About Us Advertise with us Be a Reporter E-Paper

ಅಂಕಣಗಳು

ಈ ಸರಕಾರದ ಮೇಲೆ ಜನರಿಗೆ ನಂಬಿಕೆಯೇ ಇಲ್ಲ: ಗೋವಿಂದ ಕಾರಜೋಳ

ಸಂದರ್ಶನ: ಗೋವಿಂದ ಕಾರಜೋಳ, ವಿಧಾನಸಭೆ ಪ್ರತಿಪಕ್ಷ ಉಪನಾಯಕ. -ಬಾಲಕೃಷ್ಣ ಎನ್‌

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ದಂಗೆ ಹೇಳಿಕೆ ನೀಡಿರುವುದು ರಾಜಕೀಯ ಪ್ರೇರಿತ. ಶೀಘ್ರದಲ್ಲೆ ಸರಕಾರ ತಾನಾಗಿಯೇ ಉರುಳಲಿದೆ. ನಾವು ಆಪರೇಷನ್ ಕಮಲಕ್ಕೆ ಕೈಹಾಕಿಲ್ಲ, ಅತೃಪ್ತ ಶಾಸಕರು ಬಿಜೆಪಿಗೆ ತಾವಾಗಿಯೇ ಬರಲಿದ್ದಾರೆ. ಸಿಎಂ ಟೆಂಪಲ್ ರನ್ ಮಾಡುತ್ತಿದ್ದಾರೆಯೇ ವಿನಃ ಅಭಿವೃದ್ಧಿ ಕಡೆ ಚಿಂತಿಸುತ್ತಿಲ್ಲ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿ ನೇತೃತ್ವದ ಸರಕಾರ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿಯಲಿದೆ.

* ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ದಂಗೆ ನೀಡಿರುವುದು ರಾಜಕೀಯ ಪ್ರೇರಿತವೇ?
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಹೇಗೆ ನಡೆದುಕೊಳ್ಳಬೇಕೆಂಬುದು ಗೊತ್ತಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಮುಖ್ಯಮಂತ್ರಿಗಳು ದಂಗೆ ಏಳಲು ಕರೆ ನೀಡಿರುವುದು ಹುದ್ದೆಗೆ ಧಕ್ಕೆ ತಂದಂತಾಗಿದೆ. ರಾಜ್ಯದ ಸಮ್ಮಿಶ್ರ ಸರಕಾರವನ್ನುಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನ ನಡೆಸುತ್ತಿದೆ ಎಂದು ಹೇಳಿಕೆ ನೀಡಿರುವುದು ರಾಜಕೀಯ ಪ್ರೇರಿತ. ಬಿಜೆಪಿ ವಿರುದ್ಧ ರಾಜ್ಯದ ಜನರು ದಂಗೆ ಏಳಬೇಕು ಎಂದು ಕುಮಾರಸ್ವಾಮಿ ಹೇಳಿಕೆ ನೀಡಿರುವುದರಿಂದ ಅವರ ಮನೋಭಾವ ಕ್ರೂರತೆಯಿಂದ ಕೂಡಿರುವುದು ತಿಳಿದುಬಂದಿದೆ. ರಾಜಕೀಯ ಪಕ್ಷದ ಮೇಲೆ ದ್ವೇಷ ಸಾರಲು ರಾಜ್ಯದ ಜನತೆಗೆ ದಂಗೆಯ ಕಿಡಿ ಹೊತ್ತಿಸಲು ಮುಂದಾಗಿರುವ ಕುಮಾರಸ್ವಾಮಿ ಅವರ ನಡೆ ಎಂತಹದು ಎಂದು ತಿಳಿದಿದೆ. ಬಯಸದೆ ಬಂದ ಅಧಿಕಾರವನ್ನು ಸರಿಯಾಗಿ ನಿಭಾಯಿಸಲು ಅವರಿಗೆ ಸಾಧ್ಯವಿಲ್ಲ. ಈ ಸರಕಾರದ ಮೇಲೆ ಜನರಲ್ಲಿ ನಂಬಿಕೆ ಇಲ್ಲವಾಗಿದೆ. ಈ ಸರಕಾರ ಉರುಳಲಿ ಅಂತ ಅವರ ಶಾಸಕರೇ ಶಾಪ ಹಾಕುತ್ತಿದ್ದಾರೆ.

*ಸಿಎಂ ಕುಮಾರಸ್ವಾಮಿ ಅವರ ನೇತೃತ್ವದ ಸರಕಾರ ಐದು ವರ್ಷಗಳ ಕಾಲ ಪೂರೈಸಲಿದೆಯೇ? ಸರಕಾರದ ಮುಂದಿನ ಕುರಿತು ನಿಮ್ಮ ಅಭಿಪ್ರಾಯವೇನು?
ಇತ್ತೀಚಿಗೆ ಜಾರಕಿಹೊಳಿ ಸಹೋದರರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನೇತೃತ್ವದ ಸರಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್-ಜೆಡಿಎಸ್‌ನ ಕೆಲ ಶಾಸಕರು ಈ ಸರಕಾರದ ಆಡಳಿತದಿಂದ ಅತೃಪ್ತರಾಗಿದ್ದಾರೆ. ಬೂದಿ ಮುಚ್ಚಿದ ಕೆಂಡದಂತೆ ಅಳಲನ್ನು ಹೊರ ಚೆಲ್ಲಲು ಅತೃಪ್ತ ಶಾಸಕರು ಮುಂದಾಗುತ್ತಿಲ್ಲ. ಈ ಸರಕಾರ ಕೆಲವೇ ದಿನಗಳಲ್ಲಿ ತನ್ನಷ್ಟಕ್ಕೆ ತಾನೇ ಉರುಳಲಿದೆ. ಈ ಸರಕಾರ ಐದು ವರ್ಷ ಪೂರೈಸುವ ಲಕ್ಷಣಗಳು ಕಾಣುತ್ತಿಲ್ಲ. ಅಧಿಕಾರಕ್ಕಾಗಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಿರುವುದು ಜನತೆಗೆ ಗೊತ್ತಿದೆ. ಅವರಿಗೆ ರಾಜ್ಯ ಬೇಕಿಲ್ಲ. ಅವಕಾಶ ಸಿಕ್ಕರೆ ಸರಕಾರ ರಚನೆ ಮಾಡುತ್ತೇವೆ. ಸರಕಾರ ರಚನೆಯಾಗಿ 4 ತಿಂಗಳಾಗುತ್ತಿದೆ. ಇದುವರೆಗೂ ಯಾವುದೇ ಅಭಿವೃದ್ಧಿ ಕಾರ್ಯಕೈಗೊಂಡಿಲ್ಲ. ಇನ್ನು ಈ ಸರಕಾರದ ಭವಿಷ್ಯ ಅಯೋಮಯ. ಕಾಂಗ್ರೆಸ್‌ನಲ್ಲಿನ ಕಚ್ಚಾಟ, ಜೆಡಿಎಸ್ ಶಾಸಕರ ವರ್ತನೆಗಳಿಂದ ಸರಕಾರ ಅಂತ್ಯಕಾಣಲಿದೆ.

*ದೋಸ್ತಿ ಸರಕಾರ ಅಸ್ಥಿರಗೊಳಿಸಲು ಬಿಜೆಪಿ ಮುಂದಾಗಿದೆ ಎಂದು ಸಿಎಂ ಕುಮಾರಸ್ವಾಮಿ ಅವರು ದೂರುತ್ತಿದ್ದಾರಲ್ಲ?
ಸರಕಾರದ ಸಾವಿಗೆ ಹಾಲು ಸಾಕು, ನಾವು ವಿಷ ಹಾಕುವ ಅಗತ್ಯವಿಲ್ಲ. ಹಾಲು ಕುಡಿದು ಸಾಯುತ್ತಿದ್ದಾರೆ. ಜೆಡಿಎಸ್‌ನವರಿಗೂ ಕಾಂಗ್ರೆಸ್‌ನವರಿಗೂ ಹೊಂದಾಣಿಕೆ ಇಲ್ಲ. ಮೈತ್ರಿ ಸರಕಾರದಲ್ಲಿ ಮೂರು ಗುಂಪುಗಳಾಗಿದ್ದು, ಬೆಳಗಾವಿಯದ್ದು ಒಂದು ಗುಂಪು, ದಾವಣಗೆರೆಯಲ್ಲಿ ಒಂದು ಗುಂಪು, ಬೆಂಗಳೂರಿನಲ್ಲಿ ಒಂದು ಗುಂಪು ಇದೆ. ಇನ್ನೂ ಬಹಳ ಮಂದಿ ಮುಖ್ಯಮಂತ್ರಿ ಆಗಬೇಕೆಂದು ಎಂದು ಬಹಳ ವರ್ಷಗಳಿಂದ ಕಾಯುತ್ತಿದ್ದಾರೆ. ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಮೈತ್ರಿ ಸರಕಾರವನ್ನು ನಾವು ಅಸ್ಥಿರಗೊಳಿಸುವ ಕಾರ್ಯಕ್ಕೆ ಕೈ ಹಾಕಿಲ್ಲ, ಹಾಕೋದು ಇಲ್ಲ. ಯಾವುದೇ ಪುರಾವೆಗಳಿಲ್ಲದೆ ನಮ್ಮ ಪಕ್ಷದ ಮೇಲೆ ಸುಮ್ಮನೆ ಆರೋಪ ಮಾಡುವ ಎಚ್.ಡಿ. ಕುಮಾರಸ್ವಾಮಿ ಅವರು ರೂಢಿಸಿಕೊಂಡಿದ್ದಾರೆ.

* ಸಿಎಂ ಟೆಂಪಲ್ ರನ್ ಬಗ್ಗೆ ನೀವು ಏನು ಹೇಳು ಬಯಸುತ್ತೀರಾ?
ಸಿಎಂ ಕುಮಾರಸ್ವಾಮಿ ರಾಜ್ಯದ ಜನತೆಯಿಂದ ಸಿಎಂ ಆಗಿಲ್ಲ. ದೇವರ ಆಶೀರ್ವಾದದಿಂದ ಸಿಎಂ ಆಗಿದ್ದಾರೆ. ಹೀಗಾಗಿ ಟೆಂಪಲ್ ರನ್ ಮುಂದುವರಿಸಿದ್ದಾರೆ. ಸರಕಾರದಲ್ಲಿ ಸ್ವಲ್ಪ ಯಡವಟ್ಟಾದರೂ ದೇವಸ್ಥಾನಗಳಿಗೆ ಭೇಟಿ ನೀಡುವ ಚಟ ರೂಢಿಸಿಕೊಂಡಿದ್ದಾರೆ. ಸರಕಾರ ಬೀಳುತ್ತದೆಂಬ ಆತಂಕ ಅವರಲ್ಲಿ ಅಡಗಿದೆ. ಆಡಳಿತಕ್ಕಿಂತ ಹೆಚ್ಚು ಸಮಯ ದೇವಸ್ಥಾನಗಳಿಗೆ ನೀಡುತ್ತಿದ್ದಾರೆ. ರಾಜ್ಯದಲ್ಲಿ ರೈತರ ಆತ್ಮಹತ್ಯೆಗಳು ಹೆಚ್ಚಾಗುತ್ತಿದೆ. ಕುರಿತು ಮುಂದಿನ ಕ್ರಮಗಳ ಕುರಿತು ಚರ್ಚಿಸದೆ ಎರಡು-ಮೂರು ದಿನಕ್ಕೊಮ್ಮೆ ದೇವಸ್ಥಾನಗಳಿಗೆ ಹೋಗುವುದು ಎಷ್ಟರ ಮಟ್ಟಿಗೆ ಸರಿ. ದೇವಸ್ಥಾನಗಳಿಗೆ ಮಾತ್ರ ಸಿಎಂ ಸೀಮಿತವಾಗಿದ್ದಾರೆ. ರಾಜ್ಯದ ಒಬ್ಬ ಮುಖ್ಯಮಂತ್ರಿ ಎಂಬುದನ್ನು ಅವರು ಮರೆತಿದ್ದಾರೆ.

*ನಿಮ್ಮ ಪಕ್ಷ ಆಪರೇಷನ್ ಕಲಮಕ್ಕೆ ಕೈ ಹಾಕಿದೆಯಂತಲ್ಲಾ? ಹಾಗಾದರೆ ಎಷ್ಟು ಶಾಸಕರಿಗೆ ಬಲೆ ಬೀಸಿದ್ದೀರಾ?
ಬಿಜೆಪಿಗೆ ಆಪರೇಷನ್ ಕಮಲದ ಅಗತ್ಯ ಇಲ್ಲ. ನಾವು ಯಾವ ಶಾಸಕರಿಗೂ ಹಣದ ಆಮಿಷವೊಡ್ಡಿಲ್ಲ. ಕಾಂಗ್ರೆಸ್-ಜೆಡಿಎಸ್ ನಾಯಕರು ನಾವು ಆಪರೇಷನ್ ಕಮಲಕ್ಕೆ ಮುಂದಾಗಿದ್ದೇವೆ ಹೇಳಿಕೆ ನೀಡುತ್ತಿರುವುದು ನಾಚಿಗೇಡಿತನ. ಅವರಲ್ಲಿನ ಕಚ್ಚಾಟಗಳಿಗೆ ಮದ್ದಿಲ್ಲದೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಕೆಲ ಕಾಂಗ್ರೆಸ್ ಮುಖಂಡರು ಸ್ವತಃ ಬಿಜೆಪಿಯತ್ತ ಬರಲು ಮುಂದಾಗಿದ್ದಾರೆ. ಬಿಜೆಪಿ ಎಂದಿಗೂ ದ್ವೇಷದ ರಾಜಕಾರಣ ಮಾಡುವುದಿಲ್ಲ. ಸರಕಾರವನ್ನು ಉರುಳಿಸುವ ದುರಾಸೆ ನಮಗಿಲ್ಲ. ಯಾವುದೇ ಹುರುಳಿಲ್ಲದೆ ಆರೋಪ ಮಾಡುವುದು ನಾಚಿಕೆಗೇಡಿತನ. ಸಚಿವ ಸ್ಥಾನ ವಂಚಿತರಿಗೆ ನಮ್ಮ ಪಕ್ಷದಲ್ಲಿ ಜಾಗವಿದೆ. ಅತೃಪ್ತ ಶಾಸಕರನ್ನು ಪಕ್ಷಕ್ಕೆ ಬರಲು ಬಲಾತ್ಕಾರ ಮಾಡುವ ಜಾಯಮಾನ ನಮ್ಮದಲ್ಲ.

*ಸರಕಾರ ಅಧಿಕಾರಿಗಳ ವರ್ಗಾವಣೆ ಮಾಡುವುದರಲ್ಲಿ ಏಕೆ?
ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನೇತೃತ್ವದ ರಾಜ್ಯ ಸರಕಾರ ವರ್ಗಾವಣೆ ದಂಧೆ ನಡೆಸುತ್ತಿದೆ. ತಮಗಿಷ್ಟ ಬಂದ ಅಧಿಕಾರಿಗಳನ್ನು ಮತ್ತೊಂದೆಡೆ ವರ್ಗಾವಣೆ ಮಾಡಲಾಗುತ್ತಿದೆ. ವರ್ಗಾವಣೆ ದಂಧೆಯಲ್ಲಿ ನಿರತವಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ಅಭಿವೃದ್ಧಿಯ ಬಗ್ಗೆ ಗಮನ ಹರಿಸುತ್ತಿಲ್ಲ. ಅರದಲ್ಲೂ ಕುಮಾರಸ್ವಾಮಿ ಅವರು ಏಕಪಕ್ಷೀಯ ನಿರ್ಧಾರ ತೆಗೆದುಕೊಂಡು ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿದ್ದಾರೆ. ಇದರಿಂದ ಕಾಂಗ್ರೆಸ್‌ನ ಹಿರಿಯ ಮುಖಂಡರು ಅಸಮಾಧಾನಗೊಂಡಿದ್ದರೆ. ಕೇಂದ್ರ ಸರಕಾರ ಐಟಿ, ಇಡಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕಾಂಗ್ರೆಸ್-ಜೆಡಿಎಸ್ ನಾಯಕರು ದೂರುತ್ತಿದ್ದಾರೆ. ತೊಡಗಿರುವ ಈ ಎರಡೂ ಪಕ್ಷದವರಿಗೂ ತನಿಖಾ ಇಲಾಖೆಗಳು ತಕ್ಕ ಪಾಠ ಕಲಿಸುತ್ತಿವೆ. ಇದರಲ್ಲಿ ಕೇಂದ್ರ ಸರಕಾರದ ಹಸ್ತಕ್ಷೇಪವಿಲ್ಲ. ಎರಡೂ ಪಕ್ಷದವರೂ ಜ್ವರ ಬಂದವರ ರೀತಿಯಲ್ಲಿ ಮಾತನಾಡುತ್ತಿದ್ದಾರೆ.

*ಮುಖ್ಯಮಂತ್ರಿ ಕುಮಾರಸ್ವಾಮಿ ನಡೆ ಮತ್ತು ವರ್ತನೆ ಕುರಿತು ಏನು ಹೇಳಲು ಬಯಸುತ್ತೀರಾ?
ರಾಜ್ಯದಲ್ಲಿ ಈ ಹಿಂದೆ ನಮ್ಮ ಪಕ್ಷದ ನಾಯಕರು ಮುಖ್ಯಮಂತ್ರಿಯಾಗಿದ್ದಾಗ ಮಾದರಿ ರಾಜ್ಯವಾಗಿತ್ತು. ರಾಜ್ಯದ ಬಗ್ಗೆ ಇತರೆ ರಾಜ್ಯಗಳಿಗೆ ಅಪಾರ ಒಲವಿತ್ತು. ಕಳೆದ 6 ವರ್ಷಗಳಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಹಿಂದುಳಿದಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹೋದ ಕಡೆ ಎಲ್ಲ ನಮ್ಮ ಪಕ್ಷದ ಮೇಲೆ ಆರೋಪ ಮಾಡುತ್ತಿದ್ದಾರೆ ವಿನಃ ಅಭಿವೃದ್ಧಿ ಕಡೆ ಗಮನ ಹರಿಸುತ್ತಿಲ್ಲ. ಅವರ ಇತ್ತೀಚಿನ ವರ್ತನೆಗಳು ಭಯಂಕರವಾಗಿದೆ. ಅವರಿಗೆ ಪಾಠ ಕಲಿಸಬೇಕಿದೆ. ಮನ ಬಂದಂತೆ ಮಾತನಾಡುವ ಮೂಲಕ ಮುಖ್ಯಮಂತ್ರಿ ಸ್ಥಾನಕ್ಕೆ ಅಪಮಾನ ಮಾಡಿಕೊಳ್ಳುತ್ತಿದ್ದಾರೆ.

*ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಳ್ಳ ಎಂದು ಕರೆದಿದ್ದಾರೆ ಈ ಕುರಿತು ಏನು ಹೇಳಲು ಬಯಸುತ್ತೀರಾ?
ಪ್ರಧಾನಿ ಅವರು ಇತರೆ ದೇಶಗಳಿಗೆ ಮಾದರಿಯಾಗುವಂತೆ ಆಡಳಿತ ನಡೆಸಿದ್ದಾರೆ. ರಾಹುಲ್‌ಗಾಂಧಿ ಅವರು ಪ್ರಧಾನಿ ಮೋದಿ ಅವರನ್ನು ಕಳ್ಳ ಎಂದು ಕರೆದಿದ್ದಾರೆ. ರಾಹುಲ್‌ಗಾಂಧಿ ಅವರಿಗೆ ಪ್ರಧಾನಿ ಹುದ್ದೆಯ ಬಗ್ಗೆ ಗೊತ್ತಿಲ್ಲ. ಹುಚ್ಚರಂತೆ ವರ್ತಿಸುತ್ತಿದ್ದಾರೆ. ಮೋದಿ ಪ್ರಧಾನಿ ಆದ ಮೇಲೆ ಒಂದೇ ಒಂದು ಭ್ರಷ್ಟಾಚಾರ ಪ್ರಕರಣಗಳು ನಡೆದಿಲ್ಲ. ಸ್ವತಃ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ನ್ಯಾಷನಲ್ ಹೆರಾಲ್‌ಡ್ ಪತ್ರಿಕೆ ಹಗರಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಅವರ ಪ್ರತಿ ಭಾಷಣದಲ್ಲಿ ರಾಫೆಲ್ ವಿಮಾನದ ಬಗ್ಗೆ ಮಾತನಾಡುತ್ತಾರೆ. ಮೇಳ ಇಲ್ಲದೆ ಹೇಳಿಕೆ ಕೊಡುತ್ತಾರೆ. ಇದು ಅವರ ಅಸ್ತಿತ್ವಕ್ಕೆ ಧಕ್ಕೆ ತರುವಂತಾಗಿದೆ. ಎಐಸಿಸಿಯ ಅಧ್ಯಕ್ಷರಾಗಿ ರಾಹುಲ್‌ಗಾಂಧಿ ಅವರು ಮನ ಬಂದಂತೆ ಮಾತನಾಡುವುದು ಸರಿಯಲ್ಲ. ಕೂಡಲೇ ಅವರು ಕ್ಷಮೆಯಾಚಿಸಬೇಕು. ರಾಜ್ಯದ ಕಾಂಗ್ರೆಸ್ ನಾಯಕರಿಗೂ ಇದೇ ಜಾಡು ಅಂಟಿಕೊಂಡಿದೆ.

*ಲೋಕಸಭಾ ಚುನಾವಣೆಗೆ ನಿಮ್ಮ ಪಕ್ಷದ ತಯಾರಿ ಹೇಗೆ ನಡೆಯುತ್ತಿದೆ? 22ಕ್ಕೂ ಹೆಚ್ಚು ಸ್ಥಾನಗಳು ಗೆಲ್ಲುವ ನಿರೀಕ್ಷೆ ಇದೆಯೇ?
ಮೋದಿ ನೇತೃತ್ವದ ಸರಕಾರವನ್ನು ದೇಶದ ಜನ ಮೆಚ್ಚಿದ್ದಾರೆ. ಸಾಕಷ್ಟು ಯೋಜನೆಗಳನ್ನು ಕೈಗೊಳ್ಳುವ ಮೂಲಕ ಆರ್ಥಿಕತೆಯನ್ನು ಸದೃಢವಾಗಿಸಿದ್ದಾರೆ. ಕೇಂದ್ರದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರಬಾರದೆಂದು ರಾಹುಲ್‌ಗಾಂಧಿ ಅವರು ಇತರೆ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸಂಚು ರೂಪಿಸುತ್ತಿದ್ದಾರೆ. ಮೋದಿಯ ಮುಂದೆ ಅವರ ಆಟ ನಡೆಯದು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷಿತ ಸ್ಥಾನಗಳನ್ನು ಗೆಲ್ಲುವ ಅಧಿಕಾರ ಚುಕ್ಕಾಣಿ ಹಿಡಿಯಲಿದೆ. ನಮ್ಮ ರಾಜ್ಯದಿಂದ 22ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಮೋದಿಗೆ ಕೊಡುಗೆಯಾಗಿ ನೀಡಲಾಗುತ್ತದೆ.

Tags

Related Articles

Leave a Reply

Your email address will not be published. Required fields are marked *

Language
Close