About Us Advertise with us Be a Reporter E-Paper

ಅಂಕಣಗಳು

ವೈದ್ಯರ ಬರಹ, ಇರಬೇಕಿನ್ನು ಒಳ್ಳೆ ತರಹ….!

- ದೇವಿ ಮಹೇಶ್ವರ ಹಂಪಿನಾಯ್ಡು

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಅನ್ನ, ನೆಲ, ಜಲ, ವಿದ್ಯೆ, ಗುರು, ಗೋವು, ಸೂರು, ಪಂಚಭೂತ ಹೀಗೆ ಎಲ್ಲವನ್ನೂ ದೈವಕ್ಕೆ ಸಮನಾಗಿ ಕಾಣುವ ವೈಚಾರಿಕತೆ ಇದೆ. ಹಾಗೆಯೇ ನೋವಿಗೆ, ಸಾವಿಗೆ ಕಾರಣವಾಗುವ ರೋಗವನ್ನು ನಿವಾರಿಸುವ ವೈದ್ಯರನ್ನು ಸಾಕ್ಷಾತ್ ವಿಷ್ಣುವಿಗೆ ಸಮೀಕರಿಸಲಾಗಿದೆ.

ಆದರೆ ಇಂದು ಬದಲಾದ ಜಾಗತಿಕ ಬೆಳವಣಿಗೆ ಮತ್ತು ಬದಲಾವಣೆಗಳ ಹೊಡೆತಕ್ಕೆ ನಮ್ಮ ಜೀವರಕ್ಷಕ ವೈದ್ಯರೂ ಬಲಿಪಶುಗಳಾಗಿರುವುದು ವ್ಯವಸ್ಥೆಯ ದುರಂತ. ಕಳೆದ ಗುರುವಾರ (ವಿಶ್ವವಾಣಿ ವರದಿ ಅಕ್ಟೋಬರ್-5, 2018) ಉತ್ತರ ಪ್ರದೇಶದ ಉಚ್ಚ ನ್ಯಾಯಾಲಯ ಮಹತ್ವದ ಆದೇಶವೊಂದನ್ನು ನೀಡಿದೆ. ಅದೇನೆಂದರೆ, ವೈದ್ಯರು ರೋಗಿಗೆ ನೀಡುವ ಸಲಹಾ ಚೀಟಿಯಲ್ಲಿ (ಪ್ರಿಸ್ಕ್ರಿಪ್ಷನ್) ಕಳಪೆ ಕೈಬರಹ ಬರೆದದ್ದಕ್ಕೆ ಮೂವರು ವೈದ್ಯರಿಗೆ ತಲಾ ಐದು ಸಾವಿರ ದಂಡವಿಧಿಸುವುದರೊಂದಿಗೆ ಇನ್ನು ಮುಂದೆ ಎಲ್ಲರಿಗೂ ಅರ್ಥವಾಗುವಂತೆ ಬರೆಯಬೇಕೆಂದು ಎಚ್ಚರಿಸಿದೆೆ. ಇದಕ್ಕೆ ವೈದ್ಯರುಗಳು ಕೆಲಸದ ಒತ್ತಡದಿಂದ ಸ್ಫುಟವಾಗಿ ಬರೆಯಲು ವಿಫಲವಾಗಿದ್ದೇವೆಂದು ಮನ್ನಿಸಲು ಸಲ್ಲಿಸಿದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಹೌದು, ಈ ಮೊದಲೇ ಸೂಚಿಸಿರುವಂತೆ ವೈದ್ಯರು ಎಲ್ಲರಿಗೂ ಬೇಗ ಅರಿಯುವಂತೆ ಸಲಹಾ ಚೀಟಿಯನ್ನು ಬರೆಯುವುದು ಕಡ್ಡಾಯಗೊಳಿಸಲಾಗಿತ್ತು. ಆದರೆ ಅದನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ನ್ಯಾಯಾಲಯ ಮಾತ್ರ ಆಗಾಗ ಇಂತಹ ಚಾಟಿಯನ್ನು ಬೀಸುತ್ತಲೇ ಇದೆ.

ಸರಿಸುಮಾರು ನಲವತ್ತು ವರ್ಷಗಳ ಹಿಂದೆ ಈಗಿನಂತೆ ರೋಗ’ಗಳಿರಲಿಲ್ಲ. ಕೆಮ್ಮು, ನೆಗಡಿ, ಜ್ವರ, ಪೆಟ್ಟು, ಉಳುಕು, ಗಾಯ, ರಕ್ತಸ್ರಾವ ಹೀಗೆ ಪ್ರಾಥಮಿಕ ಚಿಕಿತ್ಸೆಯಲ್ಲೇ ಗುಣಪಡಿಸುವಂತಹ ತಾತ್ಕಾಲಿಕ ರೋಗಗಳಿದ್ದವು. ಅದನ್ನು ಮೀರಿ ಕಾಯಿಲೆಗಳು ಬಂದರೆ ದೊಡ್ಡಾಸ್ಪತ್ರೆ, ದೊಡ್ಡ ಡಾಕ್ಟ್ರು ಎಂಬ ವಾಣಿವಿಲಾಸ್, ವಿಕ್ಟೋರಿಯಾದಂತಹ ಸರಕಾರಿ ಆಸ್ಪತ್ರೆಗಳಿರುತ್ತಿದ್ದವು. ಆಗ ಸಿಪ್ಲಾ, ಲುಪಿನ್, ರ್ಯಾನ್‌ಬ್ಯಾಕ್ಸಿ, ಡಾ.ರೆಡ್ಡಿ, ಸನ್ ಫಾರ‌್ಮ ಇನ್ನು ಕೆಲವು ಹೊರತುಪಡಿಸಿದರೆ ಔಷಧ ಕಂಪನಿಗಳೂ ವಿರಳವಾಗಿದ್ದವು. ವೈದ್ಯರ ಬಳಿ ತೆರಳಿ ರೋಗವನ್ನು ನಿವೇದಿಸಿಕೊಂಡರೆ ವೈದ್ಯರ ಬಳಿಯೇ ನಾಲ್ಕೈದು ಡಬ್ಬಿಗಳಿರುತ್ತಿದ್ದವು. ಅವುಗಳಲ್ಲಿ ಡೈಕ್ಲೋಫಿನಾಕ್, ಅಸೆಕ್ಲೋಫಿನಾಕ್, ಲೋಪರಮೈಡ್ ಹೀಗೆ ಜನ್ರಿಕ್ ಔಷಧಗಳ ಗುಳಿಗೆಗಳನ್ನು ಬೆಳಿಗ್ಗೆ, ಮಧ್ಯಾಹ್ನ, ರಾತ್ರಿಗೆ ಎಂದು ಹೇಳಿ ಕಾಗದದಲ್ಲಿಟ್ಟು ಮಡಚಿ ಕಳಿಸುತ್ತಿದ್ದರು. ಅನಿವಾರ‌್ಯವಾದರೆ ಇಂಜೆಕ್ಷನ್ ನೀಡಿ ಕೂಡಲೇ ಮನೆಗೆ ಕಳುಹಿಸುತ್ತಿದ್ದರು. ಇದರಿಂದಾಗಿ ಔಷಧ ಅಂಗಡಿಗಳೂ ಕಡಿಮೆ ಇದ್ದವು.

ಯಾವಾಗ ಭಾರತ ಸರಕಾರ ‘ಪೇಟೆಂಟ್ ಕಾಯಿದೆ’ಯಲ್ಲಿ ಮಾರ್ಪಾಟು ತಂದು ಎಲ್ಲವನ್ನೂ ಸರಳೀಕರಣಗೊಳಿಸಿತೋ, ಆಗ ಶುರುವಾಯಿತು ನೋಡಿ, ಔಷಧ ಕಂಪನಿಗಳ ನಿಜವಾದ ವ್ಯವಹಾರ. ಇದರ ಜತೆಗೆ ಮಧುಮೇಹ, ಸ್ಥೂಲಕಾಯ ಮುಂತಾದ ಮಾಪನಗಳ ಅಂಕಿಪ್ರಮಾಣದ ಮಟ್ಟವನ್ನು ಕೆಲ ವ್ಯಾಪಾರಿ ಹಾಗೂ ಸ್ವಾರ್ಥ ಉದ್ದೇಶಗಳಿಂದ, ಸ್ಪರ್ಧಾತ್ಮಕತೆಯ ಪರಿಣಾಮವಾಗಿ ಜಾಗತಿಕವಾಗಿ ಕೆಳಗೆ ಇಳಿಸಲಾಯಿತೋ ಅಲ್ಲಿಂದ ಔಷಧ ತಯಾರಕ ಕಂಪನಿಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡು ಬೆಳೆಯತೊಡಗಿತು. ಇಂದು ಇವುಗಳು ಎಂತಹ ದೈತ್ಯ ರೂಪ ಪಡೆದುಕೊಂಡಿದೆ ಎಂದರೆ ಸಾಕ್ಷಾತ್ ವೈದ್ಯರನ್ನೇ ನುಂಗಿ ಕುಳಿತಿದೆ.

ಇಂತಹ ಕಂಪನಿಗಳು ವೈದ್ಯರನ್ನು ಒಂದರ್ಥದಲ್ಲಿ ಖರೀದಿಸಿಬಿಟ್ಟಿವೆ. ಇದರ ಅಡ್ಡಪರಿಣಾಮದಿಂದಾಗಿ ರಕ್ತ, ಮೂತ್ರ, ದೇಹಾಂಗಗಳನ್ನು ಪರೀಕ್ಷಿಸಿ ವರದಿ ನೀಡುವ ಲ್ಯಾಬ್‌ಗಳೂ ಸಹ ನಮ್ಮ ವೈದ್ಯರುಗಳನ್ನು ನಿಯಂತ್ರಣಕ್ಕೆ ಪಡೆದುಬಿಟ್ಟಿವೆ. ಇವುಗಳ ಹೇಗಿರುತ್ತದೆ ಎಂದರೆ ಔಷಧ ಕಂಪನಿಗಳು ಮೊದಲು ದುಬಾರಿ ಸಂಬಳವನ್ನು ನೀಡಿ ತಮ್ಮ ಕಂಪನಿಯ ಪ್ರತಿನಿಧಿಗಳನ್ನು ಕಳಿಸಿ ವೈದ್ಯರುಗಳಿಗೆ ಜೀವಿತಾವಧಿಯ ಸ್ಕೀಂ ನೀಡಿ ತಮ್ಮದೇ ಔಷಧಗಳ ಬ್ರಾಂಡ್‌ನ್ನು ಬರೆಯುವಂತೆ ಕೈಗೆ ಲೇಖನಿಯನ್ನು ನೀಡಿ ಕೈ ಕಟ್ಟುತ್ತದೆ. ಇದರಿಂದಾಗಿ ಸಾಧಾರಣ ಕೆಮ್ಮು, ನೆಗಡಿಗೆಲ್ಲ ನಾಲ್ಕೈದು ಔಷಧಗಳನ್ನು ಬರೆಯಲಾಗುತ್ತದೆ. ಇದರಿಂದ ಮೂರನ್ನು ರೋಗಿಗಾಗಿ ಬರೆದರೆ, ಉಳಿದ ಏಳು ಗುಳಿಗೆಗಳನ್ನು ಕಂಪನಿಗಾಗಿ ಬರೆಯುವ ಅನಿವಾರ್ಯ ಸೃಷ್ಟಿಯಾಗುತ್ತದೆ.

ವೈದ್ಯರ ಬಳಿ ತೆರಳುವ (ಪ್ರಮುಖವಾಗಿ ಮನೋರೋಗಿಗಳ ವೈದ್ಯರು ಈ ರೋಗಿಗಳಿಗೆ ಮೂರರಿಂದ ಆರು ತಿಂಗಳ ದೀರ್ಘಾವಧಿಯ ಔಷಧಗಳನ್ನು ನೀಡಲಾಗುತ್ತದೆ) ಈ ಪ್ರತಿನಿಧಿಗಳು ನಂತರ ಔಷಧ ಅಂಗಡಿಗಳಿಗೆ ಎಡತಾಕುತ್ತಾರೆ. ಅಲ್ಲಿ ಇಂತಿಷ್ಟು ಪ್ರಮಾಣದ ಔಷಧ ಮಾರಿಕೊಳ್ಳಲೇಬೇಕು. ಮಾರಿದರೆ ಹತ್ತಕ್ಕೆ ಐದು, ಐದಕ್ಕೆ ಎರಡಿನಂತೆ ಸ್ಕೀಂ ನೀಡಿ ಬದುಕುವ ದಾರಿಯನ್ನು ತೋರಿಸುತ್ತಾರೆ.

ಆಶ್ಚರ್ಯವೆಂದರೆ ಇಂತಹ ಕಂಪನಿಗಳು ತಯಾರಿಸುವ ಔಷಧಗಳ ಬ್ರಾಂಡ್‌ನಲ್ಲಿರುವ ಔಷಧದ ಮೌಲ್ಯಕ್ಕಿಂತಲೂ ಅದರ ಪ್ಯಾಕಿಂಗ್ ಗುಣಮಟ್ಟದ ವೆಚ್ಚವೇ ದುಬಾರಿಯಾಗಿರುತ್ತದೆ. (ಇದು ಮುದ್ರಣ ಮಾಧ್ಯಮದಲ್ಲಿರುವವರಿಗೆ ಅರಿವಿಗೆ ಬರುತ್ತದೆ) ಹೀಗೆ ಮತ್ತೊಂದು ಆಗಿ ಔಷಧ ಅಂಗಡಿಗಳು ಗ್ರಾಹಕರನ್ನು ಸೆಳೆಯಲು ಶೇ.20-30ರಷ್ಟು ರಿಯಾಯಿತಿ ನೀಡುವ ವ್ಯಸನಕ್ಕೆ ಬಿದ್ದಿವೆ. ಆದರೆ ಇಂತಹ ಅಂಗಡಿಗಳು ಸೂಕ್ಷ್ಮ ಮತ್ತು ಗಂಭೀರವಾದ ಔಷಧಗಳಿಗೆ ರಿಯಾಯಿತಿಯೇ ನೀಡುವುದಿಲ್ಲ. ಏಕೆಂದರೆ ಅಂಥವುಗಳನ್ನು ಅವರು ಮಾರುವುದೇ ಇಲ್ಲ.

ಮೊದಲೆಲ್ಲ ಔಷಧ ಅಂಗಡಿಗಳು ಬೆಳಗ್ಗೆ ಹತ್ತಕ್ಕೆ ತೆರೆದು, ಮಧ್ಯಾಹ್ನ ಊಟಕ್ಕೆ ಎರಡುಗಂಟೆಗಳ ಕಾಲ ಮುಚ್ಚಿ, ರಾತ್ರಿ ಹತ್ತಕ್ಕೆ ಬಾಗಿಲೆಳೆಯುತ್ತಿದ್ದವು. ಆದರೆ ಈಗ ರಣ ಪೈಪೋಟಿಗೆ ಬಿದ್ದಿರುವ ಅಂಗಡಿಗಳು ತಮ್ಮ ವೈಯಕ್ತಿಕ ಜೀವನವನ್ನೂ ಕಳೆದುಕೊಂಡು ಬೆಳಗ್ಗೆ ತೆರೆದರೆ, ಮಧ್ಯರಾತ್ರಿಯವರೆಗೂ ತೆರೆದು ಕೂರುವ ರೋಗಕ್ಕೆ ತುತ್ತಾಗಿವೆ. ಇನ್ನು ಮತ್ತೊಂದು ಸೈಡ್‌ಎಫೆಕ್‌ಟ್ ಎಂದರೆ ಮೊದಲೆಲ್ಲ ಕುರ, ಗಾಯ, ಊತ, ಗುಳ್ಳೆಗಳಾದರೆ ವೈದ್ಯರೇ ತಮ್ಮ ಕ್ಲಿನಿಕ್‌ನಲ್ಲಿ ಸಣ್ಣ ಶಸ್ತ್ರ ಚಿಕಿತ್ಸೆ ಮಾಡಿ ಬ್ಯಾಂಡೇಜು ಸುತ್ತಿ ಮನೆಗೆ ಕಳುಹಿಸುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಇಂತಹ ಚಿಕಿತ್ಸೆಗಳಿಗೂ ಆಪರೇಷನ್, ಅಡ್ಮಿಟ್ಟು ಎಂದು ದುಬಾರಿ ಆಸ್ಪತ್ರೆಗಳಲ್ಲಿ ಮಲಗಿಸಿ ಬಿಡುತ್ತಾರೆ. ಇನ್ನು ಕೋಟ್ಯಂತರ ರುಪಾಯಿಗಳ ಯಂತ್ರವನ್ನು ಜೋಡಿಸಿಕೊಳ್ಳುವ ಲ್ಯಾಬ್‌ಗಳೂ ವೈದ್ಯರನ್ನು ಸಂಪರ್ಕಿಸಿ ಸಣ್ಣಪುಟ್ಟ ತೊಂದರೆಗಳಿಗೂ ಪರೀಕ್ಷೆ ಮಾಡಿಸಿ ಯಂತ್ರಗಳನ್ನು ಉಪಯೋಗಿಸಿಕೊಳ್ಳಬೇಕೆಂದು ಮಂಡಿಯೂರಿ ಪ್ರಾರ್ಥಿಸಿಕೊಳ್ಳುವ ಖಾಯಿಲೆಗೆ ಒಳಗಾಗಿದೆ.

ಹೀಗಾಗಿ ರಾಜಕಾರಣಿಗಳು, ಮಂತ್ರಿಗಳು, ಮಾಜಿ ಮಂತ್ರಿಗಳು, ಪ್ರಭಾವಿಗಳು ರಿಯಲ್‌ಎಸ್ಟೇಟ್, ಬಾರು, ಕ್ಲಬ್, ಎಣ್ಣೆ ಅಂಗಡಿಗಳನ್ನು ಬಿಟ್ಟು ವೈದ್ಯಕೀಯ ಕ್ಷೇತ್ರವನ್ನು ಬಳಸಿಕೊಂಡು ಅಂಡರ್‌ಲೈನು, ಡೆಡ್‌ಲೈನ್‌ಗಳಂತಹ ಆನ್‌ಲೈನ್ ಫಾರ‌್ಮಸಿಗಳನ್ನು ತೆರೆದು ವೈದ್ಯಕೀಯ ಕ್ಷೇತ್ರವನ್ನು ದೊಡ್ಡ ಲಾಭದಾಯಕ ಉದ್ಯಮವನ್ನಾಗಿಸಿ ನುಂಗಲಾರಂಭಿಸಿದೆ. ಇಂತಹ ಪ್ರಭಾವಗಳಿಂದ ವೈದ್ಯರು ಬರೆಯುವ ಸಲಹಾ ಚೀಟಿಯಲ್ಲಿ ಔಷಧಯ ಬ್ರಾಂಡ್‌ನ ಹೆಸರನ್ನು ಇಂತಹದೇ ಅಂಗಡಿಯವರಿಗೆ ತಿಳಿಯಲೆಂದೋ, ತಿಳಿಯಬಾರದೆಂದೋ ನಿಗೂಢವಾಗಿ ಬರೆಯುವ ರೂಢಿಸಿಕೊಳ್ಳಲಾಗಿದೆ.

ಉದಾಹರಣೆಗೆ, ಒಂದು ಕಂಪನಿ ವೈದ್ಯರಲ್ಲಿ ಇಂತಹ ಬ್ರಾಂಡ್‌ನ್ನು ಬರೆಯಲು ಕೋರಿಕೊಂಡಿರುತ್ತಾರೆ. ಅದನ್ನು ಅಕ್ಕಪಕ್ಕದ ಅಂಗಡಿಯಲ್ಲಿ ಇಟ್ಟಿರುತ್ತಾರೆ. ಆ ಕಂಪನಿಯ ಬ್ರಾಂಡ್ ಅಲ್ಲಿ ಬಿಟ್ಟರೆ ಮತ್ತೆಲ್ಲೂ ಸಿಗುವುದಿಲ್ಲ. ಆಕಸ್ಮಾತ್ ಆ ರೋಗಿ ಬೇರೆ ಊರಿನವನಾಗಿ ಬಂದು ಅಲ್ಲಿ ಖರೀದಿಸದೇ ಮನೆಯ ಬಳಿ ಖರೀದಿಸಲೆಂದು ಹೊರಟರೆ, ಆತ ಊರೆಲ್ಲಾ ಸುತ್ತಿದರೂ ಸಿಗದೇ ಕಂಗಾಲಾಗುತ್ತಾನೆ. ವೈದ್ಯರ ಕೈಗುಣದ ಮೇಲೆ ಅಪಾರ ನಂಬಿಕೆ ಇಟ್ಟಿರುವುದರಿಂದ ಅದೇ ಔಷಧಯ ಬೇರೆ ಕಂಪನಿಯ ಬ್ರಾಂಡ್‌ನ್ನು ಖರೀದಿಸಲು ಇರುವುದಿಲ್ಲ. ಕೆಲ ಮಂದಿಗೆ ಅದೇ ಇಡ್ಲಿ, ಅದೇ ವಡೆ, ಅದೇ ಸಾಂಬಾರು. ಹೋಟೆಲ್ ಮಾತ್ರ ಬೇರೆ ಎಂದು ಸರಳವಾಗಿ ಮನದಟ್ಟು ಮಾಡಿದರೆ ಮಾತ್ರ ಖರೀದಿಸುತ್ತಾರೆ. ಜತೆಗೆ ಆತ ನಮ್ಮ ಡಾಕ್ಟ್ರು ಎಂತಹ ಒಳ್ಳೆಯ ಔಷಧ ಬರೆಯುತ್ತಾರೆ. ಎಲ್ಲೂ ಸಿಗುವುದಿಲ್ಲ ಎಂಬ ಹೆಮ್ಮೆಯನ್ನು ವೈದ್ಯರ ಕುರಿತು ಹೊಂದುತ್ತಾನೆ.

ಇನ್ನು ಕೆಲ ವೈದ್ಯರು ತಮ್ಮ ಆಸ್ಪತ್ರೆಯಲ್ಲೇ ಫಾರ‌್ಮಸಿಯನ್ನೂ ಸ್ಥಾಪಿಸಿಕೊಂಡು (ಕೆಲವರು ಔಷಧ ಮಾರಾಟ ಪರವಾನಗಿ ಇಲ್ಲದೆಯೇ-ಈ ಕುರಿತು ದೂರುಗಳಾಗಿವೆ) ಕಂಪನಿಗಳಿಂದ ನೇರವಾಗಿ ಗುಡ್ಡೆ ಹಾಕಿಕೊಂಡು ಏಕಸ್ವಾಮ್ಯತೆಯಲ್ಲಿ (ಮೊನಾಪಲೀ) ಅತ್ಯಂತ ದುಬಾರಿ ಬೆಲೆಗಳಲ್ಲಿ ಮಾರುವುದರೊಂದಿಗೆ ಬೇರೆಲ್ಲೂ ಅದು ಸಿಗದಂತೆ ವ್ಯವಸ್ಥೆ ಮಾಡಿಕೊಂಡಿರುತ್ತಾರೆ.

ಹಾಗಾಗಿ ಡಯಾಲಿಸಿಸ್, ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್‌ನಂತಹ ರೋಗಗಳು ಮಧ್ಯಮ ಮತ್ತು ಬಡವರ್ಗದ ಮಂದಿಗೆ ತಗಲಿಕೊಂಡರೆ ದೇವರೇ ದಿಕ್ಕು ಎಂಬ ಸ್ಥಿತಿ ಇದೆ. ಹಾಗಂತ ಎಲ್ಲಾ ವೈದ್ಯರೂ ಹೀಗೆ ಪರಾಧೀನರಲ್ಲ. ಈಗಲೂ ಅನೇಕ ವೈದ್ಯರು ಕೇವಲ ಹತ್ತು, ಇಪ್ಪತ್ತು, ಐವತ್ತು ರುಪಾಯಿಗಳನ್ನು ಪಡೆದು ಮನಪೂರ್ವಕವಾಗಿ ಮಮಕಾರದಿಂದ ರೋಗಿಯನ್ನು ಕಂಡು ತಮ್ಮ ಕೈಗುಣಕ್ಕೆ ಪಡೆದಿದ್ದಾರೆ. ಅನೇಕ ರೋಗಿಗಳಿಗೆ ಪ್ರತ್ಯಕ್ಷ ದೇವರಾಗಿದ್ದಾರೆ. ಏಕೆಂದರೆ ದೇವರಿಗಿಂತಲೂ ಮೊದಲು ಮೊರೆ ಹೋಗುವುದು ವೈದ್ಯರ ಬಳಿಯಲ್ಲವೆ? ಜತೆಗೆ ನಮ್ಮ ಸಮಾಜದಲ್ಲಿ ಕೆಲ ಸಮಾಜಮುಖಿಗಳು, ಮಠ-ಮಂದಿರಗಳು ಉತ್ತಮ ಆಸ್ಪತ್ರೆಗಳನ್ನು, ವೈದ್ಯಕೀಯ ಸೌಲಭ್ಯಗಳನ್ನು ನೀಡುತ್ತಿವೆ. ಅಷ್ಟರಮಟ್ಟಿಗೆ ಸಮಾಜ ಆರೋಗ್ಯವಂತವಾಗಿದೆ ಎನ್ನಬೇಕು.

Tags

Related Articles

Leave a Reply

Your email address will not be published. Required fields are marked *

Language
Close