About Us Advertise with us Be a Reporter E-Paper

ಗುರು

ದೈವಿಕ ಪರಮಾನುಭವ ‘ಧ್ಯಾನ’

- ಡಾ ಗುರುರಾಜ ಪೋಶೆಟ್ಟಿಹಳ್ಳಿ

ಧ್ಯಾನದ ಮೂಲಕ ಏನು ಸಾಧಿಸಬಹುದು, ಇದು ಶಾಂತಿ, ನೆಮ್ಮದಿಗೆ ಸುಲಭದ ಹಾದಿ ಎಂಬುದು ಭಾರತದ ಪ್ರಾಚೀನ ಶೋಧನೆ. ಪಾಶ್ಚಾತ್ಯ ಸಂಶೋಧಕರಿಗೆ ಇದೊಂದು ಕೂತೂಹಲದ ವಿಷಯ. ಧ್ಯಾನದ ಸತ್ವವನ್ನು ವೈಜ್ಞಾನಿಕ ಒರೆಗಲ್ಲಿಗೆ ಹಚ್ಚಿ ಪರೀಕ್ಷಿಸುವ ಪ್ರಯತ್ನಗಳು ನಡೆಯುತ್ತಲೇ ಇವೆ.

ಸಾವಿರ ಜನರ ಮುಂದೆ ಸನ್ಮಾನದ ಕುರ್ಚಿಯಲ್ಲಿ ಕುಳಿತಾಗಿನ ಕ್ಷಣ, ಉದ್ಯೋಗದ ಮೊದಲ ಸಂಬಳದಲ್ಲಿ ಮಗ ತಂದುಕೊಡುವ ಸೀರೆಯನ್ನು ಹೊದ್ದುಕೊಳ್ಳುವ ಅಮ್ಮನ ಮನದ ಖುಷಿ, ಮಗಳ ಫಲಿತಾಂಶದ ಮಹೋನ್ನತಿಗೆ ಸಾಕ್ಷಿಯಾಗುವ ಹೊತ್ತಲ್ಲಿ ಅಪ್ಪನ ಹೃದಯದಲ್ಲಿ ಸಾರ್ಥಕತೆ.. ಆ ಪರಮ ಸಂತೋಷವೇ ಭಾವಾನುಭೂತಿ. ಹೊರಗಿನ ಸ್ಪಂದನೆಗಳಿಗೆ ದೇಹ, ಮನಸ್ಸು, ಹೃದಯಗಳು ಏಕಕಾಲದಲ್ಲಿ ಹಿಡಿಯಾಗಿ, ಇಡಿಯಾಗಿ, ಪರಿಪೂರ್ಣವಾಗಿ ಸರ್ವವನ್ನೂ ಮರೆತು ಪ್ರತಿಸ್ಪಂದಿಸುವ ಘಳಿಗೆಗಳು ಇವು. ಬಹುಶಃ ಇದೊಂದು ಭಾವುಕ ಧ್ಯಾನಸ್ಥ ಸ್ಥಿತಿ. ಲೌಕಿಕ ಬದುಕಿನಲ್ಲೇ ನಾವು ಇಷ್ಟೊಂದು ಗಾಢತೆಯನ್ನು ಅನುಭವಿಸುತ್ತೇವೆ. ಹಾಗಿದ್ದರೆ ದೈವಿಕವಾದ ಪರಮಾನುಭವವೊಂದು ಹೇಗಿರಬಹುದು?
ಒಮ್ಮೆ ಕಲ್ಪಿಸಿಕೊಳ್ಳಿ.

ಅತ್ಯಂತ ದೊಡ್ಡದೊಂದು ಸಂಕಷ್ಟದಲ್ಲಿ ಮುಳುಗಿದ ಹೊತ್ತು. ಎಲ್ಲ ಆಸರೆಗಳು ಉರುಳಿ, ಹುಲ್ಲುಕಡ್ಡಿಯೂ ಕೈಗೆ ಸಿಗದ ಕ್ಷಣದಲ್ಲಿ ದೇವರ ನಿಂತು ಗಾಢವಾದೊಂದು ಪ್ರಾರ್ಥನೆ ಮಾಡಿ ನೋಡಿ. ಸರ್ವಸ್ವವನ್ನೂ ದೇವರ ಚರಣಗಳಲ್ಲಿ ಇಟ್ಟು ಮುಂದೆ ಏನಾದರೂ ಸರಿ, ಸಾವೋ, ಬದುಕೋ ಎದುರಿಸುತ್ತೇನೆ ಎನ್ನುವ ನಿರ್ಧಾರಕ್ಕೆ ಬಂದುಬಿಡಿ. ಆ ಕ್ಷಣ ಮೈಯ ಭಾರವೆಲ್ಲ ಕಳೆದು ನಿರಾಳವಾಗುವ ದಿವ್ಯಾನುಭವವೊಂದು ನಿಮ್ಮದಾಗುತ್ತದೆ. ದೇವರ ಪ್ರಾರ್ಥನೆಯಲ್ಲಿ ಕಳೆದುಹೋಗುವ ಸುಖ, ಘಂಟಾನಾದವನ್ನೋ, ಮಂತ್ರ ಪಠಣವನ್ನೋ ಕೇಳುತ್ತಲೇ ಮೈಮರೆಯುವ ದಿವ್ಯತೆ, ಒಂದು ಚೆಂದದ ಕೀರ್ತನೆಗೆ ಕುಣಿಯುತ್ತಾ ಇಹವನ್ನೇ ಮರೆಯುವ ಕ್ಷಣ. ಇದನ್ನು ದಿವ್ಯಾನುಭೂತಿ ಎನ್ನಬಹುದೇ?

ಅಧ್ಯಾತ್ಮ-ಇಂದ್ರಿಯಾನುಭವ
ಭಕ್ತಿಯಿಂದ ಭಜನೆ ಪೂಜೆ ಮಾಡಿದರೆ ಕ್ಲೇಶಗಳು ನಾಶವಾಗುತ್ತವೆ ಎಂದು ನಂಬಿಕೆ ಹಾಗೂ ಅನುಭವ. ಭಜನೆ, ಪೂಜೆಗಳಿಂದ ಅದೆಲ್ಲ ಸಾಧ್ಯವಾದರೆ ಇಷ್ಟು ಕಷ್ಟವಿತ್ತಾ ಅಂತ ಕೇಳುವವರೂ ಇದ್ದಾರೆ. ಇನ್ನು ಕೆಲವರು, ತಾವು ಇಷ್ಟು ವರ್ಷದಿಂದ ಭಜನೆ ಮಾಡುತ್ತೇವೆ, ಜಪ ಮಾಡುತ್ತೇವೆ, ಬದುಕಂತೂ ಸ್ವಲ್ಪವೂ ಬದಲಾಗಿಲ್ಲ ಅಂತಾನೂ ವಾದಿಸಬಹುದು. ಈ ಯಾವ ಅಭಿಪ್ರಾಯಗಳಲ್ಲೂ ತಪ್ಪಿಲ್ಲ. ನನಗೆ ಅನೂಹ್ಯ ಅನುಭೂತಿಯಾಗಿದೆ, ನಿರುಮ್ಮಳತೆ ಲಭಿಸಿದೆ ಎಂದು ಹೇಳಿದರೆ ಇನ್ನೊಬ್ಬರು ನಂಬಬೇಕಿಲ್ಲ. ಯಾಕೆಂದರೆ, ಅವನಿಗೆ ಅದು ಆಗದೇ ಇರಬಹುದು.

ಜನ್ಯ
ಅನುಭೂತಿ ಎನ್ನುವುದು ವೈಜ್ಞಾನಿಕ ಸತ್ಯ. ಧ್ಯಾನ, ಪ್ರಾಣಾಯಾಮ, ಪೂಜೆ, ಭಕ್ತಿ, ಭಜನೆಗಳು ಪಾಸಿಟೀವ್ ಎನರ್ಜಿ ತುಂಬಬಲ್ಲ ಶಕ್ತಿಗಳು ಎನ್ನುವುದನ್ನು ವಿಜ್ಞಾನವೇ ಕಂಡುಕೊಂಡಿದೆ. ಮೆದುಳು ಮತ್ತು ದೇಹದ ಇತರ ಭಾಗಗಳ ಸ್ಕ್ಯಾನಿಂಗ್ ಮೂಲಕವೂ ಇಂದ್ರಿಯಾನುಭವಗಳನ್ನು ದಾಖಲಿಸುವ ಪ್ರಯತ್ನ ಯಶಸ್ವಿಯಾಗಿದೆ.

ಶವಾಸನದ ಪರಿಕಲ್ಪನೆಯನ್ನು ಒಮ್ಮೆ ಯೋಚನೆ ಮಾಡಿ. ನೆಲದ ಮೇಲೆ ಮಲಗಿ ಕಾಲುಗಳನ್ನು ಆಗಲಿಸಿ, ಕೈಗಳನ್ನು ತುಸು ದೂರದಲ್ಲಿ ನಿರಾಳವಾಗಿ ಹರಡಿ ಮಾಡುವ ಆಸನವಿದು. ಶವಾಸನಕ್ಕೆ ನೀಡುವ ಸೂಚನೆಗಳ ಪ್ರಕಾರ ಕಾಲಿನ ಉಂಗುಷ್ಟದಿಂದ ಆರಂಭಿಸಿ ಮೇಲಕ್ಕೆ ದೇಹದ ಒಂದೊಂದೇ ಭಾಗಗಳನ್ನು ನಿರಾಳಗೊಳಿಸುತ್ತಾ ಬರುವ ಪ್ರಕ್ರಿಯೆ. ಕಾಲ ಬೆರಳನ್ನು ಸಡಿಲಿಸಿ ಎಂದಾಗ ನಮ್ಮ ಬೆರಳುಗಳು ಬಿಗಿ ಕಡಿಮೆ ಮಾಡುತ್ತವೆ. ಕೈ ತನ್ನ ಭಾರವನ್ನು ಕಳೆದುಕೊಳ್ಳುತ್ತದೆ. ಭುಜ ಸಡಿಲುಗೊಳ್ಳುತ್ತದೆ. ತಲೆ ಭಾರ ಕಡಿಮೆಯಾಗುತ್ತದೆ. ಕಣ್ಣುಗಳಲ್ಲೊಂದು ಸಣ್ಣ ಜೊಂಪು ಆವರಿಸುತ್ತದೆ, ಎಲ್ಲವೂಗಳಿಂದಲೂ ಮುಕ್ತಿ ಪಡೆದಂತೆ ಸಣ್ಣದೊಂದು ನಿದ್ರೆ ಆವರಿಸಿಬಿಡುತ್ತದೆ. ಇದು ಹೇಗೆ ಸಾಧ್ಯವಾಯಿತು? ನಾವು ಇಂತಹದೊಂದು ನಿರಾಳತೆಗೆ ಸಿದ್ಧಗೊಂಡ ಕಾರಣಕ್ಕೆ. ಒಮ್ಮೆ ಮನಸ್ಸನ್ನು ಸಿದ್ಧಗೊಳಿಸಿದ ಎಲ್ಲವೂ ಅದಾಗಿಯೇ ನಡೆಯುತ್ತಾ ಹೋಗುತ್ತವೆ. ನಮಗೇ ಆಶ್ಚರ್ಯವಾಗುವಂತೆ ನಾವು ನಿರಾಳರಾಗಿಬಿಡುತ್ತೇವೆ.

ನಿಜವಾದ ಅನುಭೂತಿ ಎಂದರೆ ಇದುವೆ.
ಪ್ರಾಣಾಯಾಮದ ಸೌಂದರ್ಯವನ್ನೇ ಗಮನಿಸಿ. ಉಸಿರು ಒಳಗೆ ಹೋಗುವಾಗ ಹೊಳ್ಳೆಗಳ ಶ್ಲೇಷಗಳ ಕಂಪನ, ಶ್ವಾಸಕೋಶದೊಳಗೆ ಗಾಳಿ ಹೊಕ್ಕಿದಾಗಿನ ಆನಂದ, ವಪೆ ಹಿಗ್ಗಿದಾಗಿನ ಹಿತಾನುಭವಗಳನ್ನು ಅನುಭವಿಸಿಯೇ ತೀರಬೇಕು ಮತ್ತು ಇದನ್ನೆಲ್ಲ ಅತ್ಯಂತ ಪ್ರಜ್ಞಾಪೂರ್ವಕವಾಗಿ ಅನುಭವಿಸುವ ಮನೋಸ್ಥಿತಿಯೂ ಬೇಕು.

ಇಂದು ಒತ್ತಡ, ಮಾತ್ಸರ್ಯ, ಸ್ಪರ್ಧೆಗಳಿಂದಾಗಿ ಖಿನ್ನತೆ, ಆತಂಕ, ಭಯ ಸಾಮಾನ್ಯವಾಗಿದೆ. ಆರೋಗ್ಯವಂತೂ ಕೆಟ್ಟು ಖರಾಬಾಗಿ ಹೋಗುತ್ತವೆ. ಔಷಧಗಳಿಗೂ ಬಗ್ಗದ, ಜಗ್ಗದ ಇವುಗಳಿಗೆ ಪ್ರಶಾಂತವಾದ ಮನಸ್ಸು ಮತ್ತು ದೇಹಾರೋಗ್ಯವೇ ಪ್ರತ್ಯಸ್ತ್ರ. ಹಾಗಾಗಿ, ಬದುಕಿನ ಸಣ್ಣ ಸಣ್ಣ ವಿಷಯಗಳಲ್ಲೂ ಖುಷಿಯನ್ನು ಕಾಣುವ ಅನುಭೂತಿಯನ್ನು ಮೈಗೂಡಿಸಿಕೊಂಡರೆ, ವಿಚಾರವಂತಿಕೆಯ ಜತೆಗೇ ಹಿತಾನುಭವವನ್ನು ಅನುಭವಿಸುವ ಮನಸ್ಸನ್ನು ಉಳಿಸಿಕೊಂಡರೆ ಬದುಕು ಇನ್ನಷ್ಟು ಸುಂದರಗೊಳ್ಳುತ್ತದೆ.

ದೀರ್ಘ ಶ್ವಾಸೋಚ್ಛಾಸವೇ ದೀರ್ಘಾಯುಷ್ಯದ ಗುಟ್ಟು
ದೀರ್ಘ ಶ್ವಾಸೋಚ್ಛಾಸ ಮಾಡಿದಾಗ ಮಿದುಳಿನ ನರಗಳು ಸಡಿಲಗೊಂಡಂತೆ ಅನಿಸುವುದು, ದೇಹದ ಪ್ರತಿ ಅಂಗಾಂಗಗಳಲ್ಲೂ ಒಂದು ರೀತಿಯ ಸಡಿಲುತನಗಳನ್ನು ಅನುಭವಿಸುವುದು ಕೂಡಾ ಅನುಭೂತಿಯೆ. ಆರೋಗ್ಯವಂತ ಮನುಷ್ಯ ನಿಮಿಷಕ್ಕೆ 15 ಬಾರಿ ಶ್ವಾಸೋಚ್ಛಾಸ ಮಾಡಬೇಕು ಎನ್ನುತ್ತದೆ ಶರೀರ ವಿಜ್ಞಾನ. ಅಂದರೆ ದಿನಕ್ಕೆ 21600 ಬಾರಿ. ಈ ಶ್ವಾಸೋಚ್ಛಾಸಗಳ ಗತಿಯೇ ನಮ್ಮ ಆಯುಸ್ಸನ್ನು ನಿರ್ಧರಿಸುತ್ತದೆ ಎನ್ನುತ್ತಾರೆ. ಶ್ವಾಸೋಚ್ಛಾಸದ ಸಂಖ್ಯೆ ಹೆಚ್ಚಿದಂತೆಲ್ಲಾ ಆಯುಸ್ಸು ಕಡಿಮೆಯಾಗುತ್ತದೆಯಂತೆ. ಅಂದರೆ ದೀರ್ಘ ಶ್ವಾಸೋಚ್ಛಾಸವೇ ದೀರ್ಘಾಯುಷ್ಯದ ಗುಟ್ಟು. ದೀರ್ಘ ಉಸಿರಾಟದಿಂದ ಮೆದುಳು ಸೇರಿದಂತೆ ದೇಹದ ಎಲ್ಲ ಭಾಗಗಳಿಗೂ ಬೇಕಾದ ಆಮ್ಲಜನಕ ಸೂಕ್ತ ಪ್ರಮಾಣದಲ್ಲಿ ಸಿಗುತ್ತದೆ. ಹಾಗಾಗಿ ಜೀವಕಣಗಳ ಚೈತನ್ಯ ಬಹುಕಾಲ ಉಳಿಯುತ್ತದೆ. ಇದನ್ನು ಗಮನಿಸಿ ಉಸಿರಾಡಿದಾಗ ಪ್ರತಿಯೊಂದು ಕಣಕ್ಕೂ ಆಮ್ಲಜನಕ ಸಿಗುವಾಗಿನ ಖುಷಿಯೂ ಒಂದು ದಿವ್ಯಾನುಭವವೆ.

Tags

Related Articles

Leave a Reply

Your email address will not be published. Required fields are marked *

Language
Close