ವಿಶ್ವವಾಣಿ

ಬಾಳೆಹಣ್ಣು ಬೇಡ ಅಂತೀರಾ? ತಾಳಿ, ತಾಳಿ!

-ಶಶಾಂಕ್ ಮುದೂರಿ

ಇಂದಿನ ತಲೆಮಾರಿನ ಕೆಲವರಿಗೆ ಬಾಳೆಹಣ್ಣನ್ನು ಕಂಡರೆ ಅದೇಕೋ ಒಂದು ರೀತಿಯ ಅಲರ್ಜಿ. ‘ಬಾಳೆಹಣ್ಣಾ? ನನಗೆ ಬೇಡ’ ಎನ್ನುವ ಮಕ್ಕಳೇ ಜಾಸ್ತಿ. ಮಾರುಕಟ್ಟೆೆಯಲ್ಲಿ ಅಬ್ಬರದ ಪ್ರಚಾರ ಇಲ್ಲದ ಬಾಳೆಹಣ್ಣಿನಲ್ಲಿರುವ ಪೌಷ್ಟಿಕಾಂಶಗಳು ಅಪಾರ. ಆದರೂ ಪಟ್ಟಣಗಳಲ್ಲಿ ಸೇಬು, ಕಿವಿ ಮೊದಲಾದ ಹಣ್ಣುಗಳಿಗೆ ಇರುವಷ್ಟು ಜನಪ್ರಿಯತೆ ಬಾಳೆಗೆ ಇಲ್ಲ ಎನ್ನಬಹುದು.

ತನ್ನಲ್ಲಿರುವ ನಾರಿನಿಂದಾಗಿ, ಜೀರ್ಣಕ್ರಿಯೆಗೆ ಸಹಾಯ ನೀಡುವುದರ ಜತೆಯಲ್ಲೇ, ಹಲವು ಲವಣಾಂಶಗಳು, ಖನಿಜ ಮತ್ತು  ವಿಟಮಿನ್‌ಗಳ ಆಗರ ಬಾಳೆ. ವಿಶ್ವದಾದ್ಯಂತ ಬೆಳೆಯುವ ಬಾಳೆಯು ಹಲವು ಕಾಲದಿಂದ ಜನಪ್ರಿಯ. ಆದ್ದರಿಂದ ಬಾಳೆ ಬೇಡ ಎನ್ನುವ ಮುಂಚೆ ಕೊಂಚ ತಾಳಿ!

ಪೊಟಾಶಿಯಂ: ಹೃದಯದ ಆರೋಗ್ಯಕ್ಕೆೆ ಮತ್ತು ರಕ್ತದ ಒತ್ತಡ ನಿಯಂತ್ರಣಕ್ಕೆೆ ಪೊಟಾಶಿಯಂನಿಂದ ಬಹಳ ಅನುಕೂಲ. ಹೆಚ್ಚು ಪೊಟಾಶಿಯಂ ಅನ್ನು ತನ್ನಲ್ಲಿ ಹಿಡಿದಿಟ್ಟಿರುವ ಬಾಳೆಯನ್ನು ತಿನ್ನುವುದರಿಂದ, ಸೋಡಿಯಂನಿಂದ (ಉಪ್ಪುು)  ಆಗಬಹುದಾದ ದುಷ್ಪರಿಣಾಮವನ್ನು ಸಮತೂಕದಲ್ಲಿಡಬಹುದು. ಜತೆಗೆ ಕಿಡ್ನಿ, ಮೂಳೆಗಳ ಆರೋಗ್ಯ ಕಾಪಾಡಲು ಬಾಳೆ ಸಹಕಾರಿ.

ಶಕ್ತಿಯ ಮೂಲ: ಕ್ರೀಡಾಪಟುಗಳು ತಮ್ಮ ಆಟದ ಮಧ್ಯೆೆ, ಹೆಚ್ಚಿನ ಶಕ್ತಿಗಾಗಿ ಬಾಳೆಹಣ್ಣನ್ನು ತಿನ್ನುವುದನ್ನು ನೋಡಿರಬಹುದು. ಅದರ ಅರ್ಥ ಎಂದರೆ, ತಕ್ಷಣದ ಶಕ್ತಿಗಾಗಿ ಬಾಳೆ ಒಳ್ಳೆೆಯದು. ಬಾಳೆ ಹಣ್ಣನ್ನು ಹಿತ ಮಿತವಾಗಿ ಸೇವಿಸುವುದರಿಂದ, ಮಧುಮೇಹ ಸಮಸ್ಯೆೆ ಇರುವವರಿಗೆ ತೊಂದರೆ ಆಗಲಾರದು ಎಂದು ಹಲವು ಅಧ್ಯಯನಗಳು ತಿಳಿಸಿವೆ.

ಜೀರ್ಣಕ್ರಿಯೆಗೆ ಸಹಕಾರಿ: ಬಾಳೆಹಣ್ಣಿನಲ್ಲಿರುವ ನಾರಿನ ಅಂಶದಿಂದಾಗಿ, ಸುಲಲಿತ ಜೀರ್ಣಕ್ರಿಯೆಗೆ ಅತ್ಯುತ್ತಮ ಆಹಾರ ಎಂದೇ ಪರಿಗಣಿಸಲ್ಪಟ್ಟಿದೆ. ಮಲಬದ್ದತೆ ಇರುವವರು, ಅದಕ್ಕಾಗಿ ಔಷಧ ತೆಗೆದುಕೊಳ್ಳುವ ಬದಲು, ಎರಡು ಬಾಳೆಹಣ್ಣನ್ನು ತಿನ್ನಬಹುದು. ಬಾಳೆಹಣ್ಣಿನಲ್ಲಿರುವ ಫ್ರಕ್ಟೋ ಒಲಿಗೋ ಸ್ಯಾಕರೈಡ್‌ಸ್‌‌ಗಳು ಪ್ರೊ ಬಯೊಟಿಕ್ ಆಗಿದ್ದು, ಕರುಳಿನಲ್ಲಿರುವ ಒಳ್ಳೆೆಯ ಬ್ಯಾಕ್ಟೀರಿಯಾವನ್ನು ಹೆಚ್ಚಿಸಲು ಸಹಕಾರಿ.

  • ಎದೆಉರಿ ಮತ್ತು ಹೊಟ್ಟೆೆಯ ಹುಣ್ಣುಗಳನ್ನು ಉಪಶಮನಗೊಳಿಸುವ ಶಕ್ತಿ ಬಾಳೆಹಣ್ಣಿಗೆ ಇದೆ.
  • ಬಾಳೆಹಣ್ಣಿನಲ್ಲಿರುವ ವಿಟಮಿನ್ ಬಿ6, ದೇಹದಲ್ಲಿ ಹಿಮೊಗ್ಲೊಬಿನ್ ಉತ್ಪತ್ತಿಯಾಗಲು ಸಹಾಯ ಮಾಡುತ್ತದೆ. ಆ ಮೂಲಕ ನಮ್ಮಲ್ಲಿರುವ ರಕ್ತದ ಗುಣಮಟ್ಟವನ್ನು ಕಾಪಾಡುತ್ತದೆ. ಇದಲ್ಲದೆ, ಮೆಗ್ನೀಶಿಯಂ, ಇತರ ವಿಟಮಿನ್‌ಗಳು, ಅಯೊಡಿನ್, ಕಬ್ಬಿಣ (ಅಲ್ಪ ಪ್ರಮಾಣದಲ್ಲಿ) ಮೊದಲಾದ ಖನಿಜಾಂಶಗಳು ಬಾಳೆಯಲ್ಲಿವೆ.
  • ಆಧುನಿಕ ಜೀವನಶೈಲಿಯಲ್ಲಿ ಕಂಡುಬರುವ ಹ್ಯಾಂಗೋವರ್‌ನಿಂದ ಹೊರಬರಲು ಬಾಳೆ ಹಣ್ಣು ಸಹಕಾರಿ! ಬಾಳೆಯಲ್ಲಿರುವ ಟ್ರಿಪ್ಟೊಫ್ಯಾನ್ ಎಂಬ ಅಮಿನೋ ಆ್ಯಸಿಡ್‌ನಿಂದಾಗಿ, ಮನೋಲ್ಲಾಸ ಹೆಚ್ಚಿಸಲು ಸಹ ಬಾಳೆ ಸಹಕಾರಿ.

ಸರಳ ಹಣ್ಣಾಗಿರುವ ಬಾಳೆಹಣ್ಣನ್ನು ಬೇಡ ಅನ್ನುವ ಮುಂಚೆ ಮೇಲಿನ ಎಲ್ಲಾ ಅಂಶಗಳತ್ತ ಗಮನ ಹರಿಸಿ. ಬಾಳೆ ಹಣ್ಣನ್ನು ಬೇಡ ಅನ್ನಬೇಡಿ.