About Us Advertise with us Be a Reporter E-Paper

ವಿ +

ಸುಂದರಾಭಿನಯದ ಪ್ರಜ್ಞಾಳ ಲವಲವಿಕೆಯ ನರ್ತನ

 ವೈ.ಕೆ.ಸಂಧ್ಯಾ ಶರ್ಮ

ಭಾರತದ ಪರಿಸರದಲ್ಲಿದ್ದು, ಪ್ರತಿನಿತ್ಯ  ಸನಾತನ ಪರಂಪರೆಯ ಅನುಭವಕ್ಕೆ ಬಂದರೆ ಅವರಲ್ಲಿ ಕಲೆಯ ಒಲವು ಬೆಳೆಯುವುದು ಅತ್ಯಂತ ಸಹಜ. ಆದರೆ ಕಡಲಾಚೆಯ ದೇಶದಲ್ಲಿದ್ದು ಭರತನಾಟ್ಯ, ಸಂಗೀತದ ಸದಭಿರುಚಿ ಮೈಗೂಡಿಸಿಕೊಳ್ಳುವುದು ವಿಶೇಷವೇ ಸರಿ. ಆ ಪೈಕಿ ದುಬೈನಲ್ಲಿ ವಾಸವಾಗಿರುವ ಅನಂತ್ ಹಾಗೂ ಶ್ರೀಲೇಖಾ ದಂಪತಿಯ ಪುತ್ರಿ ಪ್ರಜ್ಞಾ ಅನಂತ್, ಸಂಗೀತ-ನೃತ್ಯಗಳಲ್ಲಿ ಅಪಾರ ಆಸಕ್ತಿ. ಸದ್ಯ ಸಪ್ನಾ ಕಿರಣ್ ಅವರ ಶಿಷ್ಯೆಯಾಗಿ ನೃತ್ಯಾಭ್ಯಾಸ ಮಾಡುತ್ತಿದ್ದು, ಇತ್ತೀಚೆಗೆ ನಗದ ಗಾಯನ ಸಮಾಜದಲ್ಲಿ ತನ್ನ ರಂಗಪ್ರವೇಶ ನೆರವೇರಿಸಿಕೊಂಡಳು. ಅವಳು ಪ್ರಸ್ತುತಪಡಿಸಿದ  ಅಭಿನಯ ಪ್ರಧಾನವಾಗಿದ್ದುದ ಬಹಳ ವಿಶೇಷವಾಗಿತ್ತು.

ಶುಭಾರಂಭದ ‘ಪುಷ್ಪಾಂಜಲಿ’ಯಲ್ಲಿ ರಂಗಸ್ಥಳ, ನಟರಾಜ, ಗುರು-ಹಿರಿಯರು ಮತ್ತು ಕಲಾರಸಿಕರಿಗೆ ವಂದನೆ ಸಲ್ಲಿಸಿ, ನಾಟೈ ರಾಗದ ತ್ರಿಶ್ರಜಾತಿಯ ‘ಅಲ್ಲರಿಪು’ವನ್ನು ಮನೋಹರ ವಾಗಿ, ಆತ್ಮವಿಶ್ವಾಸದಿಂದ ಪ್ರಸ್ತುತಪಡಿಸಿದಳು. ಲಯ ಮತ್ತು ತಾಳಕ್ಕೆ ಪ್ರಾಶಸ್ತ್ಯ ನೀಡುವ ‘ಜತಿಸ್ವರ’ವನ್ನು ಆನಂದ-ಉತ್ಸಾಹ ಗಳಿಂದ, ಹಸನ್ಮುಖಳಾಗಿ ಹೆಜ್ಜೆ ಹಾಕಿದಳು. ಕ್ಲಿಷ್ಟವಾದ ಜತಿ ಗಳನ್ನು ಲೀಲಾಜಾಲವಾಗಿ ನಿರೂಪಿಸಿದಳು. ಅನಂತರ ತಂಜಾ ವೂರು ಅರುಣಾಚಲಂ ಪಿಳ್ಳೈ ವಿರಚಿತ ಮಿಶ್ರಛಾಪು ತಾಳ- ರಾಗಮಾಲಿಕೆಯ ‘ತಿತ್ತೈ ಅಂಬಲಂ’- ಎಂಬ  ಭಾವ ಪೂರ್ಣವಾಗಿ ಅಭಿವ್ಯಕವಾಯಿತು. ಶಿವನಲ್ಲಿ ಅಪರಿಮಿತ ಪ್ರೇಮವುಳ್ಳ ನಾಯಕಿ, ನಟರಾಜನ ನೃತ್ಯವೈಭವವನ್ನು ಮನಸಾರೆ ಹೊಗಳುತ್ತಾ, ‘ಅಂಥ ಅಪೂರ್ವ ಸ್ವಾಮಿಯೇ ನಾದರೂ ನಿನ್ನ ಭೇಟಿಯಾದರೆ ನನ್ನ ಪ್ರೇಮವನ್ನು ನಿವೇದಿಸು’ ಎಂದು ಸಖಿಯನ್ನು ಬೇಡಿಕೊಳ್ಳುತ್ತಾಳೆ. ತನ್ನೊಡೆಯನ ಬಗೆಗಿನ ನಾಯಕಿಯ ಅನನ್ಯ ಒಲವು-ಭಕ್ತಿಗಳನ್ನು ಪ್ರಜ್ಞಾ ಅತ್ಯದ್ಭುತವೆನ್ನುವಂತೆ ತೋರಿಸಿಕೊಟ್ಟಳು.

ನೃತ್ಯ ಪ್ರಸ್ತುತಿಯ ಪ್ರಧಾನ ಭಾಗ ‘ವರ್ಣ’. ದಂಡಾ ಯುಧಪಾಣಿ ಪಿಳ್ಳೈ ಅವರ ನವರಾಗ ಸಂಯೋಜಿತ ‘ಸ್ವಾಮಿಯೇ ಅಲೈ ತೋಡಿ ವಾ ಸಖೀಯೆ’ -ಶಿವನಲ್ಲಿ ಅನು  ವಿರಹೋತ್ಖಂಡಿತ ನಾಯಕಿಯ ವಿರಹವೇದನೆಯನ್ನು ಹೃದಯಸ್ಪರ್ಶಿಯಾಗಿ ಚಿತ್ರಿಸುತ್ತದೆ. ತನ್ನೊಡೆಯ ಶಿವನ ಮಹಿಮೆಯನ್ನು ನಾಯಕಿ ಸವಿಸ್ತಾರವಾಗಿ ಬಣ್ಣಿಸುತ್ತಾ, ಸಖಿ ಯಲ್ಲಿ ತನ್ನ ಮನದ ಅಳಲನ್ನು ತೋಡಿಕೊಳ್ಳುತ್ತಾಳೆ. ಅವನಿಲ್ಲದೆ ಯಾವ ಸುಖಗಳೂ ಹಿತ ತಾರವು, ಅವನೇ ತನ್ನ ಸರ್ವಸ್ವ ಎಂದು ಭಾವತುಂದಿಲಳಾಗಿ, ದಯನೀಯಳಾಗುವ ದೃಶ್ಯದಲ್ಲಿ, ಪ್ರಜ್ಞಾ, ಅವಳ ನೋವನ್ನು ತನ್ನೊಳಗೆ ಆವಾಹಿಸಿಕೊಂಡು ಸಹ ಜಾಭಿನಯದಿಂದ ಮಿಂಚಿದಳು. ನೃತ್ತಗಳ ಸರಮಾಲೆಯನ್ನೂ ಅಷ್ಟೇ ಮನೋಜ್ಞವಾಗಿ ನಿರ್ವಹಿಸಿದಳು. ಮೂರುಕಾಲಗಳಲ್ಲಿ ಮೂಡಿಬಂದ ಜತಿಗಳನ್ನೂ ಸರಾಗವಾಗಿ ನಿರೂಪಿಸುತ್ತ, ತೋರಿದ ಮನೋಹರ  ಕಲಾಕೌಶಲ್ಯದಲ್ಲಿ ಕಲಾವಿದೆ ಪ್ರಜ್ಞಾ, ರಸಿಕರ ಮನ ಸೆಳೆದಳು.

ಸಂತ ಕನಕದಾಸರು ರಚಿಸಿದ ‘ಯಾದವರಾಯ ಬೃಂದಾವನ ದೊಳು ವೇಣುನಾದವ ಮಾಡುತಿರೆ’ ಎಂಬ ದೇವರನಾಮ ಶೀ್ರೀಕೃಷ್ಣನ ಮಹೋನ್ನತೆಯನ್ನು ಮನಗಾಣಿಸುವ ಸುಂದರಾನು ಭೂತಿ. ಅದನ್ನು ಅಷ್ಟೇ ಸುಮನೋಹರವಾಗಿ ಸಾಕರಗೊಳಿಸಿ ದಳು ಪ್ರಜ್ಞಾ. ಹರಿಹರದೇವನ ‘ಕುಂಬಾರ ಗುಂಡಯ್ಯನ ರಗಳೆ’ ನಾಟಕೀಯ ಘಟನೆಗಳಿಂದ ಶೋಭಿಸಿದ ಒಂದು ಮನೋಜ್ಞ ಕೃತಿ. ಶಿವಭಕ್ತನಾದ ಗುಂಡಯ್ಯ, ಘಟ ಮಾಡುವ ತನ್ನ ಕಾಯಕದೊಳಗೆ ಶಿವನನ್ನು ಕಾಣುತ್ತ, ಘಟನಾದ ಮಾಡುತ್ತಾ, ಕೈಲಾಸದ ಶಿವನನ್ನು  ಒಲಿಸಿದ. ಅಷ್ಟೇ ಅಲ್ಲದೆ ಶಿವೆಯೊಂದಿಗೆ ಅವನ ಮುಂದೆ ಮನದಣಿಯೆ ತಾಂಡವ ನರ್ತನ ಮಾಡುವಂತೆ ಮಾಡಿದ ಮಹಾಭಕ್ತ. ಮುಗ್ಧಭಕ್ತನ ಭಕ್ತಿ ತಾದಾತ್ಮ್ಯತೆಗೆ ಒಲಿದ ಶಿವ ಅವನಿಗೆ ಗಣ ಪದವಿ ನೀಡಿ ಕಾಪಾಡಿದ ಅದ್ಭುತ ಸನ್ನಿವೇಶವನ್ನು ಕಲಾವಿದೆ ಕಣ್ಮುಂದೆ ತಂದು ನಿಲ್ಲಿಸಿದಳು. ‘ಅಡಿದನಾಡಿದ ಆಹಾ ಶಂಕರ’ ಎಂಬ ಸಾಲುಗಳಿಗೆ ಆಹ್ಲಾದಕರವಾಗಿ ನರ್ತಿಸಿದಳು ಪ್ರಜ್ಞಾ. ಮಿಂಚಿನ ಸಂಚಾರದ ನೃತ್ತಮಂಜರಿ, ಆಕಾಶಚಾರಿಗಳು, ಮುಕ್ತಾಯಗಳ ತಿಲ್ಲಾನ’ ದೊಂದಿಗೆ ಪ್ರಸ್ತುತಿ ಸಂಪನ್ನಗೊಂಡಿತು.

Related Articles

Leave a Reply

Your email address will not be published. Required fields are marked *

Language
Close