About Us Advertise with us Be a Reporter E-Paper

ಅಂಕಣಗಳು

ಅಸಾಧಾರಣ ಶ್ರಮವೇ ಸಾಮಾನ್ಯರೂ ಗುರಿ ತಲುಪುವ ಗುಟ್ಟು!

ನಮಸ್ಕಾರ. ನಾನು ಡಾ. ಅಮೃತಾ. ವೈದ್ಯಕೀಯ ಓದಿದರೂ ಒಬ್ಬ ಐಪಿಎಸ್ ಅಧಿಕಾರಿ ತರಬೇತಿಗೊಳ್ಳುತ್ತಿದ್ದೇನೆ. ಐದೂವರೆ ವರ್ಷದ ಮಗ ಇದ್ದಾನೆ. ಐಪಿಎಸ್‌ಗೆ ಸೆಲೆಕ್‌ಟ್ ಆಗುವ ಮುಂಚೆ ನಾನು ವೈದ್ಯಕೀಯ ಕಾಲೇಜೊಂದರಲ್ಲಿ ಪೆಥಾಲಜಿಯ ಅಸೋಸಿಯೇಟ್ ಪ್ರೊಫೆಸರ್ ಆಗಿದ್ದೆ. ಸದ್ಯ, ನಾನು ತರಬೇತಿಯಲ್ಲಿರುವ ಎಎಸ್‌ಪಿ…ನನ್ನ ಸಹ ಭಾಷಣಕಾರರು ಈ ವೇದಿಕೆಯಲ್ಲಿ ಅನೇಕ ಹೊಸ ಹೊಸ ವಿಚಾರಗಳನ್ನುತಿಳಿಸಿದ್ದಾರೆ. ಇತರರಲ್ಲಿ, ಸಮಾಜದಲ್ಲಿ ಅವು ಒಂದು ಧನಾತ್ಮಕ ಬದಲಾವಣೆ ತರುವಂಥವಾಗಿವೆ. ನನ್ನ ಸಾಧನೆ ಇವುಗಳ ಮುಂದೆ ಅಷ್ಟೇನೂ ಹಿರಿದಾಗಿರದಿದ್ದರೂ, ಖಂಡಿತ ಅದಕ್ಕೆ ಸಂಬಂಧಿಸಿದ ನನ್ನ ಕೆಲವು ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಯಸುತ್ತೇನೆ.

ನಮ್ಮೆಲ್ಲರದೂ ಜೀವನ, ಸಾಮಾನ್ಯ ಸಾಧನೆ. ಎಲ್ಲರೂ ವಂಶವಾಹಿಗಳಲ್ಲಿ ಅಸಾಧಾರಣ ಪ್ರತಿಭೆ ಹೊತ್ತು ಬಂದಿರುವುದಿಲ್ಲ. ಆದರೆ ಕಠಿಣ ಪರಿಶ್ರಮದಿಂದ ಅಗತ್ಯವಾಗಿ ಅದನ್ನು ದೊಡ್ಡದಾಗಿಸಬಹುದು ಎಂಬುದು ನನ್ನ ನಂಬಿಕೆ. ಸಣ್ಣವಳಿದ್ದಾಗ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಒಂದು ಧಾರಾವಾಹಿ ನನ್ನನ್ನು ಬಹಳ ಸೆಳೆದಿತ್ತು. ಅದರ ಮುಖ್ಯಪಾತ್ರವಾದ ‘ಕಲ್ಯಾಣಿ ಸಿಂಗ್’ ಒಬ್ಬ ಐಪಿಎಸ್ ಅಧಿಕಾರಿ. ಒಂದು ಸಂದರ್ಶನದಲ್ಲಿ ಆಕೆಯನ್ನು ‘ಜೀವನದಲ್ಲಿ ಏನು ಮಾಡಬೇಕೆಂದಿರುವೆ?’ ಎಂದು ಕೇಳಲಾಗುತ್ತದೆ. ‘ಮುಂದೊಂದು ದಿನ ಈ ಮೇಜಿನಾಚೆ ಇರುವ ಸ್ಥಾನಗಳಲ್ಲಿ ಕೂರಬಯಸುತ್ತೇನೆ’ ಎಂಬುದು ನೀಡುವ ಚುರುಕು ಉತ್ತರ. ಈಗಲೂ ಕಿವಿಗಳಲ್ಲಿ ಪ್ರತಿಧ್ವನಿಸುವ ಆ ಉತ್ತರ ನನಗೆ ಬಹಳ ಸ್ಫೂರ್ತಿದಾಯಕವಾಗಿತ್ತು.

ಆದರೆ ಕಾಲ ಸರಿದಂತೆ ಅದು ಹೇಗೋ ಮಸುಕಾಯಿತೆನ್ನಿ. ಎಲ್ಲ ಕೆಳ ಮಧ್ಯಮ ವರ್ಗದ ಕುಟುಂಬಗಳು ಮಾಡುವಂತೆ ನನಗೂ ಎಂಬಿಬಿಎಸ್ ಆನಂತರ ಎಂಡಿ ಪದವಿ ಪಡೆದುಕೊಳ್ಳುವಂತೆ ಮಾರ್ಗದರ್ಶನ ಮಾಡಿದರು. ಅಷ್ಟು ಮಾಡಿ ತೃಪ್ತಳಾಗಿ ಕೂತಿದ್ದೆ. ಹಾಗೆ ಅದಕ್ಕೂ ಬಹಳ ಕಷ್ಟಪಟ್ಟಿದ್ದೆ. ವೈದ್ಯಕೀಯ ಪದವಿಯನ್ನು ಯಾರೂ ಹರಿವಾಣದಲ್ಲಿಟ್ಟು ನನಗೆ ಕೊಟ್ಟಿರಲಿಲ್ಲ. ಕುಟುಂಬದ ಮೊದಲ ಡಾಕ್ಟರ್, ಅದೂ ವೈದ್ಯೆಯಾದ ಹೆಗ್ಗಳಿಕೆ ನನ್ನದು. ಅದರಿಂದ ಗಳಿಸಿದ ವಿಶ್ವಾಸದಿಂದ ಔದ್ಯೋಗಿಕವಾಗಿ ಉತ್ತಮ ಹುದ್ದೆ ಗಳಿಸಿಕೊಂಡೆ. ಇದೇ ವೇಳೆಗೆ ನನ್ನ ಮದುವೆಯೂ ಆದ್ದರಿಂದ ನಾನು ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕಿ ಹಾಗೂ ಗೃಹಿಣಿ ಎರಡೂ ಪಾತ್ರಗಳನ್ನು ನಿರ್ವಹಿಸಲಾರಂಭಿಸಿದೆ.

ಒಬ್ಬ ಸಾಂಪ್ರದಾಯಿಕ ಭಾರತೀಯ ಮಹಿಳೆಗೆ ಒಪ್ಪುವ ರೀತಿಯಲ್ಲಿ ಬದುಕು ಸುಸೂತ್ರವಾಗಿ ಸಾಗಿತ್ತು. ಅತ್ತೆ-ಮಾವನಿಗೆ ವೈದ್ಯೆ ಸೊಸೆ ದೊರೆತ ಬಗ್ಗೆ ಹೆಮ್ಮೆ ಇತ್ತು. ಮತ್ತು ಈ ಮಧ್ಯೆ ‘ಸಿವಿಲ್ ಸರ್ವಿಸಸ್’ ಎಂಬುದು ಯಾರೋ ಅನ್ಯರಿಗಾಗಿ ಬಿಟ್ಟದ್ದು ಭಾವನೆ. ಆದರೆ ಮೂರು ವರ್ಷದ ಹಿಂದೆ ನನ್ನ ತಮ್ಮ ಆಡಳಿತ ಸೇವೆ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿ ಐಪಿಎಸ್‌ಗೆ ಸೇರ್ಪಡೆಯಾದ. ತನ್ನದೇ ಹಾದಿ ಸೃಷ್ಟಿಸಿಕೊಂಡು ಗುರಿ ತಲುಪಿದ ಅವನು ನಾನೂ ಅದರಲ್ಲಿ ನಡೆಯಲಿ ಎಂದು ಆಸೆಪಟ್ಟ. ನನ್ನಲ್ಲಿದ್ದ ಆಕಾಂಕ್ಷೆಯ ಜ್ವಾಲೆಗೆ ಗಾಳಿ ಊದಿ ಮರೆತುಹೋಗಿದ್ದ ಕನಸುಗಳನ್ನು ನೆನಪಿಸಿದ. ಮೊದಲಿಗೆ ನನಗೆ ಇಷ್ಟವಿರಲಿಲ್ಲ. ಒಂದು ನೋಬೆಲ್ ಪ್ರೊಫೆಷನ್ ಎಂದು ಕರೆಯಲಾಗುವ ವೈದ್ಯೆಯಾಗಿ, ಒಳ್ಳೆ ಸಂಪಾದನೆ ಹೊಂದಿ ಜೀವನ ಸುಖವಾಗಿ ಸಾಗಿಸುತ್ತಿದ್ದುದು, ಸಮಾಜದಲ್ಲಿ ಗೌರವ ಗಳಿಸಿಕೊಂಡಿದ್ದುದೇ ಅಲ್ಲದೆ ನನ್ನ ಬದುಕಿನ 15 ವರ್ಷಗಳನ್ನು ಅದಕ್ಕಾಗಿ ತೆತ್ತಿದ್ದೆ. ಈ ವೇಳೆ ಒಬ್ಬ ಮಗ ಹುಟ್ಟಿದ್ದ. ಅವನು ನನ್ನ ಗಮನ ಅಗತ್ಯ ಇರುವ ಸಣ್ಣವ ಹಾಗೂ ಅದಿಲ್ಲದಿದ್ದರೆ ದೂರಬಲ್ಲಷ್ಟು ದೊಡ್ಡವನೂ ಆಗಿದ್ದ.

ಆದರೆ ನನ್ನ ಸಹೋದರನ ಒತ್ತಾಯ ಮುಂದುವರಿಯಿತು. ‘ ಒಂದು ಸಾರಿ ರೆಕ್ಕೆ ಬಿಚ್ಚು, ಹಾರಲು ಪ್ರಯತ್ನಿಸು’ ಎಂಬ ಆ ಹುರಿದುಂಬುವಿಕೆಯ ಮಧ್ಯೆಯೇ ಸದ್ಯ ನನ್ನ ಜೀವನದ ಆದ್ಯತೆಗಳು ಏನಾಗಬೇಕು ಎಂದು ಚಿಂತಿಸಿದೆ. ಖಂಡಿತ ಕುಟುಂಬವೇ ನನ್ನ ಪ್ರಪ್ರಥಮ ಆಯ್ಕೆ ಎಂಬುದು ಸ್ಪಷ್ಟವಾಯಿತು. ಆದರೂ ‘ನನ್ನ ವೈಯಕ್ತಿಕ ಅಭಿಲಾಶೆಗಳ ಕತೆ ಏನಾಗಬೇಕು?’ ಎಂಬುದೂ ಮನ ಕೊರೆಯುತ್ತಿತ್ತು. ಸಮಾಜಕ್ಕೆ ಏನಾದರೂ ಮರಳಿ ನೀಡಬೇಕೆನ್ನುವ ನನ್ನ ಹಂಬಲ ಕಳೆದುಹೋಗಿದೆಯೇ ಎಂದು ಪ್ರಶ್ನಿಸಿಕೊಂಡೆ. ಹೌದು ನನ್ನ ‘ಕಂಫರ್ಟ್ ರೆನ್’ನಿಂದ ಹೊರಬಂದು ಮತ್ತೇನಾದರೂ ಮಾಡುವಷ್ಟು ಧೈರ್ಯ ನನಗೆ ಇಲ್ಲದಾಗಿತ್ತು. ವಯಸ್ಸು, ವೃತ್ತಿ ಹಾಗೂ ನನ್ನ ಕುಟುಂಬ ಇದಕ್ಕೆ ಅಡೆತಡೆಗಳಾಗಿವೆಯೇ ಎಂಬ ವಿಚಾರ ಮೂಡಿದಾಗ, ‘ಇಲ್ಲ, ಹಾಗಾಗಕೂಡದು’ ಎಂದು ಯೋಚಿಸಿದೆ. ಎಡರು ಅವು ನನ್ನ ವಿಶೇಷ ಶಕ್ತಿಗಳಾಗಬೇಕು ಎಂಬುದು ಗಟ್ಟಿಯಾದ ಕೂಡಲೇ ನಾನು ಪರೀಕ್ಷೆ ತೆಗೆದುಕೊಳ್ಳಲು ತಯಾರಿ ನಡೆಸಿದೆ.

ಯುಪಿಎಸ್‌ಸಿ ಪರೀಕ್ಷೆಗಳಿಗಾಗಿ ನಾನು ಬಹಳ ಏನೂ ತಯಾರಿ ನಡೆಸಲಿಲ್ಲ. ವಾರದಲ್ಲಿ ಐದು ದಿನ, ಸರಾಸರಿ 12 ಗಂಟೆ ಅಧ್ಯಯನದಲ್ಲಿ ತೊಡಗಿಕೊಂಡೆ; ವಾರಾಂತ್ಯಕುಟುಂಬಕ್ಕೆ ಮೀಸಲು. ಇಲ್ಲಿ ಒಂದು ಘಟನೆಯನ್ನು ನಿಮಗೆ ಹೇಳಲೇಬೇಕು. ಒಂದು ವೀಕ್‌ಎಂಡ್ ಮನೆಗೆ ಹೋದಾಗ ನನ್ನ ಮಗ ಹಾಯಾಗಿ ಮಲಗಿ ನಿದ್ರಿಸುತ್ತಿದ್ದ. ಹಾಗೇ ಅವನ ಪಕ್ಕ ಉರುಳಿಕೊಂಡೆ. ಎಚ್ಚರಿಕೆಯಾದ ಮೇಲೆ ಅಳುತ್ತಾ ಓಡಿಹೋದ; ‘ಯಾರೋ ಅಪರಿಚಿತ ಆಂಟಿ ನನ್ನ ಹಾಸಿಗೆಯಲ್ಲಿ ಮಲಗಿದ್ದಾರೆ’ ಎಂದು ದೂರಿದ. ನಾನು ಅವನ ತಾಯಿ ಎಂದು ಗೊತ್ತುಮಾಡಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಂಡ. ಎಂಥಾ ಅನುಭವ ನೋಡಿ, ಇದರಿಂದ ಆದ ಒಂದು ಲಾಭವೆಂದರೆ, ತಯಾರಿ ವೇಳೆ ಯಾವಾಗಲಾದರೂ ನನಗೆ ಬೇಸರವೆನಿಸಿದರೆ, ಸಾಕಪ್ಪಾ ಎಂದು ಸುಸ್ತಾದರೆ, ಅಂದು ಆದ ಅನುಭವ ಮೆಲುಕು ಹಾಕುತ್ತಿದ್ದೆ. ಕುಟುಂಬಕ್ಕೆ ನೀಡಬೇಕಾದ ಸಮಯದಿಂದ ಕದ್ದು ನನ್ನ ಅಧ್ಯಯನ ಮಾಡುತ್ತಿದ್ದೇನಾದ್ದರಿಂದ ಅದರ ಅತ್ಯುತ್ತಮ ಉಪಯೋಗ ಆಗಬೇಕು ಮನಸ್ಸು ಸಂಕಲ್ಪಿಸುತ್ತಿತ್ತು.

ಸಿವಿಲ್ ಸರ್ವಿಸಸ್ ಪರೀಕ್ಷೆಗಳ ಫಲಿತಾಂಶ ಪ್ರಕಟವಾದಾಗ ದಿನಕ್ಕೆ 12 ಗಂಟೆ ಓದಿದ್ದು ಖಂಡಿತ ಫಲ ನೀಡಿತು. ನನ್ನ ಹೆಸರು ತೇರ್ಗಡೆಯಾದವರ ಪಟ್ಟಿಯಲ್ಲಿತ್ತು. ಮುಂದಿನ ಭಾಗವಾಗಿ ಹೈದರಾಬಾದ್‌ನ ‘ನ್ಯಾಶನಲ್ ಪೊಲೀಸ್ ಅಕಾಡೆಮಿ’ಯಲ್ಲಿ ತರಬೇತಿ ಪಡೆದುಕೊಳ್ಳಲು ಹೋದಾಗ ನನಗೆ 33 ವರ್ಷ. ಆದರೆ ಕಳೆದ 16-17 ವರ್ಷಗಳಲ್ಲಿ ದೈಹಿಕ ಚಟುವಟಿಕೆಗಳಿಂದ ನಾನು ದೂರ ಇದ್ದೆ. ನಿಮ್ಮಲ್ಲಿ ಕೆಲವರಿಗಾದರೂ ಎನ್‌ಪಿಎ ನಡೆಸುವ ಈ ‘ಭಯಾನಕ’ ಹೊರಾಂಗಣ ಚಟುವಟಿಕೆಗಳ ಬಗ್ಗೆ ಗೊತ್ತಿರಬಹುದು. ಕಠಿಣ ತರಬೇತಿ ಹೊಂದಬಲ್ಲೆನೇ ಎಂಬ ಕುರಿತು ನನಗೇ ವಿಪರೀತ ಅಳುಕಿತ್ತು. ಪ್ರತಿ ಸಾರಿ ಬಯಲಿನಲ್ಲಿ ಕಸರತ್ತು ಮಾಡಿ ಬಂದಾಗಲೂ ಅದು ಅಭ್ಯಾಸವಿಲ್ಲದ ನನ್ನ ವಯಸ್ಸಾದ ದೇಹ ನೋವಿನಿಂದ ಚೀರಿಡುತ್ತಿತ್ತು. ಒಂದು ಸಾರಿಯಂತೂ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಹಿಪ್‌ಜಾಯಿಂಟ್‌ನಲ್ಲಿ ಅಸಾಧ್ಯ ನೋವುಂಟಾಗಿ ಕಾಲು ಎತ್ತಿಡುವುದು, ಮಗ್ಗುಲು ಬದಲಿಸುವುದು ಹರ ಸಾಹಸವಾಯಿತು.

ಆದರೆ ನಾನು ಓಡುವುದನ್ನು ಮಾತ್ರ ನಿಲ್ಲಿಸಲಿಲ್ಲ. ಸ್ನೇಹಿತರ, ದಳದ ಮುಖಂಡನ ಒತ್ತಾಸೆ, ಉತ್ತೇಜನಗಳಿಂದ ಓಡಿಯೇ ಓಡಿದೆ. ಒಂದೇ ವ್ಯತ್ಯಾಸವೆಂದರೆ ದಿನಕ್ಕೆ ನನ್ನ ನೋವಿನ ತೀವ್ರತೆಗೆ ಅನುಗುಣವಾಗಿ ನಾನು ಸೇವಿಸುತ್ತಿದ್ದ ‘ಪೇಯ್‌ನ್ ಕಿಲ್ಲರ್’ ಮಾತ್ರೆಯ ಡೋಸೇಜೂ ಹೆಚ್ಚುತ್ತಿತ್ತು. ಏನೇ ಆದರೂ ನೋವು ಕಡಿಮೆಯಾಗಲಿಲ್ಲ. ಕಡೆಗೆ ‘ಎಕ್‌ಸ್ ರೇ’ ಪರೀಕ್ಷೆ ಮಾಡಿಸಿದಾಗ ಪೆಲ್ವಿಕ್ ಭಾಗದ ಮೂಳೆ ಮುರಿತ ಉಂಟಾಗಿತ್ತು. ಆದರೆ ಆ ದಿನಗಳಲ್ಲಿ ನಾನು 16 ಕಿ.ಮೀ. ‘ಕ್ರಾಸ್ ಕಂಟ್ರಿ’, 21 ಕಿ.ಮೀ. ಮ್ಯಾರಥಾನ್, 40 ಕಿ.ಮೀ. ‘ರೂಟ್‌ಮಾರ್ಚ್’ಳನ್ನು ಮಾಡಿದ್ದೆ, 10-15 ಕೆ.ಜಿ. ಭಾರ ಬೆನ್ನ ಮೇಲೆ ಹೊತ್ತು ಉತ್ತಮ ಸಮಯದಲ್ಲೇ ಮುಟ್ಟಿದ್ದೆ ಎಂದು ಇಂದು, ಇಲ್ಲಿ ನಿಂತು ಹೇಳಲು ಹೆಮ್ಮೆಯಾಗುತ್ತದೆ.

ಎನ್‌ಪಿಎ ಅಲ್ಲಿ ಇನ್ನೂ ತೀವ್ರ ಬಗೆಯ ಕಸರತ್ತುಗಳಿದ್ದವು. ಪರೀಕ್ಷೆಯ ಭಾಗವಾಗಿ, 20 ಅಡಿ ಎತ್ತರವನ್ನು ಹಗ್ಗದ ಸಹಾಯದಿಂದ ಏರಬೇಕಿತ್ತು. ಎಲ್ಲರೂ ಮಾಡುತ್ತಾರಲ್ಲವೇ, ಇದೇನು ಮಹಾ ಎಂದು ಮೊದಲಿಗೆ ಅನ್ನಿಸಿತ್ತು. ಆದರೆ ಆ ಹಗ್ಗವನ್ನು ಹಿಡಿದು ಹತ್ತುವುದು ಹಾಗಿರಲಿ, ಸರಿಯಾಗಿ ಹಿಡಿಯಲೂ ನನಗೆ ಸಾಧ್ಯವಾಗಲಿಲ್ಲ. ನಾನು ಮತ್ತೆ, ಮತ್ತೆ ಪ್ರಯತ್ನಿಸಿದೆ. ನಿದ್ದೆಯಲ್ಲಿಯೂ ಅದನ್ನೇ ಕನಸುತ್ತಿದ್ದೆ. ಗುರಿ ಮುಟ್ಟದೇ ಇರಲು ಹೇಗೆ ಎಂದು ಪದೇಪದೆ ನನ್ನನ್ನು ನಾನು ಕೇಳಿಕೊಳ್ಳುತ್ತಿದ್ದೆ. ಆದರೆ ಹಲವು ತಿಂಗಳು ಶ್ರಮ ಹಾಕಿದ್ದರೂ, ಪರೀಕ್ಷೆಯ ದಿನ ನನ್ನಿಂದ ಅದು ಸಾಧ್ಯವಾಗಲಿಲ್ಲ. ಫಲಿತಾಂಶದಿಂದ ಎದೆಗುಂದದೆ ಮತ್ತೂ ಪ್ರಯತ್ನ ಮುಂದುವರಿಸಿ, ಕಡೆಗೂ ಅದೇ ದಿನ ಹಗ್ಗದ ತುಟ್ಟ ತುದಿ ತಲುಪಿದೆ.

ತರಬೇತಿಯಲ್ಲಿ ಪಾಸಾಗಿ ಹೊರಬರುವಾಗ ನನ್ನನ್ನು ‘ಅತ್ಯುತ್ತಮ ಮಹಿಳಾ ಹೊರಾಂಗಣ ಕಸರತ್ತು ವಿಭಾಗದ ಅತ್ಯುತ್ತಮ ಮಹಿಳಾ ಪ್ರೊಬೇಶನರ್, ಬೆಸ್‌ಟ್ ಫೀಮೇಲ್ ಆಲ್‌ರೌಂಡರ್ ಹಾಗೂ ಬ್ಯಾಚ್‌ನ ಎರಡನೇ ಅತ್ಯುತ್ತಮ ಪ್ರೊಬೇಶನರ್’ ಎಂದು ಘೋಷಿಸಲಾಯಿತು. ಸಾಧಾರಣ ಅರ್ಹತೆಗಳುಳ್ಳ ನನ್ನ ವಿಶೇಷ ಆಸ್ತಿ ಎಂದರೆ ನನ್ನ ಎತ್ತರ. ಯಾವುದನ್ನು ಶಾಲೆಯ ಸಹಪಾಠಿಗಳು ಗೇಲಿ ಮಾಡಿದ್ದರೋ, ಇಷ್ಟು ಎತ್ತರವಿದ್ದರೆ ಯೋಗ್ಯ ವರ ಸಿಗುವುದು ಕಷ್ಟ ಎಂದು ಪಾಲಕರು ಚಿಂತೆಗೊಳಗಾಗಿದ್ದರೋ, ಅದೇ ನನಗೆ ವರದಾನವಾಯಿತು. ಇಂದು ಯೂನಿಫಾರ್ಮ್ ಧರಿಸಿ, ಎತ್ತರವಾಗಿ ನಿಲ್ಲುವುದು ಗರ್ವವೆನಿಸುತ್ತದೆ.

ಒಬ್ಬ ವೈದ್ಯೆ, ಐಪಿಎಸ್ ಆಫೀಸರ್ ಆದಾಗ ಜನ ನೂರೆಂಟು ಪ್ರಶ್ನೆ ಕೇಳುವುದು ಸಹಜ. ‘ಮೊದಲು ಡಾಕ್ಟರ್ ಆಗಿದ್ದಿರಿ, ಈಗ ಐಪಿಎಸ್…ಹೊಸ ಹುದ್ದೆ ಹೇಗನಿಸುತ್ತದೆ’ ಎಂದು ಜನ ಕುತೂಹಲದಿಂದ ಪ್ರಶ್ನಿಸುತ್ತಾರೆ. ಎರಡರ ನಡುವೆ ಅಂಥಾ ವ್ಯತ್ಯಾಸವೇನೂ ಇಲ್ಲ ಎಂದು ನನ್ನ ಭಾವನೆ. ಹಾಗೆ ಎರಡರಲ್ಲೂ ಸಾಕಷ್ಟು ಸಾಮ್ಯವಿದೆ ಎಂದೂ ಹೇಳಬಹುದು. ಎರಡೂ ಕೆಡುಕಿನ ಮೂಲೋತ್ಪಾಟನೆಗೆ ಪ್ರಯತ್ನಿಸುತ್ತವೆ. ವೈದ್ಯರು ದೇಹದಿಂದ ಕಾಯಿಲೆ ಎಂಬ ಪೀಡೆ ಕಿತ್ತುಹಾಕಿದರೆ, ಪೊಲೀಸರು ಸಾಮಾಜಿಕ ಪೀಡೆಗಳ ನಿರ್ಮೂಲನೆಗೆ ಪ್ರಯತ್ನಿಸುತ್ತಾರೆ. ಇಬ್ಬರೂ ನೊಂದವರಿಗೆ ಸಹಾಯ ಹಸ್ತ ಚಾಚುತ್ತಾರೆ. ಎರಡೂ ಉದ್ಯೋಗಗಳಲ್ಲಿ ಅಧಿಕ ಕೆಲಸ, ಅನಿಶ್ಚಿತ ಅವಧಿ, ಇದ್ದೇಇದೆ. ಹಬ್ಬ, ಸಂಭ್ರಮಾಚರಣೆಗೆ ಇದ್ದುದ್ದರಲ್ಲಿ ವೈದ್ಯ ವೃತ್ತಿಯೇ ಆದರೆ ಪೊಲೀಸ್ ಇಲಾಖೆಯಲ್ಲಿಯಾದರೋ ಕಿರಿ, ಹಿರಿ ಹುದ್ದೆ ಎನ್ನದೆ ಎಲ್ಲರೂ ವರ್ಷವಿಡೀ, ಹಬ್ಬ, ರಜಾ ದಿನಗಳಲ್ಲಿಯೂ ಕರ್ತವ್ಯ ನಿರತರಾಗಿರಬೇಕು. ಸಾರ್ವಜನಿಕರು ಈ ಎಲ್ಲವನ್ನೂ ಶಾಂತಿಯಿಂದ, ಸಂತಸದಿಂದ ಆಚರಿಸಲು ನೆರವಾಗಬೇಕು. ದುರದೃಷ್ಟವೆಂದರೆ, ಈಚಿನ ದಿನಗಳಲ್ಲಿ ಈ ಎರಡೂ ವೃತ್ತಿಬಾಂಧವರನ್ನು ಜನ ಹಿಡಿದು, ಹೊಡೆಯುವುದು ಆರಂಭವಾಗಿದೆ.

ಈ ಅವಕಾಶದಲ್ಲಿ ನಾನು ಒಂದು ವಿಚಾರ ಸ್ಪಷ್ಟಪಡಿಸಲು ಬಯಸುವೆ. ಪೊಲೀಸರಾಗಲೀ, ವೈದ್ಯರಾಗಲೀ ಸಮಾಜಕ್ಕೆ ಸೇವೆ ಸಲ್ಲಿಸುವ ಔದ್ಯೋಗಿಕ ಜರೂರು ಹೊಂದಿರುವಂತೆ, ಒಂದು ಸಾಮಾನ್ಯವಾದ ಸಾಂಸಾರಿಕ ನಡೆಸಲೂ ಬಯಸುತ್ತಾರೆ, ಆ ಅವಶ್ಯಕತೆ ಅವರಿಗಿದೆ ಎಂದು ಜನ ಅರ್ಥಮಾಡಿಕೊಳ್ಳಬೇಕು. ಬದುಕಿಗೆ ಒಂದು ಸಂಪೂರ್ಣತೆ, ಸಾರ್ಥಕ್ಯ ಸಿಗುವುದು ಅದರ ಎಲ್ಲ ಅಂಶಗಳಿಗೂ ನ್ಯಾಯ ಸಲ್ಲಿಸಿದಾಗಲೇ. ಹಾಗೆಯೇ ಯಾವುದೋ ಒಂದು ಅಸಾಧಾರಣ ಪ್ರಯತ್ನಕ್ಕಿಂತ, ಅನೇಕ ಸರ್ವೇಸಾಮಾನ್ಯ ಯತ್ನಗಳ ಮೊತ್ತ ಅಧಿಕವಾಗಿರುತ್ತದೆ. ಅಂದರೆ, ಸಾಮಾನ್ಯರು ಕೈಗೊಳ್ಳುವ ಅತ್ಯುತ್ತಮ ಕೆಲಸಗಳು ಉದಾತ್ತ ಉದ್ದೇಶಗಳಿಂದ ಕೂಡಿದ್ದು, ಅಮೋಘ ಪರಿಣಾಮ ಬೀರುತ್ತವೆ.

ಓಟದ ಸ್ಪರ್ಧೆಗೆ ಬಿದ್ದ ಆಮೆ-ಮೊಲದ ಕತೆ ಯಾರಿಗೆ ಗೊತ್ತಿಲ್ಲ? ಅತಿ ವಿಶ್ವಾಸದಿಂದ ಸೋತುಹೋದ ಎಲ್ಲರೂ ಇರುವುದಿಲ್ಲ. ಮೊಲ ತನ್ನ ಗುರಿ ಸಾಧಿಸುವಲ್ಲಿ ನಿಸ್ಪೃಹವಾಗಿದ್ದರೆ, ರೂಢಿಯ ಕತೆಗೊಂದು ವೈವಿಧ್ಯ ದೊರೆಯಬಹುದು! ಹಾಗೆಯೇ ತನ್ನ ಅಸಾಧಾರಣ ಸಂಕಲ್ಪದಿಂದ ತನಗಿಂತ ಬಲಶಾಲಿ ಮೊಲವನ್ನು ಆಮೆ ಹಿಂದಿಕ್ಕುವುದಂತೂ ಇದ್ದೇಇದೆ!

ಪರಿಚಯ: ಅಮೃತಾ ದುಹಾನ್

ವೈದ್ಯೆಯಿಂದ ಆರಂಭಿಸಿ, ವೈದ್ಯಕೀಯ ಕಾಲೇಜಿನಲ್ಲಿ ಸಹಾಯಕ ಪೆಥಾಲಜಿ ಪ್ರಾಧ್ಯಾಪಕಿಯಾಗಿ ಮುಂದುವರಿದು, ಕಡೆಗೆ ಐಪಿಎಸ್ ಆಫೀಸರ್ ಆದ ಅಮೃತಾ ಕತೆ ಸ್ಫೂರ್ತಿದಾಯಕ ಎಂಬುದರಲ್ಲಿ ಅನುಮಾನವೇ ಇಲ್ಲ. ಹರಿಯಾಣ ಮೂಲದ ಅವರು ಮೂವತ್ಮೂರರ ಹರೆಯದಲ್ಲಿ ಐಪಿಎಸ್‌ಗೆ ನಡೆಸಿದ್ದೂ ಅಪರೂಪದ ವಿವರ. ಕಠಿಣ ಪರಿಶ್ರಮದಿಂದ ಎಲ್ಲ ಹಿಂಜರಿಕೆ, ದೈಹಿಕ ದೌರ್ಬಲ್ಯ ಗೆದ್ದ ಅಮೃತಾ, ತಮ್ಮೆಲ್ಲ ಸಾಮರ್ಥ್ಯ ಪಣಕ್ಕಿಟ್ಟು ಐಪಿಎಸ್ ತರಬೇತಿಯಲ್ಲಿ ಅತ್ಯುತ್ತಮ ಮಹಿಳಾ ಪ್ರೊಬೇಶನರ್ ಆಗಿ ಹೊರಹೊಮ್ಮಿದರು. ಇಲ್ಲಿ ‘ಲಿಂಗ ತಾರತಮ್ಯ’ದ ಮಾತೇ ಇಲ್ಲ. ಮಹಿಳೆಯರಾಗಲೀ, ಪುರುಷರಾಗಲೀ ಸಮಾನ ಪರಿಶ್ರಮದ ಕಸರತ್ತುಗಳನ್ನು ಪೂರೈಸಲೇಬೇಕು ಎನ್ನುತ್ತಾರೆ, ಈ ಒಂದಲ್ಲ, ಎರಡು ಕ್ಷೇತ್ರಗಳಲ್ಲಿ ಮಿಂಚಿದ ಮಹಿಳೆ.

Tags

Related Articles

Leave a Reply

Your email address will not be published. Required fields are marked *

Language
Close