About Us Advertise with us Be a Reporter E-Paper

ವಿವಾಹ್

ನಮ್ಮನೆ ದೇವರ ದೀಪಕೆ ಹನಿ ಬೆಳಕ ತಗುಲಿಸು ಬಾ…

ಸದಾಶಿವ್ ಸೊರಟೂರು

ಲ್ಲಾ ತಲ್ಲಣಗಳು ಒಮ್ಮೆಲೆ ನುಗ್ಗಿದವು! ಕಣ್ಣಿಂಚಿನ ಚೂಪು ಆ ಮಟ್ಟಿಗೆ ತಿವಿದರೆ ನಾನಾದರೂ ಉಳಿಯುವುದು ಹೇಗೆ? ಪ್ರವಾಹದ ನೂಕಿನಲ್ಲಿ ಆಸೆಯ ಬಂಡೆಯ ತುದಿಯನ್ನು ಹಿಡಿದು ನಿಂತಿದ್ದು ಆ ಮಟ್ಟಿನ ಸಾಧನೆ. ಮರ ಸುತ್ತಿ, ಪಾರ್ಕ್ ಸುತ್ತಿ, ಊರೂರು ಸುತ್ತಿ ಹಸಿ ಮಣೆಗೆ ಬರುವ ಹೊತ್ತಿಗೆ ಪುಳುಕುಗಳು ಉಳಿದಿರುತ್ತವಾ? ನನಗ್ಯಾಕೊ ನಂಬಿಕೆಯಿಲ್ಲ. ಅದಿರಲಿ ಬಿಡು, ನಿನ್ನ ನೋಟದ ಏಟನ್ನು ಈ ಜನ್ಮ ಪೂರ್ತಿ ಸಾವರಿಸಿಕೊಂಡರೂ ಮುಗಿಯದು!

ಈ ವಿಷಯದಲ್ಲಿ ಅಮ್ಮನ ಕೈಯಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದ ನನ್ನನ್ನು ಹಿಡಿದು ತಂದು ಇಂದು ಇಲ್ಲಿ ನಿಲ್ಲಿಸಿದರು ನೋಡು. ಹುಡುಗಿ ನೋಡು ಸಾಕು ಆಗೋದು ಬಿಡೋದು ಅಮೇಲೆ ಅಂತ ಒಮ್ಮೆ ಹಠ ಬರಲೇ ಬೇಕಾಯ್ತು. ಹುಡುಗಿ, ಮದುವೆ, ಅಪ್ಪುಗೆ, ಮಕ್ಕಳು ಇವುಗಳ ಬಗ್ಗೆ ಆಸೆಯೇ ಇಲ್ಲದ ಗುಂಡರಗೋವಿ ಅಂದ್ಕೋಬೇಡ. ಇವಳೇ ಬೇಕು ಅನ್ನುವ ಹಾಗೆ ಹಠ ಮಾಡುವಂತಹ ಹುಡುಗಿಯರು ಯಾಕೊ ನನ್ನ ಮುಂದೆ ಸುಳಿಯಲೇ ಇಲ್ಲ. ಕಣ್ಣು ಮಿಟುಕಿಸಿದ ಹುಡುಗಿಯರು ಯಾರೂ ಕಾಡಲೇ ಇಲ್ಲ.

ಅಷ್ಟಕ್ಕೂ ಈ ಪರಿ ನನಗೆ ಇಷ್ಟನೇ ಇಲ್ಲ. ಹುಡುಗ ಬರ್ತಾನೆ ಅಂತ ಮನೆಯಲ್ಲಾ ಚೆಂದವಾಗಿಡುವುದಂತೆ. ಕಾಫಿಯಂತೆ, ತಿಂಡಿಯಂತೆ, ನೀನೊಂದು ಸೀರೆ ಉಡ ಬೇಕಂತೆ, ತಲೆ ಬಗ್ಗಿಸಿಯೆ ಕೊಡಬೇಕಂತೆ, ನಾನು ಕದ್ದು ನೋಡಬೇಕಂತೆ ಇವೆಲ್ಲಾ ನನಗೆ ಆಗದು. ಬರೀ ಅಮ್ಮನಿಗಾಗಿ ಒಪ್ಪಿಕೊಂಡೆ. ಒಂದು ಉಡಾಫೆಯಲ್ಲಿ ಬಂದು ಕೂತವನಿಗೆ ಮುಜುಗರವಿತ್ತು. ನಿಮ್ಮ ಮನೆ ಚೆಂದವಿತ್ತು. ನಿಮ್ಮ ತಂದೆ ಮಿತ್ರರಂತೆ ಮಾತಾಡಿಸಿದರು. ನಿಮ್ಮ ತಂಗಿ ಕಿಲಕಿಲ ಅನ್ನುವಂತೆ ಅತ್ತಿಂದಿತ್ತಾ ಚಿಟ್ಟೆಯಂತೆ ಹಾರುತ್ತಿದ್ದರೆ ಅವಳಲ್ಲೊಂದು ಸಂಭ್ರಮವಿತ್ತು.

ಅಡುಗೆ ಮನೆಯಿಂದ ಹೊರಗೆ ಬಿದ್ದಿದ್ದು ನೀನಾ? ಅಥವಾ ಸೌಂದರ್ಯದ ತೇರಾ? ಒಂದು ಕ್ಷಣ ಅದೆಷ್ಟು ಗಲಿಬಿಲಿಯಾಗಿ ಹೋದೆ ನಾನು! ಬ್ಯೂಟಿಪಾಲರ್‌ನಿಂದ ದೂರವಿದ್ದಿದ್ದೆ ನಿನಗೆ ಚೆಂದ ಬ್ಯೂಟಿಪಾಲರ್‌ನಿಂದ ಹೊರಬೀಳುವ ಎಲ್ಲಾ ಮುಖಗಳು ಒಂದೇ ತರಹ ಬಿಡು. ನೆಲಕ್ಕೆ ನೋವಾಗದಂತೆ ನಡೆಯುವುದನ್ನು ಹೇಗೆ ಕಲಿತೆ? ಸೀರೆಯ ಗುಂಗಿನಲ್ಲಿದ್ದ ನನಗೆ ಫೀಲ್ ಡಿಫರೆಂಟ್ ಅನ್ನುವಂತೆ ಲಂಗದಾವಣಿಯ ನಿನ್ನ ಧರಿಸು ರೋಮಾಂಚನ ಕೊಟ್ಟಿತು. ಸುಳ್ಳೆ ಸುಳ್ಳು ವಯ್ಯಾರವಿರಲಿಲ್ಲ. ಬಲವಂತಕ್ಕೆ ತಾಕಿಸಿಕೊಂಡ ನಾಚಿಕೆಗಳಿರಲಿಲ್ಲ. ಬಿಗಿದುಕೊಂಡ ಕೂದಲು ಗಳ ಮಧ್ಯೆಯೂ ಅದ್ಯಾಕೆ ಒಂದೆರಡು ಕೂದಲು ಬಾಗಿ ಕಾಡುತ್ತಿವೆಯಲ್ಲಾ? ನಿನಗೆ ದೃಷ್ಟಿ ತೆಗೆಯುವುದಕ್ಕಾ? ನೀನು ತೊಟ್ಟ ಗೆಜ್ಜೆಯ ಕಿಂಕಿಣಿಗೆ ಹಾಡು ಕಲಿಸಿದ್ದು ಯಾರು? ಕೈಯಲ್ಲಿದ್ದಿದ್ದು ಬಳೆಗಳಾದರೂ ಅವುಗಳದು ಅದೆಂತಹ ಮಧುರ ಮಾತು! ಮುಗುಳ್‌ನಗೆಯನ್ನು ಬಲವಂತವಾಗಿ ಮುಚ್ಚಿಟ್ಟುಕೊಂಡ ತುಟಿಗಳು, ಮುಖದಲ್ಲಿ ಮೂಗುತಿಯ ಕಳೆ, ನಡೆಯಲ್ಲಿ ಬಳಕುವ ತೆನೆ ಎಲ್ಲವೂ ಚೆಂದವೇ! ನನಗೆ ಇವಳೇ ಬೇಕು ಅನಿಸುವ ಹುಡುಗಿಯೊಬ್ಬಳು ನೀನೆ ಎಂಬುದು ಒಂದೇ ಸೆಕೆಂಡ್ ನಲ್ಲಿ ಪಕ್ಕಾಗಿ ಹೊಯ್ತಲ್ಲ! ಇಷ್ಟು ದಿನಗಳು ನನ್ನ ಮುಂದೆ ಹಾದು ಹೋದ ಹುಡುಗಿಯರ್ಯಾಕೆ ಕಾಡಲಿಲ್ಲ. ಉತ್ತರವನ್ನು ನೀನೆ ಹೇಳಬೇಕು.

ಕಾಫಿ ಕೊಡುವಾಗ ಕದ್ದು ನೋಡಲೇ ಬೇಕಾ? ಅದೊಂದು ಅಲಿಖಿತ ನಿಯಮವಾ? ಆದರೆ ನೋಡಿದ್ದು ಹಾಲ್‌ಗೆ ಹೆಜ್ಜೆ ಇಡುವಾಗಲೇ! ಕದ್ದು ನೋಡುವ ಹಳೆಯ ರೀತಿಗೆ ಒಂದು ಬೈ ಹೇಳಿ ಚೆಂದಾದ ನಗುವಿಟ್ಟುಕೊಂಡೆ ನನ್ನಡೆ ನೋಡಿದೆ. ಒಮ್ಮೆಲೆ ಕನಸು ಬಡಿದಂತಾಗಿ ನಾನು ನಕ್ಕು ಬಿಟ್ಟೆ. ಕೈಯಲ್ಲಿ ಕಾಫಿ ಇಟ್ಟು ನೀನು ಹಾಯ್ ಅಂದಾಗ ಮಾತೇ ಬರದೆ ಬ್ಯಾ ಬ್ಯಾ ಅಂದಿದ್ದೆ. ನೀನು ನನ್ನವಳೆ ಅನಿಸಿಬಿಟ್ಟಿತು.

ಕಳೆದ ಜನ್ಮದ ನನ್ನ ಹನ್ನೆಡರು ಮಕ್ಕಳ ಅಮ್ಮ ನೀನೆ ಆಗಿದ್ದೆ. ತೊಂಭತ್ತನೆ ವಯಸ್ಸಿನ ಸುಕ್ಕುಗಟ್ಟಿದ ಚರ್ಮದಷ್ಟೆ ಅನುಭವದಲ್ಲಿ ನಮ್ಮ ಕತೆ ಹೇಳಿದ್ದು ನೀನೆ. ಹಣ್ಣಾದ ಇಳಿ ವಯಸ್ಸಿನಲ್ಲಿ ಬೊಚ್ಚು ಬಾಯಲ್ಲಿ ಹರೆಯದ ತುಂಟತನ ನೆನಪಿಸಿಕೊಂಡು ನಕ್ಕಿದ್ದು ನಾವೇ! ನೋಡು ಈ ಜನ್ಮದಲ್ಲಿ ಇನ್ನೊಷ್ಟು ಮತ್ತೊಷ್ಟು ಕೆಲಸಗಳಿವೆ ಬಾಕಿ ಇವೆ. ಹೇಳು ಯಾವಾಗ ಬರುವೆ ಸಪ್ತಪದಿ ತುಳಿದು. ನಮ್ಮ ಮನೆಯ ದೇವರ ಕೊಣೆಯಲ್ಲಿ ದೀಪ ಎಣ್ಣೆ ತುಂಬಿಕೊಂಡು ಕಾದಿದೆ. ಹನಿ ಬೆಂಕಿನ ತಗುಲಿಸು; ಮನೆ ಮನ ಬೆಳಗಲಿ!

Tags

Related Articles

Leave a Reply

Your email address will not be published. Required fields are marked *

Language
Close