ಮರೆಯಾಗುತ್ತಿದೆ ದೂರದರ್ಶನ ಲೋಗೊ

Posted In : ಸಂಗಮ, ಸಂಪುಟ

ನಮ್ಮ ಬಾಲ್ಯವನ್ನು ನೆನಪಿಸಿಕೊಳ್ಳಲು ಇದ್ದ ಇನ್ನೊಂದು ನೆಪ ಹೊರಟು ಹೋಗಲಿದೆ! ಟಿಣ್ ಟಿಣಿಣ್ ಟಿಣಿಣ್ ಟಿಣಿಣ್…. ಅನ್ನೊ ಸಂಗೀತ ದನಿ ಬರುತ್ತಲೇ ಆ ಕಡೆಯಿಂದ ಒಂದು, ಈ ಕಡೆಯಿಂದ ಒಂದು ಕಣ್ಣು ಹುಬ್ಬಿನಂತಹವು ಬಂದು ಮಧ್ಯದಲ್ಲಿರುವ ನಮ್ಮ ಕಣ್ಣಿನ ಕಪ್ಪು ಗುಡ್ಡೆಯಂತಹ ಒಂದು ವೃತ್ತಕ್ಕೆ ಬೆಸೆದುಕೊಳ್ಳುತ್ತವೆ. ಪೂರ್ಣ ಬೆಸೆದುಕೊಳ್ಳುವ ಹೊತ್ತಿಗೆ ಅದೊಂದು ಥೇಟ್ ಕಣ್ಣಿನ ರೂಪವನ್ನೇ ತಾಳುತ್ತದೆ. ಕೆಳಗಡೆ ಅಷ್ಟೇ ಸುಂದರವಾದ ಸತ್ಯಂ ಶಿವಂ ಸುಂದರಂ ಎಂಬ ಮೂರು ಅಕ್ಷರಗಳು ಬಂದು ನಿಲ್ಲುತ್ತವೆ. ಅದೊಂದು ಸೊಗಸಾದ ಲೋಗೊ. ( ದೂರವಿರುವುದನ್ನು ದರ್ಶಿಸಲು ಕಣ್ಣಿನ ರೂಪದ ಲೋಗೊಕ್ಕಿಂತ ಬೇರೆ ಇರಲು ಸಾಧ್ಯವೇ!?) ಬರೀ ಲೋಗೊ ಆಗಿದ್ದರೆ ಒಂದೆರೆಡು ಪುಟಗಳನ್ನು ವ್ಯಯಿಸಿ ಇಷ್ಟೊಂದು ಬರೆಯುವ ರಿಸ್ಕ್‌ ತಗೆದುಕೊಳ್ಳುತ್ತಿರಲಿಲ್ಲವೋ ಏನೋ!? ಅದು ಪ್ರತಿಯೊಬ್ಬ ಭಾರತೀಯನ ಪಾಲಿಗೆ ಬರೀ ಲೋಗೊ ಆಗಿರಲಿಲ್ಲ.

ನಮ್ಮ ರಾಷ್ಟ್ರೀಯ ಚಿಹ್ನೆಗಳಂತೆ ಅದೂ ಒಂದು ಭಾಗವೇನೊ ಎಂಬಂತೆ ನಮ್ಮಲ್ಲಿ ಹಾಸು ಹೊಕ್ಕಾಗಿದೆ. ಪ್ರತಿಯೊಬ್ಬರನ್ನು ಕ್ಷಣ ಮಾತ್ರದಲ್ಲಿ ತಮ್ಮ ಬಾಲ್ಯಕ್ಕೆ ಕರೆದೊಯ್ಯುವ ಶಕ್ತಿ ಅದಕ್ಕಿದೆ! ಹಾಗಾದರೆ ಏನದು? ಸ್ವಲ್ಪದಿನಗಳಲ್ಲೇ ಮರೆಯಾಗುವ ನಮ್ಮ ದೂರದರ್ಶನದ ಲೋಗೊ. ಹೌದು. ದೂರದರ್ಶನದ ಲೋಗೊ ಬದಲಾಗುತ್ತಿದೆ. ಆಗ ಊರಿಗೊಂದು ಟಿವಿ ಇದ್ದರೆ ಅದು ದೊಡ್ಡ ಮಾತು. ಬಣ್ಣವಿಲ್ಲ, ಕಪ್ಪು ಬಿಳುಪೇ ಎಲ್ಲಾ! ಅದನ್ನೊಂದು ಅದ್ಭುತದಂತೆ ನಮ್ಮ ಜನ ನೋಡುತ್ತಿದ್ದ ದಿನಗಳು. ಅದರಲ್ಲಿ ವಾರ್ತೆಯ ಸಮಯಕ್ಕೆ, ಒಂದು ರ‌್ಯಕ್ರಮದ ನಂತರ ಮತ್ತೊೊಂದು ಕಾರ್ಯಕ್ರಮ ಆರಂಭವಾಗುವ ಮಧ್ಯದ ಗ್ಯಾಪಿನಲ್ಲಿ ಅದು ಬಂದು ಹೋಗುತ್ತಿತ್ತು. ಅದೇ ಸಂಗೀತದೊಂದಿಗೆ, ಅದೇ ಕಣ್ಣೋಟ ದೊಂದಿಗೆ! ಅದು ಬಾಲ್ಯದ ಎಲ್ಲಾ ನೆನಪುಗಳಂತೆ ಅದರೊಂದಿಗೆ ಬೆಳೆದು ಉಳಿದುಕೊಂಡು ಬಿಟ್ಟಿತು. ಈಗ ಅದನ್ನು ನೋಡಿದ ಪ್ರತಿಯೊಬ್ಬರೂ ಕ್ಷಣ ಮಾತ್ರದಲ್ಲಿ ತಮ್ಮ ಬಾಲ್ಯಕ್ಕೆ ಹೋಗಿ ಬಿಡುತ್ತಾರೆ.

ಸರ್ಕಾರದ ಮುನ್ಸೂಚನೆಯಂತೆ ಲೋಗೊ ಬದಲಿಸುವ ವಿಚಾರ ಹೊರಬಿದ್ದಿದೆ. ತಯಾರಿಯೂ ಸಾಗಿದೆ. ಯಾವ ಕಾರಣಕ್ಕೆ ಬದಲಾವಣೆ ತಿಳಿದಿಲ್ಲ. ಯಾವ ತಾಂತ್ರಿಕ ಕಾರಣಗಳಿದ್ದಾವೊ ನಾನಂತೂ ಅರಿಯೆ! ತುಂಬಾ ದಿನ ಆಯ್ತು ಬದಲಾಯಿಸಬೇಕು ಅನ್ನೋ ಕಾರಣಕ್ಕೆ, ಹಳೆಯದೆಲ್ಲಾ ಬದಲಾಗಲಿ, ಹೊಸದೆಲ್ಲಾ ಬರಲಿ ಅನ್ನೊ ಕಾರಣಕ್ಕೆ, ಹಳೆಯದರ ವ್ಯಾಲಿಡಿಟಿ ಮುಗಿದಿದೆ, ಸ್ಪರ್ಧಾತ್ಮಕಯುಗದಲ್ಲಿ ದೂರದರ್ಶನವನ್ನು ಆಕರ್ಷಣೀಯಗೊಳಿಸಲು ಲೋಗೊ ಸಮೇತ ಬದಲಾಯಿಸಬೇಕು ಅಂತಲೋ ಗೊತ್ತಿಲ್ಲ. ಆದರೆ ಲೋಗೊ ಬದಲಾಗುವುದಂತೂ ಖಂಡಿತ. ಈ ಎಲ್ಲಾ ಹೊಸತನದ ಪ್ರಕ್ರಿಯೆಗಳಿಗೆ ಆ ಲೋಗೊ ಏನೂ ಅಡ್ಡಿ ಮಾಡುತ್ತಿರಲಿಲ್ಲ ಅನ್ನುವುದು ನನ್ನ ಭಾವನೆ. ಅದೊಂದು ಅಪ್ಪಟ ಭಾರತೀಯ ಬ್ರಾಂಡ್‌ನಂತೆಯೇ ಪ್ರತಿಯೊಬ್ಬರಿಗೂ ಭಾಸವಾಗುತ್ತದೆ. ಅಬ್ಬರವಿಲ್ಲದ, ಗಲಾಟೆಯಿಲ್ಲದ, ಮೌಲ್ಯಯುಕ್ತ ಕಾರ್ಯಕ್ರಮದ, ಬರೀ ತೋರ್ಪಡಿಕೆ ಇಲ್ಲದ, ಆತುರದ ವಿಷಯದ ಗೋಜಿಲ್ಲದ ವಿಶಿಷ್ಟ ಕಾರ್ಯಕ್ರಮಗಳ ಪ್ರತಿನಿಧಿಯಂತೆಯೇ ಕಾಣುತ್ತದೆ. ಅದು ಮರೆಯಾದರೆ ಅಷ್ಟು ಭಾರತೀಯ ಮನಗಳು ಒಂದು ಕ್ಷಣ ಬೇಸರದಿಂದ ಮೌನವಾಗಬಹುದೇನೊ? ಅವು ಎಪ್ಪತ್ತರ ದಶಕದ ದಿನಗಳು.

ಭಾನುವಾರದ ಸಂಜೆ ಟಿವಿ ಮುಂದೆ ಅಚ್ಚರಿಯಿಂದ ಕಣ್ಣು ಬಿಡುತ್ತಿದ್ದ ಕ್ಷಣಗಳು. ಅಲ್ಲಿ ಮನದಲ್ಲಿ ಮೂಡಿ ಬಂದ ಆ ಕಣ್ಣಿನ ಲೋಗೊ ನಮ್ಮ ಮನದಲ್ಲಿ ಮೂಡಿ ಉಳಿದುಕೊಂಡಿದೆ. ನ್ಯಾಶನಲ್ ಇನ್ ಸ್ಟಿಟ್ಯೂಟ್ ಆಫ್ ಡಿಸೈನ್ ವಿದ್ಯಾರ್ಥಿ ದೇವಾಶಿಸ್ ಭಟ್ಟಾಚಾರ‌್ಯ ಸೇರಿದಂತೆ ಗ್ರಾಫಿಕ್ ಡಿಸೈನ್‌ನ ಎಂಟು ವಿದ್ಯಾರ್ಥಿಗಳು ಸೇರಿ ಅಹಮದಾಬಾದ್‌ನಲ್ಲಿ ಈ ಕೆಲಸ ಆರಂಭಿಸಿದ್ದರು. ಒಟ್ಟು ಹದಿನಾಲ್ಕು ವಿನ್ಯಾಸದ ಲೋಗೊಗಳನ್ನು ಸಿದ್ಧಗೊಳಿಸಿ ಸರ್ಕಾರದ ಮುಂದಿಡಲಾಗಿತ್ತು. ಆಗಿನ ಪ್ರಧಾನಿಯಾಗಿದ್ದ ಇಂದಿರಾಗಾಂಧಿಯವರು ಈಗಿರುವ ಲೋಗೊವನ್ನು ಆಯ್ಕೆ ಮಾಡಿದ್ದರು. ಅದರೊಂದಿಗೆ ಬರುವ ಸಂಗೀತ ಪಂಡಿತ್ ರವಿಶಂಕರಜಿ ಕಂಫೋಸ್ ಮಾಡಿದ್ದರು. ಮೊದಲ ಬಾರಿ ಲೋಗೊ ಸಂಗೀತದೊಂದಿಗೆ ಟಿವಿಯಲ್ಲಿ 1976ರಲ್ಲಿ ಕಾಣಿಸಿಕೊಂಡಿತು. 80-90 ದಶಕದಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನೂ ಮಾಡಲಾಯಿತು. ಭಾರತದ ವಿಶಿಷ್ಟ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಈ ಲೋಗೊ ಪ್ರತಿನಿಧಿಸುತ್ತದೆ ಎನ್ನುತ್ತಾರೆ ಭಟ್ಟಾಚಾರ‌್ಯ!

ಈ ಲೋಗೊ ಬದಲಾವಣೆ ವಿಚಾರ ಭಾರತೀಯ ಮನಸ್ಸುಗಳಿಗೆ ಬೇಸರ ತರಿಸಿದೆ ಅನಿಸುತ್ತದೆ. ಇದು ಭಾವನಾತ್ಮಕ ವಿಚಾರ. ಜನರು ಈ ವಿಷಯದಲ್ಲಿ ತಕ್ಷಣ ಮಾನಸಿಕ ಬದಲಾವಣೆ ಕಂಡುಕೊಳ್ಳುವುದು ತುಸು ಕಷ್ಟವೇ! ಎಲ್ಲಾ ಹಳೆಯವು ಕೆಲಸಕ್ಕೆ ಬಾರದವಲ್ಲ, ಎಲ್ಲಾ ಹೊಸ ಬದಲಾವಣೆಗಳು ಒಳ್ಳೆಯವೂ ಅಲ್ಲ. ಎಲ್ಲಾ ಭಾರತೀಯರ ಮನಸ್ಸಿನ ಆ ಲೋಗೊ ರೂಪವನ್ನು ಉಳಿಸಿಕೊಳ್ಳಬಹುದಿತ್ತೇನೊ!? ಆದರೆ ಸರ್ಕಾರ ಈಗಾಗಲೇ ಹೊಸ ಲೋಗೊವನ್ನು ಆಹ್ವಾನಿಸಿದೆ. ಒಂದು ಲಕ್ಷ ಬಹುಮಾನ ಕೂಡ ಇಟ್ಟಿದೆ ಆಯ್ದ ಲೋಗೊವಿಗೆ! ಎಂತಹ ಸುಂದರವಾದ ಲೋಗೊವೇ ಬಂದರೂ ಭಾರತೀಯರ ಮನಸ್ಸುಗಳಿಂದ ಆ ಕಣ್ಣಿನ ಲೋಗೊ ಎಂದೂ ಮರೆಯಲಾಗದು. ನಾವು ನಮ್ಮ ಬಾಲ್ಯವನ್ನು ನೆನಪಿಸಿಕೊಳ್ಳಲು ಇದ್ದ ಇನ್ನೊಂದು ನೆಪವೂ ಹೊರಟು ಹೋಗಲಿದೆ!

-ಸದಾಶಿವ್ ಸೊರಟೂರು

Leave a Reply

Your email address will not be published. Required fields are marked *

thirteen + fourteen =

Recent News
Loading

ಸದನದಲ್ಲಿ ಸಿಎಂ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಿದ ಪ್ರತಿಪಕ್ಷದ ನಿರ್ಧಾರ ಸರಿಯೇ?

Thank you for voting
You have already voted on this poll!
Please select an option!

vishwavani-timely-3

 
Back To Top