About Us Advertise with us Be a Reporter E-Paper

ಅಂಕಣಗಳು

ಹುಟ್ಟು ಸಾವಿನ ನಡುವೆ ಬಂದು ಹೋಗುವ ಫ್ಲೆಕ್ಸು , ಬ್ಯಾನರ್ರು!

ವಿಮರ್ಶೆ: ದೇ.ವಿ. ಮಹೇಶ್ವರ ಹಂಪಿನಾಯ್ಡು

ಳೆದ ತಿಂಗಳು ವಿಶ್ವವಾಣಿಯಲ್ಲಿ ಒಂದು ವಕ್ರತುಂಡೋಕ್ತಿ ಪ್ರಕಟಗೊಂಡಿತ್ತು. ಯಾವುದೇ ಸಾಧನೆ ಮಾಡದಿದ್ದರೂ ಸಂಭ್ರಮ ಆಚರಣೆ ಮಾಡಬೇಕೆಂದರೆ ಜನ್ಮದಿನ ಮತ್ತು ವಿವಾಹ ವಾರ್ಷಿಕೋತ್ಸವ ಆಚರಿಸಬಹುದು. ಇಂತಹ ಸಂಭ್ರಮಾಚರಣೆಯ ಪರಮಾವಧಿಯೇ ಇಂದು ಬೆಂಗಳೂರು ನಗರದಲ್ಲಿ ಫ್ಲೆಕ್‌ಸ್ ಬ್ಯಾನರ್‌ಗೆ ಕೇಡುಗಾಲ ತಂದಿದೆ. ಅತಿಯಾದರೆ ಯಾವುದೇ ಆಗಲಿ ವಿಷವಾಗುತ್ತದೆ. ಹಾಗೆಯೇ ಯಾವುದನ್ನು ಅಗತ್ಯಕ್ಕಿಂತ ಅತಿಯಾಗಿ ಬಳಸಲಾಗುತ್ತದೆಯೇ ಅದು ಬಹುಬೇಗ ನಾಶವಾಗುತ್ತದೆ. ಇದಕ್ಕೆ ತಾಜಾ ಉದಾಹರಣೆಯಾಗಿ ಇಂದು ನಿಷೇಧಕ್ಕೊಳಗಾಗಿರುವ ಫ್ಲೆಕ್‌ಸ್ ಬ್ಯಾನರ್. ಇದು ಕಾಲಿಡುವ ಮುನ್ನ ಅಂದರೆ ಇಪ್ಪತ್ತೈದು ಮೂವತ್ತು ವರ್ಷಗಳ ಹಿಂದೆ ಪೈಂಟಿಂಗ್ ಕಲಾವಿದರಿಗೆ ಬಹು ಬೇಡಿಕೆ ಇತ್ತು. ಕೈನಲ್ಲೇ ಚಿತ್ರಕಲೆಗಳನ್ನು ಅಕ್ಷರಗಳ ಸಾಲನ್ನು ಬರೆಯುವ ಕಲಾವಿದರು ತಮ್ಮ ವೃತ್ತಿಕಲೆಯಿಂದಲೇ ಮಾಡಿ ಸಂಸಾರವನ್ನು ನಡೆಸುತ್ತಿದ್ದರು. ಪ್ರಮುಖವಾಗಿ ಹಳ್ಳಿಗಳಾಗಲಿ ನಗರವಾಗಲಿ ಅಂಗಡಿ ಮಳಿಗೆ ಗುಡಿ ಕಛೇರಿಗಳಾಗಲಿ ಇನ್ನಿತರ ಎಲ್ಲಾ ಸಾರ್ವಜನಿಕ ಸಂಪರ್ಕದ ನಾಮಫಲಕಗಳನ್ನು ಈ ಕಲಾವಿದರಿಂದಲೇ ಬರೆಸಲಾಗುತ್ತಿತ್ತು. ಹೀಗಿರುವಾಗ ಒಂದು ಆಧುನಿಕ ತಂತ್ರಜ್ಞಾನವೊಂದು ಹಳೆಯ ತಂತ್ರಜ್ಞಾನವನ್ನು ನುಂಗಿ ಹಾಕುವಂತೆ, 1998ರ ಆಸುಪಾಸು ಪ್ಲಾಸ್ಟಿಕ್ ಮಿಶ್ರಿತ ಬಟ್ಟೆಯ ಮೇಲೆ ಇಂಕ್‌ಜೆಟ್ (ಸಿ.ಎಂ.ವೈ.ಕೆ) ತಂತ್ರಜ್ಞಾನದ ತಿಳಿನೀಲಿ, ಕಡುನೇರಳೆ, ಹಳದಿ ಮತ್ತು ಕಪ್ಪು ಈ ನಾಲ್ಕು ಶಾಯಿಗಳ ಮಿಶ್ರಣದ ಮೂಲಕ ಮುದ್ರಿತವಾಗುವ ಪ್ಲೆಕ್‌ಸ್ ಬ್ಯಾನರ್ ತಂತ್ರಜ್ಞಾನವು ಕಲಾವಿದರ ಬದುಕನ್ನೇ ನುಂಗಿಹಾಕಿತು. ಮೊದಲಿಗೆ ಈ ಫ್ಲೆಕ್‌ಸ್ನ್ನು ನಾಮಫಲಕ ಹಾಕುವುದಕ್ಕೆ ಮಾತ್ರ ಉಪಯೋಗಿಸಲಾಗುತ್ತಿತ್ತು. ಕಾಲಕ್ರಮೇಣ ಅದು ಆಸ್ಪತ್ತ್ರೆಯಿಂದ ಸ್ಮಶಾಣದವರೆಗೂ, ಶಾಲೆಯಿಂದ ಗುಡಿಯವರೆಗೂ ಬಳಸುವಷ್ಟು ಅನಿವಾರ್ಯವಾಗಿ ದೈತ್ಯರೂಪ ಪಡೆದುಕೊಂಡಿತು.

ಇದರ ದುರುಪಯೋಗ ಯಾವ ಮಟ್ಟಕ್ಕೆ ತಲುಪಿದೆ ಎಂದರೆ ಪುಡಿ ರಾಜಕಾರಣಿ ಪುಡಿ ಪುಡಾರಿಗಳ ಜನ್ಮದಿನಾಚರಣೆಗಳಿಗೆಲ್ಲಾ ಈ ಫ್ಲೆಕ್‌ಸ್ ಫಿಕ್‌ಸ್ ಆಗಿಬಿಡುತ್ತಿದೆ. ಯಾವನಾದರು ಕುಡಿದೋ ಅಥವಾ ಅತಿವೇಗದಲ್ಲಿ ಅಪಘಾತವಾಗಿ, ಆತ್ಮಹತ್ಯೆ ಕೊಲೆಯಾದರೂ ಆತನ ಹೆಣ ನೋಡುವುದಕ್ಕೆ ಮೊದಲು ಆತನ ಫೋಟೋ ಹಿಡಿದುಕೊಂಡು ಪ್ರಿಂಟಿಂಗ್ ಅಂಗಡಿಗೆ ಹೋಗಿರುತ್ತಾರೆ. ಸತ್ತು ಅರ್ಧಗಂಟೆಯಲ್ಲೇ ಸತ್ತವನ ಬೃಹತ್ ಫೋಟೋ ನೇತುಹಾಕಿ ತಮ್ಮ ಭಾವಪೂರ್ವ ಶ್ರದ್ಧಾಂಜಲಿ ಸಲ್ಲಿಸಿಬಿಡುತ್ತಾರೆ. ಅಗತ್ಯಕ್ಕಿಂತ ಹೆಚ್ಚು ಹಣಗಳಿಸಿದವನೊಬ್ಬ ಬಿಳಿಬಣ್ಣದ ವಸ್ತ್ರಧರಿಸಿ ಓಡಾಡಿಬಿಟ್ಟರೆ ಸಾಕು ಆತನ ಹುಟ್ಟಿದ ಹಬ್ಬ, ಮದುವೆ, ಪ್ರಸ್ತ, ಬೀಗರ ಊಟ, ನಾಮಕರಣ, ಸಾವು, ತಿಥಿ ಎಲ್ಲದಕ್ಕೂ ಆತನ ಮುಖವನ್ನು ಹಾಕಿ ದಿಢೀರ್ ಸಂಭ್ರಮಾಚರಣೆ ಶೋಕಾಚರಣೆ ಮಾಡಿಬಿಡುತ್ತಾರೆ. ಇಂತಹ ಮುಖಗಳನ್ನು ದಾರಿಯಲ್ಲಿ ನೋಡುವ ಆತನ ಯೋಗ್ಯತೆ ತಿಳಿದ ಸಭ್ಯರು ಬೆಳಗೆದ್ದು ಎಂತಹ ಮುಖಗಳನ್ನು ಅನಿಷ್ಠ ಎಂದು ಶಪಿಸಿಕೊಂಡು ಹೋಗುತ್ತಾರೆ. ಚುನಾವಣೆ ದಿನಗಳಲ್ಲಂತೂ ಇಡೀ ನಗರ ಪ್ಲೆಕ್‌ಸ್ ಶಾಪಗ್ರಸ್ತವಾಗಿರುತ್ತದೆ. ಇನ್ನು ಬಿಬಿಎಂಪಿ ಅಧಿಕೃತವಾಗಿ ನೋಂದಾಯಿತ ಜಾಹಿರಾತು ಫಲಕಗಳನ್ನು ಬಾಡಿಗೆಗೆ ನೀಡುತ್ತದೆ. ಇವುಗಳನ್ನು ತಮ್ಮ ಹೊಟ್ಟೆಪಾಡಿಗೆ ಉಪಯೋಗಿಸಿಕೊಳ್ಳುವ ಕೆಲ ಓರಾಟಗಾರ ಸಂಘಟನೆಗಳು ಯಾರ ಮುಲಾಜು ಇಲ್ಲದೆ ತಮ್ಮ ಆಧುನಿಕ ಅಣ್ಣಾವ್ರು (?!) ಜನ್ಮದಿನ, ಮಹಾಸಾಧನೆಗಳಿಗೆ ಶುಭಾಶಯ ಕೋರುವ ಫ್ಲೆಕ್‌ಸ್ನ್ನು ನೇತು ಹಾಕಿಬಿಡುತ್ತಾರೆ. ಇದನ್ನು ಪ್ರಶ್ನಿಸಲು ಹೋಗುವ ಸಿಬ್ಬಂದಿ, ಅಧಿಕಾರಿಗಳಿಗೇ ಧಮಕಿ ಹಾಕಿ ಏಯ್ ಇದು ಅಣ್ಣಂದು ಕಳಿಸುತ್ತಾರೆ. ಇಂತವರಿಂದ ಈಗ ಬೀದಿಬೀದಿಯಲ್ಲೆಲ್ಲಾ ಫ್ಲೆಕ್‌ಸ್ ಅಣ್ಣಂದಿರು, ಫ್ಲೆಕ್‌ಸ್ ನಾಯಕರು, ಫ್ಲೆಕ್‌ಸ್ ಹೋರಾಟಗಾರರು, ಫ್ಲೆಕ್‌ಸ್ ಪುಡಾರಿಗಳು ಫ್ಲೆಕ್‌ಸ್ನಷ್ಟೇ ಅಸಹ್ಯಕರವಾಗಿ ಸೃಷ್ಠಿಯಾಗಿಹೋಗಿದ್ದಾರೆ. ಈಗ ನೋಡಿ ಗಣೇಶಹಬ್ಬ, ಕರ್ನಾಟಕ ರಾಜ್ಯೋತ್ಸವ ಬರಲಿದೆ. ಎರಡನ್ನೂ ಎರಡೆರಡು ತಿಂಗಳುಗಳ ಕಾಲ ಆಚರಿಸಲಾಗುತ್ತದೆ. ಗಲ್ಲಿ ರಸ್ತೆಗಳಲ್ಲಿ, ಹಾದಿಬೀದಿಗಳಲ್ಲಿ ಅಗತ್ಯಕ್ಕಿಂತ ಅಧಿಕವಾಗಿ ಇದರ ಬಳಕೆಯಾಗುತ್ತದೆ. ಇದರ ಮಾನದಂಡವೆಂಬುದು ದೇಣಿಗೆ ನೀಡುವ ಪ್ರಮಾಣದ ಮೇಲೆ ಆ ಪುಡಾರಿಯ ಮುಖದ ಗಾತ್ರ ನಿರ್ಧಾರವಾಗುತ್ತದೆ. ದೇಣಿಗೆ ಕಮ್ಮಿ ಕೊಟ್ಟವನ ಮುಖ ಚಿಕ್ಕದಾಗಿರುತ್ತದೆ. ಮಿಂಚಿಸುತ್ತಾರೆ ಎಂಬ ನಂಬಿಕೆಯಿಂದ ದೇಣಿಗೆಯೂ ಹೆಚ್ಚುತ್ತದೆ. ಇನ್ನು ಕೆಲ ವ್ಯಕ್ತಿಗಳು, ಕಂನಿಗಳು ತಮ್ಮ ಜಾಹಿರಾತನ್ನು ದಿನಪತ್ರಿಕೆಗಳಲ್ಲಿ ಹಾಕಿದರೆ ಅದು ಸಂಜೆ ರದ್ದಿಯಾಗುತ್ತದೆ. ಟಿವಿ ಮಾದ್ಯಮಗಳಿಗೆ ನೀಡಿದರೆ ಜನ ನೋಡುವುದಿಲ್ಲವೆಂದು ಯೋಚಿಸಿ ಬ್ಯಾನರ್ ಪೋಸ್ಟರ್‌ಗಳನ್ನು ಹಾಕಿದರೆ ಅದು ತಿಂಗಳುಗಳ ಕಾಲ ಹಾಗೇ ಕಾಣುತ್ತಿರುತ್ತದೆ ಎಂದು ನಿರ್ಧರಿಸಿ ಸಿಕ್ಕಸಿಕ್ಕಲ್ಲಿ ಬ್ಯಾನರ್‌ಗಳನ್ನು ಅಂಟಿಸಿ ಪುಕ್ಕಟ್ಟೆ ಪ್ರಚಾವನ್ನು ಈ ಫ್ಲೆಕ್‌ಸ್ಗಳ ಮೂಲಕ ಗಳಿಸಿಕೊಳ್ಳುತ್ತಾರೆ. ಹೀಗೆ ಫ್ಲೆಕ್‌ಸ್ನ ಅತಿಯಾದ ದುರುಪಯೋಗವಾಗಿದ್ದು ಇಂತವರಿಂದಲೇ. ಇಂತಹ ಹುಚ್ಚಾಟಗಳನ್ನು ಗಮನಿಸಿಯೇ ಬಿಬಿಎಂಪಿ ಅಧಿಕಾರಿಗಳು, ನ್ಯಾಯಾಧೀಶರು ಇಂತಹ ಮೀತಿಮೀರಿದ ವರ್ತನೆಗಳಿಗೆ ಕಡಿವಾಣ ಹಾಕಿ ನಿಯಂತ್ರಿಸುವ ನಿರ್ಧಾರಕ್ಕೆ ಬಂದಿರಬಹುದು.

ಇಂದು ವಾಣಿಜ್ಯೋದ್ಯಮವು ಈ ಫ್ಲೆಕ್‌ಸ್ನ್ನು ಮಿತಿಮೀರಿ ಅವಲಂಭಿಸಿದೆ. ತಾವುಗಳು ತಯಾರಿಸುವ ವಸ್ತುಗಳ ಗುಣಮಟ್ಟಕ್ಕೆ ತಗಲುವ ವೆಚ್ಚಗಳಿಗಿಂತ ಅಧಿಕವಾಗಿ ಇಂತಹ ಜಾಹಿರಾತುಗಳಿಗೆ ವ್ಯಯಿಸಲಾಗುತ್ತಿದೆ. ಇನ್ನು ಚಿತ್ರರಂಗ ಸಹ ಈ ಮುದ್ರಣ ಮಾದ್ಯಮವನ್ನು ಹೆಚ್ಚಾಗಿ ನೆಚ್ಚಿಕೊಂಡಿದೆ. ಇದರಿಂದ ನೈಜ ಚಿತ್ರಕಲಾವಿದರು ನೆಲೆ ಕಳೆದುಕೊಂಡಿದ್ದಾರೆ. ಅಂದು ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಚಿತ್ರ ತೆರೆಕಂಡರೆ ರದ್ದಿ ಕಾಗದಗಳ ಬೃಹದಾಕಾರದ ನಕ್ಷತ್ರಗಳನ್ನು ರಚಿಸಿ ಚಿತ್ರಮಂದಿರಕ್ಕೆ ಕಟ್ಟುತ್ತಿದ್ದರು. ಆದರೆ ಇಂದು ಕಟೌಟೂ ಸೇರಿ ಎಲ್ಲವೂ ಫ್ಲೆಕ್‌ಸ್ಮಯವಾಗಿಹೋಗಿದೆ. ಈ ಮುದ್ರಣ ಮಾಧ್ಯಮದಲ್ಲಿ ಲಕ್ಷಾಂತರ ಮಂದಿ ಉದ್ಯೋಗವನ್ನು ಕಂಡುಕೊಂಡಿದ್ದಾರೆ. ಬ್ಯಾಂಕ್ ಸಾಲಗಳನ್ನು ಮಾಡಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ಯಂತ್ರಗಳನ್ನು ಖರೀದಿಸಿ ಉದ್ಯಮ ನಡೆಸುತ್ತಿದ್ದಾರೆ. ಈ ಯಂತ್ರಗಳಲ್ಲಿ ಇಂಕ್‌ನ್ನು ಹೊರಚೆಲ್ಲುವ ಮುಖ್ಯ ಸಾಧನ ಹೆಡ್ ನ್ನು ಆಗಾಗ ಸ್ವಚ್ಚಗೊಳಿಸುತ್ತಿರಬೇಕು. ಹೆಚ್ಚು ಹೊತ್ತು ಉಪಯೋಗಿಸದೇ ಬಿಟ್ಟರೆ ಅದು ತಲೆ ಕೆಟ್ಟು ಹೋಗುವುದೇ ಹೆಚ್ಚು. ಹೀಗಾಗಿ ಇದರ ಸದಾ ಚಾಲನೆಯಲ್ಲೇ ಇರಬೇಕಾದ ಅನಿವಾರ್ಯತೆ ಇದೆ. ಆದರೂ ಬಹುತೇಕ ಮುದ್ರಣ ಮಾಧ್ಯಮ ಸಂಘಟಿತರು ನ್ಯಾಯಾಲಯದ ಆದೇಶ ಹಾಗೂ ನಗರದ ಸ್ವಚ್ಛತೆಯನ್ನು ಪರಿಗಣಿಸಿ ಬೇರೊಂದು ಮಾರ್ಗದತ್ತ ಹೆಜ್ಜೆ ಇಟ್ಟಿದ್ದಾರೆ. ಇದರ ಭಾಗವಾಗಿ ಕಚ್ಚಬಟ್ಟೆಯ ಮೇಲೆ ಮುದ್ರಿಸುವ ಹಳೆಯ ತಂತಜ್ಞಾನವನ್ನು ಸುಧಾರಿತವಾಗಿ ಬಳಸುವ ಪ್ರಯತ್ನದಲ್ಲಿದ್ದಾರೆ. ಇದು ಕೊಂಚ ದುಬಾರಿಯಾದರೂ ಪರಿಸರಸ್ನೇಹಿಯಾಗಿರುತ್ತದೆ. ಆದರೆ ಅಲ್ಲಿಯೂ ಹುಟ್ಟು ಸಾವಿನ ಮುಖಗಳನ್ನು ನೋಡುವ ಕರ್ಮ ಕಡಿಮೆಯಾ ಬಹುದೇ ಎಂಬುದು ಅನುಮಾನವೇ ಸರಿ. ಆದ್ದರಿಂದ ಇಂತಹ ವಾಣಿಜ್ಯ ಧಾರ್ಮಿಕ ಸಾಂಸ್ಕೃತಿಕ ಉತ್ಸವಗಳು, ಊರಹಬ್ಬ, ವಾರ್ಷಿಕೋತ್ಸವ, ಜನನ ಮರಣೋತ್ಸವ ಇನ್ನಿತರ ಸಂದರ್ಭಗಳಿಗೆ ಬೇಕಾಗುವ ಮುದ್ರಣಗಳಿಗೆ ಪಾಲಿಕೆಯಿಂದ ಇಂತಿಷ್ಟು ಪ್ರಮಾಣದ ಗಾತ್ರದ ಫಲಕಗಳಿಗೆ ಷರತ್ತಿನ ಅನುಮತಿ ಹಾಗೂ ಜನ್ಮದಿನಕ್ಕಾಗಿ ಹಾಕುವ ಶುಭಾಶಯ ಫಲಕಗಳಿಗೆ ಜನ್ಮದಿನ ಆಚರಿಸಿಕೊಳ್ಳುವ ಅಣ್ಣ ನಿಂದ ಅಥವಾ ವ್ಯಕ್ತಿಯಿಂದ ನಿರಕ್ಷೇಪಣಾ ಪತ್ರ, ಕನಿಷ್ಠ ಶುಲ್ಕವನ್ನು ಪಾವತಿಸಿ ಅಲ್ಲಿ ಮುದ್ರಣಕ್ಕೆ ಅನುಮತಿ ಪತ್ರವನ್ನು ಪಡೆದುಕೊಳ್ಳುವ ಶಿಸ್ತುಬದ್ಧ ನಿಯಮವನ್ನು ಮಾಡಬೇಕಿದೆ. ಹಾಗೆಯೇ ಇಂತಿಷ್ಟು ಭದ್ರತಾ ಠೇವಣಿಯನ್ನು ಪಾವತಿಸಿಕೊಂಡು ಇಂತಿಷ್ಟು ಬ್ಯಾನರ್‌ಗಳಿಗೆ ದಿನಗಳವರೆಗೆ ಮಾತ್ರ ಎಂಬ ನಿಯಮ ರೂಪಿಸಿ, ನಿಗಧಿತ ಸಮಯದಲ್ಲಿ ತಾವೇ ಅವುಗಳನ್ನು ತೆರವುಗೊಳಿಸಿದರೆ ಮಾತ್ರ ಠೇವಣಿ ಹಣವನ್ನು ಹಿಂದಿರುಗಿಸಲಾಗುವ ನೀತಿಯನ್ನು ಜಾರಿಗೆ ತಂದರೆ ಶೇಖಡ ಎಂಬತ್ತರಷ್ಟು ಪಾಪದ ಫ್ಲೆಕ್‌ಸ್ಗಳು ಕಡಿಮೆಯಾಗುವ ಸಾಧ್ಯತೆ ಇದೆ.

ಇದರ ಜತೆಯಲ್ಲಿ ಸಾಮಾಜಿಕ ಕಾರ್ಯಗಳಾದ ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣೆ, ನೇತ್ರದಾನ ಶಿಬಿರ, ಸ್ವಾತಂತ್ರೊ್ಯೀತ್ಸವ, ಕಾರ್ಗಿಲ್ ವಿಜಯೋತ್ಸವ, ಗಣರಾಜ್ಯೋತ್ಸವ, ಕರ್ನಾಟಕ ರಾಜ್ಯೋತ್ಸವ ಇಂತಹ ವಿಶೇಷವಾದ ದೇಶಾಭಿಮಾನ ಭಾಷಾಭಿಮಾನವನ್ನು ಜಾಗೃತಿಗೊಳಿಸುವ ದಿನಗಳಲ್ಲಿ ಅದರ ಪೂರಕವಾಗಿ ನೀಡಿ ಆ ಮೂಲಕ ಆರೋಗ್ಯಕರ ಸಮಾಜಕ್ಕೆ ಸಹಕಾರಿಯಾಗಿಸಬಹುದು.

Tags

Related Articles

Leave a Reply

Your email address will not be published. Required fields are marked *

Language
Close