About Us Advertise with us Be a Reporter E-Paper

ಅಂಕಣಗಳು

ದಿಕ್ಕು ತೋಚದೆ ಕುಳಿತಿದ್ದಾಗ ಸಹಾಯಕ್ಕೆ ಬಂದದ್ದು ಸಾಹುಕಾರರ ಚೆಕ್ಕು!

ಎಸ್‌.ಷಡಕ್ಷರಿ

ಇಲ್ಲಿರುವ ನಿಜಜೀವನದ ಘಟನೆಯೊಂದರಲ್ಲಿ ಒಂದು ಚೆಕ್ ಪ್ರಮುಖ ಪಾತ್ರಧಾರಿ! ಹೇಗೆಂಬುದನ್ನು ಅರಿಯಲು ನೋಡೋಣ.

ಕಳೆದ ಶತಮಾನದ ಮೊದಲ ಭಾಗದಲ್ಲಿ ನ್ಯೂಯಾರ್ಕಿನ ವ್ಯಾಪಾರಿಯೊಬ್ಬರು ಕಷ್ಟಕಾಲವನ್ನು ಎದುರಿಸುತ್ತಿದ್ದರು. ಕೈತುಂಬ ನಷ್ಟ. ಮೈತುಂಬ ಸಾಲ. ಮತ್ತೆ ವ್ಯಾಪಾರ ಮಾಡಲು ಹಣವಿರಲಿಲ್ಲ. ಹೊಸ ಸಾಲ ಸಿಕ್ಕುತ್ತಿರಲಿಲ್ಲ. ಜೀವನದಲ್ಲಿ ಜುಗುಪ್ಸೆಗೊಂಡಿದ್ದರು.

ಒಮ್ಮೆ ಅವರು ಇದೇ ಚಿಂತೆಯಲ್ಲಿದ್ದಾಗ ತಲೆಯ ಮೇಲೆ ಕೈಹೊತ್ತು ಪಾರ್ಕಿನಲ್ಲಿ ಕುಳಿತಿದ್ದರು. ಪಾರ್ಕಿನಲ್ಲಿ ಸುತ್ತಾಡುತ್ತಿದ್ದ ಒಬ್ಬ ಹಿರಿಯರು ವ್ಯಾಪಾರಿಯನ್ನು, ‘ಹೀಗೇಕೆ ಸಪ್ಪಗೆ ಕುಳಿತಿದ್ದೀರೆಂದು’ ಕೇಳಿದರು. ವ್ಯಾಪಾರಿಯು ದೊಡ್ಡ ನಿಟ್ಟುಸಿರೊಂದನ್ನು ಬಿಟ್ಟರು. ಆನಂತರ, ಹಿರಿಯರಿಗೆ ತನ್ನ ಬವಣೆಗಳೆಲ್ಲವನ್ನು ಹೇಳಿಕೊಂಡರು. ಎಲ್ಲವನ್ನೂ ಕೇಳಿಸಿಕೊಂಡು, ‘ನಿಮಗೆ ಸಹಾಯ ಮಾಡಬೇಕೆನಿಸುತ್ತಿದೆ. ಇಗೋ ನಿಮ್ಮ ಹೆಸರಿಗೆ ಬರೆದ ಚೆಕ್ ಇಲ್ಲಿದೆ. ಇದನ್ನು ಉಪಯೋಗಿಸಿಕೊಳ್ಳಿ. ಮುಂದಿನ ವರ್ಷ ಇದೇ ದಿನ, ಇದೇ ಸಮಯ, ಇದೇ ಪಾರ್ಕಿನಲ್ಲಿ ನಾನು ಬಂದು ನಿಮಗೆ ಕಾಯುತ್ತೇನೆ. ಆಗ ನೀವು ನನ್ನ ಚೆಕ್ಕನ್ನು ಹಿಂತಿರುಗಿಸಿ’ ಎಂದು ಹೇಳಿ ಚೆಕ್ ಬರೆದುಕೊಟ್ಟು ಹೊರಟುಹೋದರು.

ಚೆಕ್ಕನ್ನು ನೋಡಿದಾಗ ವ್ಯಾಪಾರಿ ಗಾಬರಿಗೊಂಡರು. ಏಕೆಂದರೆ ಚೆಕ್ಕು ಐದು ಲಕ್ಷ ಡಾಲರ್ ಮೊತ್ತದ್ದಾಗಿತ್ತು ಮತ್ತು ಚೆಕ್ ಮೇಲಿನ ಸಹಿ ರಾಕ್ ಫೆಲ್ಲರ್ ಅವರದ್ದಾಗಿತ್ತು. ಅವರು ಅಂದಿನ ಕಾಲದ ವಿಶ್ವದ ಅತ್ಯಂತ ಶ್ರೀಮಂತರು! ವ್ಯಾಪಾರಿಗೆ ತನ್ನ ಅದೃಷ್ಟವನ್ನು ನಂಬಲಾಗಲಿಲ್ಲ. ಮೈತುಂಬ ಸಾಲವನ್ನು ಮಾಡಿಕೊಂಡು ಬರಿಗೈಯಲ್ಲಿದ್ದ ಆತನ ಕೈಯಲ್ಲೀಗ ಐದು ಲಕ್ಷ ಡಾಲರುಗಳ ಚೆಕ್ಕಿತ್ತು. ಆತ ಏನು ಮಾಡುವುದೆಂದು ಬಹಳ ಯೋಚಿಸಿದರು. ಅವರು ಚೆಕ್ಕನ್ನು ಬಳಸಿ ಸಾಲಗಳನ್ನೆಲ್ಲ ತೀರಿಸಿ ಆರಾಮವಾಗಿ ಬದುಕಬಹುದಿತ್ತು. ಆದರೆ ವರ್ಷದೊಳಗೆ ಹಣ ಹಿಂತಿರುಗಿಸಬೇಕಿತ್ತು. ಅಥವಾ ಅದನ್ನು ಬಳಸಿ ಮತ್ತೆ ವ್ಯಾಪಾರ ಪ್ರಾರಂಭಿಸಬಹುದಿತ್ತು.

ವ್ಯಾಪಾರಿಯು ರಾಕ್ ಫೆಲ್ಲರ್ ಅವರ ಲಕ್ಷದ ಚೆಕ್ ಹಿಡಿದುಕೊಂಡು ಆತ್ಮವಿಶ್ವಾಸದಿಂದ ಮಾರುಕಟ್ಟೆಗೆ ಹೋದರು. ಮಾರುಕಟ್ಟೆಯವರು ರಾಕ್ ಫೆಲ್ಲರ್ ಅವರ ಚೆಕ್ಕನ್ನು ನೋಡಿದಾಕ್ಷಣ ವಾತಾವರಣವೇ ಬದಲಾಯಿತು. ವ್ಯಾಪಾರಿಯ ವ್ಯಾಪಾರ ವಹಿವಾಟು ಪ್ರಾರಂಭವಾಯಿತು, ಅವರ ಆತ್ಮವಿಶ್ವಾಸ ಮತ್ತು ಹುಮ್ಮಸ್ಸು ನೋಡಿ ಎಲ್ಲರೂ ಬೆಕ್ಕಸಬೆರಗಾಗುತ್ತಿದ್ದರು. ಅವರೂ ಹಗಲಿರುಳೆನ್ನದೆ ಕಷ್ಟಪಟ್ಟು ದುಡಿದು ಕೆಲವೇ ತಿಂಗಳುಗಳಲ್ಲಿ ಸಾಲಗಳನ್ನೆಲ್ಲ ತೀರಿಸಿದರು. ತನ್ನ ವಹಿವಾಟನ್ನು ಹತ್ತಿಪ್ಪತ್ತು ಪಟ್ಟು ಹೆಚ್ಚಿಸಿಕೊಂಡರು. ಅಪ್ರತಿಮ ಯಶಸ್ಸು ಗಳಿಸಿದರು.

ಒಂದು ವರ್ಷ ಕಳೆದೇ ಹೋಯಿತು. ನಂತರ ಅದೇ ದಿನಾಂಕದಂದು ಅವರು ಪಾರ್ಕಿಗೆ ಹೋದರು. ಅಷ್ಟು ಹೊತ್ತಿಗಾಗಲೇ ರಾಕ್ ಫೆಲ್ಲರ್ ಅಲ್ಲಿ ಬಂದು ನಿಂತಿದ್ದರು. ವ್ಯಾಪಾರಿಯು ಅವರಿಗೆ ನಮಸ್ಕರಿಸಿಮ, ‘ನಿಮ್ಮ ಉಪಕಾರದಿಂದ ಬದುಕಿನಲ್ಲಿ ಮತ್ತೆ ಯಶಸ್ವಿಯಾದೆ. ಶ್ರೀಮಂತನೂ ಆಗಿದ್ದೇನೆ. ಅಂದು ನೀವು ಕೊಟ್ಟ ಚೆಕ್ಕನ್ನು ತೋರಿಸಿಕೊಂಡೇ ನನ್ನ ವಹಿವಾಟನ್ನು ಪುನರಾರಂಭಿಸಿದೆ. ಅದನ್ನು ಬ್ಯಾಂಕಿಗೆ ಹಾಕಲೇ ಇಲ್ಲ! ನಿಮ್ಮ ಅದೇ ಚೆಕ್ಕನ್ನು ವಾಪಸ್ಸು ಕೊಡುತ್ತಿದ್ದೇನೆ’ ಎಂದು ಐದು ಲಕ್ಷದ ಚೆಕ್ಕನ್ನು ಹಿಂತಿರುಗಿಸಿದರು. ರಾಕ್ ಫೆಲ್ಲರ್ ಅವರು ಆಶ್ಚರ್ಯದಿಂದ ಕಣ್ಣರಳಿಸಿ ಚೆಕ್ಕನ್ನೂ, ಆತನನ್ನೂ ನೋಡಿದರು. ‘ಚೆಕ್ಕನ್ನು ಬ್ಯಾಂಕಿಗೆ ಹಾಕದಿದ್ದದ್ದು ಒಳ್ಳೆಯದಾಯಿತು. ಏಕೆಂದರೆ ಅಂದು ಆ ಖಾತೆಯಲ್ಲಿ ಹಣವಿತ್ತೋ, ಇಲ್ಲವೋ ಯಾರಿಗೆ ಗೊತ್ತು’ ಎಂದು ಬಾಯ್ತುಂಬ ನಕ್ಕು ಹೇಳಿದಾಗ ಕಣ್ಣರಳಿಸಿ ನೋಡುವ ಸರದಿ ವ್ಯಾಪಾರಿಯದ್ದಾಗಿತ್ತು. ಚೆಕ್ಕಿನಲ್ಲಿ ಹಣವಿತ್ತೋ, ಇಲ್ಲವೋ ಆದರೆ ಅದು ಆತನಲ್ಲಿ ಆತ್ಮವಿಶ್ವಾಸವನ್ನು ಬೆಳೆಸಿತ್ತು. ಅದನ್ನು ಬಳಸಿ ಆತ ಯಶಸ್ವಿಯಾಗಿದ್ದರು.

ಇಂತಹ ಅನೇಕ ಅಪರೂಪದ ಸಕಾರಾತ್ಮಕ ಘಟನೆಗಳನ್ನು ಹಿರಿಯರಾದ ಡಾ.ಪಿ.ವಿ. ಜೋಯಿಸ್ ಅವರು ತಮ್ಮ ‘ಸ್ಟೇಟ್ ಆಫ್ ಹ್ಯಾಪಿನೆಸ್’ ಪುಸ್ತಕದಲ್ಲಿ ಬರೆದಿದ್ದಾರೆ. ಡಾ.ಜೋಯಿಸರಿಗೆ ಧನ್ಯವಾದಗಳು. ಘಟನೆ ನಮಗೂ ಮಾರ್ಗದರ್ಶಿ ಆಗಬಹುದಲ್ಲವೇ?

Tags

Related Articles

Leave a Reply

Your email address will not be published. Required fields are marked *

Language
Close