About Us Advertise with us Be a Reporter E-Paper

Breaking Newsಪ್ರಚಲಿತರಾಜ್ಯ

ಗೋಕರ್ಣ ಮಹಾಬಲೇಶ್ವರ ದೇಗುಲ ಮತ್ತೆ ಸರಕಾರದ ಸುಪರ್ದಿಗೆ

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಸುಪ್ರಸಿದ್ಧ ಗೋಕರ್ಣ ಮಹಾಬಲೇಶ್ವರ ದೇವಾಲಯವನ್ನು ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರ ಮಾಡಿ ರಾಜ್ಯ ಸರಕಾರ ಹೊರಡಿಸಿದ್ದ ಅಧಿಸೂಚನೆಯನ್ನು ಹೈಕೋರ್ಟ್ ರದ್ದುಪಡಿಸಿ‌ ಆದೇಶಿಸಿದೆ.

2008ರಲ್ಲಿ ಆಗಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಸರಕಾರ ದೇವಾಲಯವನ್ನು ಮಠಕ್ಕೆ ಹಸ್ತಾಂತರ ಮಾಡಿತ್ತು. ಸರಕಾರದ ಆದೇಶ ಪ್ರಶ್ನಿಸಿ ಭಕ್ತರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ಪೂರ್ಣಗೊಳಿಸಿ ತೀರ್ಪು ನೀಡಿದ ನ್ಯಾ. ಬಿ.ವಿ.ನಾಗರತ್ನ ಹಾಗೂ ನ್ಯಾ. ಅರವಿಂದ್ ಕುಮಾರ್ ಅವರಿದ್ದ ವಿಭಾಗೀಯ ಪೀಠ, ಪುರಾಣ ಪ್ರಸಿದ್ಧ ಸಾರ್ವಜನಿಕ ದೇವಾಲಯವನ್ನು ಯಾವುದೇ ಖಾಸಗಿ ಮಠಕ್ಕೆ ವಹಿಸಲು ಸರಕಾರಕ್ಕೆ ಅಧಿಕಾರ ಇಲ್ಲ. ದೇವಸ್ಥಾನವನ್ನು ಧಾರ್ಮಿಕ ದತ್ತಿ ಇಲಾಖೆ ಪಟ್ಟಿಯಿಂದ ಕೈಬಿಟ್ಟಿದ್ದು ಸರಿಯಲ್ಲ ಎಂದು ಅಭಿಪ್ರಾಯಪಟ್ಟು, ದೇವಸ್ಥಾನವನ್ನು ಹಸ್ತಾಂತರ ಮಾಡಿದ್ದ ಸರಕಾರದ ಆದೇಶವನ್ನು  ರದ್ದುಪಡಿಸಿದೆ.

ಇದೇ ವೇಳೆ ದೇವಸ್ಥಾನವನ್ನು ಮತ್ತೆ ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿಸಿಕೊಳ್ಳುವ ಮೂಲಕ ಗೋಕರ್ಣ ಮಹಾಬಲೇಶ್ವರ ದೇವಸ್ಥಾನವನ್ನು ಧಾರ್ಮಿಕ ದತ್ತಿ ಇಲಾಖೆ ದೇಗುಲವಾಗಿ ಮುಂದುವರೆಸಬೇಕು. ದೇವಸ್ಥಾನದ ಆಡಳಿತಕ್ಕಾಗಿ ಮುಂದಿನ ಸೆ. 5 ರೊಳಗೆ ಉಸ್ತುವಾರಿ ಸಮಿತಿ ರಚಿಸಬೇಕು. ಸೆ. 10ರಿಂದ ಸಮಿತಿ ದೇವಸ್ಥಾನದ ಆಡಳಿತ ನೋಡಿಕೊಳ್ಳಬೇಕು. ಉತ್ತರ ಕನ್ನಡ ಜಿಲ್ಲಾಧಿಕಾರಿ ದೇವಸ್ಥಾನಕ್ಕೆ ಸಂಬಂಧಿಸಿದ ಎಲ್ಲಾ ಸ್ಥಿರಾಸ್ತಿ, ಚರಾಸ್ತಿ ಹಾಗೂ ಬ್ಯಾಂಕ್ ಅಕೌಂಟ್ ಗಳ ಮಾಹಿತಿಯನ್ನು ಸಂಗ್ರಹಿಸಿ ಎರಡು ವಾರಗಳ ಒಳಗೆ ಹೈಕೋರ್ಟ್‌ಗೆ ವರದಿ ಸಲ್ಲಿಸಬೇಕು ಎಂದು ತೀರ್ಪಿನಲ್ಲಿ ಆದೇಶಿಸಿದೆ.

Tags

Related Articles

Leave a Reply

Your email address will not be published. Required fields are marked *

Language
Close