About Us Advertise with us Be a Reporter E-Paper

ಅಂಕಣಗಳು

ಶ್ರೀರಾಮನನ್ನೇ ನಿಂದಿಸಿದವರು ವಾಜಪೇಯಿಯನ್ನು ಬಿಟ್ಟಾರೆಯೇ?

ವಿದ್ಯಮಾನ: ಜಿತೇಂದ್ರ ಕುಂದೇಶ್ವರ

ಭಾರತದ ಪ್ರಧಾನಿ ಅದಕ್ಕಿಂತಲೂ ಮಿಗಿಲಾಗಿ ಅದ್ಭುತ ರಾಜನೀತಿಜ್ಞ ಅಟಲ್ ಬಿಹಾರಿ ವಾಜಪೇಯಿಯ ಜತೆ ಕಳೆದ ಕೆಲ ಅಮೂಲ್ಯ ಕ್ಷಣಗಳ ಕುರಿತು ಬರೆಯದೇ ಹೋದರೆ ಆತ್ಮವಂಚನೆಯಾದೀತು.

ನಮ್ಮ ಮನೆಯಲ್ಲಿ ತಂದೆಯವರು ವಾಜಪೇಯಿ ಆರಾಧನಾ ದೃಷ್ಟಿಯಿಂದ ನೋಡುತ್ತಿದ್ದ ಅವರ ಕುರಿತು ಚರ್ಚಿಸುತ್ತಿದ್ದ ಹಿನ್ನೆಲೆಯಲ್ಲಿ ನಮಗೂ ವಾಜಪೇಯಿ ಎಂದರೆ ಅದೇನೋ ಬಲು ಗೌರವ. ಅವರನ್ನು ನಮ್ಮೂರಿನ ಪೈ ಸಮುದಾದಯ ವಾಜ್‌ಪೈ ಎಂದೇ ಬಾಲ್ಯದಲ್ಲಿ ತಿಳಿದಿದ್ದೆ. ನಾನು ವಿದ್ಯಾರ್ಥಿಯಾಗಿದ್ದಾಗ ಉಡುಪಿ ರಥಬೀದಿಯಲ್ಲಿ ಅವರ ಭಾಷಣ ಕೇಳಿ ಬೆರಗಾಗಿದ್ದೆ. ಅಂಥ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಬಹಳ ಹತ್ತಿರದಿಂದ ನೋಡುವ, ಸಂವಾದ ಮಾಡುವ ಅವಕಾಶ ನನಗೂ ಬಂದಿತ್ತು.

ಪ್ರಧಾನಿಯಾಗಿ ವಾಜಪೇಯಿ ಉಡುಪಿಗೆ ಆಗಮಿಸಿದ ಸಂದರ್ಭ ನಾನು ಜನಾಂತರಂಗ ಸೇರಿದ್ದಷ್ಟೇ. ಆಗಿನ್ನೂ ಬರೆಯಲು ಶುರು ಮಾಡಿರಲಿಲ್ಲ. ಆಗ ನನ್ನ ಸೀನಿಯರ್ ಅಲೆವೂರು ದಿನೇಶ್ ಕಿಣಿವರದಿಗಾರನಾಗಿದ್ದರು. ಅವರು ತಮ್ಮ ಕ್ಯಾಮೆರ ನನಗೆ ಕೊಟ್ಟು ವಾಜಪೇಯಿ ಅವರ ಫೋಟೊ ನೀನೇ ತೆಗೆಯಬೇಕು ಎಂದು ಹೇಳಿದರು. ಕ್ಯಾಮೆರಾ ಎಲ್ಲಿ ಹಿಡಿಯಬೇಕು, ಬಟನ್ ಅದುಮ ಬೇಕು, ಫೋಕಸ್ ಮಾಡಬೇಕು ಎಂದು ಹೇಳಿದರು. ಜತೆಯಲ್ಲಿದ್ದ ಸುಭಾಶ್ಚಂದ್ರ ವಾಗ್ಲೆ ಅವರು ಇನ್ನಷ್ಟು ಬಿಡಿಸಿ ಹೇಳಿದರು. ಕೆಲವೇ ನಿಮಿಷದಲ್ಲಿ ನಾನೊಬ್ಬ ಫೋಟೊಗ್ರಾಫರ್ ಆಗಿ ಸಿದ್ಧವಾಗಿದ್ದೆ.

ಪ್ರಧಾನಿಯ ಭದ್ರತಾ ಸಿಬ್ಬಂದಿ ಫೋಟೊ ಗ್ರಾಫರ್‌ಗಳನ್ನು ಕರೆದು ತಪಾಸಣೆ ಮಾಡುತ್ತಿದ್ದರು. ಕ್ಯಾಮೆರಾಗಳನ್ನು ಪಡೆದು ಅದರ ಲೆನ್‌ಸ್ ತೆಗೆಯುವಂತೆ ಹೇಳಿ ಪರಿಶೀಲಿಸುತ್ತಿದ್ದರು. ಆದರೆ ನನಗೆ ಕ್ಯಾಮೆರಾ ಫೋಕಸ್ ಮಾಡುವುದು ಮತ್ತು ಬಟನ್ ಒತ್ತುವುದನ್ನು ಗಂಟೆಯ ಹಿಂದಷ್ಟೇ ಕಲಿತಿದ್ದೆ. ಹೀಗಾಗಿ ಒಳಗೊಳಗೆ ನಡುಕ ಶುರವಾಯಿತು. ಭದ್ರತಾ ಸಿಬ್ಬಂದಿ ಕ್ಯಾಮರ ನನ್ನ ಕೈಗೆ ಕೊಟ್ಟು ಲೆನ್‌ಸ್ ತೆಗೆದು ಕೈಯಲ್ಲಿ ನೀಡುವಂತೆ ಹೇಳಿದಾಗ ನಾನು ಪೂರ್ತಿ ನಡುಗಿ, ಬೆವತು ಹೋಗಿದ್ದೆ. ಭದ್ರತಾ ಸಿಬ್ಬಂದಿಗೆ ಸಂಶಯ ಬರತೊಡಗಿತು, ಬರುವುದೂ ಸಹಜ. ಬದಿಗೆ ನಿಲ್ಲಿಸಿ ತಪಾಸಣೆ, ವಿಚಾರಣೆ ಜೋರಾಗಿ ನಡೆಸತೊಡಗಿದರು. ನನ್ನ ಪರಿಸ್ಥಿತಿ ಕಂಡು ಹಿರಿಯ ಪತ್ರಕರ್ತ ಶಿಕಾರಿಪುರ ಈಶ್ವರ ಭಟ್ಟರು ಪಾಪ ಹುಡುಗನನ್ನು ಬಿಟ್ಟು ಬಿಡಿ, ನಿಮ್ಮನ್ನು ನೋಡಿ ಹೆದರಿರಬೇಕು, ಅವ ನಮ್ಮವನೇ ಎಂದರು. ಸ್ವಲ್ಪ ತಪಾಸಣೆ ನಡೆಸಿದ ಬಳಿಕ ವಾಜಪೇಯಿ ಸುದ್ದಿಗೋಷ್ಠಿ ನಡೆಯುವ ಸ್ಥಳಕ್ಕೆ ಬಿಟ್ಟರು.

ಗೀತಾಂಜಲಿ ಟಾಕೀಸ್ ಸಮೀಪ ಬಯಲು ಪ್ರದೇಶದಲ್ಲಿ ಒಂದಡಿ ಎತ್ತರದ ಸಣ್ಣ ವೇದಿಕೆ. ಅದರ ಮಧ್ಯ ಒಂದು ಸೋಫಾ ರೀತಿಯ ಕುರ್ಚಿ ತಂದಿಟ್ಟರು. ಸಿಬ್ಬಂದಿ, ಬಾಂಬ್ ಪತ್ತೆದಳ, ಶ್ವಾನದಳ ತಪಾಸಣೆ ಬಳಿಕ ವಾಜಪೇಯಿ ಅವರು ಬರುವ ಸ್ವಲ್ಪ ಹೊತ್ತು ಮುಂಚೆ ಒಂದು ಮರದ ಕುರ್ಚಿ ತಂದಿಟ್ಟರು.

ನಾನು ಎಲ್ಲರಿಗಿಂತ ಸಣ್ಣವ ಆದ್ದರಿಂದ ಎದುರುಗಡೆ, ವಾಜಪೇಯಿ ಅವರಿಗೆ ತೀರಾ ಹತ್ತಿರದಲ್ಲಿ ನಿಂತಿದ್ದೆ. ಫೋಟೊ ತೆಗೆಯಲು ಎದ್ದು ನಿಂತು ಬಾಗಿದಾಗ ಪ್ರಧಾನಿ ಪಕ್ಕದಲ್ಲಿಯೇ ನಿಂತಿದ್ದ ಭದ್ರತಾ ಸಿಬ್ಬಂದಿ ನನ್ನ ತಲೆ ಮೇಲೆ ಕೈ ಇಡಲು ಬಂದರು. ಆಗ ವಾಜಪೇಯಿ ಬೇಡ ಬಿಡು ಎಂಬ ಸಂಜ್ಞೆ ಮಾಡಿದರು. ಸಿಬ್ಬಂದಿ ಬಳಿಕ ತಲೆಗೆ ಮೊಟಕಲು ಬರಲಿಲ್ಲ. ಬಳಿಕ ನಾನು ಫೋಟೊ ಕ್ಲಿಕ್ ಮಾಡಿದ್ದೇಮಾಡಿದ್ದರು. ವಿಶೇಷ ಎಂದರೆ ಮೊದಲ ಬಾರಿ ಕ್ಯಾಮೆರಾ ಹಿಡಿದು, ಮೊದಲ ಬಾರಿ ಪ್ರಧಾನಿಯ ಫೋಟೊ ತೆಗೆದು ಮರುದಿನ ಪತ್ರಿಕೆಯಲ್ಲಿ ಮೊದಲ ಪುಟದಲ್ಲಿ, ಮೊದಲು ಬೈಲೇನ್ ಜಿತೇಂದ್ರ ಪ್ರಕಟವಾಗಿತ್ತು. ಆವಾಗ ಕುಂದೇಶ್ವರ ಹೆಸರು ಸೇರಿಕೊಂಡಿರಲಿಲ್ಲ. ಬಳಿಕ ಉಡುಪಿ ರಾಜಾಂಗಣ ಲೋಕಾರ್ಪಣೆ ಕಾರ್ಯಕ್ರಮಕ್ಕೂ ಹೋಗಿದ್ದೆ. ಪೇಜಾವರ ಶ್ರೀಗಳು, ಪ್ರದೀಪ್ ಕುಮಾರ್ ಕಲ್ಕೂರ ಅವರು ಸೇರಿ ವಾಜಪೇಯಿ ಅವರಿಗೆ ಸನ್ಮಾನ ಕಣ್ಣಿಗೆ ಕಟ್ಟಿದಂತಿದೆ.

ಆ ಬಳಿಕ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮದ ಅನೇಕ ವರದಿಗಳನ್ನು ಮಾಡಿದ್ದೇನೆ. ಆದರೆ ಸರಿ ಸುಮಾರು ಅರ್ಧ ಕಿ.ಮೀ. ದೂರದಲ್ಲಿ. ಆದರೆ ವಾಜಪೇಯಿ ಅವರದು ಕೈಗೆಟಕುವ ದೂರದಲ್ಲಿ ನಿಂತು ಫೋಟೊ ಹೊಡೆದದ್ದು ಅಚ್ಚಳಿಯದ ನೆನಪಾಗಿ ಉಳಿದಿದೆ.

ಅವರ ಮಾತುಗಳು, ಹಾವ, ಭಾವ ಅವರಲ್ಲಿರುವ ಮಗು ಹೃದಯ ಬಹಳ ಇಷ್ಟ. ಡಾ. ವಿ.ಎಸ್. ಆಚಾರ್ಯರ ಪುತ್ರ ಡಾ.ಕಿರಣ್ ಆಚಾರ್ಯ ವಾಜಪೇಯಿ ಅವರನ್ನು ಹತ್ತಿರದಿಂದ ಕಂಡವರು. ಬಾಲ್ಯದಲ್ಲಿ ವಿ.ಎಸ್.ಆಚಾರರ್ಯ ಕೊಚ್ಚಿ, ಹೊನ್ನಾವರ ಮೊದಲಾದೆಡೆ ವಾಜಪೇಯಿ ಜತೆ ಕಾರಿನಲ್ಲಿ ಜತೆಯಾಗಿ ತೆರಳಿದವರು.

ತಾಯಿ ಹೃದಯ

ಅವರ ತಾಯಿ ಹೃದಯಕ್ಕೆ ಒಂದು ಉದಾಹರಣೆ ಸಾಕು. ಹೊನ್ನಾವರದ ದಾರಿ ಮಧ್ಯೆ ಸಾಗರ ಪ್ರವೇಶವಾಗುತ್ತಿದ್ದಂತೆ ರಸ್ತೆ ಬದಿಯಲ್ಲಿ ಒಬ್ಬ ಅಭಿಮಾನಿ ಗಂಧದ ಮಾಲೆ ಹಿಡಿದುಕೊಂಡು ನಿಂತಿದ್ದ. ಆಗ ವಾಜಪೇಯಿ ಅವರು ಕಾರು ನಿಲ್ಲಿಸಲು ಹೇಳಿದರು. ಪಾಪ ನನಗಾಗಿ ಎಷ್ಟುಹೊತ್ತಿನಿಂದ ನಿಂತಿದ್ದಾರೋ ಏನೋ, ನಾನು ಇಳಿದು ಮಾತನಾಡಿಸಲೇ ಬೇಕು ಎಂದರು. ಕಾರಿಂದ ಇಳಿದು ಅಭಿಮಾನಿಯನ್ನು ಬೆನ್ನು ಮಾತನಾಡಿಸಿ, ಗಂಧದ ಮಾಲೆಯನ್ನು ಹಾಕಿಕೊಂಡ ಬಳಿಕ ಮೂಸಿ, ಓಹೋ ಏನು ಪರಿಮಳ ಒರಿಜಿನಲ್ ಗಂಧದ ಮಾಲೆ ಎಂದು ಮೆಚ್ಚಿದ್ದರು. ಸಾಮಾನ್ಯರ ಕಷ್ಟವನ್ನು ಅರಿತವರು.

ಬೊಂಡ ಪ್ರಿಯ:

ಅವರಿಗೆ ಕರಾವಳಿಗೆ ಬರುವಾಗ ಬೊಂಡ (ಎಳನೀರು) ಬೇಕೇ ಬೇಕು. ತುರ್ತು ಪರಿಸ್ಥಿತಿ ಸಂದರ್ಭ ಅವರ ಒಂದು ಕಿಡ್ನಿ ವೈಫಲ್ಯವಾಗಿ ತೆಗೆದು ಹಾಕಲಾಗಿತ್ತು. ಬಳಿಕ ಅವರಿಗೆ ಒಂದೇ ಕಿಡ್ನಿ ಉಳಿದಿತ್ತು. ಹೀಗಾಗಿ ಮೂತ್ರ ಸರಾಗವಾಗಿ ಆಗಲು ಬೊಂಡ ಕುಡಿಯುತ್ತಿದ್ದರು. ಕಾರಿನಲ್ಲಿ ಹೋಗುವಾಗ ಒಂದಷ್ಟು ರಾಶಿ ಹಾಕುತ್ತಿದ್ದರು. ಆಗಾಗ ಕುಡಿಯುತ್ತಿದ್ದರು. ಫ್ರೆಶ್ ಬೊಂಡ ಕುಡಿಯುವ ಮಜವೇ ಬೇರೆ ಎಂದು ಉದ್ಗರಿಸುತ್ತಿದ್ದರು ಎಂದು ಕಿರಣ್ ಆಚಾರ್ಯ ನೆನಪು ಮಾಡಿಕೊಳ್ಳುತ್ತಾರೆ.

ನಿಜ ಅವರಿಗೆ ಕರಾವಳಿ ಅಂದರೆ ಪ್ರೀತಿ, ಏಕೆಂದರೆ ಜನಸಂಘಕ್ಕೆ ದಕ್ಷಿಣ ಭಾರತಲ್ಲಿ ಮೊದಲ ಬಾರಿ (1968 )ಆಡಳಿತ ನೀಡಿದ್ದು ಉಡುಪಿ ಪುರಸಭೆ. ಅದರ ರೂವಾರಿ ಡಾ.ವಿಎಸ್.ಆಚಾರ್ಯ ಎಂದರೆ ವಿಶೇಷ ಮಮತೆ. ಹೀಗಾಗಿ ಆಚಾರ್ಯರ ಮನೆಗೂ ಭೇಟಿ ನೀಡುತ್ತಿದ್ದರು. ಕಾರ್ಕಳದಲ್ಲೂವರ ಗುರು ಪ್ರಭುದತ್ತ ಮುನಿಗಳನ್ನು ಭೇಟಿಯಾಗಲು ಬಂದಿದ್ದರು. ದಕ್ಷಿಣ ಭಾರತದಲ್ಲಿ ಅವರಿಗೆ ಅತ್ಯಂತ ಇಷ್ಟವಾಗಿದ್ದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ. ಇಲ್ಲಿನ ಬಲಪಂಥೀಯ ವಿಚಾರಧಾರೆಗಳು, ಇಲ್ಲಿನ ಸಂಸ್ಕೃತಿ ಬಹಳ ಇಷ್ಟವಾಗಿತ್ತು.

ಟೀಕಾಚಾರ್ಯರು:

ಮಧ್ಯ ಪ್ರದೇಶದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ವಾಜಪೇಯಿ ಅವರು ಅವಿವಾಹಿತರಾಗಿಯೇ ಉಳಿದರು. ಆದರೆ ಅವರು ನಾನು ಅವಿವಾಹಿತನೇ ಹೊರತು ಬ್ರಹ್ಮಚಾರಿಯಲ್ಲ ಎಂದು ಬಹಿರಂಗವಾಗಿ ಹೇಳುತ್ತಿದ್ದರು. ಅವರು ಮದ್ಯ ಸೇವನೆ ಮಾಡುತ್ತಿದ್ದರು. ಮಾಂಸ ಸೇವನೆಯನ್ನೂ ಮಾಡುತ್ತಿದ್ದರು. ಆದರೆ ಅದ್ಯಾವುದನ್ನೂ ಮುಚ್ಚಿಡದೆ ಸಾಮಾನ್ಯ ಸರಳ ವ್ಯಕ್ತಿಯಂತೆ ಬದುಕಿದರು. ನಿಮ್ಮಂತೆ ಸಿನಿಮಾ ನೋಡುತ್ತಿದ್ದರು. ಹೇಮಾ ಮಾಲಿನಿಯ ಸೀತಾ ಔರ್ ಗೀತಾ ಸಿನಿಮಾನವನ್ನು 25 ಬಾರಿ ನೋಡಿದವರು. ಇದನ್ನು ಹೇಮಾ ಮಾಲಿನಿಯೇ ಹೇಳಿಕೊಂಡಿದ್ದಾರೆ. ಮಧುಮೇಹದಿಂದ ಬಳಲುತ್ತಿದ್ದ ವಾಜಪೇಯಿ ಅವರಿಗೆ ಒಮ್ಮೆ ಕಣ್ಣೆದುರಲ್ಲಿ ಜಾಮೂನಿನಂದ ಗಮನ ಬೇರೆಡೆ ಸೆಳೆಯಲು ಜತೆಗಿದ್ದ ಸಿಬ್ಬಂದಿ ಅವರನ್ನು ಮಾಧುರಿ ದೀಕ್ಷಿತ್‌ಗೆ ಪರಿಚಯಿಸಿದ್ದರು. ಸಿನಿಮಾ ಪ್ರೇಮಿ ವಾಜಪೇಯಿ ಅವರು ಜಾಮೂನು ಮರೆತು ಬಿಟ್ಟರು ಎಂದು ಸಿಬ್ಬಂದಿಯೇ ನೆನಪಿಸಿಕೊಳ್ಳುತ್ತಾರೆ.

ರಾಜಕೀಯ ವಿರೋಧಿಗಳೂ ಕೂಡಾ ವಾಜಪೇಯಿ ಅವರನ್ನು ಅಜಾತಶತ್ರು ಎಂದು ಅವರ ಸರಳತೆ, ಹೃದಯ ವೈಶಾಲ್ಯತೆ ಮೆಚ್ಚಲೇ ಬೇಕು. ಆದರೆ ಹೃದಯ ಶೂನ್ಯ ಎಡಪಂಥೀಯ ಬುದ್ಧಿ ಜೀವಿಗಳು ವಾಜಪೇಯಿ ಸತ್ತಾಗ ಕೊನೆಗೂ ಅಜಾತ ಸತ್ರು ಎಂದು ಬರೆದರು. ಕೆಲ ಬುದ್ಧಿ ಜೀವಿಗಳು ಅವರ ಕುಡಿತ, ಸ್ತ್ರೀ ಸಂಪರ್ಕ, ಮಾಂಸ ಸೇವನೆಯನ್ನೇ ಹೈಲೈಟ್ ಮಾಡಿದರು. ಆರೆಸ್ಸೆಸ್ ಬೆಳೆಸಿದವರ ಅಜಾತಶತ್ರು ಆಗಲು ಸಾಧ್ಯವಿಲ್ಲ ಎಂದು ಟೀಕಿಸಿದರು.

ವಾಜಪೇಯಿ ವ್ಯಸನಗಳಿಂದ ಸಮಾಜಕ್ಕೆ ಹಾನಿಯಾಗಿಲ್ಲ. ಅವರು ಸಮಾಜಕ್ಕೆ ಶಕ್ತಿಯಾಗಿದ್ದರು, ದೇಶಕ್ಕಾಗಿಯೇ ಬದುಕಿದವರು. ವಾಜಪೇಯಿ ಅವರನ್ನು ಟೀಕಿಸುವ ಕೋಮುವಾದಿಗಳನ್ನು ನೋಡುವಾಗ ದಿವಂಗತ ಶಿರೂರು ಲಕ್ಷ್ಮೀವರ ತೀರ್ಥರ ವ್ಯಸನಗಳಿಗಾಗಿ ಟೀಕಿಸುವ ಬಲಪಂಥೀಯ ಕಟ್ಟಾ ಸಾಂಪ್ರದಾಯ ವಾದಿ ಬುದ್ಧಿಜೀವಿಗಳ ನೆಪಾುತ್ತಿದೆ. ಶಿರೂರು ಶ್ರೀಗಳಿಗೆ ವ್ಯಸನಗಳಿದ್ದರೂ ಅವರು ಸಮಾಜಕ್ಕೆ ಶಕ್ತಿಯನ್ನು ತುಂಬಿದ ಪೀಠಾಧೀಪತಿಗಳಲ್ಲಿ ಮುಂಚೂಣಿಯಲ್ಲಿದ್ದಾರೆ.

ಆದರೆ ಅದನ್ನು ಮರೆತು, ಶೀರೂರು ಶ್ರೀಗಳು ಬ್ರಾಹ್ಮಣನಾಗಿ, ಸನ್ಯಾಸಿಯಾಗಿ ಸ್ತ್ರೀ ಸಂಪರ್ಕ, ಮದ್ಯ ಸೇವನೆ ಮಾಡಿರುವುದಾಗಿ ಅವರು ಕಾಲವಾದ ಬಳಿಕ ಟೀಕಿಸುವ ಬಲಪಂಥೀಯ ಕಡು ಸಂಪ್ರದಾಯವಾದಿಗಳಿಗೂ, ಬ್ರಾಹ್ಮಣ ವಾಜಪೇಯಿ ಅವರು ಮದ್ಯ, ಮಾಂಸ ಸೇವನೆ ಮಾಡುತ್ತಿದ್ದರು ಹೈಲೈಟ್ ಮಾಡುವ ಎಡಪಂಥೀಯ ಬುದ್ಧಿಜೀವಿಗಳ ಮನೋಸ್ಥಿತಿಗೂ ಹೆಚ್ಚಿನ ವ್ಯತ್ಯಾಸ ಇಲ್ಲ ಎಂದೇ ಭಾವನೆ.

Tags

Related Articles

Leave a Reply

Your email address will not be published. Required fields are marked *

Language
Close