About Us Advertise with us Be a Reporter E-Paper

ಗುರು

ಹರಿದಾಸ ಚಕ್ರವರ್ತಿ ಮಧ್ವಾಚಾರ್ಯರು

* ಶಿಲ್ಪಾ ಕುಲಕರ್ಣಿ

ಪ್ರಥಮೋ ಹನುಮಾನ್ ನಾಮ ದ್ವಿತೀಯೋ ಭೀಮ ಏವಚ
ಪೂರ್ಣಪ್ರಜ್ಞ ತೃತೀಯಸ್ತು ಭಗವತ್ಕಾರ್ಯ ಸಾಧಕಃ
ತ್ರೇತಾಯುಗದಲ್ಲಿ ವಾಯುದೇವರು ಹನುಮಂತನ ಅವತಾರದಲ್ಲಿ ಶ್ರೀರಾಮನ ಭಂಟನಾಗಿ, ದ್ವಾಪರಯುಗದಲ್ಲಿ ಭೀಮಸೇನರಾಗಿ ದುರ್ಯೋಧನಾದಿಗಳನ್ನು ಸಂಹರಿಸಿ, ಶ್ರೀಕೃಷ್ಣನ ಆಪ್ತ ಸಖನಾಗಿ ಮತ್ತು ಕಲಿಯುಗದಲ್ಲಿ ಮಧ್ವಾಚಾರ್ಯರಾಗಿ ಜನಿಸಿ ಭಗವಂತನ ಸೇವೆ ಮಾಡಿದರೆಂದು ಪ್ರತೀತಿ.

ಸತ್ಯಲೋಕದಿಂದ ಮುಖ್ಯಪ್ರಾಣದೇವರು ಕಲಿಯುಗದಲ್ಲಿ ಅತ್ಯಂತ ಪವಿತ್ರವಾದ ಪಾಜಕ ಕ್ಷೇತ್ರದಲ್ಲಿ ಆಚಾರ್ಯ ಮಧ್ವರಾಗಿ ಅವತರಿಸಿದ್ದಾರೆಂದು ಶ್ರೀ ವಾದಿರಾಜರು ತಮ್ಮ ‘ತೀರ್ಥ ಪ್ರಬಂಧ’ದಲ್ಲಿ ಉಲ್ಲೇಖಿಸಿದ್ದಾರೆ. ವಾಸುದೇವನಾಗಿ ಉಡುಪಿಯ ಪಾಜಕ ಕ್ಷೇತ್ರದಲ್ಲಿ ಕ್ರಿ.ಶ 1238ರಲ್ಲಿ ಮಧ್ಯಗೇಹ ಭಟ್ಟ ಮತ್ತು ವೇದವತಿಗೆ ಮಗನಾಗಿ ಜನಿಸಿ ಸರ್ವಮೂಲ ಗ್ರಂಥಗಳ ಮೂಲಕ ದ್ವೈತ ಸಿದ್ಧಾಂತದ ಸ್ಥಾಪಕರಾಗಿ ಹರಿಸರ್ವೋತ್ತಮತ್ವದ ಪ್ರಚಾರಕರಾದರು. ಅಗಾಧ ಪಾಂಡಿತ್ಯ ಹೊಂದಿದ್ದ ವಾಸುದೇವ, ಹನ್ನೆರಡನೆಯ ವಯಸ್ಸಿನಲ್ಲಿಯೇ ವೇದಾಧ್ಯಯನ ಮುಗಿಸಿ ಗುರುಗಳಾದ ಅಚ್ಯುತಪ್ರೇಕ್ಷಕರಿಂದ ‘ಪೂರ್ಣಪ್ರಜ್ಞ’ ಎಂಬ ಸಾರ್ಥಕ ಹೆಸರಿನೊಂದಿಗೆ ಸನ್ಯಾಸ ದೀಕ್ಷೆ ಪಡೆದರು. ಹರಿದಾಸ ಪರಂಪರೆಯಲ್ಲಿ ಪ್ರಪ್ರಥಮರಾಗಿ ಭಗವಂತನ ಅನನ್ಯ ಭಕ್ತರೆನಿಸಿದ ಮಧ್ವರಿಗೆ ‘ಆನಂಧತೀರ್ಥ’ ಹಾಗೂ ಚಕ್ರವರ್ತಿ’ ಎಂಬ ಅಂಕಿತವುಂಟು.

ಆಚಾರ್ಯ ಮಧ್ವರು ದಕ್ಷಿಣ ಭಾರತದಲ್ಲಿ ಅನಂತಶಯನ, ಶ್ರೀರಂಗಂ ಮೊದಲಾದ ಕಡೆ ಪ್ರಯಾಣ ಬೆಳೆಸಿ ‘ಪ್ರಪಂಚವು
ಸತ್ಯ, ಹರಿಯೇ ಸರ್ವೋತ್ತಮ’ ತತ್ವಗಳನ್ನು ಪ್ರಚುರಗೊಳಿಸಿದರು. ಅನೇಕ ಪ್ರಸಿದ್ಧ ಪಂಡಿತರು ಆಚಾರ್ಯರೊಡನೆ ನಡೆದ ವಾದದಲ್ಲಿ ಸೋತು ಅವರ ಪಾಂಡಿತ್ಯಕ್ಕೆ ತಲೆಬಾಗಿ ಅವರ ಶಿಷ್ಯರಾಗಿ ಸನ್ಯಾಸ ಸ್ವೀಕರಿಸಿದರು. ಅದರಲ್ಲಿ ಪದ್ಮನಾಭ ತೀರ್ಥರು, ನರಹರಿತೀರ್ಥರು, ಮಾಧವ ತೀರ್ಥರು ಮತ್ತು ಅಕ್ಷೋಭ್ಯ ತೀರ್ಥರು ಪ್ರಮುಖರು. ಇವರಿಂದಲೇ ಹರಿದಾಸ ಪರಂಪರೆಯ ಸಾಹಿತ್ಯೋಪಾಸನೆ ಮುಂದುವರಿಯಿತು. ಮಧ್ವಾಚಾರ್ಯರು ಗೀತಾಭಾಷ್ಯ, ಬ್ರಹ್ಮಸೂತ್ರಭಾಷ್ಯ ಮುಂತಾದ ಗ್ರಂಥಗಳನ್ನು ತಮ್ಮ ಸಿದ್ಧಾಂತ ಸಮರ್ಥನೆಗೆಂದು ರಚಿಸಿದರು. ಹೀಗೆ ರಚಿಸಿದ ಮೂವತ್ತೇಳು ಗ್ರಂಥಗಳಿಗೆ ‘ಸರ್ವಮೂಲ’ ಗ್ರಂಥಗಳೆಂದು ಕರೆಯಲಾಗುತ್ತದೆ.

ಉತ್ತರಭಾರತದಲ್ಲಿ ದ್ವೈತ ಸಿದ್ಧಾಂತದ ಪ್ರಚಾರಕ್ಕಾಗಿ ಯಾತ್ರೆ ಕೈಗೊಂಡು ಬದರಿಕಾಶ್ರಮಕ್ಕೆ ಹೋಗಿ ವ್ಯಾಸ ಮಹರ್ಷಿಗಳನ್ನು ಕಂಡು ಅವರಿಗೆ ಗೀತೆಯ ಭಾಷ್ಯವನ್ನು ತೋರಿಸಿದರೆಂದು ಹೇಳಲಾಗುತ್ತದೆ. ಹೀಗೆ ಎರಡು ಬಾರಿ ಉತ್ತರಭಾರತ ಮತ್ತು ಬದರಿಗೆ ಯಾತ್ರೆ ಬೆಳೆಸಿ ಶುದ್ಧ ಭಕ್ತಿ ಪ್ರವಾಹವನ್ನು ಹರಿಸಿದರು. ಉಡುಪಿಯಲ್ಲಿ ಶ್ರೀ ಕೃಷ್ಣನ್ನು ಪ್ರತಿಷ್ಠಾಪಿಸಿ ಹರಿಭಕ್ತರ ಪ್ರಮುಖ ಅದರ ಪೂಜಾ ಕಾರ್ಯಕ್ಕಾಗಿ ಅಷ್ಟಮಠಗಳನ್ನು ಸ್ಥಾಪಿಸಿದರು. ಪ್ರಮುಖವಾಗಿ ತಮ್ಮ ‘ದ್ವಾದಶ ಸ್ತೋತ್ರ’ದ ಮೂಲಕ ಹರಿಭಕ್ತರಿಗೆ ಪ್ರೇರಣೆಯಾದರು.

ದಾಸಸಾಹಿತ್ಯದ ಮುಖ್ಯಕಾರಣ ಪುರುಷರಾದ ಶ್ರೀಪಾದರಾಜರು ಕನ್ನಡ ವಾಯುಸ್ತುತಿ ಎಂದೇ ಪ್ರಖ್ಯಾತವಾದ ವಾಯುದೇವರ ಮೂರು ಅವತಾರಗಳನ್ನು ಉಲ್ಲೇಖಿಸುವ ‘ಮಧ್ವನಾಮ’ ರಚಿಸಿದರು. ಇವರ ಪರಂಪರೆಯವರಾದ ಈಗಿರುವ ಮಂತ್ರಾಲಯದ ರಾಘವೇಂದ್ರ ಪ್ರಭುಗಳು ಮಧ್ವಮತದ ಪ್ರಚಾಕರಾದರು. ಕ್ರಿ.ಶ 1317ರಲ್ಲಿ ಒಬ್ಬರೇ ಬದರಿಕಾಶ್ರಮಕ್ಕೆ ಪ್ರಯಾಣ ಬೆಳೆಸಿದರು. ಈ ದಿನವನ್ನೇ ಇಂದಿಗೂ ವೈಷ್ಣವ ಸಂಪ್ರದಾಯದಲ್ಲಿ ಮಧ್ವನವಮಿ ಎಂದು ಆಚರಿಸುತ್ತಾರೆ. ಹೀಗೆ ಆರಂಭಗೊಂಡ ದ್ವೈತ ಸಿದ್ಧಾಂತದ ತತ್ವಗಳು ದಾಸಸಾಹಿತ್ಯಎಂಬ ಭಕ್ತಿಸಾಹಿತ್ಯದ ಮೂಲಕ ಅನೇಕ ಹರಿದಾಸ ಮತ್ತು ಹರಿಭಕ್ತೆಯರಿಂದ ಸುಧೀರ್ಘ ಪರಂಪರೆಯಾಗಿ ಬೆಳೆದು ಜನಸಾಮಾನ್ಯರಿಗೂ ತಲುಪುವಂತಾಯಿತು. ಸಾಧಕ ಪ್ರಪಂಚದಲ್ಲಿ ಮನುಷ್ಯರಿಗೆ ಉದ್ಧಾರ ಹಾದಿ ತೋರಲು ಕರುಣಾಮಯಿಯಾದ ಆಚಾರ್ಯರು ಗುರುಗಳಾಗಿ ಅವತರಿಸಿ ಬಂದಿರುವುದು ನಮ್ಮೆಲ್ಲರ ಸುದೈವ.

Tags

Related Articles

Leave a Reply

Your email address will not be published. Required fields are marked *

Language
Close