About Us Advertise with us Be a Reporter E-Paper

ಅಂಕಣಗಳು

ಬ್ರಹ್ಮದೇವ ಪೇಚಿಗೆ ಸಿಲುಕಿದ ಎರಡು ಪ್ರಸಂಗಗಳು..!

ಸುಧಾಮೂರ್ತಿ

ಈ ಪ್ರಪಂಚದ ಸಕಲ ಚರಾಚರ ವಸ್ತುಗಳನ್ನು ಸೃಷ್ಟಿಸಿದವನು ಬ್ರಹ್ಮದೇವ. ವಿಷ್ಣುವಿನ ನಾಭಿಯಲ್ಲಿ ಅರಳಿದ ಕಮಲದ ಹೂವಿನಲ್ಲಿ ಆತ ಜನಿಸಿದ ಎಂದು ಹೇಳಲಾಗುತ್ತದೆ. ಒಬ್ಬ ನುರಿತ ಶಿಲ್ಪಿಯಂತೆ ಸಕಲ ಜೀವಜಾಲದ ಎಲ್ಲ ಬಗೆಯ ಜೀವಿಗಳನ್ನೂ ಸೃಷ್ಟಿಸುತ್ತಾ ಇರುವುದೇ ಅವನ ಕೆಲಸ. ನಾವೆಲ್ಲ ಬ್ರಹ್ಮನ ಮಕ್ಕಳು. ಎಷ್ಟೋ ವರ್ಷಗಳ ಹಿಂದೆ ಪ್ರಣಯ ದೇವತೆ ಮನ್ಮಥ ಹಾಗೂ ಅವನ ಪತ್ನಿ ರತಿ ಕುರಿತು ಕಠಿಣ ತಪಸ್ಸು ಆಚರಿಸಿ ಒಂದು ವರ ಬೇಡಿಕೊಂಡರು; ವಿಶೇಷವಾದ ಒಂದು ಬಿಲ್ಲು ಬಾಣಕ್ಕಾಗಿ ಅವರು ಎಷ್ಟೋ ಸಮಯ ಧ್ಯಾನಿಸಿದ ಮೇಲೆ ಬ್ರಹ್ಮ ಪ್ರತ್ಯಕ್ಷನಾದ. ‘ಓ ದೇವನೇ, ನನಗೊಂದು ವಿಶೇಷವಾದ ಬಿಲ್ಲು-ಬಾಣ ದಯಪಾಲಿಸು. ಅದರಿಂದ ನಾನು ಯಾರ ಮೇಲೆ ಬಾಣ ಹೂಡಿದರೂ ಅವರಿಗೆ ತಮ್ಮ ಹತ್ತಿರದಲ್ಲಿರುವವರ ಮೇಲೆ ಪ್ರೀತಿ ಅಂಕುರಿಸಬೇಕು. ಹಾಗೆ ಮಾಡು’ ಎಂದು ಮನ್ಮಥ ಮೊರೆಯಿಟ್ಟ.

ಇದೊಳ್ಳೇ ಲಾಯಕ್ಕಾದ ವಿಚಾರವಾಗಿದೆಯಲ್ಲವೇ, ಮನ್ಮಥ ಕೇಳಿರುವ ವರದಿಂದ ಹೆಚ್ಚು ಹೆಚ್ಚು ಪ್ರೇಮ ಉಂಟಾಗಿ, ಕಾಲಾಂತರದಲ್ಲಿ ಸಂತಾನ ಪ್ರಾಪ್ತಿಯಾಗಿ ಮನುಷ್ಯರ ಸಂಖ್ಯೆ ಅಧಿಕವಾಗುವುದಾದರೆ ಏಕೆ ಬೇಡ ಎಂದು ಯೋಚಿಸಿದ ಬ್ರಹ್ಮ ಧಾರಾಳವಾಗಿ ಒಪ್ಪಿ ವರ ನೀಡಿದ. ಆದರೆ ಬಹುತೇಕರು ಮನ್ಮಥನ ಬಾಣಕ್ಕೆ ಬಲಿ ಬಿದ್ದರೂ ದೃಢವಾದ ಸಂಕಲ್ಪಶಕ್ತಿ ಇರುವವರು, ಅಧ್ಯಾತ್ಮದ ಹಾದಿ ಆರಿಸಿಕೊಂಡವರು ಹೀಗೆ ಮಾಡಲಾರರು ಎಂದು ಮನಸ್ಸಿನ ಮೂಲೆಯಲ್ಲಿ ಬ್ರಹ್ಮನಿಗೆ ಅನಿಸದೇ ಇರಲಿಲ್ಲ. ಆದರೆ ಅಷ್ಟೊತ್ತಿಗಾಗಲೇ ಬಲಗೈ ಮೇಲೆತ್ತಿ ‘ತಥಾಸ್ತು’ ಎಂದು ವರ ದಯಪಾಲಿಸಿಯಾಗಿತ್ತು.

ಕುಸುಮಗಳಿಂದಾದ ಬಿಲ್ಲು ಹಾಗೂ ಕಬ್ಬಿನ ಬಾಣ ಮನ್ಮಥನ ಮುಂದೆ ಪ್ರತ್ಯಕ್ಷವಾಗಿತ್ತು. ಹಿಗ್ಗಿ ಹೀರೇಕಾಯಿಯಾದ ಅವನು ಬ್ರಹ್ಮನಿಗೆ ಬಾರಿಬಾರಿಗೂ ವಂದನೆ ಹೇಳುತ್ತಾ ಅದನ್ನು ತೆಗೆದುಕೊಂಡು ತನ್ನ ದಾರಿ ಹಿಡಿದ. ಹೋಗುತ್ತ, ಹೋಗುತ್ತ ತನ್ನ ಉಪಕರಣವನ್ನು ಪರೀಕ್ಷಿಸುವ ಹುಕಿ ಅವನಿಗೆ ಬಂತು.  ಬೇರೇನೂ ಯೋಚಿಸದೆ, ಒಂದು ಬಾಣ ಎಳೆದುಕೊಂಡ ಮತ್ತು ಅದನ್ನು ಬ್ರಹ್ಮನ ಮೇಲೆಯೇ ಪ್ರಯೋಗಿಸಿದ! ಆ ವೇಳೆ ಬ್ರಹ್ಮದೇವ ಒಬ್ಬ ಲೋಕೋತ್ತರ ಸುಂದರಿಯನ್ನು ಸೃಷ್ಟಿಸುವುದರಲ್ಲಿ ನಿರತನಾಗಿದ್ದ. ಒಂದು ನೂರು ರೂಪಗಳನ್ನು ಹೊಂದಿರುವ ಆಕೆಗೆ ‘ಶತರೂಪಾ’ ಎಂದು ಮಾಡಿದ್ದ. ಆ ಪ್ರತಿಮೆಗೆ ಜೀವ ಬರಿಸುವುದರೊಳಗೆ ಮನ್ಮಥನ ಬಾಣ ತನ್ನ ಕೆಲಸ ಆರಂಭಿಸಿತ್ತು.

ತನ್ನನ್ನೇ ಆಪಾದಮಸ್ತಕ ದಿಟ್ಟಿಸುತ್ತಿದ್ದ ಬ್ರಹ್ಮನನ್ನು ನೋಡಿ ಶತರೂಪಾ ದಿಗಿಲುಗೊಂಡಳು. ಜನ್ಮ ಕೊಟ್ಟವನೇ ತನ್ನೊಂದಿಗೆ ಹೀಗೆ ವರ್ತಿಸುವುದು ಅವಳಿಗೆ ಕಸಿವಿಸಿ ತಂದಿತು. ಆತನ ಬಲ ಬದಿಯಿಂದ ಸರಿದು ಹೋಗಲು ಉದ್ಯುಕ್ತಳಾದಳು. ಆದರೆ ಬ್ರಹ್ಮನ ನೋಟ ಮಾತ್ರ ಅವಳನ್ನು ಬೆಂಬಿಡದೆ ಹಿಂಬಾಲಿಸಿತು. ಏನಾಶ್ಚರ್ಯ, ಬ್ರಹ್ಮನ ತಲೆಯ ಬಲಗಡೆ ಎರಡನೇ ತಲೆ ಹುಟ್ಟಿಕೊಂಡಿತು! ಗೊಂದಲಕ್ಕೆ ಒಳಗಾದ ಸುಂದರಿ ಎಡಕ್ಕೆ ಅಲ್ಲೂ ಒಂದು ತಲೆ ಹುಟ್ಟಿಕೊಂಡು ಅವಳನ್ನು ದಿಟ್ಟಿಸಲು ಆರಂಭಿಸಿತು. ನಿರುಪಾಯಳಾಗಿ ಆಕೆ ಬ್ರಹ್ಮನ ಹಿಂದೆ ಹೋಗಿ ಅವಿತುಕೊಳ್ಳಲು ನೋಡಿದಳು…ಅರೆ, ಅಲ್ಲಿಯೂ ಒಂದು ತಲೆ ಹುಟ್ಟಿಕೊಳ್ಳಬೇಕೇ? ಒಟ್ಟಾರೆ, ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಹೀಗೆ ನಾಲ್ಕೂ ದಿಕ್ಕುಗಳಲ್ಲಿ ನಾಲ್ಕು ಶಿರಗಳನ್ನು ಹೊಂದಿದ್ದ ಬ್ರಹ್ಮನಿಂದ ಅವಳು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲದಂತಾಯಿತು.

ಅಸಹಾಯಕ ಹೆಣ್ಣು ಮೇಲೆ ನೋಡಿದಳು. ಅದೇ ಸರಿ ಎಂದು ಅಂತರಿಕ್ಷಕ್ಕೆ ಮೇಲ್ಮುಖವಾಗಿ ಹೊರಟರೆ, ಬ್ರಹ್ಮ ಬಿಡಲಿಲ್ಲ. ಮೊದಲ ತಲೆಯ ಮೇಲೆ ತಲೆ ಸೃಷ್ಟಿಸಿಕೊಂಡು ಶತರೂಪಾಳನ್ನು ನೋಟದಲ್ಲೇ ಹಿಂಬಾಲಿಸಿದ. ಇದೆಲ್ಲವನ್ನೂ ಸುಮ್ಮನೆ ನೋಡುತ್ತಾ ಇದ್ದ ಈಶ್ವರನಿಗೆ ರೇಗಿಹೋಯಿತು. ಬಡಪಾಯಿ ಹುಡುಗಿಯನ್ನು ಕಾಪಾಡಬೇಕು ಅಂದುಕೊಂಡು ಆಕಾಶಕ್ಕೆ ಚಾಚಿಕೊಂಡಿದ್ದ ಬ್ರಹ್ಮನ ಶಿರವನ್ನು ತನ್ನ ತ್ರಿಶೂಲದಿಂದ ಕತ್ತರಿಸಿ ಒಗೆದ. ಶತರೂಪಾಳನ್ನು ಸೃಷ್ಟಿಸಿ ಜನ್ಮನೀಡಿದ ಬ್ರಹ್ಮ ಇಂತಹ ಅನುಚಿತ ವರ್ತನೆ ತೋರಿದ್ದು ಅವನನ್ನು ಕೋಪಾವಿಷ್ಟಗೊಳಿಸಿತು. ‘ಇನ್ನು ಮುಂದೆ ಹೀಗೆಯೇ ನಾಲ್ಕು ತಲೆ ಹೊತ್ತು ಬದುಕು. ಕೇವಲ ಒಂದು ಸ್ಥಳದಲ್ಲಿ ಮಾತ್ರ ಪೂಜೆಗೊಳ್ಳುವವನಾಗು’ ಎಂಬ ಶಾಪವನ್ನೂ ಶಿವ, ಬ್ರಹ್ಮನಿಗೆ ನೀಡಿದ.

ಐದನೇ ತಲೆ ಕತ್ತರಿಸಿ ಹಾಕಿ ಸಮಯದ ನಂತರ ಈಶ್ವರನಿಗೆ ಸಿಟ್ಟು ಇಳಿಯಿತು. ಆಗ ಗೊತ್ತಾಯಿತು, ಬ್ರಹ್ಮದೇವನ ಈ ವಿಚಿತ್ರ ವರ್ತನೆ ಕೇವಲ ಅವನು ಮಾತ್ರ ಕಾರಣನಾಗಿರಲಿಲ್ಲ; ಮನ್ಮಥನ ಕೈವಾಡವೂ ಅದರಲ್ಲಿ ಇತ್ತು ಎಂದು. ಈಗೇನು ಮಾಡುವುದು ಎಂದುಕೊಂಡು ಶಾಪವನ್ನು ಸ್ವಲ್ಪ ಸೌಮ್ಯಗೊಳಿಸುವ ಒಂದು ಉಪಶ್ಶಾಪವನ್ನೂ ನೀಡಿದ: ‘ಓ ಬ್ರಹ್ಮನೇ, ನನ್ನಂತೆ, ವಿಷ್ಣುವಿನಂತೆ ನೀನು ಸದಾಕಾಲ, ಸರ್ವತ್ರ ಪೂಜೆಗೊಳ್ಳದಿದ್ದರೂ ತ್ರಿಮೂರ್ತಿಗಳಲ್ಲಿ ಒಬ್ಬ ಎಂದು ಶಾಶ್ವತವಾಗಿ ಗೌರವಿಸಲ್ಪಡುವೆ’. ಈ ಎಲ್ಲ ಶಾಪ ವ್ಯವಹಾರಗಳು ಸಮಾನರೇ ನಡುವೆಯೇ ಆಗಿದ್ದರಿಂದ ಶಪಿಸಿದ್ದಕ್ಕಾಗಿ ಶಿವನಿಗೊಂದು ಪಾಪ ತಟ್ಟಿತು. ತಿರುಗಾಲಿ ಬೈರಾಗಿಯಾಗಿ ಅವನು ‘ಬ್ರಹ್ಮ ಕಪಾಲ’-ಈಗ ಉತ್ತರಾಖಂಡದಲ್ಲಿರುವ ಬದರೀನಾಥ-ಕ್ಕೆ ತೆರಳಿದ. ತಾನು ಛೇದಿಸಿದ ಬ್ರಹ್ಮನ ಶಿರವನ್ನೇ ಭಿಕ್ಷಾಪಾತ್ರೆ ಮಾಡಿಕೊಂಡ. ಆದರೆ ಅದರಲ್ಲಿ ಎಷ್ಟು ಭಿಕ್ಷೆ ಬಿದ್ದರೂ ಪಾತ್ರೆ ತುಂಬದೆ ಖಾಲಿ ಉಳಿಯುತ್ತ ಸೋಜಿಗ ಉಂಟುಮಾಡುತ್ತಿತ್ತು. ಕಡೆಗೆ ವಾರಣಾಸಿ ತಲುಪಿ ಅಲ್ಲಿ ಪಾರ್ವತಿಯ ಇನ್ನೊಂದು ಅವತಾರವೇ ಆದ ಅನ್ನಪೂರ್ಣೇಶ್ವರಿಯಿಂದ ಭಿಕ್ಷೆ ಸ್ವೀಕರಿಸಿದ ಮೇಲೆ ಅದು ತುಂಬಿತು. ಇದೆಲ್ಲದರ ಪರಿಣಾಮವೆಂದರೆ ಬ್ರಹ್ಮನ ಐದನೇ ತಲೆ ಶಿವನ ಉಳಿದುಹೋಯಿತು. (ಈ ಪ್ರಸಂಗ ನಡೆದದ್ದು ರಾಜಸ್ಥಾನದ ಪುಷ್ಕರ್‌ನಲ್ಲಿ ಎಂಬ ಐತಿಹ್ಯವಿದೆ).

ಸುಂದ, ಉಪಸುಂದರ ಕತೆ

ಬ್ರಹ್ಮದೇವನಿಗೆ ಸಂಬಂಧಪಟ್ಟ ಇನ್ನೊಂದು ಕತೆಯಲ್ಲಿ ಅಸುರ ಸೋದರರಾದ ಸುಂದ-ಉಪಸುಂದ ಬರುತ್ತಾರೆ. ಅವರಿಬ್ಬರೂ ಸದಾಕಾಲ ಜತೆಗಿರುತ್ತಿದ್ದರು. ಆಹಾರ-ಉಡುಪು ಅಷ್ಟೇಅಲ್ಲ, ತಮ್ಮ ರಾಜ್ಯಗಳನ್ನೂ ಈ ರಾಕ್ಷಸರು ಸಮನಾಗಿ ಹಂಚಿಕೊಂಡಿದ್ದರು. ಅಮೃತತ್ವ ಗಳಿಸಬೇಕು, ಸಾವನ್ನು ಜಯಿಸಬೇಕು ಎಂದು ಹಂಬಲಿಸಿ ಬ್ರಹ್ಮದೇವನನ್ನು ಧ್ಯಾನಿಸಿ ಉಗ್ರ ತಪಸ್ಸು ಕೈಗೊಂಡಿದ್ದರು. ಎಷ್ಟೋ ಸಮಯವಾದ ಮೇಲೆ ಪ್ರತ್ಯಕ್ಷನಾದ. ತಲೆಬಾಗಿ ಬ್ರಹ್ಮನಿಗೆ ವಂದಿಸಿದ ಸೋರರು,‘ನೀನು ಪ್ರತ್ಯಕ್ಷನಾಗಿರುವುದು ನಮಗೆ ಅತೀವ ಆನಂದ ತಂದಿದೆ ಓ ದೊರೆಯೇ’ ಎಂದು ತಮಗಾದ ಸಂತಸ ವ್ಯಕ್ತಪಡಿಸಿದರು. ‘ಭಕ್ತರೇ, ನಿಮ್ಮ ತಪಸ್ಸಿಗೆ ಮೆಚ್ಚಿದೆ. ಯಾವ ವರ ಬೇಕು ಕೇಳಿಕೊಳ್ಳಿ, ದಯಪಾಲಿಸುತ್ತೇನೆ’ ಎಂದ ಬ್ರಹ್ಮ. ಇದೇ ಅವಕಾಶಕ್ಕಾಗಿ ಕಾಯುತ್ತಿದ್ದ ಸುಂದ, ಉಪಸುಂದ ಒಕ್ಕೊರಲಿನಲ್ಲಿ ತಮಗೆ ಅಮೃತತ್ವ ಬೇಕೆಂದು ಬಿನ್ನವಿಸಿದರು.

ಬ್ರಹ್ಮನಿಗೆ ಪೇಚಿಗಿಟ್ಟುಕೊಂಡಿತು. ‘ಇದೊಂದು ಅಸಾಧ್ಯ. ಈ ಸೃಷ್ಟಿಯಲ್ಲಿ ಹುಟ್ಟಿದ್ದೆಲ್ಲಾ ಸಾವನ್ನು ಕಾಣುವುದು ಅನಿವಾರ್ಯ. ನಾನು ಕೇವಲ ಸಾವನ್ನು ತಡೆಯುವ ಶಕ್ತಿ ನನಗಿಲ್ಲ. ಬೇರೆ ಏನನ್ನಾದರೂ ಕೋರಿಕೊಳ್ಳಿ’ ಎಂದು ಅವನು ಆ ರಾಕ್ಷಸರಲ್ಲಿ ಕೇಳಿಕೊಂಡ. ಬಹಳ ಯೋಚನೆ ಮಾಡಿದ ಆ ಸೋದರರು ‘ಸರಿ, ಇದನ್ನಾದರೂ ನೆರವೇರಿಸು, ನಮ್ಮಿಬ್ಬರಿಗೂ ಮೃತ್ಯು ಪರಸ್ಪರರ ಕೈಯಿಂದಲ್ಲದೆ ಬೇರೆ ಯಾರಿಂದಲೂ ಬರಬಾರದು’ ಎಂದರು! ಸರಿ ಎಂದುಬಿಟ್ಟ ದೇವರು. ಹಾಗೆ ಅವರ ಚತುರತೆ ಅವನ ಕಣ್ತಪ್ಪಿ ಏನೂ ಹೋಗಿರಲಿಲ್ಲ. ಹೇಳಿಕೇಳಿ ಅವನು ರಾಕ್ಷಸರಿಗೆ ವರ ನೀಡುವುದರಲ್ಲಿ ಪ್ರವೀಣನಾಗಿದ್ದ ಬ್ರಹ್ಮ. ಪ್ರವೀಣ ಯಾವ ಅರ್ಥದಲ್ಲಿ ಅಂದರೆ, ಉಗ್ರ ಭಕ್ತರು ಮುಂದಿಡುವ ವಿಲಕ್ಷಣ ವರಗಳಿಗೆ ‘ತಥಾಸ್ತು’ ಎನ್ನುವಾಗ ‘ಷರತ್ತುಗಳು ಅನ್ವಯ’ ಎನ್ನುವುದನ್ನೂ ಅವನು ಮರೆಯುತ್ತಿರಲಿಲ್ಲ. ಆ ಷರತ್ತುಗಳಲ್ಲೇ ಅಸಾಧ್ಯ ವರಗಳನ್ನು ಕೊಟ್ಟಿಯೂ ಕೊಡದ ಹಾಗೆ ಮಾಡುವ ಕರಾಮತ್ತು ಇರುತ್ತಿತ್ತು. ದೇವರು ‘ಆಯಿತು ಹೋಗಿ’ ಅಂದಕೂಡಲೇ ಆನಂದತುಂದಿಲರಾದರು, ಯಾವುದೇ ಸಂದರ್ಭದಲ್ಲಿ ತಾವಿಬ್ಬರೂ ಪರಸ್ಪರ ಸೆಣೆಸುವುದಿಲ್ಲ ಎಂಬ ಅಪಾರ ನಂಬಿಕೆ ಹೊಂದಿದ್ದ ಆ ಇಬ್ಬರು.

ಇಬ್ಬರೂ ಜತೆಗೂಡಿ ರಾಜ್ಯಗಳನ್ನು ಗೆದ್ದರು. ಸೇನೆ ವಿಸ್ತರಿಸಿಕೊಂಡರು. ಕೋಶ ತುಂಬಿಕೊಂಡರು. ಬರಬರುತ್ತಾ ಯಾರೂ ತಮ್ಮನ್ನು ಎಂಬ ಸಂಗತಿ ಅವರನ್ನು ದರ್ಪಿಷ್ಟರನ್ನಾಗಿಸಿತು. ಪ್ರಜೆಗಳು ಅವರ ಕೆಟ್ಟ ಆಡಳಿತದಲ್ಲಿ ನರಳಬೇಕಾಯಿತು. ನೆರೆಯ ರಾಜರುಗಳಾದರೋ, ಮಿತ್ರರು-ಶತ್ರುಗಳು ಎನ್ನದೇ ಎಲ್ಲರೂ ಸದಾಕಾಲ ಅವರ ಭೀತಿಯಲ್ಲಿ ನರಳುತ್ತಿದ್ದರು. ಯಾವಾಗ ಸುಂದ-ಉಪಸುಂದರ ಚಿತ್ತ ತಮ್ಮ ರಾಜ್ಯದ ಮೇಲೆ ಹರಿವುದೋ, ಅದನ್ನು ವಶಪಡಿಸಿಕೊಳ್ಳಲು ದಂಡೆತ್ತಿ ಬರುವರೋ ಎಂಬ ಆತಂಕದ ವಾತಾವರಣವೇ ಎಲ್ಲೆಲ್ಲಿಯೂ. ಸೋದರರ ಅಪಕೀರ್ತಿ ಭೂಮಂಡಲವೆಲ್ಲಾ ಹರಡಿ ಎಲ್ಲರಿಗೂ ಅವರಿಂದ ಮುಕ್ತಿ ಬೇಕಿತ್ತು. ವರ್ಷಗಟ್ಟಲೆ ದೌರ್ಜನ್ಯ ಅನುಭವಿಸಿ ತೀವ್ರ ದಣಿವು, ಹತಾಶೆಯಿಂದ ಎಲ್ಲ ಕಂಗೆಟ್ಟಿದ್ದರು. ಸೋದರರು ಮಾತ್ರ ಒಂದಿನಿತೂ ಬದಲಾಗಿರಲಿಲ್ಲ. ಅವರ ನಡುವಣ ಪ್ರೀತಿ-ವಿಶ್ವಾಸಕ್ಕೆ ಸ್ವಲ್ಪವೂ ಭಂಗ ಬಂದಿರಲಿಲ್ಲ! ಅಭಿಪ್ರಾಯಭೇದ ತಲೆ ಹಾಕಿರಲಿಲ್ಲ.

ಜನ ಬ್ರಹ್ಮದೇವನನ್ನೇ ಮೊರೆಹೊಕ್ಕರು. ಹೇಗಾದರೂ ಮಾಡಿ ನಮ್ಮನ್ನು ಇವರಿಂದ ಪಾರುಮಾಡು ಎಂದು ಅಡಿಗಳಿಗೆರಗಿ ಬೇಡಿಕೊಂಡರು. ‘ಓಹೋ! ನಾನು ಅಂದುಕೊಂಡ ಹಾಗೆಯೇ ಆಯಿತು. ಅದ್ಭುತ ವರಗಳನ್ನು ಪಡೆದುಕೊಳ್ಳುವ ಎಲ್ಲ ರಾಕ್ಷಸರರಂತೆ ಇವರೂ ಮಾನವತೆಗೆ ಪೀಡೆಗಳಾದರು’ ಎಂದು ಮನದಲ್ಲಿಯೇ ಅಂದುಕೊಂಡ ಬ್ರಹ್ಮ. ಅಪಾತ್ರರಿಗೆ ಇಂತಹ ಶಕ್ತಿಯನ್ನು ನೀಡಿದರೆ ಪರಿಣಾಮ ಹೀಗೆಯೇ, ನಾನು ನೀಡಿದ ಹೇಗಾದರೂ ಮಾಡಿ ಅವಿನಾಶಿಗಳಾಗಿರುವ ಅವರನ್ನು ನಾನೇ ಸಂಹರಿಸಬೇಕು, ಜನರ ಗೋಳು ಕಳೆಯಬೇಕು ಎಂದು ದೃಢ ನಿಶ್ಚಯ ಮಾಡಿದ. ಬಹಳ ಯೋಚಿಸಿ ಒಂದು ಚತುರ ಯೋಜನೆ ತಯಾರಿಸಿದ.

ತಿಲೋತ್ತಮಾ ಎಂಬ ಸೆಳೆಯುವ ಚೆಲುವಿನ ಸುಂದರಿಯನ್ನು ಬ್ರಹ್ಮ ಸೃಷ್ಟಿಸಿದ. ಅವನ ಆಣತಿಯಂತೆ ತಿಲೋತ್ತಮೆ ಸುಂದ-ಉಪಸುಂದ ಇರುವಲ್ಲಿಗೆ ಹೋದಳು. ಸೋದರರು ತಿರುಗಾಡುತ್ತಿರುವಾಗ ಕಾಣಿಸಿಕೊಂಡು ಅವರನ್ನು ಸಮ್ಮೋಹಗೊಳಿಸಿದಳು. ಕಡೆಗೂ ಸುಂದ ಬಾಯಿಬಿಟ್ಟ: ‘ನಾನು ಈಕೆಯನ್ನು ವಿವಾಹವಾಗಬಯಸುತ್ತೇನೆ’ ಎಂದು ಸೋದರನಿಗೆ ಹೇಳಿದ. ಉಪಸುಂದನ ಮನಸ್ಸಿನಲ್ಲಿಯೂ ಅದೇ ಚಿಗುರೊೆಯುತ್ತಿತ್ತು. ಏನೂ ಉತ್ತರಿಸಿದೇ ಅವನು ಸುಮ್ಮನುಳಿದ. ಆದರೆ ಅವನ ಕಣ್ಣೆದುರೇ ಆ ಸುಂದರಿ ಸುಳಿದಾಡುತ್ತಿದ್ದಳು. ಉಪಸುಂದ ಆಕೆಯನ್ನು ಎವೆಯಿಕ್ಕದೇ ದಿಟ್ಟಿಸುವುದನ್ನು ನೋಡಿ ಸುಂದನಿಗೆ ರೇಗಿಹೋಯಿತು. ‘ತಿಲೋತ್ತಮೆ ತನ್ನ ಪತ್ನಿಯಾಗಿ ಬಂದರೆ ನಿನಗೆೆ ಅತ್ತಿಗೆಯಾಗುತ್ತಾಳೆ, ಅವಳನ್ನು ಕೆಟ್ಟ ದೃಷ್ಟಿಯಲ್ಲಿ ನೋಡಬೇಡ’ ಎಂದ. ಉಪಸುಂದನು ಪಟ್ಟು ಬಿಡಲಿಲ್ಲ. ಆಕೆಯನ್ನು ಮೊದಲು ನೋಡಿದ್ದು ತಾನು. ಆದ್ದರಿಂದ ತಿಲೋತ್ತಮೆ ತನಗೆ ಪತ್ನಿಯಾಗಬೇಕು ಎಂದ.

‘ನೀನು ಹೇಗೆ ಹಾಗೆ ಹೇಳಬಲ್ಲೆ’ ಎಂದು ಸುಂದ ಕನಲಿದರೆ, ‘ನೋಡಿಲ್ಲಿ, ಮತ್ತು ಆಕೆಯ ಕಣ್ಣೋಟ ಪರಸ್ಪರ ಸಂಧಿಸಿದಾಗಲೇ ನಾವು ಪತಿ-ಪತ್ನಿಯರಾಗಬೇಕು ಎಂಬ ಭಾವನೆ ಮೊಳೆಯಿತು’ ಎಂದು ಉಪಸುಂದ ಪ್ರತಿಯಾಗಿ ಉತ್ತರಿಸಿದ! ನಾನು ಹಿರಿಯ ಎಂದು ಸುಂದ ಹಕ್ಕು ಸಾಧಿಸಹೋದರೆ ಏನೂ ಪ್ರಯೋಜನವಾಗಲಿಲ್ಲ. ಕಿರಿಯನೆಂದ ಮಾತ್ರಕ್ಕೆ ನನ್ನಭಾವನೆ-ಅಭಿಪ್ರಾಯಗಳಿಗೆ ಬೆಲೆಯೇ ಇಲ್ಲವೇ ಎಂದು ಉಪಸುಂದ ಅವನ ಬಾಯಿ ಮುಚ್ಚಿಸಿದ. ಜಗಳ ಹತ್ತೂ ಹರಿಯದೆ ಬಹಳ ಕಾಲ ಮುಂದುವರಿಯಿತು. ಇಬ್ಬರಲ್ಲಿ ಯಾರೂ ತಿಲೋತ್ತಮೆಯನ್ನು ತ್ಯಾಗ ಮಾಡಲು ತಯಾರಿರಲಿಲ್ಲ. ಕಡೆಗೆ ವಾದ-ವಿವಾದ ಮಾಡಿ ಸಾಕಾಗಿ ಒಂದು ಬಂದರು. ಆ ಸುಂದರಿಯನ್ನೇ ಹೋಗಿ ಕೇಳೋಣ, ನಿನಗೆ ಯಾರು ಇಷ್ಟ ಎಂದು. ಯಾರನ್ನು ಆರಿಸಿಕೊಳ್ಳುತ್ತಾಳೋ ನೋಡೋಣ ಮತ್ತು ಆ ಆಯ್ಕೆಯನ್ನು ಗೌರವಿಸೋಣ ಎಂಬ ಒಮ್ಮತ ತಲುಪಿದರು.

ಅಣ್ಣ-ತಮ್ಮಂದಿರಿಬ್ಬರೂ ತಿಲೋತ್ತಮೆಯನ್ನು ಸಮೀಪಿಸಿ ಎಲ್ಲವನ್ನು ನಿವೇದಿಸಿಕೊಂಡರು. ಏನೂ ಅರಿಯದವಳಂತೆ ಆಕೆ ಬೇಸರ ವ್ಯಕ್ತಪಡಿಸಿದಳು. ‘ನನ್ನ ಚೆಲುವಿಗಿಷ್ಟು… ಅಣ್ಣ-ತಮ್ಮಂದಿರ ನಡುವೆ ವೈಮನಸ್ಯ ತಂದಿಟ್ಟಿತೇ’ ಎಂದು ತನ್ನನ್ನು ತಾನು ಹಳಿದುಕೊಂಡಳು. ಇಲ್ಲ, ಹೀಗಾಗಲು ಬಿಡುವುದಿಲ್ಲ. ನಿಮ್ಮ ಬಂಧ ಒಡೆಯಲಾರೆ. ನಾನೇ ಈ ರಾಜ್ಯದಿಂದ ನಿರ್ಗಮಿಸುತ್ತೇನೆ ಘೋಷಿಸಿದಳು. ಇಬ್ಬರೂ ಒಂದೇ ಬಾರಿಗೆ ಆಕೆಯನ್ನು ಅಡ್ಡಗಟ್ಟಿದರು. ದಯವಿಟ್ಟು ಹಾಗೆ ಮಾಡಬೇಡ. ಪ್ರಾಮಾಣಿಕವಾಗಿ ಹೇಳು. ನಮ್ಮಿಬ್ಬರಲ್ಲಿ ನೀನು ಯಾರನ್ನು ಆರಿಸಿಕೊಂಡರೂ ಪರವಾಗಿಲ್ಲ. ಆದರೆ ಮುಕ್ತವಾಗಿ ಹೇಳು ಎಂದು ಪರಿಪರಿಯಾಗಿ ಬೇಡಿಕೊಂಡರು. ಸ್ವಲ್ಪ ಸತಾಯಿಸಿದ ಮೇಲೆ ತಿಲೋತ್ತಮೆ ಒನಪಿನಿಂದ ಹೇಳಿದಳು: ‘ಇಡೀ ಪ್ರಪಂಚದಲ್ಲಿಯೇ ಅತ್ಯಂತ ಶೂರನಾಗಿರುವವನನ್ನು ವರಿಸುವ ಆಸೆ ನನ್ನದು, ನೀವೇ ಅದನ್ನು ನಿರ್ಣಯಿಸಿ ಹೇಳಿ. ಅದು ನನಗೆ ಒಪ್ಪಿಗೆ’.

ಕ್ಷಣಾರ್ಧದಲ್ಲಿ ಆ ಅನ್ಯೋನ್ಯ ಸೋದರರು ಪ್ರತಿಸ್ಪರ್ಧಿಗಳಾಗಿ ಬದಲಾಗಿದ್ದರು. ತಿಲೋತ್ತಮೆಯನ್ನು ಇಬ್ಬರ ನಡುವೆ ಒಂದು ಕುಸ್ತಿ ಪಂದ್ಯ ಏರ್ಪಾಡಾಯಿತು. ಈ ಸುದ್ದಿ ಎಲ್ಲೆಡೆ ಕಾಳ್ಗಿಚ್ಚಿನಂತೆ ಹರಡಿತು. ಪಂದ್ಯ ನೋಡಲು ಜನರಷ್ಟೇ ಅಲ್ಲ ದೇವತೆಗಳೂ ಜಮಾಯಿಸಿದರು. ಕುಸ್ತಿ ಭೀಷಣವಾಗಿ ನಡೆಯಿತು. ತೀವ್ರವಾಗಿ, ಕ್ರೋಧತಪ್ತ ಆನೆಗಳಂತೆ ಇಬ್ಬರೂ ಸೆಣೆಸಿದರು. ಪರಸ್ಪರರ ದೌರ್ಬಲ್ಯಗಳನ್ನು ಉಪಯೋಗಿಸಿ ಪಟ್ಟು-ಪ್ರತಿಪಟ್ಟು ಹಾಕಿದರು. ಮೂರು ಲೋಕವೂ ಉಸಿರುಬಿಗಿ ಹಿಡಿದು ನೋಡಿದ ಆ ಪಂದ್ಯದಲ್ಲಿ ಕಡೆಗೂ ಯಾರೂ ವಿಜಯಿಯಾಗಲಿಲ್ಲ; ಸೋಲನ್ನೂ ಅನುಭವಿಸಲಿಲ್ಲ. ಅರ್ಥಾತ್, ಪರಸ್ಪರರ ಕೈಯಲ್ಲಿ ಸುಂದ-ಉಪಸುಂದರು ಅಂತಿಮ ಗತಿ ಕಂಡರು. ಸಮಸ್ಯೆ ನಿವಾರಣೆಗೆ ಅಸಾಮಾನ್ಯ ಶಕ್ತಿ ಬೇಕಾಗಿತ್ತೋ ಅದು ಸೌಂದರ್ಯದಿಂದ ಸುರಳೀತವಾಗಿ ಸಾಧಿಸಲ್ಪಟ್ಟಿತು. ಕೃತಜ್ಞತಾಪೂರ್ವಕವಾಗಿ ಸ್ತೋತ್ರಗೈದ ಜನರನ್ನು ನೋಡುತ್ತಾ ಮಂದಹಾಸ ಬೀರಿದ, ಬ್ರಹ್ಮದೇವ.

Tags

Related Articles

Leave a Reply

Your email address will not be published. Required fields are marked *

Language
Close