ಮಣ್ಣಲ್ಲಿ ಮಣ್ಣಾಗದೇ ದಿಬ್ಬ ಹತ್ತಿ ನಿಲ್ಲಿ

Posted In : ಅಂಕಣಗಳು, ಗುರುಮನ

ವ್ಯಕ್ತಿಯೊಬ್ಬ ಜೀವನದಲ್ಲಿ ತುಂಬಾ ನೊಂದಿದ್ದ. ಎಲ್ಲವನ್ನು ಕಳೆದುಕೊಂಡು ಮುಂದೇನು ಎಂಬ ಸ್ಥಿತಿಗೆ ಬಂದು ನಿಂತಿದ್ದ. ನಿರ್ಗತಿಕನಾಗಿ ನಡೆದು ಹೋಗುವಾಗ ಗುರುಗಳೊಬ್ಬರನ್ನು ಭೇಟಿ ಮಾಡಿದ. ಇವನ ಸ್ಥಿತಿ ನೋಡಿದ ಗುರುಗಳು ಆತನನ್ನು ತಮ್ಮ ಆಶ್ರಮಕ್ಕೆ ಕರೆ ತಂದರು. ಆತನ ಬಳಿ ಮಾತನಾಡಿ ಅವನ ಕಷ್ಟವನ್ನು ಆಲಿಸಿದರು. ಎಲ್ಲ ಕೇಳಿದ ನಂತರ ‘ ಹೋಗು ಅಡುಗೆ ಮನೆಯಿಂದ ಉಪ್ಪಿನ ಡಬ್ಬಿ ತೆಗೆದುಕೊಂಡು ಎಂದರು.ಆತ ಉಪ್ಪಿನ ಡಬ್ಬಿ ತಂದ. ‘ಅದರಿಂದ ಒಂದು ಹಿಡಿ ಉಪ್ಪನ್ನು ಒಂದು ಲೋಟ ನೀರಿನೊಳಗೆ ಹಾಕು’ ಎಂದರು. ಆತ ಹೇಳಿದಂತೆಯೇ ಮಾಡಿದ. ‘ಆ ನೀರನ್ನು ಕುಡಿ’ ಎಂದರು. ನೀರು ಕುಡಿದು, ತಕ್ಷಣವೇ ‘ತುಂಬಾ ಉಪ್ಪಾಗಿದೆ ಗುರುಗಳೆ’ ಎಂದು ನೀರನ್ನು ಚೆಲ್ಲಿಬಿಟ್ಟ. ‘ಏಕೆ ಈ ನೀರನ್ನು ನನಗೆ ಕುಡಿಯಲು ಹೇಳಿದಿರಿ’ ಎಂದು ಪ್ರಶ್ನಿಸಿದ. ಆದರೆ ಗುರುಗಳು ಏನೂ ಮಾತನಾಡಲಿಲ್ಲ. ‘ಉಪ್ಪಿನ ಡಬ್ಬಿಯನ್ನು ತೆಗೆದುಕೊಂಡು ಬಾ ನಾವು ಎಲ್ಲೋ ಹೋಗೋಣ’ ಎಂದರು. ಗುರುಗಳು ಹೇಳಿದಂತೆ ಮಾಡುತ್ತಾ ಹೋದ. ಗುರುಗಳು ಅವನನ್ನು ನದಿಯ ಬಳಿ ಕರೆದೊಯ್ದರು. ಅಲ್ಲಿ, ‘ಒಂದು ಹಿಡಿ ಉಪ್ಪನ್ನು ನದಿಗೆ ಹಾಕು’ ಎಂದರು. ಇವನು ಗುರುಗಳು ಹೇಳಿದಂತೆ ಮಾಡಿದ. ಈಗ ನೀರು ಕುಡಿದು ನೋಡು ಎಂದರು. ನೀರು ಸಿಹಿಯಾಗೇ ಇತ್ತು.

ಏನಾದರೂ ಅರ್ಥವಾಯಿತಾ?
ಒಂದು ಹಿಡಿ ಉಪ್ಪು ನಿಮ್ಮ ಕಷ್ಟಗಳಿದ್ದಂತೆ. ಅದರ ಪರಿಮಾಣ ಯಾವಾಗಲೂ ಒಂದೇ ಆಗಿರುತ್ತದೆ. ಅದನ್ನು ನೀವು ಎಲ್ಲಿ ಹಾಕುತ್ತೀರಿ ಎಂಬುದು ಮುಖ್ಯ. ನಿಮಗೆ ಬಂದಿರುವ ಕಷ್ಟವೇ ನಿಮ್ಮ ಬಳಿ ಯಾವ ಸಂತೋಷವಿಲ್ಲ ಎಂದುಕೊಂಡರೆ, ಅದು ಲೋಟದ ನೀರಿಗೆ ಉಪ್ಪು ಹಾಕಿಕೊಂಡಂತೆ. ಅದೇ ನಿಮ್ಮ ಕಷ್ಟವನ್ನು ನದಿಗೆ ಹಾಕಿ ನೋಡಿ, ಜೀವನ ಅಷ್ಟೇ ವಿಶಾಲವಾಗಿದೆ, ಕಷ್ಟ ಒಂದು ಹಿಡಿ ಮಾತ್ರ. ಇನ್ನುಳಿದ ಸಂತೋಷದ ಕಡೆ ನಿಮ್ಮ ಗಮನ ಹೆಚ್ಚಿರಲಿ.

***
ಒಂದು ದಿನ ಇದ್ದಕ್ಕಿದ್ದಂತೆ ದೇವರು ಪ್ರತ್ಯಕ್ಷ ಆದ. ಮಲಗಿದ್ದ ವ್ಯಕ್ತಿಗೆ ದೇವರನ್ನು ನೋಡಿ ಏನು ಹೇಳಬೇಕು, ಕೇಳಬೇಕು ಎಂಬುದೇ ಅರ್ಥವಾಗಲಿಲ್ಲ. ತಕ್ಷಣವೇ ಜೀವನದ ಮೌಲ್ಯ ಏನು? ನೀವು ಯಾರನ್ನು ಎಷ್ಟು ಪ್ರೀತಿಸುತ್ತೀರಿ? ಎಂದು ಕೇಳಿದ. ಇದಕ್ಕೆ ದೇವರು ಉತ್ತರಿಸದೇ, ಒಂದು ಹೊಳೆಯುವ ಕಲ್ಲನ್ನು ನೀಡಿ, ಇದರ ಬೆಲೆ ತಿಳಿದುಕೊಂಡು ಬಾ.ಆದರೆ ಇದನ್ನು ಮಾರಬೇಡ ಎಂದು ಹೇಳಿದರು. ಇದರ ಬೆಲೆ ಹೇಳಿದ ನಂತರ ನಿನ್ನ ಪ್ರಶ್ನೆಗೆ ಉತ್ತರಿಸುತ್ತೇನೆ ಎಂದು ಹೇಳಿದರು. ಆ ಕಲ್ಲನ್ನು ಕೊಂಡು ಆ ವ್ಯಕ್ತಿ ತರಕಾರಿ ಅಂಗಡಿಯವನ ಬಳಿ ಹೋದ. ಅವನಿಗೆ ಈ ಕಲ್ಲನ್ನು ತೋರಿಸಿ, ಇದರ ಬೆಲೆ ಏನು ಎಂದು ಕೇಳಿದ.

ತರಕಾರಿ ಹತ್ತು ಟೊಮಾಟೊ ನೀಡುತ್ತೇನೆ ಆ ಕಲ್ಲನ್ನು ನನಗೆ ನೀಡಿ ಎಂದ. ಅದಕ್ಕೆ ಈತ ‘ ಕ್ಷಮಿಸಿ ನಾನು ಈ ಕಲ್ಲನ್ನು ಮಾರುವಂತಿಲ್ಲ’ ಎಂದು ಹೇಳಿ ಮುಂದೆ ನಡೆದ. ಮುಂದೆ ದಿನಸಿ ಅಂಗಡಿಯೊಂದರ ಬಳಿ ಬಂದು ಈ ಕಲ್ಲಿನ ಬೆಲೆ ಏನು ಎಂದು ಕೇಳಿದ. ಅದಕ್ಕೆ ಆತ ‘ ಐದು ಕೆಜಿ ಅಕ್ಕಿ ಕೊಡುತ್ತೇನೆ’ಎಂದು ಹೇಳಿದ. ಅವರಿಗೂ ‘ಕ್ಷಮಿಸಿ ನಾನಿದನ್ನು ಮಾರುವಂತಿಲ್ಲ ’ ಎಂದು ಹೇಳಿ ಹೊರಟು ಹೋದ. ಮುಂದೆ ಅಂಗಡಿಯೊಂದು ಸಿಕ್ಕಿತು. ಅವರಿಗೂ ಅದೇ ಪ್ರಶ್ನೆ ಹಾಕಿದ. ಅವರು ‘ಇದು ಬಹಳ ಅಪರೂಪದ ಕಲ್ಲು ನಾನಿದಕ್ಕೆ ನೀನು ಕೇಳಿದಷ್ಟು ಹಣ ನೀಡುತ್ತೇನೆ’ ಎಂದರು. ಆದರೆ ಈತ ‘ನಾನಿದನ್ನು ಮಾರುವಂತಿಲ್ಲ’ ಎಂದು ಹೇಳಿದ.

ಅಲ್ಲಿಗೆ ಇನ್ನೊಬ್ಬ ವ್ಯಕ್ತಿ ಬಂದ. ಆತನಿಗೂ ಇದೇ ಪ್ರಶ್ನೆ ಹಾಕಿದ. ಅವನು ಆ ಕಲ್ಲನ್ನು ನೋಡಿ, ‘ವಾಹ್ ಅದ್ಭುತ, ಈ ಕಲ್ಲಿಗೆ ಬೆಲೆ ಕಟ್ಟುವುದು ಅಸಾಧ್ಯ. ನನ್ನ ಬಳಿಯಿರುವ ಎಲ್ಲ ಹಣವನ್ನು ನೀಡಿದರೂ ಇದನ್ನು ಖರೀದಿಸಲು ಎಂದ. ಈ ವ್ಯಕ್ತಿ ದೇವರ ಬಳಿ ಬಂದು ನಡೆದಿದ್ದನ್ನೆಲ್ಲಾ ವಿವರಿಸಿದ. ಕಡೆಗೂ ಕಲ್ಲಿನ ಬೆಲೆ ತಿಳಿಯಲೇ ಇಲ್ಲ ಎಂದ. ‘ನೀವೇ ಇದಕ್ಕೆ ಉತ್ತರಿಸಿ’ ಎಂದು ಕೇಳಿಕೊಂಡ. ಆಗ ದೇವರು, ನೀನು ಮೊದಲು ಹೋದ ತರಕಾರಿ ಅಂಗಡಿ, ಆಮೇಲೆ ದಿನಸಿ ಅಂಗಡಿ,ಆಮೇಲೆ ಆಭರಣ ಅಂಗಡಿಗೆ ಹೋದೆ. ಪ್ರತಿಯೊಬ್ಬರು ಅವರ ಜ್ಞಾನಕ್ಕೆ, ಕೆಲಸಕ್ಕೆ ತಕ್ಕಂತೆ ಅದಕ್ಕೆ ಬೆಲೆ ನಿಗದಿಪಡಿಸಿದರು ಅಷ್ಟೆ. ಯಾವ ವಸ್ತುವಿಗೂ ಇಷ್ಟೇ ಬೆಲೆ ಎಂದು ಕಡ್ಡಾಯವಾಗಿ ಇರುವುದಿಲ್ಲ. ಅದು ಮನಸ್ಥಿತಿ,ಜ್ಞಾನ ಎಲ್ಲದರ ಮೇಲೆ ನಿರ್ಧರಿತವಾದ್ದು. ಹಾಗೆಯೇ ಭಗವಂತನೂ ಸಹ ಪ್ರತಿಯೊಬ್ಬರನ್ನೂ ಒಂದೊಂದು ರೀತಿಯಲ್ಲಿ ಪ್ರೀತಿಸುತ್ತಾನೆ. ಅವನ ಪ್ರೀತಿಗೆ ಅವನದ್ದೇ ಆದ ರೀತಿಯಿದೆ. ಕಣ್ಣು ತೆರೆದು ನೋಡಬೇಕಾದವರು ನಾವಲ್ಲವೆ?

***
ಒಂದೂರಿನಲ್ಲಿ ಗಂಡ ಹೆಂಡತಿ ಇದ್ದರು. ಅವರು ಮದುವೆಯಾದ ಹೊಸತರಲ್ಲಿ ಆರ್ಥಿಕವಾಗಿ ಸಾಕಷ್ಟು ಕಷ್ಟ ಅನುಭವಿಸಿದ್ದರು. ಇದರಿಂದ ಹೊರಬರಬೇಕು ಎಂದು ಗಂಡ ಹಗಲು ರಾತ್ರಿ ಎನ್ನದೇ ದುಡಿದ, ಹೆಂಡತಿ ಮಕ್ಕಳಿಗೆ ಸ್ವಲ್ಪ ಸಮಯ ನೀಡಲೂ ಹಿಂದು ಮುಂದು ನೋಡುತ್ತಿದ್ದ. ಇದೇ ವರ್ಷಗಳೇ ಕಳೆದವು. ಪರಿಸ್ಥಿತಿ ಸುಧಾರಿಸಿತು. ನಂತರ ಶ್ರೀಮಂತರೇ ಆದರು. ಆದರೆ ಹಣಗಳಿಸುವ ನಿಟ್ಟಿನಲ್ಲಿ, ಹೆಂಡತಿ ಮಕ್ಕಳ ಸುಖ ಸಂತೋಷದ ಬಗ್ಗೆ ಆತ ಹೆಚ್ಚು ಗಮನ ಕೊಡಲೇ ಇಲ್ಲ. ಹಣ ಬಂದಮೇಲೆ ಎಲ್ಲರನ್ನೂ ಸಂತೋಷವಾಗಿ ಇಡಬಹುದು ಎಂದು ಆತ ಅಂದುಕೊಂಡಿದ್ದ. ಆದರೆ ಹಾಗಾಗಲಿಲ್ಲ. ಹೆಂಡತಿ ಮೊದಮೊದಲು ಅತ್ತಳು, ತನಗೆ ಒಂಟಿತನ ಕಾಡುತ್ತಿದೆ, ನನಗೆ ಹಣ ಬೇಡ, ನೀವು ಬೇಕು ಎಂದು ಗೋಗರೆದಳು. ಎಲ್ಲದಕ್ಕೂ ಗಂಡನದು ಒಂದೇ ಉತ್ತರ ನಾವು ಹಣ ಆನಂತರ ಸುಖವಾಗಿರಬಹುದು.

ಹೀಗೆ ಕೆಲಸದ ಒತ್ತಡದಲ್ಲಿ ಆತನ ಆರೋಗ್ಯ ಹದಗೆಟ್ಟಿದ್ದು ಅವನ ಅರಿವಿಗೇ ಬರಲಿಲ್ಲ. ಅನಾರೋಗ್ಯ ಪರಿಸ್ಥಿತಿಯಲ್ಲೂ ಕೆಲಸ ಮಾಡುತ್ತಲೇ ಇದ್ದ. ಕಡೆಗೊಂದು ದಿನ, ವೈದ್ಯರ ಬಳಿ ಹೋದಾಗ ಆತ ಇನ್ನು ಹೆಚ್ಚು ಕಾಲ ಬದುಕುವುದಿಲ್ಲ ಎಂದು ವೈದ್ಯರು ಹೇಳಿದರು. ಆತನ ದುಃಖಕ್ಕೆ ಪಾರವೇ ಇರಲಿಲ್ಲ. ಅಷ್ಟೆಲ್ಲಾ ಹಣಗಳಿಸಿ ಅನುಭವಿಸದೇ ಸಾಯುವುದೇ? ಖಂಡಿತಾ ಇಲ್ಲ. ತಾನು ಗಳಿಸಿದ ಹಣವನ್ನೆಲ್ಲ ತನ್ನ ಜತೆಗೇ ಕೊಂಡೊಯ್ಯಬೇಕು ಎಂದು ನಿರ್ಧರಿಸಿದ. ಮೆಲ್ಲಗೆ ಹೆಂಡತಿಯನ್ನು ಪ್ರೀತಿಯ ಮಾತುಗಳನ್ನು ಆಡಿದ. ಎಷ್ಟೇ ಆಗಲಿ ಗಂಡ, ಆತ ಏನು ಮಾಡಿದರೂ ಆತನನ್ನು ಪ್ರೀತಿಸಿ ಮದುವೆಯಾಗಿ ಬಂದದ್ದು ಎಂಬ ಸತ್ಯ ಮರೆಯಲಾದೀತೆ, ಗಂಡನ ಬಳಿ ಬಂದು ಕೂತಳು. ಆತ ಪ್ರೀತಿಯಿಂದ, ‘ನಾನು ಬೆವರು, ರಕ್ತ ಹರಿಸಿ ಅಷ್ಟೆಲ್ಲಾ ಹಣ ಗಳಿಸಿದ್ದೇನೆ, ನನಗೆ ಅದನ್ನು ಬಿಟ್ಟು ಹೋಗಲು ಇಷ್ಟವಿಲ್ಲ. ನಾನು ಸತ್ತಾಗ ನನ್ನ ಜತೆಗೇ ಹಣವನ್ನು ಮಣ್ಣು ಮಾಡು’ ಎಂದು ಕೇಳಿದ.

ಹೆಂಡತಿಗೆ ಕೋಪ ಬಂತು. ಸತ್ತ ಮೇಲೆ ನನ್ನ ಕಥೆ ಏನಾಗಬೇಡ ಎಂದು ಯೋಚಿಸದೇ ಹಣ ಮಣ್ಣು ಮಾಡು ಎನ್ನುತ್ತಾನೆ ಎಂದು ಕೊಂಡಳು. ಆದರೆ ಪ್ರೀತಿಸಿದ ಗಂಡನ ಮಾತನ್ನು ತೆಗೆದು ಹಾಕಲಾರದೇ, ಆಯ್ತು ಎಂದು ಒಪ್ಪಿಕೊಂಡಳು. ಪ್ರಮಾಣ ಮಾಡಿದಳು. ಇದಾದ ಕೆಲ ದಿನಗಳಲ್ಲಿ ಆತ ಮೃತಪಟ್ಟ. ಅವನನ್ನು ಮಣ್ಣು ಮಾಡಲು ನೆಂಟರೆಲ್ಲ ಸೇರಿದ್ದರು. ಇನ್ನೇನು ಮಣ್ಣು ಮಾಡಬೇಕು ಎಂದಾಗ, ಹೆಂಡತಿ ಜೋರಾಗಿ ಕೂಗಿದಳು ‘ ಒಂದು ನಿಮಿಷ’. ನಂತರ ಒಂದು ಬಾಕ್ಸ್ ತಂದು ಅದನ್ನು ಸೇರಿಸಿ ಮಣ್ಣು ಮಾಡುವಂತೆ ಅಂತೆಯೇ ಆಯಿತು. ಅವಳ ಸ್ನೇಹಿತೆ ಬಂದು ಆ ಬಾಕ್ಸನಲ್ಲಿ ಏನಿತ್ತು? ಎಂದು ಕೇಳಿದಳು.

ಅದಕ್ಕೆ , ‘ಅದು ನನ್ನ ಗಂಡನ ಕೊನೆ ಆಸೆ, ತನ್ನ ಬಳಿಯಿದ್ದ ಹಣ, ಸಂಪತ್ತನ್ನೆಲ್ಲ ಆತನ ಜತೆಗೇ ಕಳಿಸಿಕೊಡಬೇಕಿತ್ತು’. ಅದಕ್ಕೆ ಸ್ನೇಹಿತೆ ‘ ನಿನಗೇನಾದರೂ ತಲೆ ಸರಿ ಇಲ್ಲವಾ, ಎಲ್ಲ ಹಣ ಮಣ್ಣು ಮಾಡಿ, ಹೊಟ್ಟೆಗೂ ಮಣ್ಣು ತಿನ್ನುವ ಪರಿಸ್ಥಿತಿ ತಂದುಕೊಳ್ಳುತ್ತಿದ್ದಿ’ ಎಂದಳು. ಮತ್ತೆ ಮುಂದುವರಿದು ‘ ಅಷ್ಟಕ್ಕೂ ಆ ವ್ಯಕ್ತಿ ಬಳಿ ತುಂಬಾ ನೀನು ಒಂದು ಬಾಕ್‌ಸ್ ಮಾತ್ರ ಮಣ್ಣು ಮಾಡಿದೆ, ಅಷ್ಟೂ ಹಣವನ್ನು ಒಂದು ಬಾಕ್‌ಸ್ನಲ್ಲಿ ಹೇಗೆ ಹಿಡಿಸಿದೆ?’ಎಂದಳು. ‘ ಇದು ನನಗೂ ಕಷ್ಟವಾಗಿತ್ತು, ಆದರೆ ಆ ಕ್ಷಣಕ್ಕೆ ಉಪಾಯವೊಂದು ಹೊಳೆಯಿತು. ಆತನ ಬಳಿಯಿದ್ದ ಹಣವನ್ನೆಲ್ಲ ಒಂದು ಚೆಕ್‌ನಲ್ಲಿ ಬರೆದು, ಚೆಕ್‌ನನ್ನು ಅವನ ಜತೆಗೆ ಮಣ್ಣು ಮಾಡಿದೆ’ ಎಂದಳು. ಪರಿಸ್ಥಿತಿ, ಪ್ರೀತಿ, ಸಮಯ ಎಂದೂ ಬದಲಾಗುತ್ತಲೇ ಇರುತ್ತದೆ. ಕೆಲವೊಮ್ಮೆ ಜಾಣ್ಮೆ ಕೆಲಸಕ್ಕೆ ಬರುತ್ತದೆ. ಎಲ್ಲ ಸಮಯದಲ್ಲೂ ನಮ್ಮ ಒಳ್ಳೆತನ ಮಾತ್ರ ಕೈ ಅದು ನಮಗೇ ಕುತ್ತಾಗಬಹುದು. ಪ್ರತಿ ಹೆಜ್ಜೆಯನ್ನು ಯೋಚಿಸಿ ಇಡುವುದು ಬಹಳ ಮುಖ್ಯ.

***
ಗಂಡ ಹೆಂಡತಿ ಹೊಸ ಮನೆಗೆ ಬಂದರು.ಇದು ವಠಾರದಂತಿತ್ತು.ಒಬ್ಬರ ಮನೆಯಿಂದ ಒಬ್ಬರ ಮನೆಗೆ ಗಾಜಿನ ಗೋಡೆ ಇತ್ತು. ಇಡೀ ವಠಾರಕ್ಕೆ ಒಬ್ಬನೇ ಲಾಂಡ್ರಿಯಾತ ಇದ್ದ. ಅವನು ಎಲ್ಲರ ಮನೆ ಬಟ್ಟೆಗಳನ್ನು ತೊಳೆಯುತ್ತಿದ್ದ. ಹೊಸತಾಗಿ ಬಂದ ಜೋಡಿ ಮನೆ ಕ್ಲೀನಿಂಗ್‌ನಲ್ಲಿ ತೊಡಗಿದ್ದರು. ಬಾಗಿಲ ಬಳಿ ಯಾರೋ ಕೂಗಾಡುತ್ತಿದ್ದದ್ದು ಕೇಳಿತು. ಹೊರ ಹೋಗಿ ನೋಡಿದರು. ‘ ನಿನಗೆ ಹಣ ದಂಡ, ಬಟ್ಟೆ ಸರಿಯಾಗಿ ತೊಳೆಯುವುದಿಲ್ಲ’ ಎಂದು ಅವನ ಮೇಲೆ ಪಕ್ಕದ ಮನೆಯವರು ಕೂಗಾಡುತ್ತಿದ್ದರು. ಇದನ್ನು ಗಮನಿಸಿದ ಗಂಡ ಹೆಂಡತಿ, ಹೌದು ಇರಬಹುದೇನೋ ಎಂದುಕೊಂಡು ಸುಮ್ಮನಾದರು.ನಂತರ ಇವರೂ ಅವನಿಗೇ ತಮ್ಮ ಬಟ್ಟೆಗಳನ್ನು ನೀಡಿದರು. ಆತ ಒಗೆದುಕೊಟ್ಟ.

ಬಟ್ಟೆಗಳು ಶುಭ್ರವಾಗೇ ಇದ್ದವು. ಒಮ್ಮೆ ಬಟ್ಟೆಗಳನ್ನು ಮನೆಯ ಹೊರಗೆ ಒಣಗಿ ಹಾಕಿದ್ದ. ಇದನ್ನು ಪಕ್ಕದ ಮನೆಯಾತ ನೋಡಿ ‘ ಅವರ ಬಟ್ಟೆಗಳನ್ನು ಚೆನ್ನಾಗಿ ಒಗೆದುಕೊಡುತ್ತೀಯ, ನಮ್ಮ ಬಟ್ಟೆಗಳನ್ನು ಮಾತ್ರ ಚೆನ್ನಾಗಿ ಒಗೆಯುವುದಿಲ್ಲ’ ಎಂದು ಆಮೇಲೆ ಆಚೀಚೆ ಕಣ್ಣಾಡಿಸಿದ, ಎಲ್ಲರ ಮನೆ ಮುಂದೆ ಇದ್ದ ಬಟ್ಟೆಗಳು ಶುಭ್ರವಾಗಿ ಕಾಣುತ್ತಿದ್ದವು. ಈತನಿಗೆ ಇನ್ನೂ ಕೋಪ ಬಂತು. ಲಾಂಡ್ರಿಯವನಿಗೆ ಬೈಗುಳ ಹೆಚ್ಚಾಯಿತು. ಆಗ ಹೊಸತಾಗಿ ವಠಾರಕ್ಕೆ ಬಂದಿದ್ದ ಈ ಜೋಡಿ ಬಂದು ‘ಲಾಂಡ್ರಿಯವ ಎಂದಿಂತೆ ಬಟ್ಟೆ ಒಗೆದಿದ್ದಾನೆ. ಇಂದು ಬೆಳಗ್ಗೆ ನಾವು ನಿಮ್ಮ ಮನೆಯ ಗಾಜಿನ ಗೋಡೆಯನ್ನು ಒರೆಸಿದೆವು’ ಎಂದರು. ನಮ್ಮ ಬಳಿಯೇ ಕೊಳಕಿದ್ದಾಗ, ಲೋಕವೆಲ್ಲಾ ಕೊಳಕಾಗೇ ಕಾಣುತ್ತದೆ. ನಾವು ಶುಭ್ರ ಮನಸ್ಸಿನಿಂದ ಜಗತ್ತನ್ನು ನೋಡಿದಾಗ ಅದು ಕಾಣುತ್ತದೆ. ದೃಷ್ಟಿ ಮಲಿನವಾಗಿರಬಾರದು ಅಷ್ಟೆ.

***
ಸಂಗೀತ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿನ ಸಾಧಕರ ಬಳಿ ವ್ಯಕ್ತಿಯೊಬ್ಬ ಬಂದ. ‘ನನಗೂ ಹಾಡುವ ಆಸಕ್ತಿ ಇದೆ, ಸಂಗೀತ ಕ್ಷೇತ್ರದಲ್ಲಿ ನನ್ನದೇ ಆದ ಛಾಪು ಮೂಡಿಸುವ ಬಯಕೆ ಇದೆ. ದಯವಿಟ್ಟು ನಿಮ್ಮ ಯಶಸ್ಸಿನ ಗುಟ್ಟನ್ನು ನನಗೆ ಹೇಳಿ’ ಎಂದು ಕೇಳಿದ. ಅದಕ್ಕೆ ವಿದ್ವಾಂಸರು ‘ ಪ್ರತಿ ದಿನ ಬೆಳಗ್ಗೆ ನಾನು ನದಿ ದಂಡೆಯಲ್ಲಿ ಸಂಗೀತಾಭ್ಯಾಸ ಮಾಡುತ್ತೇನೆ. ನೀವು ನಾಳೆ ಬೆಳಗ್ಗೆ ಅಲ್ಲಿಗೆ ಎಂದು ಹೇಳಿದರು.

ಅಂತೆಯೇ ಬೆಳಗ್ಗೆ ಆತ ವಿದ್ವಾಂಸರ ಬಳಿ ಬಂದ. ನೀರಿನ ಮಧ್ಯ ಭಾಗದವರೆಗೂ ಹೋಗೋಣ. ಕುತ್ತಿಗೆಯವರೆಗೂ ನೀರಿರಬೇಕು ಎಂದು ಹೇಳಿ ಮಧ್ಯಭಾಗದವರೆಗೂ ಕರೆದುಕೊಂಡು ಹೋದ. ಅಲ್ಲಿ ನೀರಿನ ಮಧ್ಯದಲ್ಲಿ ನಿಂತು ಅಭ್ಯಾಸ ಶುರು ಮಾಡಿದರು. ಅದಾದ ಕೆಲ ಕ್ಷಣದಲ್ಲೇ ಬಂದಿದ್ದ ವ್ಯಕ್ತಿಯ ತಲೆ ಹಿಡಿದು ನೀರಿನೊಳಗೆ ಮುಳುಗಿಸಿದರು. ಆತ ಒದ್ದಾಡತೊಡಗಿದ. ಶಕ್ತಿ ಬಿಟ್ಟು ಮೇಲೆ ಬರಲು ಯತ್ನಿಸಿದ. ಆದರೆ ವಿದ್ವಾಂಸರು ತನ್ನ ಶಕ್ತಿಯನ್ನು ಮೀರಿ ಪ್ರಯತ್ನಿಸಿ ಆತನನ್ನು ಎಷ್ಟೋ ಹೊತ್ತಿನ ನಂತರ ಕಷ್ಟ ಪಟ್ಟು ಆತ ಮೇಲೆದ್ದ. ವಿದ್ವಾಂಸರನ್ನೇ ತಳ್ಳಿ ಉಸಿರಾಡಿದ. ಆಗ ವಿದ್ವಾಂಸರು ಕೇಳಿದರು, ನೀರಿನಿಂದ ಹೊರ ಬಂದ ತಕ್ಷಣ ನಿನಗೆ ಬೇಕಾದ್ದು ಏನು ಎಂದು ಪ್ರಶ್ನಿಸಿದರು.

ಆತ ಸಂಭಾಳಿಸಿಕೊಂಡು ‘ಗಾಳಿ’ ಎಂದ. ಆಗ ವಿದ್ವಾಂಸರು. ಜೀವಕ್ಕೆ ಗಾಳಿ ಎಷ್ಟು ಮುಖ್ಯ ಎಂದೆನಿಸುತ್ತದೋ, ಗುರಿ ಎಂಬುದು ಅಷ್ಟೇ ಮುಖ್ಯ ಎನಿಸಿದಾಗ ನೀನು ನಿನ್ನ ಗುರಿ ತಲುಪಿಯೇ ತಲುಪುತ್ತಿ ಹಾಗೂ ಯಶಸ್ಸು ನಿನ್ನದಾಗುತ್ತದೆ ಎಂದರು. ಹೌದು ಯಶಸ್ಸಿನ ಎಂದು ಏನೂ ಇರುವುದಿಲ್ಲ. ನಿಮ್ಮ ಗುರಿ ತಲುಪುವಲ್ಲಿ ನೀವು ಎಷ್ಟು ಏಕಾಗ್ರತೆ, ಛಲ ಇಟ್ಟುಕೊಂಡಿದ್ದೀರಿ ಎಂಬುದು ಮುಖ್ಯ ಅಷ್ಟೆ.

***
ವ್ಯಕ್ತಿಯೊಬ್ಬ ಕತ್ತೆಯೊಂದನ್ನು ಸಾಕಿದ್ದ. ಅದನ್ನು ತುಂಬಾ ಪ್ರೀತಿಸುತ್ತಿದ್ದ. ಮನೆ ಮಕ್ಕಳಿಗಿಂತ ಹೆಚ್ಚಾಗಿ ಸಾಕಿದ್ದ. ಆತ ಹಳ್ಳಿಯಲ್ಲಿ ವಾಸಿಸುತ್ತಿದ್ದ. ಆ ದಿನ ಬೆಳಗ್ಗೆ ಕತ್ತೆ ಹೊರಗೆ ಹೋಗಿತ್ತು. ಎಷ್ಟೊತ್ತಾದರೂ ಹಿಂದಿರುಗಲೇ ಇಲ್ಲ. ಈತನಿಗೆ ಭಯ, ಆತಂಕ ತನ್ನ ಕತ್ತೆ ಎಲ್ಲಿ ಹೋಯಿತು? ಯಾರಾದರೂ ಬಂದು ಎಳೆದುಕೊಂಡು ಹೋದರಾ? ಎಂಬೆಲ್ಲ ತಲೆಯಲ್ಲಿ ಓಡಿತು. ಕತ್ತೆಯನ್ನು ಹುಡುಕಿಕೊಂಡು ಹೊರಟ. ಗದ್ದೆಯ ಬಳಿ ಸ್ವಲ್ಪ ದೂರದಲ್ಲಿ ರೈತರು ಗುಂಡಿಯೊಂದನ್ನು ತೋಡಿದ್ದರು. ಕತ್ತೆ ಆಕಸ್ಮಿಕವಾಗಿ ಅದರಲ್ಲಿ ಬಿದ್ದುಬಿಟ್ಟಿತು. ಕೂಗಿ ಕೂಗಿ ಸುಸ್ತಾಗಿ ಸುಮ್ಮನಾಗಿತ್ತು. ಕತ್ತೆ ಹುಡುಕಿ ಹೊರಟಿದ್ದವನಿಗೆ ಅದರ ಹೆಜ್ಜೆ ಗುರುತು ಕಂಡು ಅದನ್ನು ಅನುಸರಿಸಿ ನಡೆದಾಗ ಅದು ಗುಂಡಿಯೊಳಗೆ ಬಿದ್ದದ್ದು ಕಂಡುಬಂತು. ತನ್ನ ಮುದ್ದು ಕತ್ತೆ ಗುಂಡಿಯೊಳಗೆ ಬಿದ್ದದ್ದನ್ನು ನೋಡಿ ಆತ ಕಣ್ಣೀರಾದ. ಏನು ಮಾಡಬೇಕು ತಿಳಿಯದೆ ತಡಕಾಡಿದ. ಅಕ್ಕಪಕ್ಕದವರನ್ನು ಕೂಗಿದರೂ ಯಾರೂ ಬರಲಿಲ್ಲ. ಹೀಗೆ ಬೆಳಗ್ಗೆಯಿಂದ ಸಂಜೆ ಆಯಿತು. ಇಷ್ಟಾದರೂ ಅವನಿಗೆ ಏನೂ ಮಾಡಲಾಗಲಿಲ್ಲ. ಕತ್ತೆ ಹೇಗಿದ್ದರೂ ಪ್ರಾಣ ಬಿಡುತ್ತದೆ. ಅದಕ್ಕೆ ಶಾಸ್ತ್ರೋಕ್ತವಾಗಿ ಮಣ್ಣು ಮಾಡುವುದು ಒಳಿತು ಎಂದು ಮಣ್ಣು ತೋಡಿ ಗುಂಡಿಗೆ ಹಾಕತೊಡಗಿದ. ಹೀಗೆ ಮಾಡುತ್ತಾ ಮಣ್ಣು ತುಂಬಿಸುತ್ತಲೇ ಇದ್ದ.

ಸಧ್ಯಕ್ಕೆ ನಮ್ಮ ಕಥೆಯನ್ನು ಇಲ್ಲಿಗೇ ನಿಲ್ಲಿಸೋಣ. ಈಗ ಕತ್ತೆಯ ಮುಂದಿರುವ ಅವಕಾಶಗಳನ್ನು ನೋಡಿ, ಕತ್ತೆ ತನ್ನ ಅಂತ್ಯ ಇದೆ ಎಂದು ಸುಮ್ಮನಾಗಿ, ಜೀವಂತ ಮಣ್ಣಾಗಬಹುದು. ಅಥವಾ ಮಣ್ಣು ತುಂಬುತ್ತಿದ್ದಂತೆ, ಬಳಸಿ ಮೇಲೂ ಬರಬಹುದು. ಆಯ್ಕೆ ಅದರದ್ದು. ಜೀವನ ಕೂಡ ಹೀಗೆ ತೊಂದರೆ, ಕಷ್ಟಗಳ ಮಣ್ಣನ್ನು ನಮ್ಮ ಮೇಲೆ ಎಸೆಯುತ್ತಲೇ ಇರುತ್ತದೆ. ಅದನ್ನೇ ಬಳಸಿ ಮುನ್ನಡೆಯುತ್ತೀರೋ ಅಥವಾ ಅದನ್ನೇ ಬಳಸಿ, ಇದೇ ನನ್ನ ಅಂತ್ಯ ಎಂದು ಭಾವಿಸುತ್ತೀರೋ ನಿಮಗೆ ಬಿಟ್ಟಿದ್ದು.

***
ಅಪ್ಪ ಮಗಳು ಪಾರ್ಕ್‌ಗೆ ಬಂದಿದ್ದರು. ಮಗಳ ವಯಸ್ಸಿನ ಸಾಕಷ್ಟು ಮಕ್ಕಳು ಅಲ್ಲಿ ಆಡುತ್ತಿದ್ದರು. ಮಕ್ಕಳು ಅವರ ಪಾಡಿಗೆ ಅವರು ಆಡುತ್ತಿದ್ದರು. ಅವರನ್ನು ಕರೆದುಕೊಂಡು ಬಂದವರು ಅವರನ್ನು ನೋಡುತ್ತಾ ಕಳೆಯುತ್ತಿದ್ದರು. ಮಗಳು ಸೈಕಲ್ ಹೊಡೆಯುತ್ತಿದ್ದದ್ದನ್ನು ಅಪ್ಪ ನೋಡುತ್ತಾ ಕುಳಿತಿದ್ದ. ಅಲ್ಲಿ ಒಬ್ಬಾಕೆ ಬಂದು ‘ಅಲ್ಲಿ ಕೆಂಪು ಟೀಶರ್ಟ್‌ನಲ್ಲಿ ಜೋಕಾಲಿ ಆಡುತ್ತಿರುವವ ನನ್ನ ಮಗ’ ಎಂದು ತೋರಿಸಿದಳು. ಆಗ ಈತ ‘ ಬಿಳಿ ಅಂಗಿಯಲ್ಲಿ ಸೈಕಲ್ ಹೊಡೆಯುತ್ತಿರುವವಳೇ ನನ್ನ ರಾಜಕುಮಾರಿ’ ಎಂದು ತೋರಿಸಿದ. ಹೀಗೆ ಅವರ ಆಟದಲ್ಲಿ ಸಮಯ ಹೋದದ್ದೇ ಕಾಣಲಿಲ್ಲ. ಅಷ್ಟರಲ್ಲಿ ಅಪ್ಪ ‘ ಪುಟ್ಟಿ ಸಮಯ ಆಯಿತು. ಮನೆಗೆ ಹೋಗೋಣ?’ ಎಂದರು. ಮಗಳು ‘ ಅಪ್ಪಾ ಐದು ಎಂದಳು. ಅಪ್ಪ ಸುಮ್ಮನಾದ.

ಅರ್ಧಗಂಟೆಯ ನಂತರ ‘ಮಗಳೇ ಹೊರಡೋಣ್ವಾ’ ಎಂದು ಕೇಳಿದರು. ಆಗಲೂ ಮಗಳು ‘ಐದು ನಿಮಿಷ ಅಪ್ಪಾ ಪ್ಲೀಸ್’ ಎಂದಳು. ಆಗಲೂ ತಂದೆ ಸುಮ್ಮನಾದರು. ಹೀಗೆ ಮೂರು ನಾಲ್ಕು ಬಾರಿ ಆಯಿತು. ಪಕ್ಕದಲ್ಲಿ ಕೂತಿದ್ದ ಮಹಿಳೆ, ‘ನೀವು ನಿಜವಾಗಿಯೂ ಒಳ್ಳೆಯ ತಂದೆ, ಮಗಳನ್ನು ತುಂಬಾ ಪ್ರೀತಿಸುತ್ತೀರಿ. ತುಂಬಾ ತಾಳ್ಮೆ ಇದೆ ನಿಮಗೆ. ನನ್ನ ಗಂಡ ಮಕ್ಕಳ ಜತೆ ಇಷ್ಟು ತಾಳ್ಮೆಯಿಂದ ವರ್ತಿಸುವುದೇ ಇಲ್ಲ’ ಎಂದರು. ಅದಕ್ಕೆ ತಂದೆ ಪುಟ್ಟಿಯ ಅಣ್ಣ ಹೀಗೆ ಸೈಕಲ್ ಹೊಡೆಯುವಾಗ ನನ್ನ ಮಾತು ಕೇಳದೇ, ಮುಂದೆ ಹೋಗಿ ಲಾರಿ ಡಿಕ್ಕಿ ಹೊಡೆದು ಮೃತಪಟ್ಟ. ಅವನಿಗೆ ಹೆಚ್ಚಿನ ಸಮಯ ನೀಡಲು ಆಗಿರಲಿಲ್ಲ. ಅದಾದ ನಂತರ ಮತ್ತೆ ಆ ತಪ್ಪನ್ನು ಮಗಳ ವಿಚಾರದಲ್ಲಿ ಮಾಡುವುದಿಲ್ಲ. ಅವಳೆಷ್ಟು ಸಮಯ ಏನು ಮಾಡುತ್ತೀನಿ ಎಂದರೂ ನಾನು ಒಪ್ಪುತ್ತೇನೆ. ಇನ್ನೂ ಐದು ನಿಮಿಷ ಅವಳು ನನ್ನ ಕಣ್ಣೆದುರು, ಆಡುವುದನ್ನು ನೋಡುವುದೇ ನನ್ನ ಸೌಭಾಗ್ಯ’ ಎಂದರು.  ಹೌದಲ್ಲವೇ, ಜೀವನದಲ್ಲಿ ಬೇಕು, ಬೇಡ ನಮ್ಮ ಅಮೂಲ್ಯವಾದ ಸಮಯ ನೀಡುತ್ತೇವೆ. ಆದರೆ ನಮ್ಮವರಿಗೆ ನೀಡಲು ಸಮಯವಿಲ್ಲ ಎಂದರೆ? ಭೂಮಿ ಮೇಲೆ ಯಾರೂ, ಯಾವುದೂ ಶಾಶ್ವತವಲ್ಲ. ಇರುವವರೆಗೆ ಪ್ರೀತಿಸಿ.

ಹಿಂದೆಲ್ಲಾ ಅಕ್ಕಪಕ್ಕದ ಮನೆಯವರು ಎಂದರೆ ಅನ್ಯೂನ್ಯವಾಗಿ, ಒಬ್ಬರಿಗೊಬ್ಬರು ಆಗುತ್ತಿದ್ದರು. ಊಟ ತಿಂಡಿ ಕೊಡುವುದು ನೀಡುವುದು ನಡೆಯುತ್ತಲೇ ಇತ್ತು. ಆದರೆ ಈಗ ಹಾಗಿಲ್ಲ. ಅಕ್ಕಪಕ್ಕದ ಮನೆಯವರು ಆಕಸ್ಮಿಕವಾಗಿ ಎದುರು ಬಂದರೆ ನಗುವುದೂ ಕಷ್ಟವೇ! ಅದೇ ರೀತಿಯಾದ ಮನೆಗಳಿದ್ದವು. ಅವರುಗಳು ಎಂದೂ ಒಬ್ಬೊಬ್ಬರ ಮುಖಗಳನ್ನೇ ನೋಡಿಕೊಂಡಿರಲಿಲ್ಲ. ಒಂದು ಭಾನುವಾರ ಎದುರಾದರು. ಒಬ್ಬಾತ ತನ್ನ ಗಾರ್ಡನ್‌ನನ್ನು ಟ್ರಿಮ್ ಮಾಡುತ್ತಿದ್ದ. ಇನ್ನೊಬ್ಬಾತನ ಮನೆಯಲ್ಲಿ ಗಾರ್ಡ್‌ನ್ ಇರಲಿಲ್ಲ.

ಆತ ಪಕ್ಕದ ಮನೆಯವನನ್ನು ನೋಡಿ, ನಮ್ಮ ಮನೆಯಲ್ಲೂ ಗಾರ್ಡನ್ ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ಪ್ರತಿ ಭಾನುವಾರ ಹಾಡು ಹೇಳುತ್ತಾ, ಗಿಡಗಳಿಗೆ ನೀರು ಹಾಕಿ, ಟ್ರಿಮ್ ಮಾಡಿ ಒಳ್ಳೆ ಸಮಯ ಕಳೆಯಬಹುದು ಎಂದು ಅಂದುಕೊಂಡ. ಗಾರ್ಡನ್ ಇದ್ದಾತ ಇವನ ಮನೆ ಅಂಗಳ ನೋಡಿ, ನಮ್ಮ ಮನೆಯೂ ಹೀಗೆ ಇರಬೇಕಿತ್ತು. ಪ್ರತಿ ಭಾನುವಾರ ಆರಾಮಾಗಿ ಕಾಲ ಕಳಿಯಬಹುದಿತ್ತು. ಗಿಡಗಳಿಗೆ ಮಾಡುವ ಕೆಲಸ ಯಾರಿಗೆ ಬೇಕಿತ್ತು ಎಂದು ಅಂದುಕೊಂಡ. ಇಬ್ಬರೂ ಮನಸ್ಸಿನಲ್ಲೇ ಮಾತನಾಡಿಕೊಂಡು ತಮ್ಮ ತಮ್ಮ ಕೆಲಸ ಮುಂದುವರಿಸಿದರು. ನಮ್ಮ ಬಳಿ ಏನಿಲ್ಲವೋ ಅದೇ ನಮಗೆ ಬೇಕಾದ್ದು, ಇಲ್ಲದಿರುವುದರ ಕಡೆಗೆ ಹೆಚ್ಚು ಒಲವು. ಆದರೆ ಹಾಗೆ ಮಾಡುವುದರಲ್ಲಿ ಯಾರ ಸಂತೋಷವಿದೆ? ಯಾರದ್ದೂ ಇಲ್ಲ. ಇಲ್ಲದರ ಮೇಲೆ ವ್ಯಾಮೋಹ ಬಿಟ್ಟು ಇರುವುದನ್ನು ಒಪ್ಪಿಕೊಂಡರೆ, ಪ್ರೀತಿಸಿದರೆ ಜೀವನ ಎಷ್ಟು ಸುಲಭ ಅಲ್ಲವೆ? ಒಮ್ಮೆ ಯೋಚಿಸಿ

 

Leave a Reply

Your email address will not be published. Required fields are marked *

seventeen − four =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Thursday, 26.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ಏಕಾದಶಿ, ಗುರುವಾರ, ನಿತ್ಯನಕ್ಷತ್ರ-ಹುಬ್ಬಾ, ಕರಣ-ಬವ.

ರಾಹುಕಾಲಗುಳಿಕಕಾಲಯಮಗಂಡಕಾಲ
1.30-3.00 9.00-10.30 6.00-7.30

Read More

 

Thursday, 26.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ಏಕಾದಶಿ, ಗುರುವಾರ, ನಿತ್ಯನಕ್ಷತ್ರ-ಹುಬ್ಬಾ, ಕರಣ-ಬವ.

ರಾಹುಕಾಲಗುಳಿಕಕಾಲಯಮಗಂಡಕಾಲ
1.30-3.00 9.00-10.30 6.00-7.30

Read More

Back To Top