About Us Advertise with us Be a Reporter E-Paper

ವಿವಾಹ್

ಭಾವನೆಗೆ ಬೆಲೆ ಕೊಡುವ ಸ್ನೇಹಿತನೇ ಪತಿಯಾದಾಗ

*ಶ್ವೇತಾ ಭಟ್

ನಾನು ಎಂಬಿಎ ಓದಲು ಬೆಂಗಳೂರಿಗೆ ಬಂದ ಕೆಲವು ತಿಂಗಳಗಳಲ್ಲೇ, ಸ್ನೇಹಿತನ ಜತೆ ಮೊದಲ ಬಾರಿ ಆತ್ರೇಯ (ಸನ್ನಿ)ಯನ್ನ ಆತನ ವರ್ತನೆಗೆ ಕೋಪ ಬಂದಿತ್ತು. ನಂತರದ ಅನೇಕ ಭೇಟಿಗಳಲ್ಲಿ ಕೋಪ ಇನ್ನಷ್ಟು ಹೆಚ್ಚುತ್ತಾ ಹೋಯಿತು. ಆದರೆ ಕೆಲವೇ ದಿನಗಳಲ್ಲಿ ಒಂದು ಘಟನೆ ಆತನ ಮೇಲಿನ ಕೋಪ ಮಾಯವಾಗುವಂತೆ ಮಾಡಿತ್ತು. ಒಂದು ದಿನ ಎಕ್ಸಾಮ್ ಮುಗಿಸಿ ಬರುವ ಹೊತ್ತಿಗೆ ನನ್ನ ಬಳಿಯಿದ್ದ ಮೊಬೈಲ್ ಕಳವಾಗಿತ್ತು. ಆಗ ದಿಕ್ಕೇ ತೋಚದೆ ಅಳುತ್ತಿದ್ದ ನನಗೆ ತಕ್ಷಣಕ್ಕೆ ಅವನ ಮೊಬೈಲ್ ಕೈಗಿಟ್ಟು ಎಷ್ಟು ದಿನ ಬೇಕಾದರೂ ಇದನ್ನ ಬಳಸಿಕೊ, ಮನೆಯವರ ಜೊತೆ ಮಾತನಾಡು, ಏನು ಬೇಕಿದ್ದರೂ ಕೇಳು ಅಂತ ಸಮಾಧಾನ ಮಾಡಿದಾಗ ಈತನಲ್ಲೂ ಒಳ್ಳೆಯ ಮನಸ್ಸಿದೆ ಅನ್ನೋದು ನನಗೆ ಅರಿವಾಗಿತ್ತು.

ನಂತರದ ದಿನಗಳಲ್ಲಿ ಇಬ್ಬರಲ್ಲೂ ಸ್ನೇಹಿತರೆಂಬ ಭಾವನೆ ಬಂದಿತ್ತು. ಆದರೂ ಕೆಲವೊಮ್ಮೆ ಕಠಿಣವಾಗಿ ವರ್ತಿಸುವ ಇವನ ಮನಸ್ಥಿತಿಯಿಂದ, ಮತ್ತೆ ಮತ್ತೆ ಮನಸ್ತಾಪ ಉಂಟಾಗುತ್ತಿತ್ತು. ನಾವಿಬ್ಬರೂ ಒಬ್ಬರಿಗೊಬ್ಬರು ಮಾತನಾಡದೇ ದೂರವೇ ಉಳಿದಿದ್ದ ಸಮಯ ಅದು. ಆಗ ಆತನ ಸಹೋದ್ಯೋಗಿಯಿಂದ ಬಂದ ಕರೆ ನನ್ನನ್ನ ಕಂಗಾಲು ಮಾಡಿತ್ತು. ಈತ ಭೀಕರ ಅಪಘಾತದಿಂದ ಗಂಭೀರವಾಗಿ, ಆಸ್ಪತ್ರೆಗೆ ದಾಖಲಾಗಿದ್ದು ನನಗೆ ವಿಚಾರವಾಗಿತ್ತು. ಮನಸ್ಸು ಬಂದಾಗಲೆಲ್ಲ ಹಗಲು ರಾತ್ರಿಯೆನ್ನದೆ ಬೈಕ್, ಕಾರ್ ರ್ಯಾಲಿಗಳಲ್ಲಿ ಭಾಗವಹಿಸುವ ಈತನಿಗೆ ಅಪಘಾತವಾಗಿತ್ತು.ಆದರೆ ಆ ಘಟನೆ ಮತ್ತೆ ಜೀವನದಲ್ಲಿ ನಮ್ಮನ್ನು ಒಂದು ಮಾಡುತ್ತದೆ ಅನ್ನೋ ಕಲ್ಪನೆ ಅಂದು ನನಗಿರಲಿಲ್ಲ.

ಆತ ಚೇತರಿಸಿಕೊಂಡ ನಂತರ ಮತ್ತೆ ನಾವಿಬ್ಬರೂ ಭೇಟಿಯಾಗಲೂ ಆರಂಭಿಸಿದೆವು. ಒಂದು ದಿನ ಇದ್ದಕ್ಕಿದ್ದಂತೆ ಅವರ ಮನೆಗೆ, ಆತನ ಸಹೋದರಿಯ ಸ್ನೇಹಿತೆಯಂತೆ, ಕರೆದುಕೊಂಡು ಹೋಗಿ ಪರಿಚಯಿಸಿದಾಗ ಈತನಿಗೆ ನನ್ನಲ್ಲಿ ಪ್ರೀತಿಯ ಭಾವನೆಗಳು ಇದೆ ಅನ್ನೋದು ಅರ್ಥವಾಗಿತ್ತು. ನಂತರ ಯಾರ ಹೇಳದೇ ನಾವಿಬ್ಬರೇ ತಮಿಳುನಾಡಿಗೆ ಬೈಕ್‌ನಲ್ಲಿ ಹೋಗಿದ್ದು. ನಂತರ ಆತ ನಮ್ಮೂರಿಗೆ ಬಂದು ನನ್ನ ಮನೆಯವರ ಪ್ರೀತಿಗೆ ಪಾತ್ರನಾಗಿದ್ದು, ವಿಶ್ವಾಸಗಳಿಸಿದ್ದು, ಎಲ್ಲವೂ ಅಂದುಕೊಳ್ಳದೆ ನಡೆದುಹೋಯಿತು.

ನಾವು ಮದುವೆಯಾಗೋಣವಾ ಅಂತ ಒಬ್ಬರಿಗೊಬ್ಬರು ಕೇಳಿಕೊಂಡಾಗ, ಮನೆಯಲ್ಲೂ ಆಸ್ತು ಎಂದಾಗ ಮದುವೆಯ ಮಾತು ಆರಂಭವಾಗಿತ್ತು. ಅದಾಗಿ ಒಂದು ವರ್ಷಗಳಲ್ಲಿ ನಿಶ್ಚಿತಾರ್ಥವಾಗಿ ಮದುವೆಯಾಗಿತ್ತು. ನಮ್ಮಿಬ್ಬರ ಪರಿಚಯವಾಗಿ ಹತ್ತು ವರ್ಷಗಳು ಕಳೆದಿದ್ದರೂ, ಪ್ರೀತಿ ಪ್ರೇಮ ಮದುವೆಯ ಬಂಧಕ್ಕೆ ಏಳು ವರ್ಷಗಳು. ನಮ್ಮ ಪ್ರೇಮದ ಸಂಕೇತಕ್ಕೆ ಮೂರುವರೆ ವರ್ಷದ ಮಗಳು ನನ್ನ ಮಡಿಲು ತುಂಬಿದ್ದಾಳೆ.

ಪ್ರೀತಿ ಪ್ರೇಮ ಅನ್ನೋದು ಪ್ರತಿ ಹೆಂಗಳೆಯರ ಮನಸ್ಸಲ್ಲೂ ಮೂಡುವ ಭಾವನೆ. ಅದಕ್ಕೆ ಸರಿಯಾದ ವ್ಯಕ್ತಿ ಸಿಕ್ಕಾಗ ಬದುಕು ಸುಂದರ ಅರಮನೆ. ಹಾಗೇ ಎಲ್ಲ ಸಮಯದಲ್ಲೂ ಪರಿಸ್ಥಿತಿಯಲ್ಲೂ ಮನಸ್ಸಿನ ಭಾವನೆಗೆ ಬೆಲೆ ಕೊಡುವ ಸ್ನೇಹಿತನೇ ಪತಿಯಾದಾಗ ಜೀವನ ಮತ್ತಷ್ಟು ಸುಂದರ ಸುಮಧುರ.

Tags

Related Articles

Leave a Reply

Your email address will not be published. Required fields are marked *

Language
Close