About Us Advertise with us Be a Reporter E-Paper

ಗುರು

ಜ್ಞಾನವೆಂಬ ಬೆಳಕಿನೆಡೆಗೆ ಕರೆದೊಯ್ಯುವ ಮಹಾಶಕ್ತಿ

- ಗೀತಾ ಅವಧಾನಿ

ನಾನೇ ಎಲ್ಲ, ನನ್ನಿಂದಲೇ ಎಲ್ಲ, ನನಗೆ ಯಾರ ಸಹಕಾರವೂ ಅನಗತ್ಯ. ಈ ಥರದ ಅಹಂಭಾವವೇ ವ್ಯಕ್ತಿಯ ಪ್ರಥಮ ಶತ್ರು. ನನ್ನ ಹತ್ತಿರ ಹಣ ಸಂಪತ್ತು ಅಧಿಕಾರ ಅಂತಸ್ತು ಎಲ್ಲಾ ಇದೆ, ಏನು ಬೇಕಾದರೂ ಸಾಧಿಸುವ ಅರ್ಹತೆಯಿದೆ ಎಂಬ ಮನೋಭಾವವೇ ಸಾಕು ಆತನನ್ನು ಅಧಪತನಕ್ಕೆಳೆಯಲು. ಯಾರ ಮೇಲೂ ಯಾವುದರ ಮೇಲೂ ಅವಲಂಬಿತರಾಗದೆ ಸ್ವಾವಲಂಬಿಯಾಗಿರುವುದು ಒಳ್ಳೆಯದೇ. ಆದರೆ ಅದೇ ವೈಪರೀತ್ಯವಾದರೆ ವಿವೇಕರಹಿತ ಎನಿಸಿಕೊಳ್ಳುವುದು. ಒಬ್ಬ ವ್ಯಕ್ತಿಯ ಅಮೂಲಾಗ್ರ ಬೆಳವಣಿಗೆಗೆ ಮಾರ್ಗದರ್ಶಕರಾಗಿ ಕೋಚ್, ಮೆಂಟರ್ ಅಥವಾ ಗುರು ಬೇಕೇ ಬೇಕು. ಗುರುವಿನ ಒತ್ತಾಸೆಯಿರಬೇಕು ಅಂದರೆ ಅದರ ಅರ್ಥ ನೀನು ಕೈಲಾಗದವನು ಎಂದಲ್ಲ. ಗುರುವಿನ ಸಹಕಾರದಿಂದ ನೀನು ಇನ್ನೂ ದೋಷರಹಿತವಾಗಿ ಪರಿಪೂರ್ಣತೆಯ ಅನುಭೂತಿಯನ್ನು ಅನುಭವಿಸುವೆಯೆಂದರ್ಥ.

ಗುರುವಿನ ಮಹತ್ವ ಸಾರುವ ಒಂದು ಪುಟ್ಟ ಕಥೆ ಇಲ್ಲಿದೆ. ಒಂದು ಹಸು ಮೇವನ್ನರಸುತ್ತ ಅಡವಿಗೆ ಹೋಗಿತ್ತು. ಹಠಾತ್ತಾಗಿ ಹುಲಿಯೊಂದು ತನ್ನನ್ನು ಬೆನ್ನಟ್ಟಿಕೊಂಡು ಬರುವುದು ಹಸುವಿಗೆ ಗೊತ್ತಾಯಿತು. ಯಾವುದೇ ಸಮಯದಲ್ಲಾದರೂ ಹುಲಿ ಪಂಜಿನಿಂದ ತನ್ನನ್ನು ಇರಿದು ಸಾಯಿಸಬಹುದೆಂದು ಹೆದರಿ ಒಡಲು ಶುರು ಮಾಡಿತು. ಹತಾಶೆಯಿಂದ ಓಡುತ್ತಲೇ ಹುಲಿಯಿಂದ ತಪ್ಪಿಸಿಕೊಳ್ಳಲು ಯಾವುದಾದರೂ ಸ್ಥಳವಿದೆಯೇ ಎಂದು ಹುಡುಕಾಟದಲ್ಲಿದ್ದಾಗ ಅಷ್ಟೇನೂ ಕೆಸರು ಮಣ್ಣಿನಿಂದ ತುಂಬಿದ ಒಂದು ಹೊಂಡ ಕಾಣಿಸಿತು. ಹುಲಿ ತನ್ನನ್ನು ಸಮೀಪಿಸಿ ಆಕ್ರಮಣ ಮಾಡುವ ಮುನ್ನ ತನ್ನನ್ನು ತಾನು ರಕ್ಷಿಸಿಕೊಳ್ಳಬೇಕೆಂದು ಆ ಹೊಂಡಕ್ಕೆ ಹಾರಿತು. ಹುಲಿ ಹಸುವಿರುವ ಸ್ಥಳವನ್ನು ಗಮನಿಸದೇ ಹಸುವಿನ ಮೇಲೆರಗಿತು. ಕೆಸರಿದ್ದ ಕಾರಣ ಹಸುವಿಗಾಗಲೀ, ಹುಲಿಗಾಗಲೀ, ಅಲ್ಲಿಂದ ಹೊರಬರಲು ಸಾಧ್ಯವಾಗಲಿಲ್ಲ. ಹುಲಿ ಪದೇ ಪದೇ ಹಸುವಿನ ಕಡೆ ಎಗರಾಡುತ್ತ ‘ನಿನ್ನನು ಈಗಲೇ ತಿಂದು ಹಾಕುತ್ತೇನೆ’ ಎಂದು ಘರ್ಜಿಸುತ್ತಿತ್ತು.

ಆದರೆ ಅಲ್ಲಿಂದ ತಪ್ಪಿಸಿಕೊಂಡು ಹೊರಗೆ ಬರಲು ಅದಕ್ಕೆ ಹಸು ಗಹಗಹಿಸಿ ನಗುತ್ತ ‘ನೀನು ಕಾಡಿಗೇ ರಾಜನಾಗಿರಬಹುದು. ಆದರೆ ನಿನ್ನ ಯಾವ ಶಕ್ತಿಯೂ ನಿನ್ನನ್ನು ಇಲ್ಲಿಂದ ಕಾಪಾಡಲು ಸಾಧ್ಯವಾಗಲಿಲ್ಲ’ ಎಂದು ಹಸು ಹಂಗಿಸಿತು. ‘ನೀನೂ ಕೂಡ ಇಲ್ಲಿಯ ಕೆಸರಿನಲ್ಲಿ ಸಾಯುತ್ತೀಯ’ ಹುಲಿ ಮಾತಿನ ಏಟು ಕೊಟ್ಟಿತು. ಹಸು ಗಂಭೀರವಾಗಿ ‘ಇಲ್ಲ. ನಾನು ಸಾಯುವುದಿಲ್ಲ. ಈ ಕಂಟಕದಿಂದ ತಪ್ಪಿಸಿಕೊಳ್ಳಲು ನನ್ನ ಹತ್ತಿರ ಶಕ್ತಿಯಿಲ್ಲದಿರಬಹುದು. ಆದರೆ ನನ್ನ ಯಜಮಾನ ಸಾಯಂಕಾಲವಾದರೂ ನಾನು ಮನೆಗೆ ಹಿಂದಿರುಗಿ ಬಾರದಿದ್ದಾಗ ನನ್ನನ್ನು ಹುಡುಕುತ್ತ ಇಲ್ಲಿಗೇ ಬರುತ್ತಾನೆ. ನೋಡಿದ ಕೂಡಲೇ ನನ್ನನ್ನು ಮೇಲಕ್ಕೆತ್ತಿ ನನ್ನ ಪ್ರೀತಿಯ ಮನೆಗೆ ಕರೆದುಕೊಂಡು ಹೋಗುತ್ತಾನೆ. ಸುಮ್ಮನಿರುವುದನ್ನು ಬಿಟ್ಟು ಹುಲಿಗೆ ಬೇರೆ ಮಾರ್ಗವಿರಲಿಲ್ಲ. ನಿಧಾನವಾಗಿ ಸೂರ್ಯ ಅಸ್ತಂಗತನಾದ. ಹಸುವನ್ನು ಹುಡುಕುತ್ತಾ ಅದರ ಯಜಮಾನ ಆಗಮಿಸಿದನು. ಕೆಸರಿನಲ್ಲಿದ್ದ ಹಸುವನ್ನು ಗಮನಿಸಿದನು. ಸುರಕ್ಷಿತವಾಗಿ ಹಸುವನ್ನು ಮೇಲೆತ್ತಿ ಮನೆಗೆ ಕರೆದುಕೊಂಡು ಹೋದನು. ಈ ಕಥೆಯಲ್ಲಿ ಬರುವ ಹಸು, ‘ಶರಣಾಗತ ಹೃದಯ’ವನ್ನು ಪ್ರತಿನಿಧಿಸಿದರೆ, ಹುಲಿ ‘ಅಹಂಕಾರದ ಮನಸ್ಸು’, ಯಜಮಾನ ‘ಗುರು’ವನ್ನು ಪ್ರತಿನಿಧಿಸುತ್ತಾನೆ. ಕೆಸರು ‘ಜಗತ್ತಿನ’ ದ್ಯೋತಕ. ಬೆನ್ನಟ್ಟಿ ಹೋಗುವುದೆಂದರೆ ಹೋರಾಟ.

ನಮ್ಮ ಅಹಂನ್ನು ತೊಲಗಿಸಿ ಸಕಾರಾತ್ಮಕ ಜ್ಞಾನಭಂಡಾರವನ್ನು ಮನಸ್ಸಿನಲ್ಲಿ ಆವಿರ್ಭವಿಸುವವನೇ ಗುರು. ಕತ್ತಲಿನ ಅಂಧಕಾರದಿಂದ ಬೆಳಕಿನ ಜ್ಯೋತಿಯೆಡೆಗಿನ ಮಾರ್ಗದರ್ಶಕ, ಜ್ಞಾನದ ದಾಹವನ್ನು ಇಂಗಿಸುವವನೇ ಗುರು. ಚಿಕ್ಕವರಿರುವಾಗ ಗೊಂದಲ ಪರಿಹರಿಸಿ ಸರಿ ತಪ್ಪುಗಳ ನಡುವಿನ ವ್ಯತ್ಯಾಸವನ್ನರಿಯಲು ಕಲಿಸುವ ತಂದೆ ತಾಯಿಯರೇ ಮೊದಲ ಗುರು. ಅಕ್ಷರಾಭ್ಯಾಸದ ಜತೆಗೆ ನಿಸ್ವಾರ್ಥ ಮನೋಭಾವ, ದೇಶಭಕ್ತಿ, ನ್ಯಾಯಯುತ ದುಡಿಮೆಯತ್ತ ಪ್ರೇರೇಪಣೆ ಇತ್ಯಾದಿ ಮಾನವೀಯ ಮೌಲ್ಯಗಳನ್ನು ಶಿಷ್ಯನಿಗೆ ಹಸ್ತಾಂತರಿಸಿ ಆದರ್ಶ ವ್ಯಕ್ತಿಯಾಗಿ ರೂಪುಗೊಳ್ಳಲು ಸಹಕರಿಸುವವನೇ ಶಿಕ್ಷಕ. ತಮ್ಮ ಪಾಠವನ್ನು ಧಾರೆಯೆರೆದ ಹಿರಿಯರು ಕಿರಿಯರ ಪಾಲಿನ ಗುರು. ಇನ್ನೊಂದು ಪ್ರವರ್ಗಕ್ಕೆ ಸೇರಿದವರೆಂದರೆ ಅಧ್ಯಾತ್ಮಿಕ ಗುರು. ಆತನೇ ನಮ್ಮಲ್ಲಿರುವ ಅನನ್ಯತೆ, ವ್ಯಕ್ತಿತ್ವವನ್ನು ಅವಲೋಕಿಸಿ, ಆತ್ಮ ಪರಮಾತ್ಮದ ಬಗ್ಗೆ ತಿಳುವಳಿಕೆ ಜ್ಞಾನ ನೀಡಿ ಮೋಕ್ಷದ ಪರಿಕಲ್ಪನೆಯನ್ನು ಪ್ರಚುರಪಡಿಸುವವನು. ಪ್ರಾಪಂಚಿಕ ಗುರಿಯತ್ತ ಪಯಣಿಸಲು, ತಂದೆ ತಾಯಿಯರು, ಶಿಕ್ಷಕರು, ಹಿರಿಯರು, ಸಂಗಾತಿ, ಸ್ನೇಹಿತರು, ಎಂಬ ಮಹಾಶಕ್ತಿ ಅರ್ಥಾತ್ ಗುರು ಬೇಕು. ಹಾಗೆಯೇ ಧರ್ಮ, ಜ್ಞಾನದ ತೃಷೆಯನ್ನು ನೀಗಿಸಿ ಆತ್ಮ ಪರಮಾತ್ಮದ ಬಗ್ಗೆ ಜ್ಞಾನೋಪದೇಶ ನೀಡುವ ಗುರು ಬೇಕೇ ಬೇಕು.

Tags

Related Articles

Leave a Reply

Your email address will not be published. Required fields are marked *

Language
Close