರಿದ್ದ ತನ್ನ ಒಂದಿಡೀ ಪದಾತಿ ದಳವನ್ನು ಇದೇ ಲೋಂಗೇವಾಲಾ ಮಾರ್ಗವಾಗಿ ಜೈಸಲ್ಮೇರ್‌ನೆಡೆಗೆ ಮುನ್ನುಗ್ಗಲು ಸೂಚಿಸಿತ್ತು. ಆಗ ತಾನೇ ನಿರ್ಮಾಣವಾಗಿದ್ದ ಜೈಸಲ್ಮೇನರ್‌ನ ಕಚ್ಛಾ ವಾಯು ನೆಲೆಯಲ್ಲಿದ್ದ ಬ್ರಿಟನ್ ನಿರ್ಮಿತ ಹಾಕರ್‌ ಹಂಟರ್ ಯುದ್ಧ ವಿಮಾನಗಳು ರಾತ್ರಿವೇಳೆ ಶತ್ರುವನ್ನು ಗುರುತಿಸುವ ಸಾಮರ್ಥ್ಯ ಹೊಂದಿರದ ಕಾರಣ- ವಾಯು ಪಡೆ ಹಾಗು ಹೆಚ್ಚಿನ ತುಕಡಿಗಳ Reinforcementಮೆಂಟ್‌ಗಳಿಗೆ ಮುಂಜಾನೆಯ ತನಕ ಸಮಯಾವಕಾಶ ಸೃಷ್ಟಿಸುವುದು ನಮ್ಮ ಜವಾಬ್ದಾರಿಯಾಗಿತ್ತು.

ಶತ್ರುವಿನ ಆಗಮನದ ಸೂಚನೆ ದೊರೆತರೂ ಲೋಂಗೇವಾಲಾಗೆ ಹೆಚ್ಚುವರಿ ತುಕಡಿಗಳನ್ನು ಕಳುಹಿಸಿಕೊಡಲು ಕೊಂಚ ಸಮಯದ ಅಗತ್ಯವಿತ್ತು. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲೂ, ದಿಢೀರ್ ಮೈಮೇಲೆರಗಿದ ಅಗಾಧ ಬಲದ ಶತ್ರುವಿಗೆ ಎದೆಗುಂದದ ನಮ್ಮ ಪಂಜಾಬ್ ರೆಜಿಮೆಂಟ್ ಹಾಗೂ ಗಡಿಭದ್ರತಾ ಪಡೆಯ ಯೋಧರು ಜೀವದ ತೊರೆದು, ಹೋರಾಡಿದರು.ಅಪ್ರತಿಮ ಶೌರ್ಯ ಮೆರೆದು ತಮ್ಮ ಬತ್ತಳಿಕೆಯಲ್ಲಿದ್ದ ಸಣ್ಣ ಶಸ್ತ್ರಾಸ್ತ್ರಗಳ ಸಹಾಯದಿಂದ ಆ ಆರು ಗಂಟೆಗಳ ಘೋರ ಕದನದಲ್ಲಿ ಕಾದಾಡಿ ಲೋಂಗೇವಾಲಾ ನೆಲೆಯನ್ನು ಮುಂಜಾನೆಯವರೆಗೂ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾದರು.

ಮರುದಿನ ಸೂರ್ಯನ ಕಿರಣಗಳು ಭೂಮಿಗೆ ತಾಗುತ್ತಿದ್ದಂತೆಯೇ ಶತ್ರುವಿನ ಮೇಲೆರಗಿದ ಭಾರತೀಯ ವಾಯುಪಡೆ, ಪಾಕಿಸ್ತಾನಿಯರನ್ನು ಹೇಳಹೆಸರಿಲ್ಲದಂತೆ ಛಿದ್ರಗೊಳಿಸಿಬಿಟ್ಟಿತ್ತು. ಗೆಲುವಿನ ಶ್ರೇಯ ಭಾರತೀಯ ಸೇನೆ ಮತ್ತು ಬಿಎಸ್‌ಎಫ್ ಯೋಧರು ಹಾಗು ವಾಯುಪಡೆಯ ಪೈಲಟ್‌ಗಳೆಲ್ಲರಿಗೂ ಸಲ್ಲಬೇಕು.

* ಡಿಸೆಂಬರ್ 4, 1971ರ ಆ ರಾತ್ರಿ ಏನೇನಾಯಿತು ಎಂದು ಮಾತುಗಳಲ್ಲಿ ಕೇಳಬಹುದೇ?
ಅದೊಂದು ಸುದೀರ್ಘ ರಾತ್ರಿಯಾಗಿತ್ತು. ಎಲ್ಲಾ ದಿಕ್ಕುಗಳಲ್ಲೂ ಶತ್ರು ಪಡೆ ನಮ್ಮ ಔಟ್‌ಪೋಸ್ಟ್ಅನ್ನು ಸುತ್ತುವರಿದಿತ್ತು. ಎದುರಿದ್ದ ಶತ್ರುವಿನ ಸಾಮರ್ಥ್ಯಕ್ಕೆ ಯಾವ ವಿಧದಲ್ಲೂ ನಮ್ಮ ಕಂಪನಿ ಸಾಟಿಯಿರಲಿಲ್ಲ. ಆದರೆ ಪಂಜಾಬ್ ರೆಜಿಮೆಂಟಿನ ಯೋಧರು ಶತ್ರುವಿಗೆ ಎಂದೂ ಬೆನ್ನು ತೋರಿ ಹೋದವರಲ್ಲ.

ಸಾವು ಯಾವುದೇ ಸಂದರ್ಭದಲ್ಲೂ ಮೇಲೆರಗಬಹುದು ಎನ್ನುವ ಸನ್ನಿವೇಶದಲ್ಲೂ, ಕೊಂಚವೂ ಧೃತಿಗೆಡದ ನನ್ನ ಒಡನಾಡಿಗಳು ಸರಿಸಾಟಿಯಿಲ್ಲದ ದೇಶಪ್ರೇಮ ಹಾಗೂ ಕೆಚ್ಚೆದೆ ತೋರಿ, ತನಗಿಂತ ಹಲವು ಪಟ್ಟು ದೊಡ್ಡ ಸಂಖ್ಯೆಯಲ್ಲಿದ್ದ ಹಿಮ್ಮೆಟ್ಟಿ, ಇಡೀ ರಾತ್ರಿ ಲೋಂಗೇವಾಲಾ ನೆಲೆಯನ್ನು ಕಾಪಾಡಿಕೊಂಡು, ಪಂಜಾಬ್ ರೆಜಿಮೆಂಟಿನ ಹಿರಿಮೆಯನ್ನು ಮತ್ತಷ್ಟು ಎತ್ತರಕ್ಕೆ ಒಯ್ದರು. ನಮ್ಮ ಹಾಗು ಬಿಎಸ್‌ಎಫ್ ಸಿಬ್ಬಂದಿಯ ಈ ಧೀರೋದಾತ್ತ ಹೋರಾಟದ ಬೆನ್ನಿಗೇ ಶತ್ರುವಿನ ಮೇಲೆ ದಾಳಿಯೆರಗಿದ ವಾಯುಪಡೆ, ವೈರಿಯ ಪ್ಯಾಟನ್ ಟ್ಯಾಂಕರ್‌ಗಳನ್ನು ಛಿದ್ರ ಮಾಡಿ, ಅವರ ಪದಾತಿ ದಳಕ್ಕೆ ಭಾರೀ ಹಾನಿ ಮಾಡಿತ್ತು. ಈ ಮೂಲಕ ಯುದ್ಧಾರಂಭದಲ್ಲೇ ಪಾಕಿಸ್ತಾನಕ್ಕೆ ಪ್ರಬಲವಾದ ಮಾನಸಿಕ ಹೊಡೆತ ಕೊಟ್ಟಿತ್ತು.

* ಪೂರ್ವ ಪಾಕಿಸ್ತಾನದಲ್ಲಿ ಭಾರತೀಯ ಪಡೆಗಳು ಮುಂದುವರಿಯುತ್ತಿದ್ದುದ್ದರಿಂದ ಪಶ್ಚಿಮ ಗಡಿ ಮೇಲಿನ ಪಾಕಿಸ್ತಾನದ ಈ ದಿಢೀರ್ ದಾಳಿಯ ನಿರೀಕ್ಷೆಯಿತ್ತೇ?
ಯುದ್ಧಭೂಮಿಯಲ್ಲಿ ಈ ರೀತಿಯ ದಿಢೀರ್ ಬೆಳವಣಿಗೆಗಳು ಸಾಮಾನ್ಯ. ಈ ರೀತಿಯ ‘ಸರ್ಪ್ರೈಸ್ ಫ್ಯಾಕ್ಟರ್’ ಮೂಲಕ ಶತ್ರುವನ್ನು ಚಕಿತಗೊಳಿಸಲು ಗುಟ್ಟಾಗಿ ರೂಪುರೇಷೆಗಳು ಹಾಗು ನೀಲನಕ್ಷೆಗಳನ್ನು ಪ್ರೀ ಪ್ಲಾನಿಂಗ್ ಹಂತದಲ್ಲೇ ಸಾಕಷ್ಟು ವಿವರವಾಗಿ ಸಿದ್ಧಪಡಿಸಿಟ್ಟುಕೊಳ್ಳಲಾಗುತ್ತದೆ. ಆದರೆ, 23 ಪಂಜಾಬ್ ರೆಜಿಮೆಂಟಿನ ರಣೋತ್ಸಾಹ ಹಾಗೂ ದೃಢಸಂಕಲ್ಪದಿಂದಾಗಿ ಶತ್ರುವಿನ ಉದ್ದೇಶಗಳು ನೆರವೇರಲಿಲ್ಲ.

* ಪಾಕಿಸ್ತಾನದ 94,000 ಸಿಪಾಯಿಗಳನ್ನು ಸೆರೆ ಹಿಡಿದಿದ್ದಲ್ಲದೇ ಶತ್ರುವಿನ ಪಡೆಗಳ ಮಾನಸಿಕ ಸ್ಥೈರ್ಯವನ್ನೇ ಕುಗ್ಗಿಸಿದ್ದ ದಿನಗಳು ಅವು. ಹೀಗಿರುವಾಗ ಯುದ್ಧಾನಂತರದ ಶಿಮ್ಲಾ ಒಪ್ಪಂದದಲ್ಲಿ ಭಾರತವು, ಕಾಶ್ಮೀರದ ವಿಚಾರದಲ್ಲಿ ಮತ್ತಷ್ಟು ಚೌಕಾಸಿ ಮಾಡಬಹುದಿತ್ತು ಎನಿಸುತ್ತದೆಯೇ?
ಇಂಥ ನಿರ್ಧಾರಗಳನ್ನು ಉನ್ನತ ನಾಯಕತ್ವದ ಮಟ್ಟದಲ್ಲಿ ತೆಗೆದುಕೊಳ್ಳಲಾಗುತ್ತದೆ. ಯುದ್ಧಾನಂತರದ ಒಪ್ಪಂದಗಳು ನಮ್ಮ ನಾಯಕರ ವಿವೇಚನೆಗೆ ಬಿಟ್ಟ ವಿಚಾರ. ನನ್ನ ವೈಯಕ್ತಿಕ ಅಭಿಪ್ರಾಯ ಕೇಳುವುದಾದರೆ- ಸೆರೆ ಹಿಡಿಯಲಾದ ಪಾಕಿಸ್ತಾನದ 94,000 ಸೈನಿಕರನ್ನು ಬಿಡುಗಡೆ ಮಾಡುವವರೆಗೂ, ಜಿನೀವಾ ಒಪ್ಪಂದದ ಆಶಯಗಳ ಅನುಸಾರ, ಯುದ್ಧಪರಾಧಿಗಳಿಗೆ ನೀಡುವ ಸಕಲ ಗೌರವಗಳಿಂದ ಭಾರತ ಉಳಿಸಿಕೊಂಡಿತ್ತು. ಇದಕ್ಕೆ ತದ್ವಿರುದ್ಧವಾಗಿ, ಪಾಕಿಸ್ತಾನ ಸೆರೆ ಹಿಡಿದ ನಮ್ಮ ಯೋಧರನ್ನು ಬಿಡುಗಡೆಗೊಳಿಸಲು ಶರತ್ತು ವಿಧಿಸಬಹುದಿತ್ತು. ಸೆರೆಯಾದ ಯುದ್ದಾಪರಾಧಿಗಳಲ್ಲಿ ಕೆಲವರು ಸೆರೆಮನೆಗಳಲ್ಲೇ ನಿಧನರಾದರೆ, ಮತ್ತೆ ಕೆಲವರು ಬಲವಂತದ ಮತಾಂತರ ಹಾಗೂ ಚಿತ್ರ ಹಿಂಸೆಗೆ ಒಳಗಾಗಿ ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದಾರೆ. ಭಾರತೀಯ ಸೇನೆಯ ಅಧಿಕಾರಿಗಳು ಸೇರಿದಂತೆ, ಒಟ್ಟಾರೆ 70ಕ್ಕಿಂತ ಕಡಿಮೆ ಸಂಖ್ಯೆಯ ಯೋಧರು ಸೆರೆಯಾಗಿದ್ದರು. 94,000 ಪಾಕ್ ಯೋಧರಿಗೆ ಬದಲಾಗಿ 70 ಭಾರತೀಯ ಯೋಧರನ್ನು ಬಿಡಿಸಿಕೊಳ್ಳಲು ಮತ್ತಷ್ಟು ಪ್ರಯತ್ನಿಸಬಹುದಿತ್ತು. ದೇಶಕ್ಕಾಗಿ ಪಣಕ್ಕಿಟ್ಟು ಹೋರಾಡುವ ಯೋಧರನ್ನು ಈ ರೀತಿ ನಡೆಸಿಕೊಳ್ಳುವುದು ಕ್ಷಮಿಸಲಾಗದ ಅಪರಾಧ. ಸೆರೆಯಾದ ನನ್ನ ಒಡನಾಡಿಗಳ ಕುಟುಂಬ ವರ್ಗಗಳು ಅದಾಗಲೇ ಸಾಕಷ್ಟು ನೋವುಂಡಿವೆ.

* ಸ್ವಾತಂತ್ರ್ಯ ಬಂದ ಆರಂಭದ ಐದು ದಶಕಗಳ ಅಂತರದಲ್ಲಿ ನಾಲ್ಕು ಬಾರಿ ನೇರ ಯುದ್ಧ ಮಾಡಿ, ಪ್ರತಿ ಬಾರಿ ಸೋತರೂ ಪಾಕಿಸ್ತಾನ ತನ್ನ ಚಾಳಿ ಬಿಟ್ಟಿಲ್ಲ. ಪಾಕ್ ನೀತಿಯಲ್ಲಿ ನಾವು ಎಲ್ಲಿ ಎಡವುತ್ತಿದ್ದೇವೆ ಎಂದು ನಿಮಗನಿಸುತ್ತದೆ?
-ನಾವು ಎಲ್ಲೂ ಎಡವಿಲ್ಲ. 1948, 1965, 1971 ಹಾಗೂ ರಲ್ಲಿ ಪ್ರತಿ ಬಾರಿಯೂ ಯುದ್ಧ ಆರಂಭಿಸಿದ್ದು ಪಾಕಿಸ್ತಾನವೇ. ಈ ಎಲ್ಲಾ ಯುದ್ಧಗಳಲ್ಲೂ ನಮ್ಮ ಸಶಸ್ತ್ರ ಪಡೆಗಳು ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿವೆ. ಮುಂದಿನ ದಿನಗಳಲ್ಲೂ ನಮ್ಮನ್ನು ಎದುರು ಹಾಕಿಕೊಳ್ಳುವ ದುಸ್ಸಾಹಸಕ್ಕೆ ಕೈ ಹಾಕಿದರೆ ಹಿಂದೆ ಆದ ಕಥೆಯೇ ಪಾಕ್‌ಗೆ ಪುನರಾವರ್ತನೆಯಾಗಲಿದೆ.

* ನೇರ ಯುದ್ಧದಲ್ಲಿ ಗೆಲ್ಲಲಾಗದೆ ಪರೋಕ್ಷ ಯುದ್ಧದ ಮೂಲಕ ಭಾರತದಲ್ಲಿ ಅಶಾಂತಿ ಸೃಷ್ಟಿಸಲು ಹೊರಟಿರುವ ಪಾಕಿಸ್ತಾನವನ್ನು ಮಟ್ಟ ಹಾಕಲು ಇಸ್ರೇಲ್ ಮಾದರಿ ಸೂಕ್ತ ಎನಿಸುವುದೇ?
ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಿರುವ ಇಸ್ರೇಲ್, ಸಮರ ತಂತ್ರ ಹಾಗೂ ನೈಪುಣ್ಯಗಳಲ್ಲಿ ಎಲ್ಲರಿಗಿಂತ ಮುಂದಿದೆ. ಆದರೆ ಭಾರತವು ಶಾಂತಿಪ್ರಿಯ ರಾಷ್ಟ್ರವಾದ ಕಾರಣ ತನ್ನ ‘ಸಾಫ್ಟ್‌ ಪವರ್’ ಇಮೇಜ್‌ನಿಂದಲೇ ಪರಿಸ್ಥಿತಿ ನಿಭಾಯಿಸಲು ಮೊದಲ ಹೆಜ್ಜೆ ಇಡಬೇಕಿದೆ.

ಪಾಕಿಸ್ತಾನದೊಂದಿಗೆ ಸೌಹಾರ್ದ ಕಾಪಾಡಿಕೊಳ್ಳಲು ಸಾಧ್ಯವಿರುವ ಎಲ್ಲಾ ಕ್ರಮಗಳನ್ನೂ ಭಾರತ ತೆಗೆದುಕೊಳ್ಳಬೇಕು. ಇದೇ ವೇಳೆ ಭಯೋತ್ಪಾದಕರಿಗೆ ನೆರವು ನೀಡುವುದನ್ನು ನಿಲ್ಲಿಸಬೇಕೆಂದು ಪಾಕಿಸ್ತಾನಕ್ಕೆ ಜಾಗತಿಕ ವೇದಿಕೆಗಳಲ್ಲಿ ಭಾರತ ಮತ್ತಷ್ಟು ಬಲವಾಗಿ ಆಗ್ರಹಿಸಬೇಕು.

* ಅಮೆರಿಕ, ಬ್ರಿಟನ್ ಹಾಗೂ ಚೀನಾ ವಿರೋಧವನ್ನು ಹತ್ತಿಕ್ಕಿ, ದಿಟ್ಟ ನಿರ್ಧಾರ ತೆಗೆದುಕೊಳ್ಳುವ ರಾಜಕೀಯ ಇಚ್ಛಾಶಕ್ತಿಯನ್ನು ಭಾರತ ಅಂದು ತೋರಿತ್ತು. ಇಂದಿನ ಕಾಲಮಾನದಲ್ಲಿ ಬೆಳೆಯುತ್ತಿರುವ ಚೀನಾ-ಪಾಕ್ ಮೈತ್ರಿಯನ್ನು ಎದುರಿಸಲು ಅದೇ ಮಟ್ಟದ ರಾಜಕೀಯ ಇಚ್ಛಾಶಕ್ತಿ ಭಾರತಕ್ಕೆ ಈಗಲೂ ಇದೆ ಎನಿಸುತ್ತದೆಯೆ?
-ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಹಾಗು ಬಹುಪಕ್ಷೀಯ ಮೈತ್ರಿಗಳು ಕಾಲಾನುಸಾರ ಹಾಗು ಅಗತ್ಯಾನುಸಾರ ಬದಲಾಗುತ್ತಿರುತ್ತವೆ. ಭಾರತೀಯ ಪ್ರಜೆಗಳಾದ ನಾವೆಲ್ಲರೂ ಒಗ್ಗಟ್ಟಾಗಿ ನಿಂತು ಆಂತರಿಕ ಹಾಗೂ ಬಾಹ್ಯ ಸವಾಲುಗಳನ್ನು ಎದುರಿಸಬೇಕಿದೆ.

* ಇತ್ತೀಚೆಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ದೇಶದ ವಿರುದ್ಧ ಹೇಳಿಕೆ ನೀಡುವುದು ಸಾಮಾನ್ಯವಾಗಿದೆ. ಪ್ರಾಣ ಒತ್ತೆಯಿಟ್ಟು ಹೋರಾಡಿದ ಶಿಸ್ತಿನ ಸಿಪಾಯಿಯಾದ ನೀವು ಈ ಕುರಿತು ಏನು ಹೇಳಲಿಚ್ಛಿಸುವಿರಿ?
-ದೇಶದ ವಿರುದ್ಧ ಹೇಳಿಕೆ ನೀಡುವುದನ್ನು ಎಂದಿಗೂ ಸಹಿಸಲಾಗದು. ಶತಮಾನಗಳಿಂದಲೂ ಸಂಕಷ್ಟದ ಪರಿಸ್ಥಿತಿಗಳನ್ನು ನಾವೆಲ್ಲಾ ಒಟ್ಟಾಗಿ ಎದುರಿಸಿದ್ದೇವೆ. ಎಲ್ಲಕ್ಕಿಂತ ದೇಶ ಮೊದಲು ಎಂಬ ನೀತಿಯನ್ನು ಭಾರತೀಯರಾದ ನಾವೆಲ್ಲರೂ ಅಳವಡಿಸಿಕೊಂಡು ಕೊನೆಯ ಉಸಿರಿರುವವರೆಗೂ ದೇಶ ಸೇವೆ ಮಾಡುನ ಮನೋಧರ್ಮ ಬೆಳೆಸಿಕೊಳ್ಳಬೇಕು.

******************

1971ರ ಯುದ್ಧಕ್ಕೆ ಕೆಚ್ಚೆದೆಯ ಮುಂದಾಳತ್ವ ವಹಿಸಿ, ಇಡೀ ದೇಶವೇ ಕೊಂಡಾಡುವಂಥ ಸಾಹಸಗೈದ ಮೇಜರ್ ಕುಲ್‌ದೀಪ್ ಪರಾಕ್ರಮಕ್ಕೆ ‘ಮಹಾವೀರ ಚಕ್ರ’ ಗೌರವ ಅರಸಿ ಬಂತು. ಶತ್ರುವಿನ ತುಲನೆಯಲ್ಲಿ, ತಮ್ಮಲ್ಲಿದ್ದ ನಗಣ್ಯ ಮಾನವ ಸಂಪನ್ಮೂಲ ಹಾಗೂ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು ಅದ್ಭುತ ಕದನ ತಂತ್ರಗಾರಿಕೆ ಮೆರೆದ ಅವರ ತಂತ್ರಗಾರಿಕೆ ಕುರಿತು ವಿವಿಧ ದೇಶಗಳ ಮಿಲಿಟರಿ ಪಂಡಿತರಿಂದ ಮೆಚ್ಚುಗೆ ವ್ಯಕ್ತವಾಯಿತು.

ಬ್ರಿಗೇಡಿಯರ್ ಕುಲ್‌ದೀಪ್ ಸಿಂಗ್ ಚಾಂದ್‌ಪುರಿ 1965 ಹಾಗೂ 1971ರ ಯುದ್ಧಗಳೆರಡರಲ್ಲೂ ಭಾಗಿಯಾಗಿದ್ದ ಧೀರೋದಾತ್ತ ಸೇನಾಧಿಕಾರಿ. ಅಲ್ಲದೆ ವಿಶ್ವ ಸಂಸ್ಥೆಯ ಶಾಂತಿ ಪಾಲನಾ ಪಡೆಯಲ್ಲೂ ಕಾರ್ಯ ನಿರ್ವಹಿಸಿದ್ದ ಸಿಂಗ್, ಗಲಭೆ ಗಾಝಾದಲ್ಲಿ ಒಂದು ವರ್ಷದ ಮಟ್ಟಿಗೆ ನಿಯೋಜಿತರಾಗಿದ್ದರು. ಬಳಿಕ ಮಧ್ಯಪ್ರದೇಶದ ಮ್ಹೋನಲ್ಲಿರುವ ಪ್ರತಿಷ್ಠಿತ ಪದಾತಿ ದಳ ಶಾಲೆಯಲ್ಲಿ ಬೋಧಕರಾಗಿ ಕರ್ತವ್ಯ ನಿರ್ವಹಿಸಿದರು. ಬ್ರಿಗೇಡಿಯರ್ ಆಗಿ ನಿವೃತ್ತರಾದ ಕುಲ್‌ದೀಪ್ ಸಿಂಗ್, ತಮ್ಮ ಅವಿರತ ಸೇವೆಗೆ ‘ವಿಶಿಷ್ಟ ಸೇವಾ ಪದಕ’ ಗೌರವ ಪಡೆದುಕೊಂಡರು. ಜೆ ಪಿ ದತ್ತಾ ನಿರ್ದೇಶನದ ಜನಪ್ರಿಯ ಹಿಂದಿ ಚಲನಚಿತ್ರ ‘ಬಾರ್ಡರ್’ ಕುಲದೀಪ್ ಸಿಂಗ್‌ ಅವರ ಪರಾಕ್ರಮವನ್ನು  ಆಧರಿಸಿದ್ದಾಗಿದೆ.

Tags

Related Articles

Leave a Reply

Your email address will not be published. Required fields are marked *

Language
Close