About Us Advertise with us Be a Reporter E-Paper

ಗುರು

ಮೋದಕ ಪ್ರಿಯನಿಗೆ ಮೂರ್ತರೂಪ

ರಾಘವೇಂದ್ರ ಬಾಗಲವಾಡಿ

ಶಿವ ಪಾರ್ವತಿಯ ಪ್ರೀತಿಯ ಸುತ, ಸಂಸಾರದ ವಿಘ್ನಗಳನ್ನು ಪರಿಹರಿಸುವ ಕಾರುಣ್ಯ ಮೂರ್ತಿ ಗಣಪ ಮನೆಗೆ ಬರಲು ತುದಿಗಾಲಲ್ಲಿ ನಿಂತಿದ್ದಾನೆ. ಭಾದ್ರಪದ ಮಾಸದ ಶುಕ್ಲಪದ ಚೌತಿ ಇನ್ನೇನು ಕೆಲವೇ ದಿನಗಳಲ್ಲಿ ಬರಲಿದ್ದು, ದೇಶದಾದ್ಯಂತ ಜನತೆ  ಗಣೇಶ ಚತುರ್ಥಿ ಆಚರಿಸಲು ಕಾಯುತ್ತಿದ್ದಾರೆ.

ಭಾರತೀಯರಲ್ಲಿ ಬಾಂಧವ್ಯ ಬೆಸೆಯಲು ಲೋಕಮಾನ್ಯ ಬಾಲಗಂಗಾಧರ ತಿಲಕರು ಆರಂಭಿಸಿದ ಸಾರ್ವಜನಿಕ ಗಣೇಶ ಹಬ್ಬವು ಇಂದು ದೇಶದ ಬೀದಿ ಬೀದಿಗಳನ್ನಾವರಿಸಿದೆ. ನಾನಾ ಬಗೆಯ ಮೂರ್ತಿಗಳು ಕಲಾವಿದರ ಕೈಯಲ್ಲರಳಿ ಪ್ರತಿಷ್ಠಾಪಿಸಲ್ಪಡುತ್ತದೆ. ಈ ಸಂಭ್ರಮದ ನಡುವೆ ಕಳೆದ 25 ವರ್ಷಗಳಿಂದ ಮೋದಕ ಪ್ರಿಯನಿಗೆ ಮೂರ್ತರೂಪ ಕೊಡುವಲ್ಲಿ ಅಪ್ರತಿಮರಾದವರು ಧಾರವಾಡದ ರವಿಶಂಕರ್ ಚಿತ್ರಗಾರ.

‘ಕಲೆ ಎಲ್ಲರನ್ನು ಕೈ ಬೀಸಿ ಕರೆಯುತ್ತದೆ. ಆದರೆ ಕೆಲವರನ್ನು ಮಾತ್ರ ಆರಿಸಿಕೊಳ್ಳುತ್ತದೆ’ ಎಂಬುದು ಹಿರಿಯರ,  ಮಾತು. ಆದರೆ ಕಲೆಯನ್ನು ಹವ್ಯಾಸವನ್ನಾಗಿಸಿ ಹೆಸರು ಮಾಡಿದವರು ಧಾರವಾಡದ ಸುಪ್ರಸಿದ್ಧ ‘ಮಹಾರಾಷ್ಟ್ರ ಮಾದರಿಯ ಶುದ್ಧ ಮಣ್ಣಿನ, ಶ್ರೀಗಂಧ ಲೇಪಿತ, ಪರಿಸರ ಸ್ನೇಹಿ ಧಗಢೂಶೇಠ ಗಣಪತಿ’ ತಯಾರಕ ರವಿಶಂಕರ್ ಚಿತ್ರಗಾರ ಕೂಡ ಒಬ್ಬರು. ಕಲಾವಿದ ಕುಟುಂಬಸ್ಥರು ತಲತಲಾಂತರದಿಂದ ಮಾಡಿಕೊಂಡ ಬಂದ ಮೂರ್ತಿ, ವಿಗ್ರಹಗಳ ನಿರ್ಮಾಣ ಕಾರ್ಯವನ್ನು ರವಿಶಂಕರ್ ಮುಂದುವರೆಸಿಕೊಂಡು ಬಂದಿದ್ದಾರೆ.

ಧಾರವಾಡದ್ಯಾಂತ ನಡೆಯುವ ಗಣೇಶೋತ್ಸವಗಳಿಗೆ ಮೂರ್ತಿಗಳನ್ನು ತಯಾರಿಸಿ ಕೊಡುವ ಕಾಯಕದಲ್ಲಿ ತೊಡಗಿಕೊಂಡಿರುವ ರವಿಶಂಕರ ಚಿತ್ರಗಾರ, ಚಿಕ್ಕ ವಯಸ್ಸಿನಿಂದಲೇ ಶ್ರದ್ಧೆ, ಭಕ್ತಿಯಿಂದ  ಮಾಡುವ ಕಾಯಕದಲ್ಲಿ ತೊಡಗಿಕೊಂಡವರು. ಇವರು ಧಾರವಾಡ ಮಾಳಮಡ್ಡಿಯ ಗೋಪಾಲಪುರದ ಬಡಾವಣೆಯ ಕೆ.ಇ.ಬೋರ್ಡ್ ಶಾಲೆ ಸಮೀಪ ವರ್ಷದ ಆರು ತಿಂಗಳು ವಿವಿಧ ಆಕೃತಿಗಳ ಸಾವಿರಕ್ಕೂ ಅಧಿಕ ಮೂರ್ತಿಗಳನ್ನು ಬೇಡಿಕೆಗನುಗುಣವಾಗಿ ತಯಾರಿಸುತ್ತಾರೆ. ಉಳಿದ ಸಮಯದಲ್ಲಿ ಎಲೆಕ್ಟ್ರಿಷಿಯನ್ ಮತ್ತು ಸೀಸದ ಕೆಲಸ ಮಾಡಿ ಜೀವನ ಸಾಗಿಸುತ್ತಾರೆ.

ಮಳೆಗಾಲದಲ್ಲೇ ಪ್ರಾರಂಭ

ಮಣ್ಣಿನಿಂದ ಸಾವಿರಾರು ಮೂರ್ತಿಗಳನ್ನು ಮಾಡುವುದು ಕಷ್ಟದ ಕೆಲಸ. ಅದರಲ್ಲೂ ಬೇಡಿಕೆ ಹೆಚ್ಚಿದ್ದಾಗ ಹಸಿ ಮೂರ್ತಿಗಳು ಒಣಗುವುದು ಕಷ್ಟ. ಹೀಗಾಗಿ ರವಿಶಂಕರ್ ಶಿಗ್ಗಾವಿ ಸಮೀಪದಿಂದ  ಮಣ್ಣನ್ನು ತಂದು ಗಣೇಶನ ಮೂರ್ತಿಗಳನ್ನು ನಿರ್ಮಿಸುತ್ತಾರೆ.

ಸಮರ್ಪಕ ಜೇಡಿ ಮಣ್ಣಿನ ಪೊರೈಕೆ ಇಲ್ಲದಿರುವುದು ಮತ್ತು ರಾಸಾಯನಿಕ ಯುಕ್ತ ಬಣ್ಣವನ್ನು ಸರಕಾರ ನಿಷೇಧಿಸಿರುವುದರಿಂದ ಜಲವರ್ಣಗಳನ್ನೇ ಬಳಸುತ್ತಾರೆ. ಹೀಗಾಗಿ ಮೂರ್ತಿ ತಯಾರಿಕೆಯ ವೆಚ್ಚ ಅಧಿಕವಾಗಿದೆ. ಒಂದುವರೆ ಇಂಚಿನಿಂದ ಮೂರು ಅಡಿ ಗಾತ್ರದ ಗಣಪತಿ ಮೂರ್ತಿಗಳನ್ನು ಗ್ರಾಹಕರ ಅಭಿರುಚಿಗೆ ಹಾಗೂ ಬೇಡಿಕೆ ತಕ್ಕಂತೆ ತಯಾರಿಸಿಕೊಡುತ್ತಾರೆ.

ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚಾಗುತ್ತಿದ್ದು, ಕಳೆದ 2-3 ತಿಂಗಳಿಂದ ಮೂರ್ತಿ ತಯಾರಿಕೆಯಲ್ಲಿ ತೊಡಗಿಕೊಂಡಿರುವ ಇವರು ಹತ್ತು ದೊಡ್ಡ  ಸಾವಿರಕ್ಕೂ ಹೆಚ್ಚು ಸಣ್ಣ ಗಣಪತಿಗಳನ್ನು ಸಿದ್ಧಗೊಳಿಸಿದ್ದಾರೆ. ಬೇಡಿಕೆಗನುಸಾರವಾಗಿ ನಿರ್ಮಾಣ ಗೊಳ್ಳುವ ಮೂರ್ತಿಗಳಿಗೆ ಹಬ್ಬಕ್ಕೆ ಒಂದು ವಾರ ಮೊದಲು ಬಣ್ಣ ನೀಡುತ್ತಾರೆ. ಚತುರ್ಥಿ ದಿನ ದೃಷ್ಟಿ ಬಿಡಿಸಿ, ಕಲೆ ಕೊಡುತ್ತಾರೆ. ಕೊನೆ ಹಂತದ ಕೈಚಳಕದಲ್ಲಿ ಗಣೇಶ ತಯಾರಿಸುವಾಗ ಬಿಳಿ ಹಾಗೂ ಗುಲಾಬಿ ಮಿಶ್ರಿತ ಬಣ್ಣಗಳನ್ನು ಸಿಂಪಡಿಸುತ್ತಾರೆ. ವರ್ಷದಿಂದ ವರ್ಷಕ್ಕೆ ರವಿಶಂಕರ್ ಜವಾಬ್ದಾರಿ ಹೆಚ್ಚುತ್ತಿದ್ದು, ಪರಿಸರ ಸ್ನೇಹಿ ಗಣಪತಿ ತಯಾರಿಸುವುದು, ಪಿಒಪಿ ಮೂರ್ತಿಗಳನ್ನು ಸಂಪೂರ್ಣವಾಗಿ ನಿಲ್ಲಿಸಿ ಎಂದು ಗ್ರಾಹಕರಲ್ಲಿ ಪರಿಸರದ ಬಗ್ಗೆ  ಮೂಡಿಸುತ್ತಿದ್ದಾರೆ. ಜೇಡಿ ಮಣ್ಣಿನ ಗಣೇಶನನ್ನು ತಯಾರಿಸಿ ಜಲಚರ, ಪರಿಸರ ರಕ್ಷಿಸಬೇಕೆನ್ನುವುದು ಇವರ ಮನವಿ.

ಚಿತ್ರಗಾರರು ಗಣಪತಿ ಮೂರ್ತಿಯ ಜತೆಯಲ್ಲಿ ನಾಗರಪಂಚಮಿಯ ನಾಗಪ್ಪ, ಗೋಕಲಾಷ್ಟಮಿಯ ಕೃಷ್ಣ- ಬಲರಾಮ ಮೂರ್ತಿಯನ್ನು ತಯಾರಿಸುತ್ತಾರೆ. ಪೇಂಟಿಂಗ್ ಮಾಡುವಲ್ಲಿ ಇವರ ಪತ್ನಿಯದು ಎತ್ತಿದ ಕೈ. ಇವರ ಎಲ್ಲಾ ಕೆಲಸಗಳಿಗೆ ಕುಟುಂಬಸ್ಥರು ಸಾಥ್ ನೀಡುತ್ತಾರೆ. ಅಷ್ಟೇ ಅಲ್ಲದೆ ಇವರ ಸಹೋದರ ಕಲ್ಲಿನ ವಿಗ್ರಹಗಳನ್ನು ಕೆತ್ತುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಈ ಮೂಲಕ ಅವಳಿನಗರಾದ್ಯಂತ ಚಿತ್ರಗಾರ ಕುಟುಂಬದವರು ಪ್ರಸಿದ್ಧರಾಗಿದ್ದಾರೆ. ಧಾರವಾಡ  ಬಜಾರದಲ್ಲಿರುವ ಹನುಮಂತ ದೇವರ ಬೃಹದಾಕಾರದ ಮೂರ್ತಿ ಇವರ ಸಹೋದರನ ಕೈಚಳಕದಿಂದ ಮೂಡಿದೆ.

Tags

Related Articles

Leave a Reply

Your email address will not be published. Required fields are marked *

Language
Close