About Us Advertise with us Be a Reporter E-Paper

ಗೆಜೆಟಿಯರ್

ಎತ್ತಸಾಗುತ್ತಿದೆ ತಂತ್ರಜ್ಞಾನ..?

ಶಶಿಧರ ಹಾಲಾಡಿ

ಪುತ್ತೂರಿನ ಅಂಬಿಕಾ ಪಿಯು ಕಾಲೇಜಿನ ವಿದ್ಯಾರ್ಥಿಗಳು ಕಳೆದೆರಡು ವಾರಗಳ ಹಿಂದೆ  ಒಂದು ಪ್ರತಿಜ್ಞೆಯನ್ನು ತೆಗೆದುಕೊಂಡಾಗ, ಅದು ಪತ್ರಿಕೆಗಳ ಮೂಲೆಗಳಲ್ಲಿ ಒಂದು ಸುದ್ದಿ ಆಯಿತು. ಹಳ್ಳಿಜನರು, ಗ್ರಹಿಣಿಯರು, ವಿದ್ಯಾವಂತರು, ಅಜ್ಜಂದಿರು – ಹೀಗೆ ಎಲ್ಲರೂ ಸೋಷಿಯಲ್ ಮೀಡಿಯಾದಲ್ಲಿ ಮುಳುಗಿ ಏಳುತ್ತಿ–ರುವಾಗ, ಆ ವಿದ್ಯಾರ್ಥಿಗಳು ತೆಗೆದು ಕೊಂಡ ಪ್ರತಿಜ್ಞೆ ಎಂದರೆ :‘ವಿದ್ಯಾಭ್ಯಾಸ ನಡೆ–ಯುವ ಸಮಯದಲ್ಲಿ ಸೋಷಿ–ಯಲ್ ಮೀಡಿಯಾ  ವಾಟ್ಸಪ್, ಫೇಸ್‌–ಬುಕ್, ಇನ್ಸ್ಟಾಗ್ರಾಂ ಮೊದಲಾದ ಮಾಧ್ಯಮ ಗಳು ಮನಸ್ಸನ್ನು ಚಂಚಲ ಗೊಳಿಸುತ್ತವೆ.  ಜೀವನದಲ್ಲಿ ಯಶಸ್ಸುಗಳಿಸಲು ಒಳದಾರಿ–ಗಳನ್ನು ಹಿಡಿಯುವಂತೆ ಅವು ಪ್ರೇರಣೆ ನೀಡುವುದರ ಜೊತೆಗೆ, ವಿದ್ಯಾಭ್ಯಾಸಕ್ಕೆ ಭಂಗ ತರುತ್ತವೆ. ಆದ್ದರಿಂದ ನಾವು ಇದರಿಂದ ದೂರ ಇರುತ್ತೇವೆ’

ಶರವೇಗದಲ್ಲಿ ಓಡುತ್ತಿರುವ 21ನೆಯ ಶತ ಮಾನದಲ್ಲಿ ಈ ರೀತಿಯ ಒಂದು ಪ್ರತಿಜ್ಞೆಯನ್ನು ತೆಗೆದುಕೊಳ್ಳುವಂತೆ ಆ ವಿದ್ಯಾರ್ಥಿಗಳಿಗೆ ಪ್ರೇರಣೆ ದೊರೆತದ್ದಾದರೂ ಹೇಗೆ? ಬಸ್ಸುಗಳಲ್ಲಿ, ರೈಲುಗಳಲ್ಲಿ, ಮನೆಗಳಲ್ಲಿ, ಸಮಾರಂಭಗಳಲ್ಲಿ ಸ್ಮಾರ್ಟ್‌ಫೋನ್ ಉಪಯೋಗಿಸುವ ಗೀಳು ವ್ಯಾಪಕವಾಗಿ ಹರಡಿರುವ  ದಿನಗಳಲ್ಲಿ ಇಂತಹದ್ದೊಂದು ಪ್ರತಿಜ್ಞೆ ವಿಶಿಷ್ಟ, ವಿನೂತನ. ಹಳ್ಳಿ ಹಳ್ಳಿಯಲ್ಲೂ ಅಂತರ್ಜಾಲ, ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್, ಅಗ್ಗದ ಡಾಟಾ ಇವೆಲ್ಲವೂ ಸೇರಿ, ಯುವಜನಾಂಗದ ಒಂದು ದೊಡ್ಡ ಸಮೂಹವನ್ನು ಸೋಷಿಯಲ್ ಮೀಡಿಯಾದ ದಾಸರನ್ನಾಗಿಸಿರುವುದು ನಿಜ. ಎಷ್ಟೋ ವಿದ್ಯಾರ್ಥಿಗಳು ತಮ್ಮ ‘ಸ್ವಂತ’ ಸ್ಮಾರ್ಟ್‌ಫೋನ್‌ನಲ್ಲಿ ಕದ್ದು ಮುಚ್ಚಿ ನೋಡಬಾರದ್ದನ್ನು ನೋಡುತ್ತಾ, ಆ ಗೀಳು ಅಂಟಿಸಿಕೊಳ್ಳುತ್ತಿವುದನ್ನು ಸಹ ಪ್ರಾಜ್ಞರು ದಾಖಲಿಸಿದ್ದಾರೆ. ಹಾಗಾದರೆ, ಇಂದಿನ ತಂತ್ರಜ್ಞಾನ ನಿಜಕ್ಕೂ ಅಷ್ಟೊಂದು ಅಪಾಯಕಾರಿಯೆ? ಅದರಿಂದ ಉಪಯೋಗವೇ ಇಲ್ಲವೆ?

ಇಂದಿನ ಅಂತರ್ಜಾಲವು  ಜೀವನವನ್ನು ಹೇಗೆ ಬದಲಿಸಿದೆ, ಹೇಗೆ ಅದರಿಂದ ಅನುಕೂಲ ಆಗಿದೆ ಎಂಬುದನ್ನು ಒಮ್ಮೆ ಗಮನಿಸೋಣ.

ಸದಭಿರುಚಿಯ ಮನರಂಜನೆ

ತಾಲೂಕು ಕೇಂದ್ರದಲ್ಲಿ ವೃತ್ತಿ ನಿರ್ವಹಿಸುತ್ತಿರುವ ಓರ್ವ ಅಧ್ಯಾಪಕರು ಅವರು ಗುರುತಿಸಿದ ಒಂದು ವಿಚಿತ್ರ ವಿದ್ಯಮಾನವನ್ನು ಹಂಚಿಕೊಂಡರು. ಅವರ ಗೆಳೆಯರ ವಲಯದಲ್ಲಿ, ಎರಡು ದಶಕಗಳ ಹಿಂದೆ ಪ್ರಮುಖ ಮನರಂಜನಾ ಮಾಧ್ಯಮವಾಗಿದ್ದ ‘ಇಸ್ಪೀಟು’ ಆಟ ಈಗ ಜನಪ್ರಿಯತೆ ಕಳೆದುಕೊಂಡಿದೆ! ಏಕೆ ಎಂದು ಅವರ ಬಳಗದಲ್ಲೇ ಚರ್ಚಿಸಿದಾಗ ಅವರೇ ಕಂಡುಕೊಂಡ ಉತ್ತರ ಎಂದರೆ, ಮನೆಯಲ್ಲೇ  ಸದಭಿರುಚಿಯ ಮನರಂಜನೆ! ಹೊಸ ಹೊಸ ಸಿನಿಮಾ, ಲೈವ್‌ಶೋಗಳು, ಹಾಡುಗಳು, ನೃತ್ಯ, ಸುದ್ದಿವಿಶ್ಲೇಷಣೆ ಎಲ್ಲವೂ ಮನೆಯಲ್ಲಿರುವ ಟಿ.ವಿ.ಯಲ್ಲೇ ದೊರೆಯುವುದರಿಂದ, ‘ಇಸ್ಪೀಟು’ ಆಡುತ್ತಿರುವವರೆಲ್ಲರೂ ಈಗ ಮನೆಯಲ್ಲೇ ಸಮಯ ಕಳೆಯುತ್ತಿದ್ದಾರೆ.  ಮನೆಯ ಗ್ರಹಿಣಿಯರು ಸಹ ಟಿವಿಯಲ್ಲಿ ಬರುವ ಉತ್ತಮ ಕಾರ್ಯಕ್ರಮಗಳನ್ನು ನೋಡುತ್ತಾ, ಸಮಯವನ್ನು ಕಳೆಯುತ್ತಾರಂತೆ. ಒಂದು ರೀತಿಯಲ್ಲಿ ಅವರು ಕಂಡುಕೊಂಡ ವಿಚಾರ ನಿಜವೇ. ಆದರೆ, ಹೆಚ್ಚಿನ ದೃಶ್ಯ ಮಾಧ್ಯಮಗಳು ಟಿ.ಆರ್.ಪಿ.ಯನ್ನು ಅನುಸರಿಸಿ ಕಾರ್ಯಕ್ರಮಗಳನ್ನು ಮಾಡುತ್ತಿರುವುದರಿಂದ, ‘ಸದಭಿರುಚಿ’ ಎಂಬ ಶಬ್ದದ ವ್ಯಾಖ್ಯಾನವೇ ಬದಲಾಗಿರುವುದು ಸಹ  ಒಂದು ವಿದ್ಯಮಾನ. ಶುದ್ಧ ಸಂಗೀತ, ಶುದ್ಧ ಸಾಹಿತ್ಯ, ಶುದ್ಧ ಪ್ರತಿಬೆಗಳಿಗೆ ಅವಕಾಶ ನೀಡುವುದಕ್ಕಿಂತ, ಹೆಚ್ಚು ಜನರು ನೋಡುವ ಕಾರ್ಯಕ್ರಮಗಳನ್ನು ಟಿ.ವಿ.ಗಳು ಬಿತ್ತರಿಸುತ್ತಿರುವ ಈ ದಿನಗಳಲ್ಲಿ, ಯಾವದನ್ನು ನೋಡಬೇಕು, ಯಾವುದು ಸದಭಿರುಚಿಯ ಕಾರ್ಯಕ್ರಮ ಎಂದು ಆಯ್ಕೆ ಮಾಡುವಲ್ಲಿ ವೀಕ್ಷಕರು ಗೊಂದಲಕ್ಕೆ ಬೀಳುವುದು ಸಹಜ. ಅದೇನಿದ್ದರೂ, ‘ಸದಭಿರುಚಿ’ ಅಥವಾ ‘ಉತ್ತಮ’ ಎಂಬುದನ್ನೇ ಹುಡುಕಿಕೊಂಡು, ಅದನ್ನೇ ನೋಡುತ್ತೇನೆ ಎಂದು ಪಟ್ಟು ಹಿಡಿಯುವ ಜನರಿಗೆ ಟಿ.ವಿ. ಮತ್ತು ಅಂತರ್ಜಾಲದಲ್ಲಿ ಗುಣಮಟ್ಟದ ಸರಕು ಸುಲಭವಾಗಿ ದೊರಕುತ್ತಿದೆ.  ವೀಕ್ಷಕರು ಏನನ್ನು ನೋಡಬೇಕು ಎಂದು ಸಂಪೂರ್ಣವಾಗಿ ನಿಯಂತ್ರಿಸುವ ಕಾಲ ಬರುವ ಸಾಧ್ಯತೆ ದಟ್ಟವಾಗಿದೆ. ಒಟ್ಟೂ ಮನರಂಜನೆಯ ಕ್ಷೇತ್ರ ಆ ಪಥದಲ್ಲಿ ಸಾಗುತ್ತಿರುವುದನ್ನು ಹಲವು ತಜ್ಞರು ಗುರುತಿಸಿದ್ದಾರೆ. ಆಗ ‘ಸದಭಿರುಚಿಯ ಮನರಂಜನೆ’ ಎಂಬ ಶಬ್ದ ತನ್ನ ಅರ್ಥ ಕಳೆದುಕೊಂಡೀತು.

ಸಂವಹನ ಮತ್ತು ಸಂಪರ್ಕ 

ನಿಜ, ಮೊಬೈಲ್‌ಗಳ ಬಳಕೆ ಮತ್ತು ಅಂತರ್ಜಾಲದ ವ್ಯಾಪಕ ಉಪಯೋಗದ ಪ್ರಾರಂಭದ ದಿನಗಳಲ್ಲಿ, ಇದನ್ನು ‘ಸಂವಹನ ಕ್ರಾಂತಿ’ ಎಂದೇ ಕರೆಲಾಗುತ್ತಿತ್ತು. ಪರಸ್ಪರ ಸಂಪರ್ಕ ಸಾಧಿಸುವುದು, ಸಂದೇಶ  ಒಂದೆಡೆಯಾದರೆ, ವಿಶ್ವದ ಮೂಲೆ ಮೂಲೆಗಳಲ್ಲಿ ಅಡಿಗಿದ್ದ ಜ್ಞಾನದ ನಿಧಿಯು, ಅತಿ ಸಣ್ಣ ವ್ಯಕ್ತಿಗೂ ದೊರೆಯುವಂತಾಗಿದ್ದು ಅಂತರ್ಜಾಲ ದ ಹೆಗ್ಗಳಿಕೆಯಿಂದ. ಸಾಮಾಜಿಕ ಜಾಲತಾಣ, ವಿವಿಧ ವೆಬ್‌ಸೈಟ್‌ಗಳ ಸದುಪಯೋಗದಿಂದ, ಅಧ್ಯಯನಕ್ಕೆ, ಸಂಶೋಧನೆಗೆ, ದಿನನಿತ್ಯದ ಮಾರ್ಕೆ ಟಿಂಗ್‌ಗೆ, ಹಣವರ್ಗಾವಣೆಗೆ ತಂತ್ರಜ್ಞಾನದ ಬಳಕೆ ಸಾಮಾನ್ಯವಾಯಿತು. ಆದರೆ, ಸಾಮಾಜಿಕ ಜಾಲತಾಣಗಳಿಗೆ ‘ದಾಸ’ರಾದವರು, ಅದನ್ನೇ ಗೀಳನ್ನಾಗಿಸಿಕೊಂಡು, ಅದನ್ನು ಬಿಟ್ಟಿರಲಾಗದ ಸ್ಥಿತಿಯನ್ನು ತಲುಪುತ್ತಿರುವ ವಿದ್ಯಮಾನವೂ ದಿಗಿಲು ಹುಟ್ಟಿಸುತ್ತಿದೆ. ಅತಿಯಾದರೆ, ಅಮೃತವೂ ವಿಷ ಎನ್ನುವ ಹಳೆಯ ನಾಣ್ಣುಡಿಗೆ ಅಂತರ್ಜಾಲ ಮತ್ತು  ಮೀಡಿಯಾಗಳು ಒಂದು ಉತ್ತಮ ಆಧುನಿಕ ಉದಾಹರಣೆ.

ಸುರಕ್ಷಿತ ಜೀವನ

ತಂತ್ರಜ್ಞಾನವು ನಮ್ಮ ಜೀವನವನ್ನು ಹೆಚ್ಚು ಸುರಕ್ಷಿತವನ್ನಾಗಿಸಿದೆ.  ಕ್ಯಾಮೆರಾಗಳು, ಅಪಾಯದ ವೇಳೆ ಮೊಳಗುವ ಸೈರನ್‌ಗಳು, ಕಣ್ಣಿನ ಸ್ಕ್ಯಾನ್ ಮೂಲಕ ಪತ್ತೆ ಹಚ್ಚುವ ಸ್ಕ್ಯಾನರ್, ಕಾರ್ಡ್ ಮೂಲಕ ವ್ಯಕ್ತಿಯ ಸಾಚಾತನವನ್ನು ಗುರುತಿಸುವ ವಿಧಾನ, ದೂರದಲ್ಲಿ ಕುಳಿತೇ ಮನೆಯ ಒಳಗಿನ ದೃಶ್ಯವನ್ನು ನೋಡಲು ಅನುಕೂಲ ಮಾಡಿಕೊಡುವ ಸ್ಮಾರ್ಟ್ ಫೋನ್ ಮತ್ತು  ಅಂತರ್ಜಾಲ – ಹೀಗೆ  ನಿತ್ಯ ಜೀವನ ಹೆಚ್ಚು ಸುರಕ್ಷಿತ ಆಗಿರುವುದು ನಿಜ.  ಕ್ಯಾಮೆರಾ, ದತ್ತಾಂಶ ಸಂಗ್ರಹದ ತಂತ್ರಜ್ಞಾನದಿಂದ, ಖಾಸಗಿತನ ಬಯಲಾಗಿರುವುದು ಈ ವಿದ್ಯಮಾನದ ಇನ್ನೊಂದು ಮುಖ! ಆದರೆ ಅತಿ ಎನಿಸಿದರೆ ಅಮೃತವೂ ಅಪಾಯವೇ. ಅಗ್ಗದ ಡಾಟಾ ಮತ್ತು ಅಂತರ್ಜಾಲದ ಸೌಲಭ್ಯ ನಮ್ಮ ನಾಗರಿಕತೆಯನ್ನು ಎಲ್ಲಿಗೆ ತೆಗೆದುಕೊಂಡು ಹೋಗಿ ನಿಲ್ಲಿಸುತ್ತದೋ, ಕಾಲವೇ ಉತ್ತರ ಹೇಳಬೇಕು.

Tags

Related Articles

Leave a Reply

Your email address will not be published. Required fields are marked *

Language
Close