ಶಾ ಗೆ ಹೆದ್ರುಕೊಂಡು ಸ್ಲಂಗೆ ಹೋಗಿದ್ದೋವ್ರ ಶೇಪ್‌ ಔಟ್‌ ಆಯ್ತಂತೆ

Posted In : ಸಂಗಮ, ಸಂಪುಟ

ಹಳ್ಳಿಕಟ್ಟೆ: ವೆಂಕಟೇಶ ಆರ್‌. ದಾಸ್

 ಲೇ ಸೀನ, ಗದ್ದೆಗೆ ರಾತ್ರಿ ನೀರ್ ಕಟ್ಟಕ್ಕೆ ಹೋಗಾನ ಅಂತ ಕರೆಯಕ್ ಬಂದಿದ್ದೆ, ಇರ್ಲಿಲ್ವಲ್ಲಾ ಎಲ್ಲಲಾ ಹೋಗಿದ್ದೆ? ಅಂತ ಪಟೇಲಪ್ಪ ಆಗ್ ತಾನೇ ಅರಳಿ ಕಟ್ಟೆ ಕಡೆಗೆ ಬತ್ತಿದ್ದ ಸೀನಂಗೆ ಕೇಳ್ದ. ಪಟೇಲಪ್ಪನ್ ಮಾತ್ಗೆ ನಾಚ್ಕೋತ್ತ ಉತ್ರ ಕೊಟ್ಟ ಸೀನ ‘ನೆನ್ನೆ ರಾತ್ರಿ ನಂದು ಅತ್ತಿಹಳ್ಳಿ ಅತ್ತೆ ಮನೀಲಿ ವಾಸ್ತವ್ಯ ಕಣ್ ದೊಡ್ಡಪ್ಪ’ ಅಂದ. ಏನ್ಲಾ, ಅತ್ತೆ ಮನೆ ಸೇರ‌್ಕಂಬುಟ್ಟಿದ್ದೆ ಅನ್ನು, ಏನಂದ್ಲು ನಿಮ್ಮತ್ತೆ, ‘ನಾಚ್ಕಿಲ್ಲದ ಅಳಿಯ ನಾಗ್ರಬ್ಬಕ್ ಬಂದವ್ನೆ’ ಮೊಕ್ಕುಗಿಲಿಲ್ವಾ. ಹೋಗ್ಲಿ ಕೊಟ್ಟಳಂತ ಮಗ್ಳುನ್ನ? ಅಂತ ರೇಗಿಸ್ದ ಪಟೇಲಪ್ಪ. ನಾನೇನ್ ಮದ್ವೆ ಇಚಾರ ಮಾತಾಡಕ್ ಹೋಗಿದ್ನೆ? ಅದನ್ನು ನೀನು, ನಮ್ಮಪ್ನು ಹೋಗಿ ಮಾತಾಡ್ಬೇಕಪ್ಪ. ಅಪ್ರೂಪಕ್ಕೆ ಅಳಿಯ ಬಂದವ್ನೇ ಅಂತ ನಮ್ಮತ್ತೆ ಚೆನ್ನಾಗ್ ಮಾಡಿಕ್ಕಿದ್ಲು. ಉಂಡು ರಾತ್ರಿ ಉಳ್ಕಂಡಿದ್ ಬಂದೆ ಕನೇಳು ಅಂದ ಸೀನ. ಓ, ಹಂಗೆ, ‘ಶಾ’ ಗೆ ಹೆದ್ರಿಕಂಡು ಸ್ಲಂನಲ್ಲಿ ಉಳ್ಕಳ ಕ್ಕೋಗಿದ್ರಲ್ಲ ಬಿಜೆಪಿನೋರು, ಹಂಗೆಯಾ ನಿನ್ನ ಕಥೆ. ನೆಪಕ್ ಮಾತ್ರ ವಾಸ್ತವ್ಯ ಅನ್ನು ಅಂದ ಪಟೇಲಪ್ಪ. ಬಿಜೆಪಿನೋರು ಶಾ ಬೊಯ್ತರಲ್ಲ ಅಂತ ಸ್ಲಂ ವಾಸ್ತವ್ಯ ಮಾಡಕ್ಕೋಗಿ ಶೇಪ್ ಔಟ್ ಮಾಡ್ಕಂಡವ್ರಂತೆ. ಹೆಸ್ರಿಗ್ ಮಾತ್ರ ಸ್ಲಂ ಆಯ್ಕೆ ಮಾಡ್ಕಂಡು ಐಟೆಕ್ ಮನೇಗೋಗಿ ಮಲಗಿದ್ದು ಎದ್ ಬಂದ್ರಂತೆ ಅಂದ ಸೀನ.ಏನ್ಲಾ ಹೇಳ್ತಿದ್ದಿಯಾ, ಶಾಗ್ಯಾಕ್ಲ ಇವು ಈ ಪಾಟಿ ಹೆದ್ರುಕತ್ತವೆ?

ಆ ವಯ್ಯ ಬತ್ತನೇ ಅಂದ್ರೆ ಸಾಕು ಬೀಜ ಕಿತ್ತ ಹೋರಿಯಂಗ್ ಬೆಂಡಾಗ್ಬುಡ್ತವೆ. ಮೋದಿ ಅಂದ್ರೆ ವಸಿ ನೆಟ್ಟಗಾರ ನಿಂತ್ಕತಾರೆ. ಆದ್ರೆ ಶಾ ಅಂತಿದ್ದಂಗೆ ಬಗ್ಗಿ ಹೋಗ್ತವೆ ಬಡ್ಡಿವು ಅಂದ ಹಂಗದೆ ಕಣ್ ದೊಡ್ಡಪ್ಪ ಶಾ ಪವರ್ರು. ಮೋದಿನ ಬೇಕಾದ್ರೆ ಎದ್ರಾಕಾಬೋದು. ಆದ್ರೆ, ಶಾ ಎದ್ರಾಕೊಂಡ್ರೆ ಬಿಜೆಪಿವು ಬದ್ಕಕ್ಕಾಯ್ತದಾ? ಆ ವಯ್ಯ ಮನ್‌ಸ್ ಮಾಡಿದ್ರೆ, ಒಂದೂ, ಸೀಟಿಗ್ ಸಂಚ್ಕಾರ ಬತ್ತದೆ. ಇಲ್ಲ ಐಟಿ, ಪೈಟಿಯವ್ರು ಬಂದ್ ಅಟ್ಕಾಯಿಸ್ಕತ್ತರೆ. ಇದ್ಯಾಕಪ್ಪ ಸವಾಸ ಅಂತ ಮೊದ್ಲೆ ಹುಸಾರಾಯ್ತರೆ ಇವ್ರು ಅಂದ ಸೀನ. ಅದ್ಸರಿ ಕಣ್ಲಾ, ಬ್ಯಾರ್-ಬ್ಯಾರೆ ಬೇಜಾನ್ ಕೆಲ್ಸ ಇರೋ ಟೈಮಲ್ಲಿ ಎಲ್ಲ ಹೋಗಿ ಸ್ಲಂ ಅಲ್ಲಿ ಕುತ್ಕತ್ತಾವಲ್ಲ ಯಾಕ್ಲಾ? ಹಿಂಗೋಗಿ ಅಂತೇಳಕ್ ವಯ್ಯ ದಡ್ನೇ ಅಂದ ಪಟೇಲಪ್ಪ. ಅವ್ನಾ ್ಯಕ್ ದಡ್ಡಾದನೇಳು, ಶಾ ಅಂದ್ರೆ ಚಾಣಕ್ಯ ಇದ್ದಂಗೆ. ಕರ್ನಾಟಕದಲ್ಲಿ ದಲಿತ್ರು ಬಿಜೆಪಿಗ್ ಕೈ ಕೊಡದ್ ಗಟ್ಟಿಯಾತೈತೆ, ಅದಕ್ಕೆ ಮೊದ್ಲು ಸ್ಲಂ ವಾಸ್ತವ್ಯ ಮುಂದುವರಿಸ್ರಿ ಅಂತೇಳೈತಂತೆ. ಅದಕ್ಕೆ ಹಳೇ ಬೆಡ್ ಶೀಟ್, ಗಿಡ್‌ಶೀಟ್ ಎಲ್ಲ ಕೊಡಿವ್ಕೊಂಡು ಸ್ಲಂ ಕಡಿಗೊಂಟವ್ರಂತೆ ಬಿಜೆಪಿನೋರು ಅಂದ ಸೀನ. ಅದ್ಯಾಕ್ಲಾ ದಲಿತ್ರು ಬಿಜೆಪಿಗೋಟಾಕಕಿಲ್ಲ, ಕಾಂಗ್ರೆಸ್ ದಲಿತ್ರು ಸಿಎಂ ಮಾಡ್ಲಿಲ್ಲ ಅನ್ನೋ ಸಿಟ್ಟಲ್ಲಿ ಒತ್ತಿದ್ರೆ ಬಿಜೆಪಿಗೆ ಅಲ್ವೇ ಲಾಭ ಅಂದ ಹೂಂ, ಒತ್ತುತಾರೆ, ಇಂತವೆಲ್ಲ ಎನ್‌ಕ್ಯಾಶ್ ಮಾಡ್ಕೊಳ್ಳೋಕೆ ನಮ್ಮಲ್ಲಿ ‘ಚಾಣಕ್ಯನ್ ಅಪ್ಪನಂತೋರ್’ ಇಲ್ವೇ.

ಕಾಂಗ್ರೆಸ್ ಮೇಲಂತೂ ದಲಿತ್ರಿಗೆ ಸಿಟ್ಟೈತೆ. ಇನ್ ಬಿಜೆಪಿನೋವ್ ಮಾಡಿ ರೋ ಅವಾಂತ್ರಕ್ಕೆ ಅವ್ರತ್ರನೋ ಹೋಗ್ಬಾ ರದು ಅಂತಿರೋ ದಲಿತ್ರನ್ನ ಕ್ಯಾಚ್ ಹಾಕಳ್ಳಕ್ಕೆ ಅಂತಾನೆ ಬಿಎಸ್ಪಿ ಜತೆ ಮೈತ್ರಿ ಮಾಡ್ಕಂಡಿಲ್ವೇ ದೊಡ್ಡ ಗೌಡ್ರು, ಅವ್ರ ಆಟದ್ ಮುಂದೆ ಕೆಲವು ಸಲ ಯಾವ್ ಚಾಣಕ್ಯನ್ ತಂತ್ರಾನೂ ನಡಯಕ್ಕಿಲ್ಲ ಗೊತ್ತಾ ಅಂದ ಸೀನ. ಲೇ, ತೆನೆ ಹೊತ್ತ ಲೇಡಿನಾ ಆನೆ ಕೂರಸದ್ಕೂ, ಬಿಜೆನೋರ್ ಹೋಗಿ ಸ್ಲಂನಲ್ಲಿ ಮಲ್ಗೋದ್ಕು ಸಂಬಂಧ ಏನ್ಲಾ ಸೀನ ಅಂದ ಪಟೇಲಪ್ಪ. ಐತೆ ದೊಡ್ಡಪ್ಪ, ದಲಿತ್ರು ಕಾಂಗ್ರೆಸ್ ಮ್ಯಾಲೆ ಸಿಟ್ಟಾಗಿದ್ದನ್ನು ಎನ್‌ಕ್ಯಾಶ್ ಮಾಡ್ಕಳ್ಳದ್ ಬುಟ್ಟು ಅನಂತ್ ಕುಮಾರ ಹೆಗ್ಡೆ ಬಾಯಿಗ್ ಬಂದಾಗ್ ಮಾತಾಡ್ತು. ಸಂವಿಧಾನ ಚೇಂಜ್ ಮಾಡ್ತೀನಿ ಅಂತು, ಅದನ್ನು ವಿರೋಧ ಮಾಡಿದ್ ದಲಿತ್ರನ್ನ ನಾಯ್ಗೋಳು ಅಂತು. ಹಿಂಗೆ ಆದ್ರೆ ನಮ್ಗೇ ಡ್ಯಾಮೇಜ್ ಆಗದ್ ಗ್ಯಾರಂಟಿ. ಮೊದ್ಲು ಯಾವ್ದಾದ್ರು ಡ್ರಾಮ ಮಾಡಿ ಅಂತ ಹೈಕಮಾಂಡ್ ಹೇಳ್ತಿದ್ದಂಗೆ ಸ್ಲಂನಲ್ಲಿ ಚಾಪೆ ಹಾಸವ್ರೆ ನಮ್ಮ ಯಡಿಯೂಪ್ಪನೋರು ಅಂದ ಸೀನ.

ಶೆಟ್ರೇನೋ ಫುಲ್ ಹೈಟೆಕ್ ವ್ಯವಸ್ಥೆ ಇರೋ ಸ್ಲಂನಲ್ಲಿ ನೆಪಕ್ಕೋಗಿ ಯಾವ್ದೋ ಮುಖಂಡನ್ ಮನೇಲಿ ಮಲ್ಗಿದ್ದು ಎದ್ದು ಬಂದೈವ್ರಂತೆ. ಇವ್ರು ವಾಸ್ತವ್ಯ ಎಲ್ಲ ಓಳು ಅಂತ ಆಡ್ಕತ್ತಿದ್ದೋರ್ಗೆ ಹಾಸ್ಕೊಟ್ಟಂಗಾಯ್ತು ಇದು ಅಂದ ಪಟೇಲಪ್ಪ. ಆ ವಯ್ಯ ಹೈಟೆಕ್ ಸ್ಲಂನಲ್ಲಿ ಮಲ್ಗೈತೆ, ನಮ್ಮ ಯಡ್ಡಿ ಗಾಂಧಿ ನಗರ ಸ್ಲಂನಲ್ಲಿ ಹೋಗಿ ನಿಮ್ಗೇನೇನ್ ಆಗ್ಬೇಕ್ ಹೇಳಿ, ನೆಕ್‌ಸ್ಟ್ ನಾನೇ ಸಿಎಂ ಆಗೋದು, ಆಗ ಎಲ್ಲ ಮಾಡ್ಕೊಡ್ತಿನಿ ಅಂತ ಚೀಟಿ ಇಸ್ಕಂಡ್ ಬಂದೈತೆ. ಕ್ಯಾತಮಾರನಹಳ್ಳಿ ಸ್ಲಂನಲ್ಲಿ ಮಲ್ಗಿದ್ದ ಶೋಭಾ ಮೇಡಂಗೆ ತಿಗ್ಣೆ ಕಚ್ತೋ ಏನೋ ರಾತ್ರೆಲ್ಲ ಶಾನೆ ಒದ್ದಾಡಿದ್ರಂತೆ. ವತ್ತಾರೆ ಹೊತ್ತೆ ಮೈಕೈಯೆಲ್ಲ ನೋವಾಗಿ ಇನ್ನೊಂದ್ ವಾರ ನಾನ್ ಯಾವ್ ಕಾರ್ಯಕ್ರಮಕ್ಕೂ ಬರಂಗ್ಲಿಲ್ಲ ಅಂತ ಕಾರ್ ಹತ್ತಿದ್ರಂತೆ. ಕಾರ್ ಯಾಕೋ ಕೇರಳ್‌ದ್ ಕಡೆ ಹೋಯ್ತು ಅಂತಿದ್ರು ನೋಡ್ದೋರು ಅಂದ ಸೀನ. ಹೂಂ ಕನ್ ಬುಡ್ಲಾ, ಇನ್ನೇನು ದಿನ ಒಳ್ಳೊಳ್ಳೆ ಹಾಸ್ಗೆ ಮ್ಯಾಲ್ ಮಲ್ಗಿದ್ ಮಂದಿಗೆ ಹೆಂಗ್ಲಾ ನಿದ್ದೆ ಹತ್ತದೆ. ಅದ್ರಲ್ಲೂ ಜಾಗ ಬ್ಯಾರೆ ಹೊಸ್ದು. ಹಿಂಗಾಗಿ, ಹಂಗಾಗಿರ್ಬೇಕ್ ಬುಡು.

ಹೋಗ್ಲಿ ಇದ್ರಿಂದ ಏನಾರ ಬಿಜೆಪಿಗೆ ಓಟ್ ಬೀಳ್ತವಾ ಅಂದ ಪಟೇಲಪ್ಪ. ಎಲ್ಲಿ ಬೀಳ್ತಾವೆ ಹೇಳು, ದೂರದಿಂದ ನೋಡೋ ನಮ್ಗೇ ಅವ್ರು ಮಾಡದ್ ನಾಟ್ಕ ಅಂತ ಗೊತ್ತಾಯ್ತದೆ. ಇನ್ನ ಅವ್ರು ಮಲ್ಗೋ ಜಾಗ್ದಲ್ಲೇ  ಇದ್ದೋರಿಗ್ ಗೊತ್ತಾಗಲ್ವೆ. ಇಂಥ ಆಟ್ಗೊಳ್ನೆಲ್ಲ ಅವ್ರು ಪಾಪ ಎಪ್ಪತ್ತೊರ್ಷದಿಂದ್ ಎಷ್ಟು ನೋಡಿಲ್ಲ. ಯಾವಾನಾರ ಉದ್ಧಾರ ಮಾಡವ್ನಾ? ಇದೆಲ್ಲ ಗೊತ್ತಿರೋ ಅವ್ರು ಮಾಡ್ವಾಗ್ ಮಾಡ್ತಾರೆ ಕಣ್ ಬಾ ಅಂದ ಸೀನ. ಏನೋಪ್ಪ ಎಲೆಕ್ಸನ್ ಹತ್ರ ಬಂದ್ರು ಸಾಕು, ನಮ್ಮ ಹಳ್ಳಿಲಿ ಬ್ಯಾಸ್ಗೆ ಟೈಮಲ್ಲಿ ಊರೂರಲ್ಲೂ ಶುರುವಚ್ಕತ್ತಿದ್ರಲ್ಲ ಹಂಗೆ ನಾಟುಕಗೋಳ ಶುರುವಚ್ಕತ್ತಾರೆ. ಅದನ್ನ ನೋಡೋಕೆ ಮತ್ತೇ ಜನ್ರಿಗ್ ತೋರ‌್ಸಕ್ಕೆ ಮೀಡಿಯಾದವ್ರೂ ಸ್ಲಂನಲ್ಲೇ ಮಲಗ್ಬೇಕಾದ್ ಪರಿಸ್ಥಿತಿ ಬಂದದೆ. ಆದ್ರೆ, ಸತ್ಯ ಜನಕ್ಕೂ ಗೊತ್ತು, ಮೀಡಿಯಾದವ್ರಿಗೂ ಗೊತ್ತು.

ಏನ್ಮಾಡ್ತಿಯಾ, ಹೇಳಂಗಿಲ್ಲ-ಬಿಡಂಗಿಲ್ಲ. ‘ಬಾಯ್ಬುಟ್ರೆ ಬಣ್ಗೇಡು’ ಅಂದವ್ನೇ ಪಕ್ಕದೂರ್‌ಗೆ ಹೋಗ್ ಬತ್ತೀನಿ ಇರ್ಲಾ ಅಂತ ಹೊಂಟ ಪಟೇಲಪ್ಪ. ನಾನೇನೋ ವಯ್ಸು ಅತ್ತೆ ಮನೆಗೋಗಿದ್ದೆ. ನೀನೆತ್ತಗೊಂಟ್ಯಪ್ಪ ವಾಸ್ತವ್ಯ ಮಾಡಕ್ಕೆ? ಯಾವ್ದಾರ ಬ್ರಾಂಚ್ ಆಫೀಸ್ ಐತಾ ಹೆಂಗೆ? ತಡಿ ದೊಡವ್ವಂಗ್ ಹೇಳ್ತಿನಿ ಅಂದ ಸೀನ. ಲೇ, ಮೂದೇವಿ ಮುಂಡೆಗಂಡ, ಆ ಗೂಡೇಮಾರನಹಳ್ಳಿ ಗಡಾರಿ ಗಿಡ್ನುಡ್ಗ ದುಡ್ಡಿಸ್ಕೊಂಡು ಎರಡ್ ವರ್ಷ ಆಗದೆ. ಇವತ್ತು ಕೊಡ್ತೀನಿ ಅಂತೇಳವ್ನೆ. ಅದಕ್ಕೋಯ್ತಾ ಇವ್ನಿ. ಹಂಗೇನಾರಾ ನಿಮ್ ದೊಡವ್ವಂಗೂ ನಂಗೂ ತಂದಾಕ್ಬುಟ್ಟಿಯಾ ಕಳ್ ನನ್ಮಗನೆ ಅಂತ ಪಂಚೆ ಮ್ಯಾಕ್ ಎತ್ಕೊಂಡ್ ಪಂಚಾಯಿತಿ ಕಟ್ಟೆ ಇಳಿದ್ ಹೊಂಟ ಪಟೇಲಪ್ಪ.

Leave a Reply

Your email address will not be published. Required fields are marked *

14 − two =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top