ಒಮಾನ್ ಕರಾವಳಿಯಲ್ಲಿ ತೈಲ ಟ್ಯಾಂಕರ್‌ಗೆ ಕ್ಷಿಪಣಿ ದಾಳಿ: 24 ಭಾರತೀಯ ನಾವಿಕರ ರಕ್ಷಣೆ
ಒಮಾನ್ ಕರಾವಳಿಯ ಸಮೀಪ ಸಾಗುತ್ತಿದ್ದ ಮಾರಿವೆಕ್ಸ್ ತೈಲ ಟ್ಯಾಂಕರ್ ಮೇಲೆ ಕ್ಷಿಪಣಿ ದಾಳಿ ನಡೆದ ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ. ಹಡಗಿನಲ್ಲಿ ಸಿಲುಕಿದ್ದ 24 ಭಾರತೀಯ ನಾವಿಕರನ್ನು ಭಾರತೀಯ ಕರಾವಳಿ ಪಡೆ ಮತ್ತು ಒಮಾನ್ ಅಧಿಕಾರಿಗಳು ಜಂಟಿಯಾಗಿ ನಡೆಸಿದ ತುರ್ತು ಕಾರ್ಯಾಚರಣೆಯಲ್ಲಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ದುರಂತದಿಂದ ಪಾರಾದ ಭಾರತೀಯರು -
ಒಮಾನ್(Oman) ಕರಾವಳಿಯ ಸಮೀಪ ಸಾಗುತ್ತಿದ್ದವಿದೇಶಿ ಧ್ವಜ ಹೊಂದಿದ್ದ ತೈಲ ಟ್ಯಾಂಕರ್ ಹಡಗಿನ ಮೇಲೆ ನಡೆದ ಕ್ಷಿಪಣಿ ದಾಳಿಯ (Missile Attack) ಬಳಿಕ ಸಂಭವಿಸಿದ ಅಗ್ನಿ ಅವಘಡದಲ್ಲಿ ಸಿಲುಕಿದ್ದ ಕನಿಷ್ಠ 24 ಭಾರತೀಯ ನಾವಿಕರನ್ನು ಭಾರತೀಯ ಕರಾವಳಿ ಪಡೆ (Indian Coast Guard - ICG) ಮತ್ತು (Oman Authorities) ಒಮಾನ್ ಅಧಿಕಾರಿಗಳು ಜಂಟಿಯಾಗಿ ರಕ್ಷಿಸಿದ್ದಾರೆ. ತ್ವರಿತ ಸಮನ್ವಯ ಮತ್ತು ರಕ್ಷಣಾ ಕಾರ್ಯಾಚರಣೆಯಿಂದ ಸಂಭವಿಸಬಹುದಾದ ದೊಡ್ಡ ದುರಂತ ತಪ್ಪಿದೆ.
ಪಲಾವ್ (Palau) ದೇಶದ ಧ್ವಜ ಹೊಂದಿದ್ದ 'ಮಾರಿವೆಕ್ಸ್' (Marivex) ಎಂಬ ತೈಲ ಟ್ಯಾಂಕರ್ ಹಡಗಿನಲ್ಲಿ ಸೋಮವಾರ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಪ್ರಾಥಮಿಕ ವರದಿಗಳ ಪ್ರಕಾರ, ಹಡಗಿನ ಮೇಲೆ ಕ್ಷಿಪಣಿ ದಾಳಿ ನಡೆದಿದ್ದು, ಅದರ ಪರಿಣಾಮವಾಗಿ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಹಡಗಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭಾರತೀಯ ನಾವಿಕರು ಅಪಾಯದ ಪರಿಸ್ಥಿತಿಯಲ್ಲಿ ಸಿಲುಕಿದ್ದರು.
Swift response by #MRCC #Mumbai following missile attack on MT Marivex in #OmanSRR.
— Indian Coast Guard (@IndiaCoastGuard) June 9, 2026
On receiving information, MRCC Mumbai immediately coordinated with OMSC Oman, ensuring the safe rescue of 24 #Indian crew by #Oman Navy helicopters.@IndiaCoastGuard remains steadfast in its… pic.twitter.com/ULDjzgEK4g
ಮಾಹಿತಿ ದೊರೆಯುತ್ತಿದ್ದಂತೆಯೇ ಮುಂಬೈನ ಮೆರಿಟೈಮ್ ರೆಸ್ಕ್ಯೂ ಕೋ-ಆರ್ಡಿನೇಷನ್ ಸೆಂಟರ್ (MRCC) ಒಮಾನ್‌ನ ಸಮುದ್ರ ಭದ್ರತಾ ಮತ್ತು ರಕ್ಷಣಾ ಅಧಿಕಾರಿಗಳೊಂದಿಗೆ ತಕ್ಷಣ ಸಂಪರ್ಕ ಸಾಧಿಸಿತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಎರಡೂ ದೇಶಗಳ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿದರು.
ವಿಶ್ವದಲ್ಲೇ ಅತೀ ಹೆಚ್ಚು ಮಿಲಿಟರಿ ಖರ್ಚು ಮಾಡುವ ದೇಶ ಯಾವುದು ಗೊತ್ತೇ? ಭಾರತ ಯಾವ ಸ್ಥಾನದಲ್ಲಿದೆ?
ಒಮಾನ್ ರಕ್ಷಣಾ ಪಡೆಗಳ ಹೆಲಿಕಾಪ್ಟರ್‌ಗಳು ಘಟನಾ ಸ್ಥಳಕ್ಕೆ ಧಾವಿಸಿ ಹಡಗಿನ ಮೇಲ್ಭಾಗದಲ್ಲಿ ಸಿಲುಕಿದ್ದ ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದವು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ದೃಶ್ಯಗಳಲ್ಲಿ ಹೆಲಿಕಾಪ್ಟರ್‌ಗಳು ಹಡಗಿನ ಡೆಕ್ ಮೇಲೆ ಹಾರಾಡುತ್ತಾ ಸಿಬ್ಬಂದಿಯನ್ನು ರಕ್ಷಿಸುತ್ತಿರುವುದು ಕಂಡುಬಂದಿದೆ.
ಭಾರತೀಯ ಕರಾವಳಿ ಪಡೆ ನೀಡಿರುವ ಮಾಹಿತಿಯ ಪ್ರಕಾರ, ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಎಲ್ಲಾ ಭಾರತೀಯ ನಾವಿಕರನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲಾಗಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿರುವುದಾಗಿ ತಿಳಿದುಬಂದಿದೆ. ಇತ್ತೀಚಿನ ದಿನಗಳಲ್ಲಿ ಪಶ್ಚಿಮ ಏಷ್ಯಾ ಮತ್ತು ಅರಬ್ಬಿ ಸಮುದ್ರ ಭಾಗದಲ್ಲಿ ಭದ್ರತಾ ಸವಾಲುಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಈ ಘಟನೆ ಮಹತ್ವ ಪಡೆದಿದೆ. ಸಮುದ್ರ ಮಾರ್ಗಗಳಲ್ಲಿ ಸಂಚರಿಸುವ ವಾಣಿಜ್ಯ ಹಡಗುಗಳು ಹಾಗೂ ನಾವಿಕರ ಸುರಕ್ಷತೆ ಕುರಿತ ಆತಂಕಗಳ ನಡುವೆ ಭಾರತ ಮತ್ತು ಒಮಾನ್ ನಡುವಿನ ತ್ವರಿತ ಸಹಕಾರ ಮತ್ತೊಮ್ಮೆ ಪರಿಣಾಮಕಾರಿಯಾಗಿದೆ.
ಭಾರತೀಯ ನಾವಿಕರ ಸುರಕ್ಷತೆಯನ್ನು ಖಾತ್ರಿಪಡಿಸಲು ಕೇಂದ್ರ ಸರ್ಕಾರ ಹಾಗೂ ಭಾರತೀಯ ಕರಾವಳಿ ಪಡೆ ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದು, ಮುಂದಿನ ಬೆಳವಣಿಗೆಗಳ ಕುರಿತು ಮಾಹಿತಿ ಸಂಗ್ರಹಿಸುತ್ತಿದೆ.