About Us Advertise with us Be a Reporter E-Paper

ಅಂಕಣಗಳು

ಫ್ಲೆಕ್ಸ್ ನಿಷೇಧ ಕಟ್ಟುನಿಟ್ಟಾಗಿರಲಿ

ನಮ್ಮ ನಾಡಿನ ಮಾನವ ನಿರ್ಮಿತ ಕುರೂಪಗಳಲ್ಲಿ ಫ್ಲೆಕ್ಸ್ ಹಾವಳಿಯೂ ಒಂದು. ಪ್ರಮುಖ ವೃತ್ತಗಳಲ್ಲಿ, ಶಾಲಾ ಸರಹದ್ದಿನಲ್ಲಿ, ಬಸ್ ನಿಲ್ದಾಣಗಳಲ್ಲಿ, ಪೂಜಾ ಸ್ಥಳಗಳಲ್ಲಿ – ಹೀಗೆ ಎಲ್ಲೆಂದರಲ್ಲಿ ಫ್ಲೆಕ್‌ಸ್ಗಳು ತಲೆ ಎತ್ತುತ್ತಿರುವ ವಿದ್ಯಮಾನವನ್ನು ಗುರುತಿಸಿ, ಅದರ ವಿರುದ್ಧ ಕಾನೂನನ್ನೇ ರೂಪಿಸಲಾಗಿದೆ. ನಗರ ಮತ್ತು ಪಟ್ಟಣಗಳ ಸೌಂದರ್ಯವನ್ನು ಹಾಳುಗೆಡಹುವ ಮತ್ತು ಪರಿಸರಕ್ಕೆ ಹಾನಿ ತರುವ ಕೃತಕ ರಾಸಾಯನಿಕಗಳನ್ನು ಬಳಸಿ ರಚಿಸುವ ಫ್ಲೆಕ್‌ಸ್ಗಳ ಪ್ರದರ್ಶನವನ್ನು ನಿಷೇಧಿಸುವ ನಿಯಮಾವಳಿಗಳು ಇವೆ.

ಆದರೂ, ಅನಧಿಕೃತವಾಗಿ ಮತ್ತು ಕಾನೂನುಬಾಹಿರವಾಗಿ, ಈಗಲೂ ಅಲ್ಲಲ್ಲಿ ಫ್ಲೆಕ್‌ಸ್ಗಳು ಪ್ರತ್ಯಕ್ಷವಾಗುತ್ತಿರುವುದನ್ನು ಕಂಡರೆ, ನಮ್ಮ ನಾಗರಿಕತೆ ಸರಿದಾರಿಯಲ್ಲಿ ಸಾಗುತ್ತಿಲ್ಲವೇ ಎಂಬ ಮೂಡದೇ ಇರದು. ನ್ಯಾಯಾಲಯಗಳೇ ಕಟ್ಟುನಿಟ್ಟಿನ ಆದೇಶ ನೀಡಿ, ಅಧಿಕಾರಶಾಹಿಗೆ ಚಾಟಿ ಬೀಸಿ, ನಗರದಲ್ಲಿನ ಎಲ್ಲಾ ಫ್ಲೆಕ್‌ಸ್ಗಳನ್ನು ತೆಗೆಸಿಹಾಕಿಸಿದಂತಹ ಉತ್ತಮ ಕೆಲಸದ ನೆನಪು ಮಾಸುವ ಮುನ್ನವೇ, ಪ್ರಚಾರದ ಗೀಳು ಅಂಟಿಸಿಕೊಂಡವರು ಫ್ಲೆಕ್ಸ್ ಪ್ರದರ್ಶವನ್ನು ಅಲ್ಲಲ್ಲಿ ಮುಂದುವರಿಸಿದ್ದಾರೆ, ಕಾನೂನು ವಿಧಿಸಿದ ನಿಯಮಗಳನ್ನು ಮೀರುವ ಧಾರ್ಷ್ಟ್ಯ ತೋರುತ್ತಿದ್ದಾರೆ.

‘ಫ್ಲೆಕ್ಸ್ ಸಂಸ್ಕೃತಿ’ಯೇ ವಿಕೃತ. ಅದ್ಯಾವುದೋ ಜಯಂತಿಯ ನೆಪದಲ್ಲಿ, ಜನ್ಮದಿನಾಚರಣೆಯ ನೆಪದಲ್ಲಿ, ಉದ್ಘಾಟನೆಯ ನೆಪದಲ್ಲಿ, ಶಂಕು ಸ್ಥಾಪನೆಯ ನೆಪದಲ್ಲಿ, ಪ್ರಮುಖ ನಾಯಕರ ಚಿತ್ರಗಳ ಸುತ್ತಲೂ ಹತ್ತಾರು ಪುಡಾರಿಗಳ ಮತ್ತು ಕಾರ್ಯಕರ್ತರ ಬಿಂಬಗಳನ್ನು ಮುದ್ರಿಸುವ ಪರಿಪಾಠವೇ ಅಸಮಂಜಸ. ರಾಷ್ಟ್ರ ಮತ್ತು ರಾಜ್ಯಮಟ್ಟದ ಗಣ್ಯರ ಚಿತ್ರಗಳನ್ನು ಮೊದಲ ಸಾಲಿನಲ್ಲಿ ಮುದ್ರಿಸಿ, ಉಳಿದ ಜಾಗದಲ್ಲಿ ಹತ್ತೈವತ್ತು ಜನರ ಚಿತ್ರಗಳನ್ನು ಮೂಡಿಸಿ, ಅದನ್ನು ಎಲ್ಲರೂ ನೋಡುವಂತೆ ಪ್ರದರ್ಶಿಸುವ ಸಂಸ್ಕೃತಿಯೇ ಅಸಹ್ಯ ಹುಟ್ಟಿಸುವಂತಹದ್ದು. ಬಡಾವಣೆಗಳ ಮತ್ತು ಗಲ್ಲಿಗಳ ಮರಿ ಪುಢಾರಿಗಳ ಚಿತ್ರಗಳನ್ನು ಸಾರ್ವಜನಿಕರು ನೋಡಬೇಕೆಂದು ಬಯಸುವ ಮನಸ್ಥಿತಿಯೇ ಅಗ್ಗದ ಅಭಿರುಚಿಯದ್ದು. ಜತೆಗೆ, ಫ್ಲೆಕ್‌ಸ್ಗಳ ಪ್ರದರ್ಶನಕ್ಕೆ ಕಾನೂನಿನ ತಡೆ ಇದ್ದರೂ, ಅವುಗಳನ್ನು ಪ್ರದರ್ಶಿಸುವ ಪರಿ ಕೀಳು ಎನಿಸುತ್ತದೆ.

ಫ್ಲೆಕ್ಸ್ ತಯಾರಿಸುವಾಗ ಉಪಯೋಗಿಸುವ ರಾಸಾಯನಿಕ ಮತ್ತು ಬಣ್ಣಗಳಿಂದ ಸಂಭವಿಸುವ ಪರಿಸರ ಹಾನಿಯ ವಿಚಾರವು ಇನ್ನಷ್ಟು ಕಳವಳವನ್ನು ಹುಟ್ಟಿಸುತ್ತದೆ. ಉತ್ತಮ ಗುಣಮಟ್ಟದ ಫಲಕಗಳನ್ನು ತಯಾರಿಸಲು ತಗಲುವ ವೆಚ್ಚ ಉಳಿತಾಯ ಮಾಡಲು ಬಳಕೆಗೆ ಬಂದ ಅಗ್ಗದವು ನಗರ ಮತ್ತು ಪಟ್ಟಣಗಳ ಸೌಂದರ್ಯಕ್ಕೆ ಕುತ್ತು ತರುತ್ತಿರುವುದರ ಜತೆಯಲ್ಲೇ, ಪರಿಸರಕ್ಕೆ ಹಾನಿ ಮಾಡುತ್ತಿರುವುದು ಒಂದು ದುರಂತ. ನಗರ ಸಂಸ್ಕೃತಿಯ ಕಪ್ಪುಚುಕ್ಕೆ ಎನಿಸಿರುವ ಫ್ಲೆಕ್‌ಸ್ಗಳ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಲು ಇನ್ನಾದರೂ ಸರಕಾರ ಈಗ ಇರುವ ಫ್ಲೆಕ್‌ಸ್ ನಿಯಂತ್ರಣ ಕಾನೂನನ್ನು ಉಲ್ಲಂಘಿಸುವವರನ್ನು ತಕ್ಷಣ ಪತ್ತೆ ಹಚ್ಚಿ, ತೀವ್ರ ಶಿಕ್ಷೆ ನೀಡಬೇಕು. ಆ ಮೂಲಕವಷ್ಟೇ ನಗರ ಸೌಂದರ್ಯ ರಕ್ಷಿಸಲು ಮತ್ತು ಪರಿಸರ ಹಾನಿಯನ್ನು ತಡೆಯಲು ಸಾಧ್ಯ.

Tags

Related Articles

Leave a Reply

Your email address will not be published. Required fields are marked *

Language
Close