About Us Advertise with us Be a Reporter E-Paper

ವಿರಾಮ

ಗಣಪ: ಸರ್ವಸಮಾನತೆಯ ದಿವ್ಯ ಸಂಕೇತ, ನಿಜ ಕ್ರಾಂತಿಕಾರಿ!

ಏಕದಂತ

ಪುರೋಹಿತ ಶಾಹಿಯ ಪೂಜಾಸಂಸ್ಕೃತಿಯ ವಿಕೇಂದ್ರಿಕರಣದ ಸಾಂಕೇತಿಕ ಆಚರಣೆಯೂ, ಆ ಪುರೋಹಿತ ಶಾಹಿಯ ಪೂಜಾಸಂಸ್ಕೃತಿಯ ಮಡಿ ಪದ್ಧತಿಯ ಕಟ್ಟೆಗಳನ್ನ ಒಡೆಯುವ ವಿಘಟಿತ ಸಂಸ್ಕೃತಿಯೂ ಇದಾಗಿದೆ. ಬ್ರಾಹ್ಮಣ ಮಾತ್ರ ಪೂಜೆ, ಪುನಸ್ಕಾರ ಮಾಡಬೇಕೆಂಬ ಕಟ್ಟುಪಾಡಿನ ಸಾರ್ವತ್ರೀಕರಣದ ಸ್ವರೂಪವೂ ಗಣಪತಿ ಆರಾಧನೆ. ಗರ್ಭಗುಡಿಯಲ್ಲಿ ಬಂಧಿಯಾಗಿದ್ದ ಪೂಜಾಸಂಸ್ಕೃತಿಯಿಂದ ಗಣಪನನ್ನು ಹೊರತರುವ ಮೂಲಕ ತಿಲಕರು ಜನಸಮುದಾಯಕ್ಕೆ ಗಣಪತಿಯನ್ನು ಮನೆದೇವರನ್ನಾಗಿಸಿದ್ದಷ್ಟೇ ಅಲ್ಲ, ನೇರ ಪೂಜೆಯ ಕೈಂಕರ್ಯವನ್ನು ಧಾರೆ ಎರೆಯುವ ಐತಿಹಾಸಿಕ ಸ್ವಾತಂತ್ರ್ಯವನ್ನೂ ನೀಡಿದ್ದು ವಿಶೇಷ. ಗಣಪತಿ ಈ ಸಮಾಜದ ನಿಜವಾದ ಕ್ರಾಂತಿಕಾರಿ ಮತ್ತು ಸರ್ವಸಮ್ಮತ, ಸರ್ವರಿಗೂ ಸಮನಾಗಿ ತನ್ನನ್ನ ಒಪ್ಪಿಸಿಕೊಂಡ ದೇವರು.

ಣೇಶ, ಲಂಬೋದರ, ಗಜಾನನ, ಏಕದಂತ, ವಕ್ರತುಂಡ, ಗಣಾಧಿಪ, ಹೀಗೆ ಹಲವು ನಾಮದಿಂದ ಕರೆಯಲ್ಪಡುವ ಮೊದಲ ವಂದಿಪನಿಗೆ ವಿಶ್ವಾದ್ಯಂತ ವಿಶ್ವಾಸಿಕರು, ಭಕ್ತರು, ಆರಾಧಕರು. ಇವೆಲ್ಲಕ್ಕಿಂತ ಮುಖ್ಯವಾಗಿ ಆಧುನಿಕ ಜಗದಲ್ಲೂ ಅಬಾಲವೃದ್ಧರಾದಿ ಪ್ರೀತಿಸುವ ಮುದ್ದಿಸುವ ಆರಾಧಿಸುವ ಗಣಪ, ಟೊಣಪ. ಶೀಘ್ರ ಪ್ರಸಾದಿ. ಈ ಗಣೇಶ, ಅವನ ಜೀವನ, ಅವನ ಉಪಕ್ರಮ, ಪರ್ಯಟನ, ಅವನ ಹುಟ್ಟು, ಅವನ ನಿಷ್ಠೆ, ಅವನ ಪರಾಕಾಷ್ಠೆ ಇವನ್ನೆಲ್ಲ ಅಧ್ಯಾತ್ಮದ ಕಣ್ಣಿನಿಂದ ಕಂಡಾಗಲೂ ಅವನು ಬಡವರ, ಶ್ರಮಿಕರ, ಹಸಿದವರ ಸರಳ, ಸುಂದರ, ಸುಪ್ರಸನ್ನ, ದೇವತೆ, ದೇವರು. ಅಪ್ಪನಂತೇ ಮಗ. ಶಿವನೂ ಅಷ್ಟೆ ನಿರಾಡಂಬರ, ನಿರ್ವ್ಯಾಮೋಹಿ, ಸಮಾಜದ ಕಟ್ಟಕಡೆಯ ನೆಲೆವಾಸಿ, ವಿಭೂತಿಪ್ರಿಯ, ಬೋಳೆ, ಭಕ್ತರಿಗಾಗಿ ಪ್ರಾಣ, ಪ್ರಾಣಲಿಂಗ, ಸತಿ ಎಲ್ಲವನ್ನೂ ಧಾರೆ ಎರೆದ ಅಲಕ್ ನಿರಂಜನ. ತಾಯಿಯೋ ಜಗನ್ಮಾತೆ.

ಗಣಪತಿ, ನನ್ನ ಜೀವನದ ಆರ್ದ್ರ ಸಂಗಾತಿ. ನನ್ನ ಹಳ್ಳಿ, ಬಡತನ, ನಿರೀಕ್ಷೆ, ಹಸಿವು, ಆಟ, ಕೂಟ, ಜೂಟಾಟ, ಅವನ ಹಬ್ಬದ ಶೃಂಗಾರಕ್ಕಾಗಿ ಮಾಡಿದ ಜೀವಾಗಾಥ ಸಾಹಸಗಳ ಮೂರ್ತರೂಪಿ. ಪ್ರಾಯಶಃ ಬಾದ್ರಪದ ಶುಕ್ಲದ ಚೌತಿಯಂದು ಮನೆ, ಮನಕ್ಕೆ ತಾನಾಗಿಯೇ ಬರುವ ಈ ಸಿದಾ ಸಾದಾ ದೇವ ನಮ್ಮಂಥ ಬಡವರನ್ನೂ ವರ್ಷಕ್ಕೊಮ್ಮೆ ಬಲ್ಲಿದರನ್ನಾಗಿಸಿದ ಮಹಾಪುರುಷ. ಸಮಾಜದ ತಾರತಮ್ಯತೆ, ಮೇಲು ಕೀಳು, ಉಳ್ಳವರು, ಅನಾಥರು ಎಂಬೆಲ್ಲಾ ಭೇಧ ಭಾವಗಳನ್ನು ತೊರೆದು, ತೊಳೆದು ಸಾಮಾಜಿಕರನ್ನು ಭಾವನಾತ್ಮಕವಾಗಿ ಒಗ್ಗೂಡಿಸಿದ ಸಮನ್ವತೆಯ ಹರಿಕಾರ. ಬಾಲಗಂಗಾಧರನಾಥ ತಿಲಕರು ಭಾರತೀಯರನ್ನು ಒಂದಾಗಿಸಲು, ಒಗ್ಗೂಡಿಸಲು ಗಣಪತಿ ಪೂಜೆ ಎಂಬ ರಾಷ್ಟ್ರೀಯ ಹಬ್ಬದ ರೀತಿ ಘೋಷಿಸಿದ ಮಹಾಪುರುಷ. ಅವರ ಧ್ಯೇಯ, ಉದ್ದೇಶಕ್ಕೆ ಲಾಯಕ್ಕಾಗಿ ಗಣಪ. ಕಾರಣ ಗಣಪತಿಯ ಚಹರೆ, ಸ್ವರೂಪ, ಅವನ ಹುಟ್ಟು, ಮರುಹುಟ್ಟು ಎಲ್ಲವೂ ಸಾಮಾನ್ಯ ಜನರ ನಂಬಿಕೆಗೆ, ಆರಾಧನೆಗೆ ಎಟುಕುವ, ಅರ್ಹವಾಗುವ ನೆಲೆಗಟ್ಟಿನದ್ದು. ಗಣಪತಿ ಯಾವತ್ತೂ ದೈವ ಪುರುಷನಾಗಿಯೂ ‘ನಮ್ಮವ’ ಅನ್ನಿಸಿಕೊಂಡ ಹೆಗ್ಗಳಿಕೆ ಹೊಂದಿದವ.

ಗಣಪತಿ ಅವನು ಗಣನಾಯಕ. ಗಣ ಅಂದರೆ ಸಮುದಾಯ, ಗುಂಪು, ತಂಡ ಅನ್ನುವ ಅರ್ಥವಿದೆ. ಸಮುದಾಯದ ಪ್ರಾತಿನಿಧಿತ ಪ್ರಜ್ಞೆ, ರೂಪವೇ ಗಣಪತಿ ಜನನಾಯಕ ಆಗಲು ಇರುವ ಮೊದಲ ಮತ್ತು ಆತ್ಯಂತಿಕ ಅರ್ಹತೆ. ಜನಪ್ರೀತಿಗೆ ಗಣಪನೇ ಮೊದಲ ಏಕೆಂದರೆ ಅವನ ಅಸ್ತಿತ್ವವೇ ಸಮುದಾಯದ ತಳಹದಿಯಲ್ಲಿ. ಗಣಪತಿ ಪಾರ್ವತಿಯ ಬೆವರಿನ ಕೂಸು. ಬೆವರು ಅಂದಾಗ ಅಲ್ಲಿ ಕೊಳೆ, ಕೊಳೆಯಲ್ಲಿ ಧೂಳು, ಮಣ್ಣು, ಹೊಲಸು, ದುರ್ಗಂಧ ಎಲ್ಲವೂ ಸಮ್ಮಿಶ್ರ. ಅಂದರೆ ಗಣಪತಿ ಬೆವರಿನ ಸಂಕೇತ. ಬೆವರಿನ ಉತ್ಪನ್ನ ಅನ್ನುವಲ್ಲಿ ಅವನು ಈ ನೆಲದ ಪ್ರತ್ಯುನ್ನ. ಈ ನೆಲದ ಶ್ರಮಿಕರ ಉತ್ಪನ್ನ; ಧಾತು. ಗಣಪತಿ ಕೊಳೆಯ ಕಳೆ. ಕೆಸರಿನ ಕಮಲ. ಕೈ ಕೆಸರಾದರೆ ಬಾಯಿಗೆ ಮೊಸರು. ಕೆಸರು, ಕೊಳೆ ದುಡಿಯುವ ವರ್ಗದ ಪಾರ್ವತಿ ಭೂಮಿ. ಭೂಮಾತೆಯ ಬೆವರಿನ ಪುತ್ರ. ಅಂದರೆ ಕಾರ್ಮಿಕರ ಸಾಮುದಾಯಿಕ ಸಶ್ರಮದ ದಿವ್ಯ ತೇಜವೇ ಗಣಪತಿ.

ಶ್ರಮ ಸಂಸ್ಕೃತಿಯ ದೀಕ್ಷೆ

ತಾಯಿಯ ಆಜ್ಞಾಪಾಲಕ. ಆ ಹೊತ್ತಿಗೆ ಅಪ್ಪ ಶಂಕರನೇ ಬಂದರೂ ಆಜ್ಞೆ ಮೀರದ, ತಾಯಿ ಮಾತಿಗೆ ಒತ್ತಾಸೆಯಾಗಿ ನಿಂತ ಮಗ. ಶಿವನ ಯಾವ ಆರ್ಭಟಕ್ಕೂ ಎದೆಗುಂದದ ಸಂಕಲ್ಪ. ವೀರ ಸಂಕಲ್ಪ. ಕಾರಣ ಅದು ದುಡಿಯುವ ವರ್ಗದ ನಾಭಿಕೂಸು. ಅದರ ಹಟಸಿದ್ಧಿ, ಏಕನೋಟ, ಮಾತು, ನಡೆ, ಶ್ರಮಸಂಸ್ಕೃತಿಯ ದೀಕ್ಷೆ. ಅದು ಹುಟ್ಟುಗುಣ. ಆ ಕ್ಷಣಕ್ಕೆ ಇವ ಆಜ್ಞಾಪಿಸುವ, ಆರ್ಭಟಿಸುವ, ತಾನೇ ತಾನೆಂಬ ಅಟಾಟೋಪದ ಬೆಂಕಿ ಉಗುಳುವ, ಗಣಪ ಆಳೂ, ತಾನು ಒಡೆಯನೆಂಬ ಭಾವ ಹೊಂದುವ, ದಂಡನೆಗೂ ಮುಂದಾಗುವ, ದಂಡಿಸುವ, ಮಗು ರೂಪವನ್ನ ಕಂಡೂ ಮೋಹ, ಪ್ರೀತಿ, ವಾತ್ಸಲ್ಯ, ಮಮತೆ, ಮಾನವೀಯತೆ ಉಕ್ಕದ ಶಂಕರ ಉಳ್ಳವರ, ಆಳುವವರ, ದುಡಿಸಿಕೊಳ್ಳುವವರ, ಬೂರ್ಜ್ವಾಸಂಸ್ಕೃತಿಯ ಪ್ರತೀಕವಾಗಿ ಕಂಡು ಗಣಪ ಹೂಬೇಹೂಬು ಶ್ರಮನಾಗರಿಕತೆಯ ಪರಮಶಿಲ್ಪವಾಗಿ, ಸಿಂಬಲ್ ಆಗಿ ಕಾಣುತ್ತಾನೆ. ಶಿವನ ಆಕ್ರಮಣಕ್ಕೆ ಗಣಪತಿಯ ಬಲಿಯೂ ಆಗುತ್ತದೆ. ತಾಯ ಭೂಮಿಯ ಪ್ರತಿಭಟನೆ, ನೆಲಸಂಸ್ಕೃತಿಯ ಒಡತಿ ಪರ್ವತರಾಜನ ಪುತ್ರಿ ಪಾರ್ವತಿಯ ಆಕ್ರೋಷಕ್ಕೆ, ಆವೇಶಕ್ಕೆ ತರಗೆಲೆಯಂತೆ ತರಗುಟ್ಟುವ ಶಿವ, ಗಣಪತಿಯ ಪುನರ್ಜನ್ಮಕ್ಕೆ ಕಾರಣೀಕರ್ತನಾಗುತ್ತಾನೆ. ಜೀವಮೂಲದ ವಿಭಿನ್ನ ನೆಲೆ, ಸಂಸ್ಕೃತಿಯ ಅಪೂರ್ವ ಸಂಗಮ. ಮಾನವಾಕೃತಿಯ ಮುಂಡಕ್ಕೆ ಪ್ರಾಣಿ, ಆನೆಯ ರುಂಡದ ಕೂಡಿಕೆ. ವಿಶಿಷ್ಟಾಕೃತಿಯ ಜನನ. ಗಣಪತಿಯ ಹುಟ್ಟೇ ಅಸಾಮಾನ್ಯ. ಅಸಾಮಾನ್ಯನಾಗಿಯೂ ಸಾಮಾನ್ಯರ ಹೃದಯಮಿತ್ರ ಗಣಪ ಸುಖದಾಯಕ. ಫಲದಾಯಕ.

ನನ್ನಂಥವನ ಬಾಲ್ಯ, ಬೆಳವಣಿಗೆಯಲ್ಲಿ ನಿತ್ಯ ಸಂಗಾತಿ ಅಂದರೆ ಬಡತನ. ಅದು ಕಾಡುವ, ಹಿಂಸಿಸುವ, ಅವಮಾನಿಸುವ, ಕ್ಷಣವೂ ಸಾಯಿಸುವ ಬಡತನ. ಅನ್ನವಿಲ್ಲ, ಉಡುಪಿಲ್ಲ, ಆಶ್ರಯವೊಂದನ್ನು ಬಿಟ್ಟರೆ ಇನ್ನೆಲ್ಲವೂ ಇಲ್ಲಗಳ ಸಾಮ್ರಾಜ್ಯ. ಹಸಿವು ಆಪ್ತಮಿತ್ರ. ಇಂಥ ದಿನಗಳಲ್ಲಿ ನಮ್ಮನ್ನ ಅದರಲ್ಲೂ ನನ್ನ ಉತ್ತರಕನ್ನಡ ಜಿಲ್ಲೆಯ ಪರಿಮಿತಿಯಲ್ಲಿ ಜೀವಂತವಾಗಿ, ನಿರೀಕ್ಷೆಯ ನೇಸರದಲ್ಲಿ ಹಸಿವನ್ನ ಮರೆಯುವ ದಿವ್ಯ ಪಠಣ, ಮಂತ್ರವಾಗಿ ಸಂದದ್ದು, ಸಲ್ಲುತ್ತಿದ್ದುದ್ದು ಚೌತಿ, ಗಣೇಶ ಬಿಟ್ಟರೆ ಹನ್ನೊಂದು ದಿನಗಳ ಮೊದಲು ರಾತ್ರಿ ಬಂದು ಒಂದಿಷ್ಟು ಗೋಧಿದೋಸೆ, ಹೆಸರು ಕಾಳಿನ ಪಾಯಸ ನೀಡಿ, ಮುದ್ದಿಸಿ ಹಸಿದು ಹೆಂಚಾಗಿದ್ದ ಹೊಟ್ಟೆಯನ್ನ ತಣ್ಣಗಾಗಿಸಿ ಕೃಷ್ಣ , ಪರ್ಯಾಯವಾಗಿ ಅಷ್ಟಮಿ.

ಅಷ್ಟಮಿ ಹಬ್ಬವಾದರೂ ಒಂದು ರೀತಿಯಲ್ಲಿ ಬಡವರಿಗೆ ಆಪ್ಷನಲ್. ಆವರ್ಷ, ಆದಿನ ಕೈಗೆ ಎಟಕುವ ಸಾಧ್ಯಾಸಾಧ್ಯತೆಯಲ್ಲಿ ಅವರವರ ಮನೆಗೆ ಹಬ್ಬ. ಮನೆ ಯಜಮಾನನಿಗೆ ಹಣದ ಒದಗಣೆಯೂ ಸಾಲಕೊಡುವ ಅಂಗಡಿಯಾತನ ಔದಾರ್ಯ ಒಲಿದರೆ ಕೃಷ್ಣಾಷ್ಟಮಿ. ಇಲ್ಲವಾದರೆ ಕೃಷ್ಣಾರ್ಪಣ. ನನ್ನ ಕಾಲೇಜು ಅವಧಿಯವರೆಗೆ ಕನಿಷ್ಠ ಪಕ್ಷ ನಾಲ್ಕೈದು ಬಾರಿ ಅಷ್ಟಮಿ ಹಬ್ಬದ ದಿನ ಅಣ್ಣ (ಅಪ್ಪ) ಸಾಮಾನು ತರುತ್ತಾರೆ ಎಂದು ಹತ್ತು ಗಂಟೆಯವರೆಗೂ ಚಿಮಣಿ ದೀಪದಲ್ಲಿ ಕಾದು, ದೀಪಕ್ಕೂ ಎಣ್ಣೆ ಆರಿ ಕತ್ತಲಾದದ್ದು. ಹಸಿದ ಹೊಟ್ಟೆ ಮತ್ತು ಪಾಯಸ, ಗೋದಿ ದೋಸೆಯ ನಿರೀಕ್ಷೆಯ ಬಾಯೂರಿಕೆಯಲ್ಲೇ ನಿದ್ದೆ ಹೋಗಿ ಬೆಳಿಗ್ಗೆ ಎದ್ದು ಕುಳಿತಾಗ ತುಳಸಿಕಟ್ಟೆ ಕಬ್ಬು, ಮಾವಿನ ತುಂಕೆ, ಹೂವು, ಹರಿವಾಣ, ರಂಗೋಲಿ, ಯಾವುದರ ಶೃಂಗಾರವೂ ಇಲ್ಲದೆ ಬಸವಳಿದ ನೋಟ ಬೆದರಿಸಿದ್ದು, ಅಳು ತರಿಸಿದ್ದು ಇಂದಿಗೂ ಕಾಡುವ ಕಾಳನೆನಪು. ಆದರೆ ಚೌತಿ ಹಾಗಲ್ಲ. ಅದಕ್ಕೆ ಕನಿಷ್ಠ ಆರು ತಿಂಗಳ ತಯಾರಿ ನಡೆಯುತ್ತಿತ್ತು. ಅಣ್ಣ ಚೌತಿಯ ಐದು ದಿನಗಳ ಹಬ್ಬಕ್ಕಾಗಿಯೇ ಸಿದ್ದಾಪುರ ಘಟ್ಟದ ಸೀಮೆಯ ಹೆಗಡೆಯವರ ಮನೆ ಅಡಿಕೆ ತೋಟಕ್ಕೆ ಕೊಟ್ಟೆ ಕಟ್ಟಲು ಹೋಗುತ್ತಿದ್ದರು. ಚೌತಿ ಖರ್ಚಿಗೆ ಹಣವನ್ನ ಕೂಡಿಸಿಕೊಂಡು ಬರುತ್ತಿದ್ದರು. ಮಕ್ಕಳಾದ ನಮಗೆ ಅಣ್ಣ ಘಟ್ಟದಿಂದ ಹಣ ತರುತ್ತಾರೆ, ಚೌತಿ ಭರ್ಜರಿಯಾಗಿ ಆಗುತ್ತದೆ. ವರ್ಷದ ಹಸಿವು ಇಂಗುವ ಸಂಭ್ರಮಕ್ಕೆ ನಾವು ಆಗಿನಿಂದಲೇ ಸಿದ್ಧಗೊಳ್ಳುತ್ತಿದ್ದೆವು.

ಚೌತಿ ಚೌತಿಯೇ

ವರ್ಷದಲ್ಲಿ ದೀಪಾವಳಿ, ನವರಾತ್ರಿ, ಗಂಟಿಹಬ್ಬ (ಗೋವಿನ ಹಬ್ಬ) ಇತ್ಯಾದಿ ಬರುತ್ತಿದ್ದರೂ ಅವುಗಳು ಬಡತನದ ರೇಖೆಯಲ್ಲಿ ನಿಂತ ಸಮಾಜಕ್ಕೆ, ಸಮುದಾಯಕ್ಕೆ ಒಟ್ಟಾಗಿ ಅವುಚಿಕೊಳ್ಳುವ ಗಂಟಿ (ಗೋವು) ಹಬ್ಬದ ಗೋಗ್ರಾಸ (ಅರಸಿನ ದೋಸೆ, ಅನ್ನ, ಬಾಳೆಹಣ್ಣು, ತುಪ್ಪ, ಬೆಲ್ಲ, ಮಿಕ್‌ಸ್ ಮಾಡಿ ಗಿಮಚಿ ಬೇಯಿಸುವ ಅತಿ ವಿಶಿಷ್ಟ ತಿನಿಸು) ಹೊಟ್ಟೆ ತುಂಬಾ ಸಿಗುತ್ತಿದ್ದರೂ ಗಣಪತಿ ಚೌತಿ ಕನಿಷ್ಠ ಒಂದು ವಾರ ನಮ್ಮ ಪಂಚೇಂದ್ರಿಯಗಳಿಗೂ ಸುಗ್ರಾಸ ಒದಗಿಸುತ್ತಿದ್ದ ಹಬ್ಬ. ಚೌತಿಗೆ ಬಡತನದ ಸೋಂಕಿಲ್ಲ. ಕಂಜೂಸುತನವಿಲ್ಲ. ‘ದೊಡ್ಡವರಿಗೆಲ್ಲ ಬೇಕು, ಮಕ್ಕಳಿಗೆ ಇಷ್ಟೇ. ಬೇಕು ಅಂತ ಹಟ ಮಾಡಬೇಡಿ ಆಯ್ತಾ’ ಅನ್ನುವ ಆಯಿ, ಚಿಕ್ಕಮ್ಮ, ಅಜ್ಜಿಯರ ಕಿವಿಮಾತು, ಕಡಕ್ ಚೌತಿಗೆ ಇರುತ್ತಿರಲಿಲ್ಲ. ಹಾಗೇ ನಾವು ಮಕ್ಕಳು ಚೌತಿಗೆ ವಾರವಿರುವಾಗಲೇ ಒಂದು ಮೂರ್ನಾಲ್ಕು ಡಬ್ಬಿಗಳನ್ನು ತೊಳೆದು ಹುಗ್ಗಿಸಿ (ಕದ್ದು ಮುಚ್ಚಿ) ಇಟ್ಟುಕೊಳ್ಳುತ್ತಿದ್ದೆವು. ಪಂಚಕಜ್ಜಾಯ, ವಡೆ, ಚಕ್ಕುಲಿ, ಅತ್ರಾಸ, ಹೀಗೆ ಎಲ್ಲವೂ ದೊಡ್ಡ ದೊಡ್ಡ ದಳ್ಳೆಗಳಲ್ಲಿ ಮಾಡಿಡುತ್ತಿದ್ದರು.

ಆ ದಿನಗಳಲ್ಲಿ ಗಣಪತಿ ನೋಡಲು ಬರುವವರ ಸಂಖ್ಯೆಯೂ ತಂಡೋಪತಂಡ. ಅವರಿಗೆ ಪ್ರಸಾದ ರೂಪದಲ್ಲಿ ಪಂಚಕಜ್ಜಾಯ, ಚಕ್ಕುಲಿ, ವಡೆ, ಅತ್ರಾಸ ಕೊಡುವುದು ರೂಢಿ. ನಂತರ ರವೆ ಲಾಡನ್ನೂ ಮಾಡುತ್ತಾರೆ. ಉದ್ದಿನ ಉಂಡೆ, ಉಂಡೆಗಳಲ್ಲಿ ನಾಲ್ಕಾರು ಅನ್ನಿ.

ಇವೆಲ್ಲವನ್ನೂ ಬರುವ ನೆಂಟರು, ಜನರ ಮಧ್ಯೆ ಕೆಲವು ಬಾರಿ ಎಲ್ಲರೂ ಮಲಗಿದ ಮೇಲೆ ಡಬ್ಬಿಗಳಿಗೆ ಕೈಹಾಕಿ ಬಾಚಿಕೊಂಡು ನಮ್ಮ ನಮ್ಮ ಡಬ್ಬಿಗಳಲ್ಲಿ ತುಂಬಿ, ಅಟ್ಟದ ಮೇಲಿನ ಮೂಲೆಗಳಲ್ಲಿ ಇಟ್ಟುಕೊಳ್ಳುವುದು. ಚೌತಿ ಮುಗಿದ ನಂತರ ಶಾಲೆಗೆ ಹೋಗುವಾಗ ಮತ್ತು ಬಂದ ನಂತರ ಸ್ವಲ್ಪ ಸ್ವಲ್ಪವೇ ತಿನ್ನುವುದು. ಕೆಲವು ಬಾರಿ ಬಚ್ಚಿಟ್ಟ ಡಬ್ಬಿ ನನ್ನಂಥ ಹಿರಿಯ, ಶಕ್ತಿವಂತನ ಕದಿಯುವಿಕೆಗೆ ಒಳಗಾಗಿ ಅಬಲ ಕಿರುಮಕ್ಕಳ ಬೊಬ್ಬೆ, ನೋವು, ಜಗಳಕ್ಕೆ ಕಾರಣವಾಗುತ್ತಿದ್ದದ್ದೂ ಉಂಟು. ನನ್ನ ಕುಟುಂಬದಲ್ಲಿ ಮೊದಲಿಗ. ನನ್ನ ತಮ್ಮಂದಿರನ್ನ, ತಂಗಿಯರನ್ನ ತುಸು ಹೆದರಿಸಿ, ಬೆದರಿಸಿ (ತಿನ್ನುವ ಊಟದ ವಿಚಾರದಲ್ಲಿ) ನನ್ನದೇ ಒಂದು ‘ಹವಾ’ವನ್ನ ಕಾದುಕೊಂಡು ಬಂದವ. ಚೌತಿಯಲ್ಲಿಯೂ ಹೆಚ್ಚು ಡಬ್ಬಿಗಳೂ, ಹೆಚ್ಚು ಕಜ್ಜಾಯ, ತಿನಿಸುಗಳ ಸಂಗ್ರಹ ನನ್ನದೇ ಆಗಿರುತ್ತಿತ್ತು.

ಹಾಗೇ ಗಣಪತಿ ನೋಡಲು ಕೇರಿಗೆ, ಊರಿಗೆ, ಪೇಟೆಗೆ ಹೋಗುತ್ತಿದ್ದೆವು. ಅಲ್ಲಿಯೂ ಪಂಚಕಜ್ಜಾಯ ಮತ್ತಿತರ ತಿಂಡಿ ತಿನಿಸುಗಳನ್ನ ಕೊಡುತ್ತಿದ್ದರು. ನಾವು ಹೋಗುವಾಗ ದೊಡ್ಡದಾದ ಚೀಲಗಳನ್ನ ಕೊಂಡೊಯ್ಯುತ್ತಿದ್ದೆವು. ಅವೂ ಒಂದಷ್ಟು ಶೇಖರಣೆಗೊಳ್ಳುತ್ತಿದ್ದವು. ನನ್ನ ಅಪ್ಪನ ಕುಟ್ಟಪ್ಪಚ್ಚಿ, ಅವನಿಗೆ ನಾನೆಂದರೆ ಪ್ರೀತಿ. ಹಾಗಾಗಿ ಅವನೂ ಹೊರಗಡೆಗೆ ದಂಡಾವಳಿ (ಗಣಪತಿ ಎದುರು ಬಾಳೆ ರೆಂಬೆಗಳಿಂದ ಮಾಡುವ ಹರಕೆಯ ಅಲಂಕಾರ. ಇದೊಂದು ಅತ್ಯಪೂರ್ವ ಕಲೆ) ಮಾಡಲು ಹೋಗುತ್ತಿದ್ದ. ಆ ಕಲೆಯಲ್ಲಿ ಕುಟ್ಟಪ್ಪಚ್ಚಿ , ನನ್ನ ಅಣ್ಣ (ಅಪ್ಪ) ಪರಿಣಿತರು. ಅವನೂ ತಂದ ಕಜ್ಜಾಯವನ್ನು ಕೊಡುತ್ತಿದ್ದ. ಹಾಗಾಗಿ ನನ್ನ ಜೋಳಿಗೆ ಸಮೃದ್ಧ. ಹೀಗೆ ಗಣೇಶ ನಮ್ಮ ವರ್ಗದ ಸಮೃದ್ಧ ಊಟೋಪಹಾರ, ಗಾಢ ತಿನ್ನುವ ಹಸಿವನ್ನ ನೀಗಿಸುವ ನಮ್ಮೆಲ್ಲರ ಪ್ರೀತಿಯ ದೇವರು. ನಮ್ಮ ಮನೆಗೆ ಬಂದು ಕುಳಿತ ಆ ಐದೂ ದಿನಗಳೂ ನಾವು ಕಡುಬಡತನದ ಹಿನ್ನೆಲೆ ಯವರೆಂಬ ಕಿಂಚಿತ್ತೂ ನೆನಪನ್ನ ಉಳಿಸದಂತೆ ಸಮೃದ್ಧತೆಯನ್ನ ಮನೆ ತುಂಬಿಸುವ ದೇವರು. ಅವನು ಹೊರಾಡಾಂಬರ, ಸಮೃದ್ಧತೆಯ ಪ್ರತೀಕವಲ್ಲ. ಅವನದ್ದೇನಿದ್ದರೂ ಒಳಾಂತರಂಗದ ಖುಷಿ, ತೃಪ್ತಿ, ಸುಖ, ಸಂಭ್ರಮ ಉಕ್ಕಿಸುವ ಕೆಲಸ.

ಏಕತ್ರಗೊಳಿಸುವ ಹಬ್ಬ

ಗಣಪತಿ ಸರ್ವಸಮಾನತೆಯನ್ನ ಸಾರುವ ದೇವ. ಗಣಪತಿ ಕೂರಿಸುವಿಕೆ, ಆರಾಧಿಸುವಿಕೆ ಮತ್ತು ಅವನ ಪೂಜಿಸುವಿಕೆಯಲ್ಲಿ ಜಾತಿ ಗಣನೆ ನಗಣ್ಯ. ಬಡವ ಬಲ್ಲಿದ ಇಲ್ಲವೇ ಇಲ್ಲ. ಚೌತಿಹಬ್ಬದ ಹೊತ್ತಲ್ಲಿ ಇಡೀ ಸಮಾಜ ಒಂದಾಗುವ, ತರತಮತೆ, ಅಂತಸ್ತು, ಮೇಲು ಕೀಳುಗಳನ್ನ ಮರೆಯುವ ಅತಿ ವಿಶಿಷ್ಟ ಕಾಲವದು. ಎಲ್ಲರೂ ಎಲ್ಲರ ಮನೆಗೂ ಹೋಗುತ್ತಾರೆ. ಪ್ರಸಾದ ಸ್ವೀಕರಿಸುತ್ತಾರೆ. ಕೊಡುಕೊಳ್ಳುತ್ತಾರೆ. ಸಮೂಹ, ಸಮುದಾಯ ತಂತಮ್ಮ ಮಧ್ಯೆಯ ಎಲ್ಲಾ ಫರಕ್ಕುಗಳನ್ನ ಕಿತ್ತೊಗೆದು ಗಣಪನ ನಾಮ ಸ್ಮರಣೆ, ಸಂಭ್ರಮದಲ್ಲಿ ಏಕತ್ರಗೊಳ್ಳುವ ದಿವ್ಯಕ್ಷಣ, ಶಕ್ತಿ ಚೌತಿಯ ವಿಶೇಷ, ವೈಶಿಷ್ಟ್ಯ.

ಹಾಗೇ ಪುರೋಹಿತ ಶಾಹಿಯ ಪೂಜಾಸಂಸ್ಕೃತಿಯ ವಿಕೇಂದ್ರಿಕರಣದ ಸಾಂಕೇತಿಕ ಆಚರಣೆಯೂ, ಆ ಪುರೋಹಿತ ಶಾಹಿಯ ಪೂಜಾಸಂಸ್ಕೃತಿಯ ಆಚಾರ, ಪದ್ಧತಿಯ ಕಟ್ಟೆಗಳನ್ನ ಒಡೆಯುವ ವಿಘಟಿತ ಸಂಸ್ಕೃತಿಯೂ ಇದಾಗಿದೆ. ಬ್ರಾಹ್ಮಣ ಮಾತ್ರ ಪೂಜೆ, ಪುನಸ್ಕಾರ ಮಾಡಬೇಕೆಂಬ ಕಟ್ಟುಪಾಡಿನ ಸಾರ್ವತ್ರೀಕರಣದ ಸ್ವರೂಪವೂ ಗಣಪತಿ ಆರಾಧನೆ. ಗರ್ಭಗುಡಿಯಲ್ಲಿ ಬಂಧಿಯಾಗಿದ್ದ ಪೂಜಾಸಂಸ್ಕೃತಿಯಿಂದ ಗಣಪನನ್ನು ಹೊರತರುವ ಮೂಲಕ ತಿಲಕರು ಜನಸಮುದಾಯಕ್ಕೆ ಗಣಪತಿಯನ್ನು ಮನೆದೇವರನ್ನಾಗಿಸಿದ್ದಷ್ಟೇ ಅಲ್ಲ, ನೇರಪೂಜೆಯ ಕೈಂಕರ್ಯವನ್ನು ಧಾರೆ ಎರೆಯುವ ಐತಿಹಾಸಿಕ ಸ್ವಾತಂತ್ರ್ಯವನ್ನೂ ನೀಡಿದ್ದು ವಿಶೇಷ. ಗಣಪತಿ ಈ ಸಮಾಜದ ನಿಜವಾದ ಕ್ರಾಂತಿಕಾರಿ ಮತ್ತು ಸರ್ವಸಮ್ಮತ, ಸರ್ವರಿಗೂ ಸಮನಾಗಿ ತನ್ನನ್ನ ಒಪ್ಪಿಸಿಕೊಂಡ ದೇವರು. ಆ ಅರ್ಥದಲ್ಲೂ ನನ್ನ ಪ್ರೀತಿಯ ದೈವ. ನನ್ನ ಕುಲದೇವತೆ. ಜತೆಗೆ ನನ್ನ ಬಾಲ್ಯ, ಬಡತನ, ಹತಾಶೆ, ಹಸಿವಿನ ದಾವಾಗ್ನಿಯನ್ನ ಆರಿಸಿದ, ಅದಕ್ಕೂ ಒಂದು ಹೊಸ ಅರ್ಥ, ವ್ಯಾಖ್ಯೆಯನ್ನ ನೀಡಿದ ಮೂರ್ತಿರೂಪ.

ಮಣ್ಣಿನ ಗಣಪನೇ ಶ್ರೇಷ್ಠ

ಗಣಪತಿಯ ಅಭಿಷ್ಟೆ, ತನ್ನನ್ನ ಮಣ್ಣಿನಿಂದ ಮಾಡಿ ಪೂಜಿಸುವುದು. ಮುಷ್ಠಿ ಮಣ್ಣಿನಿಂದ ಮೆತ್ತಿದ ಮಣ್ಣಿನ ಮೂರುತಿಯೇ ಪವಿತ್ರ ಶ್ರೇಷ್ಠ, ಗಣಪತಿಯು ಪ್ರಸನ್ನನಾಗುವ ಬಗೆ ಎಂದೇ ಪುರಾಣಗಳು ಹೇಳುತ್ತವೆ. ಕಾರಣ ಅವನು ಪಾರ್ವತಿ ತನ್ನ ತೋಳಿನ ಬೆವರನ್ನು ಉಗುರಿನಿಂದ ಆವಿರ್ಭವಿಸಿದವನು. ಅವನೇ ಈ ನೆಲದ ಅಧಿದೇವತೆ. ಮಣ್ಣೇ ಅವನ ದೇಹಮನಸು. ಹಾಗಾಗಿ ನಮ್ಮ ಹಳ್ಳಿಗಳಲ್ಲಿ ಮೊದಲು ಮಣ್ಣಿನ ವರ್ಣರಹಿತ ಗಣಪನೇ ಮೂಲ ಮೂರುತಿ ಆಗಿದ್ದ. ಮಣ್ಣಿನಿಂದ ಬಂದ ಗಣಪ, ಈ ಮಣ್ಣು, ಈ ನೆಲ, ಈ ಜಲಕ್ಕೆ ವಿರೋಧವಾಗುವುದು ಎಂತು? ಅವನ ಸರಳ, ಸಾಧು, ಆಕಾರದಲ್ಲಿದ್ದು ನಿರಾಕಾರ ಸ್ವರೂಪಿ. ಅವನೆಂದೂ ಈ ಪ್ರಕೃತಿಗೆ ಹಾನಿಕಾರಕನಲ್ಲವೇ ಅಲ್ಲ.

ಗಣಪತಿ ಚೌತಿ ಬರಬರುತ್ತಾ ಜನರ ಶೋಕಿಯ ಪ್ರಶ್ನೆಯಾದದ್ದು, ಮನೆಮನದ ಆರಾಧನೆಯ ಭಾವ ಪ್ರತಿಷ್ಠೆ ಪ್ರದರ್ಶನದ ಪ್ರಶ್ನೆಯಾದದ್ದು ಆಧುನಿಕ ಜಗತ್ತಿನ ನಾಗರಿಕತೆಯ ಕೊಡುಗೆ. ಸರ್ವಧರ್ಮ ಸಮಾನತೆಯ ಸಾಮರಸ್ಯದ ‘ಚೌತಿ’ ಇಂದು ಧರ್ಮಕಲಹಕ್ಕೂ, ಮಾರಾಮಾರಿಗೂ, ಚಾಕು ಚೂರಿ ಸಂಸ್ಕೃತಿಯ ಮಾರಣಹೋಮಕ್ಕೂ ತುತ್ತಾಗಿದೆ. ಇದು ಆದಿಗಣಪಂಗೆ, ಅವನ ಉದ್ದೇಶ, ಮನೋಧರ್ಮಕ್ಕೆ ಈ ಸಮಾಜ ಎಸಗುತ್ತಿರುವ ದ್ರೋಹ.

ನಮ್ಮ ಮನೆಯಲ್ಲಿ ಇಂದಿಗೂ ಮಣ್ಣಿನ ಗಣಪ. ಅದಕ್ಕೆ ಸೋನರಿ ಬಣ್ಣ ಬಳಕೆ. ಕರ್ಕಿ ಭಂಡಾರಿ ಕುಟುಂಬದ ಕಲಾವಂತಿಕೆಯ ಪ್ರತೀಕ. ನಮ್ಮ ನಮ್ಮದೇ ಕೆರೆ ಬಾವಿಗಳಲ್ಲಿ ‘ಗಣಪತಿ ಬಪ್ಪ ಮೋರೈಯ್ಯಾ’ ಆದರೆ ಇಂದು ಬಾವಿ, ಕೆರೆ ತಟದಲ್ಲಿ ಇಟ್ಟು ಪ್ರೋಕ್ಷಣೆ ಮಾಡಿ, ನೆತ್ತಿಯ ಮೇಲೆ ನಾಲ್ಕು ತಂಬಿಗೆ ನೀರು ಹೊಯ್ಯುತ್ತಾರೆ. ಅಲ್ಲಿಗೆ ಗಣಪತಿಯನ್ನು ನೀರಿಗೆ ಹಾಕಿ ಕಳುಹಿಸುವ ಕೈಂಕರ್ಯಕ್ಕೆ ಕೊನೆ. ಆದರೆ ಪೇಟೆಪಟ್ಟಣ, ಅದರಲ್ಲೂ ಬೆಂಗಳೂರಿನಂಥ ಮಹಾನಗರಗಳಲ್ಲಿ ಮಣ್ಣಿನ ಗಣಪ ನಾಪತ್ತೆ. ಆ ಜಾಗದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಬಂದು ಕುಳಿತಿದೆ. ಅದು ಸಂಪೂರ್ಣ ವಿಷಕಾರಕ. ಅದನ್ನು ಕೆರೆಗಳಲ್ಲಿ ಮುಳುಗಿಸುವ ಮೂಲಕ ಅಂತರ್ಜಲ ವಿಷಯುಕ್ತ. ಗಣಪತಿ ಹಬ್ಬದ ಮೂಲಕ ಪ್ರತೀ ಕುಡಿಯುವ ಜೀವಜಲವೇ ವಿಷವಾಗುವುದಾದರೆ ಅದು ಗಣಪತಿಯ ತತ್ವ, ಆದರ್ಶಗಳಿಗೇ ವಿರುದ್ಧ.

ಬಿಬಿಎಂಪಿ ಗಣಪತಿಯ ಎತ್ತರವನ್ನ ಆರು ಅಡಿಗೆ ಸೀಮಿತಗೊಳಿಸಿದೆ. ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣಪನನ್ನ ಸಂಪೂರ್ಣ ನಿಷೇಧಿಸಿದೆ. ಆದರೂ ಬೆಂಗಳೂರಿನ ಗಲ್ಲಿಗಲ್ಲಿಗಳಲ್ಲಿ ಆಳೆತ್ತರದ ಬಣ್ಣಬಣ್ಣದ ಗಣಪತಿ ಕೂತಿದ್ದಾನೆ. ಗಣಪತಿ ನಮ್ಮ ಸಂವೇದನೆ. ಆತ್ಮ. ಅವನು ದೇವರೂ, ಗೆಳೆಯನೂ, ಬಂಧುವೂ ಎಲ್ಲವೂ. ಆದರೆ ಅವನ ಮೂರ್ತಿಯ ಮೂಲಕ ವ್ಯಾಪಾರ, ಹಣ ಮಾಡುವ ಖೂಳರು ಸಮಾಜ ಮತ್ತು ಪ್ರಕೃತಿವಿರೋಧ, ವಿಷಕಾರಕವಾಗಿ ವರ್ತಿಸಿದರೆ ಗಣಪತಿಯೇ ಸಹಿಸನು. ಹಾಗಾಗಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣಪನನ್ನು ಸಾಮಾಜಿಕರು , ಸಂಘ ಸಂಸ್ಥೆಗಳು ಮೊದಲು ಬಹಿಷ್ಕರಿಸಿ. ನಂತರ ಬಿಬಿಎಂಪಿ ಕಾನೂನು ಕಾಗೆ ಹಾರಿಸಿ ಕುಳಿತುಕೊಳ್ಳುವ ಬದಲು ಅದನ್ನ ದಯದಾಕ್ಷಿಣ್ಯ, ದೇವರೆಂಬ ಸಂವೇದನೆಗೆ, ಸೂಕ್ಷ್ಮತೆಗೆ ಒಳಗಾಗದೆ ಕಾರ್ಯರೂಪಕ್ಕೆ ತರಲಿ. ಪ್ರಕೃತಿಗೆ ವಿರುದ್ಧವಾಗಿ ನಡೆದುಕೊಂಡರೆ ಪ್ರತಿಫಲ, ಪರಿಣಾಮ ಏನಾಗುತ್ತದೆ ಅನ್ನುವುದಕ್ಕೆ ಕೊಡಗು, ಕೇರಳ ನಮ್ಮೆದುರಿನ ಪ್ರಮಾಣ ಸಾಕ್ಷಿ. ಕ್ಷಣಮಾತ್ರದಲ್ಲಿ ಭಧ್ರವಾಗಿ ನೆಲೆಯೂರಿದ ಬದುಕು ಕೊಚ್ಚಿ ಕರಾಳವಾದದ್ದು ನಮ್ಮನ್ನ ಎಚ್ಚರಿಸದಿದ್ದರೆ ಇನ್ನಾವುದು ಗಂಟೆಯಾಗಬೇಕೋ ಈ ಮನುಷ್ಯ ಕುಲಕ್ಕೆ?

Tags

Related Articles

Leave a Reply

Your email address will not be published. Required fields are marked *

Language
Close