About Us Advertise with us Be a Reporter E-Paper

ಅಂಕಣಗಳು

ನೀವು ಇತ್ತೀಚೆಗೆ ಕಾಮನಬಿಲ್ಲು ನೋಡಿದ್ದೀರಾ?

ಇ ಪ್ರಶ್ನೆ? ಕಾಮನಬಿಲ್ಲನ್ನು ನೋಡದವರು ಯಾರಿದ್ದಾರೆ ಎನ್ನಬೇಡಿ. ನೀವು ಇತ್ತೀಚೆಗೆ ಕಾಮನಬಿಲ್ಲನ್ನು ನೋಡಿದ್ದೀರಾ ಎಂಬುದು ಪ್ರಶ್ನೆಯಾದರೆ, ನಿಮ್ಮ ಉತ್ತರವೇನು? ಕಾಂಕ್ರೀಟ್ ಕಾಡಿನಲ್ಲಿ ಬೆಳೆಯುತ್ತಿರುವ ನಮಗೆ ಕಾಮನಬಿಲ್ಲು ಕಾಣುವುದಾದರೂ ಹೇಗೆ? ನಮಗೆ ಸಮಯವಾದರೂ ಎಲ್ಲಿದೆ?

ಅದಿರಲಿ, ಮಳೆಯ ಬಗ್ಗೆ ಕನ್ನಡದ ವರಕವಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ’ಅಂಬಿಕಾತನಯ ದತ್ತ’-ಡಾ.ದ.ರಾ. ಬೇಂದ್ರೆಯವರು ಹೇಗೆ ಸಕಾರಾತ್ಮಕವಾಗಿ ಯೋಚಿಸಿದರೆಂಬುದನ್ನು ತಿಳಿಸುವ ಘಟನೆಯೊಂದು ಇಲ್ಲಿದೆ.

ಒಮ್ಮೆ ಬೇಂದ್ರೆಯವರು ಧಾರವಾಡದ ಸಾಧನಕೇರಿಯ ತಮ್ಮ ಮೆಯ ಹೊರಗಡೆ ಕುಳಿತಿದ್ದರಂತೆ. ಅವರೊಂದಿಗೆ  ಗೆಳೆಯರೂ, ಕಾವ್ಯಾಸಕ್ತರೂ ಕುಳಿತಿದ್ದರು. ಬೇಂದ್ರೆಯವರ ಮಾತುಗಳು ಎಂದರೆ ರಸಗವಳ! ಹಾಗಾಗಿ ಅಲ್ಲಿ ಸೇರಿದ್ದ ಗುಂಪಿನ ಕೇಂದ್ರ ಬಿಂದು ಬೇಂದ್ರೆಯವರೇ ಆಗಿದ್ದರು.

ಸಾಹಿತ್ಯ, ಅಧ್ಯಾತ್ಮ, ಸಮಾಜದ ಆಗುಹೋಗುಗಳು ಇವೆಲ್ಲದರ ಬಗ್ಗೆ ಚರ್ಚೆ ನಡೆಯುತ್ತಿತ್ತು. ಆಗ ಇದ್ದಕ್ಕಿದ್ದಂತೆ ಧಾರಾಕಾರ ಮಳೆ ಸುರಿಯಲಾರಂಭಿಸಿತು. ಮಳೆಯ ರಭಸಕ್ಕೆ ಅಂಜಿ ಅಲ್ಲಿದ್ದವರೆಲ್ಲ ಮನೆಯೊಳಕ್ಕೆ ಓಡಿಹೋದರು. ಆದರೆ ಬೇಂದ್ರೆಯವರು ಮಾತ್ರ ಎದ್ದು ಹೋಗಲಿಲ್ಲ. ಮಳೆಯಲ್ಲೇ ನೆನೆಯುತ್ತ ಕುಳಿತಿದ್ದರು.

‘ಎಚ್ಚೆತ್ತು ಎದ್ದು ಆಕಾಶದುದ್ದ ಧರೆಗಿಳಿಯುತಲಿದ್ದ ಧೀರೆ’ಯನ್ನು ಅಂದರೆ ಮಳೆಯ  ತಲೆಯೆತ್ತಿ ನೋಡುತ್ತ ಮುಖ-ಮೈ ತೋಯಿಸಿಕೊಳ್ಳುತ್ತ ಕುಳಿತಿದ್ದರು. ಉಟ್ಟಿದ್ದ ಬಟ್ಟೆ-ಬರೆಯೆಲ್ಲ ನೆನೆದು ಮುದ್ದೆಯಾದರೂ ಅದರತ್ತ ಗಮನವಿರಲಿಲ್ಲ. ಆನಂದಲೋಕದಲ್ಲಿ ವಿಹರಿಸುತ್ತಿದ್ದರು. ಕೊಂಚ ಹೊತ್ತಿನಲ್ಲಿ ಮಳೆ ನಿಂತಿತು. ಮನೆಯೊಳಕ್ಕೆ ಓಡಿಹೋಗಿದ್ದ ಜನರೆಲ್ಲ ಎಚ್ಚರಿಕೆಯಿಂದ ಹೊರಕ್ಕೆ ಬಂದು ಕುಳಿತುಕೊಂಡರು. ಆಗಲೂ ಬೇಂದ್ರೆಯವರು ತಮ್ಮದೇ ಆದ ಲೋಕದಲ್ಲಿ ವಿಹರಿಸುತ್ತಿದ್ದರು. ಅವರ ಮುಖದ ಮೇಲೆ ಅಪೂರ್ವವಾದ ಕಳೆ ಹೊರಹೊಮ್ಮುತ್ತಿತ್ತು.

ಅಲ್ಲಿದ್ದವರಲ್ಲಿ ಒಬ್ಬರು ಮಳೆಯ ರಭಸಕ್ಕೆ ಅಂಜಿ ನಾವೆಲ್ಲ ಒಳಗೆ ಓಡಿಹೋದೆವು. ತಾವು ಇಲ್ಲಿಯೇ ಕುಳಿತು ಮಳೆಯಲ್ಲಿ ನೆನೆದು  ಎದ್ದು ಬರಲಿಲ್ಲ. ಆನಂದದಿಂದ ಕುಳಿತಿದ್ದಿರಿ. ಮಳೆ ನೀರಿನಲ್ಲಿ ನೆನೆದು ನೆಗಡಿಯೋ, ಶೀತವೋ, ಕೆಮ್ಮೋ ಉಂಟಾದರೆ  ಏನು ಗತಿ? ನಿಮಗೇನೂ ಅನಿಸಲಿಲ್ಲವೇ ಎಂದು ಕೇಳಿದರು. ಬೇಂದ್ರೆಯವರು ನಿಧಾನವಾಗಿ ಪ್ರಶ್ನೆ ಕೇಳಿದವರತ್ತ ನೋಡಿದರು. ಗಟ್ಟಿಯಾಗಿ ನಕ್ಕು ಯಾವ ಸಮುದ್ರದ ನೀರೋ ಏನೋ, ಸೂರ್ಯನ ಶಾಖಕ್ಕೆ ಯಾವಾಗ ಬಿಸಿ ಆಯಿತೋ, ಆವಿ ಆಯಿತೋ, ಆಕಾಶಕ್ಕೇರಿತೋ, ಆಕಾಶದಲ್ಲಿ ಮೇಘವಾಗಿ ಎಷ್ಟು ಮೈಲಿಗಳ ಪ್ರಯಾಣ ಮಾಡಿ ಬಂದಿದೆಯೋ ಗೊತ್ತಿಲ್ಲ. ನಾನು ಆ ಸಮುದ್ರವನ್ನೂ ನೋಡಿಲ್ಲ. ಆಕಾಶದೆತ್ತರಕ್ಕೆ  ಆಕಾಶಮಾರ್ಗದಲ್ಲಿ ಸಾವಿರಗಟ್ಟಲೆ ಮೈಲಿ ಸುತ್ತಾಡಿ ಬರಲಿಲ್ಲ. ಆದರೆ ಇಂದು ನಾನು ಯಾವ ಜನ್ಮದಲ್ಲಿ ಮಾಡಿದ ಪುಣ್ಯವೋ ಗೊತ್ತಿಲ್ಲ. ಇಂದು ಆ ಮೋಡಗಳು ನನ್ನ ಮನೆಯ ಮೇಲೆಯೇ ಹಾದು ಹೋಗುತ್ತ, ನನ್ನ ಮೇಲೆ ಕೃಪೆ ತೋರುತ್ತ, ಮಳೆಯಾಗಿ ಸುರಿದರೆ, ಆ ಮಳೆಯ ಹನಿ ನನ್ನ ತಲೆ-ಮೈಯ ಮೇಲೆ ಬಿದ್ದರೆ ನಾನು ಅದಕ್ಕೆ ಅಂಜಿ ಓಡಿ ಹೋಗಲೇ ಅಥವಾ ಅದರಲ್ಲಿ ನೆನೆದು ಪುನೀತನಾಗಲೇ ಎಂದು ಹೇಳಿದಾಗ, ಧಾರಾಕಾರ ಮಳೆಗೆ ಹೆದರಿ ಓಡಿಹೋದವರೆಲ್ಲ  ವಿಚಾರ ಧಾರೆಯಲ್ಲಿ ಮಿಂದು ಪುಳಕಿತರಾದರು.

ಈ ಘಟನೆಯನ್ನು ಉಪನ್ಯಾಸವೊಂದರಲ್ಲಿ ಹೇಳಿದ್ದ ಸುವಿಖ್ಯಾತ ನಾಟಕಕಾರರೂ, ಆಕಾಶವಾಣಿಯ ನಿರ್ದೇಶಕರೂ ಆಗಿದ್ದ ಡಾ.ಹೆಚ್.ಕೆ. ರಂಗನಾಥ ಅವರಿಗೆ ಪ್ರಣಾಮಗಳು.

ನಗರದ ಕಾಂಕ್ರೀಟ್ ಕಾಡುಗಳಲ್ಲಿ ಬದುಕುವ ನಮಗೆ, ಕಾಮನ ಬಿಲ್ಲು, ಕೋಗಿಲೆಯ ಕೂಗು ಮುಂತಾದವುಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ! ಅವು ನಮ್ಮೆದುರಿಗೇ ಇದ್ದರೂ ಗುರುತಿಸುವುದು ಇನ್ನೂ ಕಷ್ಟ! ಬನ್ನಿ, ನಾವೂ ಅವನ್ನು ನೋಡಿ ಆನಂದಿಸೋಣ! ನಮ್ಮ ಮಕ್ಕಳಿಗೂ ಅವನ್ನು ಪರಿಚಯಿಸೋಣ!

Tags

Related Articles

Leave a Reply

Your email address will not be published. Required fields are marked *

Language
Close