ಗಡಿಬಿಡಿಯ ಈ ಜೀವನದಲ್ಲಿ ಕೊಂಚ ಬಿಡುವಿರಲಿ

Posted In : ಅಂಕಣಗಳು, ಗುರುಮನ

ಗೋಪುರ ಎಂಬ ಹಳ್ಳಿಯಲ್ಲಿ ಬಡ ರೈತನೊಬ್ಬ ದಿನವೂ ತನ್ನೆರಡು ಎತ್ತು ಹಾಗೂ ಮೂರು ಹಸುಗಳೊಂದಿಗೆ ಊರ ಹೊರಗಿನ ಕೆರೆಯ ದಡದಲ್ಲಿ ಕರೆದೊಯ್ಯುತ್ತಿದ್ದ. ಕೆರೆಯಲ್ಲಿ ನೀರಿದ್ದ ಸಂದರ್ಭದಲ್ಲಷ್ಟೇ ಅವುಗಳಿಗೆ ಮೇವು ಸಿಗುತ್ತಿತ್ತು. ಬೇಸಿಗೆ ಬಂತೆಂದರೆ, ಹುಲ್ಲು ಹಾಗೂ ನೀರಿಗಾಗಿ ಪರದಾಡುವ ಸ್ಥಿತಿ. ತಾನು ತನ್ನೊಡನಿರುವ ಆ ಮೂಕ ಪ್ರಾಣಿಗಳು ಹಸಿದಿರಬಾರದು ಎಂಬ ಮನಸ್ಥಿತಿ ಆತನದ್ದು. ಆ ಮೂರು ಹಸುಗಳು ನೀಡುತ್ತಿದ್ದ ಹಾಲು ಮನೆಯ ಆದಾಯವಾಗಿತ್ತು. ಇನ್ನೇನು ಬೇಸಿಗೆ ಸಮೀಪಿಸುತ್ತಿದೆ. ಅವುಗಳ ಮೇವಿಗೂ ಕೊರತೆ, ಹಾಲುತ್ಪಾದನೆಯೂ ಕಡಿಮೆ, ತನ್ನನ್ನೇ ನಂಬಿರುವ ಕುಟುಂಬ, ಒಂದು ತುತ್ತು ಅನ್ನಕ್ಕೂ ಪರದಾಡಬೇಕಾಗುವ ಸ್ಥಿತಿ ಬಂದರೆ ಗತಿ ಏನೆಂಬ ಚಿಂತೆ ಆತನನ್ನು ಹಗಲು ರಾತ್ರಿ ಬೆಂಬಿಡದೆ ಕಾಡತೊಡಗಿತು. ಹಳ್ಳಿಯಲ್ಲಿನ ಎಲ್ಲರ ಬಳಿಯೂ ಎಕರೆಗಟ್ಟಲೆ ಜಾಗವಿತ್ತು. ಆದರೆ ಈತನ ಬಳಿ ಎತ್ತು, ಮನೆ ಬಿಟ್ಟರೆ ಏನೂ ಇಲ್ಲ.

ಹೀಗಿರುವಾಗ ಪ್ರತಿ ನಿತ್ಯದಂತೆ ತನ್ನ ಹಸು ಹಾಗೂ ಎತ್ತುಗಳ ಮೇವಿಗಾಗಿ ಕೆರೆಯ ಬಳಿ ಕರೆದೊಯ್ದ. ದಡದಲ್ಲೇ ಕುಳಿತು ಚಿಂತಿಸುತ್ತಿದ್ದ. ‘ಅಯ್ಯೋ ವಿಧಿಯೇ ಯಾವ ಸ್ಥಿತಿಗೆ ನನ್ನನ್ನು ತಂದು ನಿಲ್ಲಿಸಿರುವೆ!’ ಎಂದು ದೇವರನ್ನೇ ದೂಷಿಸಲಾರಂಭಿಸಿದ. ದಡದಲ್ಲೇ ಕಳಿತು ರಾಸುಗಳನ್ನೇ ದಿಟ್ಟಿಸಿ ನೋಡುತ್ತಿರುವಾಗ, ಮನೆಯ ಅಂಗಳ ಹಾಗೂ ಹಿತ್ತಲಲ್ಲಿರುವ ಸ್ವಲ್ಪ ಜಾಗ ಆತನಿಗೆ ನೆನಪಾಯಿತು. ಮನೆಗೆ ಮರಳಿದ ಕೂಡಲೇ ಆ ಜಾಗದ ಕುರಿತು ಪರಿಶೀಲಿಸಿದ.

ಇರುವ ಅಲ್ಪ ಜಾಗದಲ್ಲಿಯೇ ಸಣ್ಣಪುಟ್ಟ ತರಕಾರಿಗಳನ್ನು ಬೆಳೆಯುವ ಬಗ್ಗೆ ಯೋಚಿಸಿದ. ಈ ಬಗ್ಗೆ ಮನೆಯವರ ಎಲ್ಲರ ಹತ್ತಿರ ಚರ್ಚಿಸಿದ. ಎಲ್ಲರ ಅಭಿಪ್ರಾಯ ಪಡೆದು ಬೆಳಗ್ಗೆ ಬೇಗ ಎದ್ದು, ಅಂಗಳದ ಜಾಗ ಹಾಗೂ ಹಿತ್ತಲಿನ ಜಾಗವನ್ನು ಕುಟುಂಬದವರೆಲ್ಲ ಸ್ವಚ್ಛಗೊಳಿಸಿದರು. ಅಲ್ಲಿದ್ದ ಒಣಕಲು ಹುಲ್ಲು, ಕಸ-ಕಡ್ಡಿಗಳನ್ನು ತೆಗೆದು ಕೆರೆಯಿಂದ ನೀರು ತಂದು ಆ ಜಾಗದಲ್ಲಿ ಹಾಯಿಸಿದರು.

ಹಳ್ಳಿಯಲ್ಲಿ ಕೆಲ ರೈತರ ಸಹಾಯದಿಂದ ತರಕಾರಿಗಳ ಬೀಜ ಪಡೆದು ಆ ಜಾಗದಲ್ಲಿ ಬಿತ್ತಿದ. ದಿನವೂ ಕೆರೆಯಿಂದ ತಂದು ಹಾಯಿಸುವುದು ಜತೆಗೆ ತನ್ನ ರಾಸುಗಳ ಮೇವಿಗೆ ಕೆರೆಯ ಬಳಿ ಕೊಂಡೊಯ್ಯುವುದು ಈ ಎರಡೂ ಕೆಲಸಗಳನ್ನು ಮಾಡುತ್ತಿದ್ದ. ರಾಸುಗಳ ಸಗಣಿಯನ್ನೇ ಗೊಬ್ಬರವನ್ನಾಗಿಸಿ ಫಲವತ್ತಾದ ತರಕಾರಿಗಳನ್ನು ಬೆಳೆದ. ಬೆಳೆದದ್ದನ್ನು ಮನೆಗೆ ಬೇಕಾದಷ್ಟು ಇಟ್ಟುಕೊಂಡು ಉಳಿದದ್ದನ್ನು ಸಂತೆಯಲ್ಲಿ ಮಾರುತ್ತಿದ್ದ. ಹೀಗೆ ಮಾಡುವುದರಿಂದ ಬರಬರುತ್ತಾ ಮನೆಯ ಆದಾಯವೂ ಹೆಚ್ಚಿತು.

ಇದನ್ನೇ ಮುಂದುವರಿಸಿದ ರೈತ, ಕಾಲ ಕಳೆದಂತೆ ಭೂಮಿಯನ್ನೂ ಖರೀದಿಸಿದ. ಹಳ್ಳಿಯಲ್ಲಿ ಹೆಸರಾದ ಹಾಗೂ ತಾನು ಬೆಳೆದ ರೀತಿಯನ್ನೇ ಇತರರಿಗೂ ಪರಿಚಯಿಸಿದ. ಇದರಿಂದ ಫಲವತ್ತಾದ, ಬೆಳೆಯನ್ನೇ ಅನುಸರಿಸಿದರು. ಜತೆಗೆ ಮಳೆಗಾಲದಲ್ಲಿ ತಮ್ಮ ಭೂಮಿಗಳಲ್ಲಿ ನೀರು ಸಂಗ್ರಹಿಸುವುದು, ಹಳ್ಳಿಯ ಕೆರೆಗೆ ನೀರು ಸಂಗ್ರಹ ಹೀಗೆ ಹಲವು ಹೊಸ ಬಗೆಯದನ್ನು ಜಾರಿಗೆ ತಂದ. ಗೋಪುರ ಹಳ್ಳಿಯು ಪ್ರಸಿದ್ಧಿ ಪಡೆಯಿತಲ್ಲದೆ, ಅಲ್ಲಿ ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಯಿತು.

ಈ ರೈತನಂತೆ ನಮ್ಮ ಜೀವನದಲ್ಲಿಯೂ ಕಷ್ಟಗಳು ಬರುತ್ತವೆ. ಅದನ್ನು ಸೂಕ್ತ ರೀತಿಯಲ್ಲಿ ಎದುರಿಸಬೇಕೇ ಹೋರತು, ಕಷ್ಟಗಳು ಎದುರಾಯಿತೆಂದು ಓಡಿ ಹೋದರೆ ಅದು ನಮ್ಮ ಬೆನ್ನಟ್ಟಿಕೊಂಡೇ ಬರುತ್ತದೆಯೇ ವಿನಃ ನಿವಾರಣೆಯಾಗುವುದಿಲ್ಲ. ಎದುರಿಸಿ ಮೆಟ್ಟಿ ನಿಂತರೆ, ಗೆಲುವು ನಮ್ಮದೇ ಆಗಿರುತ್ತದೆ.
***
ಒಂದು ಊರಿತ್ತು ಅಲ್ಲಿ ಮಹೇಶ ಹಾಗೂ ಸುಪ್ರಿಯಾ ಇಬ್ಬರೂ ಒಂದೇ ಶಾಲೆಗೆ ಹೋಗುತ್ತಿದ್ದರು. ಇಬ್ಬರ ವಯಸ್ಸೂ ಒಂದೇ. ಹಾಗೆಯೇ ಒಂದೇ ಸೆಕ್ಷನ್, ಒಂದೇ ಡೆಸ್ಕ್ ಕೂಡ. ಅವರಿಬ್ಬರ ತಂದೆಯಂದಿರೂ ಒಂದೇ ಕಡೆ ಕೆಲಸ ಮಾಡುತ್ತಿದ್ದರಿಂದ, ಊರ ಹೊರಗಿನ ಕ್ವಾಟ್ರಸ್‌ನಲ್ಲಿ ಇಬ್ಬರ ಮನೆಯೂ ಅಕ್ಕ-ಪಕ್ಕ ಇತ್ತು. ಶಾಲೆಗೆ ಹೋಗುವಾಗ ಕ್ವಾಟ್ರಸ್‌ನಲ್ಲಿನ ಕೆಲ ಮಕ್ಕಳ ಜತೆಗೂಡಿ ಒಂದೇ ಸೈಕಲ್ ರಿಕ್ಷಾದಲ್ಲಿ ಹೋಗುತ್ತಿದ್ದರು. ಇರುವವರೆಲ್ಲಾ ಅವರಿಬ್ಬರನ್ನೂ ಎಣ್ಣೆ ಸೀಗೆಕಾಯಿ ಎಂದೇ ನೋಡುತ್ತಿದ್ದರು. ಏಕೆಂದರೆ ರಿಕ್ಷಾದಲ್ಲಿ ಕೂರುವ ಜಾಗದಿಂದ ಹಿಡಿದು ಓದುವ ವಿಚಾರದವರೆಗೂ ಇಬ್ಬರಿಗೂ ಪೈಪೋಟಿ. ಸುಪ್ರಿಯಾ ಓದುವುದರಲ್ಲಿ ಮುಂದಿದ್ದಳು. ಶಾಲೆಯಲ್ಲಿ ಶಿಕ್ಷಕರಿಂದ ಪ್ರಶಂಸೆಗೆ ಪಾತ್ರಳಾಗಿದ್ದಳು. ಆದರೆ ಮಹೇಶನಿಗೆ ಅವಳಂಥೆ ಓದುವುದರಲ್ಲಿ ತಾನೂ ಮುಂದೆ ಬಂದು ಎಲ್ಲರಿಂದ ಪ್ರಶಂಸೆ ಪಡೆಯಬೇಕೆಂಬ ಆಸೆ.

ಸುಪ್ರಿಯಾ ಪ್ರತಿ ಬಾರಿ ಕ್ಲಾಸ್‌ನಲ್ಲಿ ಫಸ್ಟ್ ಬರುತ್ತಿದ್ದಳು. ಶಾಲೆಯಿಂದ ಬಂದ ನಂತರ ಅಮ್ಮನ ಕೈಯಿಂದ ಏನಾದರು ಮಾಡಿಸಿಕೊಂಡು ತಿಂದು, ಹಾಲು ಕುಡಿದು ಇತರೆ ಸ್ನೇಹಿತರ ಜತೆಗೆ ಕೆಲ ಸಮಯ ಆಟವಾಡುತ್ತಿದ್ದಳು. ತನ್ನ ದಿನ ನಿತ್ಯದ ಟೈಮ್ ಟೇಬಲ್‌ನ್ನು ತಾನೇ ತಯಾರಿಸಿಕೊಂಡಿದ್ದ ಸುಪ್ರಿಯಾ ಅದರಂತೆ ಪಾಲಿಸುತ್ತಿದ್ದಳು. ಸಂಜೆ ಆಟ ಮುಗಿದ ನಂತರ ದೇವರಿಗೆ ಕೈ ಮುಗಿದು ಓದಲು ಕುಳಿತುಕೊಳ್ಳುತ್ತಿದ್ದಳು.

ಸಾಮಾನ್ಯವಾಗಿ ಹೆಣ್ಣು ಮಕ್ಕಳೇ ಹಾಗೆ, ತಮ್ಮ ಕೆಲಸ ಕಾರ್ಯಗಳಲ್ಲಿ ಏನು ರೂಢಿಸಿಕೊಂಡಿರುತ್ತಾರೋ ಹಾಗೆಯೇ ಬೆಳೆಯುತ್ತಾರೆ. ಅದಕ್ಕೆ ತಕ್ಕಂತೆ ಪ್ರತಿಫಲವೂ ಸಿಗುತ್ತದೆ. ಅತ್ತ ಸುಪ್ರಿಯಾಳ ಅಮ್ಮ ಅಡುಗೆ ಮನೆಯ ಕೆಲಸದಲ್ಲಿ ತೊಡಗಿದ್ದರೆ, ಆಕೆಯೂ ಅಮ್ಮನಿದ್ದಲ್ಲಿಯೇ ತೆಗೆದುಕೊಂಡು ಓದುತ್ತಿದ್ದಳು. ಶಾಲೆಯಲ್ಲಿ ಮಾಡಿದ ಪಾಠವನ್ನೇಲ್ಲಾ ಅಂದಿನ ದಿನವೇ ರಿವೈಸ್ ಮಾಡುತ್ತಿದ್ದಳು. ಶಾಲೆಯಲ್ಲಿ ಕೊಟ್ಟ ಹೋಮ್ ವರ್ಕ್‌ನ್ನು ಸಹ ಎಷ್ಟು ಹೊತ್ತಾದರೂ ಅದನ್ನು ಮುಗಿಸಿಯೇ ಮಲಗಬೇಕು ಎಂಬ ಹಠ ಆಕೆಯದು.

ಮಹೇಶ್ ಸುಪ್ರಿಯಾಳಂತಲ್ಲ, ಶಾಲೆಯಿಂದ ಬಂದರೆ ಆಟವಾಡುವುದು. ಒಂಥರಾ ಉಡಾಫೆ ಬುದ್ಧಿ. ಅಪ್ಪ ಬೈಯ್ಯುತ್ತಾರೆಂದು ಅಪ್ಪ ಬರುವ ಸಂದರ್ಭದಲ್ಲಿ ಹೋಮ್ ವರ್ಕ್ ಮಾಡಲು ಕುಳಿತುಕೊಳ್ಳುತ್ತಿದ್ದ. ಹೇಳಿಕೊಟ್ಟ ಪಾಠವನ್ನು ಮತ್ತೆ ರಿವೈಸ್ ಮಾಡುತ್ತಿರಲಿಲ್ಲ. ಪರೀಕ್ಷೆಯ ಸಂದರ್ಭದಲ್ಲಷ್ಟೇ, ಸುಪ್ರಿಯಾಳನ್ನು ಓದಿನಲ್ಲಿ ಹಿಂದಿಕ್ಕಬೇಕೆಂದು ಬಿದ್ದು ಓದುತ್ತಿದ್ದ. ಮಹೇಶ್ ಅವರ ಅಪ್ಪ ಹಾಗೂ ಅಮ್ಮ ಇಬ್ಬರೂ ಓದಿನ ವಿಚಾರದಲ್ಲಿ ಸುಪ್ರಿಯಾಳನ್ನು ಹೋಲಿಸಿ ಆತನಿಗೆ ಬೈಯುವುದು, ಬುದ್ಧಿವಾದ ಹೇಳುವುದು ಮಾಡುತ್ತಿದ್ದರು. ಇದರಿಂದ ಆತ ತೀವ್ರ ಬೇಸರಗೊಂಡಿದ್ದ.

ಶಾಲೆಯಲ್ಲಾಗಲಿ, ಮನೆಯಲ್ಲಿನ ಪೋಷಕರಾಗಲಿ ಆತನಿಗೆ ಸರಿಯಾದ ಮಾರ್ಗದರ್ಶನ, ಹೇಳಿಕೊಡುವುದು, ತರಬೇತಿ ಕೊಡುವುದಾಗಲಿ ಸೂಕ್ತ ರೀತಿಯಲ್ಲಿ ಸಿಗುತ್ತಿರಲಿಲ್ಲ. ಏಕೆಂದರೆ ಆತನಲ್ಲಿನ ಸಿಟ್ಟು, ಹಠದಿಂದ ಯಾರ ಮಾತನ್ನು ಕೇಳುವಷ್ಟು ತಾಳ್ಮೆ ಅವನಲ್ಲಿರಲಿಲ್ಲ. ಒಂದು ದಿನ ಅನಾರೋಗ್ಯಕ್ಕೊಳದ ಮಹೇಶ್, ಸುಮಾರು ಒಂದು ವಾರ ಹೋಗಿರಲಿಲ್ಲ. ಶಾಲೆಯ ಪಾಠ ತಪ್ಪಿತ್ತು, ಇನ್ನೊಂದು ವಾರದಲ್ಲಿ ಪರೀಕ್ಷೆ ಬೇರೆ ಇತ್ತು. ಹೀಗಿದ್ದಾಗ ಆತನ ಪಕ್ಕದ ಮನೇಯವರೇ ಆದ ಕಾರಣ ಸುಪ್ರಿಯಾಳ ಅಮ್ಮ, ಮಹೇಶನ ಮನೆಗೆ ಹೋಗಿ ಶಾಲೆಯಲ್ಲಾದ ಪಾಠವನ್ನು ಆತನಿಗೆ ಕಲಿಸುತ್ತಿದ್ದರು. ಅಮ್ಮನ ಜತೆಯಾಗಿ ಸುಪ್ರಿಯಾ ಸಹ ಹೋಗುತ್ತಿದ್ದಳು.

ಪರೀಕ್ಷೆ ಬಂದೇ ಬಿಟ್ಟಿತು. ಇಬ್ಬರು ಆ ಪರೀಕ್ಷೆಯಲ್ಲಿ ಉತ್ತಮ ಅಂಕವನ್ನು ಗಳಿಸಿದ್ದರು. ಮಹೇಶನೂ ಎಂದಿಗಿಂತ ಹೆಚ್ಚು ಅಂಕಗಳಿಸಿದ್ದ. ಆದರೆ ಒಂದು ಬದಲಾವಣೆ ಆತನಲ್ಲಿ ಕಂಡಿದ್ದೇನಂದರೆ, ಓದಿನಲ್ಲಿ ಕ್ರಮಬದ್ಧವಾಗಿ ರೀತಿಯಲ್ಲಿ ಅಭ್ಯಾಸ ಮಾಡುವುದು. ಆತ್ಮ ಬಲದಿಂದ ಎಂಥಹ ಸನ್ನೀವೇಶವನ್ನು ಗೆಲ್ಲಬಹುದು ಎಂದು. ಆದರೆ ಓದಿನಲ್ಲಿ ಸುಪ್ರಿಯಾಳನ್ನು ಹಿಮ್ಮೆಟ್ಟಿಸಬೇಕೆಂಬ ಹಠ ಆತನಲ್ಲಿ ಜೀವಂತವಾಗಿಯೇ ಇತ್ತು.

ಹೀಗೆ ನಮ್ಮ ಜೀವನದಲ್ಲಿಯೂ ನಡೆದಿರುತ್ತದೆ. ಸೂಕ್ತ ರೀತಿಯ ಮಾರ್ಗದರ್ಶನದ ಕೊರತೆಯೋ, ಅತಿಯಾದ ಆತ್ಮವಿಶ್ವಾಸವೂ, ಹಠದ ಕಾರಣದಿಂದಲೋ ಜೀವನದಲ್ಲಿ ಗುರಿ ಮುಟ್ಟಲು ಸಾಧ್ಯವಾಗುವುದಿಲ್ಲ. ಹಠ, ದುರ್ನಡತೆಯಿಂದ ಸಾಧಿಸುವುದು ಅಸಾಧ್ಯ. ಜೀವನದಲ್ಲಿ ಎಷ್ಟೋ ಬಾರಿ ಬೀಳುತ್ತಲೇ ಇರುತ್ತೇವೆ. ಹಾಗೆಂದು ಕುಗ್ಗದೆ, ಮಾಡಿದ ತಪ್ಪುಗಳಿಂದ ತಿದ್ದುಕೊಂಡು ಮತ್ತೆ ಮರುಕಳಿಸದಂತೆ ಮಾತ್ರ ಎಂತಹ ಕಷ್ಟಗಳನ್ನು ಎದುರಿಸಿಯಾದರೂ ಗೆಲುವು ಸಾಧಿಸಬಹುದು.
**
ಒಂದೂರಲ್ಲಿ ಒಬ್ಬ ವ್ಯಕ್ತಿ ಇದ್ದ. ಆತನ ಹೆಸರು ಮೋಹನ್. ಮೂಲತಃ ಆತ ರೈತ ಕುಟುಂಬದವನು. ನಗರಕ್ಕೆ ಹೋಗಿ ಪದವಿಯೂ ಪಡೆದಿದ್ದ. ಆ ಹಳ್ಳಿಯಲ್ಲಿ ಈತನೊಬ್ಬನೇ ಹೆಚ್ಚು ಓದಿದವನಾಗಿದ್ದು, ಅವನ ವಯಸ್ಸಿನವರು ಸಾಮಾನ್ಯವಾಗಿ ಶಾಲಾ ಶಿಕ್ಷಣ ಪಡೆದು ಕೈಬಿಟ್ಟಿದ್ದರು. ಒಮ್ಮೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮೋಹನ್, ರಸ್ತೆಯಲ್ಲಿ ಕುದುರೆಗಳ ಹಿಂಡು ಹೋಗುತ್ತಿದ್ದನ್ನು ಕಂಡ. ದೊಡ್ಡ ಗಾತ್ರದ ಕುದುರೆಗಳವು. ಮರುದಿನವೂ ಹೊಲದಲ್ಲಿ ಮಾಡುವಾಗ ಮತ್ತೆ ಕುದುರೆಗಳ ಹಿಂಡು ಓಡುತ್ತಿರುವುದನ್ನು ಕಂಡ. ಕುದುರೆಗಳು ಓಡುತ್ತಿರುವ ಕಾರಣ ತಿಳಿಯುವ ತವಕ ಆತನಲ್ಲಿ ಮೂಡಿತು.

ಕುತೂಹಲ ತಾಳಲಾಗದೆ, ಕುದುರೆಗಳನ್ನು ಓಡಿಸಿಕೊಂಡು ಹೋಗತ್ತಿದ್ದ ವ್ಯಕ್ತಿಯನ್ನು ನಿಲ್ಲಿಸಿ ‘ದಿನ ನಿತ್ಯ ಏಕೆ ಕುದುರೆಗಳನ್ನು ಹೀಗೆ ಓಡಿಸುತ್ತಿರುವೆ?’ ಎಂದು ಕೇಳಿಯೇ ಬಿಟ್ಟ. ‘ನಗರದಲ್ಲಿ ಕುದುರೆ ಸವಾರಿಯ ಸ್ಪರ್ಧೆ ಇದೆ. ಅದರಲ್ಲಿ ಮಾಲೀಕರು ಭಾಗವಹಿಸಲಿದ್ದಾರೆ. ಕುದುರೆಗಳನ್ನು ಸರಿಯಾಗಿ ಪಳಗಿಸಲು ಕಟ್ಟುನಿಟ್ಟಾಗಿ ಹೇಳಿದ್ದಾರೆ. ಮಾತು ಕೇಳದಿದ್ದಾಗ ಇವುಗಳನ್ನು ದಂಡಿಸಿಯಾದರೂ ಪಳಗಿಸಬೇಕು ಎಂದಿದ್ದಾರೆ’ ಎಂದು ಕುದುರೆ ಸವಾರಿಯ ವಿಷಯ ತಿಳಿದ ಮೋಹನ್‌ಗೆ ತನ್ನ ಪದವಿ ಜೀವನದ ನೆನಪು ಮತ್ತೆ ಕಾಡತೊಡಗಿತು.  ಮೋಹನ್ ನಗರದಲ್ಲಿ ಪದವಿ ಓದುವುದರ ಜತೆಗೆ ಕ್ರೀಡೆಯಲ್ಲಿಯೂ ಹೆಸರು ಮಾಡಿದ್ದ. ಅದಕ್ಕಾಗಿ ಹಗಲು ರಾತ್ರಿ ದೇಹವನ್ನು ದಂಡಿಸಿ, ಕುಸ್ತಿ ಪೈಲ್ವಾನ್‌ನಂತಾಗಿದ್ದ. ಪದವಿ ಮುಗಿಯುವುದರಳೊಗೆ ಕ್ರೀಡಾ ಕ್ಷೇತ್ರದಲ್ಲಿನ ಅವನ ಸಾಧನೆ ಹೇಗಿತ್ತೆಂದರೆ. ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ತೋರಿದ್ದ.

ಸಾಧನೆಯ ಶಿಖರ ಏರುತ್ತಿದ್ದಂತೆ ಬರಬರುತ್ತ ಒಂದು ರೀತಿಯ ಜಂಬ, ಅಹಂ ಮೋಹನ್‌ನಲ್ಲಿ ಮನೆ ಮಾಡಿತ್ತು. ಬೇಡದ ಚಟಗಳಿಗೆ ದಾಸನಾಗಿದ್ದ. ಈತನ ನಡಾವಳಿಯಿಂದ ಬೇಸತ್ತ ತಂದೆ, ಪದವಿ ನಂತರ ಕೃಷಿಯಲ್ಲಿ ಆತನನ್ನು ತೊಡಗಿಸಲು ಮುಂದಾದರು. ತನ್ನ ನಂತರ ಮಗ ಕೃಷಿಯನ್ನು ಮುಂದುವರಿಸಬೇಕು. ಬಲವಂತವಾಗಿಯಾದರೂ ಸರಿ ಕ್ರೀಡೆ ಬಿಟ್ಟು ಕೃಷಿಯಲ್ಲಿಯೇ ತೊಡಗಿಸಬೇಕೆಂಬ ಶಪಥ ಅವರದ್ದಾಗಿತ್ತು.  ಕಟ್ಟು ನಿಟ್ಟಿನ ತಂದೆಯ ಮಾತು ಮೋಹನ್‌ಗೆ ಕಷ್ಟವಾದರೂ ಅದರಿಂದ ಪಾರಾಗಲು ಸಾಧ್ಯವಾಗಲಿಲ್ಲ. ಕೆಲ ತಿಂಗಲ ನಂತರ ತಂದೆ ಅಕಾಲಿಕ ಮರಣ ಹೊಂದಿದರು. ಮನೆಯಲ್ಲಿ ತಾಯಿ ಒಬ್ಬರೇ, ಹೊಲ ಹಾಗೂ ಮನೆಯ ಜವಾಬ್ದಾರಿ ಸುಮಾರು ಎರಡು ವರ್ಷ ಕೃಷಿಯಲ್ಲೇ ಜೀವನ ಕಂಡುಕೊಂಡ.

ಆ ಕುದುರೆಗಳ ಓಟ ಆತನಲ್ಲಿ ಹೊಸ ಹುರುಪನ್ನು ನೀಡಿತ್ತು. ತನ್ನ ತಂದೆ ಕಷ್ಟ ಪಟ್ಟ ಆಸ್ತಿಯಾಗಿದ್ದ ಹೊಲ, ಮನೆ ಒಂದೆಡೆ ಇನ್ನೊಂದೆಡೆ ಕ್ರೀಡೆ. ಎರಡರಲ್ಲೂ ಮುಂದುವರಿಯಲು ತೀರ್ಮಾನಿಸಿದ. ಮರು ದಿನ ಹೊಲದಲ್ಲಿಯೇ ತರಬೇತಿ ಆರಂಭಿಸಿದ. ಹೀಗಿರುವಾಗ ಒಮ್ಮೆ ನಗರಲ್ಲಿ ಓಟದ ಸ್ಪರ್ಧೆ ಇರುವುದು ಆತನಿಗೆ ತಿಳಿಯಿತು. ಅದರಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ.

ದಢೂತಿ ದೇಹ ಹೊಂದಿದ್ದ ಮೋಹನ್ ತನ್ನ ಪ್ರತಿಸ್ಪರ್ಧಿಗಳಿಗೆ ಟಕ್ಕರ್ ಸಕಲ ರೀತಿಯಲ್ಲಿ ತಯಾರಾಗಿ ನಿಂತ. ಮೂವರು ಸ್ಪರ್ಧಿಗಳು ಅದರಲ್ಲಿ ಸುಲಭ ಗೆಲುವು ಪಡೆದ. ಎರಡನೇ ಸುತ್ತಿನಲ್ಲಿಯೂ ಮತ್ತೆ ಮೂವರನ್ನು ಎದುರಿಸಿದ. ಅಲ್ಲಿಯೂ ವಿಜಯ ಸಾಧಿಸಿದ. ಮೂರನೇ ಸ್ಪರ್ಧೆಯಲ್ಲಿ ಕೊಂಚ ಬದಲಾವಣೆ ಇತ್ತು. ಅಲ್ಲಿ ಮೋಹನ್ ಜತೆಯಾಗಿ ವೃದ್ಧ, ವೃದ್ಧೆಯನ್ನು ನಿಲ್ಲಿಸಿ ಅವರೊಂದಿಗೆ ಸ್ಪರ್ಧಿಸಲು ತಿಳಿಸಿದರು. ಎರಡೂ ಸುತ್ತಿನಲ್ಲಿ ಜಯಿಸಿರುವ ಮೋಹನ್ ಗೆಲ್ಲುವ ತವಕದಲ್ಲಿ ಮನುಷ್ಯತ್ವವನ್ನೇ ಮರೆತು ಓಡಿ ಮೊದಲು ಬಂದ. ಆದರೆ ಆತ ಸ್ಪರ್ಧೆ ಎಂದು ಮುಂದಿಟ್ಟುಕೊಂಡು ಮಾನವೀಯತೆ ಸ್ಪರ್ಧೆಯಲ್ಲಿ ಗೆದ್ದರೂ ಅದು ಅವನ ಸೋಲಾಗಿತ್ತು. ಸ್ಪರ್ಧೆಯ ಆಯೋಜಕರು ವೃದ್ಧರ ಜತೆ ಓಡಲು ಹೇಳಿದ ತಾತ್ಪರ್ಯ ಕುರಿತು ಆತನಿಗೆ ತಿಳಿಸಿದರು. ತಿಳಿದ ನಂತರ ಬೇಸತ್ತು ಸಿಕ್ಕ ಪ್ರಶಸ್ತಿಯನ್ನು ಹಿಂದಿರುಗಿಸಿದ.

Leave a Reply

Your email address will not be published. Required fields are marked *

three × four =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top