About Us Advertise with us Be a Reporter E-Paper

ಅಂಕಣಗಳು

ಜಯಂತಿಯಿಂದ ಬೊಕ್ಕಸಕ್ಕೆ ಶಿಕ್ಷಣದಿಂದ ನಷ್ಟವೇ?!

ದಯಾನಂದ ಲಿಂಗೇಗೌಡ, ರೇಡಿಯಾಲಜಿಸ್ಟ್

ಸಿದ್ದಗಂಗಾ ಶ್ರೀಗಳ ಅರೋಗ್ಯ ವಿಚಾರ ಬಗ್ಗೆ ‘ಮುಸ್ಲಿಂ ಸಂಸ್ಥೆ ಯಲ್ಲಿ ಶ್ರೀಗಳ ಚಿಕಿತ್ಸೆ ನಡೆಯುತ್ತಿದೆ. ಇಂತಹ ಆಸ್ಪತ್ರೆ ಕರ್ನಾಟಕದಲ್ಲಿ ಇಲ್ಲ. ವೈದ್ಯರು ಮುಸ್ಲಿಮರಾದರು. ಒಳ್ಳೆಯ ಚಿಕಿತ್ಸೆ ನೀಡುತ್ತಿದ್ದಾರೆ ’ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಚಿವ ಡಿ ಕೆ ಶಿವಕುಮಾರ್ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಅದು ಸರಕಾರಿ ಮೆಡಿಕಲ್ ಕಾಲೇಜುಗಳ ಶಿಕ್ಷಣ ಶುಲ್ಕವನ್ನು ಹೆಚ್ಚಿಸುವುದರ ಬಗ್ಗೆ.

ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಶುಲ್ಕ 16,700 ರು. ಇದೆ. ಇದನ್ನು 50,000 ರು. ಗೆ ಏರಿಸುವುದಕ್ಕೆ ತೀರ್ಮಾನಕ್ಕೆ ಬರಲಾಗಿದೆ. ಅಂದರೆ ಶೇಕಡಾ 500 ರಷ್ಟು ಏರಿಕೆ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದವರಿಗೆ ಸಚಿವರು ತಮ್ಮ ಎಂದಿನ ಶೈಲಿಯಲ್ಲೇ ಉತ್ತರವನ್ನು ಕೊಟ್ಟಿದ್ದಾರೆ . ‘ಕಿಂಡರ್ ಗಾರ್ಟನ್ ಸೇರಿಸುವುದಕ್ಕೆ 50 ಸಾವಿರ ಕೊಡುವುದಕ್ಕೆ ತಯಾರಿ ಇರುವ ನೀವು, ಎಂ ಬಿ ಬಿ ಎಸ್ ಓದುವುದಕ್ಕೆ 50 ಸಾವಿರ ಕೊಡುವುದಕ್ಕೆ ಏನು ತೊಂದರೆ? ಪ್ರತಿಯೊಬ್ಬ ವಿದ್ಯಾರ್ಥಿಯನ್ನು ತಯಾರು ಮಾಡಲು ಸರಕಾರಕ್ಕೆ 10 ಲಕ್ಷ ಖರ್ಚು ಬರುತ್ತದೆ. ಸರಕಾರಿ ವೈದ್ಯಕೀಯ ಕಾಲೇಜುಗಳ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಎನ್‌ಆರ್‌ಐ ವಿದ್ಯಾರ್ಥಿಗಳಿಗೂ ಸರಕಾರಿ ಕಾಲೇಜುಗಳಲ್ಲಿ ಅವಕಾಶ ನೀಡುವ ಚಿಂತನೆ ಇದೆ. ಇವೆಲ್ಲ ಅತ್ಯವಶ್ಯಕ ’ ಎಂದು ಸಮಜಾಯಿಷಿ ನೀಡಿದ್ದಾರೆ.

ಮೇಲ್ನೋಟಕ್ಕೆ ಸಚಿವರ ಮಾತು ಸರಿ ಎನಿಸುತ್ತದೆ. ಆದರೆ ಆಳಕ್ಕೆ ಇಳಿದು, ಸಚಿವರ ಪ್ರತಿ ಮಾತನ್ನು ಒರೆಗೆ ಹಚ್ಚಿ ಪರಿಶೀಲಿಸಿದರೆ ಬೇರೆಯದೇ ಸತ್ಯ ಹೊರಬರುತ್ತದೆ. ಮೊದಲನೆಯದಾಗಿ ಶೇಕಡಾ 500 ಶುಲ್ಕ ಇಷ್ಟು ಏರುಮುಖದ ಬದಲಾವಣೆಗೆ ಸಚಿವರು ಕೊಡುವ ಕಾರಣ, ಕಳೆದ ಹದಿನೈದು ವರುಷದಿಂದ ಶುಲ್ಕದಲ್ಲಿ ಯಾವುದೇ ಬದಲಾವಣೆ ಇಲ್ಲದಿರುವುದು. ಮೇಲ್ನೋಟಕ್ಕೆ ಕಾರಣ ಸಮಂಜಸ ಎನಿಸಿದರೂ ಶೇಕಡಾ 500ರಷ್ಟು ಶುಲ್ಕ ಏರಿಕೆ ಸಮರ್ಥನೀಯವಲ್ಲ. ಕಳೆದ ಹದಿನೈದು ವರುಷದಲ್ಲಿ ನಮ್ಮ ದೇಶದಲ್ಲಿ ಹಣದುಬ್ಬರ ಇಷ್ಟು ಹೆಚ್ಚಾಗಿಲ್ಲ ಮತ್ತು ಜನರ ಸಂಬಳ ಶೇಕಡಾ 500 ರಷ್ಟು ಹೆಚ್ಚಾಗಿಲ್ಲ. ಈ ಮಾತಿಗೆ ರಾಜಕಾರಣಿಗಳ ಆದಾಯ ಹೊರತು ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ.

ರಾಜಕಾರಣಿಗಳ ವೈಯಕ್ತಿಕ ಆದಾಯ ಗಳಿಕೆ ಸರಕಾರಿ ಶಿಕ್ಷಣ ಶುಲ್ಕವನ್ನು ಏರಿಸ ಹೊರಟಿರುವುದು ಸಾಧುವಲ್ಲ.
ಎರಡನೆಯದಾಗಿ ಒಬ್ಬ ವೈದ್ಯಕೀಯ ವಿದ್ಯಾರ್ಥಿಯನ್ನು ತಯಾರು ಮಾಡಲು ಸರಕಾರಕ್ಕೆ ಹತ್ತು ಲಕ್ಷ ಖರ್ಚು ಬರುತ್ತದೆ ಎಂಬ ಮಾತನ್ನು ಪರಿಶೀಲಿಸೋಣ. ಈ ಮಾತಿನ ಅರ್ಥ, ಸರಕಾರ ಪ್ರತಿ ವಿದ್ಯಾರ್ಥಿಗೂ 9 ಲಕ್ಷಕ್ಕಿಂತಲೂ ಹೆಚ್ಚು ಸಬ್ಸಿಡಿ ಕೊಡುತ್ತಿದೆ ಎಂದು. ಸರಕಾರಿ ವೈದ್ಯಕೀಯ ಕಾಲೇಜುಗಳು ಇರುವುದು ವೈದ್ಯಕೀಯ ವಿದ್ಯಾರ್ಥಿಗಳನ್ನು ತಯಾರುಮಾಡಲು ಮಾತ್ರ ಎಂದುಕೊಂಡರೆ, ಈ ಮಾತು ಸತ್ಯ. ಪ್ರತಿಯಾಗಿ, ವೈದ್ಯಕೀಯ ಕಾಲೇಜುಗಳ ಮೂಲ ಉದ್ದೇಶ ಚಿಕಿತ್ಸೆಗಾಗಿ. ಅದರ ಜೊತೆ ವೈದ್ಯಕೀಯ ಶಿಕ್ಷಣ ಉಪ ಉತ್ಪನ್ನ ಎಂದುಕೊಂಡರೆ, ಈ ಮಾತು ಕಲ್ಪಿತ ಕತೆ ಎನ್ನಿಸದೆ ಇರದು! ಸ್ವಲ್ಪ ಬಿಡಿಸಿ ಹೇಳಿದರೆ ವಿಷಯ ಸ್ಪಷ್ಟವಾಗುತ್ತದೆ. ಜನರ ಅರೋಗ್ಯ ಸರಕಾರದ ಮೂಲಭೂತ ಕರ್ತವ್ಯಗಳಲ್ಲಿ ಒಂದು. ಸಣ್ಣ ಊರುಗಳಲ್ಲಿ ಪ್ರಾಥಮಿಕ ಅರೋಗ್ಯ ಕೇಂದ್ರವಿರುವಂತೆ, ಜಿಲ್ಲಾ ಮಟ್ಟದಲ್ಲಿ ಕ್ಲಿಷ್ಠ ಕೇಸುಗಳನ್ನು ನಿಭಾಯಿಸಲು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಅವಶ್ಯಕತೆ ಇದೆ. ಇಂತಹ ಆಸ್ಪತ್ರೆಗಳ ಮತ್ತೊಂದು ರೂಪವೇ ಮೆಡಿಕಲ್ ಕಾಲೇಜುಗಳು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಎಷ್ಟು ಕಷ್ಟದ ಕೆಲಸವೋ, ಅದಕ್ಕಿಂತ ಅದನ್ನು ನಡೆಸಿಕೊಂಡು ಹೋಗುವುದು ಇನ್ನೂ ಕಷ್ಟದ ಕೆಲಸ. ಯಾವುದೇ ಆಸ್ಪತ್ರೆಗಳನ್ನು ನಡೆಸಿಕೊಂಡು ಹೋಗುವುದಕ್ಕೆ, ಒಂದು ಪ್ರಮುಖವಾದ ಖರ್ಚು ಬರುವುದು ಸಿಬ್ಬಂದಿಯ ಸಂಬಳದಲ್ಲಿ. ಇದರಲ್ಲಿ ವೈದ್ಯರ, ದಾದಿಯರ, ತಾಂತ್ರಿಕ ವರ್ಗದವರ, ಮತ್ತು ಇತರೆ ನೌಕರರ ಸಂಬಳವು ಸೇರಿದೆ.

ದೊಡ್ಡ ದೊಡ್ಡ ಆಸ್ಪತ್ರೆಗಳು ಈ ಖರ್ಚು ತಗ್ಗಿಸಲು ತಂತ್ರಜ್ಞರ, ದಾದಿಯರ ಮತ್ತು ವೈದ್ಯರ ತರಬೇತಿ ಕೋರ್ಸುಗಳನ್ನು ನಡೆಸುತ್ತವೆ. ವೈದ್ಯರ ತರಬೇತಿ ಕೋರ್ಸುಗಳಲ್ಲಿ ಡಿಎಂಬಿ (ಎಂ ಡಿ, ಎಸ್‌ಗೆ ಸಮಾನ) ಎಂಬ ಪೂರ್ಣ ಪ್ರಮಾಣದ ಮೂರು ವರ್ಷದ ಸ್ನಾತಕೋತ್ತರ ಪದವಿಗಳಿವೆ. ಒಂದೆರಡು ವರ್ಷದ ಫೆಲೋಶಿಪ್ ಕೋರ್ಸುಗಳು ಇವೆ. ಇದರಿಂದ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಸಿಕ್ಕರೆ, ಆಸ್ಪತ್ರೆಗಳಿಗೆ ಪುಡಿಗಾಸು ತರಬೇತಿ ಭತ್ಯೆಗೆ ಸಿಬ್ಬಂದಿ ಸಿಗುತ್ತಾರೆ. ಸ್ನಾತಕೋತ್ತರ ಮೆಡಿಕಲ್ ಕಾಲೇಜುಗಳಲ್ಲಿ, ಆಸ್ಪತ್ರೆಯ ಕೆಲಸ ಬಹುತೇಕ ವಿದ್ಯಾರ್ಥಿಗಳೇ ಮಾಡುತ್ತಾರೆ. ಕಾಯಂ ಸಿಬ್ಬಂದಿ ಮೇಲ್ವಿಚಾರಕರಾಗಿ ಮಾತ್ರ ಕೆಲಸ ನಿರ್ವಹಿಸಿದರೆ, ತಳಮಟ್ಟದಲ್ಲಿ ಎಲ್ಲಾ ಕೆಲಸ ನಡೆಯುವುದು ವಿದ್ಯಾರ್ಥಿಗಳಿಂದ. ಸಾಮಾನ್ಯವಾಗಿ ವಿದ್ಯಾರ್ಥಿಗಳು ಆ ಕೆಲಸ ಈ ಎಂದು ಭೇದ ಭಾವ ತೋರುವುದಿಲ್ಲ. ರೋಗಿಗಳ ಸ್ಟ್ರೆಚರ್ ತಳ್ಳುವುದರಿಂದ ಹಿಡಿದು ಆಪರೇಷನ್ ಮಾಡುವುದರ ತನಕ ಎಲ್ಲಾ ಕೆಲಸ ಮಾಡುತ್ತಾರೆ. ಕಾಲಮಿತಿ ಇರುವುದಿಲ್ಲ. ವೈದ್ಯಕೀಯ ಕ್ಷೇತ್ರದಲ್ಲಿ, ವಿದ್ಯಾರ್ಥಿಗಳಿಗೆ ಕಾರ್ಮಿಕರ ಯಾವ ನಿಯಮಗಳೂ ಅನ್ವಯಿಸುವುದಿಲ್ಲ. ಸತತವಾಗಿ 36-48 ಗಂಟೆಗಳ ಕೆಲಸ ಸಾಮಾನ್ಯ. ಅಂದರೆ 8 ಗಂಟೆ ಕಾಲಾವಧಿಯ, 4-6 ಖಾಯಂ ಸಿಬ್ಬಂದಿಯ ಕೆಲಸವನ್ನು, ಒಬ್ಬ ವಿದ್ಯಾರ್ಥಿ ಮಾಡುತ್ತಾನೆ, ಅದೂ ಪುಡಿಗಾಸು ವಿದ್ಯಾರ್ಥಿ ವೇತನಕ್ಕೆ. ಕೆಲವೊಂದು ಕಾಲೇಜುಗಳಲ್ಲಿ ವಿದ್ಯಾರ್ಥಿವೇತನ 3 ಹೊತ್ತು ಊಟಕ್ಕೂ ಇಂತಹ ತರಬೇತಿ ಕೋರ್ಸುಗಳಿಂದ ಆಸ್ಪತ್ರೆಗಳ ಖರ್ಚು ಬಹಳ ಕಡಿಮೆಯಾಗುತ್ತದೆ. ಅದು ಅಲ್ಲದೆ ಶಿಕ್ಷಣ ಶುಲ್ಕದ ನೆಪದಲ್ಲಿ ಲಾಭವೂ ಆಗುತ್ತದೆ.

ಈ ವಾದಕ್ಕೆ ಪುಷ್ಟಿಕೊಡುವಂತೆ ಕೆಲವು ವರ್ಷಗಳ ಹಿಂದೆ, ಚಂಡೀಗಢ ಸ್ನಾತಕೋತ್ತರ ವೈದ್ಯಕೀಯ ಕಾಲೇಜಿನಿಂದ ಸಂಶೋಧನಾ ಲೇಖನ ಪ್ರಕಟವಾಗಿತ್ತು. ಅದರಲ್ಲಿ ವಿದ್ಯಾರ್ಥಿಗಳಿಲ್ಲದೆ ಆಸ್ಪತ್ರೆಯನ್ನು ನಡೆಸಿದರೆ, ಪ್ರತಿ ರೋಗಿಗೂ ಸರಕಾರ ಮಾಡುವ ಚಿಕಿತ್ಸೆಯ ಖರ್ಚು ಸಾವಿರಾರು ರು. ಹೆಚ್ಚಾಗುತ್ತದೆ ಎಂದು ಅಭಿಪ್ರಾಯಕ್ಕೆ ಬರಲಾಗಿತ್ತು. ಅಂದರೆ ಸಬ್ಸಿಡಿ ರೂಪದಲ್ಲಿ ವೈದ್ಯಕೀಯ ಶಿಕ್ಷಣ ನೀಡುವ ಖರ್ಚು ಮಾಡಿದ ಹಣವನ್ನು ಪರೋಕ್ಷವಾಗಿ ಮರಳಿ ಪಡೆಯುತ್ತಿತ್ತು. ಅದರ ಮೇಲೆ ವಿದ್ಯಾರ್ಥಿಗಳಿಗೆ ಪದವಿ ಗಳಿಸಿದ ಮೇಲೆ, ಕಡ್ಡಾಯ ಸರಕಾರಿ ಸೇವೆಯ ಕಾನೂನು ಇರುವುದರಿಂದ ಇನ್ನೂ ಸರಕಾರಕ್ಕೆ ಲಾಭವೇ ಆಗುತ್ತಿದೆ. ಒಟ್ಟಾರೆ, ವೈದ್ಯಕೀಯ ಶಿಕ್ಷಣದಿಂದ ಸರಕಾರ ಕೊಟ್ಟದ್ದಕ್ಕಿಂತ ಹೆಚ್ಚಾಗಿ ಮರಳಿ ಪಡೆಯುತ್ತದೆ ಎಂದಂತಾಯಿತು.

ಆದರೆ ಅಧಿಕಾರಸ್ಥರು ಜನರ ಅರೋಗ್ಯ ತಮ್ಮ ಪ್ರಾರ್ಥಮಿಕ ಕರ್ತವ್ಯ ಎಂಬುದನ್ನು ಮರೆತು, ಸರಕಾರಿ ಕಾಲೇಜುಗಳನ್ನು, ಖಾಸಗಿ ಕಾಲೇಜುಗಳಿಗೆ ಹೋಲಿಸಿ ಮಾತನಾಡುತ್ತಿದ್ದಾರೆ. ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ, ಆಸ್ಪತ್ರೆ ಕಾಲೇಜಿನ ಒಂದು ಭಾಗ. ಖಾಸಗಿಯವರಿಗೆ ಆಸ್ಪತ್ರೆಯಿಲ್ಲದಿದ್ದರೆ ಕಾಲೇಜು ನಡೆಸುವುದಕ್ಕೆ ಪರವಾನಗಿ ಸಿಗುವುದಿಲ್ಲ. ಆದ್ದರಿಂದ ಮೊದಲನೇ ಪ್ರಾಧಾನ್ಯ ಲಾಭದಾಯಕ ಕಾಲೇಜಿಗೆ, ಇವರಿಗೆ ಆಸ್ಪತ್ರೆ ಪೂರಕ ಸಾಧನ. ಅದೇ ವಿಷಯವನ್ನು ಸರಕಾರಿ ವೈದ್ಯ ಕಾಲೇಜುಗಳಿಗೆ ಅನ್ವಯಿಸುವಂತಿಲ್ಲ. ಇಲ್ಲಿ ಜನರಿಗೆ ಚಿಕಿತ್ಸೆಯು ಮುಖ್ಯವಾಗುತ್ತದೆ. ಆದ್ದರಿಂದ ಸರಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳನ್ನು ಹೋಲಿಸಿ, ಸರಕಾರಕ್ಕೆ ನಷ್ಟವಾಗುತ್ತದೆ ಎನ್ನುವ ವಾದದಲ್ಲಿ ಹುರುಳಿಲ್ಲ. ಸರಕಾರಕ್ಕೆ ಮೆಡಿಕಲ್ ಕಾಲೇಜುಗಳನ್ನು ನಡೆಸುವುದಕ್ಕೆ ಕಷ್ಟವಾದರೆ, ಬೋಧನಾ ರಹಿತ ಸೂಪರ್ ಸ್ಪೆಷಾಲಿಟಿ ತೆರೆಯಲಿ. ಆಗಲಾದರೂ ಲಾಭ ನಷ್ಟಗಳ ಲೆಕ್ಕ ಸರಿಯಾಗಿ ಸಿಗುತ್ತದೆ. ಪರ್ಷಿಯನ್ ದೊರೆಗಳ ಜನ್ಮ ಜಯಂತಿಗೆ ನೂರಾರು ಕೋಟಿ ಖರ್ಚು ಮಾಡುವಾಗ ಬೊಕ್ಕಸ ತುಂಬಿ ತುಳುಕುತ್ತಿರುವಂತೆ ದಾರಾಳವಾಗಿ ನಡೆದುಕೊಳ್ಳುವ ಸರಕಾರ, ಬಡವಿದ್ಯಾರ್ಥಿಗಳ ಶುಲ್ಕದ ವಿಚಾರದಲ್ಲಿ ದಿವಾಳಿ ಆದಂತೆ, ಜುಗ್ಗತನದಿಂದ ನಡೆದುಕೊಳ್ಳುವುದು ನಾಡಿನ ದುರಂತ.

ಇನ್ನು ಕಿಂಡರ್ ಗಾರ್ಟನ್ ಗೆ 50,000 ರು. ಕೊಡಲು ತಯಾರಿರುವ ನೀವು, ಎಂಬಿಬಿಎಸ್‌ಗೆ ಅಧಿಕ ಶುಲ್ಕ ನೀಡಲು ಏಕೆ ತರಕಾರು ತೆಗೆಯುತ್ತೀರಿ ಎಂಬ ಪ್ರಶ್ನೆ . ದೇಶದಲ್ಲಿ ಎಲ್ಲಾ ಮಕ್ಕಳು ಕಿಂಡರ್ ಗಾರ್ಟನ್ ಹೋಗುವುದಿಲ್ಲ. ಬಹಳಷ್ಟು ಮಕ್ಕಳು ಅಂಗನವಾಡಿ ಕೇಂದ್ರಗಳಿಗೆ ಹೋಗುತ್ತಾರೆ. ಅಂದರೆ ಸರಕಾರ ಅಂಗನವಾಡಿ ಕೇಂದ್ರಗಳಿಗೂ 50000 ರು. ಶುಲ್ಕ ವಿಧಿಸಬಹುದೇ? ಸರಕಾರಕ್ಕೆ ಲಾಭ ನಷ್ಟದ ಉದ್ದೇಶವಿದ್ದರೆ, ಅಂಗವಾಡಿ ಕೇಂದ್ರಗಳಿಗೇಕೆ ಉಚಿತವಾಗಿ ಮಧ್ಯಾಹ್ನದ ಊಟ ವ್ಯವಸ್ಥೆ ಮಾಡುತ್ತಿದೆ? ಈ ಪ್ರಶ್ನೆಗೆ ಉತ್ತರಿಸಿದರೆ, ಸಚಿವರಿಗೆ, ಸರಕಾರಿ ವೈದ್ಯಕೀಯ ಕಾಲೇಜುಗಳ ಶುಲ್ಕ, ಖಾಸಗಿ ವೈದ್ಯಕೀಯ ಕಾಲೇಜುಗಳಿಗಿಂತ ಏಕೆ ಕಡಿಮೆ ಇರಬೇಕು ಎಂಬುದಕ್ಕೆ ಉತ್ತರ ಸಿಕ್ಕಬಹುದು.

ಇನ್ನು ಎನ್‌ಆರ್‌ಐ ಸರಕಾರಿ ಶಾಲೆಯಲ್ಲಿ ಅವಕಾಶ ಬಗ್ಗೆ ಪರಿಶೀಲಿಸೋಣ. ಸರಕಾರಿ ವೈದ್ಯಕೀಯ ಕಾಲೇಜಿಗೂ , ಖಾಸಗಿ ವೈದ್ಯ ಕಾಲೇಜಿಗೂ ಒಂದು ಪ್ರಮುಖ ವ್ಯತ್ಯಾಸವೇನೆಂದರೆ ವಿದ್ಯಾರ್ಥಿಗಳ ಗುಣಮಟ್ಟ. ಖಾಸಗಿ ವೈದ್ಯಕಾಲೇಜಿನಲ್ಲಿ ಎಲ್ಲಾ ಗುಣಮಟ್ಟದ ವಿದ್ಯಾರ್ಥಿಗಳಿದ್ದರೆ, ಸರಕಾರಿ ಕಾಲೇಜಿನಲ್ಲಿ ಸಾಮಾನ್ಯವಾಗಿ ಅತ್ಯುತ್ತಮ ಗುಣಮಟ್ಟದ ವಿದ್ಯಾರ್ಥಿಗಳು ಮಾತ್ರ ಇರುತ್ತಾರೆ. ಅವರೇ ಸರಕಾರಿ ಕಾಲೇಜುಗಳ ಆಸ್ತಿ . ಇದು ಒಂದು ರೀತಿಯ ಬಡ ಮತ್ತು ಮಧ್ಯಮ ವರ್ಗದ , ವ್ಯಾಸಂಗದಲ್ಲಿ ಮಾತ್ರ ಆಸಕ್ತಿಯಿರುವ ಸತ್ಸಂಘವಿದ್ದಂತೆ. ಸರಕಾರಿ ಕಾಲೇಜುಗಳಲ್ಲಿ ಇಲ್ಲದಿರಲಿ, ವಿದ್ಯಾರ್ಥಿಗಳು ಒಬ್ಬರನ್ನು ನೋಡಿ ಇನ್ನೊಬ್ಬರು ಕಷ್ಟಪಟ್ಟು ಓದಿಕೊಳ್ಳುತ್ತಾರೆ. ಸ್ನಾತಕೋತ್ತರ ಪದವಿ ಸೀಟು ಗಳಿಕೆಯಲ್ಲಿ ಸರಕಾರಿ ವಿಧ್ಯಾರ್ಥಿಗಳು ಹೆಚ್ಚು ವಿಜಯಿಗಳಾಗುವುದು ಇದೇ ಕಾರಣದಿಂದಲೇ. ಇಂತಹ ಪರಿಸ್ಥಿಯಲ್ಲಿ ಹಣಬಲದಿಂದ ಬಂದ ಎನ್‌ಆರ್‌ಐ ವಿದ್ಯಾರ್ಥಿಗಳನ್ನೂ ಇವರೊಟ್ಟಿಗೆ ಸೇರಿದರೆ, ಸರಕಾರಿ ಕಾಲೇಜುಗಳ ವಾತಾವರಣ ಬದಲಾಗಬಹುದು. ವಿದ್ಯಾರ್ಥಿಗಳ ಆದ್ಯತೆ ಬದಲಾಗಬಹುದು. ಸಹವಾಸದಿಂದ ಸನ್ಯಾಸಿ ಕೆಟ್ಟ ಎನ್ನುವಂತಾಗಬಾರದು. ಅದೂ ಅಲ್ಲದೆ ಕರ್ನಾಟಕದ ಉತ್ತಮ ವಿದ್ಯಾರ್ಥಿಗಳಿಗೆ ಮೀಸಲಾಗಿದ್ದ ಸೀಟುಗಳು, ಹೊರ ರಾಜ್ಯದವರ ಪಾಲಾಗಬಹುದಾದ ಅಪಾಯವಿದೆ.

ಕುಂಬಾರನಿಗೆ ವರುಷವಾದರೆ, ನಿಮಿಷವಂತೆ. ಕಟ್ಟುವುದಕ್ಕೆ ನೂರಾರು ವರ್ಷಗಳು ಬೇಕು, ಕೆಡುವುದಕ್ಕೆ ಮೂರೇ ದಿನ ಸಾಕು. ಲಕ್ಷಾಂತರ ವರ್ಷಗಳ ಇತಿಹಾಸವಿರುವ ಬೆಟ್ಟಗಳನ್ನು, ವರ್ಷಗಳ ಒಳಗೆ ಗಣಿಗಾರಿಕೆ ಮಾಡಿ ನೆಲಸಮ ಮಾಡುವ ರಾಜಕಾರಣಿಗಳು ಇದೇ ಕೆಲಸವನ್ನು ಶಿಕ್ಷಣ ಕ್ಷೇತ್ರದಲ್ಲಿ ಮಾಡುತ್ತಿದ್ದಾರೆ. ಇಂತಹ ಗಂಭೀರ ವಿಷಯಗಳು ಮಾಧ್ಯಮಗಳಲ್ಲಿ ಚರ್ಚೆಯೇ ಆಗುವುದಿಲ್ಲ. ವಿರೋಧ ಪಕ್ಷದವರಿಗೆ ಇದು ಹೋರಾಟಕ್ಕೆ ವಿಷಯವಾಗುವುದಿಲ್ಲ ಎಂಬುದೇ ಒಂದು ದೊಡ್ಡ ದುರಂತ. ಅದೂ ಹೋಗಲಿ, ಕಡೇ ಪಕ್ಷ ಬುದ್ಧಿಜೀವಿಗಳು ಟೌನ್ ಹಾಲಿನಲ್ಲಿ ನಿಂತು ಹೋರಾಡುವಷ್ಟು ಸಿಕ್ಕುವುದಿಲ್ಲವಲ್ಲ, ಅಯ್ಯೋ ಕನ್ನಡ ನಾಡಿನ ದುರ್ವಿಧಿಯೇ!

Tags

Related Articles

Leave a Reply

Your email address will not be published. Required fields are marked *

Language
Close