About Us Advertise with us Be a Reporter E-Paper

ಅಂಕಣಗಳು

ಪುಣ್ಯಗಳಿಕೆ ಕಷ್ಟ! ಪುಣ್ಯಹಾನಿ ಸುಲಭ!

- ಎಸ್‌. ಷಡಕ್ಷರಿ

ಪುಣ್ಯ ಗಳಿಸುವ ಕಷ್ಟದ ಕೆಲಸ ಅಥವಾ ಪುಣ್ಯ ಕಳೆದುಕೊಳ್ಳುವ ಸುಲಭದ ಕೆಲಸ ಬಗೆಗಿನ ಪ್ರಸಂಗವೊಂದು ಇಲ್ಲಿದೆ. ಕುತೂಹಲಕಾರಿಯಾಗಿದೆ! ಬಹಳ ಹಿಂದೆ ಒಬ್ಬ ಸಾಧಕರಿದ್ದರಂತೆ. ವನವಾಸಿಯಾಗಿದ್ದು ಐವತ್ತು ವರ್ಷ ಸತತ ಜಪ-ತಪ-ಉಪವಾಸ ಮುಂತಾದ ಕಠಿಣ ಸಾಧನೆಗಳಲ್ಲಿ ತೊಡಗಿಸಿಕೊಂಡಿದ್ದರಂತೆ. ಇದರಿಂದಾಗಿ ತಮ್ಮಷ್ಟು ಸಾಧನೆ ಮಾಡಿದವರು ಯಾರೂ ಇರಲಿಕ್ಕಿಲ್ಲವೆಂದು ಅವರಿಗೇ ಅನಿಸತೊಡಗಿತಂತೆ. ಇನ್ನೇನು, ಈಗಲೋ ಆಗಲೋ, ದೇವಲೋಕದಿಂದ ಪುಷ್ಪಕ ಬಂದು ತಮ್ಮನ್ನು ದೇವಲೋಕಕ್ಕೆ ಕರೆದೊಯ್ಯುತ್ತದೆಂಬ ಭ್ರಮೆಯಲ್ಲಿದ್ದರಂತೆ.

ಒಮ್ಮೆ ಅವರು ಕಾಡಿನ ಮೂಲಕ ಹೋಗುತ್ತಿದ್ದರು. ದೂರದಲ್ಲಿ ವಿಶಾಲವಾದ ಒಂದು ಸರೋವರವಿತ್ತು. ಅದರ ಪಕ್ಕದಲ್ಲಿ ಒಬ್ಬಾತ ತೂರಾಡುತ್ತ ನಡೆದಾಡುತ್ತಿರುವಂತೆ ಕಂಡಿತು. ಆತನೊಂದಿಗೆ ಒಬ್ಬ ಹೆಂಗಸು ಇದ್ದರು. ಆಕೆ ಹೂಜಿಯಿಂದ ಏನನ್ನೋ ಬಗ್ಗಿಸಿ ಆತನಿಗೆ ಕುಡಿಯಲು ಕೂಡುತ್ತಿದ್ದರು. ಇದನ್ನು ನೋಡಿದ ಸಾಧಕರು ತಕ್ಷಣ ಯೋಚನೆ ಮಾಡತೊಡಗಿದರು. ’ತೂರಾಡುತ್ತಿರುವ ಆತ ಕುಡುಕನಿರಬೇಕು. ಹೆಂಗಸು ಆತನ ಗೆಳತಿಯಿರಬೇಕು. ಆಕೆ ಹೆಂಡವನ್ನು ಕುಡಿಸುತ್ತಿರಬೇಕು. ಕಾಡಿನ ಏಕಾಂತದಲ್ಲಿ ಅವರಿಬ್ಬರೇ ಅವರು ನಡತೆಗೆಟ್ಟವರೇ ಇರಬೇಕು. ಛೇ! ನನ್ನ ಸ್ವರ್ಗಾರೋಹಣದ ಸಮಯದಲ್ಲಿ ನನಗೇಕೆ ಇಂತಹ ಕುಡುಕ, ನಡೆತೆಗೆಟ್ಟ ವ್ಯಕ್ತಿಗಳ ದರ್ಶನವಾಯಿತು?’ ಎಂದೆಲ್ಲ ಯೋಚನೆಗಳು ಬಂದವು. ಅಸಹ್ಯವೆನಿಸಿತು.
ಅಷ್ಟರಲ್ಲಿ ಸರೋವರದ ಮೇಲೆ ಬಿರುಗಾಳಿ ಬೀಳಿಸಲಾರಂಭಿಸಿತು. ಸರೋವರದ ಮಧ್ಯದಲ್ಲಿ ಒಂದು ಪುಟ್ಟ ದೋಣಿ ಸಾಗುತ್ತಿತ್ತು. ಅದು ಬಿರುಗಾಳಿಯ ಹೊಡೆತಕ್ಕೆ ಹೊಯ್ದಾಡುತ್ತಿತ್ತು.

ನೋಡನೋಡುತ್ತಿದ್ದಂತೆ ಆರೇಳು ಜನರಿದ್ದ ದೋಣಿ ಬಿರುಗಾಳಿಗೆ ಬುಡಮೇಲಾಗಿ ಮುಳುಗಿಬಿಟ್ಟಿತು. ಸರೋವರದ ನೀರಿನಲ್ಲಿ ಸಿಕ್ಕಿಹಾಕಿಕೊಂಡ ಜನ ಕಾಪಾಡಿರೆಂದು ಕಿರುಚಾಡುತ್ತಿದ್ದರು. ಈಜು ಬರುತ್ತಿದ್ದರೂ ಸಾಧಕರಿಗೆ ನೀರಿಗೆ ಅವರನ್ನು ಬದುಕಿಸಬೇಕೆನ್ನುವಷ್ಟು ಧೈರ್ಯ ಬರಲಿಲ್ಲ. ಸರೋವರದ ಆಳ ಗೊತ್ತಿರಲಿಲ್ಲ. ಬಿರುಗಾಳಿಯ ರಭಸ ಗೊತ್ತಾಗುತ್ತಿತ್ತು. ನೀರಿಗೆ ಬಿದ್ದ ಜನ ಸಂಪೂರ್ಣ ಅಪರಿಚಿತರು. ಇನ್ನೇನು ಸ್ವರ್ಗಾರೋಹಣದ ನಿರೀಕ್ಷೆಯಲ್ಲಿರುವ ತಾನು ನೀರಿಗೆ ಧುಮುಕಿ ಪ್ರಾಣಾಪಾಯ ತಂದುಕೊಳ್ಳುವುದು ಉಚಿತವಲ್ಲವೆನಿಸಿತು. ಸುಮ್ಮನೆ ನೋಡುತ್ತ ದೇವರನ್ನು ಪ್ರಾರ್ಥಿಸುತ್ತ ನಿಂತಿದ್ದರು. ಮತ್ತೇನೂ ಮಾಡಲಿಲ್ಲ. ಆದರೆ ಸಾಧಕರು ಯಾರನ್ನು ಕುಡುಕ. ನಡತೆಗೆಟ್ಟವನೆಂದು ತೀರ್ಮಾನಿಸಿದ್ದರೋ ಆ ವ್ಯಕ್ತಿ ನೀರಿಗೆ ಧುಮುಕಿಬಿಟ್ಟರು. ಮುಳುಗುತ್ತಿದ್ದ ಜನರನ್ನು ಕಷ್ಟಪಟ್ಟು ಒಬ್ಬೊಬ್ಬರನ್ನೇ ದಡಕ್ಕೆ ತಂದುಹಾಕುತ್ತಿದ್ದರು. ಆರೂ ಜನರ ಆತನಿಂದ ಉಳಿಯಿತು. ಅಷ್ಟರಲ್ಲಿ ಆತ ಸಂಪೂರ್ಣ ದಣಿದಿದ್ದರು.

ಆಗ ಇದ್ದಕ್ಕಿದ್ದಂತೆ ಉಜ್ವಲವಾದ ಬೆಳಕು ಮೂಡಿತು. ಆಗಸದಿಂದ ಪುಷ್ಪಕ ವಿಮಾನ ಬಂದಿಳಿಯಿತು. ಆ ಬೆಳಕಿನಲ್ಲಿ ನೋಡಿದಾಗ ಆ ಕುಡುಕ ಕುಡುಕನಂತೆ ಕಾಣಲಿಲ್ಲ. ಅನಾರೋಗ್ಯ ಪೀಡಿತನಾರಾಗಿದ್ದರು. ಆ ಹೆಂಗಸು ಯುವತಿಯಾಗಿರಲಿಲ್ಲ. ಆತನ ತಾಯಿಯಾಗಿದ್ದರು. ಆಕೆ ಬಗ್ಗಿಸಿ ಕೊಡುತ್ತಿದ್ದುದು ಹೆಂಡವಾಗಿರಲಿಲ್ಲ. ಗಂಜಿಯಾಗಿತ್ತು. ’ಛೇ! ನಾನು ತಪ್ಪಾಗಿ ಗ್ರಹಿಸಿದೆನಲ್ಲ ಎಂದು ಸಾಧಕರು ಪಶ್ಚಾತ್ತಾಪ ಪಡುತ್ತಿರುವಂತೆಯೇ, ವಿಮಾನದಿಂದ ದೇವದೂತರು ಬಂದಿಳಿದರು.

ಅವರು ಆ ತಾಯಿ-ಮಗನನ್ನು ವಿಮಾನಕ್ಕೇರಿಸಿಕೊಂಡು ಅವರು ಈ ಸಾಧಕರನ್ನು ಗಮನಿಸಲೂ ಇಲ್ಲ! ಸಾಧಕರೇ ದೇವದೂತರನ್ನು ’ನನ್ನದು ಐವತ್ತು ವರ್ಷಗಳ ಪುಣ್ಯಸಂಗ್ರಹ. ನನ್ನನ್ನು ದೇವಲೋಕಕ್ಕೆ ಕರೆದೊಯ್ಯುತ್ತಿಲ್ಲವಲ್ಲ ಏಕೆ?’ ಎಂದು ಕೇಳಿದಾಗ, ಅವರು ’ಈ ತಾಯಿಮಗನ ಬಗ್ಗೆ ಥಟ್ಟಂತ ಕೆಟ್ಟ ತೀರ್ಮಾನಕ್ಕೆ ಬಂದು ನಿಮ್ಮ ಪುಣ್ಯ ಕೊಂಚ ಕಡಿಮೆಯಾಗಿದೆ. ಈಗ ಮತ್ತಷ್ಟು ಸಾಧನೆ ಮಾಡಿ ಕಡಿಮೆಯಾಗಿರುವ ಪುಣ್ಯವನ್ನು ತುಂಬಿಸಿಕೊಳ್ಳಿ. ನಿಮಗಾಗಿ ಮತ್ತೊಂದು ವಿಮಾನ ಬಂದರೂ ಬರಬಹುದು’ ಎಂದು ಹೇಳಿ ಹೊರಟುಹೋದರು.

ಪ್ರಸಂಗ ಇಲ್ಲಿಗೆ ಮುಗಿಯಿತು. ಈಗ ನಾವು ಸಾಧಕರ ಬಗ್ಗೆ ಯೋಚಿಸಬಹುದು. ನಾವೂ ಬದುಕಿನಲ್ಲಿ ಇತರರನ್ನು ಕಂಡಾಗ ಥಟ್ಟಂತ ತೀರ್ಪು ಕೊಡುತ್ತೇವೆಯೇ? ನಮ್ಮ ಪುಣ್ಯವನ್ನು ಕಡಿಮೆ ಮಾಡಿಕೊಳ್ಳುತ್ತಾ ಹೋಗುತ್ತೇವೆಯೇ? ಹಾಗಾದರೆ ನಮ್ಮ ಪುಷ್ಪಕ ವಿಮಾನ ಬರುವುದು ತಡವಾಗಬಹುದಲ್ಲವೇ? ಅಥವಾ ಬಾರದೆಯೂ ಹೋಗಬಹುದಲ್ಲವೇ?

Tags

Related Articles

Leave a Reply

Your email address will not be published. Required fields are marked *

Language
Close