About Us Advertise with us Be a Reporter E-Paper

ಅಂಕಣಗಳು

ಮೀನುಗಾರರ ಕಣ್ಮರೆ

ಪಶ್ಚಿಮ ಸಮುದ್ರದಲ್ಲಿ ಮೀನು ಹಿಡಿಯಲು ಕರ್ನಾಟಕದ ಕರಾವಳಿ ಜಿಲ್ಲೆಯ ಏಳು ಮಂದಿ ಮೀನುಗಾರರು ಡಿ.16ರಿಂದ ನಾಪತ್ತೆಯಾಗಿದ್ದಾರೆ ಎಂಬ ವಿಚಾರ ಕಳವಳಕಾರಿ. ಡಿ.13ರಂದು ಗೋವಾದ ಒಂದು ಬಂದರಿನಿಂದ ಹೊರಟ ಈ ಮೀನುಗಾರರು ದೂರ ಸಮುದ್ರದಲ್ಲಿ ಮೀನುಗಾರಿಕೆ ನಡೆಸಿ, ತಾವು ಸಂಗ್ರಹಿಸಿದ ಮೀನಿನೊಂದಿಗೆ 10 ದಿನಗಳಲ್ಲಿ ವಾಪಸ್ ಆಗಬೇಕಿತ್ತು. ಆದರೆ ಎರಡು ದಿನಗಳ ಅವಧಿಯಲ್ಲೇ ಮೀನುಗಾರರ ಸಂಪರ್ಕ ಕಡಿದುಹೋಯಿತು. ಅವರು ಮೀನು ಹಿಡಿಯಲೆಂದು ಕೊಂಡೊಯ್ದಿದ್ದ ‘ಸುವರ್ಣ ತ್ರಿಭುಜ’ ಎಂಬ ದೋಣಿ ಸಹ ನಾಪತ್ತೆಯಾಗಿದೆ.

ಏಳು ಮಂದಿ ಮೀನುಗಾರರು ಕುರಿತು ಡಿ.22ರಂದೇ ಮಲ್ಪೆಯ ಕರಾವಳಿ ರಕ್ಷಣಾ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದರೂ, ದಕ್ಷ ಮತ್ತು ತ್ವರಿತ ತನಿಖೆ ನಡೆಯಲಿಲ್ಲ ಎಂದು ದೋಣಿಯ ಮಾಲೀಕರ ಸಹೋದರ ಆರೋಪಿಸಿದ್ದಾರೆ. ಯಾವುದೇ ಮಾನದಂಡದಲ್ಲಿ ಕಂಡರೂ ಏಳು ಯುವಕರ ಕಣ್ಮರೆ ಒಂದು ಗಂಭೀರ ವಿಷಯ. ಈ ಕುರಿತು ನಮ್ಮ ರಕ್ಷಣಾ ವ್ಯವಸ್ಥೆಯು ಇಷ್ಟು ದಿನಗಳಾದರೂ ಯಾವುದೇ ಪ್ರಗತಿಯನ್ನು ಸಾಧಿಸಿದೇ ಇರುವುದು ತೀವ್ರ ಕಳವಳ ಹುಟ್ಟಿಸುತ್ತಿದೆ.

ಈ ಪ್ರಕರಣದ ಗಂಭೀರತೆಯನ್ನು ಎತ್ತಿತೋರಿಸಲು ಸಹ ಸಾಕಷ್ಟು ಪ್ರಯತ್ನಗಳಾಗಿವೆ. ಸಹಿತ ‘ಸುವರ್ಣ ತ್ರಿಭುಜ’ ನಾಪತ್ತೆಯಾಗಿ 11 ದಿನಗಳಾದಾಗ ಉಡುಪಿ ಕ್ಷೇತ್ರದ ಶಾಸಕರು ಪ್ರಧಾನಮಂತ್ರಿಗಳಿಗೆ ಪತ್ರ ಬರೆದು, ತಕ್ಷಣ ಕ್ರಮ ಕೈಗೊಳ್ಳಲು ಸೂಕ್ತ ಇಲಾಖೆಗಳಿಗೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದ್ದರು. ಅಷ್ಟೇ ಅಲ್ಲ, ದೂರ ಸಮುದ್ರದಲ್ಲಿ ಏಳು ಜನ ಮೀನುಗಾರರ ಕಣ್ಮರೆಗೂ, ಭಯೋತ್ಪಾದಕ ಚಟುವಟಿಕೆಗೂ ಸಂಬಂಧ ಇರಬಹುದು ಎಂಬ ಅನುಮಾನವನ್ನು ಸಹ ವ್ಯಕ್ತಪಡಿಸಿದ್ದರು. ಆದರೂ ಇದುವರೆಗೆ ಈ ಪ್ರಕರಣದ ಯಾವುದೇ ಪ್ರಗತಿ ಕಂಡಿಲ್ಲ. ಕಳೆದ 25 ದಿನಗಳಿಂದ ನಾಪತ್ತೆಯಾಗಿರುವ ಆ ಜನ ಮೀನುಗಾರರು ಮತ್ತು ದೋಣಿಯು ಪತ್ತೆಯಾಗದೇ ಇರುವುದು ನಮ್ಮ ದೇಶದ ಭದ್ರತಾ ವೈಫಲ್ಯವನ್ನು ಸೂಚಿಸುವಂತಿದೆ.

ಮುಂಬಯಿಯ ಪ್ರತಿಷ್ಠಿತ ತಾಜ್ ಹೋಟೆಲ್ ಮತ್ತು ಇತರ ಸ್ಥಳಗಳ ಮೇಲೆ 2008ರಲ್ಲಿ ಸಮುದ್ರದ ದಾರಿಯಲ್ಲಿ ಬಂದು ದಾಳಿ ನಡೆಸಿದ ಉಗ್ರರು 250ಕ್ಕೂ ಹೆಚ್ಚಿನ ಜನರನ್ನು ಸಾಯಿಸಿದ ಭೀಕರ ಘಟನೆ ಭಾರತದ ಇತಿಹಾಸದಲ್ಲಿ ದಾಖಲಾಗಿದೆ. ಆಗ ನಮ್ಮ ದೇಶದ ಮೀನುಗಾರಿಕಾ ದೋಣಿಯನ್ನು ಅಪಹರಿಸಿ, ಅದರಲ್ಲಿದ್ದ ಮೀನುಗಾರರನ್ನು ಕೊಂದು, ಅದೇ ದೋಣಿಯ ಮೂಲಕ ಮುಂಬೈ ಕರಾವಳಿಯನ್ನು ಕರಾವಳಿ ರಕ್ಷಣಾ ವ್ಯವಸ್ಥೆಯ ಕಣ್ಣಿಗೆ ಮಣ್ಣೆರೆಚುವಲ್ಲಿ ಉಗ್ರರು ಯಶಸ್ವಿಯಾಗಿದ್ದರು. ಈ ಕರಾಳ ಘಟನೆಯ ಹಿನ್ನೆಲೆಯಲ್ಲಾದರೂ, ಈಗಿನ ಪ್ರಕರಣವನ್ನು ತಕ್ಷಣ ಭೇದಿಸಿ, ಕಣ್ಮರೆಯಾಗಿರುವ ದೋಣಿಯನ್ನು ಮತ್ತು ಏಳು ಜನ ಮೀನುಗಾರರನ್ನು ಪತ್ತೆಹಚ್ಚಬೇಕಾಗಿದೆ. ಆ ಮೂಲಕ ನಮ್ಮ ಕರಾವಳಿಯ ಮೀನುಗಾರರಲ್ಲಿ ಆತ್ಮವಿಶ್ವಾಸ ತುಂಬುವ ಕಾರ್ಯವನ್ನು ಆದ್ಯತೆಯಿಂದ ಮಾಡುವ ತುರ್ತು ಜವಾಬ್ದಾರಿ ಕೇಂದ್ರ ಸರಕಾರದ ಮೇಲಿದೆ.

Tags

Related Articles

Leave a Reply

Your email address will not be published. Required fields are marked *

Language
Close