ವಿಶ್ವವಾಣಿ

ಹರಿಶ್ಚಂದ್ರ ಕಾವ್ಯ ಹಲಸಿನ ಹಣ್ಣಂತೆ ಬಿಡಿಸಿ ಹಂಚಿದರು!

ಅವರನ್ನು ನಾವೆಲ್ಲ ದಶಕಗಳ ಹಿಂದೆ ಬೆಂಗಳೂರು ದೂದರ್ಶನದಲ್ಲಿ ಕನ್ನಡ ವಾರ್ತಾವಾಚಕಿಯಾಗಿ ನೋಡಿದ್ದೆವು. ಕನ್ನಡತಾಯಿ ಭುವನೇಶ್ವರಿಯ ಮೆಚ್ಚಿನ ಮಗಳೋ ಎಂಬಂತಹ ಸುಂದರ ರೂಪ. ಹಿತಮಿತವೆನಿಸುವಷ್ಟೇ ಹಾಭಾವ. ಹನಿಜೇನಿನಂತಹ ಇನಿದನಿ. ಶುದ್ಧ ಕನ್ನಡದ ಅಸ್ಖಲಿತ ಸ್ಪಷ್ಟ ಉಚ್ಚಾರ. ತಾಂತ್ರಿಕ ಇತಿಮಿತಿಗಳ ನಡುವೆಯೂ  ಎಂದೆನಿಸುವಂತಿದ್ದ ಸರಳ ಗಂಭೀರ ವಾರ್ತಾಪ್ರಸ್ತುತಿ. ಈಗಿನ ಅಹರ್ನಿಶಿ ಸುದ್ದಿವಾಹಿನಿಗಳವರ ವಿಕೃತ ಭಾಷೆಯ ವಿಕಾರ ಸ್ವರದ ಅರಚಾಟದಂತೆ ಅಲ್ಲ. ಹದಿನೈದೇ ನಿಮಿಷಗಳ ವಾರ್ತೆಯಲ್ಲಿ ಆಯಾ ದಿನದ ಪ್ರಪಂಚದ ಆಗುಹೋಗುಗಳ ಪೈಕಿ ನಮಗೇನು ಮುಖ್ಯವೋ ಅದೆಲ್ಲವನ್ನೂ ಒಪ್ಪವಾಗಿ ಒಪ್ಪಿಸುತ್ತಾರೆಂದು ವಾರ್ತಾವಾಚಕರ ಬಗ್ಗೆ ಒಂಥರದ ಹೆಮ್ಮೆ, ಗೌರವ, ಆತ್ಮೀಯಭಾವ ಮೂಡುವಂತಿರುತ್ತಿತ್ತು. ಬಹುಶಃ ಈಗಲೂ ನೆನಪುಳಿದಿದೆಯೆಂದರೆ ಅಷ್ಟು ಪರಿಣಾಮಕಾರಿಯಾಗಿ ಅಚ್ಚೊತ್ತಿರುತ್ತಿತ್ತು ನಮ್ಮ ಮನಸ್ಸಿನಲ್ಲಿ ಅವರ ಛಾಪು.

ವನಮಾಲಾ ವಿಶ್ವನಾಥ. ಬಹುಶಃ ನಿಮ್ಮಲ್ಲಿ ಕೆಲವರಿಗಾದರೂ ಅವರ  ಗೊತ್ತಿರಬಹುದು, ಅವರು ಬೆಂಗಳೂರು ದೂರದರ್ಶನದಲ್ಲಿ ಕನ್ನಡ ವಾರ್ತೆ ಓದುತ್ತಿದ್ದ ದಿನಗಳ ನೆನಪಿರಬಹುದು. ಈಶ್ವರ ದೈತೋಟ, ಸಬೀಹಾ ಬಾನು, ಸರಸ್ವತಿ ವಟ್ಟಂ ಮುಂತಾದವರೂ ಅಷ್ಟೇ ಗ್ರೇಸ್‌ಫುಲ್ ಗಾಂಭೀರ್ಯದೊಂದಿಗೆ ಚಂದದಿಂದ ಕನ್ನಡ ವಾರ್ತೆ ಓದುತ್ತಿದ್ದ ಪ್ರತಿಭೆಗಳು. ಅವರೆಲ್ಲರ ಸಮಕಾಲೀನರೇ ವನಮಾಲಾ ವಿಶ್ವನಾಥ. ತೊಂಬತ್ತರ ದಶಕದ ಆರಂಭದಿಂದಲೇ ಕರ್ನಾಟಕದಿಂದ ಹೊರಗಿದ್ದ ನನಗೆ ಬೆಂಗಳೂರು ದೂರದರ್ಶನದ ವಾರ್ತೆ ನೋಡುವ ಅಭ್ಯಾಸ ಬಿಟ್ಟುಹೋಯ್ತು. ವಾರ್ತೆ ಓದುತ್ತಿದ್ದವರ ಹೆಸರು ಚಹರೆ ನೆನಪಿನಲ್ಲಿದ್ದವಾದರೂ ಅವರೆಲ್ಲ ಈಗೇನು ಮಾಡುತ್ತಿದ್ದಾರೆಂದು ಅಪ್‌ಟುಡೇಟ್  ನನ್ನಲ್ಲೇನೂ ಇರಲಿಲ್ಲ. ಸರಸ್ವತಿ ವಟ್ಟಂ ಅಮೆರಿಕ ದೇಶಕ್ಕೆ ವಲಸೆ ಬಂದು ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿ ಏಳೆಂಟು ವರ್ಷಗಳಿಂದೀಚೆಗೆ ನನಗೆ ಅಂಕಣದ ನಿಯಮಿತ ಓದುಗರಾಗಿ ಮತ್ತೆ ಪರಿಚಯವಾಗಿದ್ದಾರೆ, ಪ್ರತಿವಾರವೂ ಪ್ರತಿಕ್ರಿಯೆ ತಿಳಿಸುತ್ತ ಆತ್ಮೀಯ ಸ್ನೇಹಿತೆಯೇ ಆಗಿದ್ದಾರೆ ಎನ್ನುವುದನ್ನು ಬಿಟ್ಟರೆ ಮಿಕ್ಕವರ ಬಗ್ಗೆ ನನಗೇನೂ ಗೊತ್ತಿರಲಿಲ್ಲ.

ಹೀಗಿರಲು ಮೊನ್ನೆ ಕೆಲ ದಿನಗಳ ಹಿಂದೆ ಇಲ್ಲಿನ ನನ್ನ ಹಿತೈಷಿ ಹಿರಿಯ ಅಮೆರಿಕನ್ನಡಿಗ ಡಾ. ಮೈ. ಶ್ರೀ. ನಟರಾಜ ಅವರಿಂದ ಒಂದು ಇಮೇಲ್ ಬಂತು. ಆಗಸ್‌ಟ್  ಶನಿವಾರದಂದು ಅವರ ಮನೆಯಲ್ಲೊಂದು ಸಾಹಿತ್ಯ ಸಂಜೆ ಕಾರ್ಯಕ್ರಮವನ್ನು ಏರ್ಪಡಿಸಿದ್ದಾರೆಂದೂ, ಮೈಸೂರಿನಿಂದ ಬಂದಿರುವ ಡಾ. ವನಮಾಲಾ ವಿಶ್ವನಾಥ ಅವರಿಂದ ‘ಹರಿಶ್ಚಂದ್ರ ಕಾವ್ಯ’ವನ್ನು ಕುರಿತು ಒಂದು ಉಪನ್ಯಾಸವಿದೆಯೆಂದೂ ಅದರ ಒಕ್ಕಣೆ. ಜೊತೆಯಲ್ಲೇ ವನಮಾಲಾ ವಿಶ್ವನಾಥ ಅವರ ಕಿರುಪರಿಚಯವನ್ನೂ ಲಗತ್ತಿಸಿದ್ದರು. ಅದು ಹೀಗಿತ್ತು: ‘ಭಾಷಾಂತರ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರುವ, ಕಳೆದ ನಾಲ್ಕು ದಶಕಗಳಲ್ಲಿ ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಗಳಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್‌ಸ್, ರೀಜನಲ್ ಇನ್‌ಸ್ಟಿಟ್ಯೂಟ್ ಆಫ್ ಇಂಗ್ಲಿಷ್,  ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಿಭಾಗ, ಅಜೀಂ ಪ್ರೇಮ್‌ಜಿ ವಿದ್ಯಾಲಯ ಮುಂತಾದೆಡೆಗಳಲ್ಲಿ ಇಂಗ್ಲಿಷ್ ಭಾಷಾ ಬೋಧಕಿಯಾಗಿರುವ ಡಾ. ವನಮಾಲಾ ವಿಶ್ವನಾಥ ಅವರು ಸಾಹಿತ್ಯ ಅಕಾಡೆಮಿಯ ಗೌರವ ನಿರ್ದೇಶಕಿಯಾಗಿಯೂ, ರಾಷ್ಟ್ರೀಯ ಭಾಷಾಂತರ ಸಮಿತಿಯ ಸದಸ್ಯೆಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಸಾರಾ ಅಬೂಬಕರ್‌ರ ಕನ್ನಡ ಕಾದಂಬರಿಯೊಂದನ್ನು, ಪಿ. ಲಂಕೇಶರ ಸಣ್ಣಕತೆಗಳನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಜಿಡ್ಡು ಕೃಷ್ಣಮೂರ್ತಿಯವರ ಬರಹಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಅನಂತಮೂರ್ತಿಯವರ ‘ಸಂಸ್ಕಾರ’ ಕಾದಂಬರಿಯನ್ನು ಸ್ವೀಡಿಷ್ ಭಾಷೆಗೂ, ಟೊರ್ಗ್ನಿ ಲಿಂಡ್‌ಗ್ರೆನ್ ಅವರ ಸ್ವೀಡಿಷ್ ಭಾಷೆಯ ಕಾದಂಬರಿಯೊಂದನ್ನು  ಭಾಷಾಂತರಿಸಿದ್ದಾರೆ. ಗುಲ್ವಾಡಿ ವೆಂಕಟರಾಯರ ಇಂದಿರಾಬಾಯಿ ಕಾದಂಬರಿಯ ಇಂಗ್ಲಿಷ್ ಅನುವಾದವನ್ನೂ ವನಮಾಲಾ ಅವರು ಮಾಡಿದ್ದು ಸದ್ಯದಲ್ಲೇ ಆಕ್‌ಸ್ಫರ್ಡ್ ಯುನಿವರ್ಸಿಟಿ ಪ್ರೆಸ್‌ನಿಂದ ಪ್ರಕಾಶನಗೊಳ್ಳುವುದಿದೆ. ಅವೆಲ್ಲಕ್ಕಿಂತ ಮುಖ್ಯವಾಗಿ, ರಾಘವಾಂಕನ ಅತಿ ಪ್ರಖ್ಯಾತ ‘ಹರಿಶ್ಚಂದ್ರ ಕಾವ್ಯ’ವನ್ನು ಮೂರ್ತಿ ಕ್ಲಾಸಿಕಲ್ ಲೈಬ್ರರಿ ಆಫ್ ಇಂಡಿಯಾ ಸರಣಿಯಡಿಯಲ್ಲಿ ಹಾರ್ವರ್ಡ್ ಯುನಿವರ್ಸಿಟಿ ಪ್ರೆಸ್ ಪ್ರಕಾಶಕತ್ವದಲ್ಲಿ ‘ದ ಲೈಫ್ ಆಫ್ ಹರಿಶ್ಚಂದ್ರ’ ಎಂಬ ಇಂಗ್ಲಿಷ್ ಕೃತಿಯಾಗಿ ಪ್ರಕಟಿಸಿರುವುದು, ನಡುಗನ್ನಡ ಕಾಲದ ಸಾಹಿತ್ಯ ಕೃತಿಯೊಂದು ಇದೇ ಮೊದಲ ಬಾರಿಗೆ ಇಂಗ್ಲಿಷ್‌ಗೆ ತರ್ಜುಮೆಗೊಂಡದ್ದೆಂಬ  ಪಾತ್ರವಾಗಿದೆ; ವನಮಾಲಾರವರ ಸಾಧನೆಯ ಒಂದು ಮೈಲಿಗಲ್ಲೇ ಆಗಿದೆ.’

ಕಿರುಪರಿಚಯದಲ್ಲಿ ಉಲ್ಲೇಖಗೊಂಡ ವಿಚಾರಗಳಾವುವೂ ಕಿರಿದಲ್ಲ! ಆದರೆ ಅದನ್ನು ಓದುವವರೆಗೂ, ಬೆಂಗಳೂರು ದೂರದರ್ಶನದ ಕನ್ನಡ ವಾರ್ತಾವಾಚಕಿಯೆಂದಷ್ಟೇ ಗೊತ್ತಿದ್ದ ವನಮಾಲಾ ವಿಶ್ವನಾಥ ಇಷ್ಟೆಲ್ಲ ಸಾಧನೆಗಳನ್ನು ಮಾಡಿದ್ದಾರೆಂದು ನನಗೆ ಒಂಚೂರೂ ಅರಿವಿರಲಿಲ್ಲ. ಅದೇ ನೋಡಿ ವಿಪರ್ಯಾಸ! ಏನೇನೂ ಸಾಹಿತ್ಯಕೃಷಿ ಮಾಡದೆ ಲೇಖನಿ ತುಕ್ಕುಹಿಡಿದಿದ್ದರೂ ಯೇನ ಕೇನ ಪ್ರಕಾರೇಣ ಪ್ರಸಿದ್ಧ ಪುರುಷ (ಈಗ ಕೆಲ ದೊಡ್ಡಕುಂಕುಮ ಸ್ತ್ರೀಯರೂ ಈ ವಿಷಯದಲ್ಲಿ ಕಮ್ಮಿಯೇನಿಲ್ಲ) ಆಗಬಯಸುವವರಿಗೇ ಈಗಿನ ಮಾಧ್ಯಮಗಳು  ನೀಡುತ್ತವೆ. ಭಗವದ್ಗೀತೆಯನ್ನು ಸುಡಬೇಕೆನ್ನುವವರಿಗೆ, ಶ್ರೀರಾಮಚಂದ್ರನನ್ನು ದೂಷಿಸುವವರಿಗೆ, ಹರಪ್ಪ ಮೊಹೆಂಜೊದಾರೊ ಕನ್ನಡ ಮೂಲದ ಪದಗಳು ಎನ್ನುವ ಅಸಡ್ಡಾಳ ದುರ್ಬುದ್ಧಿ ಜೀವಿಗಳಿಗೆಲ್ಲ ಮುಖಪುಟದಲ್ಲಿ ಮಣೆ ಹಾಕುತ್ತವೆ. ಅಂಥವರ ವಿವಾದಾತ್ಮಕ ಹೇಳಿಕೆಗಳಿಂದಲೇ ಅವುಗಳದೂ ಬೇಳೆ ಬೇಯುವುದೆನ್ನಿ. ಆದರೆ ತಾದಾತ್ಮ್ಯದಿಂದ ನಿಜವಾದ ಸಾಹಿತ್ಯಸೇವೆ ಮಾಡುವ, ಕನ್ನಡದ ಶ್ರೇಷ್ಠ ಕೃತಿಗಳ ಸುಗಂಧವು ದೇಶ-ವಿದೇಶಗಳ ಸಾಹಿತ್ಯಪ್ರಿಯರಿಗೆ ಗೊತ್ತಾಗುವಂತೆ ಮಾಡುವ ವನಮಾಲಾರಂಥವರು ವನಸುಮವಾಗಿಯೇ ಇರುತ್ತಾರೆ.

ಡಾ. ಮೈ. ಶ್ರೀ. ನಟರಾಜರ ಮನೆಯಲ್ಲಿ ಈ ರೀತಿಯ ಸಾಹಿತ್ಯಸಂಜೆ ಕಾರ್ಯಕ್ರಮಗಳು ಆಗಾಗ  ಸ್ವತಃ ಅವರೂ ಒಬ್ಬ ಬಹುಮುಖ ಪ್ರತಿಭೆಯ ಸಾಹಿತಿ. ಕವಿತೆ, ಕಥೆ, ನಾಟಕ, ಪ್ರಬಂಧ, ಅಂಕಣ, ಅನುವಾದ ಇತ್ಯಾದಿ ಎಲ್ಲ ನಮೂನೆಗಳಲ್ಲಿ ಕೈಯಾಡಿಸಿ ಪಳಗಿರುವ ಸಾಹಿತ್ಯಕೃಷಿಕ. ಇಲ್ಲಿನ ‘ಕನ್ನಡ ಸಾಹಿತ್ಯ ರಂಗ’ದ ಅಧ್ವರ್ಯುಗಳಲ್ಲೊಬ್ಬರು. ಮೊನ್ನೆಯ ಕಾರ್ಯಕ್ರಮಕ್ಕೆ ಕನ್ನಡ ಸಾಹಿತ್ಯ ರಂಗದ ಸಹಭಾಗಿತ್ವವೂ ಇತ್ತು. ಆದರೆ ವನಮಾಲಾರವರಿಗೆ ಅಮೆರಿಕ ರಾಜಧಾನಿ ವಾಷಿಂಗ್ಟನ್‌ನ ನಂಟು ಬೇರೆಯದೇ ಇದೆ. ಇಲ್ಲಿ ನೆಲೆಸಿರುವ ಇನ್ನಿಬ್ಬರು ಸಜ್ಜನ ಕನ್ನಡಿಗರಾದ ವೆಂಕಟರಾಮ ಉಬ್ರಾಣಿ ಮತ್ತು ಜಯರಾಮ ಉಬ್ರಾಣಿ ಸಹೋದರರಿಗೆ  ಅತ್ತಿಗೆ. ಹಾಗೆ ಉಬ್ರಾಣಿ ಸಹೋದರರ ಮನೆಗಳಿಗೆ ಅಮೆರಿಕ ಪ್ರವಾಸದಲ್ಲಿ ಬಂದಿದ್ದ ವನಮಾಲಾರನ್ನು ವಿಶೇಷವಾಗಿ ಆಹ್ವಾನಿಸಿ ನಟರಾಜರ ಮನೆಯಲ್ಲಿ ಉಪನ್ಯಾಸ. ಕನ್ನಡದ ಕಂಪನ್ನು ಸವಿಯುವ ಸದಭಿರುಚಿಯುಳ್ಳ ಸಮಾನಮನಸ್ಕ ಐವತ್ತು-ಅರವತ್ತು ಜನರ ಪುಟ್ಟ ಸಭೆ. ಶ್ರಾವಣದ ಶನಿವಾರ ಸಂಜೆ ಪುರಾಣ ಪುಣ್ಯಕಥನ ಶ್ರವಣಕ್ಕೆ ಹೇಳಿಮಾಡಿಸಿದಂಥ ಸಮಯ. ವನಮಾಲಾರವರನ್ನು ಮುಖತಃ ಭೇಟಿಯಾದಂತೆಯೂ ಆಗುತ್ತದೆ, ಪ್ರತಿಭಾನ್ವಿತೆಯೊಬ್ಬರ ಪರಿಚಯ ಮಾಡಿಕೊಂಡಂತೆಯೂ ಆಗುತ್ತದೆ ಎಂದುಕೊಂಡು ಕಾರ್ಯಕ್ರಮಕ್ಕೆ ನಾನೂ ಹೊರಟೆ. ಮುಖ್ಯ ಆಕರ್ಷಣೆ ‘ಹರಿಶ್ಚಂದ್ರ ಕಾವ್ಯ’ದ ರಸಘಟ್ಟಿಗಳು ಸವಿಯಲಿಕ್ಕೆ  ಎನ್ನುವುದು. ಹಲಸಿನ ಹಣ್ಣನ್ನು ಬಿಡಿಸಿ, ಮುಳ್ಳು ಮೇಣಗಳನ್ನೆಲ್ಲ ತೆಗೆದು, ಸಿಹಿಸಿಹಿ ತೊಳೆಗಳನ್ನು ಕೈಗಿಟ್ಟರೆ ಹೇಗೋ ಹಾಗೆ, ನಾವೇ ಓದಿ ಅರ್ಥೈಸಿಕೊಳ್ಳಲು ಕಷ್ಟವಿರುವ ಹಳಗನ್ನಡ ಕಾವ್ಯವನ್ನು ಬಿಡಿಸಿ ವಿವರಿಸಿ ಹೇಳುವವರಿದ್ದಾರಾದರೆ ಅಂತಹ ಅವಕಾಶದಿಂದ ತಪ್ಪಿಸಿಕೊಳ್ಳುವೆನೇ?

ವನಮಾಲಾ ವಿಶ್ವನಾಥ ನಿರಾಸೆಗೊಳಿಸಲಿಲ್ಲ. ನಿರೀಕ್ಷೆಗೂ ಮೀರಿದ ಅದ್ಭುತ ರೀತಿಯಲ್ಲಿ ನಿರ್ವಹಿಸಿದರು. ಅವರದು ಈಗಲೂ ಅದೇ ಸುಶ್ರಾವ್ಯ ಧ್ವನಿ, ಅಷ್ಟೇ ಸುಸ್ಪಷ್ಟ ಉಚ್ಚಾರ. ಮತ್ತೆ, ರಾಘವಾಂಕನ ‘ಹರಿಶ್ಚಂದ್ರ ಕಾವ್ಯ’ದಂಥ ಮೇರು ಕೃತಿಯನ್ನು ಇಂಗ್ಲಿಷ್‌ಗೆ ಅನುವಾದ ಮಾಡುವುದೆಂದರೆ  ಸಂಗತಿಯಲ್ಲ! ಮೂರು ವರ್ಷಗಳ ಕಾಲ ಪ್ರತಿದಿನವೂ ಅದಕ್ಕೆಂದೇ ಸಮಯವನ್ನು ಮುಡಿಪಾಗಿಟ್ಟು ಸತತ ತಪಸ್ಸಿನಂತೆ ಛಲದಿಂದ ಮಾಡಿದ ಕೆಲಸವದು. ಅಂದೊಂದು ಮಹತ್ಕಾರ್ಯವನ್ನು ಸಾಧಿಸಿದ ಹೆಮ್ಮೆ ಅವರಲ್ಲಿದೆ. ಅದು ಜಂಬವಲ್ಲ ಬಿಗುಮಾವಲ್ಲ. ಕನ್ನಡ ಸಾಹಿತ್ಯದ ಶ್ರೀಮಂತಿಕೆ ಎಷ್ಟಿದೆಯೆಂದು ತಿಳಿಯಲು ಒಂದು ಸ್ಯಾಂಪಲ್ ಕನ್ನಡೇತರರಿಗೂ ಒಗುವಂತೆ ಮಾಡಿದ ವಿಶೇಷ ಕೃತಕೃತ್ಯತೆಯ ತೃಪ್ತಿ. ಅದು ವನಮಾಲಾರವರ ಮಾತಿನಲ್ಲೂ ಧ್ವನಿಸುತ್ತದೆ. ಆವತ್ತು ಕಾರ್ಯಕ್ರಮದಲ್ಲಿ ವನಮಾಲಾರವರ ಅತ್ತೆಯೂ ಇದ್ದರು. ತನ್ನ ಸೊೆಯನ್ನು ಕುರಿತು ಅವರಾಡಿದ ಅಭಿಮಾನದ ಮಾತುಗಳನ್ನು  ‘ಪ್ರಪಂಚದಲ್ಲಿ ಇಷ್ಟೊಂದು ಆದರ್ಶವಾದ ಅತ್ತೆ-ಸೊಸೆ ಜೋಡಿಯೂ ಇದ್ದಾರೆಯೆ!?’ ಎಂದು ಮೂಗಿನ ಮೇಲೆ ಬೆರಳಿಡುವ ಪರಿಸ್ಥಿತಿ.

ಇಂದ್ರನ ಸಭೆಯಲ್ಲಿ ವಿಶ್ವಾಮಿತ್ರ-ವಸಿಷ್ಠರ ಮಾತಿನ ಜಟಾಪಟಿಯೊಂದಿಗೆ ಆರಂಭವಾಗುವ ಕಥಾನಕವು ಹರಿಶ್ಚಂದ್ರನ ಸತ್ಯಸಂಧತೆ, ‘ಆನೆಯ ಮೇಲೆ ನಿಂತು ಕವಡೆ ಎಸೆದರೆ ಎಷ್ಟು ಎತ್ತರಕ್ಕೆ ಚಿಮ್ಮುವುದೋ ಅಷ್ಟೆತ್ತರದ ಸುವರ್ಣರಾಶಿ’ ಕೊಡಬೇಕೆಂದು ಹರಿಶ್ಚಂದ್ರನಲ್ಲಿ ವಿಶ್ವಾಮಿತ್ರನ ಬೇಡಿಕೆ, ವಿಶ್ವಾಮಿತ್ರ ಸೃಷ್ಟಿಯ ಹೊಲತಿಯರಿಂದ ಹರಿಶ್ಚಂದ್ರನಿಗೆ ತಮ್ಮನ್ನು ಮದುವೆಯಾಗುವಂತೆ ಆಮಿಷ, ಒತ್ತಾಯ, ಹರಿಶ್ಚಂದ್ರನಿಂದ ನಿರಾಕರಣೆ, ಆಮೇಲೆ ರಾಜ್ಯವನ್ನೇ ಕಳೆದುಕೊಳ್ಳುವ ಹರಿಶ್ಚಂದ್ರ, ವಿಶ್ವಾಮಿತ್ರನ  ಪೂರೈಸಲಿಕ್ಕಾಗಿ ಪಡಬಾರದ ಕಷ್ಟಗಳನ್ನೆಲ್ಲ ಅನುಭವಿಸುವುದು, ಹೆಂಡತಿ ಚಂದ್ರಮತಿ ಮತ್ತು ಮಗ ರೋಹಿತಾಶ್ವನನ್ನು ಕಾಶಿಯಲ್ಲಿ ಬ್ರಾಹ್ಮಣನೊಬ್ಬನಿಗೆ ಮಾರುವುದು, ವೀರಬಾಹುಕನಿಗೆ ತನ್ನನ್ನೇ ಮಾರಿಕೊಂಡು ಮಸಣದ ಕಾವಲುಗಾರನಾಗುವುದು, ಕಟ್ಟಿಗೆ ತರಲು ಕಾಡಿಗೆ ಹೋದ ರೋಹಿತಾಶ್ವ ಹಾವು ಕಚ್ಚಿ ಸಾಯುವುದು, ಚಂದ್ರಮತಿಯ ಪ್ರಲಾಪ, ಕೊನೆಗೆ ಚಂದ್ರಮತಿಯ ತಲೆಯನ್ನೇ ಕಡಿಯಬೇಕಾದ ಸನ್ನಿವೇಶ ಬರುವುದು… ಕರುಣರಸ ಕಟ್ಟೆಯೊಡೆದು ಕೋಡಿ ಹರಿಯುವ ಕಥಾನಕ.

ರಾಘವಾಂಕನ ಮೂಲ ಕಾವ್ಯದಿಂದಾಯ್ದ ಪದ್ಯಗಳನ್ನು ವನಮಾಲಾ ಗಮಕ ರೀತಿಯಲ್ಲಿ ಹಾಡುತ್ತಾರೆ. ಅವುಗಳಿಗೆ ತಾನು ಮಾಡಿದ  ಭಾಷಾಂತರವನ್ನು ನಾಟಕೀಯವಾಗಿ ಓದುತ್ತಾರೆ. ಅನುವಾದ ಕ್ರಿಯೆಯಲ್ಲಿ ಎದುರಾದ ಸವಾಲುಗಳು ಮತ್ತು ತಾನು ಕಂಡುಕೊಂಡ ಪರಿಹಾರೋಪಾಯಗಳನ್ನು ಸ್ವಾರಸ್ಯಕರವಾಗಿ ವಿವರಿಸುತ್ತಾರೆ. ಒಟ್ಟಿನಲ್ಲಿ ಅದೊಂದು ರಸಗವಳ. ಉಭಯಕವಿ ಎಂಬ ಖ್ಯಾತಿಯ ರಾಘವಾಂಕ ಕೆಲವು ಪದ್ಯಗಳಲ್ಲಿ ಅಚ್ಚಕನ್ನಡ ಪದಗಳನ್ನೇ ಬಳಸಿದ್ದರೆ ಇನ್ನು ಕೆಲವು ಪದ್ಯಗಳಲ್ಲಿ ಸಂಸ್ಕೃತ ಪದಗಳನ್ನು ಯಥೇಚ್ಛ ಬಳಸಿದ್ದಾನೆ. ಉದಾಹರಣೆಗೆ ಕಾಡಿನ ಬಣ್ಣನೆಯ ಈ ಪದ್ಯ: ‘ಸಲೆಶಿವಮಯಂ ಶಿವಮಯಂ ಶಿವಮಯಂ ಸಮು ಜ್ವಲ ಶಿಖಿಮಯಂ ಶಿಖಿಮಯಂ ಶಿಖಿಮಯಂ ನಿರಾ ಕುಲ ಶುಕಮಯ ಶುಮಯಂ  ಗಿರಿಯ ಸಾನುವಿಂದೊಸರ್ದು ಪರಿವಾ ಜಲಹರಿಮಯಂ ಹರಿಮಯಂ ಹರಿಮಯಂ ಮೃಗಾ ಕುಲಮಧುಮಯಂ ಮಧುಮಯಂ ಮಧುಮಯಂ ಶಬರ ಬಲಬಾಣಮಯ ಬಾಣಮಯ ಬಾಣಮಯವಾಗಿ ಕಾನನಂ ಕಣ್ಣೆಸೆದುದೂ॥’ ಇದರಲ್ಲಿ ಶಿವಮಯಂ, ಶಿಖಿಮಯಂ, ಶುಕಮಯಂ ಮುಂತಾದುವೆಲ್ಲ ಪುನರಾವರ್ತನೆಯಾಗಿವೆಯಷ್ಟೆ? ಅವುಗಳನ್ನು ಇಂಗ್ಲಿಷ್‌ನಲ್ಲಿ ಏನೆಂದು ಅನುವಾದಿಸುವುದು? ಅಲ್ಲೇ ಇರುವುದು ಸ್ವಾರಸ್ಯ! ಮೇಲ್ನೋಟಕ್ಕೆ ಅವು ಪುನರಾವರ್ತನೆ ಅಂತನಿಸುತ್ತವೆ ಅಷ್ಟೇ. ಅರ್ಥ ಬೇರೆಬೇರೆ ಇದೆ. ಶಿವ, ಶಿಖಿ, ಶುಕ, ಹರಿ, ಮಧು, ಬಾಣ ಈ ಎಲ್ಲ ಪದಗಳಿಗೂ ಸಂಸ್ಕೃತದಲ್ಲಿ ಒಂದಕ್ಕಿಂತ ಹೆಚ್ಚು  ಅದರಲ್ಲಿ ಕಾಡಿನ ವಾತಾವರಣಕ್ಕೆ ಸರಿಹೊಂದುವ ಅರ್ಥಗಳನ್ನು ರಾಘವಾಂಕ ಎತ್ತಿಕೊಂಡಿದ್ದಾನೆ. ಅವುಗಳನ್ನರಿತುಕೊಂಡು ಅನುವಾದ ಮಾಡಬೇಕು. ಡಾ. ಟಿ. ವಿ. ವೆಂಕಟಾಚಲ ಶಾಸ್ತ್ರಿಯವರಂಥ ಭಾಷಾತಜ್ಞರ ನೆರವು ಪಡೆದುಕೊಂಡು ಹಾಗೆಯೇ ಮಾಡಿದ್ದಾರೆ ವನಮಾಲಾ.

ಹರಿಶ್ಚಂದ್ರನ ಕಥೆಯನ್ನು ಓದುವಾಗ/ಕೇಳುವಾಗ ಹೃದಯ ಕರಗದವರಾರಿದ್ದಾರೆ? ಅದಲ್ಲದೇ ರಾಘವಾಂಕನ ಕಾವ್ಯದ ಕೆಲ ಭಾಗಗಳನ್ನು ಕನ್ನಡ ಪಠ್ಯಪುಸ್ತಕಗಳಲ್ಲಿ ಅಳವಡಿಸಿಕೊಂಡಿರುವುದರಿಂದ ಅಷ್ಟರ ಮಟ್ಟಿಗೆ ಪರಿಚಿತ ಮತ್ತು ಜನಜನಿತ. ನಮಗೆ ಐದನೆಯ ತರಗತಿಯಲ್ಲಿ ‘ರೋಹಿತಾಶ್ವನ ಸಾವು’ ಎಂಬ ಶೀರ್ಷಿಕೆಯ ಪದ್ಯಭಾಗದಲ್ಲಿ ಹರಿಶ್ಚಂದ್ರ ಕಾವ್ಯದಿಂದಾಯ್ದ  ಷಟ್ಪದಿಗಳಿದ್ದವು. ‘ತನಯನೆಂದುಂ ಬಪ್ಪ ಹೊತ್ತಿಂಗೆ ಬಾರದಿರೆ ಮನನೊಂದಿದೇಕೆ ತಳುವಿದನೆನ್ನ ಕಂದನೆಂ ದೆನುತ ಸುಯ್ಯುತ್ತ ಮರುಗುತ್ತ ಬಸಿರಂ ಹೊಸೆದು ಕೊನೆವೆರಳ ಮುರಿದುಕೊಳುತ…’ ಎಂದು ಕಂಠಪಾಠ ಮಾಡಿದ್ದೆವು. ನಮಗಿಂತ ಮೊದಲಿನ ಸಿಲೆಬಸ್ ಇದ್ದರಿಗೆ ‘ಚಂದ್ರಮತಿಯ ಪ್ರಲಾಪ’ ಶೀರ್ಷಿಕೆಯಲ್ಲಿ ‘ಲಲನೆ ಮೂಗಿನೊಳುಸುರನಳ್ಳೆಯೊಳು ಹೊಯ್ಲನುಗು ರೊಳು ರಜವನೆದೆಯೊಳಲ್ಲಾಟಮಂ ಕೈಯ ಮೊದ ಲೊಳು ಮಿಡುಕನಂಗದೊಳು ನೋವನಕ್ಷಿಯೊಳು ಬೆಳ್ಪಂ ಭಾವದೊಳು ಬೆಮರನು…’ ಮುಂತಾದ ಕೆಲ ಷಟ್ಪದಿಗಳಿದ್ದವು. ‘ಕೋಣನೆರಡುಂ ಹೋರೆ ಗಿಡುವಿಂಗೆ ಮಿತ್ತೆಂಬ’ (ವಸಿಷ್ಠ-ವಿಶ್ವಾಮಿತ್ರರ ವಾಗ್ಯುದ್ಧದಲ್ಲಿ ಪಾಪ ಬಡಪಾಯಿ  ವೃಥಾ ತೊಂದರೆ), ‘ಪುರದ ಪುಣ್ಯಂ ಪುರುಷೂಪಿಂದೆ ಪೋಗುತಿದೆ’ (ಹರಿಶ್ಚಂದ್ರನು ರಾಜ್ಯವನ್ನು ವಿ ಶ್ವಾಮಿತ್ರನಿಗೆ ಬಿಟ್ಟುಕೊಟ್ಟು ಹೆಂಡತಿ-ಮಗನೊಂದಿಗೆ ಬರಿಗೈಯಲ್ಲಿ ಅಯೋಧ್ಯೆಯಿಂದ ಹೊರಡುವಾಗಿನ ಕರುಣಾಜನಕ ಸನ್ನಿವೇಶ), ‘ಅತಿ ಹುಸಿವ ಯತಿ ಹೊಲೆಯ, ಹುಸಿಯದಿಹ ಹೊಲೆಯ ಉನ್ನತ ಯತಿವರನು’ (ಕೊನೆಯಲ್ಲಿ ರಾಘವಾಂಕನು ಪರಮೇಶ್ವರನ ಬಾಯಿಂದ ಹೇಳಿಸುವಂತೆ: ಹೊಲೆಯನೆಂಬುದು ಹುಟ್ಟಿನಿಂದ ಬರುವುದಲ್ಲ, ಸುಳ್ಳು ಹೇಳಿದರೆ ಯತಿಯೇ ಹೊಲೆಯನೆನಿಸಿಯಾನು; ಸುಳ್ಳಾಡದ ಹೊಲೆಯನು ಯತಿಗಿಂತಲೂ ಶ್ರೇಷ್ಠನೆನಿಸುವನು) ಮುಂತಾದುವೆಲ್ಲ ಕನ್ನಡದಲ್ಲಿ ಭಾಷಣಗಳ ಪ್ರಬಂಧಗಳ ತೂಕ ಹೆಚ್ಚಿಸುವ ಸಾಹಿತ್ಯಿಕ ನುಡಿಗಟ್ಟುಗಳೇ

ಎಷ್ಟೆಂದರೂ, ರಾಘವಾಂಕನೇ ತನ್ನ ಕಾವ್ಯದ ಮಂಗಲಶ್ರುತಿಯಲ್ಲಿ ಹೇಳಿರುವಂತೆ ‘ಅನೃತವರಿಯದ ಹೊಲೆಯನಂ ನೆನೆಯೆ ಪುಣ್ಯವೆಂ ದೆನೆ ಸೂರ‌್ಯಕುಲಜ ಕಲಿ ದಾನಿ ಸತ್ಯಂ ವಸಿ ಷ್ಠನ ಶಿಷ್ಯನಧಿಕಶೈವಂ ಕಾಶಿಯೊಳ್ ಮೆರೆದ ವೇದಪ್ರಮಾಣಪುರುಷ ಘನೃಪ ಹರಿಶ್ಚಂದ್ರನೆಂದಡಾತನ ಪೊಗಳ್ದು ಜನ ಬದುಕಬೇಕೆಂದು ಕಾವ್ಯಮುಖದಿಂ ಪೇಳ್ದ ನನಪೇಕ್ಷೆಯಿಂದ ಕವಿ ರಾಘವಾಂಕಂ ಮಹಾಲಿಂಗ ಭಕ್ತರ ಭಕ್ತನು॥ – ಹರಿಶ್ಚಂದ್ರ ಕಾವ್ಯವನ್ನು ಆತ ಬರೆದದ್ದು ತನ್ನ ಕವಿಪ್ರತಿಭೆಯನ್ನು ಜಗತ್ತಿಗೆ ತೋರಿಸಿ ತಾನೊಬ್ಬ ದೊಡ್ಡವನೆಂದೆನಿಸಿಕೊಳ್ಳಲಿಕ್ಕಲ್ಲ. ರಾಜನಾಗಿ, ಕೊನೆಗೆ ಮಸಣದ ಕಾವಲು  ಹೊಲೆಯನಾಗಿ ಬದುಕಿದರೂ ಸತ್ಯ ವಾಕ್ಯಕೆ ತಪ್ಪಿನಡೆಯದ ವೇದಪ್ರಮಾಣಪುರುಷ ಹರಿಶ್ಚಂದ್ರನನ್ನು ಹೊಗಳುತ್ತ, ಅವನ ಆದರ್ಶಗಳನ್ನು ಅಳವಡಿಸಿಕೊಳ್ಳುತ್ತ ಜನರು ಬದುಕಬೇಕೆಂಬ ಉದ್ದೇಶಕ್ಕಾಗಿ. ರಾಘವಾಂಕನ ಆಶಯವು ಒಳ್ಳೆಯದೆಂದೋ ಏನೋ- ಶತಶತಮಾನಗಳು ಕಳೆದರೂ ಹರಿಶ್ಚಂದ್ರನ ಕಥೆ ಅಜರಾಮರವಾಗಿ ಉಳಿದು ತಲೆಮಾರಿನಿಂದ ತಲೆಮಾರಿಗೆ ವರ್ಗಾವಣೆಯಾಗುತ್ತಲೇ ಇದೆ. ಭಾರತೀಯ ಚಲನಚಿತ್ರೋದ್ಯಮದಲ್ಲೂ ಮೊತ್ತಮೊದಲ ಚಿತ್ರ ಬಂದದ್ದು ‘ರಾಜಾ ಹರಿಶ್ಚಂದ್ರ’ 1913ರಲ್ಲಿ, ದಾದಾಸಾಹೇಬ್ ಫಾಲ್ಕೆ ನಿರ್ದೇಶನದಲ್ಲಿ. ಮಹಾತ್ಮ ಗಾಂಧೀಜಿಯವರಿಗೆ ‘ಸತ್ಯ’ ಸತ್ತ್ವದ ಅರಿವಾದದ್ದು ಬಾಲ್ಯದಲ್ಲಿ ಅವರು ಹರಿಶ್ಚಂದ್ರ ನಾಟಕವನ್ನು ನೋಡಿದ್ದರಿಂದ.  ಡಾ.ರಾಜಕುಮಾರ್ ಅಭಿನಯಿಸಿದ ‘ಸತ್ಯ ಹರಿಶ್ಚಂದ್ರ’ ಚಿತ್ರ ಮತ್ತದರ ಹಾಡುಗಳು ಎಷ್ಟು ಜನಪ್ರಿಯವೆಂದರೆ ‘ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ ಮತದಲ್ಲಿ ಮೇಲ್ಯಾವುದೋ ಹುಟ್ಟಿಸಾಯುವ ಹಾಳು ಮನುಸಾ ಮನುಸಾನ ಮಧ್ಯ ಕೀಳ್ಯಾವ್ದು ಮೇಲ್ಯಾವುದೋ…’ ಹಾಡಿಲ್ಲದೆ ಈಗಲೂ ಯಾವುದೇ ರಸಮಂಜರಿ ಕಾರ್ಯಕ್ರಮ ಪೂರ್ಣವೆನಿಸುವುದಿಲ್ಲ. ಇದೀಗ ಡಾ.ವನಮಾಲಾ ವಿಶ್ವನಾಥರಂಥವರು ರಾಘವಾಂಕನನ್ನು, ಆತನ ಹರಿಶ್ಚಂದ್ರ ಕಾವ್ಯವನ್ನು, ಕನ್ನಡೇತರರಿಗೂ ಪರಿಚಯಿಸಿರುವುದರಿಂದ ‘ಹರನೆಂಬುದೇ ಸತ್ಯ ಸತ್ಯವೆಂಬುದೇ ಹರನು’ ತತ್ತ್ವದ ಹರಹು ಇನ್ನಷ್ಟು ಮತ್ತಷ್ಟು ಹೆಚ್ಚುತ್ತಲೇ ಇದೆ. ಇದು ಕನ್ನಡದ ಪುಣ್ಯ!