About Us Advertise with us Be a Reporter E-Paper

ಗೆಜೆಟಿಯರ್

Googleಗೆ ಈಗ ಸ್ವಿಟ್ 20

ವಿಕ್ರಮ್ ಜೋಶಿ

ಚಿತ್ರಗುಪ್ತನ ಬಳಿ ಗೂಗಲ್ ಕಂಪನಿಯ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಇರುವ ಮೊಬೈಲ್ ಇದೆ. ಅದರಲ್ಲಿ ಆಗಿರುವ ಗೂಗಲ್ ಕ್ಯಾಲೆಂಡರ್ ಪ್ರಕಾರ ನಾಳೆ ಸಂಜೆ ನಾಲ್ಕು ಗಂಟೆಗೆ ದೊಡ್ಡ ಪೇಟೆಯ ರಂಗಾ ಎನ್ನುವಾತನನ್ನು ಯಮಲೋಕಕ್ಕೆ ಕರೆತರಬೇಕು’ ಎಂದು ಚಿತ್ರಗುಪ್ತ ತನ್ನ ಜಿಮೇಲ್ ಐಡಿಯಿಂದ ಯಮರಾಜನಿಗೆ ಇಮೇಲ್ ಮುಖಾಂತರ ಸೂಚನೆ ಕೊಟ್ಟ. ಈಗ ರಂಗ ಯಾರು ಎಂದು ಹುಡುಕುವುದಾದರೂ ಹೇಗೆ? ತಕ್ಷಣವೇ ಯಮರಾಜ ತನ್ನ ಲ್ಯಾಪ್ಟಾಪ್ ತೆಗೆದು ಗೂಗಲ್ ನಲ್ಲಿ ‘ರಂಗಾ’ ಎಂದು ಹುಡುಕಲು ಆರಂಭಿಸಿದ. ಇದೇ ಹತ್ತು ವರ್ಷದ ಹಿಂದಾಗಿದ್ದರೆ ಗೂಗಲ್‌ಗೆ ತಲೆಬಿಸಿ ಆಗುತ್ತಿತ್ತು. ಆದರೆ ಹಾಗಲ್ಲ. ಅದರ ಸರ್ಚ್ ಎಂಜಿನ್ ಎಷ್ಟು ಪ್ರೌಢತೆ ಪಡೆದಿದೆ ಅಂದರೆ ಯಮರಾಜನಿಗೆ ಎರಡು ಸೆಕೆಂಡ್ ಒಳಗಡೆ ಯಾವ ರಂಗ ಬೇಕಿದ್ದನೋ ಅವನ ಸಂಪೂರ್ಣ ಮಾಹಿತಿ ಸಿಕ್ಕಿಬಿಟ್ಟಿತು. ತಕ್ಷಣವೇ ರಂಗನನ್ನು ತರಲು ಹೊರಟ. ಅವನ ಮನೆಯ ತನಕ ಹೋಗಲು ವಾಹನ ಬೇಡವೇ? ಕೋಣನಿಗೆ ಕರೆ ಮಾಡಿದ. ಕೋಣ ನೋಡಿದರೆ ಯುಟ್ಯೂಬ್‌ನಲ್ಲಿ ವಿಡಿಯೋ ನೋಡುತ್ತಿತ್ತು. ಯಮರಾಜನಿಗೆ ಪುರಸತ್ತೇ ಇಲ್ಲ. ಕೋಣನ ಮೇಲೆ ಏರಿ ಕೂತು ಗೂಗಲ್ ಮ್ಯಾಪ್ ಹಾಕಿಕೊಂಡು ಹೊರಟೇ ಬಿಟ್ಟ.

ಹಾಗೆಯೇ, ಮೊದಲಾದರೆ ರಂಗನ ಮನೆಯ ವಿಳಾಸ ಹುಡುಕುವುದು ಎಷ್ಟು ಕಷ್ಟವಾಗಿತ್ತು. ಈಗ ಗೂಗಲ್ ಮ್ಯಾಪ್ ಎಷ್ಟು ಬ್ರಿಲಿಯಂಟ್ ಆಗಿದೆ ಅಂದರೆ ಪಾತಾಳವೇ ಇರಲಿ ನಿಮಗೆ ಶಾರ್ಟೆಸ್‌ಟ್ ದೂರದ ದಾರಿ ತೋರಿಸಿಕೊಂಡು ಕರೆದುಕೊಂಡು ಹೋಗುತ್ತದೆ. ಮಧ್ಯದಲ್ಲಿ ಯಮನಿಗೆ ಕಾಫಿ ಕುಡಿಯುವ ಮನಸ್ಸಾಯಿತು. ಕೋಣ ತನ್ನ ಮೊಬೈಲ್‌ನಲ್ಲಿರುವ ಗೂಗಲ್ ಅಸಿಸ್‌ಟ್ ಬಳಸಿ ‘ಕಾಫಿ ನಿಯರ್ ಮಿ’ ಎಂದು ಹೇಳಿತು (ಅದರ ಭಾಷೆಯಲ್ಲಿ). ಕಣ್ಣು ಮುಚ್ಚಿ ತೆಗೆಯುವುದರೊಳಗೆ ಬೆಸ್‌ಟ್ ಕಾಫಿ ಹೌಸ್ ಎಲ್ಲಿದೆ ಮಾಹಿತಿ ಸಿಕ್ಕಿಬಿಟ್ಟಿತು. ಕಾಫಿ ಶಾಪ್‌ನಲ್ಲಿ ಮಾತನಾಡುವುದು ಹೇಗೆ? ಭೂಲೋಕದ ಭಾಷೆ ಬೇರೆ, ಯಮಲೋಕದ ಭಾಷೆ ಬೇರೆ. ಯಮರಾಜ ತನ್ನ ಮೊಬೈಲ್‌ನಲ್ಲಿಯ ಗೂಗಲ್ ಟ್ರಾನ್ಸಲೇಟರ್ ಓಪನ್ ಮಾಡಿದ. ಇಬ್ಬರ ನಡುವೆ ಎಂತಹ ಸುಂದರ ಸಂಭಾಷಣೆ! ಕಾಫಿಕುಡಿದು, ಕೋಣಕ್ಕೆ ನೀರು ಕುಡಿಸಿ ರಂಗನ ಮನೆ ಎದುರು ನಿಂತ ಯಮರಾಜ. ರಂಗ ಅದೇ ಹೊತ್ತಿಗೆ ಗೂಗಲ್‌ನಲ್ಲಿ ‘ನೂರು ವರ್ಷಗಳ ಕಾಲ ಹೇಗೆ ಬದುಕುವುದು?’ ಎನ್ನುವ ಟಿಪ್‌ಸ್ ಹುಡುಕುತ್ತಿದ್ದ. ಯಮರಾಜ ಯಾರಿಗಾದರೂ ಕಾಯುವುದುಂಟೇ? ಚಿತ್ರಗುಪ್ತ ಮಾಹಿತಿಯ ಪ್ರಕಾರ ನಾಲ್ಕು ಗಂಟೆಗೆ ಸರಿಯಾಗಿ ರಂಗನ ಕೊರಳಿಗೆ ಯಮನ ಪಾಶ ಬಿದ್ದಿತ್ತು. ಇನ್ನೇನು ರಂಗನ ಪ್ರಾಣ ಊರ ಹೊರಗಿನ ಟೋಲ್ ಕ್ರಾಸ್ ಮಾಡುವುದರೊಳಗೆ ಗೂಗಲ್ ನ್ಯೂಸ್‌ನಲ್ಲಿ ಆತನ ಸಾವು ವೈರಲ್! ಈ ಕಥೆ ಒಂದು ಕಲ್ಪನೆ ಇರಬಹುದು, ಆದರೆ ಇವತ್ತು ಗೂಗಲ್ ಬಳಸದೆ ಇರುವ ಮನುಷ್ಯ ಎಲ್ಲಾದರೂ ಸಿಗಬಹುದೆ? ಗೂಗಲ್ ಬಳಕೆ ಹೇಗಾಗುತ್ತಿದೆ ಎನ್ನುವುದಕ್ಕೆ ಮೇಲಿನ ಒಂದು ಸಣ್ಣ ನಿದರ್ಶನ ಸಾಕಲ್ಲವೆ? ಗೂಗಲ್ ಎನ್ನುವ ಒಂದು ಸರ್ಚ್ ನಮ್ಮ ಜಗತ್ತನ್ನು ಎಷ್ಟು ಬದಲಾಯಿಸಿದೆ. ಗೂಗಲ್ ಕಂಪನಿ ಪ್ರಾರಂಭವಾಗಿ ಈಗ ಇಪ್ಪತ್ತು ವರ್ಷ!

ಟೆಲಿಕಾಂ ಕ್ರಾಂತಿಗೆ ಗೂಗಲ್ ಪ್ರತ್ಯಕ್ಷ ಸಾಕ್ಷಿ

100,000 ಡಾಲರ್ ಬಂಡವಾಳದಲ್ಲಿ ಶುರುವಾಗಿದ್ದ ಈ ಕಂಪನಿಯ ಇವತ್ತಿನ ಮೌಲ್ಯ ಎಷ್ಟು ಗೊತ್ತೆ? ಸರಿಸುಮಾರು 8,000,000,000 ಡಾಲರ್‌ಗಳಷ್ಟು. ವಾಸ್ತವದಲ್ಲಿ ಇದು ಕಂಪನಿಯೇ ಆಗಿರಲಿಲ್ಲ, ಸ್ಟಾನ್ ಫರ್ಡ್ ಯುನಿವರ್ಸಿಟಿಯ ಒಂದು ಕೋಣೆಯಲ್ಲಿ ಕೆಲವು ವಿದ್ಯಾರ್ಥಿಗಳು ಸೇರಿ ಶುರುಮಾಡಿದ ಪ್ರಾಜೆಕ್‌ಟ್ ಆಗಿತ್ತು. ಕೇವಲ ಎರಡು ದಶಕಗಳಲ್ಲಿ ಒಂದು ಸರ್ಚ್ ಎಂಜಿನ್ ವೇಗವಾಗಿ ಬೆಳೆದು ನಮ್ಮ ದಿನನಿತ್ಯದ ಭಾಗವಾಗುತ್ತದೆ ಎಂದು ಯಾರಾದರೂ ಅಂದುಕೊಂಡಿದ್ದರೆ? ಕಳೆದ ಎರಡು ದಶಕಗಳಲ್ಲಿ ಗೂಗಲ್ ಎನ್ನುವ ಒಂದು ಪದ ಮನುಷ್ಯನ ವಿಚಾರದ ಎಳೆಯನ್ನೇ ಬದಲಾಗಿಸಿದೆ. ಇವತ್ತು ಇಡೀ ಮನುಕುಲ ಬಳಸುತ್ತಿರುವ ಶೇಕಡಾ ಎಂಬತ್ತರಷ್ಟು ಮೊಬೈಲ್‌ನಲ್ಲಿ ಗೂಗಲ್ ಕಂಪನಿಯ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಇದೆ. ಒಂದು ಕಾಲದಲ್ಲಿ ನಮ್ಮ ಇಮೇಲ್ ಇನ್ ಬಾಕ್‌ಸ್ಗಳು ತುಂಬಿ ಹೋಗುತ್ತಿದ್ದವು. ಅದು 2004ರ ಸಮಯ, ಹಾಟ್ ಮೇಲ್ ಕಂಪನಿ 4 ಆ ಮೆಮೋರಿ ಕೊಟ್ಟರೆ ಗೂಗಲ್ 1ಎಆ ಜಾಗ ಕೊಟ್ಟಿತು. ಈ ಒಂದು ದಿಟ್ಟ ಹೆಜ್ಜೆ ಇಡೀ ಇಮೇಲ್ ಜಗತ್ತನ್ನೇ ಬದಲಾಯಿಸಿತು. ಇವತ್ತು ಎಲ್ಲರ ಎಲೆಕ್ಟ್ರಾನಿಕ್ ಅಡ್ರೆಸ್ ಗೂಗಲ್ ಇಮೇಲ್ ನಲ್ಲಿದೆ! ಇವತ್ತು ನಾವು ಯಾವ ಫೇಸ್ಬುಕ್, ಟ್ವಿಟರ್‌ಗಳಲ್ಲಿ ಕಳೆದುಹೋಗಿದ್ದೇವೆ ನೋಡಿ ಇವರೆಲ್ಲರ ಮುತ್ತಾತ ಆರ್ಕುಟ್. ಅದು ಗೂಗಲ್ ಕಂಪನಿಯದ್ದಾಗಿತ್ತು. ಸ್ನಾಪ್‌ಚಾಟ್, ವಾಟ್ಸಾಪ್, ಪೇಸ್ಬುಕ್ ಮೆಸೆಂಜರ್ ಇವರೆಲ್ಲರಿಗಿಂತ ಮೊದಲು ‘ಜಿಟಾಕ್’ ಎನ್ನುವ ಮೆಸೆಂಜರ್ ಇತ್ತು. ಯಾಹೂ, ಎಮ್ಎಸ್‌ಎನ್ ಇವೆಲ್ಲ ಜಗತ್ತನ್ನು ಒಂದು ಕಡೆ ಚಾಟ್ ರೂಮ್‌ಗಳು. ಅವೆಲ್ಲವೂ ಜಿಟಾಕ್ ಮುಂದೆ ಟುಸ್ ಆದವು. ಭಾರತದಲ್ಲಿ ಆದ ಟೆಲಿಕಾಂ ಕ್ರಾಂತಿಗೆ ಗೂಗಲ್ ಪ್ರತ್ಯಕ್ಷ ಸಾಕ್ಷಿ.

ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಇಲ್ಲದೇ ಹೋದರೆ ಇಷ್ಟೊಂದು ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳು ಬರುತ್ತಿರಲಿಲ್ಲ. ನೋಕಿಯಾದ ಮೊಬೈಲ್ ವ್ಯಾಪಾರವು ಬಂದ್ ಆಗಲು ಕೂಡ ಗೂಗಲ್ ಕಾರಣ ಅಂದರೆ ತಪ್ಪಾಗಲಿಕ್ಕಿಲ್ಲ. ಗೂಗಲ್ ಇಷ್ಟು ಬೃಹತ್ ಪ್ರಮಾಣದಲ್ಲಿ ಬೆಳೆಯಲು ಕಾರಣವೆಂದರೆ ಅದು ತಂದ ಕ್ಲೌಡ್ ಸರ್ವರ್ ಸಿಸ್ಟಮ್ ಹಾಗೂ ಆನ್‌ಲೈನ್ ಮಾರ್ಕೆಟಿಂಗ್ ಪದ್ಧತಿ. ಜಿಮೇಲ್, ಗೂಗಲ್ ಸರ್ಚ್ ಎಂಜಿನ್, ಎಲ್ಲವೂ ನಡೆಯುವುದು ಕ್ಲೌಡ್ ಸರ್ವರ್ ಮೇಲೆ. ಹಾಗೆಯೇ ಗೂಗಲ್ ಕಂಪನಿಗೆ ಆದಾಯ ಬರುವುದು ಆನ್‌ಲೈನ್ ಮಾರ್ಕೆಟಿಂಗ್ ನಲ್ಲಿಯ ಜಾಹೀರಾತಿನಿಂದ. ಗೂಗಲ್ ಬರುವ ಮೊದಲು ಆನ್‌ಲೈನ್ ಮಾರ್ಕೆಟಿಂಗ್ ಎನ್ನುವ ಕಾನ್ಸೆಪ್‌ಟ್ ಇತ್ತೇ? ಆದರೆ ಇಂದು ಗೂಗಲ್ ಸರ್ಚ್ ಎಂಜಿನ್ ಆಪ್ಟಿಮೈಜೇಷನ್ ಮಾಡುವುದನ್ನು ಕಲಿತರೇ ಯಶಸ್ಸು ಎನ್ನುವುದು ನಿಮ್ಮ ಕೈ ಮುಷ್ಠಿಯಲ್ಲಿರುತ್ತದೆ. ಹೇಗಾಗಿದೆ ಅಂದರೆ ಹೊರಗಡೆ ಆಮ್ಲಜನಕ, ನೀರು, ಬೆಳಕು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಮೊಬೈಲ್ ಹಾಗೂ ಅಂತರ್ಜಾಲ ಲೋಕಕ್ಕೆ ಎನ್ನುವಂತಾಗಿದೆ!

ಗೂಗಲ್ ಸರ್ಚ್ ಎಂಜಿನ್ ಈ ಶತಮಾನದ ಒಂದು ಅಚ್ಚರಿ

ಗೂಗಲ್ ಹೆಸರು ಗುಗೋಲ್ ಪದದಿಂದ ಬಂದಿದೆ. ಗುಗೋಲ್ ಅಂದರೆ ಒಂದರ ಮುಂದೆ ನೂರು ಶೂನ್ಯ ಎಂದರ್ಥ. ಆ್ಯಪಲ್ ಕಂಪನಿಯ ತರಹದಲ್ಲೇ ಗೂಗಲ್ ಕೂಡ ಒಂದು ಗ್ಯಾರೇಜ್ ನಲ್ಲಿ ಶುರುವಾಗಿದ್ದು. ಆಗಿನ ಆ ಗ್ಯಾರೇಜ್ ಮಾಲೀಕ ಈಗಿನ ಯೂಟ್ಯೂಬ್ ಕಂಪನಿಯ ಸಿಇಓ! ನಮಗೆ ಏನಾದರೂ ಬೇಕು ಅಂದರೆ ನಾವು ಗೂಗಲ್‌ಗೆ ಹೋಗಿ ಹುಡುಕುತ್ತೇವೆ, ಅದು ಫ್ರೀ ಆದರೆ ಪ್ರತಿ ವರ್ಷ ನಾವು ಏನು ಫ್ರೀ ಅಂದುಕೊಂಡಿದ್ದೇವೆ ಅದೇ ಆ ಕಂಪನಿಗೆ ಇದು ಪ್ರತಿವರ್ಷ ಸುಮಾರು ನೂರು ಬಿಲಿಯನ್ ಡಾಲರ್‌ನಷ್ಟು ರೆವಿನ್ಯೂ ತರುತ್ತದೆ. ನಮಗೆ ಒಂದು ಕಾರನ್ನು ಖರೀದಿಸಲು ಮಾಹಿತಿ ಬೇಕು. ಅದನ್ನು ಗೂಗಲ್ ಕೊಡುತ್ತದೆ. ನಮಗೆ ಆ ಮಾಹಿತಿ ಫ್ರೀ. ಆದರೆ ನಾವು ಆ ಲಿಂಕ್ ಬಳಸಿದ್ದು ಗೂಗಲ್ ಕಂಪನಿಗೆ ತಿಳಿಯುತ್ತದೆ. ಅವರು ನಾವು ಎಲ್ಲಿಂದ ಮಾಹಿತಿ ಪಡೆದಿದ್ದೇವೆ ಅವರಿಂದ ಹಣ ಪಡೆಯುತ್ತಾರೆ. ಆದರೆ ಅದು ಇನ್ನೊಂದು ಬೇರೆ ಬ್ಯುಸಿನೆಸ್ ಮಾಡೆಲ್. ನಾವು ಅಪ್ಲೋಡ್ ಮಾಡಿದ ವಿಡಿಯೋವನ್ನು ಸಾಕಷ್ಟು ಜನ ನೋಡಿದರೆ ನಮಗೆ ಹಣ ಗೂಗಲ್ ಕೊಡುತ್ತದೆ, ಆದರೆ ಆ ವಿಡಿಯೋ ಶುರುವಾಗುವ ಮೊದಲು,ಅಥವಾ ನಡುವೆ ಜಾಹೀರಾತು ಬರುತ್ತದೆಯಲ್ಲ ಅದರಿಂದ ಯೂಟ್ಯೂಬ್ ಅಂದರೆ ಗೂಗಲ್ ಕಂಪನಿಗೆ ಹಣ ಸಿಗುತ್ತದೆ. ಇಟ್ ಇಸ್ ವೆರಿ ಕಾಂಪ್ಲೆಕ್‌ಸ್. ಗೂಗಲ್ ಸರ್ಚ್ ಎಂಜಿನ್ ಹೇಗೆ ಈ ಶತಮಾನದ ಒಂದು ಅಚ್ಚರಿಯೋ ಹಾಗೆಯೇ ಆ ಕಂಪನಿಯ ಬ್ಯುಸಿನೆಸ್ ಮಾಡೆಲ್ ಆಂಡ್ರಾಯ್ಡ್ ಫ್ರೀ, ಜಿಮೇಲ್ ಫ್ರೀ, ಗೂಗಲ್ ಮ್ಯಾಪ್ ಫ್ರೀ, ಯೂಟ್ಯೂಬ್ ಫ್ರೀ, ಗೂಗಲ್ ಸರ್ಚ್ ಕೂಡ ಫ್ರೀ ಆದರೆ ಇಂದು ಜಗತ್ತಿನ ಅತ್ಯಂತ ಹೆಚ್ಚು ಲಾಭ ಗಳಿಸುತ್ತಿರುವ ಕಂಪನಿಯಲ್ಲಿ ಗೂಗಲ್ ಮೊದಲ ಮೂರನೇ ಸ್ಥಾನದಲ್ಲಿದೆ. ಇಂದು ಆಲ್ಫಾಬೆಟ್. ಇಂಕ್ ಕಂಪನಿಯ ಒಂದು ಭಾಗ ಗೂಗಲ್, ಆ ವಿಷಯ ಬೇರೆ. ಗೂಗಲ್‌ನಲ್ಲಿ ಎಷ್ಟೊಂದು ವಿವಿಧ ಬಗೆಯ ವೈಶಿಷ್ಟ್ಯ ಪೂರ್ಣ ಸಾಫ್‌ಟ್ವೇರ್ ಇದೆ. ಬರಿ ಸಾಫ್‌ಟ್ ವೇರ್ ಅಷ್ಟೇ ಅಲ್ಲ ಗೂಗಲ್ ಕೂಡ ಇದೆ. ಆದರೆ ಕಂಪನಿಯ ಶೇಕಡಾ ತೊಂಬತ್ತು ರಷ್ಟು ಲಾಭ ಗೂಗಲ್ ಸರ್ಚಿಂಗ್‌ನಿಂದಾನೇ ಬರುವುದು! ಪ್ರತಿ ಸೆಕೆಂಡಿಗೆ ನಲವತ್ತು ಸಾವಿರ ಪ್ರಶ್ನೆಗಳನ್ನು ಗೂಗಲ್ ಉತ್ತರಿಸುತ್ತದೆ. ಪ್ರತಿ ದಿನ 3.5 ಬಿಲಿಯನ್, ಹಾಗೇ ಪ್ರತಿ ವರ್ಷ 1.2 ಟ್ರಿಲಿಯನ್ ಸರ್ಚ್ ಗೂಗಲ್ ನಿರ್ವಹಿಸುತ್ತದೆ. ಗೂಗಲ್ ಕಂಪನಿಯ ಲಾಭಾಂಶ ಏನಿದ್ದರೂ ಆನ್‌ಲೈನ್ ಜಾಹೀರಾತಿನಿಂದಲೇ ಬರುತ್ತಿರುವುದು.

ಇಪ್ಪತ್ತು ವರ್ಷಗಳಲ್ಲಿ ಗೂಗಲ್ ತನ್ನ ಸರ್ಚಿಂಗ್ ಅಲ್ಗೋರಿದಮ್ ನಲ್ಲಿ ಎಷ್ಟೊಂದು ಬೆಳವಣಿಗೆ ತಂದಿದೆ ಎಂದರೆ ಇವತ್ತು ಏನು ಬೇಕು ಎನ್ನುವುದು ನಮಗೆ ಅರ್ಥವಾಗುವುದಕ್ಕೆ ಮುಂಚೆಯೇ ನಮ್ಮ ಮುಂದೆ ಇರುತ್ತದೆ. ಮೊದಲು ಈ ರೀತಿ ನಿಖರವಾದ ಸರ್ಚ್ ರಿಸಲ್‌ಟ್ಸ್ ಬರುತ್ತಿರಲಿಲ್ಲ. ಹತ್ತು ವರ್ಷಗಳ ಹಿಂದೆ ಒಂದು ಸರಿಯಾದ ಮಾಹಿತಿ ಬೇಕು ಅಂದರೆ ಕಡಿಮೆ ಅಂದರೆ ಐವತ್ತು ಬೇರೆ ಬೇರೆ ಸರ್ಚ್ ರಿಸಲ್‌ಟ್ಸ್ ಪರಿಶೀಲನೆ ಮಾಡಬೇಕಿತ್ತು. ಇಂದು ಹೆಚ್ಚು ಅಂದರೆ ಮೂರರಿಂದ ಐದು ರಿಸಲ್‌ಟ್ಸ್ ಅಷ್ಟೇ ನೋಡುತ್ತೇವೆ. ಆ ಐದರಳೊಳಗೆಯೇ ನಮಗೆ ಬೇಕಾದ ಉತ್ತರ ಸಿಕ್ಕಿರುತ್ತದೆ. ಇದು ನಿಮ್ಮ ಬಂದಿರುತ್ತದೆ, ಗಮನಿಸಿ ನೋಡಿ ಮತ್ತೊಮ್ಮೆ! ಇದಕ್ಕೆ ಕಾರಣ ಗೂಗಲ್ ಅಳವಡಿಸಿಕೊಂಡಿರುವ ಕೃತಕ ಬುದ್ಧಿಮತ್ತೆ. ಗೂಗಲ್ ಎರಡು ದಶಕದಲ್ಲಿ ಎಷ್ಟು ಪವರ್‌ಫುಲ್ ಆಗಿದೆ ಎಂದರೆ ಇಂದು ಅಮೆರಿಕಾದ ಸರಕಾರ ಗೂಗಲ್ ಕಂಪನಿಯ ಹತ್ತಿರ ಇರುವ ಮಾಹಿತಿಯ ಬಗ್ಗೆ ಚಿಂತಿತವಾಗಿದೆ. ಒಂದು ಕಾಲದಲ್ಲಿ ಮೈಕ್ರೋಸಾಫ್‌ಟ್ ಇಲ್ಲದೇ ಜಗತ್ತೇ ನಡೆಯುವುದಿಲ್ಲ ಎನಿಸುತ್ತಿತ್ತು, ಇಂದು ಗೂಗಲ್ ಅದೇ ಸ್ಥಾನ ಪಡೆದಿದೆ. ಮುಂದೆ ಎಷ್ಟು ದಿನ ಈ ಪ್ರಾಬಲ್ಯತೆ ಇರಬಹುದು? ಗೊತ್ತಿಲ್ಲ. ಆದರೆ ಗೂಗಲ್ ಮುಂದಿನ ಮತ್ತೇನು ಹೊಸತನವನ್ನು ಹುಡುಕಿ ಕೊಡಬಹುದು ಎಲ್ಲದಕ್ಕೂ ಗೂಗಲ್ ನಲ್ಲೇ ಉತ್ತರವಿದೆ!

Tags

Related Articles

Leave a Reply

Your email address will not be published. Required fields are marked *

Language
Close