About Us Advertise with us Be a Reporter E-Paper

ಅಂಕಣಗಳು

ರವಾಂಡದ ಹಾದಿಯಲ್ಲಿ ಐದು ವರ್ಷಗಳ ನಂತರ ಹೆಜ್ಜೆ ಹಾಕಿದಾಗ…

ಮೊನ್ನೆ ಪ್ರಧಾನ ಮಂತ್ರಿ ಅವರ ಐತಿಹಾಸಿಕ ರವಾಂಡ ಪ್ರವಾಸದ ಬಳಿಕ ವಾಪಸ್ ಬಂದ ನಂತರ, ಆ ನಿಯೋಗದಲ್ಲಿದ್ದ ನನ್ನನ್ನು ಒಬ್ಬ ಹಿರಿಯ ನ್ಯಾಯವಾದಿಗಳು ಕೇಳಿದರು – ‘ನೀವು ಬರೆಯುತ್ತಿದ್ದ ವರದಿಗಳನ್ನು ಪ್ರತಿದಿನ ನಿಮ್ಮ ಪತ್ರಿಕೆಯಲ್ಲಿ ಓದುತ್ತಿದ್ದೆ. ಅಂದಹಾಗೆ ಆ ದೇಶ ಸುರಕ್ಷಿತವಾಗಿದೆಯಾ? ವಾಸ ಯೋಗ್ಯವಾಗಿದೆಯಾ? ಆ  ಹೊಲಸು ಕೊಂಪೆಯೆಂದು ಕೇಳಿದ್ದೇನೆ, ನಿಜಾನಾ?’

ಅವರಿಗೆ ಏನು ಹೇಳುವುದೆಂದು ತಕ್ಷಣ ಅರ್ಥವಾಗಲಿಲ್ಲ. ಯಾರೋ ಅಲಾಯ್ದ ವ್ಯಕ್ತಿ ಕೇಳಿದ್ದರೆ ಬೇರೆ, ಆದರೆ ಆ ಪ್ರಶ್ನೆ ಕೇಳಿದರು ಹಿರಿಯ ನ್ಯಾಯವಾದಿಗಳು. ವಾಸ್ತವವನ್ನೇ ಹೇಳಬೇಕಲ್ಲ, ‘ನಾನು ಹೇಳುವುದೆಲ್ಲ ಸತ್ಯ, ಸತ್ಯವನ್ನೇ ಹೇಳುತ್ತೇನೆ, ಸತ್ಯವನ್ನು ಬಿಟ್ಟು ಮತ್ತೇನನ್ನೂ ಹೇಳುವುದಿಲ್ಲ. ನಮ್ಮ ಊರು, ನಮ್ಮ ರಾಜ್ಯ ಹಾಗೂ ನಮ್ಮ ದೇಶಕ್ಕಿಂತ ರವಾಂಡ ಸುರಕ್ಷಿತವಾಗಿದೆ ಹಾಗೂ ಅವೆಲ್ಲಕ್ಕಿಂತ ಮುಖ್ಯವಾಗಿ ನಮ್ಮ ದೇಶಕ್ಕಿಂತ ಸ್ವಚ್ಛವಾಗಿದೆ’ ಎಂದೆ. ಅವರು ತೆರೆದ  ಕೆಲ ಕ್ಷಣ ತೆರೆದೇ ಇದ್ದರು.

‘ಹೌದಾ? ನಿಜಾನಾ? ಹಾಗೆಲ್ಲ ಇರಲು ಸಾಧ್ಯವಾ? ನನಗೆ ಗೊತ್ತೇ ಇರಲಿಲ್ಲ’ ಎಂದ ಅವರು, ಅದೇ ಉಸುರಿನಲ್ಲಿ ‘ಅಲ್ಲಿನ ಜನ ಸರಿಯಾಗಿ ಊಟ-ತಿಂಡಿ ಮಾಡ್ತಾರಾ? ತಿನ್ನಲು ಇಲ್ಲದೇ ಜನ ಸಾ

ಯ್ತಾರೆ ಅಂತ ಕೇಳಿದ್ದೆ. ವಿಪರೀತ ಬಡತನವಂತೆ,ಹೌದಾ? ದೇಶದಲ್ಲಿ ಶಾಂತಿ-ಸುವ್ಯವಸ್ಥೆಯೇ ಇಲ್ಲವಂತೆ, ಖರೇನಾ?’  ಎಂದು ಕೇಳಿದರು.

ಕೆಲವರಿಗೆ ಒಂದು ಕಾಯಿಲೆ (ಸಿಂಡ್ರೋಮ್) ಇರುತ್ತದೆ. ಅದೇನೆಂದರೆ ವಿದೇಶ ಪ್ರವಾಸ ಮುಗಿಸಿ ಬಂದ ನಂತರ ಆ ದೇಶವನ್ನು  ಹೊಗಳುವುದು ಮತ್ತು ನಮ್ಮ ದೇಶವನ್ನು ಕೆಟ್ಟದಾಗಿ ತೆಗಳುವುದು. ‘ಆ ದೇಶವನ್ನು ನೋಡಲು ಎರಡು ಕಣ್ಣುಗಳು ಸಾಲುವುದಿಲ್ಲ.. ನಮ್ಮ ದೇಶವೂ ಇದೆ, ಹೊಲಸು, ಗಬ್ಬು…’ ಎಂದು ಮುಖ ಕಿವುಚಿಕೊಳ್ಳುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ಈ ಕಿವುಚಿಕೊಳ್ಳುವಿಕೆ ಸಹಜ ಪ್ರತಿಕ್ರಿಯೆಯಾದರೂ ವಿದೇಶಗಳಿಗೆ ಹೋಗದವರಿಗೆ ಇದೊಂದು ಸಿಂಡ್ರೋಮ್ ಎಂದೇ ಭಾಸವಾಗುತ್ತದೆ. ಇರಲಿ. ಹಿರಿಯ ನ್ಯಾಯವಾದಿಗಳ ಆ ಎಲ್ಲ ಪ್ರಶ್ನೆಗಳಿಗೆ ನಾನು, ‘ಮುಂದುವರಿದ ದೇಶಗಳಂತೆ ಶ್ರೀಮಂತವಿಲ್ಲದಿರಬಹುದು, ಆದರೆ ಅಲ್ಲಿನ ಜನರಿಗೆ ಊಟ-ತಿಂಡಿಗೆ ಕೊರತೆ ಇಲ್ಲ. ನಮ್ಮ  ಅಲ್ಲಿ ಶಾಂತಿ- ಸುವ್ಯವಸ್ಥೆ ಚೆನ್ನಾಗಿದೆ. ನೀವು ಅಂದುಕೊಂಡ ಹಾಗೆ ಇಲ್ಲ, ಬಹಳ ಚೆನ್ನಾಗಿದೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ರವಾಂಡ ಬದಲಾಗಿದೆ, ಆದರೆ ನಮ್ಮ ಅಭಿಪ್ರಾಯ ಬದಲಾಗಿಲ್ಲ’ ಎಂದೆ.

ನನಗೂ ಅದೇ ಸಿಂಡ್ರೋಮ್ ಬಡಿದಿರಬೇಕು ಎಂದು ಅವರು ತಕ್ಷಣ ಬೇರೆ ವಿಷಯ ತೆಗೆದರು.

ಇದು ಸುಶಿಕ್ಷಿತರು, ಜ್ಞಾನವಂತರು, ಎಲ್ಲಾ ತಿಳಿದಿರುವವರು ಎಂದು ನಾವು ಭಾವಿಸುವ ಜನರಲ್ಲಿ ಇರುವ ಅಭಿಪ್ರಾಯ. ಇದು ಅವರ ತಪ್ಪಲ್ಲ. ಬಹುತೇಕ ಸಂದರ್ಭಗಳಲ್ಲಿ reality(ವಾಸ್ತವ)ಗಿಂತ perception(ಗ್ರಹಿಕೆ) ಭಯಾನಕವಾಗಿರುತ್ತದೆ.  ಖಂಡದ ವಿಷಯದಲ್ಲಿ ನಮ್ಮ ಗ್ರಹಿಕೆ ಹಾಗೆಯೇ ಇದೆ. ಇಂದಿಗೂ ನಮ್ಮ ಪಾಲಿಗೆ ಆಫ್ರಿಕಾ

ಅಂದರೆ ಕತ್ತಲೆಯ ಖಂಡ. ಆಫ್ರಿಕಾ ಅಂದರೆ ಊಟ, ನೀರಿಗೆ ಗತಿ-ಗೋತ್ರ ಇಲ್ಲದ, ಮನುಷ್ಯರು ಮನುಷ್ಯರನ್ನೇ ತಿನ್ನುವ, ಬಡತನ, ರೋಗ-ರುಜಿನ ತಾಂಡವವಾಡುವ, ಅನಕ್ಷರಸ್ಥರಿಂದ ತುಂಬಿರುವ, ನಾಗರಿಕ ಸೌಲಭ್ಯಗಳಿಂದ ವಂಚಿತವಾದ, ಕಳ್ಳಕಾಕರಿಂದ ತುಂಬಿರುವ ದರವೇಶಿಗಳ ನಾಡು. ಇನ್ನು ಅನೇಕರಿಗೆ ಆಫ್ರಿಕಾ ಅಂದರೆ 54 ದೇಶಗಳಿರುವ ಒಂದು ಖಂಡ ಎಂಬುದೂ ಗೊತ್ತಿಲ್ಲ. ಅಂಥವರ ಪಾಲಿಗೆ ಆಫ್ರಿಕಾ ಅಂದರೆ ಒಂದು

ನಮಗೆ ಗೊತ್ತಿರದ ಒಂದು ಸಂಗತಿಯೇನೆಂದರೆ, ದಕ್ಷಿಣ ಆಫ್ರಿಕಾ ಸೇರಿದಂತೆ ಆಫ್ರಿಕಾದ ಕೆಲವು ದೇಶಗಳು ಭಾರತಕ್ಕಿಂತ ಮುಂದುವರಿದಿವೆ ಮತ್ತು ಇನ್ನು ಕೆಲವು ದೇಶಗಳು ಕ್ಷಿಪ್ರ ಗತಿಯಲ್ಲಿ ಪ್ರಗತಿ ಹೊಂದುತ್ತಿವೆ ಎಂಬುದು. ಆಫ್ರಿಕಾದಲ್ಲಿ ಇನ್ನೂ ಬಡತನ, ಅನಕ್ಷರತೆ, ರೋಗ-ರುಜಿನಗಳಿಂದ ಕೂಡಿರುವ ದೇಶಗಳು ಇರಬಹುದು, ಇಲ್ಲವೇ ಇಲ್ಲ ಎಂದಲ್ಲ, ಕೆಲವು ದೇಶಗಳಲ್ಲಿ ಅಂಥ ಸ್ಥಿತಿಯಿರುವುದು ನಿಜ. ಆದರೆ ನಮಗಿಂತ ವೇಗವಾಗಿ, ವ್ಯವಸ್ಥಿತವಾಗಿ, ಸಮರ್ಪಕವಾಗಿ, ಚೆಂದವಾಗಿ, ಮಾತ್ರವಲ್ಲ ನಮಗಿಂತ ಉತ್ತಮವಾಗಿ, ನಮಗೂ ಮಾದರಿಯಾಗಿ ಬೆಳೆಯುತ್ತಿರುವ  ಇವೆ ಎಂಬುದು ಅಷ್ಟೇ ಸತ್ಯ.

‘ಸಾವಿರ ಶಿಖರಗಳ ಬೀಡು ಹಾಗೂ ಲಕ್ಷ ಮಂದಸ್ಮಿತರ ನಾಡು’ ಎಂದೇ ಹೆಸರಾಗಿರುವ ರವಾಂಡಕ್ಕೆ ನಾನು ಐದು ವರ್ಷಗಳ ಹಿಂದೆ ಹೋಗಿದ್ದೆ. ಆ ದೇಶದ ಉದ್ದಗಲಕ್ಕೆ ಎರಡು ವಾರಗಳ ಕಾಲ ಪ್ರವಾಸ ಮಾಡಿದ್ದೆ. ಅಲ್ಲಿಂದ ಬಂದವನು ಆ ದೇಶದ ಪ್ರವಾಸ ಅನುಭಗಳನ್ನು ಸೇರಿಸಿ ‘ಗೊರಿಲ್ಲಾ ನಾಮಕರಣ ಪ್ರಸಂಗ’ ಎಂಬ ಪುಸ್ತಕ ಬರೆದಿದ್ದೆ. ನಾನು ರವಾಂಡಕ್ಕೆ ಹೋಗುವ ಮುನ್ನ ನನ್ನ ಅಭಿಪ್ರಾಯವವೂ ಆ ಹಿರಿಯ ನ್ಯಾಯವಾದಿಗಳು  ಅನುಭವವೇ ಆಗಿತ್ತು. ಅಲ್ಲದೆ ನಾನು ಆ ದೇಶಕ್ಕೆ ಹೋಗಬೇಕಾ ಬೇಡವಾ ಎಂಬ ದ್ವಂದ್ವದಲ್ಲಿದ್ದೆ. ನಾನು ರವಾಂಡದ ಬಗ್ಗೆ ಭಯಂಕರ ಕತೆಗಳನ್ನು ಕೇಳಿದ್ದೆ, ಮೈ ನವಿರೇಳಿಸುವ ಪುಸ್ತಕಗಳನ್ನು ಓದಿದ್ದೆ. ‘ಹೋಟೆಲ್ ರವಾಂಡ’ ಎಂಬ ಸಿನಿಮಾ ನೋಡಿ ದಿಗಿಲುಗೊಂಡಿದ್ದೆ. ರವಾಂಡದ ರಕ್ತಸಿಕ್ತ ಇತಿಹಾಸ ಓದಿ ನನ್ನಲ್ಲಿ ಆ ದೇಶದ ಬಗ್ಗೆ ತಣ್ಣನೆಯ ತಾತ್ಸಾರ ಹುಟ್ಟಿಕೊಂಡಿತ್ತು.

  1. ಆಗ ನಾನು ಏಷ್ಯನ್ ಕಾಲೇಜ್ ಆಫ್ ಜರ್ನಲಿಸಂನಲ್ಲಿ ಸಹಾಯಕ ಪ್ರಾಧ್ಯಾಪಕನಾಗಿದ್ದೆ. ರವಾಂಡದ ಸುದ್ದಿ ಪ್ರತಿದಿನ ಮುಖಪುಟದಲ್ಲಿ ಪ್ರಕಟವಾಗುತ್ತಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ರವಾಂಡ ಸುದ್ದಿಯಲ್ಲಿತ್ತು. ನಿನ್ನೆ ಅಲ್ಲಿ ಎಂಟು ಸಾವಿರ ಜನ ಸತ್ತಿದ್ದಾರಂತೆ, ಇಂದು ಹದಿನಾಲ್ಕು ಸಾವಿರ ಜನರನ್ನು ಬಡಿದು ಸಾಯಿಸಿದ್ದಾರಂತೆ, ಎರಡು ಸಾವಿರ ಮಹಿಳೆಯರನ್ನು ಮೊನ್ನೆ ಮಾನಭಂಗ ಮಾಡಿದರಂತೆ, ನಾಲ್ಕು ನೂರು ಮಕ್ಕಳನ್ನು ಉರಿಯುವ ಚಿತೆಗೆ ಎಸೆದು ಸಾಯಿಸಿದರಂತೆ…ಎಂಬ ಸುದ್ದಿ ದಿನವಹಿ ಮುಖಪುಟದಲ್ಲಿ ಪ್ರಕಟವಾಗುವುದನ್ನು ಓದುವಾಗ ಗಾಬರಿಯಾಗುತ್ತಿತ್ತು. ದಿನದಿಂದ ದಿನಕ್ಕೆ ರವಾಂಡಾದಲ್ಲಿ ಸಾಯುವವರ ಸಂಖ್ಯೆ ಜಾಸ್ತಿಯಾಗುತ್ತಲೇ ಇತ್ತು. ಜನಾಂಗೀಯ ನರಮೇಧಕ್ಕೆ ಆ ದೇಶ ಸಿಕ್ಕು ದಿಕ್ಕಾಪಾಲಾಗಿತ್ತು.

ಹುಟು ಮತ್ತು ಟುಟ್ಸಿ ಎಂಬ ಎರಡು ಕೋಮುಗಳ ಜನ ಆಜನ್ಮ ವೈರಿಗಳೇನೋ ಎಂಬಂತೆ ಕೈಗೆ ಸಿಕ್ಕಿದ ಆಯುಧ, ಹತ್ಯಾರಗಳಿಂದ ಬಡಿದಾಡಿ, ಸಿಕ್ಕ ಸಿಕ್ಕವರನ್ನು ಕೊಚ್ಚಿ ಕೊಲೆಗೈದಿದ್ದರು. ಮಹಿಳೆಯರನ್ನು ಮನೆಯಿಂದ ಹೊರಗೆಳೆದು ಅವರ ಗಂಡ, ಮಕ್ಕಳ ಎದುರಿಗೇ ಅತ್ಯಾಚಾರ ಮಾಡಿ ಸೈಜುಗಲ್ಲುಗಳನ್ನು ಎತ್ತಿ ಹಾಕಿ ಸಾಯಿಸಿದ್ದರು. ಸತ್ತವರಿಗೆ ಕಂಬನಿ ಮಿಡಿಯುವವರಾಗಲಿ, ಶವಗಳಿಗೆ ಸಂಸ್ಕಾರ ಮಾಡುವವರಾಗಲಿ, ಕೊಲೆಗಾರರಿಗೆ ಬುದ್ಧಿ ಹೇಳುವವರಾಗಲಿ ಯಾರೂ ಇರಲಿಲ್ಲ. ದೇಶಕ್ಕೆ ದೇಶವೇ ಹೊಡೆದಾಟಕ್ಕೆ ನಿಂತು ಬಿಟ್ಟಿತ್ತು.  ರಾಜಧಾನಿ ಕಿಗಾಲಿಯಲ್ಲಿ ಶವ ಸಂಸ್ಕಾರಕ್ಕೆ ಜಾಗವೂ ಇರಲಿಲ್ಲ, ಮಾಡುವವರೂ ಇರಲಿಲ್ಲ. ಕೊಳೆತು ನಾರುತ್ತಿದ್ದ ಶವಗಳನ್ನು ಜನ ನದಿಗಳಿಗೆ ಎಸೆಯುತ್ತಿದ್ದರು.

ಪ್ರಾಯಶಃ ಮಾನವ ಸಂಕುಲ ಕಂಡು ಕೇಳರಿಯದ ಭಯಂಕರ, ಬೀಭತ್ಸ ನರಮೇಧಕ್ಕೆ ರವಾಂಡ ಸಾಕ್ಷಿಯಾಯಿತು. ನೂರು ದಿನಗಳ ಕಾಲ ರವಾಂಡ ಅಗ್ನಿಕುಂಡದಂತೆ ದಹಿಸಿಹೋಯಿತು. ಈ ಅವಧಿಯಲ್ಲಿ ಹತ್ತು ಲಕ್ಷ ಜನ ಸತ್ತು ಹೋದರು. ಅಂದರೆ ದಿನಕ್ಕೆ ತಲಾ ಹತ್ತು ಸಾವಿರ ನರಮೇಧ ನಡೆಯಿತು!

ರವಾಂಡ ಒಂದು ದೇಶವಾಗಿ ಸರ್ವನಾಶವಾಗಿ ಹೋಗಬೇಕಿತ್ತು.  ಅಲ್ಲಿ ಭರವಸೆ ಮೂಡಿಸುವ ಯಾವ ಅಂಶಗಳೂ ಇರಲಿಲ್ಲ. ಪರಸ್ಪರ ಅಪನಂಬಿಕೆ, ದ್ವೇಷ, ಆಕ್ರೋಶಗಳ ನೆಲೆಗಟ್ಟಿನ ಮೇಲೆ ಯಾವ ದೇಶವನ್ನಾದರೂ ಕಟ್ಟುವುದು ಸಾಧ್ಯವೇ ಇರಲಿಲ್ಲ. ಒಂದೆಡೆ ಅನಾಗರಿಕತೆ, ಮತ್ತೊಂದೆಡೆ ಅರಾಜಕತೆ, ದೇಶದೆಲ್ಲೆಡೆ ಅಶಾಂತಿ, ಬಡತನ, ರೋಗ ರುಜಿನ…ಪ್ರವಾಹದಲ್ಲಿ ಕೊಚ್ಚಿ ಹೋದ ಅಥವಾ ಭೂಕಂಪದಲ್ಲಿ ಸಂಪೂರ್ಣ ನೆಲಕಚ್ಚಿ ಹೋದ ಮನೆಯನ್ನು ಎಲ್ಲಿಂದ ಮರುನಿರ್ಮಾಣ ಮಾಡುವುದು? ಪುರಾಣದಲ್ಲಿ ಬೂದಿಯಿಂದ ಫೀನಿಕ್‌ಸ್ ಹಕ್ಕಿ ಹುಟ್ಟಿ ಬರಬಹುದು. ಆದರೆ ನಿಜಜೀವನದಲ್ಲಿ ಅಂತಹ ಪವಾಡವಾಗುವುದು ಸಾಧ್ಯವೇ? ಖಂಡಿತ ಆದರೆ ರವಾಂಡ ಫೀನಿಕ್‌ಸ್ ಹಕ್ಕಿಯಂತೆ ಮೇಲಕ್ಕೆದ್ದು ಬಂದಿದೆ. ಕಳೆದ ಇಪ್ಪತ್ನಾಲ್ಕು ವರ್ಷಗಳಲ್ಲಿ ಕೇವಲ ಆಫ್ರಿಕಾಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೆ ಮಾದರಿಯಾಗುವಂತೆ, ಜಗತ್ತೇ ಆಶ್ಚರ್ಯಪಡುವಂತೆ ತಲೆ ಎತ್ತಿ ನಿಂತಿದೆ. ರವಾಂಡ ಅಂದರೆ ಮನುಷ್ಯ ಮನುಷ್ಯರೇ ಹೊಡೆದಾಡಿ ಬಡಿದಾಡಿಕೊಂಡು ಸತ್ತ ದೇಶವಲ್ಲವಾ ಎಂದು ಮಾತಾಡಿದವರು ತಮ್ಮ ಮಾತನ್ನು ನುಂಗಿಕೊಳ್ಳುವಂತೆ ಮಾಡಿ, ಅವರು ಮೂಗಿನ ಮೇಲೆ ಬೆರಳಿಡುವಷ್ಟು ಸೋಜಿಗದಲ್ಲಿ ಬೆಳೆಯುತ್ತಿದೆ. ನಿಧಾನವಾಗಿ ಜಗತ್ತು ರವಾಂಡದ ಕಡೆ ಮುಖ ಮಾಡುತ್ತಿದೆ.

ನಾನು ಐದು ವರ್ಷಗಳ  ಹೋಗಿದ್ದಾಗ ಆ ದೇಶ ಅಭಿವೃದ್ಧಿ ಹೊಂದಿದ ಬಗೆ, ಮುಂದಿನ ನೀಲನಕ್ಷೆ ನೋಡಿ ಸಂತಸಪಟ್ಟಿದ್ದೆ. ಆ ದೇಶದ ಅಧ್ಯಕ್ಷ ಪಾಲ್ ಕಗಾಮೆ ಅವರು ತಮ್ಮ ದೇಶವನ್ನು ‘ಆಫ್ರಿಕಾದ ಸಿಂಗಾಪುರ’ವನ್ನಾಗಿ ಮಾಡುತ್ತೇನೆ ಎಂದು ಹೇಳಿದ್ದರು. ರವಾಂಡದೆಲ್ಲೆಡೆ ಓಡಾಡಿದಾಗ ಅವರ ಮಾತುಗಳಲ್ಲಿನ ಭರವಸೆಯ ಪಸೆಯನ್ನು ಕಂಡಿದ್ದೆ. ಇಡೀ ದೇಶದಲ್ಲಿ ಪ್ಲಾಸ್ಟಿಕ್ ಬಳಸಕೂಡದೆಂಬ ಅವರ ಆದೇಶ ಕಟ್ಟುನಿಟ್ಟಾಗಿ ಜಾರಿಯಾಗಿದ್ದನ್ನು ಕಂಡು ಖುಷಿಪಟ್ಟಿದ್ದೆ. ಕಿಗಾಲಿಯಲ್ಲಿ ನಾನು ಉಳಿದುಕೊಂಡ ಹೋಟೆಲಿನಲ್ಲಿ ಸ್ವಾಗತ ಪರಿಚಾರಕಿ ನನ್ನ ಸೂಟಕೇಸಿನಲ್ಲಿದ್ದ ಪ್ಲಾಸ್ಟಿಕ್  ನೋಡಿ, ಅದನ್ನು ತಾನೇ ಇಸಿದುಕೊಂಡು ಅದರ ಬದಲು ಕಾಗದದ ಬ್ಯಾಗ್ ಕೊಟ್ಟಿದ್ದಳು.

‘ಈ ದೇಶದಲ್ಲಿ ಪ್ಲಾಸ್ಟಿಕ್ಕನ್ನು ನಾವು ನಿಷೇಧಿಸಿದ್ದೇವೆ, ನಿಮಗೆ ಗೊತ್ತಿರಲಿ’ ಎಂದು ಮೆಲ್ಲಗೆ ಎಚ್ಚರಿಸಿದ್ದಳು. ಆನಂತರ ನಾನು ಅಲ್ಲಿ ಸಾವಿರಾರು ಕಿ.ಮೀ. ಸುತ್ತಿರಬಹುದು, ಇಡೀ ದೇಶದಲ್ಲಿ ಒಂದೇ ಒಂದು ಪ್ಲಾಸ್ಟಿಕ್ ಪೊಟ್ಟಣ, ಬಾಟಲಿ, ಹಾಳೆ, ಬ್ಯಾಗ್ ಕಣ್ಣಿಗೆ ಬೀಳಲಿಲ್ಲ. ಸರಕಾರಿ ಸುತ್ತೋಲೆಯೊಂದು ಮಿಲಿಟರಿ ಆದೇಶದಂತೆ ದೇಶವ್ಯಾಪಿ ಜಾರಿಗೆ ಬಂದು ಆಚರಣೆಯಲ್ಲಿದೆ ಎಂಬ ಸಂಗತಿ ಢಾಳಾಗಿ ಕಣ್ಣಿಗೆ ಹೊಡೆಯುವಂತಿತ್ತು.  ಅವರು ದೇಶದಲ್ಲಿ ಬಡತನವಿದ್ದಿರಬಹುದು, ಆದರೆ ಭಿಕ್ಷುಕರು ಇರಬಾರದು ಎಂಬ ಕಟ್ಟಪ್ಪಣೆ ಹೊರಡಿಸಿದ್ದರು. ಬಡವರಿಗೆ ಕೆಲಸ ಕೊಟ್ಟರೆ ಅವರು ಭಿಕ್ಷಾಟನೆ ಮಾಡುವುದು ತಪ್ಪುತ್ತದೆ ಎಂಬುದು ಅವರ ಯೋಚನೆಯಾಗಿತ್ತು. ಅದರಂತೆ ಇಡೀ ದೇಶದಲ್ಲಿ ಒಬ್ಬೇ ಒಬ್ಬ ಭಿಕ್ಷುಕನೂ ಕಣ್ಣಿಗೆ ಬಿದ್ದಿರಲಿಲ್ಲ.

ರವಾಂಡದಲ್ಲಿ ಯಾರೇ ಬಂದು ಬಂಡವಾಳ ತೊಡಗಿಸಬಹುದು, ನಲವತ್ತೆಂಟು ಗಂಟೆಗಳಲ್ಲಿ ಅವರಿಗೆ ಅನುಮತಿ ನೀಡುತ್ತೇವೆ ಎಂದು ರವಾಂಡ ಸರಕಾರ ಹೇಳಿತ್ತು. ಅದರಂತೆ ಅನೇಕ ಕಂಪನಿಗಳು ಆ ಅವಧಿಯಲ್ಲಿ, ಆ ದೇಶದಲ್ಲಿ ತಮ್ಮ  ತೆರೆದಿದ್ದವು. ಮೇಲ್ನೋಟಕ್ಕೆ ರವಾಂಡ ಒಂದು ಹೊಸ ಬೆಳಗಿಗೆ, ಹೊಸ ಪ್ರತಿಜ್ಞೆಗೆ ತೆರೆದುಕೊಂಡಿದೆ ಎಂದು ಯಾರಿಗಾದರೂ ಅನಿಸುತ್ತಿತ್ತು.

ನನಗೆ ಬಹಳ ಕುತೂಹಲವಿತ್ತು, ಈ ಐದು ವರ್ಷಗಳಲ್ಲಿ ಆ ದೇಶ ಹೇಗಾಗಿರಬಹುದು, ಯಾವ ರೀತಿಯಲ್ಲಿ ತನ್ನನ್ನು ರೂಪಿಸಿಕೊಂಡಿರಬಹುದು, ಎಷ್ಟು ಪ್ರಮಾಣದಲ್ಲಿ ಬೆಳೆದಿರಬಹುದು ಎಂಬ ಬಗ್ಗೆ ತಿಳಿದುಕೊಳ್ಳಲು ನನಗೆ ಕೆಟ್ಟ ಕುತೂಹಲವಿತ್ತು. ಅಂದುಕೊಂಡಿದ್ದನ್ನು ಆ ದೇಶ ಎಷ್ಟು ಕಾರ್ಯರೂಪಕ್ಕೆ ತಂದಿದೆ ಎಂಬುದನ್ನು ತಿಳಿಯುವ ಆಸೆಯಿತ್ತು.

ಹೀಗಾಗಿ ಭಾರತದ ಪ್ರಧಾನಿಯೊಬ್ಬರು ಮೊಟ್ಟ ಮೊದಲ ಬಾರಿಗೆ  ಹೊರಟು ನಿಂತಾಗ, ನನಗೆ ಆ ನಿಯೋಗದಲ್ಲಿ ಪಾಲ್ಗೊಳ್ಳುವ ಆಮಂತ್ರಣ ಬಂದಾಗ ಮರು ಯೋಚನೆ ಮಾಡದೇ ಒಪ್ಪಿಕೊಂಡೆ.

ಅಂದು ಕಿಗಾಲಿಯಲ್ಲಿ ಇಳಿದು ಹೊರಟುಬರುವ ತನಕ ನನ್ನ ಕಣ್ಣುಗಳಿಗೆ ವಿಶ್ರಾಂತಿಯೇ ಇರಲಿಲ್ಲ. ಆದರೆ ಈ ಐದು ವರ್ಷಗಳಲ್ಲಿ ನಾನು ಹೊಸ ರವಾಂಡವನ್ನು ಕಂಡೆ. ಆ ಅವಧಿಯಲ್ಲಿ ಅದು ಬೆಳೆದ ಪರಿ ನಿಜಕ್ಕೂ ಅಚ್ಚರಿಪಡುವಂಥದ್ದು. ಕಿಗಾಲಿಯಲ್ಲಿ ಹೊಸ ರಾಜಧಾನಿ ತಲೆ ಎತ್ತಿ ನಿಂತಿದೆ. ಎಲ್ಲೆಡೆ ಎತ್ತರದ ಕಟ್ಟಡಗಳು ಮುಗಿಲಿಗೆ ಮುಖ ಮಾಡಿವೆ. ಹೊಸ  ಬೇರುಗಳು ನೆಲದಲ್ಲಿ ಹರಡಿಕೊಳ್ಳುತ್ತಿವೆ. ಶಾಪಿಂಗ್ ಮಾಲುಗಳು ಹೊಸ ಆಕರ್ಷಣೆಗಳಾಗುತ್ತಿವೆ.

‘ಊರಿಗೊಬ್ಬಳೇ ಪದ್ಮಾವತಿ’ ಎಂಬಂತಿದ್ದ ಒಂದು ಪಂಚತಾರಾ ಹೋಟೆಲಿನ ಜತೆಗೆ ಮೂರ್ನಾಲ್ಕು ಹೋಟೆಲುಗಳು ಹುಟ್ಟಿಕೊಂಡಿವೆ. ಹೊಸ ಹೊಸ ಕಂಪನಿಗಳು ತಮ್ಮ ಆಫೀಸುಗಳನ್ನು ತೆರೆದಿವೆ. ಕಾರುಗಳೇ ಇಲ್ಲದ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಬೇರೆ ಕೇಡು ಎಂಬತ್ತಿದ್ದ ಕಿಗಾಲಿಯ ರಸ್ತೆಗಳು ಕುರಿ ಮಂದೆಯಂತೆ ವಾಹನಗಳಿಂದ ದಟ್ಟಣೆಯಾಗಿವೆ. ಬರೀ ಕಪ್ಪು ಮುಖಗಳ ಬದಲು ಬಿಳಿ ತೊಗಲಿನವರೂ ಅಲ್ಲಲ್ಲಿ ಕಾಣಲಾರಂಭಿಸಿದ್ದಾರೆ. ನೆಪ್ಪೆ ಮುಖದ ಚೀನೀಯರು ಎಲ್ಲೆಡೆ  ಅಮೆರಿದವರು, ಯೂರೋಪಿಯನ್ನರು ಕಿಗಾಲಿಯಲ್ಲಿ ಬಿಡಾರ ಹೂಡುತ್ತಿದ್ದಾರೆ.

ವಿದೇಶಿ ಬ್ಯಾಂಕುಗಳು ಎಲ್ಲಾ ಬೀದಿಗಳಲ್ಲೂ ಕಾಣುತ್ತಿವೆ. ಎಲ್ಲಾ ದೇಶಗಳು ತಮ್ಮ ತಮ್ಮ ರಾಯಭಾರ ಕಚೇರಿಗಳನ್ನು ತೆರೆಯಲಾರಂಭಿಸಿದ್ದಾರೆ. ಸ್ಪೆಷಲ್ ಎಕನಾಮಿಕ್ ಜೋನ್‌ಗೆ ಮೀಸಲಿಟ್ಟ ಜಾಗ ವಿಸ್ತರಿಸಿಕೊಳ್ಳುತ್ತಾ ಹೋಗುತ್ತಿದೆ. ವಿಶ್ವದ ಬೇರೆ ಬೇರೆ ದೇಶಗಳಿಂದ ಗೊರಿಲ್ಲಾಗಳನ್ನು ನೋಡಲೆಂದೇ ಬರುವ ವಿದೇಶಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಗೊರಿಲ್ಲಾ ಚಾರಣಕ್ಕೆ ನಿಗದಿಪಡಿಸಿದ ಹಣ ಎಂಟು ನೂರು ಡಾಲರುಗಳಿಂದ (50 ಸಾವಿರ ರೂಪಾಯಿ) ಸಾವಿರದ ಐದುನೂರು ಡಾಲರುಗಳಿಗೆ ಏರಿದೆ.

 ನೆಲೆಸಿದ ಭಾರತೀಯರ ಸಂಖ್ಯೆ ಆರು ಪಟ್ಟು ಜಾಸ್ತಿಯಾಗಿದೆ. ಸುಮಾರು ಐವತ್ತು ಕನ್ನಡಿಗರು ಸಹ ರವಾಂಡದ ನೀರು ಕುಡಿಯುತ್ತಿದ್ದಾರೆ. ಅವರೆಲ್ಲ ಸೇರಿ ಒಂದು ಪುಟ್ಟ ‘ಕನ್ನಡ ಸಂಘ’ ಸ್ಥಾಪಿಸಿಕೊಂಡಿದ್ದಾರೆ. ಯುಗಾದಿ, ಗಣೇಶ ಹಬ್ಬ, ದೀಪಾವಳಿ ಆಚರಿಸುತ್ತಾರೆ. ಕಿಗಾಲಿಯಲ್ಲಿ ಐದಾರು ಭಾರತೀಯ ಶೈಲಿಯ ಹೋಟೆಲುಗಳು ಆರಂಭವಾಗಿವೆ. ಬೇರೆ ಬೇರೆ ದೇಶಗಳ ಖಾದ್ಯಗಳ ರೆಸ್ಟೋರೆಂಟುಗಳು ಸಹ ಒಲೆ ಹಚ್ಚಿವೆ.

ರವಾಂಡದಲ್ಲಿ ಯಾರೇ ಬಂದರೂ ನಲವತ್ತೆಂಟು ಗಂಟೆಗಳಲ್ಲ, ಕೇವಲ ಇಪ್ಪತ್ನಾಲ್ಕು ಗಂಟೆಗಳಲ್ಲಿ ಬಿಜಿನೆಸ್ ಆರಂಭಿಸಬಹುದಾಗಿದೆ.  ಐದು ಪೈಸೆ ಲಂಚ ಕೊಡಬೇಕಿಲ್ಲ.

ರವಾಂಡ ಸಂಸತ್ತಿನಲ್ಲಿ ಶೇಕಡಾ ನಲವತ್ತರಷ್ಟಿದ್ದ ಮಹಿಳಾ ಸಂಸದೆಯರ ಪ್ರಾತಿನಿಧ್ಯ ಶೇಕಡಾ ಅರವತ್ತರಷ್ಟಾಗಿದೆ. ರವಾಂಡದ ಕಾಡುಗಳಲ್ಲಿದ್ದ ಮೌಂಟನ್ ಗೊರಿಲ್ಲಾಗಳ ಸಂಖ್ಯೆ ನೂರೈವತ್ತರಷ್ಟು ವೃದ್ಧಿಸಿದೆ.

ಮುಂಬೈಯಿಂದ ಕಿಗಾಲಿಗೆ ಬರಲು ಮೂರು ವಿಮಾನ ನಿಲ್ದಾಣಗಳನ್ನು ತುಳಿಯಬೇಕಿತ್ತು. ಈಗ ಮುಂಬೈಯಿಂದ ನೇರ ವಿಮಾನ ಸಂಪರ್ಕವಾಗಿದೆ. ರವಾಂಡದ ವಿಮಾನಯಾನ ಸಂಸ್ಥೆ ‘ರವಾಂಡ ಏರ್’  ದೇಶಗಳಿಗೆ ಮಾತ್ರವಲ್ಲ, ಯೂರೋಪಿನ ದೇಶಗಳಿಗೂ ಹಾರಾಟ ಆರಂಭಿಸಿದೆ. ವಿಮಾನ ನಿಲ್ದಾಣ ವಿಸ್ತರಿಸುತ್ತಿದೆ.

ನಿಧಾನವಾಗಿ ಎಲ್ಲೆಡೆ ಪಾರ್ಕಿಂಗ್ ಎಂಬ ಹೊಸ ಸಮಸ್ಯೆ ಹುಟ್ಟಿಕೊಳ್ಳುತ್ತಿದೆ. ಹಾದಿಬೀದಿಯಲ್ಲಿ ಮೊಬೈಲ್ ಮತ್ತು ಸಿಮ್ ಕಾರ್ಡುಗಳನ್ನು ಮಾರಾಟ ಮಾಡುವ ಅಂಗಡಿಗಳು ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿವೆ. ಹೊಸ ಕಾರುಗ ಶೋರೂಮುಗಳು ದೊಡ್ಡ ದೊಡ್ಡ ಕಟ್ಟಡಗಳನ್ನು ಆಕ್ರಮಿಸಿಕೊಳ್ಳುತ್ತಿವೆ, ಎಲ್ಲ ಬ್ರಾಂಡಿನ ವಿದೇಶಿ ಕಾರುಗಳು ಕಣ್ಣಿಗೆ ರಾಚುತ್ತವೆ. ರಸ್ತೆ ರಸ್ತೆಯಲ್ಲಿ ಪಿಟ್ಜಾ, ಫಿಂಗರ್ ಚಿಪ್‌ಸ್, ಬಗರ್ರ್, ಪಾಸ್ತಾ, ಡೋನಟ್ ಕಾರ್ನರುಗಳು!

ಏಕೆಂದರೆ ಇಡೀ ದೇಶ ಮೊದಲಿಗಿಂತ ಸ್ವಚ್ಛವಾಗಿದೆ. ಒಂದೇ ಒಂದು ಕಸ, ಕಡ್ಡಿ, ಪ್ಲಾಸ್ಟಿಕ್, ಕೊಳಕುಗಳನ್ನು ನೋಡಲು ಸಾಧ್ಯವಿಲ್ಲ. ಒಬ್ಬೇ ಒಬ್ಬ ಭಿಕ್ಷುಕನಿಲ್ಲ. ಯಾವ ಬೀದಿಗೆ ಹೋದರೂ ಈಗ ತಾನೇ ಗುಡಿಸಿದಷ್ಟು ಕ್ಲೀನ್ ಆಗಿದೆ.

ಇವೆಲ್ಲಕ್ಕಿಂತ ಮುಖ್ಯವಾಗಿ ಹುಟು ಮತ್ತು ಟುಟ್ಸಿ ಎಂಬ ಜಾತಿಯನ್ನೇ ತೆಗೆದುಬಿಟ್ಟಿದ್ದಾರೆ. ಅಲ್ಲಿ ಈಗ ಮನುಷ್ಯ ಜಾತಿಯೊಂದೇ. ರವಾಂಡದ ಎಲ್ಲಕ್ಕಿಂತ ಅತಿ ದೊಡ್ಡ ಸಾಧನೆ ಅಂದರೆ ಇದೇ.

ಇವನ್ನೆಲ್ಲಾ ಪ್ರಗತಿ ಎಂದು ಭಾವಿಸುವುದಾದರೆ, ಅನುಮಾನವೇ  ರವಾಂಡ ಪ್ರಗತಿ ಪಥದಲ್ಲಿ, ದಿಟ್ಟ ಹೆಜ್ಜೆಯೊಂದಿಗೆ ಸಾಗುತ್ತಿದೆ.

Tags

ವಿಶ್ವೇಶ್ವರ್ ಭಟ್

ಇವರ ಊರು ಉತ್ತರ ಕನ್ನಡದ ಕುಮಟಾದ ಮೂರೂರು. ಓದಿದ್ದು ಎಂ.ಎಸ್ಸಿ ಹಾಗೂ ಎಮ್.ಎ. ನಾಲ್ಕು ಚಿನ್ನದ ಪದಕ ವಿಜೇತ. ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ. ವೃತ್ತಿಯ ಆರಂಭದಲ್ಲಿ ಸಂಯುಕ್ತ ಕರ್ನಾಟಕ, ಕನ್ನಡಪ್ರಭದಲ್ಲಿ ಉಪಸಂಪಾದಕ. ಆನಂತರ ಏಷ್ಯನ್ ಕಾಲೇಜ್ ಆಫ್ ಜರ್ನಲಿಸಮ್‌ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್. ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿ. ಕನ್ನಡದ ಜನಪ್ರಿಯ ದೈನಿಕ ‘ವಿಜಯ ಕರ್ನಾಟಕ’ ದ ಮಾಜಿ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇಲ್ಲಿ ತನಕ ಬರೆದಿದ್ದು 65 ಪುಸ್ತಕಗಳು. ವಿಜಯ ಕರ್ನಾಟಕದಲ್ಲಿದ್ದಾಗ ಬರೆದಿದ್ದು ‘ನೂರೆಂಟು ಮಾತು, ಜನಗಳ ಮನ ಹಾಗೂ ಸುದ್ದಿಮನೆ ಕತೆ’ ಜನಪ್ರಿಯ ಅಂಕಣಗಳು. ಐವತ್ತಕ್ಕೂ ಹೆಚ್ಚು ದೇಶ ಸುತ್ತಿದ ಅನುಭವ. 2005 ಸುವರ್ಣ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳಿಗೆ ಪಾತ್ರ. ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಜತೆ ಹದಿನೈದು ದಿನ ನಾಲ್ಕು ದೇಶಗಳಲ್ಲಿ ಪಯಣ. ಪ್ರಸ್ತುತ ವಿಶ್ವವಾಣಿಯ ಪ್ರಧಾನ ಸಂಪಾದಕ. ಇವರ ಅಂಕಣಗಳು ‘ನೂರೆಂಟು ವಿಶ್ವ’ ಮತ್ತು ’ಇದೇ ಅಂತರಂಗ ಸುದ್ದಿ’ ಗುರುವಾರ ಮತ್ತು ಭಾನುವಾರ ಓದಬಹುದು.

Related Articles

Leave a Reply

Your email address will not be published. Required fields are marked *

Language
Close