ಅಪ್ಪ ನೆಟ್ಟ ಆಲದಮರಕ್ಕೆ ನೇಣು ಹಾಕಿಕೊಳ್ಳಿ, ಆದರೆ ಏಕೆಂದು ತಿಳಿದುಕೊಳ್ಳಿ!

Posted In : ಕ್ಷಣಹೊತ್ತು ಅಣಿ ಮುತ್ತು

ದೂರದ ಮಲೇಶಿಯಾದಲ್ಲಿ ಒಬ್ಬ ಬೌದ್ಧ ಧರ್ಮದ ಗುರುಗಳಿದ್ದಾರೆ. ಅವರ ಹೆಸರು ಡಾ.ಧಮ್ಮಾನಂದ ನಾಯಕ ಮಹಾಥೇರ. ಬೌದ್ಧ ಧರ್ಮದ ಪರಿಚಯ ಮಾಡಿಕೊಡುವ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ವೈ ವರಿ’, ‘ಯೂ ಅಂಡ್ ಯುವರ ಪ್ರಾಬ್ಲೆಮ್ಸ್’, ‘ಹ್ಯೂಮನ್ ಲೈಫ್ ಅಂಡ್ ಪ್ರಾಬ್ಲೆಮ್ಸ್’ ಮುಂತಾದವು ಅವರ ಜನಪ್ರಿಯ ಪುಸ್ತಕಗಳು. ಅವರು ಸಿಗಲೋವ ಸೂತ್ತದ ಬಗೆಗಿನ ಗ್ರಂಥ ವೊಂದರಲ್ಲಿ ಬುದ್ಧ ಭಗವಾನರ ಬದುಕಿನಲ್ಲಿ ಸಂಭವಿಸಿದ ವಿಚಿತ್ರ ಪ್ರಸಂಗದ ಬಗ್ಗೆ ಬರೆದಿದ್ದಾರೆ.

ಒಮ್ಮೆ ಬುದ್ಧ ಭಗವಾನರು ಒಂದೂರಿನ ಧರ್ಮಛತ್ರದ ಹೊರಗಡೆ ಕುಳಿತಿದ್ದರು. ಕೊಂಚ ದೂರದಲ್ಲಿದ್ದ ಮನೆಯೊಳಗಿನಿಂದ ಯುವಕನೊಬ್ಬ ಹೊರಗೆ ಬಂದ. ಆಗಷ್ಟೇ ಸ್ನಾನ ಮಾಡಿ ಬಂದಿರಬೇಕು. ತಲೆಗೂದಲು, ಮೈಮೇಲಿನ ಬಟ್ಟೆಗಳೆಲ್ಲ ನೀರಿನಿಂದ ತೊಟ್ಟಿಕ್ಕುತ್ತಿದ್ದವು. ಆತ ಮೈಯಲ್ಲಿಯೇ ಪೂರ್ವಕ್ಕೆ ತಿರುಗಿ ಸಾಷ್ಟಾಂಗ ನಮಸ್ಕಾರ ಮಾಡಿದ. ನಂತರ ಪಶ್ಚಿಮ, ಉತ್ತರ ಮತ್ತು ದಕ್ಷಿಣ ದಿಕ್ಕುಗಳಿಗೂ ಸಾಷ್ಟಾಂಗ ನಮಸ್ಕಾರ ಮಾಡಿದ. ಆನಂತರ ಆಕಾಶ, ಭೂಮಿಗೂ ಸಾಷ್ಟಾಂಗ ನಮಸ್ಕಾರಗಳನ್ನು ಮಾಡಿದ. ಎಲ್ಲವನ್ನೂ ಯಾಂತ್ರಿಕವಾಗಿ ಮಾಡಿ ನಿಂತುಕೊಂಡ.

ಇವೆಲ್ಲವನ್ನೂ ಗಮನಿಸುತ್ತಿದ್ದ ಬುದ್ಧ ಭಗವಾನರು ಆತನನ್ನು ಕರೆದು ನೀವೀಗ ಆರು ದಿಕ್ಕುಗಳಿಗೂ ನಮಸ್ಕರಿಸುವುದನ್ನು ನಾನು ಗಮನಿಸಿದೆ. ಒಳ್ಳೆಯ ಸಂಪ್ರದಾಯವನ್ನು ಪಾಲಿಸುತ್ತಿದ್ದೀರಿ. ಬಹಳ ಸಂತೋಷ. ಇದನ್ನೇಕೆ ಪಾಲಿಸುತ್ತಿದ್ದೀರಿ? ಎಂದು ಕೇಳಿದರು. ಯುವಕ ಬೇಸರದ ದನಿಯಲ್ಲಿ ಸಂಪ್ರದಾಯವೋ ಏನೋ? ನಮ್ಮ ತಂದೆಯವರು ಸಾಯುವ ಮುನ್ನ ನನಗೆ ಈ ಸಂಪ್ರದಾಯ ವನ್ನು ಒಪ್ಪಿಸಿ ಹೋಗಿದ್ದಾರೆ. ನನಗೆ ಅದರ ಅರ್ಥವೂ ಗೊತ್ತಿಲ್ಲ. ಆದರೆ ಅವರಿಗೆ ಮಾತನ್ನು ಕೊಟ್ಟಿದ್ದೇನಾದದ್ದರಿಂದ ಆಚರಿಸಿಕೊಂಡು ಬರುತ್ತಿದ್ದೇನೆ. ನೀವು ಸಜ್ಜನರು. ನಾನು ಮಾಡುವುದನ್ನು ಗಮನಿಸಿ, ನನ್ನನ್ನು ಕರೆದು ಅದರ ಬಗ್ಗೆ ಕೇಳಿದಿರಿ. ಆದರೆ ಕೆಲವರು ನನ್ನನ್ನು ಅಪ್ಪ ನೆಟ್ಟ ಮರಕ್ಕೆ ನೇಣು ಹಾಕಿಕೊಳ್ಳುವವನು ಎಂದು ಅಪಹಾಸ್ಯ ಮಾಡುತ್ತಾರೆ ಎಂದು ಹೇಳಿ ಕೊಂಡ.

ಆಗ ಬುದ್ಧ ಭಗವಾನರು ನಿಮ್ಮ ತಂದೆಯವರು ಸಂಪ್ರದಾಯವನ್ನು ಹಾಕಿಕೊಟ್ಟು ಹೋಗಿದ್ದಾರೆ. ಆದರೆ ಅದರ ಅರ್ಥವನ್ನು ನಿಮಗೆ ತಿಳಿಸಿಕೊಡಬೇಕಿತ್ತು. ನೀವು ನಮಸ್ಕಾರ ಮಾಡುವ ಆರು ದಿಕ್ಕುಗಳು ಸೂಚಿಸುವ ತತ್ವಗಳು ನಮ್ಮ ಕಣ್ಣಿಗೆ ಕಾಣುವಂತ ಹವು! ಪೂರ್ವ-ದಿಕ್ಕು ನಮ್ಮನ್ನು ಜಗತ್ತಿಗೆ ಕರೆದುಕೊಂಡು ಬಂದ ತಾಯಿ-ತಂದೆಯರನ್ನು ಸೂಚಿಸುತ್ತದೆ. ಹಾಗೆಯೇ ಪಶ್ಚಿಮ-ದಿಕ್ಕು ನಾವು ಬೆಳೆದು ದೊಡ್ಡವರಾದ ಮೇಲೆ ನಮ್ಮ ಬದುಕಿನಲ್ಲಿ ನಮ್ಮೊಂದಿಗಿರುವ ನಮ್ಮ ಹೆಂಡತಿ-ಮಕ್ಕಳನ್ನೂ ಸೂಚಿಸುತ್ತದೆ. ದಕ್ಷಿಣ-ದಿಕ್ಕು ನಮಗೆ ಪಾಠ ಕಲಿಸುವ ಉಪಾಧ್ಯಾಯರುಗಳನ್ನು ಸೂಚಿಸುತ್ತದೆಯಾದರೆ, ಉತ್ತರ-ದಿಕ್ಕು ನಮ್ಮ ಗೆಳೆಯರನ್ನೂ, ಸಂಗಾತಿಗಳನ್ನೂ ಸೂಚಿಸುತ್ತದೆ. ಹಾಗಾಗಿ ನಮಸ್ಕರಿಸುತ್ತೇವೆ.

ನಮ್ಮ ಪಾದದ ಕೆಳಗಿರುವ ಆದರೆ ನಮ್ಮನ್ನು ಹೊತ್ತಿರುವ ಭೂಮಿಯು ನಮ್ಮ ಕೆಳಗಿದೆ. ಅದು ನಮ್ಮ ಬದುಕಿನಲ್ಲಿ ನಮ್ಮ ಸೇವೆ ಮಾಡುವ ಅಥವಾ ನಮ್ಮೊಂದಿಗೆ ದುಡಿಯುವ ಕೆಲಸಗಾರರನ್ನು ಸೂಚಿಸುತ್ತದೆ. ಭೂಮಿಗೆ ನಮಸ್ಕರಿಸುವುದೆಂದರೆ ನಮಗಾಗಿ ದುಡಿಯುವವರಿಗೆ, ಸಹೋದ್ಯೋಗಿಗಳಿಗೆ, ಗೌರವವನ್ನು ತೋರಿಸುವುದು. ಕೊನೆಯದಾಗಿ ನಮ್ಮನ್ನು ಉನ್ನತ ಯೋಚನೆಗಳತ್ತ ಕೊಂಡೊಯ್ಯುವ ನಮ್ಮ ಧಾರ್ಮಿಕ ಗುರುಗಳು ನಮಗಿಂತ ಎತ್ತರದ ಆಕಾಶದಲ್ಲಿದ್ದಾರೆ. ಆಕಾಶಕ್ಕೆ ನಮಸ್ಕರಿಸುವುದೆಂದರೆ ಅಂತಹ ಗುರುಗಳಿಗೆ ನಮಸ್ಕರಿಸಿ ಗೌರವ ಸಲ್ಲಿಸುತ್ತಿದ್ದೇವೆ ಎಂದರ್ಥ ಎಂದು ತಿಳಿಹೇಳಿದರಂತೆ. ಪ್ರತಿದಿನ ಮಾಡುತ್ತಿದ್ದ ಸಾಂಪ್ರ ದಾಯಿಕ ಕಾರ್ಯದ ಹಿಂದಿರುವ ಅರ್ಥವನ್ನು ತಿಳಿದುಕೊಂಡ ಯುವಕನ ಮುಖ ಜ್ಞಾನದ ಬೆಳಕಿನಲ್ಲಿ ಹೊಳೆಯತೊಡಗಿತಂತೆ!

ನಾವೀಗ ಪೂಜ್ಯ ಧಮ್ಮಾನಂದ ನಾಯಕರಿಗೆ ಧನ್ಯವಾದಗಳನ್ನು ಸಲ್ಲಿಸಬಹುದು. ನಾವೂ ದಿನನಿತ್ಯ ಆಚರಿಸುವ ಅನೇಕ ಧಾ ರ್ಮಿಕ ಕ್ರಿಯೆಗಳಿಗೆ ಅರ್ಥ ಕಂಡುಕೊಳ್ಳಬಹುದು! ನಮ್ಮ ಮಕ್ಕಳಿಗೆ ಮಾಡಿರೆಂದು ಒತ್ತಾಯಪಡಿಸುವ ಧಾರ್ಮಿಕ ಕ್ರಿಯೆಗಳ ಅರ್ಥವನ್ನು ತಿಳಿಸಿಕೊಟ್ಟರೆ, ಅಪ್ಪ ನೆಟ್ಟ ಆಲದಮರಕ್ಕೆ ನೇಣು ಹಾಕಿಕೊಳ್ಳುವ ಭಾವನೆ ಅವರಿಗೆ ಬರುವುದಿಲ್ಲ ಅಲ್ಲವೇ?

Leave a Reply

Your email address will not be published. Required fields are marked *

4 × 5 =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

Thursday, 26.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ಏಕಾದಶಿ, ಗುರುವಾರ, ನಿತ್ಯನಕ್ಷತ್ರ-ಹುಬ್ಬಾ, ಕರಣ-ಬವ.

ರಾಹುಕಾಲಗುಳಿಕಕಾಲಯಮಗಂಡಕಾಲ
1.30-3.00 9.00-10.30 6.00-7.30

Read More

 

Thursday, 26.04.2018

ಶ್ರೀವಿಲಂಬಿ, ಉತ್ತರಾಯಣ, ವಸಂತಋತು, ವೈಶಾಖಮಾಸ, ಶುಕ್ಲಪಕ್ಷ, ಏಕಾದಶಿ, ಗುರುವಾರ, ನಿತ್ಯನಕ್ಷತ್ರ-ಹುಬ್ಬಾ, ಕರಣ-ಬವ.

ರಾಹುಕಾಲಗುಳಿಕಕಾಲಯಮಗಂಡಕಾಲ
1.30-3.00 9.00-10.30 6.00-7.30

Read More

Back To Top