About Us Advertise with us Be a Reporter E-Paper

ಸಿನಿಮಾಸ್

‘ಗಡ್ಡಪ್ಪನ ದುನಿಯಾ’ ಏನುಂಟು, ಏನಿಲ್ಲ..?

ಎರಡು ವರ್ಷಗಳ ಹಿಂದೆ ತೆರೆಕಂಡ ‘ತಿಥಿ’ ಚಿತ್ರ ಯಶಸ್ವಿಯಾಗುತ್ತಿದ್ದಂತೆ, ಆ ಚಿತ್ರದಲ್ಲಿ ಎರಡು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದ ಹಿರಿಯ ಕಲಾವಿದರಾದ ಗಡ್ಡಪ್ಪ ಹಾಗೂ ಗೌಡ ಕೂಡ ಗಾಂಧಿನಗರದಲ್ಲಿ ಭರ್ಜರಿ ಡಿಮ್ಯಾಂಡ್ ಪಡೆದುಕೊಂಡರು. ಗ್ರಾಮೀಣ ಸೊಗಡಿನ ಚಿತ್ರಗಳಲ್ಲಿ ಅವರಿಗೊಂದು ಪಾತ್ರ ಕೊಡಲು ಅನೇಕ ನಿರ್ದೇಶಕರು, ನಿರ್ಮಾಪಕರು ಮುಂದೆ ಬಂದರೆ, ಇನ್ನೂ ಕೆಲವು ನಿರ್ದೇಶಕರು ಅವರನ್ನೇ ಮುಖ್ಯ ಪಾತ್ರದಲ್ಲಿ ಇಟ್ಟುಕೊಂಡು ಸಿನಿಮಾ ಮಾಡಲು ಮುಂದಾದರು. ಅದರಂತೆ ಈ ಇಬ್ಬರೂ ಕಲಾವಿದರೂ ಕಳೆದ ಎರಡು ವರ್ಷಗಳಲ್ಲಿ ಹತ್ತಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಬಣ್ಣ ಹಚ್ಚುವಂತಾಯಿತು. ಈ ವಾರ ಗಡ್ಡಪ್ಪ, ಸೆಂಚುರಿ ಗೌಡ ಅಭಿನಯಿಸಿರುವ ಅಂಥದ್ದೆ ಮತ್ತೊಂದು ಚಿತ್ರ ‘ಗಡ್ಡಪ್ಪನ ತೆರೆಗೆ ಬರುತ್ತಿದೆ.

ಸುಮಾರು ಒಂದೂವರೆ ವರ್ಷದ ಹಿಂದೆಯೇ ಸೆಟ್ಟೇರಿದ್ದ ‘ಗಡ್ಡಪ್ಪನ ದುನಿಯಾ’ ಚಿತ್ರಕ್ಕೆ ಯುವ ನಿರ್ದೇಶಕರಾದ ಅನಿಲ್ ವೆಂಕಟ್‌ರಾಜು ಹಾಗೂ ಸುನಿಲ್ ರೆಡ್ಡಿ ಜಂಟಿಯಾಗಿ ಆ್ಯಕ್ಷನ್-ಕಟ್ ಹೇಳಿದ್ದಾರೆ. ಎಸ್‌ಜೆಎಂ ಫಿಲಂಸ್ ಲಾಂಛನದಲ್ಲಿ ಕೆ.ಬಿ ಅಜಿತ್ ಗೌಡ ಕುಪ್ಪಂಡಳ್ಳಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಚಿತ್ರದ ಬಿಡುಗಡೆಗೂ ಮುನ್ನ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಅನಿಲ್, ‘ಒಂದು ಹಳ್ಳಿಯಲ್ಲಿ ನಡೆಯುವ ಕತೆಯನ್ನು ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ. ನೀರಿನ ಸಮಸ್ಯೆಯಂತಹ ವಿಷಯವನ್ನು ಇಲ್ಲಿ ಚರ್ಚಿಸಿದ್ದೇವೆ. ಒಂದು ಹಳ್ಳಿಯಲ್ಲಿ ಬರಗಾಲ ಉಂಟಾಗಿ ನೀರಿನ ಸಮಸ್ಯೆ ಎದುರಾಗುತ್ತದೆ. ಆಗ ಗಡ್ಡಪ್ಪ ಬತ್ತಿಹೋಗಿದ್ದ ಕೆರೆ ಕಟ್ಟೆಗಳು ನೀರಿನಿಂದ ಹೇಗೆ ತುಂಬುವಂತೆ ಮಾಡುತ್ತಾರೆ, ಬರಗಾಲದಿಂದ ಊರನ್ನು ಬಿಟ್ಟು ಪಟ್ಟಣದ ಕಡೆಗೆ ಹೊರಟಿದ್ದ ಗ್ರಾಮಸ್ಥರು ಪುನಃ ಹಳ್ಳಿಯಲ್ಲೇ ನೆಲೆಸುವಂತೆ ಹೇಗೆ ಮಾಡುತ್ತಾರೆ. ಗಡ್ಡಪ್ಪ ಹಾಗೂ ಸೆಂಚುರಿಗೌಡ ಊರ ಬಗ್ಗೆ ಕಾಳಜಿ ವಹಿಸಿ ಜನರಲ್ಲಿ ಹೇಗೆ ಉತ್ಸಾಹ ತುಂಬುತ್ತಾರೆ ಎಂಬುದೇ ಚಿತ್ರದ ಕತೆ’ ಎಂದರು. ಗ್ರಾಮೀಣ ಪ್ರದೇಶದ ಕತಾಹಂದರ ಈ ಚಿತ್ರದಲ್ಲಿ ಒಂದು ನವಿರಾದ ಪ್ರೇಮಕತೆ, ಜತೆಗೊಂದು ಸಂದೇಶ ಕೂಡ ಇದೆ. ಪ್ರೇಕ್ಷಕರ ಮನರಂಜನೆಗೆ ಬೇಕಾದ ಎಲ್ಲವೂ ಚಿತ್ರದಲ್ಲಿದೆ ಎನ್ನುತ್ತದೆ ಚಿತ್ರತಂಡ.

ಪಕ್ಕಾ ಹಳ್ಳಿಯ ಸೊಗಡಿರುವ ಈ ಚಿತ್ರದಲ್ಲಿ ಗಡ್ಡಪ್ಪ, ಸೆಂಚುರಿ ಗೌಡ ಅವರೊಂದಿಗೆ ಪ್ರಕೃತಿ ಪ್ರಕಾಶ್, ತಮ್ಮೇಗೌಡ, ರಘು ಆಚಾರ್, ಮಧು, ಬಾಲಕೃಷ್ಣ, ಬರಗೂರು ನರಸಿಂಹ ಮೂರ್ತಿ, ಗೋಪಾಲಪ್ಪ ಇನ್ನೂ ಮುಂತಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರವನ್ನು ಮೈಸೂರು, ಮಂಡ್ಯ ಪಾಂಡವಪುರ ಸುತ್ತಮುತ್ತ ಚಿತ್ರೀಕರಿಸಲಾಗಿದೆ.

ಹರ್ಷ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಚಿತ್ರಕ್ಕೆ ರಘು, ನವೀನ್ ಗೌಡ ಛಾಯಾಗ್ರಹಣವಿದೆ. ರಾಮ್ ಶೆಟ್ಟಿ, ಪವನ್ ಅಯ್ಯರ್ ಸ್ವಾಮಿ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರ ರಾಜ್ಯದಾದ್ಯಂತ ಇಂದು ಐವತ್ತಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ತೆರೆ ಕಾಣುತ್ತಿದೆ. ‘ಗಡ್ಡಪ್ಪನ ದುನಿಯಾ’ದಲ್ಲಿ ಗಡ್ಡಪ್ಪ ಆ್ಯಂಡ್ ಟೀಮ್ ಏನೆಲ್ಲ ಕಮಾಲ್ ಮಾಡಿದ್ದಾರೆ, ಚಿತ್ರ ಎಷ್ಟರ ಮಟ್ಟಿಗೆ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂಬುದು ಇದೇ ವಾರಾಂತ್ಯಕ್ಕೆ ತಿಳಿಯಲಿದೆ.

Tags

Related Articles

Leave a Reply

Your email address will not be published. Required fields are marked *

Language
Close